ಸುರೇಂದ್ರ ಕೋಲಿ | Photo Credit : PTI  

ಕುಖ್ಯಾತ ನಿಥಾರಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಸುಮಾರು 19 ವರ್ಷಗಳ ಕಾಲ ಜೈಲಿನಲ್ಲಿ ಕಳೆದು, ಗಲ್ಲು ಶಿಕ್ಷೆಯಿಂದ ಕೊನೆಯ ಕ್ಷಣದಲ್ಲಿ ಪಾರಾಗಿದ್ದ 53 ವರ್ಷದ ಸುರೇಂದ್ರ ಕೋಲಿ, ಚಹಾ ಅಂಗಡಿ ಆರಂಭಿಸಿದ ಕೇವಲ ಐದೇ ದಿನಗಳ ಬಳಿಕ ಹರಿದ್ವಾರದಲ್ಲಿರುವ ತಮ್ಮ ಅಂಗಡಿಯಲ್ಲೇ ಶವವಾಗಿ ಪತ್ತೆಯಾಗಿದ್ದಾನೆ.

ದೇಶವನ್ನೇ ಬೆಚ್ಚಿಬೀಳಿಸಿದ್ದ ಮಹಿಳೆಯರು ಮತ್ತು ಮಕ್ಕಳ ಭೀಕರ ಹತ್ಯೆ ಪ್ರಕರಣದಲ್ಲಿ "ನಿಥಾರಿ ನರಹಂತಕ" ಎಂದೇ ಕುಖ್ಯಾತನಾಗಿದ್ದ ಕೋಲಿಯನ್ನು ಕಳೆದ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ದೋಷಮುಕ್ತಗೊಳಿಸಿತ್ತು. ತನ್ನ ಹಿಂದಿನ ಗುರುತನ್ನು ಮುಚ್ಚಿಕೊಳ್ಳಲು ಕೋಲಿ ಹರಿದ್ವಾರದಲ್ಲಿ "ಬೇರೆ ಹೆಸರನ್ನು" ಬಳಸುತ್ತಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯರಲ್ಲಿ ಹೆಚ್ಚಿನವರಿಗೆ ಆತ "ಸದಾ ರಾಮ್" ಎಂದೇ ಪರಿಚಿತನಾಗಿದ್ದ. ಆತನ ಸಾವಿನ ಬಳಿಕ ಪೊಲೀಸರು ಆಧಾರ್ ಕಾರ್ಡ್ ಅನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ಆತನ ಅಸಲಿ ಹೆಸರು ಬಹಿರಂಗಗೊಂಡಿದೆ.

ಶುಕ್ರವಾರ ಬೆಳಿಗ್ಗೆ ಆತನ ಅಂಗಡಿಗೆ ಬರುತ್ತಿದ್ದ ಗ್ರಾಹಕರು ಅಂಗಡಿ ಮುಚ್ಚಿರುವುದನ್ನು ಗಮನಿಸಿದ್ದಾರೆ.

"ಅವರು ಒಳಗೆ ಇಣುಕಿ ನೋಡಿದಾಗ ಕೋಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಕಂಡುಬಂತು. ಪ್ರಾಥಮಿಕ ತನಿಖೆಯ ಪ್ರಕಾರ, ಇದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ" ಎಂದು ಹರಿದ್ವಾರದ ವೃತ್ತ ನಿರೀಕ್ಷಕ ಶಿಶುಪಾಲ್ ಸಿಂಗ್ ನೇಗಿ ಹೇಳಿದ್ದಾರೆ.

*ಕೋಲಿ ಬಳಿ ಇತ್ತು ಎರಡೆರಡು ಗುರುತಿನ ಚೀಟಿ

ಕೋಲಿ ಬಳಿ ಅಥವಾ ಅಂಗಡಿಯೊಳಗೆ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಮಂಗರು ಖಾಲ್ ಗ್ರಾಮದವರಾದ ಮತ್ತು ನೋಯ್ಡಾ ಮೂಲದ ಉದ್ಯಮಿ ಮೋನಿಂದರ್ ಸಿಂಗ್ ಪಂಧರ್ ಅವರ ಮನೆಯಲ್ಲಿ ಮನೆಕೆಲಸದಾಳಾಗಿ ಕೆಲಸ ಮಾಡುತ್ತಿದ್ದ ಕೋಲಿ, ಕಳೆದ ಎರಡು ದಶಕಗಳಿಂದ ಕಳಂಕಿತ ವ್ಯಕ್ತಿಯಾಗಿಯೇ ಗುರುತಿಸಿಕೊಂಡಿದ್ದ.

ಮಕ್ಕಳನ್ನು ಪಂಧರ್ ಅವರ ಮನೆಗೆ ಕರೆಸಿ, ಕೊಲೆ ಮಾಡಿ, "ಅವರ ಮಾಂಸವನ್ನು ತಿನ್ನುತ್ತಿದ್ದ" ಎಂದು ಈತನ ಮೇಲೆ "ನರಭಕ್ಷಕ" ಎಂಬ ಆರೋಪವಿತ್ತು. 2006ರ ಡಿಸೆಂಬರ್ 29ರಂದು ಕೋಲಿ ಮತ್ತು ಪಂಧರ್ ಅವರನ್ನು ಬಂಧಿಸಲಾಗಿತ್ತು. ಆದರೆ ಎರಡು ದಶಕಗಳ ಸುದೀರ್ಘ ಕಾನೂನು ಹೋರಾಟ ಹಾಗೂ 13 ಮರಣದಂಡನೆಗಳ ಬಳಿಕ, ಕೋಲಿ ಮೇಲಿನ ಕೊನೆಯ 13ನೇ ಪ್ರಕರಣದಲ್ಲೂ ಕಳೆದ ನವೆಂಬರ್ 11ರಂದು ಸುಪ್ರೀಂ ಕೋರ್ಟ್ ಖುಲಾಸೆ ಆದೇಶವನ್ನು ನೀಡಿತ್ತು. ಎರಡು ದಿನಗಳ ಬಳಿಕ ಅವರು ಗ್ರೇಟರ್ ನೋಯ್ಡಾದ ಲುಕ್ಸರ್ ಜೈಲಿನಿಂದ ಹೊರಬಂದಿದ್ದರು.

ಕೆಲ ತಿಂಗಳ ಹಿಂದೆ ಆತ ಹರಿದ್ವಾರಕ್ಕೆ ಬಂದಿದ್ದು, ಅಲ್ಲಿ 'ಸದಾ ರಾಮ್' ಎಂಬ ಹೆಸರಿದ್ದ ತಮ್ಮ ವೋಟರ್ ಐಡಿ ಕಾರ್ಡ್ ಅನ್ನು ದಾಖಲೆಯಾಗಿ ಬಳಸಿ ತಿಂಗಳಿಗೆ 6,000 ರೂ. ಬಾಡಿಗೆಗೆ ಚಹಾ ಅಂಗಡಿಯನ್ನು ಪಡೆದಿದ್ದ.

ಅದಕ್ಕೂ ಮುನ್ನ, ಕೋಲಿ ಆ ಪಟ್ಟಣದ ಸಿಡ್ಕುಲ್ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಆತ ಸುಮಾರು 10 ದಿನಗಳ ಕಾಲ ಗಾರ್ಡ್ ಆಗಿ ಕೆಲಸ ಮಾಡಿದ್ದ. ಅಲ್ಲಿ ಉದ್ಯೋಗದಾತರು ಆತನ ಆಧಾರ್ ಕಾರ್ಡ್ ಕೇಳಿದಾಗ ಆತ ಆ ಕೆಲಸ ಬಿಟ್ಟಿದ್ದ. ಈಗ ಪೊಲೀಸರು ವೋಟರ್ ಐಡಿ ಹಾಗೂ ಆತನ ಅಸಲಿ ಹೆಸರಿರುವ ಮತ್ತು ನೋಯ್ಡಾ ವಿಳಾಸವಿರುವ ಆಧಾರ್ ಕಾರ್ಡ್ ಎರಡನ್ನೂ ಪತ್ತೆಹಚ್ಚಿದ್ದಾರೆ. ಆತನ ಆಧಾರ್ ಕಾರ್ಡ್ ಮೂಲಕವೇ ಪೊಲೀಸರಿಗೆ ಮತ್ತು ಸ್ಥಳೀಯರಿಗೆ ಅವರ ನಿಜವಾದ ಗುರುತು ತಿಳಿದುಬಂದಿದೆ.

ವಿಚಾರಣೆಯ ಸಮಯದಲ್ಲಿ ಅವರ ಕುಟುಂಬಕ್ಕೆ ಸಹಾಯ ಮಾಡಿದ್ದ ಅಲ್ಮೋರಾ ಮೂಲದ ಸಾಮಾಜಿಕ ಕಾರ್ಯಕರ್ತ ನಾರಾಯಣ ಸಿಂಗ್ ರಾವತ್, ಕೋಲಿಯ ಸಾವು "ಕೊಲೆ" ಇರಬಹುದು ಎಂದು ಶಂಕಿಸಿದ್ದಾರೆ.

ಅಲ್ಮೋರಾ ಪ್ರದೇಶದವರಾದ ರಾವತ್, ಕೋಲಿ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಿದ್ದರು ಮತ್ತು ಜೈಲಿನಲ್ಲಿ ಕೋಲಿಯ ತಾಯಿಯನ್ನು ಭೇಟಿಯಾಗಲು ಅನುಕೂಲ ಮಾಡಿಕೊಟ್ಟಿದ್ದರು.

"ನಾನು ಅವರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದೆ ಮತ್ತು ಚಹಾ ಅಂಗಡಿಯನ್ನು ಪ್ರಾರಂಭಿಸಲು ಇತ್ತೀಚೆಗೆ ಅವರಿಗೆ 25,000 ರೂ. ಸಾಲವಾಗಿ ನೀಡಿದ್ದೆ. ಆ ಅಂಗಡಿಯನ್ನು ಅವರು ರಾಜಕೀಯ ಪಕ್ಷವೊಂದಕ್ಕೆ ನಂಟಿರುವ ಸ್ಥಳೀಯ ನಿವಾಸಿಯೊಬ್ಬರಿಂದ ಬಾಡಿಗೆಗೆ ಪಡೆದಿದ್ದರು. ಫೋನ್‌ನಲ್ಲಿ (ಕಳೆದ 2-3 ದಿನಗಳಲ್ಲಿ) ಆತ ಕಿರುಕುಳದ ಬಗ್ಗೆ ದೂರಿದ್ದ. ಅವರು ಹೆಚ್ಚಿನ ಹಣಕ್ಕಾಗಿ ಕೇಳುತ್ತಿದ್ದಾರೆ ಎಂದು ನನಗೆ ಹೇಳಿದ್ದರು. ಆತ ತೊಂದರೆಗೊಳಗಾಗಿದ್ದ, ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ" ಎಂದು ರಾವತ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ಕೋಲಿಗೆ ಪತ್ನಿ, ಪುತ್ರಿ ಮತ್ತು ಹದಿಹರೆಯದ ಮಗನಿದ್ದಾರೆ. 2006ರಲ್ಲಿ ಈ ಪ್ರಕರಣದಲ್ಲಿ ಆತನನ್ನು ಬಂಧಿಸಿದಾಗ ಅವರ ಪತ್ನಿ ಮಕ್ಕಳೊಂದಿಗೆ ಹರಿಯಾಣದ ಸಂಬಂಧಿಕರ ಮನೆಯಲ್ಲಿ ವಾಸಿಸಲು ಆರಂಭಿಸಿದ್ದರು. ನಂತರ ಆತನ ಪತ್ನಿ ಬೇರೆ ಮದುವೆಯಾದರು. ಕಳೆದ ವರ್ಷ ಆತ ಜೈಲಿನಿಂದ ಬಿಡುಗಡೆಯಾದಾಗ 20ರ ಹರೆಯದಲ್ಲಿದ್ದ ಆತನ ಮಗಳು ಕೂಡ ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದಾಳೆ. ಆತನ ತಾಯಿ 2022ರಲ್ಲಿ ನಿಧನರಾಗಿದ್ದರು. ಒಡಹುಟ್ಟಿದವರಲ್ಲಿ, ಅವರ ಹಿರಿಯ ಸಹೋದರ ದಿಲ್ಲಿಯಲ್ಲಿ ವಾಸಿಸುತ್ತಿದ್ದರೆ, ಕಿರಿಯ ಸಹೋದರ ತನ್ನ ಕುಟುಂಬದೊಂದಿಗೆ ಅಲ್ಮೋರಾದಲ್ಲಿದ್ದಾರೆ.

"ನಾನು ನನ್ನ ಸಹೋದರನೊಂದಿಗೆ ಫೋನ್ ಮೂಲಕ ನಿಯಮಿತವಾಗಿ ಸಂಪರ್ಕದಲ್ಲಿದ್ದೆ. ಆದರೆ ತನ್ನನ್ನು ಕಾಡುತ್ತಿದ್ದ ಯಾವುದೇ ವಿಷಯವನ್ನು ಅವರು ಎಂದಿಗೂ ಹಂಚಿಕೊಂಡಿರಲಿಲ್ಲ. ಪೊಲೀಸರು ಹೇಳುತ್ತಿರುವಂತೆ ಅವರ ಆತ್ಮಹತ್ಯೆಗೆ ಕಾರಣವೇನು ಎಂಬುದು ನಮಗೆ ತಿಳಿದಿಲ್ಲ" ಎಂದು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

*ಸುರೇಂದ್ರ ಕೋಲಿ ಯಾರು?

ಸುರೇಂದ್ರ ಕೋಲಿ ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಮಂಗ್ರುಖಾಲ್ ಗ್ರಾಮದ ನಿವಾಸಿ. ಆತ ಬಡ ಕುಟುಂಬಕ್ಕೆ ಸೇರಿದವನಾಗಿದ್ದು, ಆರ್ಥಿಕ ಸಮಸ್ಯೆಗಳಿಂದಾಗಿ ಶಾಲೆ ಬಿಟ್ಟಿದ್ದನು.

ಕೆಲಸ ಹುಡುಕಿಕೊಂಡು ಕೋಲಿ ದಿಲ್ಲಿ-ಎನ್‌ಸಿಆರ್ ಪ್ರದೇಶಕ್ಕೆ ಬಂದು, ದಿನಗೂಲಿ ಕಾರ್ಮಿಕನಾಗಿ ಮತ್ತು ಮನೆಕೆಲಸದಾಳಾಗಿ ಕೆಲಸ ಮಾಡಿದ್ದನು. 2004ರಲ್ಲಿ ಕೋಲಿ, ನೋಯ್ಡಾದ ಸೆಕ್ಟರ್ 31ರಲ್ಲಿರುವ ಉದ್ಯಮಿ ಮೋನಿಂದರ್ ಸಿಂಗ್ ಪಂಧರ್ ಅವರ ಮನೆಯಲ್ಲಿ ಮನೆಕೆಲಸದಾಳಾಗಿ ದುಡಿಯಲು ಆರಂಭಿಸಿದನು. ಆತನಿಗೆ ಕೆಲಸಕ್ಕೆ ಸೇರಿದಾಗ 20 ವರ್ಷ ವಯಸ್ಸಾಗಿತ್ತು.

ನಿಥಾರಿ ಪ್ರಕರಣದೊಂದಿಗೆ ಗುರುತಿಸಲ್ಪಟ್ಟ ಕೋಲಿ, ಮಕ್ಕಳು ಮತ್ತು ಯುವತಿಯರ ಹತ್ಯೆ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ.

*ನಿಥಾರಿ ಹತ್ಯೆ ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?

2006ರಲ್ಲಿ ನೋಯ್ಡಾದ ಗ್ರಾಮವಾದ ನಿಥಾರಿಯ ಗಲ್ಲಿಗಳಲ್ಲಿ ವಾಸಿಸುತ್ತಿದ್ದ ಬಡ ಕಾರ್ಮಿಕ ಕುಟುಂಬಗಳ ಮಕ್ಕಳು ಮತ್ತು ಯುವತಿಯರು ನಾಪತ್ತೆಯಾಗಲು ಶುರುವಾದರು. ಕುಟುಂಬಗಳು ನಿರಂತರವಾಗಿ ದೂರು ನೀಡಿದರೂ, ಪೊಲೀಸರು ಅವುಗಳನ್ನು ಕಡೆಗಣಿಸಿದ್ದರು ಎಂದು ಆರೋಪಿಸಲಾಗಿದೆ. 10 ವರ್ಷದ ಜ್ಯೋತಿ ಮತ್ತು 8 ವರ್ಷದ ರಚನಾ ನಾಪತ್ತೆಯಾದ ನಂತರ, ಅವರ ಕುಟುಂಬಗಳು ಈ ನಾಪತ್ತೆ ಪ್ರಕರಣಗಳ ಹಿಂದೆ ಕೋಲಿಯ ಕೈವಾಡವಿರಬಹುದು ಎಂದು ಶಂಕಿಸಿದವು. ಆ ಸಮಯದಲ್ಲಿ ಆತ ನಿಥಾರಿ ಗ್ರಾಮದ ಹತ್ತಿರವಿರುವ ನೋಯ್ಡಾದ ಸೆಕ್ಟರ್ 31ರಲ್ಲಿರುವ ಪಂಧರ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದನು.

ಪಾಯಲ್ ಎಂಬ ಮತ್ತೊಬ್ಬ ಯುವತಿ ನಾಪತ್ತೆಯಾದ ಬಳಿಕ, ಪೊಲೀಸರು ತನಿಖೆ ನಡೆಸಿ ಆಕೆಯ ಮೊಬೈಲ್ ಫೋನ್ ಅನ್ನು ಸ್ಥಳೀಯ ರಿಕ್ಷಾ ಚಾಲಕನ ಬಳಿ ಪತ್ತೆಹಚ್ಚಿದರು. ಆ ಫೋನ್ ಅನ್ನು ನೋಯ್ಡಾದ ಸೆಕ್ಟರ್ 31ರಲ್ಲಿರುವ ಡಿ-5 ಬಂಗಲೆಯಲ್ಲಿ ವಾಸಿಸುವ ವ್ಯಕ್ತಿಯೊಬ್ಬರಿಂದ ಪಡೆದಿರುವುದಾಗಿ ಆ ರಿಕ್ಷಾ ಚಾಲಕ ತಿಳಿಸಿದ್ದರು. ಆ ಬಂಗಲೆಯು ಪಂಧರ್‌ಗೆ ಸೇರಿದ್ದಾಗಿತ್ತು.

ಪೊಲೀಸರ ನೇತೃತ್ವದ ತನಿಖೆಯಲ್ಲಿ ಪಂಧರ್ ಅವರ ಬಂಗಲೆಯ ಪಕ್ಕದಲ್ಲಿದ್ದ ಚರಂಡಿಯಿಂದ 16 ಮಾನವ ತಲೆಬುರುಡೆಗಳು, ಮೂಳೆಗಳು ಮತ್ತು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಯಿತು. ಹಲವಾರು ವರದಿಗಳ ಪ್ರಕಾರ, ಮೃತದೇಹಗಳನ್ನು "ಮಾಂಸ ಕಡಿಯುವವರ ನಿಖರತೆಯೊಂದಿಗೆ" ತುಂಡರಿಸಲಾಗಿತ್ತು. ನಂತರ ಕೋಲಿ ಮತ್ತು ಪಂಧರ್ ಇಬ್ಬರನ್ನೂ ಬಂಧಿಸಲಾಯಿತು.

ಕೋಲಿ ಮಕ್ಕಳನ್ನು ಅಪಹರಿಸಿ, ಅತ್ಯಾಚಾರ ಎಸಗಿ, ಬಂಗಲೆಯ ಹಿಂದಿನ ಚರಂಡಿಯಲ್ಲಿ ಮೃತದೇಹಗಳನ್ನು ಎಸೆಯುತ್ತಿದ್ದ ಎಂಬುದನ್ನು ಒಪ್ಪಿಕೊಂಡಿದ್ದನು. ಇದರ ಬಳಿಕ ವರ್ಷಗಳ ಕಾಲ ನ್ಯಾಯಾಲಯದ ಕಾನೂನು ಹೋರಾಟಗಳು, ತಪ್ಪೊಪ್ಪಿಗೆಗಳು, ಶಿಕ್ಷೆ ಮತ್ತು ಅಂತಿಮವಾಗಿ ದೋಷಮುಕ್ತಗೊಳಿಸುವ ಪ್ರಕ್ರಿಯೆಗಳು ನಡೆದವು.

*ಮರಣದಂಡನೆ ಮತ್ತು ಜೈಲು ಶಿಕ್ಷೆ

ಕೋಲಿ ಮತ್ತು ಪಂಧರ್ ವಿರುದ್ಧ ಹಲವಾರು ಎಫ್‌ಐಆರ್‌ಗಳು ದಾಖಲಾಗಿದ್ದು, ಅವರ ಮೇಲೆ ಅತ್ಯಾಚಾರ, ಕೊಲೆ ಮತ್ತು ಸಾಕ್ಷ್ಯ ನಾಶ ಆರೋಪಗಳನ್ನು ಹೊರಿಸಲಾಗಿತ್ತು. ಕೋಲಿಗೆ ಹಲವು ಪ್ರಕರಣಗಳಲ್ಲಿ ಮರಣದಂಡನೆ ವಿಧಿಸಲಾಗಿತ್ತು ಮತ್ತು ಪಂಧರ್‌ಗೆ ಮರಣದಂಡನೆ ಹಾಗೂ ಜೀವಾವಧಿ ಶಿಕ್ಷೆ ಎರಡೂ ಲಭಿಸಿದ್ದವು.

2011ರ ಫೆಬ್ರುವರಿಯಲ್ಲಿ, ಅತ್ಯಂತ ಗಂಭೀರವಾದ ಪ್ರಕರಣಗಳಲ್ಲಿ ಒಂದಾದ ರಿಂಪಾ ಹಲ್ದರ್ ಪ್ರಕರಣದಲ್ಲಿ ಉನ್ನತ ನ್ಯಾಯಾಲಯವು ಕೋಲಿಯ ಮರಣದಂಡನೆಯನ್ನು ಎತ್ತಿಹಿಡಿದಿತ್ತು. ನಂತರ ಆತನ ಕ್ಷಮಾಧಾನ ಅರ್ಜಿಯನ್ನು ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿರಸ್ಕರಿಸಿದ್ದರು. ಇದರ ಬೆನ್ನಲ್ಲೇ 2014ರಲ್ಲಿ ಮರಣದಂಡನೆಯ ವಾರೆಂಟ್ ಹೊರಡಿಸಲಾಗಿತ್ತು. ಆದರೆ ಅರ್ಜಿ ಸಲ್ಲಿಕೆಯಾದ ಬಳಿಕ ಆತನ ಗಲ್ಲು ಶಿಕ್ಷೆಗೆ ತಡೆ ನೀಡಲಾಗಿತ್ತು.

ಕೋಲಿಯನ್ನು 2014ರ ಸೆಪ್ಟೆಂಬರ್ 12ರಂದು ಗಲ್ಲಿಗೇರಿಸಲು ನಿಗದಿಯಾಗಿತ್ತು, ಆದರೆ ಸೆಪ್ಟೆಂಬರ್ 8ರಂದು ರಾತ್ರಿ 1.30ಕ್ಕೆ ಭಾರತದ ಅಂದಿನ ಮುಖ್ಯ ನ್ಯಾಯಮೂರ್ತಿಗಳು ಆತನ ಮರಣದಂಡನೆಯ ಆದೇಶಕ್ಕೆ ತಡೆ ನೀಡಿದ ಕಾರಣ ಆತನಿಗೆ ಜೀವನದಲ್ಲಿ ಮತ್ತೊಂದು ಅವಕಾಶ ಸಿಕ್ಕಿತು. 2015ರ ಜನವರಿಯಲ್ಲಿ, ಅಲಹಾಬಾದ್ ಹೈಕೋರ್ಟ್ ಆತನ ಕ್ಷಮಾಧಾನ ಅರ್ಜಿಯನ್ನು ನಿರ್ಧರಿಸುವಲ್ಲಿ ಆದ "ಅತಿಯಾದ ವಿಳಂಬ"ವನ್ನು ಗಮನಿಸಿ,

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor