ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮ ತಡೆಯಲು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ ತಿದ್ದುಪಡಿ ಮಸೂದೆಯಲ್ಲಿ ಏನಿದೆ?

ಪ್ರಸ್ತಾಪಿಸಲಾದ ಪ್ರಮುಖ ಬದಲಾವಣೆಗಳೇನು?

Update: 2026-07-28 16:11 IST

ಸಾಂದರ್ಭಿಕ ಚಿತ್ರ | Photo Credit : PTI 

ಖಾಸಗಿ ಹಾಗೂ ಸಾರ್ವಜನಿಕ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಸಂಘಟಿತ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ಸೋಮವಾರ (ಜುಲೈ 27) ಲೋಕಸಭೆಯಲ್ಲಿ 'ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ಮಾರ್ಗಗಳ ತಡೆ) ತಿದ್ದುಪಡಿ ಮಸೂದೆ, 2026' (Public Examinations (Prevention of Unfair Means) Amendment Bill, 2026) ಅನ್ನು ಮಂಡಿಸಿದೆ. ಈ ಹೊಸ ಮಸೂದೆಯಲ್ಲಿ ತಪ್ಪಿತಸ್ಥರಿಗೆ ಕಠಿಣ ಜೈಲು ಶಿಕ್ಷೆ, ಭಾರೀ ದಂಡ ಹಾಗೂ ಕ್ಷಿಪ್ರ ತನಿಖೆಗೆ ಆದ್ಯತೆ ನೀಡಲಾಗಿದೆ.

ಇತ್ತೀಚೆಗೆ 'ನೀಟ್' (NEET) ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ, 2024ರ ಮೂಲ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಈ ತಿದ್ದುಪಡಿಯನ್ನು ತಂದಿದೆ.

2026ರ ತಿದ್ದುಪಡಿ ಮಸೂದೆ ಎಂದರೇನು?

ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ತಡೆಯಲು ಭಾರತದಲ್ಲಿ ಜಾರಿಗೆ ಬಂದ ಮೊದಲ ಕೇಂದ್ರ ಕಾಯ್ದೆ ಅಂದರೆ 'ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ಮಾರ್ಗಗಳ ತಡೆ) ಕಾಯ್ದೆ, 2024'. ಈ ಮೂಲ ಕಾಯ್ದೆಗೆ ಬಲ ತುಂಬುವುದು 2026ರ ತಿದ್ದುಪಡಿ ಮಸೂದೆಯ ಮುಖ್ಯ ಉದ್ದೇಶ.

ಈ ತಿದ್ದುಪಡಿಯು ಮೂಲ ಕಾನೂನನ್ನು ಬದಲಾಯಿಸುವುದಿಲ್ಲ, ಬದಲಿಗೆ ಅದನ್ನು ಮತ್ತಷ್ಟು ಬಿಗಿಗೊಳಿಸುತ್ತದೆ.

ಕಠಿಣ ಶಿಕ್ಷೆ: ಶಿಕ್ಷೆಯ ಪ್ರಮಾಣ ಮತ್ತು ದಂಡವನ್ನು ಹೆಚ್ಚಿಸಲಾಗಿದೆ.

ವೇಗದ ತನಿಖೆ: ತನಿಖೆ ಮತ್ತು ವಿಚಾರಣೆಗೆ ಕಟ್ಟುನಿಟ್ಟಿನ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ.

ವಿಶೇಷ ಕಾರ್ಯಪಡೆ: ಅಕ್ರಮಗಳ ತನಿಖೆಗೆ ವಿಶೇಷ ಕಾರ್ಯಪಡೆಗಳನ್ನು (Special Task Forces) ರಚಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ.

ವಿಶೇಷ ನ್ಯಾಯಾಲಯಗಳು: ಪ್ರಕರಣಗಳ ಶೀಘ್ರ ವಿಲೇವಾರಿಗೆ 'ಫಾಸ್ಟ್ ಟ್ರ್ಯಾಕ್' ನ್ಯಾಯಾಲಯಗಳು ಹಾಗೂ ಪ್ರತ್ಯೇಕ ಮೇಲ್ಮನವಿ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಇತ್ತೀಚಿನ ಪರೀಕ್ಷಾ ಅಕ್ರಮಗಳಿಂದಾಗಿ ಅಭ್ಯರ್ಥಿಗಳಲ್ಲಿ ಉಂಟಾಗಿರುವ ಅಪನಂಬಿಕೆಯನ್ನು ಹೋಗಲಾಡಿಸಿ, ಪಾರದರ್ಶಕತೆ ಮತ್ತು ನಂಬಿಕೆಯನ್ನು ಮರುಸ್ಥಾಪಿಸುವುದು ಈ ಮಸೂದೆಯ ಪ್ರಮುಖ ಉದ್ದೇಶವಾಗಿದೆ ಎಂದು ಸರ್ಕಾರ ತಿಳಿಸಿದೆ.

ಪ್ರಸ್ತಾಪಿಸಲಾದ ಪ್ರಮುಖ ಬದಲಾವಣೆಗಳೇನು?

2024ರ ಕಾಯ್ದೆಗೆ ಹೋಲಿಸಿದರೆ ಈ ಹೊಸ ತಿದ್ದುಪಡಿ ಮಸೂದೆಯಲ್ಲಿ ಶಿಕ್ಷೆ ಮತ್ತು ದಂಡದ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.

ವ್ಯಕ್ತಿಗಳಿಗೆ ಶಿಕ್ಷೆ: ಅಕ್ರಮ ಎಸಗುವ ವ್ಯಕ್ತಿಗಳಿಗೆ ಗರಿಷ್ಠ ಜೈಲು ಶಿಕ್ಷೆಯನ್ನು 5 ವರ್ಷಗಳಿಂದ 10 ವರ್ಷಗಳಿಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಹಾಗೆಯೇ ಗರಿಷ್ಠ ದಂಡವನ್ನು 10 ಲಕ್ಷ ರೂ.ಗಳಿಂದ 50 ಲಕ್ಷ ರೂ.ಗೆ ಏರಿಸಲಾಗಿದೆ.

ಸೇವಾ ಸಂಸ್ಥೆಗಳಿಗೆ ದಂಡ: ಪರೀಕ್ಷೆ ನಡೆಸುವ ಗುತ್ತಿಗೆದಾರರು ಅಥವಾ ಏಜೆನ್ಸಿಗಳು ಅಕ್ರಮದಲ್ಲಿ ಭಾಗಿಯಾಗಿದ್ದರೆ, ವಿಧಿಸುವ ದಂಡವನ್ನು 1 ಕೋಟಿ ರೂ.ನಿಂದ 5 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಜೊತೆಗೆ, ಇಂತಹ ಸಂಸ್ಥೆಗಳು ಪರೀಕ್ಷೆ ನಡೆಸದಂತೆ ವಿಧಿಸುವ ನಿಷೇಧವನ್ನು 4 ವರ್ಷಗಳಿಂದ 8 ವರ್ಷಗಳಿಗೆ ವಿಸ್ತರಿಸಲಾಗಿದೆ.

ಹಿರಿಯ ಅಧಿಕಾರಿಗಳಿಗೆ ಶಿಕ್ಷೆ: ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಶಾಮೀಲಾಗಿರುವ ಹಿರಿಯ ಅಧಿಕಾರಿಗಳು ಅಥವಾ ನಿರ್ದೇಶಕರಿಗೆ 10 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ಭಾರೀ ದಂಡ ವಿಧಿಸಬಹುದು.

ಸಂಘಟಿತ ಅಪರಾಧ: ಪರೀಕ್ಷಾ ಮಂಡಳಿಗಳು, ಸೇವಾ ಸಂಸ್ಥೆಗಳು ಅಥವಾ ಶಿಕ್ಷಣ ಸಂಸ್ಥೆಗಳು ಭಾಗಿಯಾಗಿರುವ ಸಂಘಟಿತ ಅಪರಾಧಗಳಿಗೆ ಗರಿಷ್ಠ ದಂಡವನ್ನು 10 ಕೋಟಿ ರೂ.ಗೆ ಹೆಚ್ಚಿಸಲಾಗಿದ್ದು, 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ತನಿಖೆ ಮತ್ತು ವಿಚಾರಣೆ ವೇಗವಾಗಿ ನಡೆಯುವುದು ಹೇಗೆ?

ತನಿಖೆ ಮತ್ತು ನ್ಯಾಯಾಲಯದ ಪ್ರಕ್ರಿಯೆಗಳಿಗೆ ಕಟ್ಟುನಿಟ್ಟಿನ ಕಾಲಮಿತಿಯನ್ನು ನಿಗದಿಪಡಿಸಿರುವುದು ಈ ಮಸೂದೆಯ ಪ್ರಮುಖ ಅಂಶವಾಗಿದೆ.

ವಿಶೇಷ ಕಾರ್ಯಪಡೆ (STF): ಪ್ರಕರಣಗಳ ತನಿಖೆಗೆ ಕೇಂದ್ರ ತನಿಖಾ ಸಂಸ್ಥೆಗಳ ಜೊತೆಗೆ 'ವಿಶೇಷ ಕಾರ್ಯಪಡೆ' (STF) ರಚಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ. ಪೊಲೀಸ್, ಕೇಂದ್ರ ಸಂಸ್ಥೆ ಅಥವಾ ಎಸ್‌ಟಿಎಫ್ , ಯಾರೇ ತನಿಖೆ ನಡೆಸಿದರೂ ತನಿಖೆಯನ್ನು ಸಾಮಾನ್ಯವಾಗಿ 2 ತಿಂಗಳ ಒಳಗೆ ಪೂರ್ಣಗೊಳಿಸಬೇಕು.

ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳು: ಈ ಕಾಯ್ದೆಯಡಿಯ ಅಪರಾಧಗಳ ವಿಚಾರಣೆಗೆಂದೇ ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವುದನ್ನು ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಡ್ಡಾಯಗೊಳಿಸಲಾಗಿದೆ. ಈ ನ್ಯಾಯಾಲಯಗಳು ದಿನನಿತ್ಯದ ಆಧಾರದ ಮೇಲೆ ವಿಚಾರಣೆ ನಡೆಸಿ, ಚಾರ್ಜ್‌ಶೀಟ್ ಸಲ್ಲಿಕೆಯಾದ 3 ತಿಂಗಳ ಒಳಗೆ ವಿಚಾರಣೆ ಪೂರ್ಣಗೊಳಿಸಬೇಕು.

ಮೇಲ್ಮನವಿ ವ್ಯವಸ್ಥೆ: ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳ ತೀರ್ಪಿನ ವಿರುದ್ಧ ಹೈಕೋರ್ಟ್‌ನ ದ್ವಿಪೀಠಕ್ಕೆ ಮೇಲ್ಮನವಿ ಸಲ್ಲಿಸಬಹುದು. ಹೈಕೋರ್ಟ್ ಈ ಮೇಲ್ಮನವಿಗಳನ್ನು ಸ್ವೀಕರಿಸಿದ ಮೂರು ತಿಂಗಳ ಒಳಗೆ ಇತ್ಯರ್ಥಪಡಿಸಬೇಕಾಗುತ್ತದೆ. ಮೇಲ್ಮನವಿಗಳನ್ನು ಸಾಮಾನ್ಯವಾಗಿ 30 ದಿನಗಳ ಒಳಗೆ ಸಲ್ಲಿಸಬೇಕು. ಸೂಕ್ತ ಕಾರಣಗಳನ್ನು ನೀಡಿದರೆ ಗರಿಷ್ಠ 90 ದಿನಗಳವರೆಗಿನ ವಿಳಂಬವನ್ನು ಮನ್ನಿಸುವ ಅಧಿಕಾರ ಹೈಕೋರ್ಟ್‌ಗೆ ಇರುತ್ತದೆ. ಜಾಮೀನು ಮಂಜೂರು ಮಾಡುವುದು ಅಥವಾ ನಿರಾಕರಿಸುವ ಆದೇಶಗಳ ವಿರುದ್ಧವೂ ಮೇಲ್ಮನವಿ ಸಲ್ಲಿಸಲು ಈ ಮಸೂದೆ ಅವಕಾಶ ನೀಡುತ್ತದೆ.

ಈ ತಿದ್ದುಪಡಿಗಳು ಅಪರಾಧಗಳಿಗೆ ಕಠಿಣ ಶಿಕ್ಷೆಯನ್ನು ಕಲ್ಪಿಸುತ್ತವೆಯಾದರೂ, ಈ ಕಾನೂನು ಮುಖ್ಯವಾಗಿ ಅಪರಾಧ ನಡೆದ ನಂತರದ ಶಿಕ್ಷೆಯ ಮೇಲೆಯೇ ಹೆಚ್ಚಿನ ಗಮನ ಹರಿಸುತ್ತದೆ.

ಕೃಪೆ: thenewsminute.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News