ಭಾರತದಂತಹ ದೇಶಗಳಲ್ಲಿ AI ಉದ್ಯೋಗ ಕಸಿಯುವ ಸಾಧ್ಯತೆ ಕಡಿಮೆ: ವಿಶ್ವಬ್ಯಾಂಕ್ ವರದಿ

Update: 2026-08-06 22:30 IST

ಸಾಂದರ್ಭಿಕ ಚಿತ್ರ | Photo Credit : magnific.com

AI ಅನೇಕ ಅಭಿವೃದ್ಧಿಶೀಲ ಆರ್ಥಿಕತೆಗಳಲ್ಲಿ ಮಧ್ಯಮ ವರ್ಗದ ಉದ್ಯೋಗಕ್ಕೆ ಭರವಸೆಯ ಮಾರ್ಗವನ್ನು ಮುಚ್ಚಬಹುದು. ಸಾಫ್ಟ್ವೇರ್, ಹಣಕಾಸು ಮತ್ತು ವ್ಯವಹಾರ ಸೇವೆಗಳಲ್ಲಿ ಕಾಲ್ ಸೆಂಟರ್ ಕೆಲಸಗಳು ಹಾಗೂ ಪ್ರವೇಶ ಮಟ್ಟದ ಉದ್ಯೋಗಗಳಿಗೆ ಅಪಾಯ ಒಡ್ಡಲಿದೆ ಎಂಬ ಎಚ್ಚರಿಕೆಯನ್ನೂ ವರದಿ ನೀಡಿದೆ.

ಉದ್ಯೋಗಗಳ ಮೇಲೆ AI ಪ್ರಭಾವದ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಉದಯೋನ್ಮುಖ ಆರ್ಥಿಕತೆಗಳಲ್ಲಿ ಉದ್ಯೋಗಕ್ಕೆ AI ತಂತ್ರಜ್ಞಾನವು ಹೆಚ್ಚು ಬೆದರಿಕೆ ಒಡ್ಡುವುದಿಲ್ಲ ಎಂದು ವಿಶ್ವಬ್ಯಾಂಕ್ ಹೇಳಿದೆ.

ಶ್ರೀಮಂತ ದೇಶಗಳಲ್ಲಿ ಶೇ 14.2ರಷ್ಟು ಉದ್ಯೋಗಗಳ ಮೇಲೆ AI ಪ್ರಭಾವ ಬೀರಿದರೆ, ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಉದ್ಯೋಗಗಳ ಮೇಲೆ AI ಪ್ರಭಾವ ಶೇ 4.5ರಷ್ಟು ಮಾತ್ರ ಇರಲಿದೆ ಎಂದು ಆಗಸ್ಟ್ 4ರಂದು ವಿಶ್ವಬ್ಯಾಂಕ್ ಪ್ರಕಟಿಸಿದ ವರದಿಯಲ್ಲಿ ಹೇಳಲಾಗಿದೆ. ಬಡ ಆರ್ಥಿಕತೆಗಳು ಕೃಷಿ ಪ್ರಧಾನವಾಗಿದ್ದು, ಸಣ್ಣ ಉದ್ಯಮಗಳ ಮೇಲೆ ಅವಲಂಬಿತವಾಗಿರುವ ಕಾರಣ, AI ತಮ್ಮ ಕಾರ್ಮಿಕರನ್ನು ಕೆಲಸದಿಂದ ಹೊರಹಾಕುವ ಬದಲು ಅವರಿಗೆ ಸಹಾಯ ಮಾಡುವ ಸಾಧ್ಯತೆಯಿದೆ.

ಅರ್ಥಪೂರ್ಣ AI ಚಾಲಿತ ಉತ್ಪಾದನೆಯಿಂದ ಲಾಭ ಪಡೆಯಲಿವೆ ಎಂದು ನಿರೀಕ್ಷೆ ಇಡಲಾದ ಉದ್ಯೋಗಗಳ ಪಾಲು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶೇ 16.2ರಷ್ಟಿದ್ದರೆ, ಅಧಿಕ ಆದಾಯವಿರುವ ದೇಶಗಳಲ್ಲಿ ಅದು ಶೇ 18.7ರಷ್ಟು ಇರಬಹುದು. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಾಸಿಸುವ ಸರಿಸುಮಾರು 6.8 ಶತಕೋಟಿ ಜನರ ಜೀವನದ ಮೇಲೆ AIನ ಸಂಭಾವ್ಯ ಪ್ರಭಾವದ ಕುರಿತು ವಿಶ್ವಬ್ಯಾಂಕ್ ನ ಈ ವರದಿಯನ್ನು ಮೊದಲ ಸಮಗ್ರ ಮೌಲ್ಯಮಾಪನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅಮೆರಿಕ ಮತ್ತು ಚೀನಾ ನಡುವಿನ AI ಸ್ಪರ್ಧೆ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ವಿಶ್ವಬ್ಯಾಂಕ್ ನ ಈ ವರದಿ ಬಂದಿದೆ. ಹೀಗಾಗಿ ಭಾರತದಂತಹ ರಾಷ್ಟ್ರವು ಈ ಎರಡು ರಾಷ್ಟ್ರಗಳ ನಡುವೆ ಒಂದರ ಮೇಲೆ AIಗಾಗಿ ಅವಲಂಬಿಸಬೇಕಾದ ಅಪಾಯಕ್ಕೆ ಗುರಿಯಾಗಲಿದೆ.

"AI ಅಭಿವೃದ್ಧಿಶೀಲ ಆರ್ಥಿಕತೆಗಳಿಗೆ ಜೀವನಾಡಿಯನ್ನು ನೀಡಿದೆ. ಅವರು ಅದನ್ನು ವಶಪಡಿಸಿಕೊಳ್ಳಬೇಕು. AI ಪ್ರಗತಿಯನ್ನು ಕಳೆದುಕೊಳ್ಳುವ ವೆಚ್ಚವು ಯಾವುದೇ ದೇಶಕ್ಕೆ ಗಂಭೀರ ಸಮಸ್ಯೆಯಾಗಲಿದೆ. ಇಂದಿನ ಅಭಿವೃದ್ಧಿಶೀಲ ಆರ್ಥಿಕತೆಗಳು ಮೊದಲ ಕೈಗಾರಿಕಾ ಕ್ರಾಂತಿಯನ್ನು ತಪ್ಪಿಸಿಕೊಂಡಿದ್ದು, ಅದರ ಬೆಲೆಯನ್ನು ಮುಂದಿನ ಎರಡು ಶತಮಾನಗಳ ಕಾಲ ಪಾವತಿಸಿವೆ. ಹೀಗಾಗಿ ಈಗಿನ AI ಪ್ರಗತಿಯನ್ನೂ ತಪ್ಪಿಸಿಕೊಳ್ಳಬಾರದು" ಎಂದು ವಿಶ್ವಬ್ಯಾಂಕ್ನ ಮುಖ್ಯ ಅರ್ಥಶಾಸ್ತ್ರಜ್ಞ ಇಂದರ್ ಮೀತ್ ಗಿಲ್ ಅವರು ವರದಿ ಪ್ರಕಟಿಸಿದ ಸಂದರ್ಭದಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸಂಶೋಧನೆಯ ವರದಿ AI ಮತ್ತು ಉದ್ಯೋಗಗಳ ಕುರಿತು ಭಾರತೀಯ ಸರ್ಕಾರಿ ಅಧಿಕಾರಿಗಳು ಈ ಹಿಂದೆ ನೀಡಿದ್ದ ಹೇಳಿಕೆಗಳನ್ನು ಪ್ರತಿಧ್ವನಿಸುತ್ತದೆ. ಕಳೆದ ವರ್ಷ ನಡೆದ ಕಾರ್ಯಕ್ರಮವೊಂದರಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಕಾರ್ಯದರ್ಶಿ ಎಸ್. ಕೃಷ್ಣನ್ ಇದೇ ಮಾತನ್ನು ಹೇಳಿದ್ದರು. ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಬಿಳಿ ಕಾಲರ್ ಉದ್ಯೋಗಗಳ ಮೇಲೆ AI ಪ್ರಭಾವ ಸೀಮಿತವಾಗಿರಲಿದೆ ಎಂದು ಅವರು ಹೇಳಿದ್ದರು.

"ವಿಶ್ವದ ಅನೇಕ ದೇಶಗಳಲ್ಲಿ ಭಾರತಕ್ಕಿಂತ ಹೆಚ್ಚಿನ ಮಂದಿ ಕಚೇರಿಗಳಲ್ಲಿ ಕೆಲಸ ಮಾಡುತ್ತಾರೆ. ಅವರಲ್ಲಿ ಅನೇಕರ ಉದ್ಯೋಗ ಹೋಗಬಹುದು. ಆದರೆ ಭಾರತದಲ್ಲಿ ವೈಟ್ ಕಾಲರ್ ಉದ್ಯೋಗಗಳು ಸೀಮಿತವಾಗಿವೆ. ಬೌದ್ಧಿಕ ಅಥವಾ ಯಾವುದೇ ಕೆಲಸದಲ್ಲಿ ಉತ್ಪಾದಕತೆ ಹೆಚ್ಚಿಸುವ ಅವಕಾಶ ಗಣನೀಯವಾಗಿ ಹೆಚ್ಚಿದೆ" ಎಂದು ಅವರು ಹೇಳಿದ್ದರು.

ಆದರೆ ವಿಶ್ವಬ್ಯಾಂಕ್ನ ಮೌಲ್ಯಮಾಪನವು ಒಂದು ಪ್ರಮುಖ ಎಚ್ಚರಿಕೆಯೊಂದಿಗೆ ಬಂದಿದೆ. ಕಾಲ್ ಸೆಂಟರ್ ಗಳು ಮತ್ತು ಬ್ಯಾಕ್-ಆಫೀಸ್ ಸೇವೆಗಳಂತಹ ವ್ಯವಹಾರ ಪ್ರಕ್ರಿಯೆಗಳ ಹೊರಗುತ್ತಿಗೆಯನ್ನು ಅವಲಂಬಿಸಿರುವ ಅಭಿವೃದ್ಧಿಶೀಲ ರಾಷ್ಟ್ರಗಳು, AI ಅಳವಡಿಕೆ ಹೆಚ್ಚಾದಂತೆ ದೊಡ್ಡ ಪ್ರಮಾಣದ ಉದ್ಯೋಗ ನಷ್ಟದ ಬೆದರಿಕೆಯನ್ನು ಎದುರಿಸಬೇಕಾಗುತ್ತದೆ. "AI ಅನೇಕ ಅಭಿವೃದ್ಧಿಶೀಲ ಆರ್ಥಿಕತೆಗಳಲ್ಲಿ ಮಧ್ಯಮ ವರ್ಗದ ಉದ್ಯೋಗಕ್ಕೆ ಭರವಸೆಯ ಮಾರ್ಗವನ್ನು ಮುಚ್ಚಬಹುದು. ಸಾಫ್ಟ್ವೇರ್, ಹಣಕಾಸು ಮತ್ತು ವ್ಯವಹಾರ ಸೇವೆಗಳಲ್ಲಿ ಕಾಲ್ ಸೆಂಟರ್ ಕೆಲಸಗಳು ಹಾಗೂ ಪ್ರವೇಶ ಮಟ್ಟದ ಉದ್ಯೋಗಗಳಿಗೆ ಬೆದರಿಕೆ ಒಡ್ಡಲಿದೆ" ಎಂದು ಇಂದರ್ಮೀತ್ ಗಿಲ್ ಹೇಳಿದ್ದಾರೆ.

2026ರ ಏಪ್ರಿಲ್ನಲ್ಲಿ ಅಮೆರಿಕ ಮೂಲದ ಸಾಫ್ಟ್ವೇರ್ ದೈತ್ಯ ಕಂಪೆನಿ ಒರಾಕಲ್, AI ಮತ್ತು ಕ್ಲೌಡ್ ಕಂಪ್ಯೂಟಿಂಗ್ ಹೂಡಿಕೆಗಳಲ್ಲಿ ಶತಕೋಟಿ ಡಾಲರ್ ಗಳನ್ನು ಹೂಡಿಕೆ ಮಾಡಿದ್ದರೂ, ಉದ್ಯೋಗಿಗಳ ಪುನರ್ರಚನೆ ಕಾರ್ಯಕ್ರಮದಡಿ ಭಾರತದಲ್ಲಿ ಸುಮಾರು 11,000–12,000 ಉದ್ಯೋಗಗಳನ್ನು ಕಡಿತಗೊಳಿಸಿದೆ. ಅಂದರೆ, ದೇಶದಲ್ಲಿನ ತನ್ನ ಶೇ 50ರಷ್ಟು ಉದ್ಯೋಗಗಳನ್ನು ಕಡಿತ ಮಾಡಿದೆ.

ಭಾರತದಲ್ಲಿ ಹೊಸ ಉದ್ಯೋಗಿಗಳಿಗೆ ಹೋಗುತ್ತಿದ್ದ ಹಣ ಇದೀಗ AI ಮತ್ತು ಡೇಟಾ ಸೆಂಟರ್ ವೆಚ್ಚಗಳಿಗೆ ಹೋಗುತ್ತಿದೆ ಎಂದು ಜೋಹೋ ಸಂಸ್ಥಾಪಕ ಶ್ರೀಧರ್ ವೆಂಬು ಅವರು 'ಎಕ್ಸ್' ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದರು. ಗೂಗಲ್, ಮೈಕ್ರೋಸಾಫ್ಟ್, ಮೆಟಾ ಮತ್ತು ಅಮೆಝಾನ್‌ ನಂತಹ ತಂತ್ರಜ್ಞಾನ ದೈತ್ಯ ಕಂಪೆನಿಗಳು AI ಮಾಡೆಲ್ಗಳಿಗೆ ಶಕ್ತಿ ತುಂಬುವ ಡೇಟಾ ಸೆಂಟರ್ಗಳನ್ನು ನಿರ್ಮಿಸಲು ಶತಕೋಟಿ ಡಾಲರ್ ವೆಚ್ಚ ಮಾಡುತ್ತಿವೆ. ಹೀಗಾಗಿ ರಾಷ್ಟ್ರಗಳ ನಡುವೆ AIನ ಲಾಭ ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಸ್ಪರ್ಧೆ ಹೆಚ್ಚಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News