ದೊಡ್ಡ ಚಿಲ್ಲರೆ ವ್ಯಾಪಾರಿಗಳಿಗೆ ಮಾಡುವ UPI ಪಾವತಿಗೆ ಶುಲ್ಕ ಏಕೆ?
ಸಾಂದರ್ಭಿಕ ಚಿತ್ರ(AI)
ಭಾರತದಲ್ಲಿ ಶಾಪಿಂಗ್ ಮಾಡಿದ ನಂತರ ಹಣ ಪಾವತಿಸುವುದು ಈಗ ಅತ್ಯಂತ ಸುಲಭ ಮತ್ತು ಅಗ್ಗವಾಗಿದೆ. ಆದರೆ, ಹಣ ಪಾವತಿ ಮಾಡುವ ಈ ವ್ಯವಸ್ಥೆಯು ಎಂದೂ ಉಚಿತವಾಗಿ ಸಿಕ್ಕಿಲ್ಲ.
ಉದಾಹರಣೆಗೆ, ರಿಸರ್ವ್ ಬ್ಯಾಂಕ್ (RBI) ನೋಟುಗಳನ್ನು ಮುದ್ರಿಸಲು ಪ್ರತಿವರ್ಷ ಸುಮಾರು 5,000 ಕೋಟಿ ರೂಪಾಯಿ ವೆಚ್ಚ ಮಾಡುತ್ತದೆ. ಇನ್ನು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳ ನಿರ್ವಹಣಾ ವೆಚ್ಚವನ್ನು ಬ್ಯಾಂಕುಗಳು ಗ್ರಾಹಕರಿಂದಲೇ ವಸೂಲಿ ಮಾಡುತ್ತವೆ. 2021-22ರಲ್ಲಿ ಡೆಬಿಟ್ ಕಾರ್ಡ್ ಗಳ ವಾರ್ಷಿಕ ನಿರ್ವಹಣೆಗಾಗಿ ಸಾರ್ವಜನಿಕ ರಂಗದ ಬ್ಯಾಂಕುಗಳು 3,905 ಕೋಟಿ ರೂಪಾಯಿ ವಸೂಲಿ ಮಾಡಿದ್ದರೆ, 2025-26ರಲ್ಲಿ ಈ ಪ್ರಮಾಣ 7,564 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
UPI ಪಾವತಿ ವ್ಯವಸ್ಥೆಯ ವೆಚ್ಚವನ್ನೂ ಬ್ಯಾಂಕುಗಳು ಹಾಗೂ ಇತರ ಹಣಕಾಸು ಸಂಸ್ಥೆಗಳೇ ಭರಿಸುತ್ತಿವೆ. ಪ್ರತಿವರ್ಷ ಸುಮಾರು 20,000 ಕೋಟಿ ರೂಪಾಯಿವರೆಗೆ ತಲುಪುವ ಈ ಹೊರೆಯನ್ನು ಸರಿದೂಗಿಸಲು ಪರಿಹಾರ ನೀಡಬೇಕೆಂಬ ಸಂಸ್ಥೆಗಳ ಬಹುದಿನಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ಸಿಗುವ ಲಕ್ಷಣಗಳು ಕಾಣಿಸುತ್ತಿವೆ.
ಮಂಗಳವಾರದಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 'ತೆರಿಗೆ ಮತ್ತು ಇತರ ಕಾನೂನುಗಳು (ತಿದ್ದುಪಡಿ) ವಿಧೇಯಕ, 2026' ಅನ್ನು ಸಂಸತ್ತಿನಲ್ಲಿ ಮಂಡಿಸಿದರು. 'ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ, 2007'ಕ್ಕೆ ತರಲಾದ ಈ ಪ್ರಸ್ತಾವಿತ ತಿದ್ದುಪಡಿಗಳಿಂದಾಗಿ, ಬ್ಯಾಂಕುಗಳು ಮತ್ತು ಪಾವತಿ ಸಂಸ್ಥೆಗಳು UPI ಹಾಗೂ ರೂಪೇ (RuPay) ಡೆಬಿಟ್ ಕಾರ್ಡ್ ಪಾವತಿಗಳ ಮೇಲೆ ಶುಲ್ಕ ವಿಧಿಸಲು ಹಸಿರು ನಿಶಾನೆ ಸಿಗುವ ಸಾಧ್ಯತೆಯಿದೆ.
►UPI ಶುಲ್ಕಗಳು
ಎಲ್ಲಾ UPI ಮತ್ತು ರೂಪೇ ಡೆಬಿಟ್ ಕಾರ್ಡ್ ಪಾವತಿಗಳ ಮೇಲೂ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ಅನ್ವಯಿಸುವುದಿಲ್ಲ. ಪಾವತಿ ಪ್ರಕ್ರಿಯೆ, ಇತ್ಯರ್ಥ ಮತ್ತು ಮೂಲಸೌಕರ್ಯ ವೆಚ್ಚಗಳನ್ನು ಸರಿದೂಗಿಸಲು ಬ್ಯಾಂಕುಗಳು ವರ್ತಕರಿಂದ ವಸೂಲಿ ಮಾಡುವ ಶುಲ್ಕವನ್ನು MDR ಎನ್ನಲಾಗುತ್ತದೆ.
"ಮುಖ್ಯವಾಗಿ ವರ್ಷಕ್ಕೆ 50 ಕೋಟಿ ರೂಪಾಯಿಗಿಂತ ಹೆಚ್ಚಿನ ವಹಿವಾಟು ನಡೆಸುವ ದೊಡ್ಡ ವರ್ತಕರಿಗೆ UPI ವಹಿವಾಟಿನ ಮೇಲೆ ಶೇಕಡಾ 0.3 ರಿಂದ 0.6 ರಷ್ಟು MDR ಶುಲ್ಕ ವಿಧಿಸುವುದು ಸೂಕ್ತವಾದ ಕ್ರಮವಾಗಬಹುದು" ಎಂದು ಫಿನ್ಟೆಕ್ ಸಂಸ್ಥೆ 'ಡಿಸೆಂಟ್ಲೊ'ದ ಉಪಾಧ್ಯಕ್ಷ ಶ್ರೀಧರ್ ಗುಂಟುಕು ಹೇಳಿರುವುದಾಗಿ The Indian Express ವರದಿ ಉಲ್ಲೇಖಿಸಿದೆ.
ಗುಂಟುಕು ಅವರ ಪ್ರಕಾರ, UPI ಮೇಲಿನ ಶೇಕಡಾ 0.3ರಿಂದ 0.6ರಷ್ಟು ಶುಲ್ಕವು ಪಾವತಿ ವ್ಯವಸ್ಥೆಯ ಒಟ್ಟಾರೆ ವೆಚ್ಚಕ್ಕೆ ಸರಿಹೊಂದುತ್ತದೆ. ಹೀಗಾಗಿ, ಇದು ಲಾಭ ಗಳಿಸುವುದಕ್ಕಿಂತ ಹೆಚ್ಚಾಗಿ ಸೇವಾ ವೆಚ್ಚವನ್ನು ಭರಿಸಲು ಮಾತ್ರ ನೆರವಾಗುತ್ತದೆ.
ಬ್ಯಾಂಕಿಂಗ್ ತಂತ್ರಜ್ಞಾನ ಸಂಸ್ಥೆ 'ಝೀಟಾ'ದ ಹಿರಿಯ ಉಪಾಧ್ಯಕ್ಷ ಮೆಹುಲ್ ಮಿಸ್ಟ್ರಿ ಅವರ ಬಳಿ ಬೇರೆಯದೇ ಅಂಕಿಅಂಶಗಳಿವೆ. ಅವರ ಪ್ರಕಾರ, UPI ಪಾವತಿಗಳಿಗೆ ಶೇಕಡಾ 0.05ರಿಂದ 0.07ರಷ್ಟು MDR ವಿಧಿಸುವ ಬಗ್ಗೆ ಪ್ರಸ್ತುತ ಚರ್ಚೆಗಳು ನಡೆಯುತ್ತಿವೆ. ಇದು ವರ್ಷಕ್ಕೆ ಕನಿಷ್ಠ 1ರಿಂದ 1.5 ಕೋಟಿ ರೂಪಾಯಿ ವಹಿವಾಟು ನಡೆಸುವ ವರ್ತಕರಿಗೆ ಅನ್ವಯಿಸುತ್ತದೆ. ಇಲ್ಲಿ ವಹಿವಾಟಿನ ಮಿತಿ ಕಡಿಮೆಯಿದ್ದರೂ ವಿಧಿಸುವ ಶುಲ್ಕವೂ ತೀರ ಕಡಿಮೆಯಿರುತ್ತದೆ.
ಈ ಅಂಕಿಅಂಶಗಳನ್ನು ಹೋಲಿಸಿ ನೋಡಿದರೆ, ಕ್ರೆಡಿಟ್ ಕಾರ್ಡ್ ಗಳ ಮೇಲೆ ಶೇಕಡಾ 1ರಿಂದ 3ರಷ್ಟು ಮತ್ತು ಡೆಬಿಟ್ ಕಾರ್ಡ್ ಗಳ ಮೇಲೆ ಶೇಕಡಾ 0.9ರಷ್ಟು MDR ವಿಧಿಸಲಾಗುತ್ತಿದೆ. ಈ ವ್ಯತ್ಯಾಸವನ್ನು ಸರಿಪಡಿಸುವ ಅಗತ್ಯವೂ ಇದೆ.
"ಅಮೆಝಾನ್ ಮತ್ತು ಫ್ಲಿಪ್ಕಾರ್ಟ್ ನಂತಹ ಪ್ರಮುಖ ಸಂಸ್ಥೆಗಳು ಈಗಾಗಲೇ ವೀಸಾ ಮತ್ತು ಮಾಸ್ಟರ್ ಕಾರ್ಡ್ ಗಳ ಮೇಲೆ MDR ಪಾವತಿಸುತ್ತಿವೆ. ಇಂತಹ ದೊಡ್ಡ ವರ್ತಕರಿಗೆ UPI ಪಾವತಿಯಲ್ಲಿ ಸುದೀರ್ಘ ವಿನಾಯಿತಿ ನೀಡುವುದು ಒಂದು ರಂಗಕ್ಕೆ ನೀಡುವ ಸಬ್ಸಿಡಿಯಾಗುತ್ತದೆ. ಇದರ ಹೊರೆಯನ್ನು ಬ್ಯಾಂಕುಗಳು ಮತ್ತು ಪಾವತಿ ಸಂಸ್ಥೆಗಳು ಹೊರಬೇಕಾಗುತ್ತದೆ” ಎಂದು ಗುಂಟುಕು ಅಭಿಪ್ರಾಯಪಟ್ಟಿದ್ದಾರೆ.
ಪ್ರಮುಖ ವಿಷಯವೆಂದರೆ, UPI ಮತ್ತು ರೂಪೇ ಡೆಬಿಟ್ ಕಾರ್ಡ್ ಪಾವತಿಗಳ ಮೇಲಿನ MDR ಶುಲ್ಕವು 2,000 ರೂಪಾಯಿಗಿಂತ ಹೆಚ್ಚಿನ ವಹಿವಾಟುಗಳಿಗೆ ಮಾತ್ರ ಅನ್ವಯಿಸುವ ಸಾಧ್ಯತೆಯಿದೆ. 2025-26ರಲ್ಲಿ ನಡೆದ ಗ್ರಾಹಕರಿಂದ ವರ್ತಕರಿಗೆ (P2M) ಪಾವತಿಯಾದ UPI ವಹಿವಾಟುಗಳಲ್ಲಿ ಕೇವಲ ಶೇಕಡಾ 4ರಷ್ಟು ಮಾತ್ರ 2,000 ರೂಪಾಯಿಗಿಂತ ಹೆಚ್ಚಾಗಿದ್ದವು. ಒಟ್ಟು UPI ವಹಿವಾಟಿನ ಮೌಲ್ಯದಲ್ಲಿ ಈ ಶೇಕಡಾ 4ರಷ್ಟು ಪಾವತಿಗಳೇ ಮೂರನೇ ಎರಡರಷ್ಟು ಪಾಲನ್ನು ಹೊಂದಿದ್ದವು.
2025-26ರಲ್ಲಿ 314 ಲಕ್ಷ ಕೋಟಿ ರೂಪಾಯಿ ಮೌಲ್ಯದ 24,000 ಕೋಟಿಗೂ ಹೆಚ್ಚು UPI ವಹಿವಾಟುಗಳು ನಡೆದಿವೆ. ಹೀಗಾಗಿ, ಬಹುಪಾಲು UPI ಪಾವತಿಗಳು ಎಂದಿನಂತೆ ಉಚಿತವಾಗಿಯೇ ಮುಂದುವರಿಯಲಿವೆ.
ಪ್ರಸ್ತುತ, ‘ರೂಪೇ ಡೆಬಿಟ್ ಕಾರ್ಡ್ ಮತ್ತು ಸಣ್ಣ ಮೊತ್ತದ ಭೀಮ್-UPI ವಹಿವಾಟುಗಳ ಪ್ರೋತ್ಸಾಹಕ ಯೋಜನೆ’ಯ ಅಡಿಯಲ್ಲಿ ಸಣ್ಣ ವರ್ತಕರಿಗೆ ಮಾಡುವ 2,000 ರೂಪಾಯಿವರೆಗಿನ ಪಾವತಿಗಳಿಗೆ ಮಾತ್ರ ಸರ್ಕಾರ ಸಬ್ಸಿಡಿ ನೀಡುತ್ತಿದೆ. ಈ ಯೋಜನೆಯಲ್ಲಿ ವಹಿವಾಟು ಮೌಲ್ಯದ ಗರಿಷ್ಠ ಶೇಕಡಾ 0.15ರಷ್ಟು ಮೊತ್ತವನ್ನು ಬ್ಯಾಂಕುಗಳು, ಪಾವತಿ ಸೇವಾ ಸಂಸ್ಥೆಗಳು ಮತ್ತು ಥರ್ಡ್-ಪಾರ್ಟಿ ಆ್ಯಪ್ ಪೂರೈಕೆದಾರರು ಹಂಚಿಕೊಳ್ಳುತ್ತಾರೆ.
►20,000 ಕೋಟಿ ರೂಪಾಯಿ ಹೊರೆ
ಹಾಗಾದರೆ ಈ ಶುಲ್ಕಗಳು ಯಾವೆಲ್ಲ ಮೂಲಸೌಕರ್ಯ ವೆಚ್ಚಗಳನ್ನು ಸರಿದೂಗಿಸಲಿವೆ?
ಮೊಬೈಲ್ ಆ್ಯಪ್ ಅಭಿವೃದ್ಧಿ, ಅದರ ನಿರ್ವಹಣೆ ಮತ್ತು ಗ್ರಾಹಕ ಸೇವೆಗಳು ಇದರಲ್ಲಿ ಸೇರಿವೆ. ನಂತರ ಬ್ಯಾಂಕುಗಳ ವೆಚ್ಚಗಳಿದ್ದು, ಅವುಗಳಲ್ಲಿ ವಹಿವಾಟುಗಳ ಅನುಮೋದನೆ, ಹೊಂದಾಣಿಕೆ ಮತ್ತು ಹಣದ ಇತ್ಯರ್ಥ ಒಳಗೊಂಡಿವೆ. ಇನ್ನುಳಿದ ವೆಚ್ಚಗಳೆಂದರೆ ಸೈಬರ್ ಭದ್ರತೆ, ಕೆವೈಸಿ ಪ್ರಕ್ರಿಯೆಗಳು, ಕ್ಲೌಡ್ ಸ್ಟೋರೇಜ್, ಅನಾಹುತಗಳ ಸಂದರ್ಭದಲ್ಲಿ ಡೇಟಾ ಮರುಪಡೆಯುವಿಕೆ, ವಂಚನೆ ತಡೆ, ದೂರು ಪರಿಹಾರ, ನಿರಂತರ ನೆಟ್ವರ್ಕ್ ಮೇಲ್ವಿಚಾರಣೆ ಮತ್ತು ನಿಯಂತ್ರಣ ಸಂಸ್ಥೆಗಳಿಗೆ ವರದಿ ಸಲ್ಲಿಸುವ ವೆಚ್ಚಗಳು ಇದರಲ್ಲಿ ಸೇರಿವೆ.
ಈ ಪಾವತಿ ಕ್ಷೇತ್ರವು ಒಟ್ಟಾರೆಯಾಗಿ ಎಷ್ಟು ವೆಚ್ಚ ಮಾಡುತ್ತಿದೆ? ಈ ಬಗ್ಗೆ ಅಧಿಕೃತ ಅಂಕಿಅಂಶಗಳಿಲ್ಲದಿದ್ದರೂ, UPI ಮತ್ತು ರೂಪೇ ಡೆಬಿಟ್ ಕಾರ್ಡ್ ಮೂಲಸೌಕರ್ಯ ನಿರ್ವಹಣೆಯ ವಾರ್ಷಿಕ ವೆಚ್ಚ "ಕನಿಷ್ಠ 10,000 ಕೋಟಿ ರೂಪಾಯಿ ಇರಬಹುದು" ಎಂದು ಝೀಟಾ ಸಂಸ್ಥೆಯ ಮಿಸ್ಟ್ರಿ ಅಂದಾಜಿಸಿದ್ದಾರೆ.
ಮಿಸ್ಟ್ರಿ ಅವರ ಅಂದಾಜು ನೈಜ ವೆಚ್ಚಕ್ಕಿಂತ ಕಡಿಮೆಯಿರಬಹುದು.
ಹಣಕಾಸು ವಿಷಯಗಳ ಮೇಲಿನ ಸಂಸದೀಯ ಸ್ಥಾಯಿ ಸಮಿತಿಯ ಮಾರ್ಚ್ ವರದಿಯ ಪ್ರಕಾರ, 2021-22ರಿಂದ 2024-25ರ ಅವಧಿಯಲ್ಲಿ ಸರ್ಕಾರದ ಪ್ರೋತ್ಸಾಹಕ ಯೋಜನೆಯಡಿ ನೀಡಲಾದ ಸಬ್ಸಿಡಿಯು ಡಿಜಿಟಲ್ ಪಾವತಿ ಕ್ಷೇತ್ರವು ಭರಿಸಿದ ಒಟ್ಟು ವೆಚ್ಚದ "ಕೇವಲ ಶೇಕಡಾ 11ರಷ್ಟು" ಮಾತ್ರವಾಗಿತ್ತು.
ಈ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಈ ಯೋಜನೆಯಡಿ 8,730 ಕೋಟಿ ರೂಪಾಯಿ ಪಾವತಿಸಿತ್ತು. ಈ ಮೊತ್ತವು ಡಿಜಿಟಲ್ ಪಾವತಿ ಸಂಸ್ಥೆಗಳ ಒಟ್ಟು ವೆಚ್ಚದ ಶೇಕಡಾ 11ರಷ್ಟು ಮಾತ್ರ ಎಂದಾದರೆ, ಒಟ್ಟು ವಾರ್ಷಿಕ ವೆಚ್ಚ ಸುಮಾರು 20,000 ಕೋಟಿ ರೂಪಾಯಿಗೆ ತಲುಪುತ್ತದೆ.
►ಶುಲ್ಕವನ್ನು ಯಾರು ಪಾವತಿಸುತ್ತಾರೆ?
ದೊಡ್ಡ ಮೊತ್ತದ UPI ಪಾವತಿಗಳ ಮೇಲೆ ಶುಲ್ಕ ವಿಧಿಸಿದರೆ ಜನರು ಪಾವತಿ ಮಾಡುವ ವಿಧಾನ ಬದಲಾಗುತ್ತದೆಯೇ?
ವರ್ತಕರು ತಮಗೆ ವಿಧಿಸುವ MDR ಶುಲ್ಕದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಿದರೆ, ಪಾವತಿ ಮಾಡುವವರ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗುವ ಲಕ್ಷಣಗಳಿವೆ.
20,000ಕ್ಕೂ ಹೆಚ್ಚು ಜನರನ್ನು ಒಳಗೊಂಡ 'ಲೋಕಲ್ಸರ್ಕಲ್ಸ್' ಸಮೀಕ್ಷೆಯ ಪ್ರಕಾರ, ದೊಡ್ಡ ವರ್ತಕರಲ್ಲಿ ಮಾಡುವ 3,000 ರೂಪಾಯಿಗಿಂತ ಹೆಚ್ಚಿನ UPI ಪಾವತಿಗಳಿಗೆ ಶುಲ್ಕ ವಿಧಿಸಿದರೆ, ಕೇವಲ ಶೇಕಡಾ 12ರಷ್ಟು ಜನರು ಮಾತ್ರ UPI ಬಳಕೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ವರ್ತಕರು 3,000 ರೂಪಾಯಿಗಿಂತ ಹೆಚ್ಚಿನ UPI ವಹಿವಾಟಿನ ಶುಲ್ಕವನ್ನು ಗ್ರಾಹಕರಿಂದಲೇ ವಸೂಲಿ ಮಾಡಲು ಶುರು ಮಾಡಿದರೆ, ಬಳಕೆಯನ್ನು ಮುಂದುವರಿಸುವವರ ಪ್ರಮಾಣ ಕೇವಲ ಶೇಕಡಾ 2ಕ್ಕೆ ಕುಸಿಯುತ್ತದೆ.
ಸೇವಾ ವೆಚ್ಚವನ್ನು ಯಾರಾದರೂ ಒಬ್ಬರು ಭರಿಸಲೇಬೇಕಾಗುತ್ತದೆ. "ಅಂತಿಮವಾಗಿ, ಯಾವುದೋ ಒಂದು ರೀತಿಯಲ್ಲಿ ಗ್ರಾಹಕರೇ ಈಗಾಗಲೇ ಇದಕ್ಕೆ ಹಣ ಪಾವತಿಸುತ್ತಿದ್ದಾರೆ. ಅದು ನೇರವಾಗಿ ಅದೇ ಗ್ರಾಹಕರಾಗಿರದಿರಬಹುದು ಅಥವಾ ಸಮಗ್ರ ಅರ್ಥವ್ಯವಸ್ಥೆಯ ಮೂಲಕ ಹೊರಬರುತ್ತಿರಬಹುದು... ಒಟ್ಟಿನಲ್ಲಿ ಈ ವೆಚ್ಚದ ಹೊರೆ ಈಗಾಗಲೇ ವರ್ಗಾವಣೆಯಾಗುತ್ತಿದೆ. ಆದರೆ ಅದು 'ಬಳಕೆದಾರನೇ ಪಾವತಿಸುವ' ನೇರ ತತ್ವದಂತೆ ಕಾಣಿಸುತ್ತಿಲ್ಲ ಅಷ್ಟೇ" ಎಂದಿದ್ದಾರೆ RBI ಗವರ್ನರ್ ಸಂಜಯ್ ಮಲ್ಹೋತ್ರಾ.
ಸೌಜನ್ಯ: indianexpress.com