ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸಲು ಹಣಕಾಸು ಮಸೂದೆ ಅಂಗೀಕಾರ: ಈ ಮಾರ್ಗವು ಕಾನೂನು ಸವಾಲನ್ನು ಎದುರಿಸುತ್ತಿರುವುದೇಕೆ?
Photo Credit : PTI
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಒಟ್ಟು ನ್ಯಾಯಮೂರ್ತಿಗಳ ಮಂಜೂರಾದ ಸಂಖ್ಯಾಬಲವನ್ನು 34ರಿಂದ 38ಕ್ಕೆ ಹೆಚ್ಚಿಸುವ ಉದ್ದೇಶದ 'ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ಮಸೂದೆ, 2026'ಕ್ಕೆ ರಾಜ್ಯಸಭೆಯು ಬುಧವಾರ ಒಪ್ಪಿಗೆ ನೀಡಿದೆ.
ಸೋಮವಾರವಷ್ಟೇ ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದ ಈ ಮಸೂದೆಯನ್ನು 'ಹಣಕಾಸು ಮಸೂದೆ' ರೂಪದಲ್ಲಿ ಅಂಗೀಕರಿಸಲಾಯಿತು. 2019ರಲ್ಲಿ ಸುಪ್ರೀಂ ಕೋರ್ಟ್ ನ ಸಂಖ್ಯಾಬಲವನ್ನು 34ಕ್ಕೆ ಹೆಚ್ಚಿಸಿದಾಗಲೂ ಇದೇ ಮಾರ್ಗವನ್ನು ಅನುಸರಿಸಲಾಗಿತ್ತು. 2018ರ ಸುಪ್ರೀಂ ಕೋರ್ಟ್ ತೀರ್ಪೊಂದರಲ್ಲಿ ಪ್ರಮುಖ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದ ನ್ಯಾಯಮೂರ್ತಿಯೊಬ್ಬರು, ಈ ರೀತಿಯ ಮಾರ್ಗ ಅನುಸರಿಸುವುದನ್ನು "ಸಂವಿಧಾನಕ್ಕೆ ಎಸಗಿದ ವಂಚನೆ" ಎಂದು ಹೇಳಿದ್ದಾರೆ.
ನಾಲ್ಕು ಹೆಚ್ಚುವರಿ ನ್ಯಾಯಮೂರ್ತಿಗಳ ಹುದ್ದೆಗಳು, ಅವರ ಸಿಬ್ಬಂದಿ, ವಸತಿ ಮತ್ತು ಭದ್ರತೆಗೆ ತಗಲುವ ವೆಚ್ಚಗಳನ್ನು ಉಲ್ಲೇಖಿಸಿ ಈ ಮಸೂದೆಯನ್ನು ಮಂಡಿಸಲಾಗಿದೆ.
"ಸುಪ್ರೀಂ ಕೋರ್ಟ್ ನಲ್ಲಿ ನಾಲ್ಕು ಹೆಚ್ಚುವರಿ ನ್ಯಾಯಮೂರ್ತಿ ಹುದ್ದೆಗಳು ಮತ್ತು ಅಗತ್ಯ ಸಿಬ್ಬಂದಿಯನ್ನು ನೇಮಿಸುವುದರಿಂದ ವೇತನ ಹಾಗೂ ಭತ್ಯೆಗಳ ವೆಚ್ಚ ಹೆಚ್ಚಾಗಲಿದೆ. ನ್ಯಾಯಮೂರ್ತಿಗಳು ಉಚಿತ ಅಧಿಕೃತ ವಸತಿ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ಪ್ರತಿಯೊಬ್ಬ ನ್ಯಾಯಮೂರ್ತಿಗೂ ವಸತಿ ಮತ್ತು ಕಚೇರಿಯಲ್ಲಿ ವೈಯಕ್ತಿಕ ಸಿಬ್ಬಂದಿಯನ್ನು ಒದಗಿಸಬೇಕಾಗುತ್ತದೆ. ಜೊತೆಗೆ ನ್ಯಾಯಮೂರ್ತಿಗಳಿಗೆ ಭದ್ರತೆ ಒದಗಿಸಲು ವೆಚ್ಚ ತಗಲುತ್ತದೆ. ಈ ನಾಲ್ವರು ನ್ಯಾಯಮೂರ್ತಿಗಳು ಮತ್ತು ಅವರ ಸಿಬ್ಬಂದಿಯ ವೇತನ, ವಾಹನ ಹಾಗೂ ಇತರ ದಿನನಿತ್ಯದ ವೆಚ್ಚಗಳಿಗಾಗಿ ವಾರ್ಷಿಕ ಅಂದಾಜು 10,56,81,648 ರೂ. ತಗಲಲಿದೆ. ಕಾರು ಹಾಗೂ ಅಧಿಕೃತ ವಸತಿ ಗೃಹಗಳ ಪೀಠೋಪಕರಣಗಳಂತಹ ಒಂದು ಬಾರಿಯ ವೆಚ್ಚಕ್ಕಾಗಿ ಸುಮಾರು 3,47,36,000 ರೂ. ಬೇಕಾಗುತ್ತದೆ. ಈ ಮೂಲಕ ಸುಪ್ರೀಂ ಕೋರ್ಟ್ಗೆ ಹೆಚ್ಚುವರಿಯಾಗಿ ನಾಲ್ಕು ನ್ಯಾಯಮೂರ್ತಿ ಹುದ್ದೆಗಳನ್ನು ಸೃಷ್ಟಿಸಲು ಒಟ್ಟು ಸುಮಾರು 14,04,17,648 ರೂ. ವೆಚ್ಚವಾಗಲಿದೆ," ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.
ಯಾವುದೇ ಒಂದು ಮಸೂದೆಯನ್ನು 'ಹಣಕಾಸು ಮಸೂದೆ' ಎಂದು ಪರಿಗಣಿಸಬಹುದೇ ಎಂಬ ವಿಷಯವು ಪ್ರಸ್ತುತ ಏಳು ನ್ಯಾಯಮೂರ್ತಿಗಳ ಸಂವಿಧಾನ ಪೀಠದ ಪರಿಶೀಲನೆಯಲ್ಲಿದೆ. 2023ರಲ್ಲಿ, ಅಂದಿನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಈ ಪ್ರಕರಣದ ವಿಚಾರಣೆಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದ್ದರು. ಆದರೆ, ಈ ವಿಚಾರ ಇನ್ನೂ ವಿಚಾರಣೆಗೆ ಬಂದಿಲ್ಲ.
ಸಂವಿಧಾನದ 110ನೇ ವಿಧಿಯು ಹಣಕಾಸು ಮಸೂದೆಗೆ ಸಂಬಂಧಿಸಿದೆ. ಲೋಕಸಭೆಯ ಸ್ಪೀಕರ್ ಅವರ ಅಭಿಪ್ರಾಯದಂತೆ ತೆರಿಗೆ, ಸಾರ್ವಜನಿಕ ಹಣಕಾಸು, ಅಂದರೆ ಭಾರತದ ಸಂಚಿತ ನಿಧಿ ಅಥವಾ ಸಾಂದರ್ಭಿಕ ನಿಧಿಗೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡ ಮಸೂದೆಯನ್ನು ಹಣಕಾಸು ಮಸೂದೆ ಎನ್ನಲಾಗುತ್ತದೆ.
ಹಣಕಾಸು ಮಸೂದೆಯನ್ನು ಲೋಕಸಭೆಯಲ್ಲಿ ಮಾತ್ರ ಮಂಡಿಸಬಹುದು. ಸ್ಪೀಕರ್ ಮಸೂದೆಯೊಂದನ್ನು "ಹಣಕಾಸು ಮಸೂದೆ" ಎಂದು ವರ್ಗೀಕರಿಸಿದರೆ, ಅದನ್ನು ರಾಜ್ಯಸಭೆಯಲ್ಲಿ ಅಂಗೀಕರಿಸುವ ಅಗತ್ಯವಿರುವುದಿಲ್ಲ. ಉದಾಹರಣೆಗೆ, ಕೇಂದ್ರ ಬಜೆಟ್ ಒಂದು ಹಣಕಾಸು ಮಸೂದೆಯಾಗಿದೆ. ಸಂವಿಧಾನದ 110(1)(g) ವಿಧಿಯು, "110(1)(a)-(f) ವಿಧಿಗಳಲ್ಲಿ ಉಲ್ಲೇಖಿಸಲಾದ ಯಾವುದೇ ವಿಷಯಕ್ಕೆ ಸಂಬಂಧಿಸಿದ ವಿಷಯಗಳನ್ನು" ಕೂಡ ಹಣಕಾಸು ಮಸೂದೆ ಎಂದು ಪರಿಗಣಿಸಬಹುದು ಎಂದು ಹೇಳುತ್ತದೆ. ಮೋದಿ ಸರ್ಕಾರವು ತನ್ನ ಹಿಂದಿನ ಅವಧಿಗಳಲ್ಲಿ ಪ್ರಮುಖ ಕಾಯ್ದೆಗಳನ್ನು ಹಣಕಾಸು ಮಸೂದೆಯಾಗಿ ಅಂಗೀಕರಿಸಲು ಈ ಹೆಚ್ಚುವರಿ ನಿಯಮವನ್ನೇ ಆಧಾರವಾಗಿಸಿಕೊಂಡಿತ್ತು. ರಾಜ್ಯಸಭೆಯಲ್ಲಿ ಮಸೂದೆಗಳನ್ನು ಅಂಗೀಕರಿಸಲು ಅಗತ್ಯ ಬಲವಿಲ್ಲದ ಕಾರಣ ಸರ್ಕಾರ ಈ ಮಾರ್ಗವನ್ನು ಅನುಸರಿಸಿದೆ ಎಂದು ವಿರೋಧ ಪಕ್ಷಗಳು ಆಗ ವಾದಿಸಿದ್ದವು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಸೇರಿದಂತೆ ಮೂರು ಪ್ರಮುಖ ಕಾಯ್ದೆಗಳನ್ನು ಹಣಕಾಸು ಮಸೂದೆಯಾಗಿ ಅಂಗೀಕರಿಸಿರುವುದು ಸರಿಯೇ ಎಂಬ ವಿಚಾರವನ್ನು ವಿಸ್ತೃತ ಪೀಠವು ಪರಿಶೀಲಿಸಬೇಕಿದೆ. ಇನ್ನುಳಿದ ಎರಡು ಕಾಯ್ದೆಗಳೆಂದರೆ ಆಧಾರ್ ಕಾಯ್ದೆ ಮತ್ತು ಟ್ರಿಬ್ಯೂನಲ್ ಆಡಳಿತ ಮಂಡಳಿಯ ಸೇವಾ ಷರತ್ತುಗಳನ್ನು ತಿದ್ದುಪಡಿ ಮಾಡಿದ 2017ರ ಕಾಯ್ದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಮತ್ತು ಆಧಾರ್ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದರೆ, ಟ್ರಿಬ್ಯೂನಲ್ ತಿದ್ದುಪಡಿಗಳನ್ನು ಅಸಂವಿಧಾನಿಕ ಎಂದು ರದ್ದುಗೊಳಿಸಿತ್ತು. ಆದರೆ, ಎರಡೂ ತೀರ್ಪುಗಳಲ್ಲಿ ಮಸೂದೆಯನ್ನು ಹಣಕಾಸು ಮಸೂದೆಯಾಗಿ ಅಂಗೀಕರಿಸಿದ ವಿಚಾರವನ್ನು ನಿರ್ಣಯಿಸಲು ವಿಸ್ತೃತ ಪೀಠಕ್ಕೆ ಬಿಡಲಾಗಿತ್ತು.
2018ರ ಆಧಾರ್ ತೀರ್ಪಿನಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದ ಏಕೈಕ ನ್ಯಾಯಮೂರ್ತಿಯಾಗಿದ್ದ ಡಿ.ವೈ. ಚಂದ್ರಚೂಡ್ ಅವರು ಆಧಾರ್ ಕಾಯ್ದೆಯನ್ನು ಹಣಕಾಸು ಮಸೂದೆಯಾಗಿ ಅಂಗೀಕರಿಸಿದ್ದಕ್ಕಾಗಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದರು. ಅವರು ಈ ಕ್ರಮವನ್ನು "ಸಂವಿಧಾನಕ್ಕೆ ಎಸಗಿದ ವಂಚನೆ" ಮತ್ತು "ತಂತ್ರಗಾರಿಕೆ" ಎಂದು ಹೇಳಿದ್ದರು. ಆಧಾರ್ ಮೂಲಕ ನೀಡಲಾಗುವ ಸಬ್ಸಿಡಿಗಳು ಭಾರತದ ಸಂಚಿತ ನಿಧಿಯಿಂದ ಹರಿಯುವುದರಿಂದ, ಈ ಕಾಯ್ದೆಯನ್ನು ಹಣಕಾಸು ಮಸೂದೆ ಎಂದು ವರ್ಗೀಕರಿಸಿರುವುದು ಕಾನೂನುಬದ್ಧವಾಗಿದೆ ಎಂದು ಸರ್ಕಾರ ವಾದಿಸಿತ್ತು.
ನಂತರ, ಸುಪ್ರೀಂ ಕೋರ್ಟ್ ನ ಐವರು ನ್ಯಾಯಮೂರ್ತಿಗಳ ಪೀಠವು 2019ರಲ್ಲಿ ನ್ಯಾಯಾಂಗ ಸ್ವಾಯತ್ತತೆಯಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕಾಗಿ ಈ ಕಾಯ್ದೆಯನ್ನು ಅಸಂವಿಧಾನಿಕ ಎಂದು ರದ್ದುಗೊಳಿಸಿತಲ್ಲದೆ, ಇದರ ಹಣಕಾಸು ಮಸೂದೆಯ ಆಯಾಮವನ್ನು ವಿಸ್ತೃತ ಸಂವಿಧಾನ ಪೀಠಕ್ಕೆ ಉಲ್ಲೇಖಿಸಿತು.
ಹೀಗೆ ಮಾಡುವಾಗ, ಆಧಾರ್ ಕಾಯ್ದೆಯನ್ನು ಹಣಕಾಸು ಮಸೂದೆಯಾಗಿ ಅಂಗೀಕರಿಸಿದ್ದನ್ನು ಎತ್ತಿ ಹಿಡಿದಿದ್ದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠದ 2018ರ ತೀರ್ಪಿನ ಔಚಿತ್ಯದ ಬಗ್ಗೆಯೂ ಕೋರ್ಟ್ ಸಂಶಯ ವ್ಯಕ್ತಪಡಿಸಿತ್ತು.
ಸೌಜನ್ಯ: indianexpress.com