Uttar Pradesh | 8 ವರ್ಷಗಳು, ದಿನಕ್ಕೆ 2.3 ಕೋಟಿ ರೂ.; ಜಾಹೀರಾತು ವೆಚ್ಚದಲ್ಲಿ ಮೋದಿ ಸರ್ಕಾರವನ್ನೇ ಹಿಂದಿಕ್ಕಿದ ಆದಿತ್ಯನಾಥ್ ಸರಕಾರ!

Update: 2026-08-06 21:24 IST

 ಆದಿತ್ಯನಾಥ್ | Photo Credit : PTI 

ಎಂಟು ವರ್ಷಗಳಲ್ಲಿ ದಿನಕ್ಕೆ ಸರಾಸರಿ 2.32 ಕೋಟಿ ರೂಪಾಯಿಗಿಂತಲೂ ಹೆಚ್ಚು! ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ತನ್ನ ಪ್ರಚಾರಕ್ಕಾಗಿ ಮಾಡಿರುವ ಸರಾಸರಿ ವೆಚ್ಚ ಇದಾಗಿದೆ. 2017-18 ರಿಂದ 2024-25ರ ಹಣಕಾಸು ವರ್ಷಗಳ ನಡುವೆ, ರಾಜ್ಯ ಸರ್ಕಾರವು ಜಾಹೀರಾತು ಮತ್ತು ಪ್ರಚಾರಕ್ಕಾಗಿ ಒಟ್ಟು 6,811.94 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಅಂದರೆ ದಿನಕ್ಕೆ ಸರಾಸರಿ 2.32 ಕೋಟಿ ರೂಪಾಯಿ. ಈ ಪ್ರಮಾಣವು ಕಳೆದ 11 ವರ್ಷಗಳಲ್ಲಿ ದಿನಕ್ಕೆ ಸುಮಾರು 1.5 ಕೋಟಿ ರೂಪಾಯಿ ವೆಚ್ಚ ಮಾಡಿರುವ ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನೂ ಮೀರಿದೆ.

ಈ ವೆಚ್ಚವನ್ನು ರಾಜ್ಯದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ನಿರ್ವಹಿಸಲಾಗುತ್ತಿದ್ದು, ಆದಿತ್ಯನಾಥ್ ಅವರ ಅಧಿಕಾರಾವಧಿಯಲ್ಲಿ ಇದು ನಿರಂತರವಾಗಿ ಏರಿಕೆಯಾಗಿದೆ. ಕೋವಿಡ್ ಸಾಂಕ್ರಾಮಿಕದ ಮೊದಲ ವರ್ಷದಲ್ಲಿ ಮಾತ್ರ ಸ್ವಲ್ಪ ಕಡಿಮೆಯಾಗಿದ್ದ ವೆಚ್ಚ, ಆನಂತರ ಎರಡರಷ್ಟಕ್ಕಿಂತ ಹೆಚ್ಚು ಜಿಗಿತ ಕಂಡಿದೆ. ಈ ಮೊತ್ತದ ಶೇಕಡಾ 83ಕ್ಕೂ ಹೆಚ್ಚು ಭಾಗವು ಒಂದೇ ಬಜೆಟ್ ಶೀರ್ಷಿಕೆಯಾದ 'ಜಾಹೀರಾತು ಮತ್ತು ದೃಶ್ಯ ಪ್ರಚಾರ'ಕ್ಕೆ ವಿನಿಯೋಗವಾಗಿದೆ. ಅಂದರೆ ಈ ಹಣವು ಪತ್ರಿಕೆಗಳು, ಟಿವಿ ಚಾನೆಲ್ಗಳು ಮತ್ತು ಡಿಜಿಟಲ್ ವೇದಿಕೆಗಳಿಗೆ ತಲುಪಿದೆ. ಆದರೆ, ಈ ಹಣ ಯಾರಿಗೆ ತಲುಪಿದೆ ಎಂಬ RTI ಅರ್ಜಿಗಳ ಪ್ರಶ್ನೆಗೆ ಉತ್ತರಿಸಲು ಸರ್ಕಾರ ಪದೇ ಪದೇ ನಿರಾಕರಿಸಿದೆ. ರಾಜ್ಯ ಸರ್ಕಾರದ ಬಜೆಟ್ ದಾಖಲೆಗಳಿಂದ ಈ ವೆಚ್ಚದ ಅಂಕಿಅಂಶಗಳನ್ನು ಪಡೆದುಕೊಂಡು newslaundry.com ಪ್ರಕಟಿಸಿರುವ ವರದಿ ಇಲ್ಲಿದೆ.

ಬಿಜೆಪಿಯು 2017ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ, 2017ರ ಮಾರ್ಚ್ 17ರಂದು ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

►ವರ್ಷದಿಂದ ವರ್ಷಕ್ಕೆ ಏರಿಕೆಯಾದ ವೆಚ್ಚ

ಆದಿತ್ಯನಾಥ್ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರದ ಮೊದಲ ಪೂರ್ಣ ಹಣಕಾಸು ವರ್ಷವಾದ 2017-18ರಲ್ಲಿ, ಮಾಹಿತಿ ಇಲಾಖೆಯು ಪ್ರಚಾರಕ್ಕಾಗಿ 294.86 ಕೋಟಿ ರೂಪಾಯಿ ವೆಚ್ಚ ಮಾಡಿತ್ತು. ಈ ವೆಚ್ಚವು 2018-19ರಲ್ಲಿ 330 ಕೋಟಿ ರೂಪಾಯಿಗೆ ಮತ್ತು 2019-20ರಲ್ಲಿ 481.67 ಕೋಟಿ ರೂಪಾಯಿಗೆ ಏರಿಕೆಯಾಯಿತು.

ಕೋವಿಡ್ ಸಾಂಕ್ರಾಮಿಕದ ವರ್ಷವಾದ 2020-21ರಲ್ಲಿ ಇದು 392.88 ಕೋಟಿ ರೂಪಾಯಿಗೆ ಕುಸಿಯಿತು. ಆದರೆ ಆನಂತರ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿತು.

2021-22ರಲ್ಲಿ ಪ್ರಚಾರ ವೆಚ್ಚವು ಬರೋಬ್ಬರಿ 1,134.31 ಕೋಟಿ ರೂಪಾಯಿಗೆ ತಲುಪಿತು. ಅದೇ ವರ್ಷ, ರಾಜ್ಯ ಸರ್ಕಾರವು ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಹೆಚ್ಚುವರಿಯಾಗಿ 1.67 ಕೋಟಿ ರೂಪಾಯಿ, ಪತ್ರಕರ್ತರ ಕಲ್ಯಾಣ ನಿಧಿಗೆ 5.38 ಕೋಟಿ ರೂಪಾಯಿ ಮತ್ತು ಚಲನಚಿತ್ರ ಅಭಿವೃದ್ಧಿ ನಿಧಿಗೆ 15 ಕೋಟಿ ರೂಪಾಯಿ ವೆಚ್ಚ ಮಾಡಿತ್ತು.

ಅದರ ಮರುವರ್ಷ, ಅಂದರೆ ವಿಧಾನಸಭಾ ಚುನಾವಣೆ ನಡೆದ 2022-23ರಲ್ಲಿ ವೆಚ್ಚವು 1,420.03 ಕೋಟಿ ರೂಪಾಯಿಗೆ ತಲುಪಿತ್ತು. ಲಭ್ಯವಿರುವ ಅಂಕಿಅಂಶಗಳಲ್ಲೇ ಇದು ಅತ್ಯಧಿಕ ವೆಚ್ಚವಾಗಿದೆ. ಆ ವರ್ಷದ ಬಜೆಟ್ ನಲ್ಲಿ ಚಲನಚಿತ್ರ ಕ್ಷೇತ್ರವನ್ನು ಉತ್ತೇಜಿಸಲು ಚಲನಚಿತ್ರ ಅಭಿವೃದ್ಧಿ ನಿಧಿಗೆ 15 ಕೋಟಿ ರೂಪಾಯಿ, ಪತ್ರಕರ್ತರ ಕಲ್ಯಾಣ ನಿಧಿಗೆ 5.52 ಕೋಟಿ ರೂಪಾಯಿ ಮತ್ತು ಸ್ವಾತಂತ್ರ್ಯ ಹಾಗೂ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮಗಳಿಗೆ 0.99 ಕೋಟಿ ರೂಪಾಯಿಯನ್ನು ಪ್ರತ್ಯೇಕವಾಗಿ ಕಾಯ್ದಿರಿಸಲಾಗಿತ್ತು.

2023-24ರಲ್ಲಿ ವೆಚ್ಚವು 1,366.34 ಕೋಟಿ ರೂಪಾಯಿಗೆ ಕುಸಿದರೂ, 2024-25ರಲ್ಲಿ ಮತ್ತೆ 1,391.18 ಕೋಟಿ ರೂಪಾಯಿಗೆ ಏರಿತು. ಆ ವರ್ಷವೂ ಚಲನಚಿತ್ರ ಅಭಿವೃದ್ಧಿ ನಿಧಿಗೆ 15 ಕೋಟಿ ರೂಪಾಯಿ, ಸ್ವಾತಂತ್ರ್ಯ ಹಾಗೂ ಗಣರಾಜ್ಯೋತ್ಸವ ದಿನಾಚರಣೆಯ ಪ್ರಚಾರಕ್ಕೆ 2.98 ಕೋಟಿ ರೂಪಾಯಿ ಮತ್ತು ಪತ್ರಕರ್ತರ ಕಲ್ಯಾಣ ನಿಧಿಗೆ 0.24 ಕೋಟಿ ರೂಪಾಯಿ ವಿನಿಸಲಾಯಿತು.

2025-26ನೇ ಸಾಲಿಗೆ ಸರ್ಕಾರವು ಈ ವಿಭಾಗಗಳ ಅಡಿಯಲ್ಲಿ 918.83 ಕೋಟಿ ರೂಪಾಯಿ ಬಜೆಟ್ ಕಾಯ್ದಿರಿಸಿದೆ. ಇದರಲ್ಲಿ ಪ್ರಸ್ತುತ ಎಷ್ಟು ವೆಚ್ಚವಾಗಿದೆ ಎಂಬುದು ಇನ್ನೂ ಸಾರ್ವಜನಿಕವಾಗಿ ಲಭ್ಯವಾಗಿಲ್ಲ. 2025-26ರ ಅಂಕಿಅಂಶಗಳನ್ನು ಸೇರಿಸಿದರೆ, ಒಟ್ಟು ವೆಚ್ಚವು 9 ವರ್ಷಗಳಲ್ಲಿ ಸುಮಾರು 7,730 ಕೋಟಿ ರೂಪಾಯಿಗೆ ತಲುಪುತ್ತದೆ. ಅಂದರೆ ದಿನಕ್ಕೆ ಸರಾಸರಿ 2.35 ಕೋಟಿ ರೂಪಾಯಿ.

►ಕೋವಿಡ್ ನಂತರದ ಪ್ರಚಾರ ವೆಚ್ಚದಲ್ಲಿ ಭಾರಿ ಏರಿಕೆ

ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವೆಚ್ಚದ ವಿಶ್ಲೇಷಣೆಯ ಪ್ರಕಾರ, 2017-18 ಮತ್ತು 2024-25ರ ನಡುವೆ ಪ್ರಚಾರ ಬಜೆಟ್ನ ಸಿಂಹಪಾಲು 'ಜಾಹೀರಾತು ಮತ್ತು ದೃಶ್ಯ ಪ್ರಚಾರ'ಕ್ಕೆ ವಿನಿಯೋಗವಾಗಿದೆ. ಅಂದರೆ ಈ ಹಣವನ್ನು ಪತ್ರಿಕೆಗಳು, ದೂರದರ್ಶನ ಮತ್ತು ಇತರ ಮಾಧ್ಯಮಗಳಿಗೆ ವೆಚ್ಚ ಮಾಡಲಾಗಿದೆ. ಈ ಅವಧಿಯ ಒಟ್ಟು ಪ್ರಚಾರ ವೆಚ್ಚದಲ್ಲಿ ಶೇಕಡಾ 83ಕ್ಕೂ ಹೆಚ್ಚು ಭಾಗ, ಅಂದರೆ ಬರೋಬ್ಬರಿ 5,658.16 ಕೋಟಿ ರೂಪಾಯಿ ಈ ಒಂದೇ ವಿಷಯಕ್ಕೆ ಖರ್ಚು ಮಾಡಲಾಗಿದೆ.

ಈ ವಿಭಾಗಕ್ಕೆ 2017-18ರಲ್ಲಿ 236.33 ಕೋಟಿ ರೂಪಾಯಿ, 2018-19ರಲ್ಲಿ 271.90 ಕೋಟಿ ರೂಪಾಯಿ ಮತ್ತು 2019-20ರಲ್ಲಿ 398.23 ಕೋಟಿ ರೂಪಾಯಿ ವಿನಿಸಲಾಗಿತ್ತು. ಕೋವಿಡ್ ಸಾಂಕ್ರಾಮಿಕದ ವರ್ಷವಾದ 2020-21ರಲ್ಲಿ ಇದು 311.46 ಕೋಟಿ ರೂಪಾಯಿಯಾಗಿತ್ತು. ಆನಂತರ ವೆಚ್ಚವು 2021-22ರಲ್ಲಿ 951.75 ಕೋಟಿ ರೂಪಾಯಿಗೆ ಮತ್ತು 2022-23ರಲ್ಲಿ 1,158.06 ಕೋಟಿ ರೂಪಾಯಿಗೆ ಜಿಗಿಯಿತು. 2023-24ರಲ್ಲಿ 1,122.63 ಕೋಟಿ ರೂಪಾಯಿ ವೆಚ್ಚವಾದರೆ, 2024-25ರಲ್ಲಿ ಇದು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 1,205.06 ಕೋಟಿ ರೂಪಾಯಿಗೆ ತಲುಪಿತು.

ಜಾಹೀರಾತು ಮತ್ತು ದೃಶ್ಯ ಪ್ರಚಾರದ ನಂತರದ ಅತಿ ದೊಡ್ಡ ವೆಚ್ಚವು ಪ್ರಕಟಣೆಗಳ (ಪಬ್ಲಿಕೇಷನ್ಸ್) ಮೇಲಾಗಿದೆ. ಸರ್ಕಾರವು ತನ್ನ ಅಭಿವೃದ್ಧಿ ಕಾರ್ಯಗಳ ಕುರಿತು ಹೊರತರುವ ಪುಸ್ತಕಗಳು, ಕಿರುಪುಸ್ತಕಗಳು ಮತ್ತು ಕರಪತ್ರಗಳು ಇದರಲ್ಲಿ ಸೇರಿವೆ. 2017-18ರಿಂದ 2024-25ರ ನಡುವೆ ಈ ಲೆಕ್ಕಶೀರ್ಷಿಕೆಯಡಿ ಒಟ್ಟು 896.64 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.

ಈ ವಿಭಾಗದಡಿ 2017-18ರಲ್ಲಿ 29.69 ಕೋಟಿ ರೂಪಾಯಿ, 2018-19ರಲ್ಲಿ 27.51 ಕೋಟಿ ರೂಪಾಯಿ, 2019-20ರಲ್ಲಿ 47.12 ಕೋಟಿ ರೂಪಾಯಿ ಮತ್ತು 2020-21ರಲ್ಲಿ 52.50 ಕೋಟಿ ರೂಪಾಯಿ ವಿನಿಸಲಾಗಿತ್ತು. ಆನಂತರ ಇದು ತೀವ್ರ ಏರಿಕೆ ಕಂಡು 2021-22ರಲ್ಲಿ 149.97 ಕೋಟಿ ರೂಪಾಯಿ ಮತ್ತು ಈ ಅವಧಿಯಲ್ಲೇ ಗರಿಷ್ಠ ಮಟ್ಟವಾದ 2022-23ರಲ್ಲಿ 227.44 ಕೋಟಿ ರೂಪಾಯಿಗೆ ತಲುಪಿತು. 2023-24ರಲ್ಲಿ 209.14 ಕೋಟಿ ರೂಪಾಯಿ ಹಾಗೂ 2024-25ರಲ್ಲಿ 153.15 ಕೋಟಿ ರೂಪಾಯಿಯಷ್ಟು ವೆಚ್ಚವಾಯಿತು.

ಕಳೆದ ಎಂಟು ವರ್ಷಗಳಲ್ಲಿ ಕ್ಷೇತ್ರ ಪ್ರಚಾರಕ್ಕಾಗಿ 220.49 ಕೋಟಿ ರೂಪಾಯಿ ವೆಚ್ಚವಾಗಿದೆ. ಫೋಟೊ ಸೇವೆಗಳಿಗೆ 7.73 ಕೋಟಿ ರೂಪಾಯಿ, ಸಮುದಾಯ ರೇಡಿಯೋ ಮತ್ತು ದೂರದರ್ಶನಕ್ಕೆ 11.46 ಕೋಟಿ ರೂಪಾಯಿ ಹಾಗೂ ಚಲನಚಿತ್ರ ನಿರ್ಮಾಣಕ್ಕೆ 20.32 ಕೋಟಿ ರೂಪಾಯಿ ವಿನಿಸಲಾಗಿದೆ.

►2025-26ರಲ್ಲಿಯೂ ಪ್ರಚಾರವೇ ಸರ್ಕಾರದ ಅತಿ ದೊಡ್ಡ ಆದ್ಯತೆ

2025-26ನೇ ಸಾಲಿನಲ್ಲಿ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಬಜೆಟ್ ನಲ್ಲಿ ಕಾಯ್ದಿರಿಸಲಾದ 918.83 ಕೋಟಿ ರೂಪಾಯಿ ಮೊತ್ತವು ಪ್ರಚಾರದ ಮೇಲೆಯೇ ಹೆಚ್ಚು ಒಲವು ತೋರಿದೆ.

ಈ ಹಣಕಾಸು ಹಂಚಿಕೆಯಲ್ಲಿ 'ಜಾಹೀರಾತು ಮತ್ತು ದೃಶ್ಯ ಪ್ರಚಾರ'ಕ್ಕಾಗಿ 705.14 ಕೋಟಿ ರೂಪಾಯಿ, 'ಪ್ರಕಟಣೆ'ಗಳಿಗೆ 171.12 ಕೋಟಿ ರೂಪಾಯಿ, 'ಕ್ಷೇತ್ರ ಪ್ರಚಾರ'ಕ್ಕಾಗಿ 37.14 ಕೋಟಿ ರೂಪಾಯಿ, 'ಚಲನಚಿತ್ರ ನಿರ್ಮಾಣ'ಕ್ಕೆ 2.74 ಕೋಟಿ ರೂಪಾಯಿ, 'ಸಮುದಾಯ ರೇಡಿಯೋ ಮತ್ತು ದೂರದರ್ಶನ'ಕ್ಕೆ 1.81 ಕೋಟಿ ರೂಪಾಯಿ ಹಾಗೂ 'ಛಾಯಾಗ್ರಹಣ ಸೇವೆ'ಗಳಿಗೆ 0.88 ಕೋಟಿ ರೂಪಾಯಿಯನ್ನು ಪ್ರತ್ಯೇಕವಾಗಿ ಕಾಯ್ದಿರಿಸಲಾಗಿದೆ.

ಒಂದು ವೇಳೆ 2025-26ನೇ ಸಾಲಿನ ಇಡೀ ಬಜೆಟ್ ವೆಚ್ಚವಾದರೆ, 2017-18ರಿಂದ 2025-26ರ ಅವಧಿಯಲ್ಲಿ ಇಲಾಖೆಯು ಮಾಡುವ ಒಟ್ಟು ವೆಚ್ಚವು 7,730.77 ಕೋಟಿ ರೂಪಾಯಿಗೆ ತಲುಪಲಿದೆ. ಇದರಲ್ಲಿ 'ಜಾಹೀರಾತು ಮತ್ತು ದೃಶ್ಯ ಪ್ರಚಾರ' ಒಂದಕ್ಕೇ ಬರೋಬ್ಬರಿ 6,360.56 ಕೋಟಿ ರೂಪಾಯಿ ವಿನಿಯೋಗವಾದಂತಾಗುತ್ತದೆ.

►ಈ ಹಣ ಯಾರಿಗೆ ಸಿಗುತ್ತಿದೆ?

ಯಾರಿಗೆ ಎಷ್ಟು ಪ್ರಚಾರದ ಹಣ ಹರಿಯುತ್ತಿದೆ ಎಂದು ತಿಳಿದುಕೊಳ್ಳಲು newslaundry.com ಉತ್ತರ ಪ್ರದೇಶ ಸರ್ಕಾರದ ಬಳಿ ಹಲವು RTI ಅರ್ಜಿಗಳನ್ನು ಸಲ್ಲಿಸಿತ್ತು. ಆದರೆ ರಾಜ್ಯದ ಮಾಹಿತಿ ಇಲಾಖೆಯು ಈ ದತ್ತಾಂಶವನ್ನು ಹಂಚಿಕೊಳ್ಳಲಿಲ್ಲ. ಕೆಲವು ಅರ್ಜಿಗಳಿಗೆ ಯಾವುದೇ ಉತ್ತರ ಬರಲಿಲ್ಲ. ಇನ್ನು ಕೆಲವು ಅರ್ಜಿಗಳನ್ನು "ಇಷ್ಟು ದೊಡ್ಡ ಮಟ್ಟದ ಮಾಹಿತಿಯನ್ನು ಕ್ರೋಡೀಕರಿಸಲು ಭಾರಿ ಸಮಯ ತಗಲುತ್ತದೆ" ಎಂಬ ಕಾರಣ ನೀಡಿ ತಿರಸ್ಕರಿಸಲಾಯಿತು.

ಆದರೆ 2021ರಲ್ಲಿ, RTI ಮೂಲಕ ಸಿಕ್ಕ ಮಾಹಿತಿಯನ್ನಾಧರಿಸಿ newslaundry.com ವರದಿಯೊಂದನ್ನು ಪ್ರಕಟಿಸಿತ್ತು. ಅದರ ಪ್ರಕಾರ, ಆದಿತ್ಯನಾಥ್ ಸರ್ಕಾರವು ಒಂದೇ ವರ್ಷದಲ್ಲಿ ಟಿವಿ ಜಾಹೀರಾತುಗಳಿಗಾಗಿ 160 ಕೋಟಿ ರೂಪಾಯಿ ವೆಚ್ಚ ಮಾಡಿತ್ತು. ಅದರಲ್ಲಿ 28.82 ಕೋಟಿ ರೂಪಾಯಿ ಮುಕೇಶ್ ಅಂಬಾನಿ ನೇತೃತ್ವದ 'ನೆಟ್ವರ್ಕ್ 18' ಸಮೂಹಕ್ಕೆ ತಲುಪಿತ್ತು.

►ಎಲ್ಲೆಲ್ಲೂ ಜಾಹೀರಾತುಗಳೇ!

ನ್ಯೂಸ್ ಚಾನೆಲ್ ಅನ್ನು ಆನ್ ಮಾಡಿದರೆ, ವೆಬ್ಸೈಟ್ ತೆರೆದರೆ, ಪತ್ರಿಕೆ ಅಥವಾ ನಿಯತಕಾಲಿಕೆಯನ್ನು ತಿರುವಿದರೆ, ಇಲ್ಲವೇ ಉತ್ತರ ಪ್ರದೇಶದ ಯಾವುದೋ ಸಣ್ಣ ಪಟ್ಟಣದಿಂದ ರಾಷ್ಟ್ರ ರಾಜಧಾನಿಯವರೆಗೆ ಎಲ್ಲೇ ಪ್ರಯಾಣಿಸಿದರೂ ಉತ್ತರ ಪ್ರದೇಶ ಸರ್ಕಾರದ ಜಾಹೀರಾತುಗಳು ಕಣ್ಣಿಗೆ ಬೀಳದಿರಲು ಸಾಧ್ಯವೇ ಇಲ್ಲ.

ಈ ವರ್ಷದ ಜುಲೈ ತಿಂಗಳ 29 ದಿನಗಳ ಅವಧಿಯಲ್ಲಿ, ದೈನಿಕ್ ಜಾಗರಣ್ ಪತ್ರಿಕೆಯ ಲಕ್ನೋ ಆವೃತ್ತಿಯೊಂದರಲ್ಲೇ ಉತ್ತರ ಪ್ರದೇಶ ಸರ್ಕಾರದ 54 ಜಾಹೀರಾತುಗಳು ಪ್ರಕಟವಾಗಿದ್ದವು. ಇದರಲ್ಲಿ ಮೂರು ಪೂರ್ಣ ಪುಟ, 32 ಅರ್ಧ ಪುಟ ಮತ್ತು 19 ಕಾಲು ಪುಟದ ಜಾಹೀರಾತುಗಳಿದ್ದವು. ಅಂದರೆ, ಸರಾಸರಿ ದಿನಕ್ಕೆ ಕನಿಷ್ಠ ಎರಡರಂತೆ ಪ್ರಕಟವಾಗಿವೆ. ಇದೇ ಅವಧಿಯಲ್ಲಿ ಹಿಂದೂಸ್ತಾನ್ ಪತ್ರಿಕೆಯ ಲಕ್ನೋ ಆವೃತ್ತಿಯಲ್ಲಿ 49 ಜಾಹೀರಾತುಗಳು ಪ್ರಕಟವಾಗಿದ್ದವು. ಮೂರು ಪೂರ್ಣ ಪುಟ, 29 ಅರ್ಧ ಪುಟ ಮತ್ತು 17 ಕಾಲು ಪುಟ. ದಿನ ಪ್ರತಿಯೂ ಇತರ ಪತ್ರಿಕೆಗಳಲ್ಲೂ ಇದೇ ರೀತಿಯ ವರಸೆಯನ್ನು ಕಾಣಬಹುದು.

ಈ ಮಾದರಿಯು ಆನ್ಲೈನ್ ಗೂ ವಿಸ್ತರಿಸಿದೆ. 2026ರ ಮಾರ್ಚ್ 14ರಿಂದ ಪ್ರಾರಂಭಿಸಿ 30 ದಿನಗಳ ಕಾಲ ಸ್ವಾವಲಂಬನ್ ಉದ್ಯಮ, "ಯುಪಿಯಲ್ಲಿ ಮಹಿಳೆ ಸಕ್ಷಮ" ಮತ್ತು ಸೂಪರ್ಫಾಸ್ಟ್ ರಫ್ತಾರ್ ಪ್ರಚಾರ ಅಭಿಯಾನಗಳ ಬ್ಯಾನರ್ ಜಾಹೀರಾತುಗಳನ್ನು ಪ್ರಕಟಿಸಲು asianetnews.com ಗೆ 94.40 ಲಕ್ಷ ರೂಪಾಯಿ ಸಿಕ್ಕಿದೆ ಎಂದು newslaundry.com ಗೆ ತಿಳಿದುಬಂದಿದೆ. ಇದೇ ಪ್ರಚಾರ ಅಭಿಯಾನವನ್ನು ಅದೇ ಅವಧಿಗೆ oneindia.com ಗೂ ನೀಡಲಾಗಿದ್ದು, ಅದಕ್ಕೂ 94.40 ಲಕ್ಷ ರೂಪಾಯಿ ನೀಡಲಾಗಿದೆ.

ಜನವರಿ 2026ರಲ್ಲಿ, ಮಿಷನ್ ಶಕ್ತಿ ಮತ್ತು ಉಜ್ವಲ ಯೋಜನೆಗಳ ಪ್ರಚಾರಕ್ಕಾಗಿ 'ಅಮರ್ ಉಜಾಲಾ' ವೆಬ್ಸೈಟ್ ನಲ್ಲಿ ಒಂದು ತಿಂಗಳ ಬ್ಯಾನರ್ ಪ್ರಚಾರಕ್ಕಾಗಿ ಮಾಹಿತಿ ಇಲಾಖೆಯು 70.80 ಲಕ್ಷ ರೂಪಾಯಿ ನೀಡಿದೆ. ರಾಜ್ಯ ಸರ್ಕಾರವು ಶೇರ್ ಚಾಟ್ (ShareChat)ನಂತಹ ವೈವಿಧ್ಯಮಯ ವೇದಿಕೆಗಳಲ್ಲೂ ಜಾಹೀರಾತುಗಳನ್ನು ನೀಡಿದೆ ಎಂಬುದು newslaundry.com ತನಿಖೆಯಿಂದ ತಿಳಿದುಬಂದಿದೆ.

►ಮಾಹಿತಿ ಇಲಾಖೆಯನ್ನೂ ಮೀರಿದ ವೆಚ್ಚ

ಇಲ್ಲಿಯವರೆಗೆ ವಿವರಿಸಲಾದ ಎಲ್ಲ ಜಾಹೀರಾತುಗಳನ್ನು ಮಾಹಿತಿ ಇಲಾಖೆಯು ನೀಡಿದೆ. ಆದರೆ ಉತ್ತರ ಪ್ರದೇಶದ ಇತರ ಇಲಾಖೆಗಳೂ ಪ್ರತ್ಯೇಕವಾಗಿ ಪ್ರಚಾರ ವೆಚ್ಚಗಳನ್ನು ಮಾಡುತ್ತವೆ.

ಉದ್ಯಮ ಮತ್ತು ಉದ್ಯಮಶೀಲತೆ ಉತ್ತೇಜನಾ ಇಲಾಖೆಯು 2024-25 ಮತ್ತು 2025-26ರ ನಡುವೆ ಪ್ರಚಾರಕ್ಕಾಗಿ 60 ಕೋಟಿ ರೂಪಾಯಿ ವೆಚ್ಚ ಮಾಡಿದೆ ಎಂದು RTI ಉತ್ತರವೊಂದರಿಂದ ತಿಳಿದುಬಂದಿದೆ. ಈ ಮೊತ್ತದಲ್ಲಿ ಸುಮಾರು 12 ಕೋಟಿ ರೂಪಾಯಿಯನ್ನು ಪ್ರಯಾಗ್ ರಾಜ್ ನಲ್ಲಿ ನಡೆದ ಕುಂಭಮೇಳದ ಪ್ರಚಾರಕ್ಕಾಗಿ ವಿನಿಸಲಾಗಿತ್ತು.

newslaundry.com ಪರಿಶೀಲಿಸಿದ ದಾಖಲೆಗಳ ಪ್ರತಿಗಳ ಪ್ರಕಾರ, ಉದ್ಯಮ ಮತ್ತು ಉದ್ಯಮಶೀಲತೆ ಉತ್ತೇಜನಾ ನಿರ್ದೇಶನಾಲಯವು ಜುಲೈ 2025ರಲ್ಲಿ YourStory ವೆಬ್ ಸೈಟ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಅಡಿಯಲ್ಲಿ, ಯುವರ್ ಸ್ಟೋರಿಗೆ 70 ಲಕ್ಷ ರೂಪಾಯಿ ಪಾವತಿಸಲು ನಿರ್ಧರಿಸಲಾಗಿತ್ತು. ಉತ್ತರ ಪ್ರದೇಶದ ಎಲ್ಲಾ 75 ಜಿಲ್ಲೆಗಳ 'ಒಂದು ಜಿಲ್ಲೆ, ಒಂದು ಉತ್ಪನ್ನ' (ODOP) ಯೋಜನೆಯ 100ಕ್ಕೂ ಹೆಚ್ಚು ಉದ್ಯಮಿಗಳು, ಕುಶಲಕರ್ಮಿಗಳು ಮತ್ತು ನಾವೀನ್ಯಕಾರರ ಯಶಸ್ಸಿನ ಕಥೆಗಳನ್ನು ದಾಖಲಿಸಿ ಪ್ರದರ್ಶಿಸುವುದು, ಸ್ಥಳೀಯ ಪರಂಪರೆ, ಉದ್ಯೋಗ, ಕುಶಲಕರ್ಮಿಗಳ ಸಬಲೀಕರಣ ಮತ್ತು "ಮೇಡ್ ಇನ್ ಯುಪಿ" ಬ್ರಾಂಡ್ ನ ಜಾಗತಿಕ ತಲುಪಿನ ಬಗ್ಗೆ ವಿಡಿಯೊಗಳನ್ನು ನಿರ್ಮಿಸುವುದು, ಎಲ್ಲಾ 75 ಜಿಲ್ಲೆಗಳ ವಿಶಿಷ್ಟ ಕಲೆ, ನಾವೀನ್ಯತೆ ಮತ್ತು ಪರಂಪರೆಯನ್ನು ದಾಖಲಿಸುವ 500 ಕಾಫಿ-ಟೇಬಲ್ ಪುಸ್ತಕಗಳನ್ನು ಸಿದ್ಧಪಡಿಸುವುದು ಹಾಗೂ ಸ್ಥಳೀಯ ಕಲೆಗಳನ್ನು ಪ್ರೋತ್ಸಾಹಿಸುವ ಪ್ರಾದೇಶಿಕ ಭಾಷೆಗಳ ರೀಲ್ಸ್ ಮತ್ತು ವಿಡಿಯೊಗಳನ್ನು ಸೃಷ್ಟಿಸುವುದು ಈ ಒಪ್ಪಂದದ ಉದ್ದೇಶವಾಗಿತ್ತು.

ಯುವರ್ ಸ್ಟೋರಿ ವೆಬ್ಸೈಟ್ ನಲ್ಲಿ ಉತ್ತರ ಪ್ರದೇಶದ 'ಒಂದು ಜಿಲ್ಲೆ, ಒಂದು ಉತ್ಪನ್ನ' ಯೋಜನೆಗೆ ಸಂಬಂಧಿಸಿದ ಡಜನ್ಗಟ್ಟಲೆ ಲೇಖನಗಳು ಪ್ರಕಟವಾಗಿವೆ. newslaundry.com ರಾಜ್ಯದ ಮಾಹಿತಿ ಇಲಾಖೆ ಮತ್ತು ಯುವರ್ಸ್ಟೋರಿಗೆ ಪ್ರಶ್ನೆಗಳನ್ನು ಕಳುಹಿಸಿದ್ದು, ಇಲ್ಲಿವರೆಗೆ ಪ್ರತಿಕ್ರಿಯೆ ಬಂದಿಲ್ಲ.

►ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರವೇ ಇಲ್ಲ

ಇತ್ತೀಚೆಗೆ, ಉತ್ತರ ಪ್ರದೇಶ ಸರಕಾರದ ಜಾಹೀರಾತು ನೀತಿ ಮತ್ತು ಮಾಧ್ಯಮ ಸಂಸ್ಥೆಗಳಿಗೆ ನೀಡಲಾಗುತ್ತಿರುವ ಪಾವತಿಗಳ ಕುರಿತು newslaundry.com ಹಲವು ಪ್ರಶ್ನೆಗಳನ್ನು ಮಾಹಿತಿ ಇಲಾಖೆಗೆ ಕಳುಹಿಸಿತ್ತು. ಯಾವ ಮಾನದಂಡದ ಆಧಾರದಲ್ಲಿ ಮಾಧ್ಯಮ ಸಂಸ್ಥೆಗಳನ್ನು ಆಯ್ಕೆ ಮಾಡಲಾಗುತ್ತದೆ? ಯಾವ ಪ್ರಮಾಣದಲ್ಲಿ ಹಣ ಹಂಚಿಕೆ ಮಾಡಲಾಗುತ್ತದೆ? ಆನ್ಲೈನ್ ಮತ್ತು ಮುದ್ರಣ ಮಾಧ್ಯಮಗಳಿಗೆ ಎಷ್ಟು ವೆಚ್ಚ ಮಾಡಲಾಗಿದೆ? ಎಂಬ ಪ್ರಶ್ನೆಗಳನ್ನು ಕೇಳಲಾಗಿತ್ತು. ಆದರೆ ವರದಿ ಪ್ರಕಟವಾಗುವವರೆಗೂ ಇಲಾಖೆಯಿಂದ ಯಾವುದೇ ಉತ್ತರ ಬಂದಿರಲಿಲ್ಲ.

ಇದೇ ರೀತಿ, ಜಾಹೀರಾತುಗಳನ್ನು ಪಡೆದ ಕೆಲವು ಮಾಧ್ಯಮ ಸಂಸ್ಥೆಗಳಿಗೂ newslaundry.com ಪ್ರಶ್ನೆಗಳನ್ನು ಕಳುಹಿಸಿತ್ತು. ಜಾಹೀರಾತು ಒಪ್ಪಂದಗಳು ಸಂಪಾದಕೀಯ ವಿಷಯದ ಮೇಲೆ ಯಾವುದೇ ಪರಿಣಾಮ ಬೀರಿವೆಯೇ? ಸರಕಾರದೊಂದಿಗೆ ಮಾಡಿಕೊಂಡ ಒಪ್ಪಂದಗಳ ಸ್ವರೂಪವೇನು? ಎಂಬ ಪ್ರಶ್ನೆಗಳಿಗೆ ಬಹುತೇಕ ಸಂಸ್ಥೆಗಳು ಪ್ರತಿಕ್ರಿಯಿಸಲಿಲ್ಲ.

ಈ ನಡುವೆ, ಮಾಧ್ಯಮ ಸ್ವಾತಂತ್ರ್ಯ ಮತ್ತು ಸರಕಾರಿ ಜಾಹೀರಾತು ನೀತಿ ಕುರಿತ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಸರಕಾರದ ಜಾಹೀರಾತು ವೆಚ್ಚ ಹೆಚ್ಚುತ್ತಿರುವುದು ಮತ್ತು ಅದರ ಬಹುಪಾಲು ಕೆಲವೇ ಮಾಧ್ಯಮ ಸಂಸ್ಥೆಗಳಿಗೆ ಹರಿಯುತ್ತಿರುವುದು ಸಂಪಾದಕೀಯ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಯನ್ನು ಮಾಧ್ಯಮ ವಲಯದ ಹಲವರು ಎತ್ತಿದ್ದಾರೆ.

ಸೌಜನ್ಯ: newslaundry.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News