Photo Credit : indiatoday.in

ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಮಹಿಳಾ ರಿಕರ್ವ್ ಆರ್ಚೆರಿ ತಂಡವು ಐತಿಹಾಸಿಕ ಸಾಧನೆ ಮಾಡಿದ್ದು, ಫೈನಲ್ ನಲ್ಲಿ ಬಲಿಷ್ಠ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿ ಚಿನ್ನದ ಸಾಧನೆ ಮಾಡಿದೆ.

ಏಷ್ಯನ್ ಗೇಮ್ಸ್ ರಿಕರ್ವ್ ಆರ್ಚೆರಿ ಸ್ಪರ್ಧೆ ಆರಂಭವಾದಾಗ ದಕ್ಷಿಣ ಕೊರಿಯಾದ ಪ್ರಾಬಲ್ಯವನ್ನು ಮುರಿಯುವಲ್ಲಿ ಅಂಕಿತಾ ಭಕತ್, ಕೀರ್ತಿ ಶರ್ಮಾ ಮತ್ತು ಕುಂಕುಮ್ ಮೊಹೋಡ್ ಅವರನ್ನೊಳಗೊಂಡ ಮಹಿಳಾ ತಂಡಕ್ಕೆ ಹೆಚ್ಚಿನ ಅವಕಾಶವಿದೆ ಎಂದು ಯಾರೂ ಭಾವಿಸಿರಲಿಲ್ಲ. ವಿಶ್ವ ಚಾಂಪಿಯನ್ ಆಗಿದ್ದ ಕೊರಿಯಾ ತಂಡದಲ್ಲಿ ವಿಶ್ವದ ಮೂರನೇ ಶ್ರೇಯಾಂಕದ ಆರ್ಚೆರ್ ಕಾಂಗ್ ಚಾಯೊಂಗ್ ಅವರಿದ್ದರು. ರಿಕರ್ವ್ ವಿಭಾಗದಲ್ಲಿ ಕೊರಿಯಾ ಪ್ರಬಲ ಸ್ಪರ್ಧಿಯಾಗಿದ್ದು, ಅವರಿಗೆ ಯಾರಾದರೂ ಸವಾಲೊಡ್ಡಿ ಸೋಲಿಸುವುದು ಅಸಾಧ್ಯದ ಮಾತಾಗಿತ್ತು. ಆದರೆ ಅಂಕಿತಾ, ಕುಂಕುಮ್ ಮತ್ತು ಕೀರ್ತಿ ಅವರಿಗೆ ಎದುರಾಳಿಯ ಖ್ಯಾತಿ ಅಥವಾ ವರ್ಚಸ್ಸು ಮುಖ್ಯವಾಗಿರಲಿಲ್ಲ. ಅವರು ಕೊರಿಯಾಗೆ ಪ್ರಬಲ ಪೈಪೋಟಿ ನೀಡಿದರು ಮತ್ತು ಮಹಿಳಾ ರಿಕರ್ವ್ ತಂಡದ ಸ್ಪರ್ಧೆಯಲ್ಲಿ ಕೊರಿಯಾದ 44 ವರ್ಷಗಳ ಪ್ರಾಬಲ್ಯಕ್ಕೆ ಅಂತ್ಯ ಹಾಡಿ ಐತಿಹಾಸಿಕ ಚಿನ್ನದ ಪದಕವನ್ನು ಗೆದ್ದುಕೊಂಡರು.

ಭಾರತೀಯ ಆಟಗಾತಿಯರ ಈ ಮೂವರ ತಂಡವು ಅತ್ಯುತ್ತಮ ಸಮನ್ವಯದೊಂದಿಗೆ ಆಡಿ ಸೆಮಿಫೈನಲ್ನಲ್ಲಿ ಚೀನಾವನ್ನು 5-1 ಅಂತರದಿಂದ ಸುಲಭವಾಗಿ ಸೋಲಿಸಿ ಫೈನಲ್ಗೆ ಪ್ರವೇಶಿಸಿತು. ನಂತರ ಫೈನಲ್ ನಲ್ಲಿ ಕೊರಿಯಾವನ್ನು 5-3 ಅಂತರದಿಂದ ಮಣಿಸಿದೆ. ಈ ಹಂತವನ್ನು ತಲುಪುವವರೆಗಿನ ಈ ಮೂವರು ಮಹಿಳೆಯರ ಪ್ರಯಾಣವೂ ಕೂಡ ಆಸಕ್ತಿದಾಯಕವಾಗಿದೆ.

ಕುಂಕುಮ್ ಅವರು ಕೇವಲ ಮೂರು ವರ್ಷಗಳ ಹಿಂದೆ ರಿಕರ್ವ್ ತರಬೇತಿ ಪ್ರಾರಂಭಿಸಿದರು. ತಮ್ಮ ಕ್ರೀಡಾ ಜೀವನವನ್ನು ಸಾಂಪ್ರದಾಯಿಕ ವಿಧಾನದ ಜೊತೆಗೆ ಅಂದರೆ, ಬಿದಿರಿನ ಬಿಲ್ಲನ್ನು ಬಳಸುವ ಮೂಲಕ ಆರಂಭಿಸಿದವರು.

ಕೀರ್ತಿಯವರದ್ದು ಮತ್ತೊಂದು ಕತೆ. ರಿಕರ್ವ್ ಬಿಲ್ಲು ಹಿಡಿಯಲು ಕೀರ್ತಿ ತುಂಬಾ ಸಣ್ಣ ಮೈಕಟ್ಟು ಹೊಂದಿದ್ದಾರೆ ಎಂದು ಹೇಳಲಾಗಿತ್ತು. ಏಕೆಂದರೆ ರಿಕರ್ವ್ ಬಿಲ್ಲುಗಾರಿಕೆ ಬಿಲ್ಲುಗಾರರ ನಿಜವಾದ ಶಕ್ತಿಯನ್ನು ಪರೀಕ್ಷಿಸುತ್ತದೆ.

ಅಂಕಿತಾ ಈ ಕ್ರೀಡೆಯಲ್ಲಿ ಅನುಭವಿ ಆಟಗಾತಿಯಾಗಿದ್ದು, ಒಟ್ಟು 23 ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ. ಹ್ಯಾಂಗ್ಝೌನಲ್ಲಿ ನಡೆದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಮಹಿಳಾ ರಿಕರ್ವ್ ತಂಡದ ಭಾಗವಾಗಿದ್ದ ಅವರು ಭಾರತ ಹಿಂದೆಂದೂ ತಲುಪಿರದ ಫೈನಲ್ಗೆ ಬರುವ ಸಾಧನೆಯನ್ನು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಈ ಮೂವರು ಮಹಿಳೆಯರು ಕೊರಿಯಾದ ಮಹಿಳೆಯರನ್ನು ಸೋಲಿಸಿ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಅಚ್ಚಳಿಯದಂತೆ ದಾಖಲಿಸಿದ್ದಾರೆ.

ಸೆಮಿಫೈನಲ್ ಪಂದ್ಯ ಮುಗಿದ ನಂತರ ಒತ್ತಡದ ಸ್ಥಿತಿಯಲ್ಲೂ ಭಾರತದ ಈ ಮೂವರು ಆಟಗಾತಿಯರು ಎಲ್ಲಿಯೂ ವಿಚಲಿತರಾಗಲಿಲ್ಲ. ನಗೋಯಾದ ಹವಾಮಾನ ಪರಿಸ್ಥಿತಿ ಬಿಲ್ಲುಗಾರಿಕೆಗೆ ಅಷ್ಟೇನೂ ಅನುಕೂಲಕವಾಗಿರಲಿಲ್ಲ. ಈ ಹವಾಮಾನ ಅಂಕಗಳ ಮೇಲೆ ಪರಿಣಾಮ ಬೀರುತ್ತಿತ್ತು. ಆದರೆ ಇಡೀ ಬಿಲ್ಲುಗಾರಿಕೆ ತಂಡದ ಬೆಂಬಲದೊಂದಿಗೆ ಇತಿಹಾಸ ನಿರ್ಮಿಸುವ ಅವಕಾಶ ತಮ್ಮ ಮುಂದಿದೆ ಎಂಬ ಅರಿವು ಅಂಕಿತಾ, ಕೀರ್ತಿ ಮತ್ತು ಕುಂಕುಮ್ ಅವರಿಗಿತ್ತು.

ಮೊದಲಿಗೆ ಎದುರಾಗಿದ್ದು ಚೀನಾ. ಪಂದ್ಯದ ಸೆಟ್ಗಳಲ್ಲಿ ಕೆಲವು ಬಾರಿ 8 ಮತ್ತು 9 ಅಂಕಗಳು ಬಂದರೂ ಅಂಕಿತಾ, ಕುಂಕುಮ್ ಮತ್ತು ಕೀರ್ತಿ ಪರಸ್ಪರರ ಬಗ್ಗೆ ನಿಗಾ ವಹಿಸಿದ್ದರು. ಯಾವಾಗ 10 ಅಂಕದ ಅಗತ್ಯವಿತ್ತೋ ಆಗ, ಅವರಲ್ಲಿ ಒಬ್ಬರು ಅದನ್ನು ಸಾಧಿಸಿದ್ದರು. ಸೆಮಿಫೈನಲ್ನಲ್ಲಿ ಕೀರ್ತಿ ಮೊದಲ ಮತ್ತು ಎರಡನೇ ಸೆಟ್ಗಳ ಅಂತಿಮ ಬಾಣಗಳ ಮೂಲಕ 10 ಅಂಕಗಳನ್ನು ಗಳಿಸಿ ಭಾರತಕ್ಕೆ ಅಂಕಗಳನ್ನು ಖಚಿತಪಡಿಸಿದರು. ಅಂತಿಮ ಸೆಟ್ನಲ್ಲಿ ಭಾರತಕ್ಕೆ ಸಮಬಲದ ಅಗತ್ಯವಿತ್ಉ. ಕೀರ್ತಿ ಅದನ್ನು ಸಾಧಿಸಿಕೊಡುವ ಮೂಲಕ 5-1 ಅಂತರದ ಗೆಲುವನ್ನು ಖಚಿತಪಡಿಸಿದರು.

ನಂತರ ಬಲಿಷ್ಠ ಕೊರಿಯಾ ವಿರುದ್ಧದ ಫೈನಲ್ ಪಂದ್ಯ ನಡೆಯಿತು. ಆರಂಭದಿಂದಲೂ ಕೊರಿಯಾದ ಕಂಗ್, ಲೀ ಮತ್ತು ಯೆಜಿನ್ ಓಹ್ ಅವರನ್ನೊಳಗೊಂಡ ತಂಡ ಉತ್ತಮ ಪ್ರದರ್ಶನ ನೀಡುತ್ಇತ್ತು. ಆದರೆ ಭಾರತೀಯ ತಂಡ ಎದೆಗುಂದಲಿಲ್ಲ. ವಾಸ್ತವದಲ್ಲಿ ಮೊದಲ ಎರಡು ಸೆಟ್ಗಳಲ್ಲಿ ಕೊರಿಯಾ 54 ಮತ್ತು 56 ಅಂಕಗಳನ್ನು ಗಳಿಸಿತು. ಭಾರತವೂ ಅದೇ ಮಟ್ಟದ ಪ್ರದರ್ಶನ ನೀಡಿ ಅಂಕಗಳನ್ನು 2-2ಕ್ಕೆ ಸಮಗೊಳಿಸಿತು. ಈ ಆಟವು ವಿಶ್ವ ಚಾಂಪಿಯನ್ಗಳನ್ನು ಅನಿರೀಕ್ಷಿತ ಸವಾಲಿಗೆ ತಳ್ಳಿತು. ಈ ಒತ್ತಡ ಮೂರನೇ ಸೆಟ್ನಲ್ಲಿ ಎದ್ದುಕಂಡಿತು. ಕೊರಿಯಾ ತಮ್ಮ ಆರು ಬಾಣಗಳಲ್ಲಿ ಒಟ್ಟು ನಾಲ್ಕು ಬಾರಿ 8 ಅಂಕಗಳನ್ನು ಗಳಿಸಿತು. ಅದೇ ಸಮಯದಲ್ಲಿ ಭಾರತ ಉತ್ತಮ ಪ್ರದರ್ಶನ ಮುಂದುವರಿಸಿ 55 ಅಂಕಗಳನ್ನು ಗಳಿಸುವ ಮೂಲಕ ಮುನ್ನಡೆ ಸಾಧಿಸಿತು.

ನಾಲ್ಕನೇ ಸೆಟ್ನಲ್ಲಿ ದಕ್ಷಿಣ ಕೊರಿಯಾ 54 ಅಂಕಗಳನ್ನು ಗಳಿಸಿತು. ಹೀಗಾಗಿ ಪಂದ್ಯವನ್ನು ಸಮಸ್ಥಿತಿಯಲ್ಲಿಡಲು ಭಾರತಕ್ಕೂ ಅಷ್ಟೇ ಅಂಕಗಳ ಅಗತ್ಯವಿತ್ತು. ಕೀರ್ತಿ ಆರಂಭದಲ್ಲಿ 8 ಅಂಕ ಗಳಿಸಿದರೂ, ಪರಿಶೀಲನೆಯ ನಂತರ ಅದನ್ನು 9 ಎಂದು ಪರಿಷ್ಕರಿಸಲಾಯಿತು. ಇದರಿಂದ ಭಾರತದ ಒಟ್ಟು ಅಂಕವೂ 54ಕ್ಕೇರಿತು. ಪರಿಣಾಮವಾಗಿ ಆ ಸೆಟ್ ಸಮಬಲಗೊಂಡಿತು ಮತ್ತು ಭಾರತ ತಂಡದ ಚಿನ್ನದ ಪದಕ ಖಚಿತವಾಯಿತು.

ಕಳೆದ ಏಷ್ಯನ್ ಗೇಮ್ಸ್ನಲ್ಲಿ ಕಾಂಪೌಂಡ್ ಬಿಲ್ಲುಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ತಾವು ವಿಶ್ವದ ಅತ್ಯುತ್ತಮ ಆಟಗಾರರ ಜೊತೆಗೆ ಪೈಪೋಟಿ ನಡೆಸಬಲ್ಲೆವು ಎಂಬುದನ್ನು ಸಾಬೀತುಪಡಿಸಲು ‘ರಿಕರ್ವ್’ ವಿಭಾಗಕ್ಕೆ ಇದೊಂದು ಆರಂಭವಾಗಿದೆ. ಸ್ವರ್ಣ ವಿಜೇತ ಮಹಿಳಾ ತಂಡ ಅದನ್ನು ತೋರಿಸಿಕೊಟ್ಟಿದ್ದಾರೆ. ಇದೀಗ ಮಿಶ್ರತಂಡ ಮತ್ತು ಪುರುಷರ ತಂಡವೂ ಅದೇ ಹಾದಿಯಲ್ಲಿ ಮುಂದುವರಿಯಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor