ಸಾಂದರ್ಭಿಕ ಚಿತ್ರ | Photo Credit : magnific

ಕಳೆದ ಆರು ವರ್ಷಗಳಿಂದ ವ್ಯಾಪಾರಿಗಳಿಗೆ ಬಹುತೇಕ ಉಚಿತವಾಗಿದ್ದ ಯುಪಿಐ (UPI) ಪಾವತಿ ವ್ಯವಸ್ಥೆಗೆ ಅಗ್ನಿಪರೀಕ್ಷೆ ಎದುರಾಗಿದೆ. ಅಕ್ಟೋಬರ್ 15ರಿಂದ ರೂ. 2,000ಕ್ಕಿಂತ ಹೆಚ್ಚಿನ ಮೊತ್ತದ ವ್ಯಾಪಾರಿ ಪಾವತಿಗಳ ಮೇಲೆ (P2M) ಶೇ. 0.4ರಷ್ಟು ಎಂಡಿಆರ್ (Merchant Discount Rate) ಶುಲ್ಕ ಜಾರಿಗೆ ಬರಲಿದೆ.

ವ್ಯಾಪಾರಿಗಳು ಈ ಹೆಚ್ಚುವರಿ ಶುಲ್ಕವನ್ನು ಗ್ರಾಹಕರ ಮೇಲೆಯೇ ಹಾಕಿದರೆ, ಬಹುತೇಕ ಗ್ರಾಹಕರು ನಗದು, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ಬ್ಯಾಂಕ್ ವರ್ಗಾವಣೆಗಳ ಕಡೆಗೆ ಮುಖ ಮಾಡುವ ಸಾಧ್ಯತೆಯಿದೆ ಎಂದು 'ಲೋಕಲ್ ಸರ್ಕಲ್ಸ್' (LocalCircles) ನಡೆಸಿದ ಹೊಸ ಸಮೀಕ್ಷೆ ತಿಳಿಸಿದೆ.

ರೂಪಾಯಿ 2,000ಕ್ಕಿಂತ ಹೆಚ್ಚಿನ ಪಾವತಿಗೆ ವ್ಯಾಪಾರಿಗಳು ಹೆಚ್ಚುವರಿ ಶುಲ್ಕ ವಿಧಿಸಿದರೆ, ಕೇವಲ ಶೇ. 14ರಷ್ಟು ಯುಪಿಐ ಬಳಕೆದಾರರು ಮಾತ್ರ ಅದೇ ಶುಲ್ಕ ಭರಿಸಿ ಯುಪಿಐ ಮೂಲಕವೇ ಪಾವತಿಸುವುದಾಗಿ ಹೇಳಿದ್ದಾರೆ. ಉಳಿದವರು ಬೇರೆ ಪಾವತಿ ವಿಧಾನಗಳನ್ನು ಹುಡುಕಿಕೊಳ್ಳುವುದಾಗಿ ಅಥವಾ ಖರೀದಿಯನ್ನು ಮುಂದೂಡುವುದಾಗಿ ತಿಳಿಸಿದ್ದಾರೆ.

ದೇಶದ 291 ಜಿಲ್ಲೆಗಳ ಯುಪಿಐ ಬಳಕೆದಾರರಿಂದ 67,000ಕ್ಕೂ ಹೆಚ್ಚು ಅಭಿಪ್ರಾಯಗಳನ್ನು ಸಂಗ್ರಹಿಸಿ ಈ ಸಮೀಕ್ಷೆ ನಡೆಸಲಾಗಿದೆ. ವ್ಯಾಪಾರಿಗಳು ಹೆಚ್ಚುವರಿ ಶುಲ್ಕ ವಿಧಿಸಿದರೆ ಗ್ರಾಹಕರ ಪ್ರತಿಕ್ರಿಯೆ ಹೇಗಿರಲಿದೆ ಎಂಬ ನಿರ್ದಿಷ್ಟ ಪ್ರಶ್ನೆಗೆ 31,206 ಮಂದಿ ಉತ್ತರಿಸಿದ್ದಾರೆ.

ಹೊಸ ಎಂಡಿಆರ್ ನಿಯಮ ಜಾರಿಗೆ ಬರುವುದಕ್ಕೆ ಕೇವಲ ಎರಡು ವಾರಗಳಷ್ಟೇ ಬಾಕಿ ಇರುವಾಗ ಈ ಸಮೀಕ್ಷೆಯ ವರದಿ ಹೊರಬಂದಿದೆ.

ಎಂಡಿಆರ್ ಎಂದರೇನು?

ಎಂಡಿಆರ್ ಅಂದರೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (Merchant Discount Rate). ಇದು ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ವಿಧಿಸಲಾಗುವ ಶುಲ್ಕವಾಗಿದ್ದು, ಈ ಪಾವತಿ ಜಾಲವನ್ನು ನಿರ್ವಹಿಸುವಲ್ಲಿ ತೊಡಗಿರುವ ಬ್ಯಾಂಕ್‌ಗಳು, ಪಾವತಿ ಸೇವಾ ಪೂರೈಕೆದಾರರು ಮತ್ತು ಯುಪಿಐ (UPI) ಆ್ಯಪ್‌ಗಳ ನಡುವೆ ಹಂಚಿಕೆಯಾಗುತ್ತದೆ.

ಇದುವರೆಗೆ ಯುಪಿಐ ಪಾವತಿಗಳಿಗೆ ವ್ಯಾಪಾರಿಗಳಿಗೆ ಯಾವುದೇ ಎಂಡಿಆರ್ ಶುಲ್ಕವಿರಲಿಲ್ಲ . ಆದರೆ ಅಕ್ಟೋಬರ್ 15ರಿಂದ ರೂ. 2,000ಕ್ಕಿಂತ ಹೆಚ್ಚಿನ ಮೊತ್ತದ ವ್ಯಾಪಾರಿ ಯುಪಿಐ ಪಾವತಿಗಳ ಮೇಲೆ ಶೇ. 0.4ರಷ್ಟು ಎಂಡಿಆರ್ ಶುಲ್ಕ ಅನ್ವಯವಾಗಲಿದೆ.

ಇದು ಗ್ರಾಹಕರಿಗೆ ವಿಧಿಸಬೇಕಾದ ಶುಲ್ಕವಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಎಂಡಿಆರ್ ಎಂದರೆ "ಸರ್ಕಾರ ಅಥವಾ ಎನ್‌ಪಿಸಿಐ ಸಂಗ್ರಹಿಸುವ ತೆರಿಗೆಯೂ ಅಲ್ಲ, ಶುಲ್ಕವೂ ಅಲ್ಲ" ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ವ್ಯಾಪಾರಿಗಳು ಈ ವೆಚ್ಚವನ್ನು ಗ್ರಾಹಕರ ಮೇಲೆ ವರ್ಗಾಯಿಸದಂತೆ ನೋಡಿಕೊಳ್ಳಲು ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಯುಪಿಐ ಆ್ಯಪ್‌ಗಳು ಕೂಡ ಯಾವುದೇ ಪ್ಲಾಟ್‌ಫಾರ್ಮ್ ಶುಲ್ಕ ಅಥವಾ ಗುಪ್ತ ಶುಲ್ಕಗಳನ್ನು ವಿಧಿಸುವಂತಿಲ್ಲ.

ಆದರೆ ವ್ಯಾಪಾರಿಗಳು ಈ ವೆಚ್ಚವನ್ನು ತಮ್ಮ ಮೇಲೆ ಹಾಕುತ್ತಾರೋ ಅಥವಾ ಗ್ರಾಹಕರಿಂದ ವಸೂಲಿ ಮಾಡಲು ಪ್ರಯತ್ನಿಸುತ್ತಾರೋ ಎಂಬುದು ಈಗಿರುವ ಮುಖ್ಯ ಪ್ರಶ್ನೆಯಾಗಿದೆ.

ವ್ಯಾಪಾರಿಗಳು ಶುಲ್ಕ ವಿಧಿಸಿದರೆ, ನಗದು ವ್ಯವಹಾರಗಳು ಮತ್ತೆ ಮರಳಿ ಬರಬಹುದು:

ರೂ. 2,000ಕ್ಕಿಂತ ಹೆಚ್ಚಿನ ಯುಪಿಐ ಪಾವತಿಗೆ ವ್ಯಾಪಾರಿಗಳು ಹೆಚ್ಚುವರಿ ಶುಲ್ಕ ಕೇಳಿದರೆ ತಾವು ಏನು ಮಾಡುತ್ತೇವೆ ಎಂದು ಲೋಕಲ್ ಸರ್ಕಲ್ಸ್ ಸಮೀಕ್ಷೆಯಲ್ಲಿ ಯುಪಿಐ ಬಳಕೆದಾರರನ್ನು ಕೇಳಲಾಗಿದೆ.

ಅತ್ಯಧಿಕ ಸಂಖ್ಯೆಯಲ್ಲಿ ಅಂದರೆ ಶೇ. 27ರಷ್ಟು ಮಂದಿ ತಾವು ನಗದು ರೂಪದಲ್ಲಿ ಹಣ ಪಾವತಿಸುವುದಾಗಿ ಹೇಳಿದ್ದಾರೆ.

ಇನ್ನಷ್ಟು ಶೇ. 26ರಷ್ಟು ಜನರು ಕ್ರೆಡಿಟ್ ಕಾರ್ಡ್‌ಗೆ ಬದಲಾಯಿಸುವುದಾಗಿ ತಿಳಿಸಿದ್ದರೆ, ಶೇ. 14ರಷ್ಟು ಮಂದಿ ಡೆಬಿಟ್ ಕಾರ್ಡ್ ಬಳಸುವುದಾಗಿ ಹೇಳಿದ್ದಾರೆ.

ಇದಲ್ಲದೆ, ಶೇ. 4ರಷ್ಟು ಜನರು ಬ್ಯಾಂಕ್ ವರ್ಗಾವಣೆ, ಎನ್‌ಇಎಫ್‌ಟಿ (NEFT) ಅಥವಾ ಐಎಂಪಿಎಸ್ (IMPS) ಬಳಸಲಿದ್ದಾರೆ ಹಾಗೂ ಶೇ. 9ರಷ್ಟು ಮಂದಿ ವ್ಯಾಪಾರಿಗೆ ಹೆಚ್ಚುವರಿ ಶುಲ್ಕವಿಲ್ಲದ ಬೇರೆ ಪಾವತಿ ವಿಧಾನವನ್ನು ಕೇಳಲಿದ್ದಾರೆ.

ಕೇವಲ ಶೇ. 14ರಷ್ಟು ಜನರು ಮಾತ್ರ ಯುಪಿಐ ಬಳಕೆಯನ್ನು ಮುಂದುವರಿಸಿ ಹೆಚ್ಚುವರಿ ಮೊತ್ತವನ್ನು ಭರಿಸುವುದಾಗಿ ತಿಳಿಸಿದ್ದಾರೆ. ಮತ್ತೊಂದೆಡೆ, ಶೇ. 2ರಷ್ಟು ಮಂದಿ ಖರೀದಿಯನ್ನೇ ತಪ್ಪಿಸುವುದಾಗಿ ಅಥವಾ ಮುಂದೂಡುವುದಾಗಿ ಹೇಳಿದ್ದರೆ, ಶೇ. 4ರಷ್ಟು ಜನರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ

ಸರಳವಾಗಿ ಹೇಳುವುದಾದರೆ, ಸಮೀಕ್ಷೆಯಲ್ಲಿ ಪಾಲ್ಗೊಂಡ ಪ್ರತಿ ಏಳು ಜನರಲ್ಲಿ ಕೇವಲ ಒಬ್ಬರು ಮಾತ್ರ ಹೆಚ್ಚುವರಿ ವೆಚ್ಚವನ್ನು ತಾವೇ ಭರಿಸಿ, ಯುಪಿಐ ಬಳಕೆಯನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಅದರಲ್ಲೂ ಅತಿ ದೊಡ್ಡ ಬದಲಾವಣೆಯು ನಗದು ವ್ಯವಹಾರದ ಕಡೆಗೆ ಇರಲಿದ್ದು, ಪ್ರತಿ ನಾಲ್ವರಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಇಂತಹ ಪಾವತಿಗಳಿಗಾಗಿ ಮತ್ತೆ ನಗದಿಗೆ ಮರಳುವುದಾಗಿ ಹೇಳಿದ್ದಾರೆ.

ರೂ. 2,000ಕ್ಕಿಂತ ಹೆಚ್ಚಿನ ದೊಡ್ಡ ಮೊತ್ತದ ಪಾವತಿಗಳಿಗೆ ಯುಪಿಐ ಬಳಸಲ್ಲ: ಶೇ. 76ರಷ್ಟು ಬಳಕೆದಾರರ ಅಭಿಪ್ರಾಯ:

ರೂ. 2,000ಕ್ಕಿಂತ ಹೆಚ್ಚಿನ ಯುಪಿಐ ಪಾವತಿಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಿದರೆ, ದೀರ್ಘಕಾಲಿಕವಾಗಿ ತಮ್ಮ ಪಾವತಿ ಅಭ್ಯಾಸಗಳು ಹೇಗಿರಲಿವೆ ಎಂಬುದರ ಕುರಿತು ಸಮೀಕ್ಷೆಯಲ್ಲಿ ಪ್ರಶ್ನಿಸಲಾಗಿದೆ.

ಬಂದಿರುವ 37,654 ಪ್ರತಿಕ್ರಿಯೆಗಳ ಪೈಕಿ, ಶೇ. 26ರಷ್ಟು ಮಂದಿ ತಾವು ಹೆಚ್ಚಾಗಿ ಕ್ರೆಡಿಟ್ ಕಾರ್ಡ್ ಬಳಸುವುದಾಗಿ ಹೇಳಿದ್ದರೆ, ಮತ್ತಷ್ಟು ಶೇ. 26ರಷ್ಟು ಜನರು ನಗದು ಬಳಸುವುದಾಗಿ ತಿಳಿಸಿದ್ದಾರೆ.

ಡೆಬಿಟ್ ಕಾರ್ಡ್‌ಗಳ ಬಳಕೆ ಶೇ. 13ರಷ್ಟಿದ್ದರೆ, ಶೇ. 11ರಷ್ಟು ಮಂದಿ ಬ್ಯಾಂಕ್ ವರ್ಗಾವಣೆ, ಎನ್‌ಇಎಫ್‌ಟಿ (NEFT) ಅಥವಾ ಐಎಂಪಿಎಸ್ (IMPS) ಬಳಸುವುದಾಗಿ ಹೇಳಿದ್ದಾರೆ.

ಹೆಚ್ಚುವರಿ ಶುಲ್ಕ ವಿಧಿಸಿದರೂ ರೂ. 2,000ಕ್ಕಿಂತ ಹೆಚ್ಚಿನ ಖರೀದಿಗೆ ಯುಪಿಐ ತಮ್ಮ ಅತ್ಯಂತ ನೆಚ್ಚಿನ ಪಾವತಿ ವಿಧಾನವಾಗಿ ಮುಂದುವರಿಯಲಿದೆ ಎಂದು ಕೇವಲ ಶೇ. 20ರಷ್ಟು ಮಂದಿ ಮಾತ್ರ ತಿಳಿಸಿದ್ದಾರೆ. ಶೇ. 4ರಷ್ಟು ಜನರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಂದರೆ, ಯುಪಿಐ ಬಳಕೆಗೆ ಹೆಚ್ಚುವರಿ ಶುಲ್ಕ ವಿಧಿಸಿದರೆ, ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 76ರಷ್ಟು ಯುಪಿಐ ಬಳಕೆದಾರರು ದೊಡ್ಡ ಮೊತ್ತದ ಪಾವತಿಗಳಿಗೆ ಯುಪಿಐ ಅನ್ನು ಕೈಬಿಡುವ ನಿರೀಕ್ಷೆಯಿದೆ.

ಬದಲಿ ಪಾವತಿ ವಿಧಾನಗಳಲ್ಲಿ ಕಾರ್ಡ್‌ಗಳು ಒಟ್ಟಾರೆಯಾಗಿ ಶೇ. 39ರಷ್ಟಿದ್ದರೆ, ನಗದು ಪಾವತಿಯು ಶೇ. 26ರಷ್ಟಿದೆ.

ಎಂಡಿಆರ್ ಎಲ್ಲಾ ಯುಪಿಐ ಪಾವತಿಗಳಿಗೆ ಅನ್ವಯಿಸುವುದಿಲ್ಲ:

ರೂ. 2,000ದವರೆಗಿನ ಯುಪಿಐ ಪಾವತಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಹಾಗೆಯೇ ವ್ಯಕ್ತಿಯಿಂದ ವ್ಯಕ್ತಿಗೆ (P2P) ಮಾಡುವ ಹಣ ವರ್ಗಾವಣೆಯೂ ಎಂದಿನಂತೆ ಉಚಿತವಾಗಿರುತ್ತದೆ.

ಯುಪಿಐ ಕ್ಯೂಆರ್ (QR) ಕೋಡ್‌ಗಳ ಮೂಲಕ ತಿಂಗಳಿಗೆ ರೂ. 1 ಲಕ್ಷದವರೆಗೆ ಹಣ ಪಡೆಯುವ ಸಣ್ಣ ವ್ಯಾಪಾರಿಗಳಿಗೂ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಶೇ. 96ರಷ್ಟು ವ್ಯಾಪಾರಿ ವಹಿವಾಟುಗಳ ಮೇಲೆ ಇದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಆದ್ದರಿಂದ ಈ ಸಮಸ್ಯೆಯು ಮುಖ್ಯವಾಗಿ ದೊಡ್ಡ ವ್ಯಾಪಾರಿಗಳಿಗೆ ಮಾಡುವ ಪಾವತಿಗಳಿಗೆ ಮಾತ್ರ ಅನ್ವಯಿಸುತ್ತದೆ.

ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ಖರೀದಿಯಿಂದ ಹಿಡಿದು ರೆಸ್ಟೋರೆಂಟ್‌ಗಳು, ಪ್ರಯಾಣ, ಶಾಪಿಂಗ್ ಹಾಗೂ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಗ್ರಾಹಕರಿಗೆ ಯುಪಿಐ ಪ್ರಮುಖ ಪಾವತಿ ಆಯ್ಕೆಯಾಗಿದೆ.

ಈ ಪಾವತಿಗಳ ಪ್ರಮಾಣವೂ ಬಹಳಷ್ಟಿದೆ.

ಸಮೀಕ್ಷೆಯ ವರದಿಯ ಪ್ರಕಾರ, 2026ರ ಆಗಸ್ಟ್‌ನಲ್ಲಿ ಯುಪಿಐ ದಾಖಲೆಯ 2451 ಕೋಟಿ ವಹಿವಾಟುಗಳನ್ನು ನಡೆಸಿದ್ದು, ಇದರ ಒಟ್ಟು ಮೌಲ್ಯ ರೂ. 29.82 ಲಕ್ಷ ಕೋಟಿಯಾಗಿದೆ.

ಇದರಲ್ಲಿ 1551 ಕೋಟಿ ವಹಿವಾಟುಗಳು ವ್ಯಾಪಾರಿ ಪಾವತಿಗಳಾಗಿದ್ದು, ಇವುಗಳ ಮೌಲ್ಯ ರೂ. 8.95 ಲಕ್ಷ ಕೋಟಿ ರೂ. ಇದೆ. ಇದರಲ್ಲಿ ರೂ. 2,000ಕ್ಕಿಂತ ಹೆಚ್ಚಿನ ಮೊತ್ತದ ಪಾವತಿಗಳೇ ವ್ಯಾಪಾರಿ ಪಾವತಿಗಳ ಒಟ್ಟು ಮೌಲ್ಯದ ಶೇ. 67ರಷ್ಟಿವೆ.

ಆದ್ದರಿಂದ ಎಂಡಿಆರ್ ಶುಲ್ಕವು ಒಟ್ಟು ಯುಪಿಐ ವಹಿವಾಟುಗಳ ಸಂಖ್ಯೆಯ ಕೇವಲ ಒಂದು ಭಾಗದ ಮೇಲೆ ಮಾತ್ರ ಪರಿಣಾಮ ಬೀರಿದರೂ, ವ್ಯಾಪಾರಿ ಪಾವತಿಗಳ ಮೂಲಕ ವರ್ಗಾವಣೆಯಾಗುವ ಹಣದ ದೊಡ್ಡ ಪಾಲನ್ನು ಇದು ಒಳಗೊಳ್ಳಲಿದೆ.

ವ್ಯಾಪಾರಿಗಳು ಆತಂಕಗೊಳ್ಳಲು ಕಾರಣವೇನು?:

ಹೊಸ ಶುಲ್ಕದ ಹೊರೆಯನ್ನು ತಾವೇ ಹೊರಲು ಗ್ರಾಹಕರು ಮಾತ್ರವಲ್ಲ, ವ್ಯಾಪಾರಿಗಳೂ ಹಿಂದೇಟು ಹಾಕುತ್ತಿದ್ದಾರೆ.

242 ಜಿಲ್ಲೆಗಳ 32,000ಕ್ಕೂ ಹೆಚ್ಚು ವ್ಯಾಪಾರಿಗಳನ್ನೊಳಗೊಂಡ 'ಲೋಕಲ್ ಸರ್ಕಲ್ಸ್' ಮತ್ತೊಂದು ಸಮೀಕ್ಷೆಯ ಪ್ರಕಾರ, ರೂ. 2,000ಕ್ಕಿಂತ ಹೆಚ್ಚಿನ ಯುಪಿಐ ಪಾವತಿಗಳ ಮೇಲೆ ಶೇ. 0.4ರಷ್ಟು ಎಂಡಿಆರ್ ಶುಲ್ಕ ಭರಿಸಲು ಕೇವಲ ಶೇ. 17ರಷ್ಟು ವ್ಯಾಪಾರಿಗಳು ಮಾತ್ರ ಸಿದ್ಧರಿದ್ದಾರೆ.

ಶೇ. 41ರಷ್ಟು ಮಂದಿ ತಾವು ಯಾವುದೇ ಎಂಡಿಆರ್ ಶುಲ್ಕ ಭರಿಸುವುದಿಲ್ಲ ಎಂದು ಹೇಳಿದ್ದರೆ, ಮತ್ತಷ್ಟು ಶೇ. 9ರಷ್ಟು ವ್ಯಾಪಾರಿಗಳು ತಾವು ಯುಪಿಐ ಪಾವತಿಯನ್ನೇ ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.

ವ್ಯಾಪಾರಿಗಳ ನಡುವೆ ಸಾಮಾನ್ಯವಾಗಿದ್ದ ಅತ್ಯಧಿಕ ಎಂಡಿಆರ್ ಮಿತಿಯು ಶೇ. 0.04ರಷ್ಟಿದ್ದು, ಇದನ್ನು ಶೇ. 15ರಷ್ಟು ಪ್ರತಿಕ್ರಿಯಿಸಿದವರು ಆಯ್ಕೆ ಮಾಡಿಕೊಂಡಿದ್ದಾರೆ.

ಇದು ಅಕ್ಟೋಬರ್ 15ರ ಜಾರಿಯ ಸುತ್ತ ದೊಡ್ಡ ಆತಂಕವನ್ನು ಸೃಷ್ಟಿಸಿದೆ.

ವ್ಯಾಪಾರಿಗಳು ಎಂಡಿಆರ್ ಶುಲ್ಕವನ್ನು ಗ್ರಾಹಕರ ಮೇಲೆ ವರ್ಗಾಯಿಸಬಾರದು ಎಂದು ಸರ್ಕಾರ ಹೇಳಿದೆ. ಆದರೆ ಹೆಚ್ಚಿನ ವ್ಯಾಪಾರಿಗಳು ಈ ವೆಚ್ಚವನ್ನು ಸ್ವತಃ ಭರಿಸಲು ಸಿದ್ಧರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರೂ. 5,000ದ ಪಾವತಿಯ ಮೇಲೆ ರೂ. 20 ಶುಲ್ಕ:

ಪ್ರತಿ ಪ್ರತ್ಯೇಕ ವಹಿವಾಟಿನ ಮೇಲೆ ಈ ಮೊತ್ತವು ಚಿಕ್ಕದೆಂದು ಅನ್ನಿಸಬಹುದು, ಆದರೆ ದೊಡ್ಡ ಖರೀದಿಯ ವಿಚಾರಕ್ಕೆ ಬಂದಾಗ ಇದು ಗಮನಾರ್ಹ ಎನಿಸುತ್ತದೆ.

ಶೇ. 0.4ರಂತೆ, ರೂ. 5,000ದ ಖರೀದಿಯ ಮೇಲೆ ಎಂಡಿಆರ್ ಶುಲ್ಕವು ರೂ. 20 ಆಗುತ್ತದೆ.

ಅದೇ ರೂ. 50,000ದ ಖರೀದಿಯ ಮೇಲೆ ಇದು ರೂ. 200 ಆಗಲಿದೆ.

ಸಮೀಕ್ಷೆಯ ವರದಿಯ ಪ್ರಕಾರ, ಎಂಡಿಆರ್ ಮೇಲೆ ಶೇ. 18ರಷ್ಟು ಜಿಎಸ್‌ಟಿ (GST) ಕೂಡ ವಿಧಿಸಲಾಗುತ್ತದೆ, ಆದರೂ ವ್ಯಾಪಾರಿಗಳು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಪಡೆಯಬಹುದು.

ಆದರೆ ಗ್ರಾಹಕರಿಗೆ, ಶುಲ್ಕದ ಗಾತ್ರಕ್ಕಿಂತ ಇದುವರೆಗೆ ಸಂಪೂರ್ಣ ಉಚಿತವಾಗಿದ್ದ ಪಾವತಿ ವಿಧಾನಕ್ಕೆ ಈಗ ಹಣ ನೀಡಬೇಕಾಗಿ ಬಂದಿದೆ ಎಂಬುದೇ ದೊಡ್ಡ ಸಮಸ್ಯೆಯಾಗಿದೆ.

ಆಗಸ್ಟ್‌ನಲ್ಲಿ ದೇಶದ 322 ಜಿಲ್ಲೆಗಳ 45,000ಕ್ಕೂ ಹೆಚ್ಚು ಯುಪಿಐ ಬಳಕೆದಾರರನ್ನು ಒಳಗೊಂಡು ನಡೆಸಿದ ಹಿಂದಿನ ಸಮೀಕ್ಷೆಯಲ್ಲಿ, ಎಂಡಿಆರ್ ಶುಲ್ಕವನ್ನು ತಮ್ಮಿಂದ ವಸೂಲಿ ಮಾಡಿದರೆ ದೊಡ್ಡ ಮೊತ್ತದ ಪಾವತಿಗಳಿಗೆ ತಾವು ಯುಪಿಐ ಬಳಸುವುದನ್ನು ನಿಲ್ಲಿಸುವುದಾಗಿ ಶೇ. 53ರಷ್ಟು ಮಂದಿ ಹೇಳಿದ್ದರು.

ಅಲ್ಲದೆ, 2025ರ ಮಾರ್ಚ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ. 73ರಷ್ಟು ಯುಪಿಐ ಬಳಕೆದಾರರು ಯುಪಿಐ ವಹಿವಾಟುಗಳ ಮೇಲೆ ಯಾವುದೇ ಶುಲ್ಕ ಇರಬಾರದು ಎಂದು ಅಭಿಪ್ರಾಯಪಟ್ಟಿದ್ದರು.

ಅಕ್ಟೋಬರ್ 15ರ ನಂತರ ಏನಾಗಲಿದೆ?:

ಗ್ರಾಹಕರು ಎಂಡಿಆರ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಲೋಕಲ್ ಸರ್ಕಲ್ಸ್ ವರದಿಯ ಪ್ರಕಾರ, ಸೆಪ್ಟೆಂಬರ್ 22ರಂದು ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, "ಇದರ ಹೊಣೆಯು ಗ್ರಾಹಕರ ಮೇಲಿಲ್ಲ" ಎಂದಿದ್ದು, ಎಂಡಿಆರ್ ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ವ್ಯಾಪಾರಿಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಶುಲ್ಕವನ್ನು ಗ್ರಾಹಕರ ಮೇಲೆ ವರ್ಗಾಯಿಸದಂತೆ ನೋಡಿಕೊಳ್ಳಲು ಒಂದು ವ್ಯವಸ್ಥೆಯನ್ನು ರೂಪಿಸಲು ಹಣಕಾಸು ಸಚಿವಾಲಯವು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಜೊತೆ ಕೈಜೋಡಿಸಿ ಕೆಲಸ ಮಾಡುತ್ತಿದೆ. ಯುಪಿಐ ಪಾವತಿಗೆ ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸುವ ಅಗತ್ಯವಿಲ್ಲ ಎಂದು ಗ್ರಾಹಕರಿಗೆ ತಿಳಿಸಲು ಪ್ರಾದೇಶಿಕ ಭಾಷೆಗಳಲ್ಲಿ ಜಾಗೃತಿ ಅಭಿಯಾನವನ್ನು ನಡೆಸಲು ಸಹ ಯೋಚಿಸಲಾಗಿದೆ.

ಆದರೆ, ತಪ್ಪಾಗಿ ಶುಲ್ಕ ವಿಧಿಸಲ್ಪಟ್ಟ ಗ್ರಾಹಕರಿಗೆ ವಿಧಿಸಬಹುದಾದ ದಂಡಗಳ ಬಗ್ಗೆ ಅಥವಾ ಸ್ಪಷ್ಟವಾದ ಹಣ ಮರುಪಾವತಿ ವ್ಯವಸ್ಥೆಯ ಬಗ್ಗೆ ಈ ಹೊಸ ನಿಯಮಾವಳಿಯಲ್ಲಿ ಇನ್ನೂ ಸ್ಪಷ್ಟಪಡಿಸಿಲ್ಲ ಎಂದು ಲೋಕಲ್ ಸರ್ಕಲ್ಸ್ ತಿಳಿಸಿದೆ.

ಹೀಗಾಗಿ, ಅಕ್ಟೋಬರ್ 15ರ ಜಾರಿಯೊಂದಿಗೆ ಒಂದು ಪ್ರಮುಖ ಪ್ರಶ್ನೆ ಎದುರಾಗಿದೆ. ಅದೇನೆಂದರೆ ಕೌಂಟರ್‌ನಲ್ಲಿ ಗ್ರಾಹಕರಿಗೆ ಯುಪಿಐ ಪಾವತಿಗೆ ಹೆಚ್ಚುವರಿ ಹಣ ತಗಲುತ್ತದೆ ಎಂದು ಹೇಳಿದಾಗ ಮುಂದೆ ಏನಾಗುತ್ತದೆ?

ಸದ್ಯಕ್ಕೆ ಸರ್ಕಾರದ ನಿಲುವು ಸ್ಪಷ್ಟವಾಗಿದೆ, ಗ್ರಾಹಕರು ಎಂಡಿಆರ್ ಹೊರೆಯನ್ನು ಹೊರಬಾರದು.

ಆದರೆ ಸಮೀಕ್ಷೆಯ ಫಲಿತಾಂಶಗಳೇನಾದರೂ ಸೂಚಿಸುವುದಾದರೆ, ಯುಪಿಐ ಮೇಲಿನ ಹೆಚ್ಚುವರಿ ಶುಲ್ಕದ ಭ್ರಮೆಯೂ ಸಹ ದೊಡ್ಡ ಖರೀದಿಯ ಸಂದರ್ಭದಲ್ಲಿ ಗಮನಾರ್ಹ ಸಂಖ್ಯೆಯ ಬಳಕೆದಾರರನ್ನು ಕಾರ್ಡ್‌‌ಗಳು, ನಗದು ಮತ್ತು ಬ್ಯಾಂಕ್ ವರ್ಗಾವಣೆಗಳ ಕಡೆಗೆ ತಳ್ಳಬಹುದು.

ಒಂದೊಮ್ಮೆ ಇದು ಸಂಭವಿಸಿದಲ್ಲಿ, ಇದರ ಪರಿಣಾಮವು ಕೇವಲ ಒಂದು ಪಾವತಿ ವಿಧಾನಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಬಳಕೆಯ ಹಂತದಲ್ಲಿ ಯುಪಿಐ ಉಚಿತವಾಗಿ ಉಳಿಯುವುದರ ಮೇಲೆ ಕಳೆದ ಕೆಲವು ವರ್ಷಗಳಿಂದ ಭಾರತವು ನಗದು ವ್ಯವಹಾರದಿಂದ ದೂರ ಉಳಿಯುವ ಪ್ರಕ್ರಿಯೆ ಎಷ್ಟು ಅವಲಂಬಿತವಾಗಿದೆ ಎಂಬುದನ್ನು ಈ ಬದಲಾವಣೆಯು ಪರೀಕ್ಷೆಗೆ ಒಳಪಡಿಸಬಹುದು.

ಕೃಪೆ: indiatoday.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor