ಸಾಮಾಜಿಕ ಮಾಧ್ಯಮ ಪೋಸ್ಟ್ ಗಳ ನಿರ್ಬಂಧ ದಿಢೀರ್ ಹೆಚ್ಚಳ: ಸ್ವತಂತ್ರ ಪತ್ರಕರ್ತರು, ಮಾಧ್ಯಮಗಳ ಧ್ವನಿ ಅಡಗಿಸುವ ಯತ್ನವೇ?

Update: 2026-08-13 23:30 IST

Photo Credit : newslaundry.com

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79(3)(ಬಿ) ಅಡಿಯಲ್ಲಿ ಸರ್ಕಾರ ನೀಡಿರುವ ನೋಟಿಸ್ ಗಳ ಆಧಾರದ ಮೇಲೆ, ಮೆಟಾ ಮತ್ತು 'ಎಕ್ಸ್' ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಪತ್ರಕರ್ತರು, ರಾಜಕೀಯ ಪಕ್ಷಗಳು, ಹೋರಾಟಗಾರರು ಮತ್ತು ಮಾಧ್ಯಮ ಸಂಸ್ಥೆಗಳ ಪೋಸ್ಟ್ ಗಳನ್ನು ನಿಯಂತ್ರಿಸಲಾಗುತ್ತಿದೆ ಅಥವಾ ತೆಗೆದುಹಾಕಲಾಗುತ್ತಿದೆ. ಈ ಪ್ರವೃತ್ತಿಯು ಭಾರತದಲ್ಲಿ ಪಾರದರ್ಶಕತೆ, ಕಾನೂನು ಪ್ರಕ್ರಿಯೆ ಮತ್ತು ಪತ್ರಿಕಾ ಸ್ವಾತಂತ್ರ್ಯದ ಕುರಿತು ಕಳವಳವನ್ನು ಹುಟ್ಟುಹಾಕಿದೆ.

ಸ್ವತಂತ್ರ ಪತ್ರಕರ್ತ ಸಚಿನ್ ಗುಪ್ತಾ ಅವರ ಪ್ರಕಾರ, ಯಾವುದೇ ಸಂಸ್ಥೆಯ ಬೆಂಬಲವಿಲ್ಲದ ಪತ್ರಕರ್ತರು ಮತ್ತು ಕಂಟೆಂಟ್ ಕ್ರಿಯೇಟರ್ಸ್ ಗೆ ಇದು ದೊಡ್ಡ ಹೊಡೆತವಾಗಿದೆ. "ನಾವು ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಭಾಷಣ ಅಥವಾ ಹಿಂಸಾಚಾರದ ವಿಷಯಗಳನ್ನು ಹಂಚಿಕೊಂಡಾಗ, ಸರ್ಕಾರವು ದ್ವೇಷ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೇ ಹೊರತು, ಅದನ್ನು ವರದಿ ಮಾಡುವ ಅಥವಾ ಹಂಚಿಕೊಳ್ಳುವವರ ವಿರುದ್ಧ ಅಲ್ಲ. ಇಂತಹ ವಿಚಾರಗಳು ಹೊರಬರದಂತೆ ತಡೆಯಲು ಸುದ್ದಿ ತಲುಪಿಸುವವರನ್ನೇ ಇಲ್ಲದಂತೆ ಮಾಡುವ ಯತ್ನ ಇದಾಗಿದೆ" ಎಂದು ಹೇಳಿರುವುದಾಗಿ ‘newslaundry’ ವರದಿ ಉಲ್ಲೇಖಿಸಿದೆ.

ಭಾರತದಲ್ಲಿ ವಿಷಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮೆಟಾ ಬಿಡುಗಡೆ ಮಾಡಿದ ವರದಿಯ ಪ್ರಕಾರ, 2025ರ ಜುಲೈ ಮತ್ತು ಡಿಸೆಂಬರ್ ನಡುವೆ ಮೆಟಾ 41,000ಕ್ಕೂ ಹೆಚ್ಚು ಪೋಸ್ಟ್ ಗಳನ್ನು ನಿರ್ಬಂಧಿಸಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಮಾರು ಮೂರು ಪಟ್ಟು ಹೆಚ್ಚು. ಈ ತಿಂಗಳ ಕೊನೆಯಲ್ಲಿ ಇತ್ತೀಚಿನ ಅಂಕಿಅಂಶಗಳನ್ನು ಪ್ರಕಟಿಸಲಾಗುವುದು ಎಂದು newslaundry ಜೊತೆ ಮಾತನಾಡಿದ ಮೆಟಾ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ. ಜಂತರ್ ಮಂತರ್ ಪ್ರತಿಭಟನೆಯ ಆಕ್ಷೇಪಾರ್ಹ ವೀಡಿಯೋಗಳನ್ನು ತೆಗೆದುಹಾಕಲು ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ, ಈ ನಿರ್ಬಂಧಗಳು ದಿಢೀರ್ ಹೆಚ್ಚಾಗಿವೆ ಎಂಬ ಆರೋಪಗಳೂ ಕೇಳಿಬಂದಿವೆ.

 

ಇಂತಹ ನಿಯಂತ್ರಣಗಳ ಬಗ್ಗೆ ಸ್ಪಷ್ಟತೆಯ ಕೊರತೆಯನ್ನು ಎತ್ತಿ ತೋರಿಸಿದ ಸಚಿನ್ ಗುಪ್ತಾ, "ತಮ್ಮ ಸುದ್ದಿಗಳನ್ನು ಪ್ರಕಟಿಸಲು ಸ್ವಂತ ವೇದಿಕೆ ಇಲ್ಲದ ಸ್ವತಂತ್ರ ಪತ್ರಕರ್ತರು ಮತ್ತು ಸಾಮಾಜಿಕ ಜಾಲತಾಣದ ಕ್ರಿಯೇಟರ್ ಗಳು ಸಾಮಾಜಿಕ ಮಾಧ್ಯಮಗಳನ್ನೇ ನೆಚ್ಚಿಕೊಂಡಿದ್ದಾರೆ. ಅಂತಹ ಪೋಸ್ಟ್ ಗಳನ್ನು ಡಿಲೀಟ್ ಮಾಡಿದರೆ ಅಥವಾ ತೆಗೆದುಹಾಕಿದರೆ ಈ ಜನರು ಎಲ್ಲಿಗೆ ಹೋಗಬೇಕು?" ಎಂದು ಪ್ರಶ್ನಿಸಿದ್ದಾರೆ.

►ಸಚಿನ್ ಗುಪ್ತಾಗೆ ನೋಟಿಸ್ ಕಳುಹಿಸಿದ 'ಎಕ್ಸ್'

ಪತ್ರಕರ್ತ ಸಚಿನ್ ಗುಪ್ತಾ ಅವರಿಗೆ 'ಎಕ್ಸ್' ಸಂಸ್ಥೆಯಿಂದ ಎರಡು ಪೋಸ್ಟ್ ಗಳನ್ನು ತೆಗೆದುಹಾಕುವಂತೆ ಸೂಚಿಸಿ ಎರಡು ನೋಟಿಸ್ ಗಳು ಬಂದಿವೆ. ಇದರಲ್ಲಿ ಒಂದು ನೋಟಿಸ್ ಸಹರನ್ಪುರ ಪೊಲೀಸರಿಂದ ಬಂದಿದ್ದರೆ, ಎರಡನೆಯದು ಮುಝಫರ್ ನಗರ ಪೊಲೀಸರಿಂದ ಬಂದಿತ್ತು.

ಎರಡೂ ನೋಟಿಸ್ ಗಳನ್ನು ಇನ್ಸ್ಪೆಕ್ಟರ್ ಹಂತದ ಅಧಿಕಾರಿಗಳು ಕಳುಹಿಸಿದ್ದಾರೆ ಎಂದು ಗುಪ್ತಾ ತಿಳಿಸಿದ್ದಾರೆ. ಎರಡೂ ಜಿಲ್ಲೆಗಳ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ತಮ್ಮ ಪೋಸ್ಟ್ ಗಳನ್ನು ತೆಗೆದುಹಾಕಲು ಇನ್ಸ್ಪೆಕ್ಟರ್ ಹಂತದ ಅಧಿಕಾರಿಗಳು ಸೂಚನೆ ನೀಡಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಹೇಳಿದ್ದಾರೆ ಎಂದು ಗುಪ್ತಾ ಪ್ರತಿಪಾದಿಸಿದ್ದಾರೆ. ಒಂದು ಪೋಸ್ಟ್‌ ನಲ್ಲಿ ಹಿಂದುತ್ವ ಕಾರ್ಯಕರ್ತ ಪಿಂಕಿ ಚೌಧರಿ ಅವರ ವೀಡಿಯೋ ಇತ್ತು. ಅದರಲ್ಲಿ ಅವರು ದಾರುಲ್ ಉಲೂಮ್ ದಿಯೋಬಂದ್ ಇಸ್ಲಾಮಿಕ್ ಸಂಸ್ಥೆಯಲ್ಲಿ ಹಿಂದೂ ಧಾರ್ಮಿಕ ವಿಧಿವಿಧಾನವನ್ನು ನೆರವೇರಿಸುವುದಾಗಿ ಘೋಷಿಸುವುದನ್ನು ಕಾಣಬಹುದು. ಎರಡನೇ ವೀಡಿಯೋ ಇತ್ತೀಚಿನ ಕನ್ವರ್ ಯಾತ್ರೆಗೆ ಸಂಬಂಧಿಸಿದ್ದಾಗಿದ್ದು, ಅದರಲ್ಲಿ ಕನ್ವರಿಯಾಗಳು ದಿಲ್ಲಿ-ಹರಿದ್ವಾರ ಹೆದ್ದಾರಿಯನ್ನು ತಡೆದಿದ್ದರು. ಈ ವೀಡಿಯೋ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದೆ ಎಂದು ಮುಜಾಫರ್ ನಗರ ಪೊಲೀಸರು ಹೇಳಿದ್ದಾರೆ.

ಇನ್ನು ಮೆಟಾ ಸಂಸ್ಥೆಯ ವೇದಿಕೆಗಳಲ್ಲಿಯೂ ಪತ್ರಕರ್ತ ಸಂತೋಷ್ ಪಾಠಕ್, ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಹಾಗೂ ಫ್ಯಾಕ್ಟ್-ಚೆಕರ್ ಮುಹಮ್ಮದ್ ಝುಬೇರ್, scroll.in ಮತ್ತು ದಿ ಹಿಂದೂ ಮಾಧ್ಯಮ ಸಂಸ್ಥೆಗಳು, ಇಂಡಿಯನ್ ಯೂತ್ ಕಾಂಗ್ರೆಸ್, ಅರವಿಂದ್ ಕೇಜ್ರಿವಾಲ್, ಆಮ್ ಆದ್ಮಿ ಪಾರ್ಟಿ, CJPಯ ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಹಾಗೂ Rofl Gandhi (Parody) ಖಾತೆಗಳ ಪೋಸ್ಟ್ ಗಳಿಗೂ ನಿಯಂತ್ರಣ ಹೇರಲಾಗಿದೆ ಅಥವಾ ತೆಗೆದುಹಾಕಲಾಗಿದೆ.

ಇನ್ಸ್ಟಾಗ್ರಾಮ್ ನಲ್ಲಿದ್ದ ತನ್ನ ಒಂದು ಪೋಸ್ಟ್ ಭಾರತದಲ್ಲಿ ಲಭ್ಯವಿಲ್ಲದಂತೆ ಮಾಡಲಾಗಿದೆ ಎಂದು scroll.in ತಿಳಿಸಿದೆ. ಕಾಶ್ಮೀರದಲ್ಲಿ ಪೆಲೆಟ್ ಗನ್ ಸಂತ್ರಸ್ತರಿಗೆ ಗಾಯಗೊಂಡು ಒಂದು ದಶಕ ಕಳೆದರೂ ಪರಿಹಾರ ಸಿಗದಿರುವ ಕುರಿತ ವರದಿಯಾಗಿತ್ತು ಅದು. ಪೆಲೆಟ್ ಗಾಯಗಳು ಕಾಣಿಸದ ಮತ್ತೊಂದು ಫೋಟೋ ಹೊಂದಿದ್ದ ಪೋಸ್ಟ್ ಅನ್ನು ಅದೇ ದಿನ ನಂತರ ಪ್ರಕಟಿಸಲಾಗಿದ್ದು, ಅದನ್ನೂ ನಿರ್ಬಂಧಿಸಲಾಗಿದೆ. ಈ ಕ್ರಮಕ್ಕೆ ಇನ್ಸ್ಟಾಗ್ರಾಮ್ ಯಾವುದೇ ನಿರ್ದಿಷ್ಟ ಕಾರಣ ನೀಡಿಲ್ಲ. ಫೇಸ್ಬುಕ್ ಮತ್ತು ಥ್ರೆಡ್ಸ್ ನಲ್ಲಿ ಈ ಪೋಸ್ಟ್ ಲಭ್ಯವಿದ್ದರೂ, ಇನ್ಸ್ಟಾಗ್ರಾಮ್ ನಲ್ಲಿ ಮಾತ್ರ ನಿರ್ಬಂಧಿಸಲಾಗಿದೆ ಎಂದು scroll.in ಹೇಳಿದೆ.

ಅದೇ ರೀತಿ, ದಿ ಹಿಂದೂ ಸಂಸ್ಥೆಯ ಇನ್ ಸ್ಟಾಗ್ರಾಮ್ ಪೋಸ್ಟ್ ಅನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. 2016ರ ಕಾಶ್ಮೀರ ಪ್ರತಿಭಟನೆಯ ಸಮಯದಲ್ಲಿ ಭದ್ರತಾ ಪಡೆಗಳು ಪೆಲೆಟ್ ಗನ್ ಹಾರಿಸಿದಾಗ ದೃಷ್ಟಿ ಕಳೆದುಕೊಂಡ ಕಾಶ್ಮೀರದ ಪೆಲೆಟ್ ಸಂತ್ರಸ್ತೆ ಇನ್ಶಾ ಮುಷ್ತಾಕ್ ಬಗ್ಗೆ ಇರುವ ಪೋಸ್ಟ್ ಆಗಿತ್ತು ಅದು.

ಎರಡೂ ಸಂಸ್ಥೆಗಳ ಪೋಸ್ಟ್ ಗಳನ್ನು ತೆಗೆದುಹಾಕಿದ್ದಕ್ಕೆ ಪ್ರತಿಕ್ರಿಯಿಸಿದ ಮೆಟಾ, "ಭಾರತದ ಐಟಿ ನಿಯಮಗಳಿಗೆ ಅನುಸಾರವಾಗಿ ವಿಷಯದ ಪ್ರವೇಶವನ್ನು ನಿರ್ಬಂಧಿಸಲಾಗಿದೆ" ಎಂದು ಹೇಳಿದ್ದು, ಯಾವುದೇ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.

ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಾರ್ಟಿಯ ಅಧಿಕೃತ ಖಾತೆಯ ಪೋಸ್ಟ್ ನಿರ್ಬಂಧಿಸಿರುವುದಕ್ಕೆ newslaundry ಗೆ ಪ್ರತಿಕ್ರಿಯಿಸಿದ AAP ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಕಕ್ಕರ್, "ಮೋದಿ ಸರ್ಕಾರದ ವಿರುದ್ಧ ಸಾರ್ವಜನಿಕರಲ್ಲಿ ಎಷ್ಟೊಂದು ಆಕ್ರೋಶವಿದೆ ಎಂಬುದನ್ನು ಜೆನ್ ಝೀ ಪ್ರತಿಭಟನೆ ತೋರಿಸಿಕೊಟ್ಟಿದೆ. ಈಗ ತಮ್ಮ ವಿರುದ್ಧದ ಧ್ವನಿಯನ್ನು ಅಡಗಿಸಲು ಸಾಮಾಜಿಕ ಮಾಧ್ಯಮಗಳನ್ನು ಹತೋಟಿಗೆ ತರಲು ಬಯಸುತ್ತಿದ್ದಾರೆ, ಆದರೆ ಇದು ಇನ್ನಷ್ಟು ತೀವ್ರಗೊಳ್ಳುತ್ತದೆ," ಎಂದು ಹೇಳಿದ್ದಾರೆ.

CJPಯ ಹಲವಾರು ನಾಯಕರ ಪೋಸ್ಟ್ ಗಳನ್ನು ಸಹ ತೆಗೆದುಹಾಕಲಾಗಿದೆ. ಈ ಬಗ್ಗೆ ಮಾತನಾಡಿದ CJP ಜಂಟಿ ಸಂಚಾಲಕ ಅಶುತೋಷ್ ರಾಂಕಾ, "CJP ಪರ ವಿಷಯಗಳು ಮತ್ತು CJP ಪರ ವೀಡಿಯೋ ಕ್ರಿಯೇಟರ್ಸ್ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ನಾನು ಭಾವಿಸುತ್ತೇನೆ. ಸರ್ಕಾರದ ಬಯಕೆಯಿಲ್ಲದೆ ಇದು ಸಾಧ್ಯವಿಲ್ಲ" ಎಂದಿದ್ದಾರೆ.

ಭಾರತದಲ್ಲಿ ಲಭ್ಯವಿಲ್ಲದಂತೆ ಮಾಡಲಾದ ತಮ್ಮ ಪೋಸ್ಟ್ ಗಳ ಬಗ್ಗೆ ಮಾತನಾಡಿದ ರಾಂಕಾ, "ಆ ಪೋಸ್ಟ್ ಗಳನ್ನು ಯಾಕೆ ನಿರ್ಬಂಧಿಸಲಾಗಿದೆ ಎಂದು ನನಗೆ ತಿಳಿದಿಲ್ಲ. ಅವುಗಳಲ್ಲಿ ಒಂದು ಆಹಾರದ ಕುರಿತಾಗಿದ್ದರೆ, ಮತ್ತೊಂದು ಸೋನಮ್ ವಾಂಗ್ಚುಕ್ ಅವರನ್ನು ಬಂಧಿಸಿದ ತಕ್ಷಣದ ತುರ್ತು ಕರೆಯ ಕುರಿತಾಗಿತ್ತು. ಇದು ವೀಡಿಯೋಗಳ ವಿಷಯಕ್ಕೆ ಸಂಬಂಧಿಸಿದ್ದು ಎಂಬುದು ಖಚಿತ, ಆದರೆ ನನಗೆ ಯಾವುದೇ ಕಾರಣಗಳನ್ನು ತಿಳಿಸಿಲ್ಲ. ನನ್ನ ನಾಲ್ಕು ವೀಡಿಯೊಗಳನ್ನು ನಿರ್ಬಂಧಿಸಲಾಗಿದೆ" ಎಂದು ಹೇಳಿದ್ದಾರೆ.

ನಮ್ಮ ಪೂರ್ವ ಮತ್ತು ಈಶಾನ್ಯ ಭಾರತ ವಲಯದ ಮುಖ್ಯಸ್ಥ ಅಂಕಿತ್ ಭಾರದ್ವಾಜ್ ಅವರ ಹೆಸರನ್ನು ಆ ಹುದ್ದೆಗೆ ಘೋಷಿಸಿದ ಬೆನ್ನಲ್ಲೇ, ಅವರ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಖಾತೆಗಳನ್ನು ಇದ್ದಕ್ಕಿದ್ದಂತೆ ಅಮಾನತುಗೊಳಿಸಲಾಯಿತು. ಆದ್ದರಿಂದ ಈ ನಿರ್ಬಂಧಗಳ ಹಿಂದೆ ಸರ್ಕಾರದ ಕೈವಾಡವಿದೆ ಎಂಬುದು ಮೊದಲನೆಯದಾಗಿ ಸ್ಪಷ್ಟವಾಗಿದೆ. ಕಂಟೆಂಟ್ ವಿಷಯದಲ್ಲಿ ನನಗೆ ಈ ಹಿಂದೆ ಇಂತಹ ಯಾವುದೇ ನಿರ್ಬಂಧ ಎದುರಾಗಿರಲಿಲ್ಲ ಎಂದಿದ್ದಾರೆ.

►‘ಸೇಫ್ ಹಾರ್ಬರ್’ ನಿಯಮದ ಉಲ್ಲೇಖ, ಆಕ್ಷೇಪಾರ್ಹ ಪೋಸ್ಟ್ ಗಳ ತೆರವು ದಿಢೀರ್ ಹೆಚ್ಚಳ

ಹೆಸರು ಹೇಳಲಿಚ್ಛಿಸದ ಮೆಟಾ ಸಂಸ್ಥೆಯ ಉದ್ಯೋಗಿಯೊಬ್ಬರು newslaundry ಜತೆ ಮಾತನಾಡಿದ್ದು, "ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79(3)(ಬಿ) ಅಡಿಯಲ್ಲಿ ನೀಡಲಾಗುವ ನೋಟಿಸ್ ಗಳಿಗೆ ಬದ್ಧವಾಗಿರುವುದು ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಕಾನೂನುಬದ್ಧವಾಗಿ ಕಡ್ಡಾಯವಾಗಿದೆ. ನಾವು ಈ ನೋಟಿಸ್ ಗಳನ್ನು ಪಾಲಿಸಬೇಕಾಗುತ್ತದೆ. ಇಲ್ಲದಿದ್ದರೆ ಮಧ್ಯವರ್ತಿ ಸಂಸ್ಥೆಯಾಗಿ ನಮಗೆ ಸಿಗುವ 'ಸೇಫ್ ಹಾರ್ಬರ್' (ಸುರಕ್ಷಿತ ವಿನಾಯಿತಿ) ರಕ್ಷಣೆ ರದ್ದಾಗುತ್ತದೆ," ಎಂದು ತಿಳಿಸಿದ್ದಾರೆ.

ಐಟಿ ಕಾಯ್ದೆಯ ಸೆಕ್ಷನ್ 79ರ ಪ್ರಕಾರ, ಮೆಟಾ ಮತ್ತು 'ಎಕ್ಸ್' ನಂತಹ ಮಧ್ಯವರ್ತಿ ಸಂಸ್ಥೆಗಳು ಸರ್ಕಾರದ ಆದೇಶಗಳನ್ನು ಪಾಲಿಸುವವರೆಗೆ, ಬಳಕೆದಾರರು ಪೋಸ್ಟ್ ಮಾಡುವ ವಿಷಯಗಳ ಕಾನೂನು ಜವಾಬ್ದಾರಿಯಿಂದ ಅವರಿಗೆ ರಕ್ಷಣೆ ಸಿಗುತ್ತದೆ. ಈ 'ಸೇಫ್ ಹಾರ್ಬರ್' ರಕ್ಷಣೆಯನ್ನು ಕಳೆದುಕೊಂಡರೆ, ತಮ್ಮ ವೇದಿಕೆಗಳಲ್ಲಿ ಬರುವ ಯಾವುದೇ ಕಾನೂನುಬಾಹಿರ ಪೋಸ್ಟ್ ಗಳಿಗೆ ಸಂಸ್ಥೆಗಳೇ ನೇರ ಹೊಣೆಯಾಗಬೇಕಾಗುತ್ತದೆ. ಹೀಗಾಗಿ, ನೋಟಿಸ್ ನೀಡುವ ಪ್ರಕ್ರಿಯೆಯ ಬಗ್ಗೆ ಅಪಸ್ವರಗಳಿದ್ದರೂ ಸೆಕ್ಷನ್ 79(3)(ಬಿ) ಅಡಿಯ ಆದೇಶಗಳನ್ನು ಪಾಲಿಸುವ ಪ್ರಮಾಣ ಹೆಚ್ಚಾಗಿದೆ.

ಭಾರತದಲ್ಲಿ ನಿರ್ಬಂಧಿಸಲಾದ ಅಥವಾ ಲಭ್ಯವಿಲ್ಲದಂತೆ ಮಾಡಲಾದ ಪೋಸ್ಟ್ ಗಳು ಸರ್ಕಾರದ ನೋಟಿಸ್ ಗಳ ಆಧಾರದ ಮೇಲಿದೆಯೇ ಹೊರತು, ಮೆಟಾದ ಸಮುದಾಯ ಮಾರ್ಗಸೂಚಿಗಳ ಉಲ್ಲೇಖದಿಂದ ಅಲ್ಲ ಎಂದು ಮೆಟಾ ಉದ್ಯೋಗಿ ಸ್ಪಷ್ಟಪಡಿಸಿದ್ದಾರೆ. "ಒಂದು ವೇಳೆ ಅದು ಸಮುದಾಯ ನಿಯಮಗಳ ಉಲ್ಲೇಖವಾಗಿದ್ದರೆ, ಯಾವ ಮಾರ್ಗಸೂಚಿಯನ್ನು ಉಲ್ಲೇಖಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿ ಬಳಕೆದಾರರಿಗೆ ಪ್ರತ್ಯೇಕ ನೋಟಿಸ್ ನೀಡಲಾಗುತ್ತಿತ್ತು" ಎಂದು ಅವರು ಹೇಳಿದ್ದಾರೆ.

"ನಾವು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ಮುಚ್ಚಿಡುವಂತದ್ದು ಏನೂ ಇಲ್ಲ. ಕಾನೂನಿನಂತೆಯೇ ಎಲ್ಲವನ್ನೂ ಮಾಡುತ್ತಿದ್ದೇವೆ" ಎಂದಿದ್ದಾರೆ ಅವರು.

ಆರಂಭದಲ್ಲಿ ಉಲ್ಲೇಖಿಸಲಾದ 41,400 ನಿರ್ಬಂಧಗಳಲ್ಲಿ, ಫೇಸ್ ಬುಕ್ ನ 23,000 ಪೋಸ್ಟ್ ಗಳು, 3,200 ಪ್ರೊಫೈಲ್ ಗಳು, 935 ಕಮೆಂಟ್ ಗಳು ಹಾಗೂ 261 ಪೇಜ್ ಮತ್ತು ಗ್ರೂಪ್ ಗಳು ಸೇರಿವೆ. ಇದು 2025ರ ಜನವರಿ-ಜೂನ್ ಅವಧಿಗೆ ಹೋಲಿಸಿದರೆ ಗಣನೀಯ ಏರಿಕೆಯಾಗಿದೆ. ಇನ್ಸ್ಟಾಗ್ರಾಮ್ನಲ್ಲಿ 10,500 ಮೀಡಿಯಾ ಪೋಸ್ಟ್ ಗಳು ಮತ್ತು 3,540 ಖಾತೆಗಳನ್ನು ನಿರ್ಬಂಧಿಸಲಾಗಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY), ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB) ಹಾಗೂ 'ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್' (I4C) ನೀಡಿರುವ ನಿರ್ದೇಶನಗಳಿಗೆ ಅನುಗುಣವಾಗಿ ಭಾರತದಲ್ಲಿ 9,000ಕ್ಕೂ ಹೆಚ್ಚು ಪೋಸ್ಟ್ ಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಮೆಟಾ ತಿಳಿಸಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 79(3)(ಬಿ) ಅಡಿಯಲ್ಲಿ I4C ನೀಡಿರುವ ವರದಿಗಳ ಆಧಾರದ ಮೇಲೆ ನಿರ್ಬಂಧಿಸಲಾದ ಪೋಸ್ಟ್ ಗಳಲ್ಲಿ AI ರಚಿತ ಮತ್ತು ತಿರುಚಲಾದ ವಿಷಯಗಳು, ಮಾನಹಾನಿ, ದ್ವೇಷಪೂರಿತ ಭಾಷಣ, ಹಿಂಸಾಚಾರ ಮತ್ತು ಪ್ರಚೋದನೆ, ಧಾರ್ಮಿಕ ತೀವ್ರವಾದ ಹಾಗೂ ವಂಚನೆ ಮತ್ತು ಹಗರಣಗಳಿಗೆ ಸಂಬಂಧಿಸಿದ ಪೋಸ್ಟ್ ಗಳು ಸೇರಿವೆ.

ಸ್ಥಳೀಯ ರಾಜಕಾರಣಿಗಳ ಕುರಿತಾದ AI ವೀಡಿಯೋಗಳನ್ನು ನಿರ್ಬಂಧಿಸಲು ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳು ಸಲ್ಲಿಸಿದ ನ್ಯಾಯಾಲಯದ ಆದೇಶಗಳಿಗೆ ಸ್ಪಂದಿಸಿ 22,000ಕ್ಕೂ ಹೆಚ್ಚು ಪೋಸ್ಟ್ ಗಳನ್ನು ನಿರ್ಬಂಧಿಸಲಾಗಿದೆ ಎಂದು ಮೆಟಾ ಹೇಳಿದೆ. ಉಳಿದ ಪೋಸ್ಟ್ ಗಳನ್ನು ಇತರ ಸ್ಥಳೀಯ ಕಾನೂನುಗಳ ಉಲ್ಲೇಖದಿಂದ ನಿರ್ಬಂಧಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಫೇಸ್ಬುಕ್ ಪೋಸ್ಟ್ ಅನ್ನು ತಾತ್ಕಾಲಿಕವಾಗಿ ತೆಗೆದುಹಾಕಿದ ನಂತರ, ಮೆಟಾದ ಹಿರಿಯ ಅಧಿಕಾರಿಗಳು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿದ್ದರು. ಈ ಭೇಟಿಯ ನಂತರ ಭಾರತದಲ್ಲಿ ಪೋಸ್ಟ್ ಗಳನ್ನು ತೆಗೆದುಹಾಕುವ ಮನವಿಗಳು ದಿಢೀರ್ ಹೆಚ್ಚಾಗಿವೆಯೇ ಎಂದು ಕೇಳಿದ್ದಕ್ಕೆ, ಈ ವರ್ಷದ ಅಂಕಿಅಂಶಗಳನ್ನು ತಿಂಗಳಾಂತ್ಯದಲ್ಲಿ ನವೀಕರಿಸಲಾಗುವುದು ಮತ್ತು ಆ ನಂತರವಷ್ಟೇ ಒಂದು ತೀರ್ಮಾನಕ್ಕೆ ಬರಲು ಸಾಧ್ಯ ಎಂದು ಮೆಟಾ ಉದ್ಯೋಗಿ ತಿಳಿಸಿದ್ದಾರೆ.

►ಸೆಕ್ಷನ್ 69ಎ ಅಡಿಯ ಭದ್ರತಾ ನಿಯಮಗಳನ್ನು ಮೀರುತ್ತಿದೆ ‘ಸಹಯೋಗ್’

ಪೋಸ್ಟ್ ಗಳನ್ನು ಡಿಲೀಟ್ ಮಾಡುವ ಅಥವಾ ನಿರ್ಬಂಧಿಸುವ ಪ್ರಕ್ರಿಯೆಯು ಕಾನೂನಿನ ಆಡಳಿತ ಮತ್ತು ಸಂವಿಧಾನದ ವಿಧಿ 19(1)(ಎ) ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗೆ ವಿರುದ್ಧವಾಗಿದೆ ಎಂದು ಸಾಫ್ಟ್ವೇರ್ ಫ್ರೀಡಂ ಲಾ ಸೆಂಟರ್ (SFLC) ಕಳವಳ ವ್ಯಕ್ತಪಡಿಸಿದೆ.

"ಖಾಸಗಿ ಸಂಸ್ಥೆಗಳ ವೇದಿಕೆಗಳು ಸರ್ಕಾರದ ರೀತಿಯಲ್ಲಿ ನೇರವಾಗಿ ಸಂವಿಧಾನಕ್ಕೆ ಬದ್ಧವಾಗಿರದಿದ್ದರೂ, ಅವುಗಳ ವಿಷಯ ನಿಯಂತ್ರಣ ನಿರ್ಧಾರಗಳು ಪ್ರಜಾಪ್ರಭುತ್ವದ ಆಶಯಗಳು ನಡೆಯುವ ಡಿಜಿಟಲ್ ಸ್ಥಳಗಳ ಮೇಲೆ ತೀವ್ರ ಪರಿಣಾಮ ಬೀರುತ್ತವೆ" ಎಂದು SFLC ಆಗಸ್ಟ್ 6ರಂದು ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.

ತನ್ನ ನಿಲುವನ್ನು ಸ್ಪಷ್ಟಪಡಿಸಲು SFLC.in ಕಾನೂನು ವ್ಯತ್ಯಾಸವೊಂದನ್ನು ಎತ್ತಿ ತೋರಿಸಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69ಎ ಅನುಸಾರ ನಿರ್ಬಂಧಿಸುವ ಆದೇಶಗಳು ಸೂಕ್ತ ಕಾರಣ, ಅಗತ್ಯ ಮತ್ತು ಸರಿಪ್ರಮಾಣವನ್ನು ಹೊಂದಿರಬೇಕು ಎಂಬ ಆಧಾರದ ಮೇಲೆ ಭಾರತದ ಸುಪ್ರೀಂ ಕೋರ್ಟ್ ಅದರ ಸಂವಿಧಾನಾತ್ಮಕತೆಯನ್ನು ಎತ್ತಿಹಿಡಿದಿತ್ತು ಎಂದು ಸಂಸ್ಥೆ ಹೇಳಿದೆ.

"ಆದರೆ 'ಸಹಯೋಗ್' ಪೋರ್ಟಲ್, ಸೆಕ್ಷನ್ 69ಎ ಅಡಿಯಲ್ಲಿರುವ ಯಾವುದೇ ಭದ್ರತಾ ನಿಯಮಗಳಿಲ್ಲದೆ ಆನ್‌ ಲೈನ್ ವಿಷಯಗಳನ್ನು ತೆಗೆದುಹಾಕಲು ಸಮಾನಾಂತರ ವ್ಯವಸ್ಥೆಯೊಂದನ್ನು ಜಾರಿಗೆ ತಂದಿದೆ. ಸಹಯೋಗ್ ಪೋರ್ಟಲ್ ಮೂಲಕ ಸಾಮಾಜಿಕ ಮಾಧ್ಯಮಗಳಿಗೆ ರವಾನೆಯಾಗುವ ನೋಟಿಸ್ ಗಳು ಬಳಕೆದಾರರಿಗೆ ಯಾವುದೇ ಮಾಹಿತಿ ನೀಡದೆ ಬಚ್ಚಿಡುತ್ತದೆ. ಇದರಿಂದ ಪೋಸ್ಟ್ ಡಿಲೀಟ್ ಆದವರು ಅದನ್ನು ಪ್ರಶ್ನಿಸಲು ಅಥವಾ ಕಾನೂನಾತ್ಮಕ ಪರಿಹಾರ ಕಂಡುಕೊಳ್ಳಲು ಯಾವುದೇ ಅವಕಾಶವಿಲ್ಲದಂತಾಗಿದೆ" ಎಂದು ಅದು ಆತಂಕ ವ್ಯಕ್ತಪಡಿಸಿದೆ.

2024ರಲ್ಲಿ ಪ್ರಾರಂಭವಾದ ಸಹಯೋಗ್ ಪೋರ್ಟಲ್, ಆನ್‌ ಲೈನ್ನಲ್ಲಿರುವ ಕಾನೂನುಬಾಹಿರ ವಿಷಯಗಳನ್ನು ತೆಗೆದುಹಾಕಲು ಅಥವಾ ನಿರ್ಬಂಧಿಸಲು ಐಟಿ ಕಾಯ್ದೆ 2000ರ ಅಡಿಯಲ್ಲಿ ಸಾಮಾಜಿಕ ಮಾಧ್ಯಮಗಳಿಗೆ ನೋಟಿಸ್ ಕಳುಹಿಸಲು ಸರ್ಕಾರ ಮತ್ತು ಅದರ ಸಂಸ್ಥೆಗಳಿಗೆ ಅವಕಾಶ ನೀಡುತ್ತದೆ. ಹೆಚ್ಚುವರಿಯಾಗಿ, ಐಟಿ ನಿಯಮಗಳು 2021ಕ್ಕೆ ಫೆಬ್ರವರಿ 20, 2026ರಿಂದ ಜಾರಿಗೆ ಬರುವಂತೆ ತಿದ್ದುಪಡಿ ತರಲಾಗಿದ್ದು, ನ್ಯಾಯಾಲಯದ ಆದೇಶ ಬಂದ ಮೂರು ಗಂಟೆಗಳ ಒಳಗೆ ಕಾನೂನುಬಾಹಿರ ಮಾಹಿತಿಯನ್ನು ತೆಗೆದುಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ.

ಸಾಮಾಜಿಕ ಮಾಧ್ಯಮ ಸಂಸ್ಥೆಗಳು ತಮ್ಮ ನಿಯಂತ್ರಣ ಪ್ರಕ್ರಿಯೆಗಳನ್ನು ಪಾರದರ್ಶಕವಾಗಿಡಬೇಕು. ಕಠಿಣ ಕ್ರಮ ಕೈಗೊಳ್ಳುವ ಮುನ್ನ ನೋಟಿಸ್ ನೀಡುವುದು, ಸೂಕ್ತ ಕಾರಣಗಳನ್ನು ತಿಳಿಸುವುದು ಹಾಗೂ ಮರುಪರಿಶೀಲನೆಗೆ ಅವಕಾಶ ನೀಡುವಂತಹ ರಕ್ಷಣಾತ್ಮಕ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ಸಂಸ್ಥೆ ಆಗ್ರಹಿಸಿದೆ.

ಪೋಸ್ಟ್ ತೆಗೆದುಹಾಕಲು ನೀಡಿದ ಆದೇಶಗಳು, ಅದಕ್ಕಿರುವ ಕಾರಣಗಳು ಮತ್ತು ಕಾನೂನು ಸಮರ್ಥನೆಗಳನ್ನು ಬಹಿರಂಗಪಡಿಸಬೇಕು ಹಾಗೂ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಪಡೆಯುವ ನೋಟಿಸ್ ಗಳನ್ನು ಸಂತ್ರಸ್ತ ಬಳಕೆದಾರರಿಗೆ ರವಾನಿಸಬೇಕು ಎಂದು SFLC ಒತ್ತಾಯಿಸಿದೆ. ಇದರೊಂದಿಗೆ, ವಿಷಯಗಳ ತೆರವು ಮತ್ತು ಖಾತೆಗಳ ನಿರ್ಬಂಧಕ್ಕೆ ಸಂಬಂಧಿಸಿದಂತೆ ಬಂದ ಸರ್ಕಾರಿ ಮನವಿಗಳು ಅಥವಾ ಆದೇಶಗಳ ಸಂಖ್ಯೆ, ಸ್ವರೂಪ, ಮೂಲ ಮತ್ತು ಫಲಿತಾಂಶಗಳ ಕುರಿತು ಸಂಸ್ಥೆಗಳು ಹೆಚ್ಚಿನ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಅದು ಹೇಳಿದೆ.

 

►'ಸಹಯೋಗ್' ವಿರುದ್ಧದ ಅರ್ಜಿ ವಜಾ, ಮೇಲ್ಮನವಿ ಸಲ್ಲಿಕೆ

ಸೆಕ್ಷನ್ 79(3)(ಬಿ) ಅಡಿಯಲ್ಲಿ ಸರ್ಕಾರ ನೋಟಿಸ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ 'ಎಕ್ಸ್' ಸಂಸ್ಥೆಯು ಕಾನೂನು ಹೋರಾಟವನ್ನು ಆರಂಭಿಸಿದೆ.

'ಎಕ್ಸ್ ಕಾರ್ಪ್' ಸಂಸ್ಥೆಯು ಕೇಂದ್ರ ಸರ್ಕಾರದ ಸಹಯೋಗ್ ಪೋರ್ಟಲ್ ಹಾಗೂ ಪೋಸ್ಟ್ ಗಳನ್ನು ತೆಗೆದುಹಾಕಲು ಸೆಕ್ಷನ್ 79(3)(ಬಿ) ಬಳಕೆಯಾಗುತ್ತಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಬಾಗಿಲು ತಟ್ಟಿತ್ತು. ಈ ಪ್ರಕ್ರಿಯೆಯು ಐಟಿ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ನೀಡಲಾಗಿರುವ ಸುರಕ್ಷತಾ ನಿಯಮಗಳನ್ನು ಮೀರಿ ನಡೆಯುತ್ತಿದೆ ಎಂದು ವಾದಿಸಿತ್ತು. ಅಲ್ಲದೆ, ಪೋಸ್ಟ್ ಗಳನ್ನು ಡಿಲೀಟ್ ಮಾಡಲು ಆದೇಶ ಹೊರಡಿಸುವಾಗ ಸರ್ಕಾರಿ ಅಧಿಕಾರಿಗಳು ಒಂದೇ ರೀತಿಯ ಮಾನದಂಡಗಳನ್ನು ಅನುಸರಿಸುತ್ತಿಲ್ಲ ಎಂದು 'ಎಕ್ಸ್' ಸಂಸ್ಥೆಯು ಕರ್ನಾಟಕ ಹೈಕೋರ್ಟ್ ಮುಂದೆ ಪ್ರತಿಪಾದಿಸಿತ್ತು.

2025ರ ಸೆಪ್ಟೆಂಬರ್ ನಲ್ಲಿ ಕರ್ನಾಟಕ ಹೈಕೋರ್ಟ್ 'ಎಕ್ಸ್ ಕಾರ್ಪ್' ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತಲ್ಲದೆ, ಸಹಯೋಗ್ ಪೋರ್ಟಲ್ ಮತ್ತು ಪೋಸ್ಟ್ ಗಳನ್ನು ತೆರವುಗೊಳಿಸುವ ವ್ಯವಸ್ಥೆಯ ಕುರಿತು ಕೇಂದ್ರ ಸರ್ಕಾರದ ನಿಲುವನ್ನು ಎತ್ತಿಹಿಡಿಯಿತು. ಭಾರತದಲ್ಲಿ ಕಾರ್ಯಾಚರಣೆ ನಡೆಸುವ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ದೇಶದ ನಿಯಂತ್ರಣ ವ್ಯವಸ್ಥೆಗೆ ಬದ್ಧವಾಗಿರಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿತು.

ನ್ಯಾಯಾಲಯದ ಈ ತೀರ್ಪನ್ನು ಪ್ರಶ್ನಿಸಿ 'ಎಕ್ಸ್' ಸಂಸ್ಥೆ ನಂತರ ಮೇಲ್ಮನವಿ ಸಲ್ಲಿಸಿತು. ಮೇಲ್ಮನವಿಯಲ್ಲಿ, ಸೆಕ್ಷನ್ 79(3)(ಬಿ) ಅಡಿಯ ಪ್ರಕ್ರಿಯೆಯು ಬೃಹತ್ ಸಂಖ್ಯೆಯ ಅಧಿಕಾರಿಗಳಿಗೆ ತಮ್ಮಿಷ್ಟದಂತೆ ಕಾನೂನುಬಾಹಿರ ಎಂದು ತೋರುವ ವಿಷಯಗಳನ್ನು ತೆಗೆದುಹಾಕಲು ಅವಕಾಶ ನೀಡುತ್ತದೆ ಎಂದು 'ಎಕ್ಸ್' ವಾದಿಸಿದೆ. ನಿರ್ಬಂಧಿಸುವ ಆದೇಶಗಳು ಸೆಕ್ಷನ್ 69ಎ ಅಡಿಯಲ್ಲಿರುವ ಭದ್ರತಾ ನಿಯಮಗಳಿಗೆ ಬದ್ಧವಾಗಿರಬೇಕು ಎಂದು ಒತ್ತಾಯಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ತಾವು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಸಂಸ್ಥೆ ಮುಂಚಿತವಾಗಿಯೇ ತಿಳಿಸಿತ್ತು.

ಯಾವುದೇ ಸಾಂಪ್ರದಾಯಿಕ ಮಾಧ್ಯಮ ಸಂಸ್ಥೆಯ ಬೆಂಬಲವಿಲ್ಲದ ಸ್ವತಂತ್ರ ಹಾಗೂ ಫ್ರೀಲ್ಯಾನ್ಸ್ ಪತ್ರಕರ್ತರು ಮತ್ತು ಕಂಟೆಂಟ್ ಕ್ರಿಯೇಟರ್ಸ್ಗೆ ಸಾಮಾಜಿಕ ಮಾಧ್ಯಮವೇ ಸುದ್ದಿ ಪ್ರಕಟಿಸಲು ಪ್ರಮುಖ ವೇದಿಕೆಯಾಗಿರುವುದರಿಂದ ಈ ವಿಚಾರ ಅವರಿಗೆ ಅತ್ಯಂತ ನಿರ್ಣಾಯಕವಾಗಿದೆ.

ಸೌಜನ್ಯ: newslaundry.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅಶ್ವಿನ್ ಕುಮಾರ್ ಸಿಂಗ್ - newslaundry. com ವರದಿ

contributor

Similar News