'ಈಗ ಖರೀದಿಸಿ, ಆಮೇಲೆ ಪಾವತಿಸಿ' ಟ್ರೆಂಡ್: Gen Z ಸಾಲದ ಹೊರೆ ಹೆಚ್ಚಳಕ್ಕೆ RBI ಕಳವಳ
ಸಾಂದರ್ಭಿಕ ಚಿತ್ರ (AI)
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಗೃಹಬಳಕೆಯ ಒಟ್ಟು ಸಾಲದ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಈ ಸಾಲಗಳ ಸ್ವರೂಪವೇ ಹಣಕಾಸು ವಲಯದ ನಿಯಂತ್ರಕರನ್ನು ಹೆಚ್ಚು ಚಿಂತೆಗೀಡುಮಾಡಿದೆ. ಮನೆ ಖರೀದಿ ಹೊರತುಪಡಿಸಿದ ಇತರ ಚಿಲ್ಲರೆ ಸಾಲಗಳು ಅಂದರೆ ಹೆಚ್ಚಾಗಿ ವೈಯಕ್ತಿಕ ಖರ್ಚುಗಳಿಗಾಗಿ ಪಡೆಯುವ ಸಾಲಗಳು ಈಗ ಒಟ್ಟು ಸಾಲದ ಅರ್ಧಕ್ಕಿಂತಲೂ ಹೆಚ್ಚಿನ ಪಾಲನ್ನು ಆಕ್ರಮಿಸಿಕೊಂಡಿವೆ. ಇವು ಗೃಹ, ಕೃಷಿ ಮತ್ತು ಉದ್ಯಮ ಸಾಲಗಳಿಗಿಂತಲೂ ವೇಗವಾಗಿ ಬೆಳೆಯುತ್ತಿದ್ದು, ನೀತಿ ನಿರೂಪಕರ ಆಂತರಿಕ ಚರ್ಚೆಗಳಲ್ಲೂ ಈ ಕುರಿತು ಕಳವಳ ವ್ಯಕ್ತವಾಗಿದೆ.
ಹಣಕಾಸು ಸಚಿವಾಲಯದ ಡೇಟಾ ಪ್ರಕಾರ, 2025ರ ಮಾರ್ಚ್ ನಲ್ಲಿದ್ದ ಶೇ. 54.9ರಷ್ಟಿದ್ದ ಗೃಹಬಳಕೆ ಅಲ್ಲದ ಚಿಲ್ಲರೆ ಸಾಲಗಳ ಪಾಲು, 2026ರ ಮಾರ್ಚ್ ವೇಳೆಗೆ ಒಟ್ಟು ಕುಟುಂಬ ಸಾಲಗಳ ಶೇ. 58.4ಕ್ಕೆ ಏರಿಕೆಯಾಗಿದೆ. ಪ್ರತಿಯೊಬ್ಬ ಸಾಲಗಾರನ ಮೇಲಿರುವ ಸರಾಸರಿ ಸಾಲದ ಮೊತ್ತವು 2018ರ ಮಾರ್ಚ್ ಅಂತ್ಯದಲ್ಲಿದ್ದ 3.41 ಲಕ್ಷ ರೂಪಾಯಿಯಿಂದ 2025ರ ಮಾರ್ಚ್ ಅಂತ್ಯದ ವೇಳೆಗೆ 4.78 ಲಕ್ಷ ರೂಪಾಯಿಗೆ ಜಿಗಿದಿದೆ.
ವೈಯಕ್ತಿಕ ಸಾಲದ ಕೆಲವು ವಿಭಾಗಗಳಲ್ಲಿ ಅತ್ಯಂತ ವೇಗದ ಬೆಳವಣಿಗೆ ಕಂಡುಬಂದಿದೆ. ಸಂಸತ್ತಿನಲ್ಲಿ ಹಂಚಿಕೊಳ್ಳಲಾದ ಮಾಹಿತಿಯ ಪ್ರಕಾರ, ಚಿನ್ನದ ಆಭರಣಗಳ ಮೇಲಿನ ಸಾಲದ ಮೊತ್ತವು 2022ರ ಮಾರ್ಚ್ ನಲ್ಲಿದ್ದ 74,738 ಕೋಟಿ ರೂಪಾಯಿಯಿಂದ 2026ರ ಮಾರ್ಚ್ ವೇಳೆಗೆ 4.61 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಇತರ ವೈಯಕ್ತಿಕ ಸಾಲಗಳ ಪ್ರಮಾಣವು 9.02 ಲಕ್ಷ ಕೋಟಿ ರೂಪಾಯಿಯಿಂದ 17.32 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ.
ಭಾರತೀಯ ಹಣಕಾಸು ವ್ಯವಸ್ಥೆಗೆ ಕುಟುಂಬಗಳ ಸಾಲದಿಂದ ಎದುರಾಗುವ ಅಪಾಯಗಳು ಪ್ರಸ್ತುತ ನಿಯಂತ್ರಣದಲ್ಲಿದ್ದರೂ, ವಿಶೇಷವಾಗಿ ಕಡಿಮೆ ಕ್ರೆಡಿಟ್ ರೇಟಿಂಗ್ ಹೊಂದಿರುವ ಸಾಲಗಾರರ ಸಾಲದ ಶೇಖರಣೆಯನ್ನು "ಹತ್ತಿರದಿಂದ ಮೇಲ್ವಿಚಾರಣೆ" ಮಾಡುವ ಅಗತ್ಯವಿದೆ ಎಂದು RBI ಎಚ್ಚರಿಸಿದೆ. 2026ರ ಮಾರ್ಚ್ ಅಂತ್ಯದ ವೇಳೆಗೆ ಭದ್ರತೆ ಇರುವ ಚಿಲ್ಲರೆ ಸಾಲಗಳಲ್ಲಿನ ಒಟ್ಟು ಅನುತ್ಪಾದಕ ಆಸ್ತಿ ಪ್ರಮಾಣ ಶೇ. 0.7ರಷ್ಟಿದ್ದರೆ, ಭದ್ರತೆ ಇಲ್ಲದ ಚಿಲ್ಲರೆ ಸಾಲಗಳಲ್ಲಿ ಇದು ಶೇ. 1.7ರಷ್ಟಿದೆ. "ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಆರ್ಥಿಕ ಪರಿಸ್ಥಿತಿ ಕ್ಷೀಣಿಸಿ ಸಾಲಗಾರರ ಹಣದ ಹರಿವಿನ ಮೇಲೆ ಪರಿಣಾಮ ಬೀರಿದರೆ ಸಾಲದ ಗುಣಮಟ್ಟ ಹದಗೆಡಬಹುದು. ಹೀಗಾಗಿ ಈ ವಲಯಗಳ ಮೇಲಿನ ಸಾಲದ ಪ್ರಭಾವವನ್ನು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ" ಎಂದು RBI ತನ್ನ ಇತ್ತೀಚಿನ ಹಣಕಾಸು ಸ್ಥಿರತೆ ವರದಿಯಲ್ಲಿ ತಿಳಿಸಿದೆ.
ಭದ್ರತೆ ಇಲ್ಲದ ವೈಯಕ್ತಿಕ ಸಾಲಗಳು ಕಳವಳಕಾರಿ ವಿಷಯವಾಗಿ ಮುಂದುವರಿದಿವೆ. 50,000 ರೂಪಾಯಿಗಿಂತ ಕಡಿಮೆ ಮೊತ್ತದ ಸಣ್ಣ ಪ್ರಮಾಣದ ವೈಯಕ್ತಿಕ ಸಾಲಗಳ ವಿಭಾಗದಲ್ಲಿ, ಶೇ. 41.6ರಷ್ಟು ಸಾಲ ವಿಸ್ತರಣೆಯೊಂದಿಗೆ ಫಿನ್ಟೆಕ್ (Fintech) ಕಂಪೆನಿಗಳು ಶೇ. 56.8ರಷ್ಟು ಮಾರುಕಟ್ಟೆ ಪಾಲನ್ನು ಪಡೆದುಕೊಂಡಿವೆ. ಇದು ಒಟ್ಟಾರೆ ವಿಭಾಗದ ಬೆಳವಣಿಗೆಯಾದ ಶೇ. 20.1ಕ್ಕಿಂತ ತೀರಾ ಹೆಚ್ಚಾಗಿದೆ. 2026ರ ಮಾರ್ಚ್ ವೇಳೆಗೆ ಈ ಸಾಲಗಳ ಮರುಪಾವತಿ ಸುಸ್ತಿದಾರರ ಪ್ರಮಾಣ ಶೇ. 6.4ರಷ್ಟಿತ್ತು. ಫಿನ್ಟೆಕ್ ಸಂಸ್ಥೆಗಳ ಒಟ್ಟು ಸಾಲಗಳಲ್ಲಿ ಶೇ. 70.5ರಷ್ಟು ಸಾಲಗಳು ಭದ್ರತೆ ಇಲ್ಲದವುಗಳಾಗಿದ್ದು, ಇವುಗಳಲ್ಲಿ ಸುಮಾರು ಅರ್ಧದಷ್ಟು ಸಾಲಗಳನ್ನು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ನೀಡಲಾಗಿದೆ.
ಸಿಬಿಲ್ ಟ್ರಾನ್ಸ್ಯೂನಿಯನ್ ನ ಇತ್ತೀಚಿನ ಡೇಟಾ ಪ್ರಕಾರ, ಸಾಲ ಪಡೆಯಲು ಅರ್ಹರಾಗಿರುವ ಭಾರತೀಯ ಜನಸಂಖ್ಯೆಯಲ್ಲಿ ಸಾಲ ಸಕ್ರಿಯವಾಗಿರುವವರ ಪಾಲು ದಶಕದ ಹಿಂದೆ ಇದ್ದ ಶೇ. 11ರಿಂದ ಈಗ ಶೇ. 28ಕ್ಕೆ ಏರಿದೆ. ಸಾಲ ಪಡೆಯಲು ಅರ್ಹರಿರುವ 89 ಕೋಟಿ ಜನರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಕಳೆದ ಒಂದು ವರ್ಷದಲ್ಲಿ ಸಾಲ ಪಡೆದಿದ್ದಾರೆ, ಸಾಲದ ಖಾತೆ ಹೊಂದಿದ್ದಾರೆ ಅಥವಾ ಇಎಂಐ ಹಾಗೂ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುತ್ತಿದ್ದಾರೆ.
ಈ ಸಾಲ ಸಕ್ರಿಯ ಜನಸಂಖ್ಯೆಯ ಸುಮಾರು ಅರ್ಧದಷ್ಟು ಜನರು ವೈಯಕ್ತಿಕ ಖರ್ಚಿನ ಸಾಲಗಳನ್ನು (ಕ್ರೆಡಿಟ್ ಕಾರ್ಡ್, ವೈಯಕ್ತಿಕ ಸಾಲ ಅಥವಾ ಬಾಳಿಕೆ ಬರುವ ಗ್ರಾಹಕ ವಸ್ತುಗಳ ಸಾಲ) ಹೊಂದಿದ್ದರೆ, ಸುಮಾರು ಶೇ. 10ರಷ್ಟು ಜನರು ಉದ್ಯಮ ಅಥವಾ ವಾಣಿಜ್ಯ ಸಾಲಗಳನ್ನು ಹೊಂದಿದ್ದಾರೆ. 2017 ಮತ್ತು 2024ರ ನಡುವೆ ವೈಯಕ್ತಿಕ ಖರ್ಚಿನ ಸಾಲ ಹಾಗೂ ವಾಣಿಜ್ಯ ಸಾಲ ಹೊಂದಿರುವ ಗ್ರಾಹಕರ ಸಂಖ್ಯೆ ಕ್ರಮವಾಗಿ ನಾಲ್ಕು ಪಟ್ಟು ಮತ್ತು ಹತ್ತು ಪಟ್ಟು ಹೆಚ್ಚಾಗಿದೆ. Gen Z ಸೇರಿದಂತೆ ಕಿರಿಯ ವಯಸ್ಸಿನ ಗ್ರಾಹಕರು ಈ ಸಾಲಗಳನ್ನು ಹೆಚ್ಚಾಗಿ ಪಡೆದಿದ್ದು, ಇವುಗಳ ಮರುಪಾವತಿ ಅವಧಿಯು ಸಾಮಾನ್ಯವಾಗಿ ಮೂರು ವರ್ಷಗಳಿಗಿಂತ ಕಡಿಮೆಯಿರುತ್ತದೆ.
ಯುವ ಸಾಲಗಾರರು ಮತ್ತು ಹಣಕಾಸಿನ ಒತ್ತಡ
"ಸಾಲದ ಪ್ರಗತಿಯನ್ನು ಪ್ರೋತ್ಸಾಹಿಸುವಾಗ, ನಾವು ಅಗತ್ಯ ಆಧಾರಿತ ಸಾಲಗಳಿಗೆ ಬೆಂಬಲ ನೀಡುತ್ತಿದ್ದೇವೆಯೇ ಎಂಬುದನ್ನು ನಿರಂತರವಾಗಿ ಗಮನಿಸಬೇಕಿದೆ. ಮತ್ತೊಂದೆಡೆ, ಸಾಲ ಮರುಪಾವತಿ ಮಾಡುವ ಸಾಮರ್ಥ್ಯವನ್ನು, ವಿಶೇಷವಾಗಿ ಸಾಲದ ಹೊರೆ ಹೆಚ್ಚಾಗಿರುವ ಕಿರಿಯ ಸಾಲಗಾರರ ವಿಭಾಗದಲ್ಲಿ ಪರಿಶೀಲಿಸಬೇಕಿದೆ. ಉದಾಹರಣೆಗೆ, ವೈಯಕ್ತಿಕ ಖರ್ಚಿನ ಸಾಲಗಳ ವಿಷಯದಲ್ಲಿ, ಸಾಲ ನೀಡುವ ಸಂಸ್ಥೆಗಳಿಗೆ ಗ್ರಾಹಕರ ಆದಾಯದ ಪೂರ್ಣ ಮಾಹಿತಿಯನ್ನು ಪರಿಶೀಲಿಸಲು ಸಾಧ್ಯವಾಗದಿರಬಹುದು. ಹೀಗಾಗಿ ಸಾಲದ ಹೊರೆ ಹೆಚ್ಚಾದಾಗ ಗ್ರಾಹಕರು ಮರುಪಾವತಿ ಮಾಡುವ ಸ್ಥಿತಿಯಲ್ಲಿರುತ್ತಾರೋ ಇಲ್ಲವೋ ಎಂಬುದು ಮುಖ್ಯವಾಗುತ್ತದೆ" ಎಂದು ಕ್ರೆಡಿಟ್ ಬ್ಯೂರೋದ ಉನ್ನತ ಅಧಿಕಾರಿಯೊಬ್ಬರು ಹೇಳಿರುವುದಾಗಿ The Indian Express ವರದಿ ಉಲ್ಲೇಖಿಸಿದೆ.
ಮಿತಿಮೀರಿ ಸಾಲ ಪಡೆದ ಗ್ರಾಹಕರ ಪಾಲು 2017ರ ಆರ್ಥಿಕ ವರ್ಷದಲ್ಲಿದ್ದ ಶೇ. 5ರಿಂದ 2024ರ ಆರ್ಥಿಕ ವರ್ಷದ ವೇಳೆಗೆ ಮೂರು ಪಟ್ಟು ಅಂದರೆ ಶೇ. 18ಕ್ಕೆ ಏರಿಕೆಯಾಗಿತ್ತು. ಉದ್ಯಮದ ಸೂಕ್ತ ಮಧ್ಯಸ್ಥಿಕೆಯ ನಂತರ 2026ರ ಆರ್ಥಿಕ ವರ್ಷದಲ್ಲಿ ಇದು ಶೇ. 15ಕ್ಕೆ ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆ. ಆದರೆ, ಈ ಅತಿಯಾದ ಸಾಲದ ಪ್ರವೃತ್ತಿ ಕಿರಿಯ ವಯಸ್ಸಿನ ಗ್ರಾಹಕರಲ್ಲೇ ಹೆಚ್ಚು ಕಂಡುಬಂದಿದೆ. ದೇಶದ ಸಕ್ರಿಯ ಸಾಲಗಾರರ ಒಟ್ಟು ಸಂಖ್ಯೆಯಲ್ಲಿ ಇವರ ಪಾಲು 2017ರಲ್ಲಿದ್ದ ಶೇ. 33ರಿಂದ 2026ರ ವೇಳೆಗೆ ಶೇ. 39ಕ್ಕೆ ಏರಿಕೆಯಾಗಿದೆ.
ಭದ್ರತೆ ಇಲ್ಲದ ಚಿಲ್ಲರೆ ಸಾಲ ನೀಡಿಕೆ ಸದ್ಯ ಕೊಂಚ ಕಡಿಮೆಯಾಗಿದ್ದರೂ (ಇದು ಒಟ್ಟು ಚಿಲ್ಲರೆ ಸಾಲಗಳ ಶೇ. 25 ಮತ್ತು ಒಟ್ಟು ಮುಂಗಡಗಳ ಶೇ. 8.3ರಷ್ಟಿದೆ), ಒಟ್ಟಾರೆ ಚಿಲ್ಲರೆ ಸಾಲಗಳ ವಿಭಾಗಕ್ಕೆ ಹೋಲಿಸಿದರೆ ಇದರ ಆಸ್ತಿ ಗುಣಮಟ್ಟ ಕ್ಷೀಣಿಸಿದೆ. 2025ರ ಮಾರ್ಚ್ ನಲ್ಲಿ ಶೇ. 1.2ರಷ್ಟಿದ್ದ ಇದರ ಒಟ್ಟು ಅನುತ್ಪಾದಕ ಆಸ್ತಿ ಪ್ರಮಾಣವು ಹೆಚ್ಚಾಗಿ, ಶೇ. 1.8ಕ್ಕೆ ತಲುಪಿದೆ. ಖಾಸಗಿ ವಲಯದ ಬ್ಯಾಂಕ್ ಗಳಲ್ಲಿ ಈ ಒತ್ತಡ ಹೆಚ್ಚು ಎದ್ದುಕಾಣುತ್ತಿದೆ.
ಈ ಪ್ರವೃತ್ತಿಯು ಆಸ್ತಿ ಸೃಷ್ಟಿಗಿಂತ ತಕ್ಷಣದ ಖರ್ಚುಗಳಿಗಾಗಿ ಸಾಲ ಪಡೆಯುವ ಮನೋಭಾವ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. RBI ನೋಂದಾಯಿತ ಕ್ರೆಡಿಟ್ ಬ್ಯೂರೋ 'CRIF ಹೈ ಮಾರ್ಕ್ ನೀಡಿದ ಡೇಟಾ ಪ್ರಕಾರ, ಕಳೆದ ಆರ್ಥಿಕ ವರ್ಷದಲ್ಲಿ ಬಾಕಿ ಇರುವ ಕ್ರೆಡಿಟ್ ಕಾರ್ಡ್ ಸಾಲದ ಮೊತ್ತ 3 ಲಕ್ಷ ಕೋಟಿ ರೂಪಾಯಿ ದಾಟಿದೆ. ಅದೇ ಸಮಯದಲ್ಲಿ, 90ರಿಂದ 360 ದಿನಗಳ ಕಾಲ ಸಾಲ ಮರುಪಾವತಿಯಾಗದ ಸುಸ್ತಿದಾರರ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇ. 40ಕ್ಕಿಂತ ಹೆಚ್ಚು ಏರಿಕೆಯಾಗಿದೆ.
"ವೈಯಕ್ತಿಕ ಖರ್ಚುಗಳಿಗಾಗಿ ಸಾಲ ಪಡೆಯುವುದು ಹೆಚ್ಚುತ್ತಿರುವುದು ನೀತಿ ನಿರೂಪಕರು ಮತ್ತು ಬ್ಯಾಂಕಿಂಗ್ ಕ್ಷೇತ್ರದ ಚರ್ಚೆಗಳಲ್ಲಿ ಪದೇಪದೇ ಪ್ರಸ್ತಾಪವಾಗುತ್ತಿದೆ. ವಿಶೇಷವಾಗಿ 2022 ಮತ್ತು 2023ರಲ್ಲಿ ಇದು ತೀವ್ರ ಕಳವಳಕ್ಕೆ ಕಾರಣವಾಗಿತ್ತು. ಈಗಲೂ ಈ ಸಂಖ್ಯೆಗಳು ಹೆಚ್ಚುತ್ತಿರುವುದು ಕಳವಳಕಾರಿಯಾಗಿಯೇ ಉಳಿದಿದೆ. ಆದರೆ, ಇದರಲ್ಲಿ ಒಳಗೊಂಡಿರುವ ಸಾಲದ ಮೊತ್ತವು ತುಲನಾತ್ಮಕವಾಗಿ ಕಡಿಮೆಯಿರುವುದರಿಂದ, ಇದರ ಪ್ರಮಾಣವು ಇನ್ನು ಅಪಾಯಕಾರಿ ಮಟ್ಟ ಮುಟ್ಟಿಲ್ಲ ಎಂದೇ ನೋಡಲಾಗುತ್ತಿದೆ" ಎಂದು ಹೆಸರು ಹೇಳಲು ಬಯಸದ ಅರ್ಥಶಾಸ್ತ್ರಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
►ಮ್ಯೂಸಿಕ್ ಫೆಸ್ಟಿವಲ್, ಪ್ರವಾಸೋದ್ಯಮ
ಬ್ಯಾಂಕ್ ಆಫ್ ಬರೋಡಾದ ಅರ್ಥಶಾಸ್ತ್ರಜ್ಞರಾದ ದೀಪಾನ್ವಿತಾ ಮಜುಂದಾರ್ ಮತ್ತು ಜಾನ್ಹವಿ ಪ್ರಭಾಕರ್ ಅವರ ಅಂದಾಜಿನ ಪ್ರಕಾರ, ಕಳೆದ 24 ತಿಂಗಳುಗಳಲ್ಲಿ ನಡೆದ ಸಂಗೀತ ಕಚೇರಿಗಳಿಂದ 1,600 ರಿಂದ 2,000 ಕೋಟಿ ರೂಪಾಯಿಯಷ್ಟು ವೆಚ್ಚವಾಗಿದೆ. ಈ ಸಂಗೀತ ಕಚೇರಿಗಳಿಗೆ ಆಗಮಿಸುವವರಲ್ಲಿ Gen Z ಗ್ರಾಹಕರೇ ಹೆಚ್ಚಾಗಿದ್ದು, ಕೆಲವು ಸಂದರ್ಭಗಳಲ್ಲಿ ಈ ಖರ್ಚುಗಳಿಗೆ ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಗಳನ್ನು ಬಳಸಲಾಗಿದೆ.
ಏರ್ಬಿಎನ್ಬಿ (Airbnb) ಸಂಸ್ಥೆಯ 2026ರ ಜನವರಿಯ 'ಅನುಭವ ಆಧಾರಿತ ಪ್ರವಾಸ ನೋಟ'ಗಳ ವರದಿಯೂ Gen Z ಪೀಳಿಗೆಯಲ್ಲಿ ಕಂಡುಬರುತ್ತಿರುವ ಈ ಸಂಗೀತ ಆಧಾರಿತ ಪ್ರವಾಸದ ಟ್ರೆಂಡ್ ಅನ್ನು ಎತ್ತಿಹಿಡಿದಿದೆ. ಇದರ ಪ್ರಕಾರ, ಶೇ. 62ರಷ್ಟು ಯುವಕರು ಈ ವರ್ಷ ಸಂಗೀತ ಕಚೇರಿಗಳು ಮತ್ತು ಮ್ಯೂಸಿಕ್ ಫೆಸ್ಟಿವಲ್ ಗಳಿಗಾಗಿಯೇ ಪ್ರವಾಸ ಯೋಜಿಸಿದ್ದಾರೆ. ಇನ್ನು ಶೇ. 76ರಷ್ಟು ಮಂದಿ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮೊದಲ ಬಾರಿಗೆ ಯಾವುದಾದರೂ ನಗರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇತ್ತೀಚೆಗೆ ನಡೆಸಿದ ಕಾರ್ಯಕ್ರಮ ಆಧಾರಿತ ಪ್ರವಾಸಕ್ಕಾಗಿ ಪ್ರತಿಯೊಬ್ಬರು ಸರಾಸರಿ 51,000 ರೂಪಾಯಿ ಖರ್ಚು ಮಾಡಿದ್ದಾರೆ. 10 ಯುವ ಪ್ರವಾಸಿಗರಲ್ಲಿ ಆರು ಮಂದಿ ತಮ್ಮ ಮಾಸಿಕ ಆದಾಯದ ಶೇ. 21ರಿಂದ 40ರಷ್ಟು ಹಣವನ್ನು ಸಂಗೀತ ಆಧಾರಿತ ಪ್ರವಾಸಗಳಿಗೆ ವಿನಿಯೋಗಿಸಲು ಸಿದ್ಧರಿದ್ದರೆ, 10ರಲ್ಲಿ ಒಬ್ಬರು ತಮ್ಮ ಆದಾಯದ ಅರ್ಧದಷ್ಟು ಹಣವನ್ನು ಖರ್ಚು ಮಾಡಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.
ಲೈಫ್ಸ್ಟೈಲ್ ಉತ್ತಮಪಡಿಸಲಿರುವ ಖರೀದಿಗಳು ಮತ್ತು ಅನುಭವಗಳಿಗಾಗಿ ಗ್ರಾಹಕರು ತಮ್ಮ ಉಳಿತಾಯದ ಹಣಕ್ಕಿಂತ ಹೆಚ್ಚಾಗಿ ಸಾಲದ ಹಣವನ್ನೇ ಬಳಸುತ್ತಿದ್ದಾರೆ. ಮುತ್ತೋಟ್ ಫೈನಾನ್ಸ್ ವರದಿಯ ಪ್ರಕಾರ, 2025ರ ಮೊದಲಾರ್ಧದಲ್ಲಿ ಭಾರತದಲ್ಲಿ ಪಡೆದ ಒಟ್ಟು ವೈಯಕ್ತಿಕ ಸಾಲಗಳಲ್ಲಿ ಶೇ. 25ಕ್ಕಿಂತ ಹೆಚ್ಚು ಸಾಲಗಳನ್ನು ಪ್ರವಾಸಕ್ಕಾಗಿ ಪಡೆಯಲಾಗಿದೆ. ಇದು ಮಿಲೇನಿಯಲ್ಸ್ ಮತ್ತು Gen Z ಪೀಳಿಗೆಯಲ್ಲಿ "ಈಗ ಅನುಭವಿಸಿ, ಆಮೇಲೆ ಪಾವತಿಸಿ" ಎಂಬ ಮನೋಭಾವ ಹೆಚ್ಚುತ್ತಿರುವುದನ್ನು ತೋರಿಸುತ್ತದೆ.
ಯುವ ಪೀಳಿಗೆ ಎಷ್ಟು ಬೇಗ ಸಾಲದ ವ್ಯವಸ್ಥೆಗೆ ಕಾಲಿಡುತ್ತಿದೆ ಎಂಬುದನ್ನು ಪೈಸಾಬಝಾರ್ ವಿಶ್ಲೇಷಣೆ ಬಹಿರಂಗಪಡಿಸಿದೆ. 1960 ಮತ್ತು 70ರ ದಶಕದಲ್ಲಿ ಜನಿಸಿದವರು ಸಾಮಾನ್ಯವಾಗಿ 30ರ ಹರೆಯದ ಕೊನೆಯಲ್ಲಿ ಅಥವಾ 40ರ ಆರಂಭದಲ್ಲಿ ಮನೆ ಅಥವಾ ವಾಹನ ಸಾಲಗಳಂತಹ ಭದ್ರತೆಯಿರುವ ಸಾಲಗಳ ಮೂಲಕ ತಮ್ಮ ಮೊದಲ ಸಾಲವನ್ನು ಪಡೆಯುತ್ತಿದ್ದರು. ಆದರೆ, 1990ರ ದಶಕದಲ್ಲಿ ಜನಿಸಿದವರು ತಮ್ಮ 25ನೇ ವಯಸ್ಸಿನ ವೇಳೆಗೆ ಕ್ರೆಡಿಟ್ ಕಾರ್ಡ್, ವೈಯಕ್ತಿಕ ಸಾಲ ಅಥವಾ ಬಾಳಿಕೆ ಬರುವ ಗ್ರಾಹಕ ವಸ್ತುಗಳ ಸಾಲಗಳ ಮೂಲಕ ಸಾಲದ ಜಾಲವನ್ನು ಪ್ರವೇಶಿಸಿದರು.
2000ದ ನಂತರ ಜನಿಸಿದ ಗ್ರಾಹಕರಿಗೆ ಸಾಲದ ಪ್ರಯಾಣವು ಮತ್ತಷ್ಟು ಬೇಗ, ಅಂದರೆ ಸುಮಾರು 22ನೇ ವಯಸ್ಸಿನಲ್ಲೇ ಸಣ್ಣ ಪ್ರಮಾಣದ ಸಾಲಗಳು ಮತ್ತು 'ಈಗ ಖರೀದಿಸಿ, ಆಮೇಲೆ ಪಾವತಿಸಿ' ಉತ್ಪನ್ನಗಳ ಮೂಲಕ ಪ್ರಾರಂಭವಾಗುತ್ತಿದೆ.