ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳ ಹಾವಳಿಯಿಂದ ಬೇಸತ್ತು ಪತಿಯನ್ನು ‘ರೂಮ್ನಲ್ಲಿ ಲಾಕ್ ಮಾಡುತ್ತೇನೆ’ ಎಂದ ರವಿ ಕಿಶನ್ ಪತ್ನಿ!
ರವಿ ಕಿಶನ್ , ಪ್ರೀತಿ ಶುಕ್ಲಾ | Photo Credit : indianexpress.com
ರವಿ ಕಿಶನ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಾರೆ. ಅವರ ಗಾಯನ, ಮಾತುಗಳು ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ “ಹೊರಗೆ ಹೋದ್ರೆ ತಾನೆ ವೈರಲ್ ಆಗೋದು” ಎಂದು ಅವರನ್ನು ಲಾಕ್ ಮಾಡುವುದಾಗಿ ತಮಾಷೆ ಮಾಡಿದ್ದಾರೆ ಪತ್ನಿ ಪ್ರೀತಿ ಶುಕ್ಲಾ!
ರವಿ ಕಿಶನ್ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಗಳ ಮೂಲಕ ವೈರಲ್ ಆಗುತ್ತಿದ್ದಾರೆ. ಅವರ ‘ಕೋಟೇಶ್ವರಾಯ’ ಗಾಯನ ಮತ್ತು ಸಂದರ್ಶನಗಳಲ್ಲಿ ಹೇಳಿದ ‘ಮೌನ ವ್ರತ’ದಂತಹ ಇತರ ಹೇಳಿಕೆಗಳು ವೈರಲ್ ಆಗುತ್ತಿರುವುದರಿಂದ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿದ್ದಾರೆ. ಹೀಗೆ ಮೀಮ್ಗಳಿಂದ ಜನಪ್ರಿಯರಾದ ಕುರಿತಂತೆ ತಮ್ಮ ಪತ್ನಿ ಪ್ರೀತಿ ಶುಕ್ಲಾ ಅವರ ಪ್ರತಿಕ್ರಿಯೆಯನ್ನು ಬಹಿರಂಗಪಡಿಸಿದ ನಂತರ ಮತ್ತೂ ಚರ್ಚೆಯಲ್ಲಿದ್ದಾರೆ.
ಇತ್ತೀಚೆಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಕಾಣಿಸಿಕೊಂಡಿರುವ ರವಿ ಕಿಶನ್, ತಾನು ವೈರಲ್ ಆಗುತ್ತಿರುವ ಬಗ್ಗೆ ಮನೆಯಲ್ಲೂ ತಮಾಷೆ ಮಾಡುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ತಮ್ಮ ಪತ್ನಿಯ ಪ್ರತಿಕ್ರಿಯೆ ನೆನಪಿಸಿಕೊಂಡ ಅವರು, “ನನ್ನ ಪತ್ನಿ “ನೀನು ಮನೆಯಿಂದ ಹೊರಗೆ ಹೋದಾಗಲೆಲ್ಲ ವೈರಲ್ ಆಗುತ್ತೀಯಾ” ಎಂದು ಹೇಳಿ ಮಕ್ಕಳ ಮುಂದೆ “ಅವರನ್ನು ಈ ಕೋಣೆಯಲ್ಲಿ ಲಾಕ್ ಮಾಡಿ ಇರಿಸೋಣ. ಹೊರಗೆ ಕಾಲಿಡದಿದ್ದರೆ ವೈರಲ್ ಆಗುವುದಿಲ್ಲ” ಎಂದು ಹೇಳಿದ್ದಾಳೆ” (“Patni humko boli, ‘Tum ghar se nikalte ho toh viral hote ho,’ toh woh baccho ko bol rahi thi ki inko yahi kamre me lock kar dete hai. Na yeh niklenge na yeh viral honge) ಎನ್ನುವುದನ್ನು ಬಹಿರಂಗಪಡಿಸಿದರು.
ರವಿ ಕಿಶನ್ ಈ ತಮಾಷೆ ಮಾತನ್ನು ಬಿಗ್ ಬಾಸ್ನಲ್ಲಿ ಬಂಧಿಯಾಗಿದ್ದ ಕ್ಷಣಗಳಿಗೆ ತಳಕು ಹಾಕಿಕೊಂಡು ಮಾತನಾಡಿದರು. ನನಗೆ ಹೆಚ್ಚು ಸಿನಿಮಾಗಳು ಸಿಗುತ್ತಿದ್ದ ಹಾಗೇ ನಾನು ದುರಹಂಕಾರಿಯಾಗಿ ಬಿಟ್ಟಿದ್ದೆ. ಅದಕ್ಕೆ ನನ್ನ ಪತ್ನಿ ಬಿಗ್ ಬಾಸ್ಗೆ ಕರೆದುಕೊಂಡು ಹೋಗಿ ಲಾಕ್ ಮಾಡಿದ್ದಳು ಎಂದು ವಿವರಿಸಿದ್ದಾರೆ. “ನಾನು ಹುಚ್ಚನಾಗುತ್ತಿದ್ದೇನೆ ಎಂದು ಆಕೆಗೆ ಅನಿಸುತ್ತಿತ್ತು. ಆಗ ನನ್ನ ಬಳಿ ಬಹಳ ಹಣವಿತ್ತು. ನಾನು ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದೆ. ಒಂದೇ ಸಮಯದಲ್ಲಿ 17 ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ನನ್ನ ಕಾರಲ್ಲೇ ಮಲಗುತ್ತಿದ್ದೆ. ಒಂದು ಸೆಟ್ನಿಂದ ಮತ್ತೊಂದು ಸೆಟ್ಗೆ ಪ್ರಯಾಣಿಸುವಾಗ ಮಾತ್ರ ನಿದ್ರೆ ಮಾಡುತ್ತಿದ್ದೆ. ಒಂದು ಹಂತದಲ್ಲಿ ಒಂದೇ ಸ್ಟುಡಿಯೋದಲ್ಲಿ ಐದು ಸಿನಿಮಾಗಳಿಗೆ ಚಿತ್ರೀಕರಣ ಮಾಡುತ್ತಿದ್ದೆ” ಎಂದು ಅವರು ನೆನಪಿಸಿಕೊಂಡರು
“ನನಗೆ ಕೆಲಸ ಇರಲಿಲ್ಲ ಮತ್ತು ಹಣವಿರಲಿಲ್ಲ. ಅದನ್ನು ಪಡೆದಾಗ ಕಳೆದುಕೊಳ್ಳಲು ಬಯಸಲಿಲ್ಲ. ಹೀಗಾಗಿ ಎಲ್ಲೋ ದುರಹಂಕಾರಿಯಾಗಲು ಪ್ರಾರಂಭಿಸಿದ್ದೆ. ಆಗಲೇ ನನ್ನ ಹೆಂಡತಿ ನನ್ನನ್ನು ಬಿಗ್ ಬಾಸ್ನಲ್ಲಿ ಮೂರು ತಿಂಗಳು ಲಾಕ್ ಮಾಡಿದಳು” ಎಂದು ವಿವರಿಸಿದ್ದಾರೆ.
ರಿಯಾಲಿಟಿ ಶೋಗೆ ಹೋದ ನಂತರ ತಮ್ಮ ದೃಷ್ಟಿಕೋನ ಬದಲಾಗಿದ್ದಾಗಿ ಅವರು ಹೇಳಿದರು. “ಎಲ್ಲರೂ ನನ್ನನ್ನು ಇಷ್ಟಪಟ್ಟರು. ನನ್ನನ್ನು ಎಲಿಮಿನೇಟ್ ಮಾಡುತ್ತಿರಲಿಲ್ಲ. ಅಲ್ಲಿಂದ ಹೊರ ಬಂದಾಗ ಮೂರು ವರ್ಷ ಕಳೆದಂತೆ ಭಾಸವಾಗಿತ್ತು” ಎಂದು ತಿಳಿಸಿದ ರವಿಕಿಶನ್, ಬಿಗ್ ಬಾಸ್ ನಂತರ ಬಾಲಿವುಡ್ನ ಬಾಗಿಲು ತೆರೆಯಿತು ಎಂದು ನೆನಪಿಸಿಕೊಂಡರು.
ರವಿಕಿಶನ್ ಮತ್ತು ಪ್ರೀತಿ ಶುಕ್ಲಾ 1993ರಲ್ಲಿ ವಿವಾಹವಾಗಿದ್ದು, ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ರಿವಾ, ಇಶಿತಾ ಮತ್ತು ತನಿಷ್ಕಾ ಎಂಬ ಹೆಣ್ಣುಮಕ್ಕಳು ಮತ್ತು ಸಕ್ಷಮ್ ಎನ್ನುವ ಮಗನಿದ್ದಾನೆ.
ಇತ್ತೀಚೆಗಿನ ಜೆನ್ ಝೀ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಇತ್ತೀಚೆಗಿನ ಮೌನ ವ್ರತದ ಸಂದರ್ಭದಲ್ಲಿ ಜೆನ್ ಝೀಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವರು ನನ್ನನ್ನು ಮೂಕನನ್ನಾಗಿಸಿದ್ದಾರೆ. ಇಂತಹದನ್ನು ನನ್ನ ದೇಶದಲ್ಲಿ ನಾನೆಂದೂ ಕಂಡಿರಲಿಲ್ಲ” ಎಂದು ಹೇಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
“ದೇಶದ ಭವಿಷ್ಯವಾಗಿರುವ ಎಲ್ಲಾ ಜೆನ್ ಝೀ ಅನ್ನು ನಾನು ಆಹ್ವಾನಿಸುತ್ತೇನೆ, ಅವರು ಒಂದು ದಿನ ಸಂಸತ್ತಿಗೆ ಬರುತ್ತಾರೆ. ನಿಮ್ಮ ಮೆದುಳಿಗೆ ನಾನು ನಮಸ್ಕರಿಸುತ್ತೇನೆ. ನೀವು ತೋರಿಸುತ್ತಿರುವ ಸೃಜನಶೀಲತೆ ನಂಬಲಾಗುತ್ತಿಲ್ಲ. ನನ್ನನ್ನು, ನನ್ನ ಶೈಲಿ, ನನ್ನ ಮಾತುಗಳು, ನನ್ನ ಹೆಸರು ಮತ್ತು ನನ್ನ ಖ್ಯಾತಿಯನ್ನು ಅಸಾಧಾರಣ ಮಟ್ಟಕ್ಕೆ ಕೊಂಡೊಯ್ದಿದ್ದೀರಿ” ಎಂದು ಅವರು ಹೇಳಿದ್ದಾರೆ.
ರವಿ ಕಿಶನ್ ಇತ್ತೀಚೆಗೆ ‘ಧಮಾಲ್ 4’ ನಲ್ಲಿ ಅಭಿನಯಿಸಿದ್ದಾರೆ. ಅವರು ‘ಮಿರ್ಜಾಪುರ್: ದಿ ಫಿಲ್ಮ್’, ‘ಖೋಸ್ಲಾ ಕಾ ಘೋಸ್ಲಾ 2’, ‘ಆರ್ಯಭಟ್ ಕಾ ಝೀರೋ’ ಮತ್ತು ‘ಮಾ ಬೆಹೆನ್’ನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಗೋರಖ್ ಪುರದ ಲೋಕಸಭಾ ಸಂಸದರೂ ಆಗಿದ್ದಾರೆ.