ಬಿಹಾರ ಪ್ರತಿಭಟನೆ: ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವಿನ ಘರ್ಷಣೆಗೆ ಕಾರಣವೇನು?
Photo Credit: PTI
ನೇಮಕಾತಿ ಪರೀಕ್ಷೆಗಳ ಅಕ್ರಮ ಖಂಡಿಸಿ ದಿಲ್ಲಿ ಮತ್ತು ಜಾರ್ಖಂಡ್‌ನಲ್ಲಿ ನಡೆದ ಪ್ರತಿಭಟನೆಗಳ ಕಾವು ಆರುವ ಮುನ್ನವೇ, ಬಿಹಾರದಲ್ಲೂ ವಿದ್ಯಾರ್ಥಿಗಳ ಹೋರಾಟ ತೀವ್ರಗೊಂಡಿದೆ. ಆಗಸ್ಟ್ 25 ಮಂಗಳವಾರದಂದು, ನೂರಾರು ಬಿಹಾರ ಸಾರ್ವಜನಿಕ ಸೇವಾ ಆಯೋಗದ (BPSC) ಅಭ್ಯರ್ಥಿಗಳು ಪಾಟ್ನಾದಲ್ಲಿ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರ ನಿವಾಸದ ಕಡೆಗೆ ಮೆರವಣಿಗೆ ನಡೆಸಿದರು. ಈ ವೇಳೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಮುರಿಯಲು ಯತ್ನಿಸಿದಾಗ ಘರ್ಷಣೆ ಸಂಭವಿಸಿತು.
70ನೇ BPSC ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ವಿದ್ಯಾರ್ಥಿಗಳು, ಅದನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ನೇಮಕಾತಿ ಪರೀಕ್ಷೆಗಳಲ್ಲಿ ವಿಳಂಬ, ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಮಾದರಿಯಲ್ಲಿ ಏಕಾಏಕಿ ಬದಲಾವಣೆ ಹಾಗೂ ಪಾರದರ್ಶಕತೆಯ ಕೊರತೆಯನ್ನು ವಿರೋಧಿಸಿ ಈ ಪ್ರತಿಭಟನೆ ನಡೆಯುತ್ತಿದೆ.
ಪಾಟ್ನಾದಲ್ಲಿ ಏನಾಯಿತು?
ಬಿಎಸ್‌ಪಿಎಸ್‌ಸಿ ಅಭ್ಯರ್ಥಿಗಳು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಗಾಂಧಿ ಮೈದಾನದಿಂದ ರಾಜ್ ಭವನದವರೆಗೆ ಪೂರ್ವಯೋಜಿತ ಮೆರವಣಿಗೆ ಆರಂಭಿಸಿದರು. ಪ್ರತಿಭಟನಾಕಾರರು ಡಾಕ್ ಬಂಗ್ಲೆ ಚೌಕಕ್ಕೆ ತಲುಪಿದಾಗ, ನಿರ್ಬಂಧಿತ ಪ್ರದೇಶಕ್ಕೆ ತೆರಳದಂತೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ತಡೆದರು.
ಕೆಲವು ವಿದ್ಯಾರ್ಥಿಗಳು ಬ್ಯಾರಿಕೇಡ್‌ಗಳನ್ನು ಮುರಿದು ಮುಂದೆ ಸಾಗಲು ಯತ್ನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲ ಫಿರಂಗಿ ಬಳಸಿದರು ಮತ್ತು ಹಲವು ವಿದ್ಯಾರ್ಥಿಗಳನ್ನು ಬಂಧಿಸಿದರು. ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪಾಟ್ನಾದ ಪ್ರಮುಖ ವೃತ್ತಗಳಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಡಾಕ್ ಬಂಗ್ಲೆ ಚೌಕದಲ್ಲಿ ಸಿಆರ್‌ಪಿಎಫ್ ಮತ್ತು ಆರ್‌ಎಎಫ್ ತುಕಡಿಗಳನ್ನು ನಿಯೋಜಿಸಲಾಗಿದೆ.
ಕಳೆದ ಕೆಲವು ವಾರಗಳಿಂದ ವಿದ್ಯಾರ್ಥಿಗಳು ಪಾಟ್ನಾದ ಗರ್ದನಿಬಾಗ್ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವೇನು?
ಬಿಹಾರ ಶಿಕ್ಷಕರ ನೇಮಕಾತಿ ಪರೀಕ್ಷೆಯ (TRE-4) ನಾಲ್ಕನೇ ಹಂತದ ಅಧಿಸೂಚನೆ ವಿಳಂಬವಾಗಿರುವುದೇ ಈ ತಕ್ಷಣದ ಹೋರಾಟಕ್ಕೆ ಮುಖ್ಯ ಕಾರಣವಾಗಿದೆ.
32,000ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳಿಗೆ ಬಿಎಸ್‌ಪಿಎಸ್‌ಸಿ ತಕ್ಷಣವೇ ಅಧಿಕೃತ ಅಧಿಸೂಚನೆ ಹೊರಡಿಸಬೇಕೆಂದು ಅಭ್ಯರ್ಥಿಗಳು ಆಗ್ರಹಿಸುತ್ತಿದ್ದಾರೆ. ಇದರೊಂದಿಗೆ ಪರೀಕ್ಷೆಗೆ ಎರಡು ಹಂತದ (ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ) ವ್ಯವಸ್ಥೆ ತರುವುದನ್ನು ಅವರು ವಿರೋಧಿಸುತ್ತಿದ್ದಾರೆ. ಈ ಮಾದರಿಯಿಂದ ನೇಮಕಾತಿ ಮತ್ತಷ್ಟು ವಿಳಂಬವಾಗಲಿದೆ ಎಂದು ಅಭ್ಯರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
TRE-4ಗೆ ಒಂದೇ ಹಂತದ ಪರೀಕ್ಷೆ ನಡೆಸುವುದು, ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು, ಬಿಹಾರ ಸಿಬ್ಬಂದಿ ಆಯ್ಕೆ ಆಯೋಗದ ಪರೀಕ್ಷೆಗಳನ್ನು ಸರಿಯಾಗಿ ನಡೆಸುವುದು ಮತ್ತು ಹಿಂದಿ ಮಾಧ್ಯಮದ ಅಭ್ಯರ್ಥಿಗಳಿಗೆ ಸಮಾನ ಅವಕಾಶ ನೀಡುವುದು ಅವರ ಮುಖ್ಯ ಬೇಡಿಕೆಗಳಾಗಿವೆ.
70ನೇ ಬಿಪಿಎಸ್‌ಸಿ ನಾಗರಿಕ ಸೇವೆಗಳು ಮತ್ತು BSSC ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಅಂಕ ನೀಡುವಿಕೆಯಲ್ಲಿನ ಅಸಮಾನತೆ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಮಾದರಿಯ ಪದೇ ಪದೇ ಬದಲಾವಣೆಗಳ ವಿರುದ್ಧ ದನಿ ಎತ್ತಿದ್ದಾರೆ.
ಹೊಸ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ನಿಯಮಗಳ ಬಗ್ಗೆಯೂ ಸಂಶೋಧನಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಇಂಗ್ಲಿಷ್ ಮಾಧ್ಯಮದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
70ನೇ ಬಿಪಿಎಸ್‌ಸಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ಅದನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಪಟ್ಟು ಹಿಡಿದಿದ್ದಾರೆ.
ಪೋಲಿಸರು ಏನು ಹೇಳುತ್ತಾರೆ?
ವಿದ್ಯಾರ್ಥಿಗಳ ಹಲವು ಬೇಡಿಕೆಗಳನ್ನು ಪುರಸ್ಕರಿಸಲಾಗಿದ್ದು, ಪ್ರತಿಭಟನೆಯ ಕಾವು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಡಿಎಸ್‌ಪಿ ಕಾಮಾಖ್ಯ ನಾರಾಯಣ್ ಸಿಂಗ್ ತಿಳಿಸಿದ್ದಾರೆ.
"ನಾವು ಬ್ಯಾರಿಕೇಡ್‌ಗಳನ್ನು ಹಾಕಿದ್ದೇವೆ . ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಭಾರೀ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಮಾತುಕತೆ ಸಕಾರಾತ್ಮಕವಾಗಿದೆ. ಹಲವು ಬೇಡಿಕೆಗಳನ್ನು ಈಡೇರಿಸಿರುವುದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಂಡಿದ್ದಾರೆ ಎಂದು ಭಾವಿಸುತ್ತೇನೆ, ಹೀಗಾಗಿ ಪ್ರತಿಭಟನೆ ಶಮನಗೊಳ್ಳಬಹುದು" ಎಂದು ಸಿಂಗ್ ಎಎನ್‌ಐಗೆ ತಿಳಿಸಿದ್ದಾರೆ.
ಪ್ರತಿಭಟನಾಕಾರರು ಮುನ್ನುಗ್ಗಲು ಯತ್ನಿಸಿದರೆ ಅವರನ್ನು ತಡೆಯಲಾಗುವುದು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ವಿದ್ಯಾರ್ಥಿಗಳ ಬೇಡಿಕೆಗಳೇನು?
ಕಾಂಗ್ರೆಸ್ ಮುಖಂಡ ಸುಶೀಲ್ ಕುಮಾರ್ ಮಾತನಾಡಿ, ಪ್ರತಿಭಟನಾಕಾರರು ಟಿಆರ್‌ಇ 4.0 ಪರೀಕ್ಷೆಯಲ್ಲಿ ಬದಲಾವಣೆಗಳನ್ನು ಬಯಸುತ್ತಿದ್ದಾರೆ ಹಾಗೂ ಬಿಪಿಎಸ್‌ಸಿ, ಬಿಎಸ್‌ಎಸ್‌ಸಿ ಮತ್ತು ಸಬ್‌ಇನ್‌ಸ್ಪೆಕ್ಟರ್ ನೇಮಕಾತಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದಾರೆ ಎಂದಿದ್ದಾರೆ.
"ಬಿಪಿಎಸ್‌ಸಿ, ಬಿಎಸ್‌ಎಸ್‌ಸಿ ಮತ್ತು ಸಬ್‌ಇನ್‌ಸ್ಪೆಕ್ಟರ್ ನೇಮಕಾತಿಗೆ ಸಂಬಂಧಿಸಿದಂತೆ ಇನ್ನು ಹಲವು ಸಮಸ್ಯೆಗಳಿವೆ. ಸರ್ಕಾರ ಈ ಯಾವುದೇ ವಿಷಯಗಳ ಬಗ್ಗೆ ಭರವಸೆ ನೀಡಿಲ್ಲ. ನಾವು ಮುಖ್ಯಮಂತ್ರಿ ಅವರಲ್ಲಿ ಮಾತುಕತೆಗೆ ಮನವಿ ಮಾಡಿದ್ದು, ಅವರು ನಮ್ಮ ನಿಯೋಗವನ್ನು ಚರ್ಚೆಗೆ ಕರೆಯಬೇಕು. ನಾವು ಒಂಬತ್ತು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಯಾರೂ ನಮ್ಮ ಮಾತನ್ನು ಕೇಳುತ್ತಿಲ್ಲ. ಸರ್ಕಾರ ಮಾತುಕತೆ ನಡೆಸಿದ್ದರೆ ಈ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ" ಎಂದು ಕುಮಾರ್ ಎಎನ್‌ಐಗೆ ತಿಳಿಸಿದ್ದಾರೆ.
ಟಿಆರ್‌ಇ 4.0 ಪರೀಕ್ಷೆಯನ್ನು ಒಂದೇ ಹಂತದಲ್ಲಿ ನಡೆಸುವುದು ಮತ್ತು ನೆಗೆಟಿವ್ ಮಾರ್ಕಿಂಗ್ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
ಬಿಹಾರ ಸರ್ಕಾರ ಏನು ಹೇಳಿದೆ?
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಪರಿಹರಿಸಲು ಮಾಸಿಕ 'ವಿದ್ಯಾರ್ಥಿ ಸಹಯೋಗ್ ಶಿಬಿರ' ಆರಂಭಿಸುವುದಾಗಿ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಪ್ರಕಟಿಸಿದ್ದಾರೆ.
"ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸಲು ಬಿಹಾರ ಸರ್ಕಾರ ಇಂದಿನಿಂದ ವಿದ್ಯಾರ್ಥಿ ಸಹಯೋಗ್ ಶಿಬಿರವನ್ನು ಪ್ರಾರಂಭಿಸುತ್ತಿದೆ. ಈ ಶಿಬಿರಗಳನ್ನು ಪ್ರತಿ ತಿಂಗಳ ನಾಲ್ಕನೇ ಮಂಗಳವಾರದಂದು ಶೈಕ್ಷಣಿಕ ಸಂಸ್ಥೆಗಳಲ್ಲಿ ಆಯೋಜಿಸಲಾಗುವುದು" ಎಂದು ಚೌಧರಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಈ ಶಿಬಿರಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ನೇರವಾಗಿ ಸರ್ಕಾರಿ ಅಧಿಕಾರಿಗಳ ಗಮನಕ್ಕೆ ತರಬಹುದು. ಅಲ್ಲದೆ, ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ದೂರು ದಾಖಲಿಸಲು ಮತ್ತು ಪೋರ್ಟಲ್ ಹಾಗೂ ಸಹಾಯವಾಣಿ 1100 ಮೂಲಕ ದೂರಿನ ಸ್ಥಿತಿಯನ್ನು ಪರಿಶೀಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಚೌಧರಿ ಹೇಳಿದ್ದಾರೆ.
ಪ್ರತಿಭಟನೆಯ ಬಗ್ಗೆ ವಿರೋಧ ಪಕ್ಷಗಳ ನಿಲುವೇನು?
ಈ ಪ್ರತಿಭಟನೆಗೆ ಬಿಹಾರದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಮತ್ತು ಅವರ ರಾಷ್ಟ್ರೀಯ ಜನತಾ ದಳ ಬೆಂಬಲ ಸೂಚಿಸಿವೆ.
ತೇಜಸ್ವಿ ಯಾದವ್ ಅವರು ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರಿಗೆ ಪತ್ರ ಬರೆದಿದ್ದು, ಪ್ರತಿಭಟನೆ ನಡೆಸುತ್ತಿರುವ ಬಿಪಿಎಸ್‌ಸಿ ಅಭ್ಯರ್ಥಿಗಳೊಂದಿಗೆ ಸರ್ಕಾರ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ರೆವಲ್ಯೂಷನರಿ ಯೂತ್ ಅಸೋಸಿಯೇಷನ್, ಎಐಎಸ್‌ಎಫ್ ಮತ್ತು ಛಾತ್ರ್ ಯುವ ಸಂಘರ್ಷ ಮೋರ್ಚಾ ಸೇರಿದಂತೆ 14 ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲ ನೀಡಿವೆ.
ಇದೇ ವೇಳೆ, ಬಿಪಿಎಸ್‌ಸಿ ಪರೀಕ್ಷಾ ನಿಯಂತ್ರಕ ರಾಜೇಶ್ ಕುಮಾರ್ ಅವರ ಹೇಳಿಕೆಯು ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಕುಮಾರ್, "ಆನೆ ನಡೆದು ಹೋಗುವಾಗ ನಾಯಿಗಳು ಬೊಗಳುವುದು ಸಹಜ" ಎಂಬ ಗಾದೆ ಮಾತನ್ನು ಬಳಸಿದ್ದರು.
ಈ ಹೇಳಿಕೆಯನ್ನು ಖಂಡಿಸಿರುವ ತೇಜಸ್ವಿ ಯಾದವ್, ಪರೀಕ್ಷಾ ನಿಯಂತ್ರಕರ ಭಾಷೆಯು ಮುಖ್ಯಮಂತ್ರಿಯವರ ಧೋರಣೆಯನ್ನೇ ಪ್ರತಿಫಲಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕೃಪೆ: firstpost.com