ಸಾಂದರ್ಭಿಕ ಚಿತ್ರ | Photo Credit : magnific.com

ಅಕ್ಕಿ ಕಡಿಮೆ ತೊಳೆದು ಬಳಸಬೇಕೆಂಬ ಸಲಹೆಯು ಆಹಾರ ನೈರ್ಮಲ್ಯ, ಪೋಷಣೆ ಅಥವಾ ಮಾಲಿನ್ಯ ನಿವಾರಿಸುವ ಮೇಲೆ ಪರಿಣಾಮ ಬೀರಬಹುದೇ ಎಂಬ ಬಗ್ಗೆ ಚರ್ಚೆಯನ್ನು ಪ್ರೇರೇಪಿಸಿದೆ.

ಯುನೈಟೆಡ್ ಕಿಂಗ್‌ಡಂ ಇತ್ತೀಚೆಗಿನ ನೀರು ಉಳಿಸುವ ಅಭಿಯಾನದಲ್ಲಿ ದಕ್ಷಿಣ ಏಷ್ಯಾದ ದೈನಂದಿನ ಅಡುಗೆ ಪದ್ಧತಿಯಲ್ಲಿ ಅಕ್ಕಿಯನ್ನು ಅನೇಕ ಬಾರಿ ತೊಳೆಯುವ ಅಭ್ಯಾಸವನ್ನು ಎತ್ತಿ ತೋರಿಸಲಾಗಿದೆ. ಈ ಅಭಿಯಾನದಲ್ಲಿ ವಿಭಿನ್ನ ಜನಾಂಗ ಮತ್ತು ನಂಬಿಕೆಯ ಸಮುದಾಯಗಳ ನಡುವೆ ನೀರಿನ ಸಂರಕ್ಷಣೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಏಳು ಬಾರಿ ಅಕ್ಕಿಯನ್ನು ತೊಳೆಯುವ ಬದಲಿಗೆ ಎರಡು ಬಾರಿ ಅಕ್ಕಿ ತೊಳೆಯಬೇಕು ಎಂದು ಸೂಚಿಸಲಾಗಿದೆ. ಯೋಜನೆಯಲ್ಲಿ ನೀರಿನ ಸಂರಕ್ಷಣೆಗಾಗಿ ಇನ್ನೂ ಹಲವು ಧಾರ್ಮಿಕ ಆಚರಣೆಗಳು ಮತ್ತು ಸಮುದಾಯಗಳ ನಡುವಿನ ಅಭ್ಯಾಸಗಳನ್ನು ಗಮನಿಸಲಾಗಿದೆ. ಆದರೆ ಅಕ್ಕಿ ಕಡಿಮೆ ತೊಳೆದು ಬಳಸಬೇಕೆಂಬ ಮುಖ್ಯ ಶಿಫಾರಸು ಆಹಾರ ನೈರ್ಮಲ್ಯ, ಪೋಷಣೆ ಅಥವಾ ಮಾಲಿನ್ಯಕಾರಕ ತೆಗೆಯುವಿಕೆಯ ಮೇಲೆ ಪರಿಣಾಮ ಬೀರಬಹುದೇ ಎಂಬ ಬಗ್ಗೆ ಚರ್ಚೆಯನ್ನು ಪ್ರೇರೇಪಿಸಿದೆ.

ದಕ್ಷಿಣ ಭಾರತದ ಮನೆಗಳಲ್ಲಿ ಪದೇಪದೆ ಅಕ್ಕಿ ತೊಳೆದು ಬಳಸುವುದು ಸಾಮಾನ್ಯ ಅಭ್ಯಾಸ. ಇದು ಮನೆಯ ಅಭ್ಯಾಸಗಳು ಮತ್ತು ಸ್ವಚ್ಛತೆ, ಟೆಕ್ಸ್‌ಚರ್ ಮತ್ತು ಅಡುಗೆಯ ಆದ್ಯತೆಗಳಿಂದ ಪ್ರಭಾವಿತವಾಗಿರುತ್ತದೆ. ಇದು ಅಭಿಯಾನದ ನೀರು ಉಳಿಸುವ ಉದ್ದೇಶದ ಜೊತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಪ್ರಶ್ನೆಯನ್ನೂ ಹುಟ್ಟು ಹಾಕುತ್ತದೆ. ಅಕ್ಕಿ ಎರಡು ಬಾರಿ ತೊಳೆದರೆ ಸಾಕಾಗುತ್ತದೆಯ ಅಥವಾ ಪದೇಪದೇ ತೊಳೆಯುವುದರಿಂದ ಯಾವುದೇ ಪೌಷ್ಠಿಕಾಂಶ ಅಥವಾ ಆಹಾರ ಸುರಕ್ಷತಾ ಪ್ರಯೋಜನವನ್ನು ನೀಡುತ್ತದೆಯೆ?

ಪದೇಪದೆ ತೊಳೆಯುವುದು ಉತ್ತಮವೆ?

PSRI ಆಸ್ಪತ್ರೆಯ ಡಯೆಟ್ರಿಕ್ಸ್ ಮುಖ್ಯಸ್ಥರಾಗಿರುವ ಡಾ ಶಾಲಿನಿ ಬ್ಲಿಸ್ ಅವರ ಪ್ರಕಾರ, “ಹೆಚ್ಚಿನ ಮನೆಗಳಿಗೆ ಸಾಮಾನ್ಯವಾಗಿ ಎರಡು ಅಥವಾ ಮೂರು ಬಾರಿ ಅಕ್ಕಿ ತೊಳೆದರೆ ಸಾಕಾಗುತ್ತದೆ. “ಪ್ಯಾಕ್ ಮಾಡಿರುವ ಅಕ್ಕಿಯಲ್ಲಿ ಧೂಳು, ಸಡಿಲವಾದ ಮೇಲ್ಮೈ ಪಿಷ್ಟ ಮತ್ತು ಸಣ್ಣ ಕಲ್ಮಶಗಳನ್ನು ತೊಡೆದು ಹಾಕಲು ಶುದ್ಧ ಹರಿಯುವ ನೀರಿನಡಿ ಅಥವಾ ತಾಜಾ ನೀರಿನಿಂದ ಎರಡು ಬಾರಿ ತೊಳೆದರೆ ಸಾಕು. ಏಳು ಬಾರಿ ತೊಳೆಯುವುದರಿಂದ ಅಕ್ಕಿ ಸುರಕ್ಷಿತವಾಗುವುದಿಲ್ಲ.”

ಹೆಚ್ಚು ಬಾರಿ ಅಕ್ಕಿ ತೊಳೆದರೆ ಆರ್ಸೆನಿಕ್‌ ಅಂಶ ಹೋಗುತ್ತದೆಯೆ?

ವೈದ್ಯರ ಪ್ರಕಾರ, ಅಕ್ಕಿಯನ್ನು ಪದೇಪದೆ ತೊಳೆಯುವುದರಿಂದ ಆರ್ಸೆನಿಕ್‌ನಂತಹ ಹಾನಿಕಾರಕ ಪದಾರ್ಥಗಳನ್ನು ತೆಗೆದು ಹಾಕಲು ಸಹಾಯವಾಗುತ್ತದೆ ಎನ್ನುವ ಸಾಮಾನ್ಯ ನಂಬಿಕೆಯಿದೆ. ಆದರೆ, ಆರ್ಸೆನಿಕ್‌ ಸಮಸ್ಯೆ ನೀಗಿಸಲು ಪದೇಪದೆ ಜಾಲಾಡುವಿಕೆ ಪರಿಣಾಮಕಾರಿ ಮಾರ್ಗವಲ್ಲ. ಸಂಶೋಧನೆಗಳಲ್ಲಿ ಈಗಾಗಲೇ ಸಾಬೀತಾಗಿರುವ ಪ್ರಕಾರ ಆರ್ಸೆನಿಕ್‌ ಮಟ್ಟದ ಮೇಲೆ ಜಾಲಾಡುವಿಕೆಯಿಂದ ಹೆಚ್ಚು ಪರಿಣಾಮವಾಗದು. ಹೀಗಾಗಿ ಅಕ್ಕಿಯನ್ನು ಐದರಿಂದ ಏಳು ಬಾರಿ ತೊಳೆಯುವುದರಿಂದ ಬಯಸುವ ರಕ್ಷಣೆ ಸಿಗದೆ ಇರಬಹುದು.

ಅತಿಯಾಗಿ ತೊಳೆಯುವುದರಿಂದ ಪೋಷಕಾಂಶ ನಷ್ಟವಾಗುವುದೆ?

ಪದೇಪದೆ ತೊಳೆಯುವಿಕೆ ಪೋಷಕಾಂಶಗಳ ಮೇಲೆ ಪರಿಣಾಮ ಬೀರುತ್ತದೆ. ಅತಿಯಾಗಿ ತೊಳೆಯುವುದರಿಂದ ಕೆಲವು ನೀರಿನಲ್ಲಿ ಕರಗುವ ಮತ್ತು ಪುಷ್ಟೀಕರಿಸಿದ ಪೋಷಕಾಂಶಗಳ ನಷ್ಟಕ್ಕೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ. “ಅತಿಯಾಗಿ ತೊಳೆಯುವುದರಿಂದ ವಿಶೇಷವಾಗಿ ಪಾಲಿಶ್ ಮಾಡಿದ ಅಥವಾ ಬೇಯಿಸಿದ ಅಕ್ಕಿಯಲ್ಲಿ ಕೆಲವು ಕಬ್ಬಿಣ, ಫೋಲೇಟ್, ಥಯಾಮಿನ್ ಮತ್ತು ನಿಯಾಸಿನ್‌ನಂತಹ ನೀರಿನಲ್ಲಿ ಕರಗುವ ಮತ್ತು ಸಮೃದ್ಧ ಪೋಷಕಾಂಶಗಳು ನಷ್ಟವಾಗಬಹುದು” ಎಂದು ಅವರು ಹೇಳಿದ್ದಾರೆ.

ನೀರು ಶುದ್ಧವಾಗಿ ಕಾಣುವವರೆಗೆ ಅಕ್ಕಿ ತೊಳೆಯುವ ಅಭ್ಯಾಸವಿರುವ ಕೆಲವು ಮನೆಯವರು ಈ ವಿಷಯವನ್ನು ಗಮನಿಸಬೇಕಾಗಿ ಬರುತ್ತದೆ. ಕಡಿಮೆ ತೊಳೆಯುವುದು ಅಥವಾ ವಿಪರೀತ ತೊಳೆಯುವುದರ ನಡುವಿನ ಹಾದಿಯನ್ನು ಹುಡುಕಿಕೊಳ್ಳಬೇಕು ಎಂದು ವೈದ್ಯರು ಶಿಫಾರಸು ಮಾಡಿದ್ದಾರೆ.

ಮಾಹಿತಿ ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor