ಸಾಂದರ್ಭಿಕ ಚಿತ್ರ | Photo Credit : AI

ಬಾಲ್ಯದಲ್ಲಿ ಅತಿಯಾದ ಸ್ಮಾರ್ಟ್ಫೋನ್ ಬಳಕೆಯಿಂದ ಮಕ್ಕಳ ಬೌದ್ಧಿಕ ವಿಕಾಸ ಮತ್ತು ಶೈಕ್ಷಣಿಕ ಪ್ರಗತಿಯ ಮೇಲೆ ಗಂಭೀರ ಪರಿಣಾಮ

ನಿಮ್ಮ ಮಗುವಿಗೆ ಸ್ಮಾರ್ಟ್ಫೋನ್ ನೀಡಬಾರದು ಅಥವಾ ಸ್ಕ್ರೀನ್ ಸಮಯ ಮಕ್ಕಳಿಗೆ ಕೆಟ್ಟದು ಎನ್ನುವುದು ಹೊಸ ಎಚ್ಚರಿಕೆಯಲ್ಲ. ತಂತ್ರಜ್ಞಾನವು ಮಕ್ಕಳ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಸಂಶೋಧಕರು ವರ್ಷಗಳಿಂದ ಎಚ್ಚರಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಆದರೆ, ಅವು ಎಷ್ಟು ಹಾನಿಕರ ಎನ್ನುವುದು ತಿಳಿದಿರಲಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಸ್ಕ್ರೀನ್ ನೋಡುವುದು, ಮಕ್ಕಳು ವಿಷಯಗಳನ್ನು ಎಷ್ಟು ಚೆನ್ನಾಗಿ ಕಲಿಯುತ್ತಾರೆ ಮತ್ತು ನೆನಪಿಸಿಕೊಳ್ಳುತ್ತಾರೆ ಎಂಬುದರ ಮೇಲೆ ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತದೆ ಎಂದು ಹೊಸ ಅಧ್ಯಯನವು ಹೇಳಿದೆ.

ಇನ್ಸರ್ಮ್ ಮತ್ತು ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ, ಬಾಲ್ಯದ ಕೆಲವು ಹಂತಗಳಲ್ಲಿ ಹೆಚ್ಚಿನ ಸ್ಕ್ರೀನ್ ಬಳಸಿದವರು ಕಳಪೆ ಶೈಕ್ಷಣಿಕ ಕಾರ್ಯಕ್ಷಮತೆ ತೋರಬಹುದು ಮತ್ತು ನಂತರದ ಜೀವನದಲ್ಲಿ ಕೆಲಸದ ನೆನಪಿನ ಶಕ್ತಿ ಕುಂದಬಹುದು.

ಈ ಬಗ್ಗೆ ವಿವರಿಸಿದ GUSTO (ಗ್ರೋಯಿಂಗ್ ಅಪ್ ಇನ್ ಸಿಂಗಾಪುರ್ ಟುವರ್ಡ್ಸ್ ಹೆಲ್ತಿ ಔಟ್ಕಮ್ಸ್) ಸಿಂಗಾಪುರದಲ್ಲಿ ನಡೆದ ಅತಿ ದೊಡ್ಡ ಸಂಶೋಧನೆಯಾಗಿದ್ದು, 502 ಮಕ್ಕಳನ್ನು ಸಂಶೋಧಕರು ಹುಟ್ಟಿದ ದಿನದಿಂದಲೇ ಅಧ್ಯಯನ ನಡೆಸಿದ್ದಾರೆ. ಶಿಶುವಾಗಿರುವಾಗಲೇ ಮಕ್ಕಳು ಮತ್ತು ತಾಯಂದಿರನ್ನು ಅಧ್ಯಯನ ಮಾಡಲಾಗಿದೆ ಮತ್ತು ಅವರು ಬೆಳೆದಂತೆ ಟ್ರ್ಯಾಕ್ ಮಾಡಲಾಗಿದೆ. ಈ ಅಧ್ಯಯನವು ವಿಜ್ಞಾನಿಗಳಿಗೆ ಬಾಲ್ಯದ ಬೆಳವಣಿಗೆ, ಬೊಜ್ಜಿನ ಅಪಾಯ, ಕಲಿಕಾ ಸಾಮರ್ಥ್ಯ ಮತ್ತು ಒಟ್ಟು ಆರೋಗ್ಯದಂತಹ ದೀರ್ಘಕಾಲೀನ ಫಲಿತಾಂಶಗಳನ್ನು ಅಧ್ಯಯನ ಮಾಡಲು ಸಹಕರಿಸಿದೆ. ಈ ಅಧ್ಯಯನದಲ್ಲಿ ಮಕ್ಕಳು ವಿವಿಧ ವಯಸ್ಸಿನಲ್ಲಿ ಸ್ಕ್ರೀನ್ಗಳನ್ನು ನೋಡಲು ಎಷ್ಟು ಸಮಯ ಕಳೆದರು ಎಂಬುದನ್ನು ಟ್ರ್ಯಾಕ್ ಮಾಡಲಾಗಿದೆ ಮತ್ತು ನಂತರ ಇದನ್ನು 9ನೇ ವಯಸ್ಸಿನಲ್ಲಿ ಅವರ ಶೈಕ್ಷಣಿಕ ಕಾರ್ಯಕ್ಷಮತೆ ಮತ್ತು 10.5ನೇ ವಯಸ್ಸಿನಲ್ಲಿ ಅವರ ಸ್ಮರಣೆಯ ಕೌಶಲ್ಯದೊಂದಿಗೆ ಹೋಲಿಸಿ ನೋಡಲಾಗಿದೆ.

ವರ್ಲ್ಡ್ ಜರ್ನಲ್ ಆಫ್ ಪೀಡಿಯಾಟ್ರಿಕ್ಸ್ ನಲ್ಲಿ ಪ್ರಕಟವಾದ ಈ ಅಧ್ಯಯನವು ಮಕ್ಕಳು ಒಟ್ಟು ಎಷ್ಟು ಗಂಟೆಗಳ ಕಾಲ ಪರದೆಗಳನ್ನು ನೋಡುತ್ತಿದ್ದರು ಎಂಬುದರ ಮೇಲೆ ಕೇಂದ್ರೀಕರಿಸುವ ಬದಲು, ಪರದೆಗಳಿಗೆ ಒಡ್ಡಿಕೊಂಡ ವಯಸ್ಸು ವ್ಯತ್ಯಾಸವನ್ನುಂಟು ಮಾಡುವುದೇ ಎಂದು ನೋಡಲು ಆರು ವಿಭಿನ್ನ ವಯಸ್ಸಿನ ಹಂತಗಳಲ್ಲಿ ಪರದೆಯ ಬಳಕೆಯನ್ನು ಗಮನಿಸಿದೆ. ಈ ಸಂಶೋಧನೆಯ ಫಲಿತಾಂಶ ಕಳವಳಕಾರಿಯಾಗಿದೆ.

ಶೈಶವಾವಸ್ಥೆಯಲ್ಲಿ, ವಿಶೇಷವಾಗಿ 1ನೇ ವಯಸ್ಸಿನಿಂದ ಪರದೆಗಳನ್ನು ನೋಡುತ್ತಾ ಹೆಚ್ಚು ಸಮಯ ಕಳೆಯುವ ಮಕ್ಕಳು ನಂತರ ಕಳಪೆ ಶೈಕ್ಷಣಿಕ ಕಾರ್ಯಕ್ಷಮತೆ ತೋರಬಹುದು ಮತ್ತು ನಂತರದ ಜೀವನದಲ್ಲಿ ಅವರ ಕೆಲಸದ ನೆನಪಿನ ಶಕ್ತಿ ಕುಂದಬಹುದು ಎಂದು ಅಧ್ಯಯನ ಕಂಡುಹಿಡಿದಿದೆ. 6ರ ವಯಸ್ಸಿನ ಮಕ್ಕಳಲ್ಲಿ ಪರದೆಯ ಬಳಕೆಯು ಕಳಪೆ ಫಲಿತಾಂಶಗಳಿಗೆ ಕಾರಣವಾಗಬಹುದು. ಪರದೆಯ ಸಮಯದ ವಿಷಯಕ್ಕೆ ಬಂದಾಗ ಶೈಶವಾವಸ್ಥೆ ಮತ್ತು ಆರಂಭಿಕ ಶಾಲಾ ವರ್ಷಗಳು ವಿಶೇಷವಾಗಿ ಮುಖ್ಯವಾಗಬಹುದು ಎಂದು ಈ ಅಧ್ಯಯನ ಸೂಚಿಸುತ್ತದೆ.

ಹೆಚ್ಚಿನ ಪರದೆಯ ಸಮಯವು ಮಕ್ಕಳಿಗೆ ಆಟವಾಡುವುದು, ಓದುವುದು ಮತ್ತು ಅವರ ಪೋಷಕರೊಂದಿಗೆ ಸಮಯ ಕಳೆಯುವಂತಹ ಕಲಿಕೆ ಮತ್ತು ಅಭಿವೃದ್ಧಿಗೆ ಸಹಕರಿಸುವ ಚಟುವಟಿಕೆಗಳಿಗೆ ಕಡಿಮೆ ಸಮಯವನ್ನು ನೀಡಬಹುದು ಎಂಬುದು ಒಂದು ಸಂಭಾವ್ಯ ಕಾರಣ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಮಕ್ಕಳು ಬಳಸುವ ಪರದೆಯ ಸಮಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಮೊದಲ ಸಂಶೋಧನೆ ಇದಲ್ಲ. 2020ರಲ್ಲಿ ಕ್ಯಾಲ್ಗರಿ ವಿಶ್ವವಿದ್ಯಾಲಯದ ಶೆರಿ ಮ್ಯಾಡಿಗನ್ ನೇತೃತ್ವದಲ್ಲಿ ಸಂಶೋಧಕರು 18,905 ಮಕ್ಕಳನ್ನು ಒಳಗೊಂಡ 42 ಅಧ್ಯಯನಗಳನ್ನು ಪರಿಶೀಲಿಸಿದ್ದರು. ಮಕ್ಕಳ ಭಾಷಾ ಬೆಳವಣಿಗೆಗೆ ಪರದೆಯ ಬಳಕೆಯು ಹೇಗೆ ಸಂಬಂಧಿಸಿದೆ ಎಂಬುದನ್ನು ಪರೀಕ್ಷಿಸಿದರು. ಹೆಚ್ಚು ಸಮಯವನ್ನು ಪರದೆಯ ಮೇಲೆ ಕಳೆಯುವ ಮಕ್ಕಳ ಭಾಷಾ ಕೌಶಲ್ಯ ದುರ್ಬಲವಾಗಿರುತ್ತದೆ ಎಂದು ಅವರು ಕಂಡುಕೊಂಡರು. ಆದರೆ, ಪರದೆಯ ಬಳಕೆಯ ಪ್ರಕಾರವೂ ಸಹ ಮುಖ್ಯವಾಗಿದೆ: ಶೈಕ್ಷಣಿಕ ವಿಷಯ ನೋಡುವುದು ಮತ್ತು ಆರೈಕೆದಾರರ ಜೊತೆಗೆ ಪರದೆಗಳನ್ನು ನೋಡುವುದು ಉತ್ತಮ ಭಾಷಾ ಕೌಶಲ್ಯಗಳನ್ನು ರೂಢಿಸಿಕೊಳ್ಳಲು ಸಹಾಯ ಮಾಡಿದೆ. ನಂತರದ ವಯಸ್ಸಿನಲ್ಲಿ ಪರದೆಗಳನ್ನು ಬಳಸಲು ಪ್ರಾರಂಭಿಸಿದ ಮಕ್ಕಳು ಬಲವಾದ ಭಾಷಾ ಕೌಶಲ್ಯಗಳನ್ನು ಹೊಂದಿರುತ್ತಾರೆ ಎಂದು ಸಂಶೋಧಕರು ಕಂಡುಕೊಂಡರು.

2023ರಲ್ಲಿ ಫ್ರಾನ್ಸ್ ನ ಸಂಶೋಧಕರು ನಡೆಸಿದ ಮತ್ತೊಂದು ಅಧ್ಯಯನದಲ್ಲಿ ಮಕ್ಕಳ ಪರದೆಯ ಬಳಕೆಯ ಕುರಿತ 15 ಸಂಶೋಧನೆಗಳನ್ನು ಪರಿಶೀಲಿಸಲಾಗಿತ್ತು. ಪರದೆಯ ಬಳಕೆ ಗಮನ ಸಮಸ್ಯೆಗಳಿಗೆ ಸಂಬಂಧಿಸಿದೆಯೇ ಎಂದು ಈ ಪರಿಶೀಲನೆಯಲ್ಲಿ ಗಮನಿಸಲಾಗಿತ್ತು. ಅವರು ಪರಿಶೀಲಿಸಿದ ಎಲ್ಲಾ ಐದು ಅಲ್ಪಾವಧಿ ಅಧ್ಯಯನಗಳಲ್ಲಿ ಹೆಚ್ಚಿನ ಪರದೆಯ ಬಳಕೆಯಿಂದ ಗಮನ ಸಮಸ್ಯೆಗಳಿರುವುದು ಕಂಡುಬಂತು. ದೀರ್ಘಕಾಲ ಮಕ್ಕಳನ್ನು ಗಮನಿಸಿದ 10 ಅಧ್ಯಯನಗಳಲ್ಲಿ ಆರು ಅಧ್ಯಯನಗಳು ಹಿಂದಿನ ಪರದೆಯ ಬಳಕೆಯು ನಂತರದ ಗಮನ ಸಮಸ್ಯೆಗಳಿಗೆ ಸಂಬಂಧಿಸಿರುವುದನ್ನು ಕಂಡುಕೊಂಡಿವೆ. ನಾಲ್ಕು ಅಧ್ಯಯನಗಳಲ್ಲಿ ಸ್ಪಷ್ಟವಾದ ಕೊಂಡಿ ಕಂಡುಬಂದಿಲ್ಲ.

ಸಂಶೋಧಕರು ಎಚ್ಚರಿಸುವ ಪ್ರಕಾರ, ಹೆಚ್ಚು ಅಥವಾ ತುಂಬಾ ಎಳೆಯ ವಯಸ್ಸಿನಲ್ಲಿ ಪರದೆ ಬಳಕೆಯು ಮಕ್ಕಳ ಬೆಳವಣಿಗೆಯ ವಿವಿಧ ಕ್ಷೇತ್ರಗಳ ಮೇಲೆ ಪರಿಣಾಮ ಬೀರಬಹುದು. ಅಂದರೆ, ಕಲಿಕೆ, ಸ್ಮರಣೆಯಿಂದ ತೊಡಗಿ ಭಾಷೆ ಮತ್ತು ಗಮನದವರೆಗೆ ಪರಿಣಾಮವಾಗಬಹುದು. ಆದರೆ ಇದು ಕೇವಲ ಪರದೆಯ ಕುರಿತಾದ ವಿಷಯವಲ್ಲ. ಮಕ್ಕಳು ಏನು ನೋಡುತ್ತಾರೆ, ಅವರು ಅದರಲ್ಲಿ ಎಷ್ಟು ಸಮಯ ಕಳೆಯುತ್ತಾರೆ ಮತ್ತು ಪೋಷಕರು ತೊಡಗಿಸಿಕೊಂಡಿದ್ದಾರೆಯೇ ಎಂಬುದು ಅವರ ಬೆಳವಣಿಗೆಯ ಮೇಲೆ ಬೀರುವ ಪ್ರಭಾವಕ್ಕೆ ಸಂಬಂಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor