Photo Credit : news18.com

ಬೆಂಗಳೂರು: ಆರ್ಥಿಕ ಸಂಕಷ್ಟ, ದುಡಿಯುವ ಅನಿವಾರ್ಯತೆ ಅಥವಾ ಉನ್ನತ ಶಿಕ್ಷಣಕ್ಕೆ ತಡವಾಗಿ ಮರಳುವುದು ಸಾಧನೆಗೆ ಅಡ್ಡಿಯಾಗಬೇಕಿಲ್ಲ ಎಂಬುದನ್ನು ಆಂಧ್ರಪ್ರದೇಶದ ರಹ್ಮತುಲ್ಲಾ​ ಶೇಖ್ ಅವರ ಪಯಣ ತೋರಿಸಿಕೊಟ್ಟಿದೆ.

ಕೆಳ–ಮಧ್ಯಮ ವರ್ಗದ ಕುಟುಂಬದಿಂದ ಬಂದ ರಹ್ಮತುಲ್ಲಾ​ ಶೇಖ್, ಒಂದು ಕಾಲದಲ್ಲಿ ಸರಕು ಸಾಗಿಸುವ ಕೆಲಸ ಮಾಡುತ್ತಾ ದಿನಕ್ಕೆ ಸುಮಾರು 300 ರೂ. ಗಳಿಸುತ್ತಿದ್ದರು. ಬಳಿಕ ಇಂಜಿನಿಯರಿಂಗ್‌ ಪದವಿ ಪೂರ್ಣಗೊಳಿಸಿ, ಉದ್ಯೋಗ ಮಾಡುತ್ತಲೇ GATEಗೆ ಸಿದ್ಧತೆ ನಡೆಸಿದರು. 2024ರ GATE ಪರೀಕ್ಷೆಯಲ್ಲಿ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ ವಿಭಾಗದಲ್ಲಿ 809ನೇ ಅಖಿಲ ಭಾರತ ರ‍್ಯಾಂಕ್‌ ಪಡೆದರು. ಈ ಸಾಧನೆಯ ಬಳಿಕ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ನಲ್ಲಿ MTech ಪೂರ್ಣಗೊಳಿಸಿದರು. ಇದೀಗ ಸಿಂಗಾಪುರದ ನ್ಯಾಷನಲ್‌ ಯೂನಿವರ್ಸಿಟಿ (NUS)ಯಲ್ಲಿ ಪವರ್‌ ಎಲೆಕ್ಟ್ರಾನಿಕ್ಸ್‌ ವಿಷಯದಲ್ಲಿ ಪಿಎಚ್‌ಡಿ ಅಧ್ಯಯನ ಆರಂಭಿಸಿದ್ದಾರೆ.

ರಹ್ಮತುಲ್ಲಾ ಅವರ ಶೈಕ್ಷಣಿಕ ಸಾಧನೆ ಹಾಗೂ ಹೋರಾಟದ ಕಥೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದಿದೆ. ಅವರ LinkedIn ಪ್ರೊಫೈಲ್‌ ಪ್ರಕಾರ, NUSನಲ್ಲಿ ಡಾಕ್ಟರೇಟ್‌ ಅಧ್ಯಯನ ಆರಂಭಿಸುವ ಮೊದಲು ಅವರು IIScನಲ್ಲಿ MTech ಪೂರ್ಣಗೊಳಿಸಿದ್ದರು.

ಆಂಧ್ರಪ್ರದೇಶದಲ್ಲಿ ಆರಂಭ:

ರಹ್ಮತುಲ್ಲಾ ತಮ್ಮ ಆರಂಭಿಕ ಶಿಕ್ಷಣವನ್ನು ಆಂಧ್ರಪ್ರದೇಶದಲ್ಲಿ ಪೂರ್ಣಗೊಳಿಸಿದರು. ಜಿಲ್ಲಾ ಪರಿಷತ್‌ ಪ್ರೌಢಶಾಲೆಯಲ್ಲಿ ಓದುವುದಕ್ಕೂ ಮೊದಲು ಸಸಿಕಾಂತ ರೆಡ್ಡಿ ಜೂನಿಯರ್‌ ಕಾಲೇಜಿನಲ್ಲಿ ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಅಧ್ಯಯನ ಮಾಡಿದರು.

ನಂತರ ಶ್ರೀ ವೆಂಕಟೇಶ್ವರ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ಗೆ ಸೇರಿದರು. 2021ರಲ್ಲಿ ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್‌ನಲ್ಲಿ BTech ಪದವಿ ಪಡೆದರು. 10ರಲ್ಲಿ 8.9 CGPA ಗಳಿಸಿದರು.

ಶಿಕ್ಷಣದ ಜತೆಗೆ ಆರ್ಥಿಕ ಸಂಕಷ್ಟವನ್ನೂ ಎದುರಿಸಬೇಕಾಯಿತು. ಈ ಅವಧಿಯಲ್ಲಿ ಪೋರ್ಟರ್‌ ಆಗಿ ಕೆಲಸ ಮಾಡುತ್ತಿದ್ದ ಅವರು ದಿನಕ್ಕೆ ಸುಮಾರು 300 ರೂ. ಗಳಿಸುತ್ತಿದ್ದರು.

ಉದ್ಯೋಗ ಮಾಡುತ್ತಲೇ GATEಗೆ ಸಿದ್ಧತೆ:

BTech ಪೂರ್ಣಗೊಳಿಸಿದ ಬಳಿಕ ರಹ್ಮತುಲ್ಲಾ ಕಾರ್ಪೊರೇಟ್‌ ವಲಯಕ್ಕೆ ಪ್ರವೇಶಿಸಿದರು. 2022ರ ಫೆಬ್ರವರಿಯಲ್ಲಿ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಸಿಸ್ಟಮ್ಸ್‌ ಇಂಜಿನಿಯರ್‌ ಆಗಿ ಕೆಲಸ ಆರಂಭಿಸಿದರು.

ಪೂರ್ಣಕಾಲಿಕ ಉದ್ಯೋಗದ ನಡುವೆಯೂ ಉನ್ನತ ಶಿಕ್ಷಣದ ಗುರಿಯನ್ನು ಅವರು ಕೈಬಿಡಲಿಲ್ಲ. ಕೆಲಸದ ಜತೆಗೆ GATE ಪರೀಕ್ಷೆಗೆ ಸಿದ್ಧತೆ ನಡೆಸಿದರು. ಉದ್ಯೋಗ ಮತ್ತು ಪರೀಕ್ಷೆಯ ತಯಾರಿಯನ್ನು ಒಟ್ಟಿಗೆ ನಿಭಾಯಿಸುವುದು ಸವಾಲಾಗಿದ್ದರೂ ಅವರು ಪ್ರಯತ್ನ ಮುಂದುವರಿಸಿದರು.

ಅದರ ಫಲವಾಗಿ 2024ರ GATE ಪರೀಕ್ಷೆಯಲ್ಲಿ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ನಲ್ಲಿ 809ನೇ ಅಖಿಲ ಭಾರತ ರ‍್ಯಾಂಕ್‌ ಪಡೆದರು.

IIScನಲ್ಲಿ MTech:

GATE ಫಲಿತಾಂಶ ರಹ್ಮತುಲ್ಲಾ ಅವರಿಗೆ ದೇಶದ ಪ್ರಮುಖ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾದ IIScಗೆ ಪ್ರವೇಶದ ಅವಕಾಶ ಕಲ್ಪಿಸಿತು. ಬೆಂಗಳೂರಿನ IIScನಲ್ಲಿ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ನಲ್ಲಿ MTechಗೆ ಸೇರಿದರು.

IIScನಲ್ಲಿ ವ್ಯಾಸಂಗ ಮಾಡುವ ವೇಳೆ ಅನಲಾಗ್‌ ಇಂಟಿಗ್ರೇಟೆಡ್‌ ಸರ್ಕ್ಯೂಟ್‌ ವಿನ್ಯಾಸ ಮತ್ತು ಪವರ್‌ ಎಲೆಕ್ಟ್ರಾನಿಕ್ಸ್‌ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಂಡರು. MTech ಅಧ್ಯಯನದ ಜತೆಗೆ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ ವಿಭಾಗದಲ್ಲಿ ಬೋಧನಾ ಸಹಾಯಕರಾಗಿಯೂ ಕೆಲಸ ಮಾಡಿದರು.

ಅವರ LinkedIn ಪ್ರೊಫೈಲ್‌ ಪ್ರಕಾರ, ಪವರ್‌ ಎಲೆಕ್ಟ್ರಾನಿಕ್ಸ್‌ ಲ್ಯಾಬೊರೇಟರಿ, ಕಂಟ್ರೋಲ್‌ ಸಿಸ್ಟಮ್ಸ್‌ ಡಿಸೈನ್‌ ಕೋರ್ಸ್‌ ಮತ್ತು SMPC ಲ್ಯಾಬ್‌ನೊಂದಿಗೆ ಅವರು ಕೆಲಸ ಮಾಡಿದ್ದಾರೆ. IIScನಲ್ಲಿ ಉದ್ಯೋಗ ನೇಮಕಾತಿ ಸಂಯೋಜಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಹೀಗಾಗಿ IIScನಲ್ಲಿನ ಅವರ ಅವಧಿ ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗಿರಲಿಲ್ಲ. ಬೋಧನೆ, ಪ್ರಯೋಗಾಲಯದ ಚಟುವಟಿಕೆಗಳು ಮತ್ತು ವಿದ್ಯಾರ್ಥಿಗಳ ನಿಯೋಜನೆಗೆ ಸಂಬಂಧಿಸಿದ ಕೆಲಸಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದರು. GATE ತಯಾರಿಗೆ ಸಂಬಂಧಿಸಿದ ಸಲಹೆಗಳು ಮತ್ತು ತಮ್ಮ ಶೈಕ್ಷಣಿಕ ಪಯಣದ ಮಾಹಿತಿಯನ್ನು Instagramನ @ramnfinity ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ.

2026ರ ಜೂನ್‌ನಲ್ಲಿ ಅವರು IIScನಿಂದ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ ನಲ್ಲಿ MTech ಪೂರ್ಣಗೊಳಿಸಿದರು.

15 ಲಕ್ಷ ರೂ.ವರೆಗಿನ ಉದ್ಯೋಗದ ಆಫರ್:

GATE ಸಾಧನೆಯ ಬಳಿಕ ರಾಮತುಲ್ಲಾ ಅವರಿಗೆ ಹಲವು ಸಾರ್ವಜನಿಕ ವಲಯದ ಕಂಪೆನಿಗಳಿಂದ ವಾರ್ಷಿಕ ಸುಮಾರು 15 ಲಕ್ಷ ರೂ. ಪ್ಯಾಕೇಜ್‌ ನ ಉದ್ಯೋಗ ಆಫರ್ ಗಳು ಬಂದಿದ್ದವು ಎಂದು News18 ಹಿಂದಿ ವರದಿ ಮಾಡಿದೆ.

ಉತ್ತಮ ಸಂಬಳದ ಉದ್ಯೋಗಕ್ಕೆ ಸೇರುವ ಅವಕಾಶವಿದ್ದರೂ ಅವರು ಸಂಶೋಧನೆ ಮತ್ತು ಉನ್ನತ ಶಿಕ್ಷಣದ ಹಾದಿಯನ್ನೇ ಆಯ್ಕೆ ಮಾಡಿಕೊಂಡರು.

2026ರ ಆಗಸ್ಟ್‌ನಲ್ಲಿ ಅವರು ಸಿಂಗಾಪುರದ ನ್ಯಾಷನಲ್‌ ಯೂನಿವರ್ಸಿಟಿಯಲ್ಲಿ ಪವರ್‌ ಎಲೆಕ್ಟ್ರಾನಿಕ್ಸ್‌ನಲ್ಲಿ ಪಿಎಚ್‌ಡಿ ಅಧ್ಯಯನ ಆರಂಭಿಸಿದರು.

‘ಆರಂಭಿಕ ಹಂತವು ಭವಿಷ್ಯವನ್ನು ನಿರ್ಧರಿಸುವುದಿಲ್ಲ’

ತಮ್ಮ LinkedIn ಪೋಸ್ಟ್‌ನಲ್ಲಿ ರಹ್ಮತುಲ್ಲಾ ತಮ್ಮ ಪಯಣವನ್ನು ಹಂಚಿಕೊಂಡಿರುವ ಉದ್ದೇಶವನ್ನೂ ವಿವರಿಸಿದ್ದಾರೆ.

‘ನನ್ನ ಸಾಧನೆಗಳನ್ನು ಪ್ರದರ್ಶಿಸಲು ನಾನು ಇದನ್ನು ಹಂಚಿಕೊಳ್ಳುತ್ತಿಲ್ಲ. ನಿಮ್ಮ ಆರಂಭಿಕ ಹಂತವು ನಿಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ ಎಂಬುದನ್ನು ಎಲ್ಲರಿಗೂ ನೆನಪಿಸಲು ಇದನ್ನು ಹಂಚಿಕೊಳ್ಳುತ್ತಿದ್ದೇನೆ. ತಾಳ್ಮೆ, ಸ್ಥಿರತೆ ಮತ್ತು ನಿರಂತರ ಕಠಿಣ ಪರಿಶ್ರಮದಿಂದ ಕನಸುಗಳು ವಾಸ್ತವವಾಗಬಹುದು.

ನನ್ನ ಪ್ರಯಾಣವು ಸಣ್ಣ ಹಳ್ಳಿಗಳು ಮತ್ತು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ತಮ್ಮನ್ನು ತಾವು ನಂಬುವಂತೆ ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ. ದೃಢನಿಶ್ಚಯ, ಶಿಸ್ತು ಮತ್ತು ಪರಿಶ್ರಮದಿಂದ ಎದುರಿಸಿದಾಗ ಯಾವುದೇ ಕನಸು ತುಂಬಾ ದೊಡ್ಡದಲ್ಲ’ ಎಂದು ಅವರು ಹೇಳಿದ್ದಾರೆ.

ಕೃಪೆ: news18.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor