ಸಾಂದರ್ಭಿಕ ಚಿತ್ರ | Photo Credit : magnific.com

ಇಂದು ದೇಶದ ಪ್ರಮುಖ ಮಹಾನಗರಗಳಲ್ಲಿ ಒಂದು ಪ್ಯಾಕೆಟ್ ಸಕ್ಕರೆ ಖರೀದಿಸಲು ಹೊರಟರೆ, 15 ದಿನಗಳ ಹಿಂದಿದ್ದ ಬೆಲೆಗಿಂತ ಸುಮಾರು ಶೇಕಡಾ 40 ರಷ್ಟು ಹೆಚ್ಚು ಹಣ ನೀಡಬೇಕಾಗುತ್ತದೆ. ಸಕ್ಕರೆಯ ತೀವ್ರ ಪೂರೈಕೆ ಕೊರತೆಯೇ ಇದಕ್ಕೆ ಮುಖ್ಯ ಕಾರಣ. ಇದು ಸಾಮಾನ್ಯವಾಗಿ ಆಗಸ್ಟ್‌ನಲ್ಲಿ ಓಣಂ ಮತ್ತು ರಕ್ಷಾಬಂಧನದೊಂದಿಗೆ ಆರಂಭವಾಗುವ ಹಬ್ಬದ ಋತುವಿನ ಆರಂಭದಲ್ಲೇ ಸಕ್ಕರೆ ದಾಸ್ತಾನನ್ನು ಬಲಪಡಿಸಲು ಸರ್ಕಾರವನ್ನು ಪ್ರೇರೇಪಿಸಿದೆ.

ಭಾರತವು ಒಂದೇ ವರ್ಷದಲ್ಲಿ ಅಗತ್ಯಕ್ಕಿಂತ ಹೆಚ್ಚುವರಿ ಸಕ್ಕರೆ ಹೊಂದಿದ್ದ ಪರಿಸ್ಥಿತಿಯಿಂದ ತೀವ್ರ ಸಕ್ಕರೆ ಅಭಾವದತ್ತ ತಲುಪಿದೆ.

ಪ್ರಸ್ತುತ ಸಕ್ಕರೆ ಉತ್ಪಾದನಾ ವರ್ಷದ ಆರಂಭದಲ್ಲಿ (ಅಕ್ಟೋಬರ್ 1, 2025 ರಿಂದ ಸೆಪ್ಟೆಂಬರ್ 30, 2026 ರವರೆಗೆ) ಸರ್ಕಾರ ಮತ್ತು ಉದ್ಯಮ ರಂಗವು ಹೆಚ್ಚುವರಿ ಸಕ್ಕರೆ ಲಭ್ಯತೆಯ ನಿರೀಕ್ಷೆಯಲ್ಲಿದ್ದವು. ಸಕ್ಕರೆ ಉತ್ಪಾದನೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ, ಎಥನಾಲ್ ಉತ್ಪಾದನೆಗೆ ಸಕ್ಕರೆಯ ಬಳಕೆಯು ಕಡಿಮೆಯಾಗುವ ಅಂದಾಜಿತ್ತು. ಅಲ್ಲದೆ, ಸಕ್ಕರೆ ದಾಸ್ತಾನು ಹೆಚ್ಚಾಗಿ ಕಬ್ಬು ಬೆಳೆಗಾರರಿಗೆ ನೀಡಬೇಕಾದ ಬಾಕಿ ಹಣ ಉಳಿಯುವುದನ್ನು ತಡೆಯಲು, ಹೆಚ್ಚಿನ ಸಕ್ಕರೆ ರಫ್ತು ಮಾಡಲು ಮಿಲ್ ಗಳ ಆಡಳಿತ ಮಂಡಳಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದವು.

ಭಾರತೀಯ ಸಕ್ಕರೆ ಮತ್ತು ಜೈವಿಕ-ಇಂಧನ ತಯಾರಕರ ಸಂಘ (ISMA) ಜುಲೈ 2025 ರಲ್ಲಿ ಬಿಡುಗಡೆ ಮಾಡಿದ ತನ್ನ ಮೊದಲ ಅಂದಾಜಿನಲ್ಲಿ, 2025-26 ರ ಋತುವಿನಲ್ಲಿ ಸಕ್ಕರೆ ಉತ್ಪಾದನೆಯು 3.49 ಕೋಟಿ ಟನ್ (34.90 ಮಿಲಿಯನ್ ಟನ್) ತಲುಪಲಿದೆ ಎಂದು ನಿರೀಕ್ಷಿಸಿತ್ತು. ಇದು ಹಿಂದಿನ ವರ್ಷದ 2.96 ಕೋಟಿ ಟನ್‌ಗೆ ಹೋಲಿಸಿದರೆ ಶೇಕಡಾ 18.3 ರಷ್ಟು ಹೆಚ್ಚಿನ ಏರಿಕೆಯಾಗಿತ್ತು. ಸೆಪ್ಟೆಂಬರ್‌ನಲ್ಲಿ ನಡೆದ ತನ್ನ ವಾರ್ಷಿಕ ಸಭೆಯಲ್ಲೂ ಸಂಸ್ಥೆ ಇದನ್ನೇ ಪುನರುಚ್ಚರಿಸಿತ್ತು.

ಈ ಅಂದಾಜಿನ ಆಧಾರದ ಮೇಲೆ, ಸರ್ಕಾರವು ಋತುವಿನ ಆರಂಭದಲ್ಲೇ ಸಕ್ಕರೆ ರಫ್ತು ಮಾಡಲು ಉದ್ಯಮ ಕ್ಷೇತ್ರಕ್ಕೆ ಅನುಮತಿ ನೀಡಿತ್ತು. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಂಪೂರ್ಣವಾಗಿ ಭಿನ್ನವಾಗಿತ್ತು. 2024-25 ರ ಋತುವಿನಲ್ಲಿ ಸರ್ಕಾರವು ಜನವರಿ 2025 ರಲ್ಲಿ 10 ಲಕ್ಷ ಟನ್ ರಫ್ತಿಗೆ ಮಾತ್ರ ಅನುಮತಿ ನೀಡಿತ್ತು. ಆದರೆ ಪ್ರಸ್ತುತ ಋತುಗಾಗಿ, ಋತು ಆರಂಭವಾದ ತಕ್ಷಣ ಅಂದರೆ ನವೆಂಬರ್ 2025 ರಲ್ಲಿ ಆರಂಭಿಕ 15 ಲಕ್ಷ ಟನ್ ರಫ್ತಿಗೆ ಅನುಮೋದನೆ ನೀಡಿತು. ನಂತರ ಫೆಬ್ರವರಿಯಲ್ಲಿ ಮತ್ತೆ 5 ಲಕ್ಷ ಟನ್ ರಫ್ತಿಗೆ ಅನುಮತಿ ನೀಡಲಾಗಿತ್ತು.

ಆದರೆ ಮೇ ತಿಂಗಳ ವೇಳೆಗೆ ನಿರೀಕ್ಷೆಗಳು ಬದಲಾಗಿ, ಸರ್ಕಾರದ ನೀತಿ ಸಂಪೂರ್ಣ ಉಲ್ಟಾ ಆಯಿತು.

ದೇಶೀಯ ಪೂರೈಕೆಯನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಉಲ್ಲೇಖಿಸಿ ಸರ್ಕಾರ ಮೇ ತಿಂಗಳಲ್ಲಿ ಸೆಪ್ಟೆಂಬರ್ 30 ರವರೆಗೆ ಸಕ್ಕರೆ ರಫ್ತನ್ನು ನಿಷೇಧಿಸಿತು. ಜುಲೈ ವೇಳೆಗೆ ಆಲೆಗಳು ಮತ್ತು ವ್ಯಾಪಾರಿಗಳ ಮೇಲೆ ನಿಯಂತ್ರಣವನ್ನು ಬಿಗಿಗೊಳಿಸಿತು. ಹಬ್ಬದ ಸೀಸನ್ ಹತ್ತಿರವಾಗುತ್ತಿದ್ದ ಕಾರಣ ಮಾರುಕಟ್ಟೆಯು 23 ರಿಂದ 24 ಲಕ್ಷ ಟನ್‌ಗಳಷ್ಟು ಮಾರಾಟ ಕೋಟಾವನ್ನು ನಿರೀಕ್ಷಿಸಿತ್ತು. ಆದರೆ ಆಗಸ್ಟ್‌ನಲ್ಲಿ ಸರ್ಕಾರವು ಮಾಸಿಕ ಮಾರಾಟ ಕೋಟಾವನ್ನು ಹಿಂದಿನ ವರ್ಷದಷ್ಟೇ ಅಂದರೆ 22.5 ಲಕ್ಷ ಟನ್‌ಗಳಲ್ಲೇ ಕಾಯ್ದುಕೊಂಡಿತು. ಸಕ್ಕರೆ ಬೆಲೆಗಳು ತೀವ್ರವಾಗಿ ಏರಿಕೆಯಾದವು.

ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಜೂನ್ ಅಂತ್ಯದಿಂದ ಏರಿಕೆಯಾಗುತ್ತಿದ್ದ ಸಕ್ಕರೆ ಮಿಲ್ ದರ ಆಗಸ್ಟ್ ಮೊದಲ ವಾರದಲ್ಲಿ ಪ್ರತಿ 100 ಕೆಜಿಗೆ ರೂ 4,880-4,980 ಮುಟ್ಟಿತು. ನಂತರ ಆಗಸ್ಟ್ 18 ರಂದು ಬೆಲೆ ಸಾರ್ವಕಾಲಿಕ ದಾಖಲೆಯ ರೂ 5,350 ತಲುಪಿತು. ಮಾರನೆಯ ದಿನವೇ ಉತ್ತರ ಪ್ರದೇಶದ ಮಿಲ್ ಗಳಲ್ಲಿ ಸಕ್ಕರೆ ಬೆಲೆ ಪ್ರತಿ 100 ಕೆಜಿಗೆ ರೂ 5,850 ಕ್ಕೆ ಏರಿಕೆಯಾಯಿತು. ಇದು ಒಂದು ವಾರದ ಹಿಂದಿದ್ದ ರೂ 4,830 ಕ್ಕೆ ಹೋಲಿಸಿದರೆ ಇದು ಭಾರೀ ಏರಿಕೆಯಾಗಿತ್ತು.

ಈ ದಿಢೀರ್ ಹಾಗೂ ತೀವ್ರ ಬೆಲೆ ಏರಿಕೆಗೆ ತಕ್ಷಣ ಸ್ಪಂದಿಸಿದ ಸರ್ಕಾರ, ಆಗಸ್ಟ್ 19ರ ತಡರಾತ್ರಿ ಸಕ್ಕರೆ ದಾಸ್ತಾನು ಮಿತಿಯನ್ನು ಮತ್ತಷ್ಟು ಬಿಗಿಗೊಳಿಸಿತು. ದೊಡ್ಡ ಪ್ರಮಾಣದ ಕೈಗಾರಿಕಾ ಗ್ರಾಹಕರು ಸೆಪ್ಟೆಂಬರ್‌ನಿಂದ ತಮ್ಮ 15 ದಿನಗಳ ಅಗತ್ಯಕ್ಕಿಂತ ಹೆಚ್ಚಿನ ದಾಸ್ತಾನು ಹೊಂದುವುದನ್ನು ನಿರ್ಬಂಧಿಸಿತು. ತದನಂತರ ದಶಕದಲ್ಲೇ ಮೊದಲ ಬಾರಿಗೆ ಸಕ್ಕರೆ ಆಮದನ್ನು ಮುಕ್ತಗೊಳಿಸಿತು. ಶೇಕಡಾ 100 ರಷ್ಟಿದ್ದ ಆಮದು ಸುಂಕವನ್ನು ರದ್ದುಗೊಳಿಸಿ, ಆಗಸ್ಟ್ 20 ರಂದು 10 ಲಕ್ಷ ಟನ್ ಸಕ್ಕರೆ ಆಮದಿಗೆ ಅನುಮತಿ ನೀಡಿತು. ಅದೇ ದಿನ ಕರ್ನಾಟಕದ ಸಕ್ಕರೆ ಆಲೆಗಳಲ್ಲಿ ಬೆಲೆ ಪ್ರತಿ 100 ಕೆಜಿಗೆ ಭಾರೀ ಪ್ರಮಾಣದಲ್ಲಿ ಅಂದರೆ ರೂ 7,100 ರವರೆಗೆ ಏರಿಕೆಯಾಯಿತು.

ಆಗಿದ್ದೇನು?:

ರಫ್ತು ಮಾಡಲು ಮತ್ತು ಎಥನಾಲ್ ಉತ್ಪಾದನೆಗೆ ಬಳಸಲು ಸಾಕಷ್ಟು ಸಕ್ಕರೆ ಇರುತ್ತದೆ ಎಂದು ನಿರೀಕ್ಷಿಸಲಾಗಿದ್ದ ಮಾರುಕಟ್ಟೆಯು, ಹೆಚ್ಚಿನ ಕೋಟಾ ಬಿಡುಗಡೆ ಮಾಡಲು ಸರ್ಕಾರ ಯೋಚಿಸುವಂತಹ ಪರಿಸ್ಥಿತಿಗೆ ಇಷ್ಟೊಂದು ವೇಗವಾಗಿ ಹೇಗೆ ತಲುಪಿತು? ಎಂದು ಹೆಸರು ಹೇಳಲಿಚ್ಛಿಸದ ಅಂತರರಾಷ್ಟ್ರೀಯ ಸರಕು ಸಂಸ್ಥೆಯ ವ್ಯಾಪಾರಿಯೊಬ್ಬರು ಪ್ರಶ್ನಿಸಿದ್ದಾರೆ ಎಂದು ʼಹಿಂದೂಸ್ತಾನ್ ಟೈಮ್ಸ್ʼ ವರದಿ ಉಲ್ಲೇಖಿಸಿದೆ.

ಹೆಚ್ಚುವರಿ ಸಕ್ಕರೆ ಲಭ್ಯತೆ ಅಭಾವಕ್ಕೆ ತಿರುಗಿದ್ದು ಹೇಗೆ?

ಸಕ್ಕರೆ ವರ್ಷದ ಕಾಲಾನುಕ್ರಮವು ಈ ಕಥೆಯನ್ನು ವಿವರಿಸುತ್ತದೆ. ಐಎಸ್ಎಂಎ ಸಂಸ್ಥೆಯು ನವೆಂಬರ್‌ನಲ್ಲಿ ತಾನು ಅಂದಾಜಿಸಿದ್ದ ಒಟ್ಟು ಸಕ್ಕರೆ ಉತ್ಪಾದನೆಯ ಪ್ರಮಾಣವನ್ನು 3.43 ಕೋಟಿ ಟನ್‌ಗೆ ಸ್ವಲ್ಪ ಮಟ್ಟಿಗೆ ಕಡಿತಗೊಳಿಸಿತು.

ಇದರಲ್ಲಿ ಸುಮಾರು 34 ಲಕ್ಷ ಟನ್‌ನಷ್ಟು ಸಕ್ಕರೆಯನ್ನು ಎಥನಾಲ್ ಉತ್ಪಾದನೆಗೆ ಬಳಸಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಹೀಗಾಗಿ ಆಹಾರದ ಬಳಕೆಗೆ ನಿವ್ವಳ 3.10 ಕೋಟಿ ಟನ್ ಸಕ್ಕರೆ ಲಭ್ಯವಾಗುತ್ತಿತ್ತು. ಆರಂಭಿಕ ದಾಸ್ತಾನು 50 ಲಕ್ಷ ಟನ್ ಇರುವುದರಿಂದ, ಒಟ್ಟು ಸಕ್ಕರೆ ಲಭ್ಯತೆ ಸುಮಾರು 3.60 ಕೋಟಿ ಟನ್ ತಲುಪುವ ಸಾಧ್ಯತೆಯಿತ್ತು. ದೇಶೀಯ ಬಳಕೆ ಸುಮಾರು 2.85 ಕೋಟಿ ಟನ್ ಇರುವುದರಿಂದ, ಕನಿಷ್ಠ 20 ಲಕ್ಷ ಟನ್ ರಫ್ತಿಗೆ ಬೆಂಬಲ ನೀಡುವಷ್ಟು ಸಕ್ಕರೆ ಉಳಿಯಲಿದೆ ಎಂದು ಐಎಸ್ಎಂಎ ಹೇಳಿತ್ತು.

ಆದರೆ, ಉತ್ಪಾದನೆಯ ಅಂದಾಜು ಪ್ರಮಾಣ ಕುಸಿಯುತ್ತಲೇ ಹೋಯಿತು.

ಫೆಬ್ರವರಿಯಲ್ಲಿ ಐಎಸ್ಎಂಎ ತನ್ನ ಒಟ್ಟು ಉತ್ಪಾದನೆಯ ಅಂದಾಜನ್ನು 3.24 ಕೋಟಿ ಟನ್‌ಗೆ ಕಡಿತಗೊಳಿಸಿತು. ಈ ಇಳಿಕೆಯು ದೇಶದ ಒಟ್ಟು ಒಂದು ತಿಂಗಳ ಸಕ್ಕರೆ ಬಳಕೆಗೆ ಸಮನಾಗಿತ್ತು. ಸಂಸ್ಥೆಯು ಎಥನಾಲ್ ಬಳಕೆಯ ನಂತರದ ನಿವ್ವಳ ಸಕ್ಕರೆ ಉತ್ಪಾದನೆಯ ಅಂದಾಜನ್ನು 2.93 ಕೋಟಿ ಟನ್‌ಗೆ ಇಳಿಸಿತು ಮತ್ತು ಎಥನಾಲ್ ಉತ್ಪಾದನೆಗೆ 31 ಲಕ್ಷ ಟನ್ ಸಕ್ಕರೆ ಬಳಕೆಯಾಗಬಹುದು ಎಂದು ಅಂದಾಜಿಸಿತು.

ಎಪ್ರಿಲ್‌ನಲ್ಲಿ ಒಟ್ಟು ಉತ್ಪಾದನೆಯ ಅಂದಾಜನ್ನು ಮತ್ತೆ 3.20 ಕೋಟಿ ಟನ್‌ಗೆ ತಗ್ಗಿಸಲಾಯಿತು.

ಪ್ರಸ್ತುತ ಋತುವಿನ ಉತ್ಪಾದನೆಯು 3.06 ಕೋಟಿ ಟನ್ ಇರಲಿದೆ ಎಂದು ಸರ್ಕಾರ ಈಗ ಅಂದಾಜಿಸಿದೆ. ಎಥನಾಲ್ ಗೆ 29 ಲಕ್ಷ ಟನ್ ಮತ್ತು ರಫ್ತಿಗೆ 8 ಲಕ್ಷ ಟನ್ ಬಳಸಲಾಗಿರುವುದರಿಂದ, ದೇಶದಲ್ಲಿ ಉಳಿಯುವ ಸಕ್ಕರೆಯ ಲಭ್ಯತೆ 2.69 ಕೋಟಿ ಟನ್ ಆಗಲಿದೆ. ಇದು ದೇಶದ ನಿರೀಕ್ಷಿತ ಬಳಕೆ ಪ್ರಮಾಣವಾದ 2.85 ಕೋಟಿ ಟನ್‌ಗಿಂತ ಕಡಿಮೆಯಾಗಿದೆ. ಆದರೂ, ಕಳೆದ ವರ್ಷದ ದಾಸ್ತಾನು ಋತುವಿನ ಅಂತ್ಯದವರೆಗೆ ಲಭ್ಯತೆಯನ್ನು ಹೆಚ್ಚಿಸಲಿದೆ.

ಐಎಸ್ಎಂಎ ಎಪ್ರಿಲ್‌ನಲ್ಲಿ ನೀಡಿದ ಅಂದಾಜಿಗಿಂತ ಸಾಕಷ್ಟು ಮುಂಚಿತವಾಗಿ, ಮಾರ್ಚ್ ಮೊದಲ ವಾರದಲ್ಲಿ 'ಅಖಿಲ ಭಾರತ ಸಕ್ಕರೆ ವ್ಯಾಪಾರ ಸಂಘ' (AISTA), 2025-26 ರ ಋತುವಿನ ನಿವ್ವಳ ಸಕ್ಕರೆ ಉತ್ಪಾದನಾ ಮುನ್ನೋಟವನ್ನು 2.83 ಕೋಟಿ ಟನ್‌ಗೆ ತೀವ್ರವಾಗಿ ಕಡಿತಗೊಳಿಸಿತು. ಭಾರತದ ಪ್ರಮುಖ ಉತ್ಪಾದನಾ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಇಳುವರಿ ಕಡಿಮೆಯಾಗಿದ್ದೇ ಈ ಕಡಿತಕ್ಕೆ ಕಾರಣ ಎಂದು ಸಂಸ್ಥೆ ತಿಳಿಸಿತು.

"ಈ ವಿಭಾಗದ ಮೇಲಿನ ನಿಕಟ ಉಸ್ತುವಾರಿಯನ್ನು ಪರಿಗಣಿಸಿ, ಉತ್ಪಾದನೆಯ ಮೌಲ್ಯಮಾಪನಕ್ಕಾಗಿ ಸರ್ಕಾರವು ಐಎಸ್ಎಂಎದಂತಹ ಉದ್ಯಮ ಸಂಸ್ಥೆಗಳನ್ನು ನಂಬಿರುವುದು ಸಹಜವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸಕ್ಕರೆ ಮತ್ತು ಕಬ್ಬಿನ ಅಂದಾಜಿನಲ್ಲಿ ಅವು ಮಾಡುತ್ತಿರುವ ಸತತ ತಿದ್ದುಪಡಿಗಳು ಸರ್ಕಾರ ಹಾಗೂ ಉದ್ಯಮದ ಮುನ್ಸೂಚನಾ ವ್ಯವಸ್ಥೆಗಳು ಮತ್ತಷ್ಟು ಬಲಗೊಳ್ಳಬೇಕಿದೆ ಎಂಬುದನ್ನು ತೋರಿಸುತ್ತವೆ. ಅಪೂರ್ಣ ಮೌಲ್ಯಮಾಪನಗಳು ಪ್ರಮುಖ ನೀತಿ ನಿರ್ಧಾರಗಳ ಮೇಲೆ ಪರಿಣಾಮ ಬೀರಿದ್ದು, ಗ್ರಾಹಕರು, ದೇಶೀಯ ವ್ಯಾಪಾರ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ವಿಶ್ವಾಸಾರ್ಹತೆಗೆ ಧಕ್ಕೆ ತಂದಿವೆ" ಎಂದು ಕೃಷಿ ಸಲಹಾ ಸಂಸ್ಥೆ HnyB ಸಂಸ್ಥಾಪಕ ದೀಪಕ್ ಪಾರೀಕ್ ಹೇಳಿದ್ದಾರೆ.

ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತನ್ನ ಅಂದಾಜುಗಳನ್ನು ಸಮರ್ಥಿಸಿಕೊಂಡ ಐಎಸ್ಎಂಎ, ಮೊದಲ ಅಂದಾಜುಗಳು ಕೇವಲ ಪ್ರಾಥಮಿಕವಾಗಿದ್ದು ಋತು ಮುಂದುವರಿದಂತೆ ತಿದ್ದುಪಡಿ ಮಾಡಲಾಗುತ್ತದೆ ಎಂದಿದೆ. "ಇಳುವರಿ ಮತ್ತು ಚೇತರಿಕೆಯ ಆಧಾರದ ಮೇಲೆ ಈ ತಿದ್ದುಪಡಿಗಳನ್ನು ಮಾಡಲಾಗುತ್ತದೆ" ಎಂದು ಡೈರೆಕ್ಟರ್ ಜನರಲ್ ದೀಪಕ್ ಬಲ್ಲಾನಿ ಹೇಳಿದ್ದಾರೆ.

ಐಎಸ್ಎಂಎ ನೀಡುವ ಉತ್ಪಾದನಾ ಅಂದಾಜುಗಳು ಪದೇ ಪದೇ ಅತಿಯಾದ ನಿರೀಕ್ಷೆಯಿಂದ ಕೂಡಿದ್ದವು ಎಂಬುದು ಸಾಬೀತಾಗಿದೆ. ಕಳೆದ ನಾಲ್ಕು ಸಕ್ಕರೆ ಋತುಗಳಲ್ಲೂ ಅದರ ಮೊದಲ ಅಂದಾಜು ಅಂತಿಮ ಉತ್ಪಾದನೆಗಿಂತ ಗಮನಾರ್ಹವಾಗಿ ಹೆಚ್ಚಿತ್ತು. ಸರ್ಕಾರದ ರಫ್ತು ನಿರ್ಧಾರವು ಸಕ್ಕರೆಯ ಸುಲಭ ಲಭ್ಯತೆಯ ಮುನ್ನೋಟಗಳನ್ನು ಆಧರಿಸಿದ್ದರಿಂದ ಈ ಇತಿಹಾಸವು ಪ್ರಾಮುಖ್ಯತೆ ಪಡೆಯುತ್ತದೆ.

ಸರ್ಕಾರವು ಉದ್ಯಮದ ಅಂದಾಜುಗಳನ್ನೇ ನಂಬಿ ಸಾಗುತ್ತದೆ ಎಂಬುದನ್ನು ಅದು ನಿರಾಕರಿಸಿದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು "ಸರ್ಕಾರ ಬಳಸುವ ಸಕ್ಕರೆ ಉತ್ಪಾದನೆಯ ಅಂದಾಜುಗಳು ಕಬ್ಬು ಉತ್ಪಾದಿಸುವ ರಾಜ್ಯಗಳ ಕಬ್ಬು ಕಮಿಷನರ್‌ಗಳು, ಸಕ್ಕರೆ ಕಮಿಷನರ್‌ಗಳು ಹಾಗೂ ಸಕ್ಕರೆ ನಿರ್ದೇಶನಾಲಯದಿಂದ ಪಡೆದ ಮಾಹಿತಿಯನ್ನು ಆಧರಿಸಿವೆ. ಉದ್ಯಮ ರಂಗದ ಅಂದಾಜುಗಳು ಸರ್ಕಾರದ ಉತ್ಪಾದನಾ ಮುನ್ಸೂಚನೆ ಅಥವಾ ನೀತಿ ನಿರ್ಧಾರಗಳಿಗೆ ಆಧಾರವಲ್ಲ," ಎಂದು ಸ್ಪಷ್ಟಪಡಿಸಿದೆ.

"ಪ್ರಸ್ತುತ ಋತುವಿನಲ್ಲಿ ಆರಂಭಿಕ ಅಂದಾಜಿಗಿಂತ ಕಡಿಮೆ ಉತ್ಪಾದನೆಯಾಗಲು ಬೆಳೆ ಮತ್ತು ಹವಾಮಾನ ಸಂಬಂಧಿತ ಕಾರಣಗಳು ಕಾರಣವಾಗಿವೆ. ಕೆಂಪು ಕೊಳೆ ರೋಗ, ತುದಿಕೊರೆಕ ಹುಳು ರೋಗ ಹಾಗೂ ಮಹಾರಾಷ್ಟ್ರದಲ್ಲಿ ಅತಿಯಾದ ಮಳೆಯಿಂದ ಉಂಟಾದ ನೀರು ನಿಲ್ಲುವಿಕೆ ಇದಕ್ಕೆ ಕಾರಣ. ಕಡಿಮೆ ಉತ್ಪಾದನೆಯ ಹೊರತಾಗಿಯೂ, ಅಕ್ಟೋಬರ್‌ನಲ್ಲಿ ಹೊಸ ಕಬ್ಬು ಸಂಸ್ಕರಿಸುವ ಋತು ಪ್ರಾರಂಭವಾಗುವವರೆಗೆ ದೇಶೀಯ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಸಕ್ಕರೆ ದಾಸ್ತಾನು ಲಭ್ಯವಿದೆ" ಎಂದು ಇಲಾಖೆ ಹೇಳಿದೆ.

ಎಥೆನಾಲ್ ವೈರುಧ್ಯ:

ಎಥೆನಾಲ್ ನೀತಿಯು ಈ ಸಂಪೂರ್ಣ ವಿಷಯದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ಕಬ್ಬಿನ ಇಳುವರಿಯಲ್ಲಿ ಎಷ್ಟು ಪ್ರಮಾಣ ಸಕ್ಕರೆ ಉತ್ಪಾದನೆಗೆ ಬಳಕೆಯಾಗಬೇಕು ಎಂಬುದನ್ನು ಇದು ನಿರ್ಧರಿಸುತ್ತದೆ.

2025-26 ರ ಸಕ್ಕರೆ ಋತುವಿನ ಆರಂಭದಲ್ಲಿ, ಎಥೆನಾಲ್ ಯೋಜನೆಗಾಗಿ ಸಕ್ಕರೆಯನ್ನು ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತದೆ ಎಂದು ಭಾವಿಸಲಾಗಿತ್ತು. ಸಕ್ಕರೆಗೆ ಸಮನಾದ ಸುಮಾರು 45 ರಿಂದ 50 ಲಕ್ಷ ಟನ್ ಕಬ್ಬನ್ನು ಎಥೆನಾಲ್ ಉತ್ಪಾದನೆಗೆ ತಿರುಗಿಸಬಹುದು ಎಂದು ಉದ್ಯಮ ರಂಗ ನಿರೀಕ್ಷಿಸಿತ್ತು. ಆದರೆ ತೈಲ ಮಾರಾಟ ಕಂಪನಿಗಳು 2025-26 ರ ಎಥನಾಲ್ ಪೂರೈಕೆ ವರ್ಷಕ್ಕಾಗಿ ಸಕ್ಕರೆ ಆಧಾರಿತ ಮೂಲಗಳಿಂದ ಕೇವಲ 290 ಕೋಟಿ ಲೀಟರ್ ಎಥನಾಲ್ ಅನ್ನು ಮಾತ್ರ ಮೀಸಲಿಟ್ಟವು.

ಸುಮಾರು 32 ರಿಂದ 34 ಲಕ್ಷ ಟನ್ ಸಕ್ಕರೆಯನ್ನು ಎಥೆನಾಲ್ ಉತ್ಪಾದನೆಗೆ ಬಳಸಬಹುದು ಎಂದು ಐಎಸ್ಎಂಎ ಸಂಸ್ಥೆ ಮುಂಚಿತವಾಗಿ ಅಂದಾಜಿಸಿತ್ತು. ಆದರೆ 2025-26 ರಲ್ಲಿ ಈ ಬಳಕೆ ಸುಮಾರು 30 ಲಕ್ಷ ಟನ್‌ಗೆ ಇಳಿಕೆಯಾಗಿದೆ. ಅಂದರೆ ಆರಂಭಿಕ ನಿರೀಕ್ಷೆಗೆ ಹೋಲಿಸಿದರೆ ಎಥೆನಾಲ್ ಉತ್ಪಾದನೆಗಾಗಿ ಆಹಾರ ಮಾರುಕಟ್ಟೆಯಿಂದ ಕಡಿಮೆ ಪ್ರಮಾಣದ ಸಕ್ಕರೆಯನ್ನು ತೆಗೆದುಕೊಳ್ಳಲಾಗಿದೆ.

ಎಥೆನಾಲ್ ಉತ್ಪಾದನೆಗೆ ಕಡಿಮೆ ಸಕ್ಕರೆ ಬಳಕೆಯಾದರೆ ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸಕ್ಕರೆ ಲಭ್ಯವಾಗಬೇಕಿತ್ತು. ಆದರೆ ಒಟ್ಟು ಸಕ್ಕರೆ ಉತ್ಪಾದನೆಯ ಪ್ರಮಾಣವೇ ಕಡಿಮೆಯಾಗಿದ್ದರಿಂದ, ಎಥೆನಾಲ್‌ಗೆ ಬಳಸಿದ ಈ ಸಣ್ಣ ಪ್ರಮಾಣವೂ ಕೂಡ ಮಿತಿಮೀರಿದಂತೆ ಕಂಡುಬಂದಿದೆ.

ಇಂಧನ ಆಮದು ವೆಚ್ಚವನ್ನು ಕಡಿಮೆ ಮಾಡಲು ಭಾರತವು ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಮಾಡಲು ಪ್ರಾರಂಭಿಸಿತು. ಪ್ರಸ್ತುತ ಸಕ್ಕರೆ ಬೆಲೆ ಸಾರ್ವಕಾಲಿಕ ಏರಿಕೆ ಕಂಡಿರುವುದರಿಂದ ಹಾಗೂ ಪೂರೈಕೆ ಅಭಾವದ ಭೀತಿ ಮುಂದಿನ ವರ್ಷಕ್ಕೂ ವಿಸ್ತರಿಸುವ ಸಾಧ್ಯತೆಯಿರುವುದರಿಂದ, ಈ ವರ್ಷದ ಉಳಿದ ಅವಧಿ ಮತ್ತು ಮುಂದಿನ ವರ್ಷ ಕಬ್ಬಿನಿಂದ ಎಥನಾಲ್ ತಯಾರಿಸುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಸಾಧ್ಯತೆಯಿದೆ.

ಬೆಲೆ ಏರಿಕೆಗೆ ಎಥೆನಾಲ್ ಕಾರಣವಲ್ಲ ಎಂದು ಸರ್ಕಾರ ಪ್ರತಿಪಾದಿಸಿದೆ. ಆಗಸ್ಟ್ 21 ರಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಸಕ್ಕರೆ ಬೆಲೆಯ ದಿಢೀರ್ ಏರಿಕೆಗೆ ಎಥೆನಾಲ್ ಬಳಕೆಯನ್ನು ಹೊಣೆ ಮಾಡಲಾಗುವುದಿಲ್ಲ ಎಂದಿದೆ. ಬದಲಿಗೆ ನಿರೀಕ್ಷೆಗಿಂತ ಕಡಿಮೆ ಉತ್ಪಾದನೆ, ಹಬ್ಬದ ಋತುವಿನ ಹೆಚ್ಚಿನ ಬೇಡಿಕೆ ಮತ್ತು ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿಯಾಗಿದ್ದೇ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಿದೆ.

ಸಕ್ಕರೆ ಬೆಲೆ ಏರಿಕೆಗೆ ಕಡಿಮೆ ಉತ್ಪಾದನೆ, ಹಬ್ಬದ ಋತುವಿನಲ್ಲಿ ಹೆಚ್ಚಿದ ಬೇಡಿಕೆ, ಹವಾಮಾನ ಬೆಳೆ ಹಾನಿ, ಜಾಗತಿಕ ಪೂರೈಕೆ ಪರಿಸ್ಥಿತಿಗಳು ಮತ್ತು ಮಾರುಕಟ್ಟೆಯ ನಡವಳಿಕೆಗಳು ಕಾರಣವಾಗಿವೆ. ಇದನ್ನು ಎಥನಾಲ್ ಬಳಕೆಗೆ ಲಿಂಕ್ ಮಾಡಲು ಸಾಧ್ಯವಿಲ್ಲ. ಎಥನಾಲ್ ಉತ್ಪಾದನೆಗೆ ಬಳಸಲಾದ ಸಕ್ಕರೆಯ ಪಾಲು 2022-23 ರಲ್ಲಿ ಶೇಕಡಾ 12 ರಷ್ಟಿತ್ತು. 2025-26 ರಲ್ಲಿ ಇದು ಶೇಕಡಾ 9 ಕ್ಕೆ ಇಳಿಕೆಯಾಗಿದೆ. ಈಗ ಒಟ್ಟು ಎಥೆನಾಲ್ ಉತ್ಪಾದನೆಯ ಮುಕ್ಕಾಲು ಭಾಗವು ಧಾನ್ಯಗಳಿಂದ, ಮುಖ್ಯವಾಗಿ ಮೆಕ್ಕೆಜೋಳದಿಂದ ತಯಾರಾಗುತ್ತಿದೆ" ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಸಕ್ಕರೆ ಬೆಲೆ ಹಿಂದೆಂದಾದರೂ ಇಷ್ಟು ಮಟ್ಟಿಗೆ ಏರಿಕೆಯಾಗಿತ್ತೇ?

ಸಕ್ಕರೆ ಬೆಲೆ ಈ ವರ್ಷ ಕಂಡಷ್ಟು ಗರಿಷ್ಠ ಮಟ್ಟವನ್ನು ಇತಿಹಾಸದಲ್ಲೇ ಎಂದೂ ತಲುಪಿರಲಿಲ್ಲ. ಈ ಶತಮಾನದಲ್ಲಿ ಕೇವಲ ಎರಡು ಬಾರಿಯಷ್ಟೇ ದೇಶದಲ್ಲಿ ತೀವ್ರ ಸಕ್ಕರೆ ಅಭಾವ ಎದುರಾಗಿತ್ತು. ಮೊದಲನೆಯದು 2009-10 ರಲ್ಲಿ ಮತ್ತು ಎರಡನೆಯದು 2016-17 ರಲ್ಲಿ.

ಫೆಬ್ರವರಿ 2017 ರಲ್ಲಿ, ಪ್ರಮುಖ ಮಾರುಕಟ್ಟೆಗಳಲ್ಲಿ ಸಕ್ಕರೆ ಸಗಟು ಬೆಲೆ ಪ್ರತಿ 100 ಕೆಜಿಗೆ 4,080 ರಿಂದ 4,180 ರೂಪಾಯಿ ತಲುಪಿತ್ತು. ಕಡಿಮೆ ದಾಸ್ತಾನು, ಹೆಚ್ಚಿನ ಬೇಡಿಕೆ, ಕೃತಕ ಅಭಾವ ಮತ್ತು ಕಡಿಮೆ ಉತ್ಪಾದನಾ ಅಂದಾಜುಗಳು ಇದಕ್ಕೆ ಕಾರಣ ಎಂದು ಆ ಸಮಯದಲ್ಲಿ ವ್ಯಾಪಾರಿಗಳು ತಿಳಿಸಿದ್ದರು.

ಅದೇ ರೀತಿ, 2007-08 ರಲ್ಲಿ ಭರ್ಜರಿ ಇಳುವರಿಯಾಗಿದ್ದರೂ ಸೂಕ್ತ ಬೆಲೆ ಸಿಗದೆ ರೈತರು ಬೇಸತ್ತಿದ್ದರು. ನಂತರ 2009 ರಲ್ಲಿ ಮುಂಗಾರು ಕೈಕೊಟ್ಟಿದ್ದರಿಂದ ಕಬ್ಬು ಬೆಳೆಯುವ ವಿಸ್ತೀರ್ಣ ಕಡಿಮೆಯಾಗಿ 2009 ರಲ್ಲಿ ಪ್ರಮುಖ ಮಾರುಕಟ್ಟೆಗಳಲ್ಲಿ ಸಕ್ಕರೆ ಆಲೆಗಳ ದರ ಪ್ರತಿ 100 ಕೆಜಿಗೆ 4,400 ರೂಪಾಯಿ ಮುಟ್ಟಿತ್ತು.

ಆ ಸಮಯದಲ್ಲಿ ಅಂತಿಮ ದಾಸ್ತಾನು 32.2 ಲಕ್ಷ ಟನ್‌ಗಳಷ್ಟು ತೀವ್ರ ಕುಸಿತ ಕಂಡಿತ್ತು. ಆಗ ಭಾರತವು 40 ಲಕ್ಷ ಟನ್‌ಗೂ ಹೆಚ್ಚು ಕಚ್ಚಾ ಸಕ್ಕರೆಯನ್ನು ಆಮದು ಮಾಡಿಕೊಳ್ಳಬೇಕಾಯಿತು. ಇದು ಜಾಗತಿಕ ಮಟ್ಟದಲ್ಲೂ ಸಕ್ಕರೆ ಬೆಲೆಯನ್ನು 30 ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿಸಿತ್ತು.

ಮುಂದಿನ ಋತುವಿನ ಮುನ್ನೋಟ:

ಉತ್ಪಾದನೆ, ಆಮದು, ದೇಶೀಯ ಬಳಕೆ, ರಫ್ತು ಮತ್ತು ಎಥೆನಾಲ್ ಉತ್ಪಾದನೆಗೆ ಬಳಸಿದ ನಂತರದ ಒಟ್ಟು ಲೆಕ್ಕಾಚಾರದ ಕೊನೆಯಲ್ಲಿ ಮಾರಾಟವಾಗದೆ ಉಳಿಯುವ ಸಕ್ಕರೆಯ ಪ್ರಮಾಣವನ್ನು 'ಅಂತಿಮ ದಾಸ್ತಾನು' ಎನ್ನಲಾಗುತ್ತದೆ.

ಈ ಅಂತಿಮ ದಾಸ್ತಾನೇ ಮುಂದಿನ ಋತುವಿನ ಆರಂಭಿಕ ದಾಸ್ತಾನಾಗುತ್ತದೆ. ಹೀಗಾಗಿ ಭಾರತವು ಒಂದು ಋತುವನ್ನು ತೀರಾ ಕಡಿಮೆ ದಾಸ್ತಾನಿನೊಂದಿಗೆ ಮುಕ್ತಾಯಗೊಳಿಸಿದರೆ, ಮುಂದಿನ ಋತುವಿನಲ್ಲಿ ಬೆಳೆ ನಷ್ಟ ಅಥವಾ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಿನ ಬೇಡಿಕೆ ಎದುರಾದಾಗ ಬಳಸಲು ಅದರ ಬಳಿ ಅತ್ಯಂತ ಕಡಿಮೆ ದಾಸ್ತಾನು ಮಾತ್ರ ಇರುತ್ತದೆ.

ಭಾರತದ ಮುನ್ನಡೆಸಿಕೊಂಡು ಹೋಗುವ ದಾಸ್ತಾನು ಪ್ರಮಾಣವು ಸುಮಾರು 32 ಲಕ್ಷ ಟನ್‌ಗಳಿಗೆ ಕುಸಿಯಬಹುದು ಎಂದು ಉದ್ಯಮದ ಅಂದಾಜುಗಳು ಸೂಚಿಸುತ್ತಿದ್ದು, ಇದು ಸುಮಾರು ಎರಡು ದಶಕಗಳಲ್ಲೇ ಅತ್ಯಂತ ಕನಿಷ್ಠ ಮಟ್ಟವಾಗಿದೆ. ಅದೇ ಸಮಯದಲ್ಲಿ, ಮುಂದಿನ ವರ್ಷದ ಉತ್ಪಾದನೆಯನ್ನು ನಿರ್ಧರಿಸುವ ಪ್ರಸ್ತುತ ಖಾರಿಫ್ ಋತುವಿನಲ್ಲಿ ಬಿತ್ತನೆಯಾಗಿರುವ ಕಬ್ಬಿನ ಬೆಳೆಯು ದೇಶದ ಪ್ರಮುಖ ರಾಜ್ಯಗಳಲ್ಲಿ ಉತ್ಪಾದಕತೆಯ ಸವಾಲುಗಳನ್ನು ಎದುರಿಸುತ್ತಿದೆ. ದಿನೇದಿನೇ ಬಲಗೊಳ್ಳುತ್ತಿರುವ 'ಎಲ್ ನಿನೋ' ಪರಿಣಾಮದಿಂದಾಗಿ ಉಷ್ಣಾಂಶ ಹೆಚ್ಚಾಗುವ ಮತ್ತು ಒಣ ಹವಾಮಾನ ಎದುರಾಗುವ ಭೀತಿ ಎದುರಾಗಿದೆ. ಕಬ್ಬಿನ ಉತ್ತಮ ಇಳುವರಿಗೆ ಮಧ್ಯಂತರ ಮಳೆಯ ಅಗತ್ಯವಿರುತ್ತದೆ.

"ರಾಷ್ಟ್ರೀಯ ಸಕ್ಕರೆ ಉತ್ಪಾದನೆಯ ಏರಿಳಿತದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಪಾಲು ಸುಮಾರು ಶೇಕಡಾ 50 ರಷ್ಟಿದೆ. ಅಸಮತೋಲಿತ ಮಳೆ ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಎದುರಾಗಿರುವ ತೀವ್ರ ಮಳೆ ಕೊರತೆ, ಕರ್ನಾಟಕದ ಜಲಾಶಯಗಳಲ್ಲಿ ಅತ್ಯಂತ ಕಡಿಮೆ ನೀರಿನ ಮಟ್ಟ ಮತ್ತು ಪೂರ್ವ ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಉಂಟಾಗಿರುವ ಮಳೆಯ ಅಭಾವ ಇವೆಲ್ಲವೂ ಆತಂಕಕಾರಿ ವಿಷಯಗಳಾಗಿವೆ. ಹವಾಮಾನ ಮುನ್ಸೂಚನಾ ಸಂಸ್ಥೆ 'ಸ್ಕೈಮೆಟ್' ಕೂಡ ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆಯಾಗಲಿದೆ ಎಂದು ಮುನ್ಸೂಚನೆ ನೀಡಿರುವುದರಿಂದ, 2026-27 ರ ಋತುವಿನಲ್ಲಿ ಪ್ರಸ್ತುತ ಋತುವಿಗಿಂತ ಸುಮಾರು 20 ಲಕ್ಷ ಟನ್ ಕಡಿಮೆ ಸಕ್ಕರೆ ಉತ್ಪಾದನೆಯಾಗುವುದನ್ನು ನಾವು ಕಾಣಬಹುದು" ಎಂದು ಕೆಎನ್ ಅಗ್ರಿ ರಿಸೋರ್ಸಸ್ ಲಿಮಿಟೆಡ್‌ನ ಅಧ್ಯಕ್ಷ ಜಿ.ಕೆ. ಸೂದ್ ಹೇಳಿದ್ದಾರೆ.

ಈ ಪರಿಸ್ಥಿತಿ ಮುಂದುವರಿದರೆ ಉತ್ಪಾದನೆಯು ಸುಮಾರು 2.90 ಕೋಟಿ ಟನ್‌ನಷ್ಟಿರುವ ವಾರ್ಷಿಕ ಬಳಕೆಯನ್ನು ಪೂರೈಸಲು ಮಾತ್ರ ಸಾಕಾಗಬಹುದು ಎಂದು ಸೂದ್ ತಿಳಿಸಿದ್ದಾರೆ. ಒಂದು ವೇಳೆ ಉತ್ಪಾದನೆಯು ಈ ವರ್ಷದ 3.10 ಕೋಟಿ ಟನ್‌ಗೆ ಸಮನಾಗಿದ್ದರೂ ಸಹ, ಹೆಚ್ಚುವರಿ ದಾಸ್ತಾನನ್ನು ಕಾಯ್ದಿರಿಸುವುದು ಜಾಣತನ. ಏಕೆಂದರೆ ಪ್ರಸ್ತುತ ಇರುವ ಶೇಕಡಾ 11 ರಷ್ಟು ದಾಸ್ತಾನು-ಬಳಕೆಯ ಅನುಪಾತವು ತೃಪ್ತಿಕರವಾಗಿಲ್ಲ. 2008-09 ರಲ್ಲಿ ದಾಸ್ತಾನು ತೀವ್ರ ಕುಸಿತ ಕಂಡಿದ್ದಾಗ ದಾಖಲಾಗಿದ್ದ ಶೇಕಡಾ 14 ಕ್ಕಿಂತ ಇದು ಕಡಿಮೆಯಾಗಿದೆ ಎಂದು ಅವರು ವಿವರಿಸಿದ್ದಾರೆ. ರಾಯಿಟರ್ಸ್ ವರದಿಯ ಪ್ರಕಾರ, 2009-10 ರಲ್ಲಿ ಆರಂಭಿಕ ದಾಸ್ತಾನು ಕಡಿಮೆಯಿದ್ದ ಕಾರಣ ಭಾರತವು ಭಾರೀ ಪ್ರಮಾಣದಲ್ಲಿ ಅಂದರೆ 50 ಲಕ್ಷ ಟನ್ ಸಕ್ಕರೆಯನ್ನು ಆಮದು ಮಾಡಿಕೊಳ್ಳಬೇಕಾಯಿತು. ದೇಶೀಯ ವಾರ್ಷಿಕ ಬಳಕೆಗೆ ಹೋಲಿಸಿದರೆ ಎಷ್ಟು ಸಕ್ಕರೆ ದಾಸ್ತಾನು ಉಳಿದಿದೆ ಎಂಬುದನ್ನು 'ದಾಸ್ತಾನು-ಬಳಕೆಯ ಅನುಪಾತ' ಸೂಚಿಸುತ್ತದೆ.

ಉದ್ಯಮಗಳ ಪ್ರಾಥಮಿಕ ಅಂದಾಜುಗಳ ಪ್ರಕಾರ, ಮುಂದಿನ 2026-27ರ ಋತುವಿನಲ್ಲಿ ಸಕ್ಕರೆ ಉತ್ಪಾದನೆಯು ಮತ್ತಷ್ಟು ಕುಸಿದು 2.90 ಕೋಟಿ ಟನ್‌ಗಳಿಗೆ ತಲುಪಬಹುದು.

ಹಿಂದುಸ್ತಾನ್ ಟೈಮ್ಸ್ ಪ್ರಶ್ನೆಗಳಿಗೆ ಪತ್ರದ ಮೂಲಕ ಪ್ರತಿಕ್ರಿಯಿಸಿರುವ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು, "ಸರ್ಕಾರವು ಸಕ್ಕರೆ ಲಭ್ಯತೆ, ಬೆಲೆಗಳು ಮತ್ತು ಮಾರುಕಟ್ಟೆಯ ಚಟುವಟಿಕೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಲಿದೆ. ಕಬ್ಬು ಬೆಳೆಗಾರರ ಹಿತಾಸಕ್ತಿಗಳನ್ನು ಕಾಯುವ ಜೊತೆಗೆ ಗ್ರಾಹಕರನ್ನು ರಕ್ಷಿಸಲು ಅಗತ್ಯವಿರುವ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ" ಎಂದು ತಿಳಿಸಿದೆ.

ಕೃಪೆ: hindustantimes.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor