Photo Credit : Surendra Singh Choudhry/Instagram

ಬೆಂಗಳೂರಿನ ತುರಹಳ್ಳಿ ಅರಣ್ಯದ ಗಡಿಯಲ್ಲಿನ ತ್ಯಾಜ್ಯ ತೆರವುಗೊಳಿಸಲು ಬಿಟ್ಟು ತಬಾಹಿ ಅವರು 100 ಸದಸ್ಯರ ತಂಡದ ನೇತೃತ್ವ ವಹಿಸಿದ್ದರು. ಈ ಅಭಿಯಾನಕ್ಕೆ ಸ್ಥಳೀಯ ಸ್ವಯಂಸೇವಕರಿಂದ ವ್ಯಾಪಕ ಬೆಂಬಲ ದೊರೆತಿದೆ.

ಮಧ್ಯಪ್ರದೇಶದಲ್ಲಿ ತೀವ್ರವಾಗಿ ಕಲುಷಿತಗೊಂಡಿದ್ದ ಅಜ್ನಾರ್ ನದಿಯ ಒಂದು ಭಾಗವನ್ನು ಬಹುತೇಕ ಏಕಾಂಗಿಯಾಗಿ ತಿಂಗಳುಗಳ ಕಾಲ ಸ್ವಚ್ಛಗೊಳಿಸಿದ 21 ವರ್ಷದ ಯುವಕ ಬಿಟ್ಟು ತಬಾಹಿ ಅಥವಾ ಸುರೇಂದ್ರ ಸಿಂಗ್ ಚೌಧರಿ ಇದೀಗ ತಮ್ಮ ಊರಿನ ಗಡಿ ದಾಟಿ ಮುಂದಿನ ಕಾರ್ಯ ಕೈಗೊಂಡಿದ್ದಾರೆ. ಅಜ್ನಾರ್ ನದಿಯನ್ನು ಸ್ವಚ್ಛಗೊಳಿಸಿ ವೈರಲ್ ಆಗಿದ್ದ ಬಿಟ್ಟು ಇದೀಗ ತಮ್ಮ ಸ್ವಚ್ಛತಾ ಅಭಿಯಾನವನ್ನು ಬೆಂಗಳೂರಿಗೂ ವಿಸ್ತರಿಸಿದ್ದಾರೆ. ಇಲ್ಲಿ ಅವರು 100 ಜನರ ತಂಡದೊಂದಿಗೆ ಸೇರಿ ತುರಹಳ್ಳಿ ಅರಣ್ಯದ ಗಡಿಯಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಿದರು.

ಬೆಂಗಳೂರಿನ ಕನಕಪುರ ರಸ್ತೆಯ ಬಳಿ, ನಗರದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ತುರಹಳ್ಳಿ ಅರಣ್ಯದ ಗಡಿಯಲ್ಲಿನ ಪ್ರದೇಶವನ್ನು ಬಿಟ್ಟು ಮತ್ತು ಅವರ ತಂಡ ಸ್ವಚ್ಛಗೊಳಿಸಿದೆ. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವ ಕುರಿತು ಜಾಗೃತಿ ಮೂಡಿಸುವ ಅವರ ಪ್ರಯತ್ನದ ಭಾಗವಾಗಿ ಈ ಕಾರ್ಯ ಕೈಗೊಳ್ಳಲಾಯಿತು. “ನನ್ನ ಸ್ವಚ್ಛತಾ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ರಾಜ್ಯಗಳಿಗೆ ಪ್ರಯಾಣಿಸುತ್ತಿದ್ದೇನೆ” ಎಂದು ಬಿಟ್ಟು ಸ್ವಚ್ಛತಾ ದೃಶ್ಯಗಳಿರುವ ವೀಡಿಯೊವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಅರಣ್ಯದ ಗಡಿಯಿಂದ ಕಸ ತೆರವುಗೊಳಿಸುವಾಗ ಬಿಟ್ಟು ಮತ್ತು ಅವರ ತಂಡದ ಸದಸ್ಯರು ಕೈಗವಸುಗಳು ಮತ್ತು ಮಾಸ್ಕ್‌ಗಳನ್ನು ಧರಿಸಿದ್ದರು. ತಂಡದ ಕೆಲವರು ಸಲಿಕೆಗಳನ್ನು ಬಳಸಿ ನೆಲ ಅಗೆದು, ಮೇಲ್ಮೈಯ ಅಡಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಹೊರತೆಗೆದು ಚೀಲಗಳಿಗೆ ತುಂಬಿಸಿದ್ದಾರೆ.

ಕಸವು ಮಣ್ಣಿನ ಆಳದವರೆಗೆ ಸೇರಿಕೊಂಡಿದ್ದ ಪ್ರದೇಶಗಳನ್ನು ಸ್ವಚ್ಛಗೊಳಿಸಲು ಜೆಸಿಬಿ ಯಂತ್ರವನ್ನೂ ಬಳಸಲಾಗಿದೆ. ಸಂಗ್ರಹಿಸಿದ ತ್ಯಾಜ್ಯವನ್ನು ವಾಹನದಲ್ಲಿ ಸಾಗಿಸಲಾಯಿತು ಮತ್ತು ತಂಡದ ಸದಸ್ಯರು ಕಸವನ್ನು ವಾಹನಕ್ಕೆ ತುಂಬಲು ಸಹಾಯ ಮಾಡಿದ್ದಾರೆ. ಈ ಸ್ವಚ್ಛತಾ ಅಭಿಯಾನದ ಸಂದರ್ಭದಲ್ಲಿ ಬೆಂಗಳೂರಿನ ಜನರು ತಮಗೆ ಬೆಂಬಲ ನೀಡಿದರು ಮತ್ತು ಅರಣ್ಯದ ಗಡಿಯಲ್ಲಿನ ಪ್ರದೇಶವನ್ನು ಸ್ವಚ್ಛಗೊಳಿಸುವ ಪ್ರಯತ್ನದಲ್ಲಿ ಕೈಜೋಡಿಸಿದರು ಎಂದು ಬಿಟ್ಟು ಹೇಳಿದ್ದಾರೆ.

Full View

21 ವರ್ಷದ ಸುರೇಂದ್ರ ಸಿಂಗ್ ಚೌಧರಿ ಅಜ್ನಾರ್ ನದಿಯಿಂದ ಪ್ಲಾಸ್ಟಿಕ್, ಎಸೆಯಲಾದ ತ್ಯಾಜ್ಯ ಮತ್ತು ಇತರ ಕಸವನ್ನು ತೆಗೆದುಹಾಕುವಲ್ಲಿ ತಿಂಗಳುಗಳನ್ನು ಕಳೆದ ಬಳಿಕ ಇದೀಗ ತಮ್ಮ ಸ್ವಚ್ಛತಾ ಕಾರ್ಯವನ್ನು ಊರಾಚೆಗೂ ವಿಸ್ತರಿಸಿದ್ದಾರೆ. ಬಿಯಾೋರಾ, ರಾಜ್‌ಗಢ ಜಿಲ್ಲೆಯಲ್ಲಿ ಅಜ್ನಾರ್ ನದಿಯ ಮೂರು ಪ್ರಮುಖ ಘಾಟ್‌ಗಳನ್ನು ಸ್ವಚ್ಛಗೊಳಿಸಲು ಅವರು ತಮ್ಮ ಸ್ವಂತ ಹಣದಿಂದ ಸುಮಾರು 30,000 ರೂ. ಖರ್ಚು ಮಾಡಿದ್ದರು.

ನದಿ ಸ್ವಚ್ಛತೆಗೆ ಸಂಬಂಧಿಸಿದ ಅವರ ಕೆಲಸವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಗಮನ ಸೆಳೆದಿದೆ. ಅಲ್ಲಿ ಅವರು ವೀಡಿಯೊಗಳು ಮತ್ತು ಫೋಟೊಗಳಲ್ಲಿ ‘ಮೊದಲು ಮತ್ತು ನಂತರ’ ಎನ್ನುವ ಚಿತ್ರಗಳ ಮೂಲಕ ನದಿಯಲ್ಲಾದ ಬದಲಾವಣೆಯನ್ನು ದಾಖಲಿಸಿದ್ದರು.

ದೊಡ್ಡ ಪ್ರಮಾಣದ ಸರ್ಕಾರಿ ಅಭಿಯಾನ ಅಥವಾ ಸಂಘಟಿತ ಪರಿಸರ ಕಾರ್ಯಕ್ರಮದಂತಲ್ಲದೆ, ಬಿಟ್ಟು ಆರಂಭದಲ್ಲಿ ಬಹುತೇಕ ಸ್ವತಃ ಈ ಕೆಲಸ ನಿರ್ವಹಿಸಿದರು. ಅಗತ್ಯ ಸಾಮಗ್ರಿಗಳಿಗೆ ಸ್ವತಃ ಹಣ ಹೂಡಿದರು ಮತ್ತು ಸಂಗ್ರಹವಾದ ತ್ಯಾಜ್ಯವನ್ನು ತೆರವುಗೊಳಿಸಲು ಪದೇಪದೇ ನದಿಯ ಬದಿಗೆ ತೆರಳಿದ್ದರು.

ಬಿಟ್ಟು ಅವರ ಪ್ರಯತ್ನವನ್ನು ಪ್ರಶಂಸಿಸಿ ಡಚ್ ಪರಿಸರವಾದಿ ಬೋಯಾನ್ ಸ್ಲಾಟ್ ಅವರು ತಮ್ಮ ‘ದಿ ಓಷನ್ ಕ್ಲೀನಪ್’ ಸಂಸ್ಥೆಯಿಂದ ಉದ್ಯೋಗಾವಕಾಶವನ್ನೂ ನೀಡಿದ್ದರು. ಈ ಅವಕಾಶ ಪಡೆದ ಬಳಿಕ ಬಿಟ್ಟು ತಮಗೆ ಬೆಂಬಲ ನೀಡಿದವರಿಗೆ ಧನ್ಯವಾದ ಅರ್ಪಿಸಿ, ಮುಂದಿನ ಸ್ವಚ್ಛತಾ ಅಭಿಯಾನಕ್ಕೆ ಯಾವ ರಾಜ್ಯಕ್ಕೆ ಭೇಟಿ ಕೊಡಬೇಕು ಎಂದು ಸೂಚಿಸುವಂತೆ ಜನರನ್ನು ಕೋರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor