ಸಾಂದರ್ಭಿಕ ಚಿತ್ರ | Photo Credit : magnific.com

ಅಪ್ರಾಪ್ತ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಖಾತೆಗಳನ್ನು ತೆರೆಯಲು ಅವಕಾಶ ನೀಡಲಾಗುತ್ತಿದ್ದು, ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.

18 ವರ್ಷದೊಳಗಿನ ಮಕ್ಕಳು ಯಾವುದೇ ಕಾನೂನುಬದ್ಧ ಒಪ್ಪಂದ ಮಾಡಿಕೊಳ್ಳಲು ಬರುವುದಿಲ್ಲ. ಆದರೆ, ಆನ್‌ಲೈನ್ ಖಾತೆಗಳನ್ನು ತೆರೆಯುವಾಗ ಅವರು ನಿಯಮಗಳಿಗೆ (Terms and Conditions) ಒಪ್ಪಿಗೆ ನೀಡಬೇಕಾಗುತ್ತದೆ. ಈ ಅಂತರದಿಂದಾಗಿ ಮಕ್ಕಳು ಆನ್‌ಲೈನ್ ವಂಚನೆ ಮತ್ತು ಸೈಬರ್ ಬೆದರಿಕೆಗಳಂತಹ ಅಪಾಯಗಳಿಗೆ ಸಿಲುಕುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದ್ದು, ಈ ಕುರಿತು ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೋರಿ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

‘ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಅಲೈಯನ್ಸ್’ ದಾಖಲಿಸಿರುವ ಈ ಅರ್ಜಿಯು, ಈ ಶಾಸನಬದ್ಧ ಅಂತರವು ಮಕ್ಕಳನ್ನು ಆನ್‌ಲೈನ್‌ನಲ್ಲಿ ಮಕ್ಕಳನ್ನು ಬಲೆಗೆ ಬೀಳಿಸುವಿಕೆ ಮತ್ತು ಕಳ್ಳಸಾಗಣೆಯಿಂದ ಹಿಡಿದು ಸೈಬರ್ ಬೆದರಿಕೆ ಹಾಗೂ ವೈಯಕ್ತಿಕ ದತ್ತಾಂಶದ ದುರುಪಯೋಗದವರೆಗೆ ಹಲವು ಅಪಾಯಗಳಿಗೆ ಸಿಲುಕಿಸುತ್ತಿದೆ ಎಂದು ವಾದಿಸುತ್ತದೆ. ಅಪ್ರಾಪ್ತ ವಯಸ್ಕರು ಪರಿಶೀಲಿಸಿದ ಪೋಷಕರ ಒಪ್ಪಿಗೆಯಿಲ್ಲದೆ ಪ್ಲಾಟ್‌ಫಾರ್ಮ್ ಒಪ್ಪಂದಗಳಿಗೆ ಪ್ರವೇಶಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸೂಕ್ತ ವ್ಯವಸ್ಥೆಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಇದು ಸುಪ್ರೀಂ ಕೋರ್ಟನ್ನು ಕೋರಿದೆ.

ಒಪ್ಪಂದ ಮಾಡಿಕೊಳ್ಳಲು ಅಸಾಧ್ಯ

ಭಾರತೀಯ ಒಪ್ಪಂದ ಕಾಯಿದೆ, 1872ರ ಸೆಕ್ಷನ್ 11ರ ಪ್ರಕಾರ ಅಪ್ರಾಪ್ತ ವಯಸ್ಕರು ಒಪ್ಪಂದ ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ. “ಯಾವ ವ್ಯಕ್ತಿಯು ತನಗೆ ಅನ್ವಯವಾಗುವ ಕಾನೂನಿನ ಪ್ರಕಾರ ಅಪ್ರಾಪ್ತ ವಯಸ್ಸನ್ನು ಮೀರಿರುತ್ತಾನೋ ಮತ್ತು ಸದೃಢ ಮನಸ್ಸಿನವನಾಗಿರುತ್ತಾನೋ, ಆ ಎಲ್ಲ ವ್ಯಕ್ತಿಗಳು ಒಪ್ಪಂದ ಮಾಡಿಕೊಳ್ಳಲು ಸಮರ್ಥರಾಗಿರುತ್ತಾರೆ” ಎಂದು ಇದು ಹೇಳುತ್ತದೆ. ಅಪ್ರಾಪ್ತ ವಯಸ್ಕರು ಮಾಡಿಕೊಳ್ಳುವ ಯಾವುದೇ ಒಪ್ಪಂದ ಅಥವಾ ಕರಾರು ಆರಂಭದಿಂದಲೂ ಕಾನೂನುಬಾಹಿರ ಎಂದು ಪರಿಗಣಿಸಲ್ಪಡುತ್ತದೆ.

ಈ ಕಾನೂನು ಸ್ಥಿತಿಯ ಹೊರತಾಗಿಯೂ, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮಕ್ಕಳು ಕೇವಲ ತಮ್ಮ ವಯಸ್ಸು ಅಥವಾ ಹುಟ್ಟಿದ ದಿನಾಂಕವನ್ನು ಘೋಷಿಸುವ ಮೂಲಕ, ಆಗಾಗ್ಗೆ 13 ವರ್ಷ ವಯಸ್ಸಿನಿಂದಲೇ ಸ್ವತಂತ್ರವಾಗಿ ಖಾತೆಗಳನ್ನು ಸೃಷ್ಟಿಸಲು ಮತ್ತು ನಿರ್ವಹಿಸಲು ಅನುಮತಿಸುತ್ತಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಡಿಜಿಟಲ್ ಪ್ಲಾಟ್‌ಫಾರ್ಮ್‌ ನಲ್ಲಿ ಖಾತೆಯನ್ನು ಸೃಷ್ಟಿಸುವುದರಿಂದ ಬಳಕೆದಾರರು ಆ ಪ್ಲಾಟ್‌ಫಾರ್ಮ್‌ನೊಂದಿಗೆ ತಮ್ಮ ಸಂಬಂಧವನ್ನು ನಿಯಂತ್ರಿಸುವ ಒಪ್ಪಂದದ ನಿಯಮಗಳನ್ನು, ಅಂದರೆ ಸೇವಾ ನಿಯಮಗಳು, ಗೌಪ್ಯತಾ ನೀತಿಗಳು ಮತ್ತು ಸಮುದಾಯ ಮಾರ್ಗಸೂಚಿಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಅರ್ಜಿಯು ವಾದಿಸುತ್ತದೆ.

ಮಾಹಿತಿ ತಂತ್ರಜ್ಞಾನ ಕಾಯಿದೆ, 2000ರ ಸೆಕ್ಷನ್ 10ಎ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ರೂಪುಗೊಳ್ಳುವ ಒಪ್ಪಂದಗಳನ್ನು ಮಾನ್ಯತೆ ನೀಡುತ್ತದೆಯೇ ಹೊರತು, ಒಪ್ಪಂದ ಕಾಯಿದೆಯ ಸೆಕ್ಷನ್ 11ರ ಅಡಿಯಲ್ಲಿ ಒಪ್ಪಂದ ಮಾಡಿಕೊಳ್ಳಲು ಅಸಮರ್ಥರಾಗಿರುವ ವ್ಯಕ್ತಿಗಳಿಗೆ ಒಪ್ಪಂದದ ಸಾಮರ್ಥ್ಯವನ್ನು ನೀಡುವುದಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. “ಕ್ಲಿಕ್-ರಾಪ್ ಒಪ್ಪಂದ ಅಥವಾ ಪ್ಲಾಟ್‌ಫಾರ್ಮ್‌ ನ ನಿರಂತರ ಬಳಕೆ ಸೇರಿದಂತೆ ಒಪ್ಪಂದವನ್ನು ಸ್ವೀಕರಿಸುವ ತಾಂತ್ರಿಕ ರೂಪವು, ಅಪ್ರಾಪ್ತ ವಯಸ್ಕರ ಮೂಲಭೂತ ಕಾನೂನು ಸಾಮರ್ಥ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಅಸಮರ್ಪಕ ಕಾನೂನುಗಳು

ಮಕ್ಕಳು ಸ್ವತಂತ್ರವಾಗಿ ಆನ್‌ಲೈನ್ ಖಾತೆಗಳನ್ನು ಕ್ರಿಯೇಟ್ ಮಾಡುವುದನ್ನು ಭಾರತೀಯ ಕಾನೂನುಗಳು ಸಮರ್ಪಕವಾಗಿ ತಡೆಯುತ್ತಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಸಾಮಾನ್ಯವಾಗಿ ಬಳಸಲಾಗುವ 13 ವರ್ಷಗಳ ಕನಿಷ್ಠ ವಯಸ್ಸಿನ ಮಿತಿಯು ಭಾರತೀಯ ಕಾನೂನಿನಿಂದಲ್ಲ, ಬದಲಿಗೆ ವಿದೇಶಿ ಮಾನದಂಡಗಳಿಂದ ಬಂದಿದೆ ಎಂದು ಅದು ಹೇಳುತ್ತದೆ.

ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣಾ ಕಾಯಿದೆ, 2023 (DPDP Act) ಪ್ರಕಾರ ಮಗುವಿನ ವೈಯಕ್ತಿಕ ಡೇಟಾ ಪ್ರೋಸೆಸ್ ಮಾಡುವ ಮೊದಲು ಪೋಷಕರ ಒಪ್ಪಿಗೆ ಕಡ್ಡಾಯವಾಗಿದೆ. ಆದರೆ, “ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳು ಸ್ವತಂತ್ರವಾಗಿ ಖಾತೆಗಳನ್ನು ಕ್ರಿಯೇಟ್ ಮಾಡುವುದನ್ನು ಅಥವಾ ನಿರ್ವಹಿಸುವುದನ್ನು ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣಾ ಕಾಯಿದೆ ಅಥವಾ ಅದರ ನಿಯಮಗಳು ಸ್ಪಷ್ಟವಾಗಿ ನಿಷೇಧಿಸುವುದಿಲ್ಲ. ಅಂತಹ ಸ್ವತಂತ್ರ ನೋಂದಣಿಯನ್ನು ತಡೆಯಲು ಯಾವುದೇ ಏಕರೂಪದ ವ್ಯವಸ್ಥೆಯನ್ನು ಇದು ಸೂಚಿಸುವುದಿಲ್ಲ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ ರೂಪಿಸಲಾದ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ನಿಯಮಗಳು, 2021, ಅಪ್ರಾಪ್ತ ವಯಸ್ಕರ ಒಪ್ಪಂದದ ಸಾಮರ್ಥ್ಯದ ಕುರಿತು “ಯಾವ ವಿವರಣೆಯನ್ನೂ ನೀಡದೆ ಮೌನವಾಗಿವೆ ಮತ್ತು ಇವು ಅರ್ಥಪೂರ್ಣ ವಯಸ್ಸಿನ ಪರಿಶೀಲನೆ, ಪೋಷಕರ ದೃಢೀಕರಣ ಅಥವಾ ವಯಸ್ಸಿನ ನಿರ್ಬಂಧದ ವ್ಯವಸ್ಥೆಗಳನ್ನು ಒದಗಿಸುವುದಿಲ್ಲ” ಎಂದು ಅರ್ಜಿ ತಿಳಿಸಿದೆ.

ಪ್ರಸ್ತುತ ಚಾಲ್ತಿಯಲ್ಲಿರುವ ಪದ್ಧತಿಯನ್ನು “ಕನಿಷ್ಠ ವಯಸ್ಸಿನ ಗೇಟ್” ಎಂದು ಬಣ್ಣಿಸಿರುವ ಇದು, ಕೇವಲ ಹುಟ್ಟಿದ ದಿನಾಂಕವನ್ನು ನಮೂದಿಸುವುದು ಪರಿಣಾಮಕಾರಿ ಸುರಕ್ಷತೆಯಲ್ಲ ಎಂದು ವಾದಿಸುತ್ತದೆ. ಆದ್ದರಿಂದ, ವಿಶಾಲವಾದ “ವಿನ್ಯಾಸದ ಮೂಲಕ ತಡೆಗಟ್ಟುವಿಕೆ” ವಿಧಾನದ ಭಾಗವಾಗಿ ಕಾನೂನು ಚೌಕಟ್ಟು “ಜವಾಬ್ದಾರಿಯ ವ್ಯವಸ್ಥೆಗಳನ್ನು” ಹಾಗೂ “ಪರಿಣಾಮಕಾರಿ ಮತ್ತು ಪರಿಶೀಲಿಸಬಹುದಾದ ವಯಸ್ಸಿನ ಭರವಸೆ ಮತ್ತು ನಿರ್ಬಂಧದ ವ್ಯವಸ್ಥೆಗಳನ್ನು” ಕಡ್ಡಾಯಗೊಳಿಸಬೇಕು ಎಂದು ಇದು ಪ್ರಸ್ತಾಪಿಸುತ್ತದೆ.

ಪರ್ಯಾಯ ಚೌಕಟ್ಟು

ಮಕ್ಕಳು ಅಂತರ್ಜಾಲವನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಈ ಅರ್ಜಿಯಲ್ಲಿ ಕೋರಲಾಗಿಲ್ಲ. ಬದಲಿಗೆ, ನಿಗದಿತ ಚೌಕಟ್ಟಿನಡಿ “ಕಾನೂನುಬದ್ಧ ಶೈಕ್ಷಣಿಕ ಮತ್ತು ವಯಸ್ಸಿಗೆ ತಕ್ಕ ಡಿಜಿಟಲ್ ಕಂಟೆಂಟ್” ಅನ್ನು ಬಳಸಿಕೊಳ್ಳುವ ಸ್ವಾತಂತ್ರ್ಯವನ್ನು ಮಕ್ಕಳು ಹೊಂದಿರಬೇಕು ಮತ್ತು ಅಪ್ರಾಪ್ತರು “ಪೋಷಕರು ಅಥವಾ ಕಾನೂನುಬದ್ಧ ಪಾಲಕರಿಂದ ನಿರ್ವಹಿಸಲ್ಪಡುವ ಮತ್ತು ನಿಯಂತ್ರಿಸಲ್ಪಡುವ” ಖಾತೆಗಳ ಮೂಲಕ ಆನ್‌ಲೈನ್ ಸೇವೆಗಳನ್ನು ಬಳಸುವುದನ್ನು ಮುಂದುವರಿಸಬೇಕು ಎಂದು ಇದು ಪ್ರಸ್ತಾಪಿಸುತ್ತದೆ.

ಪರಿಶೀಲಿಸಿದ ಇ-ಕೆವೈಸಿ (e-KYC) ಮೂಲಕ ಪೋಷಕರ ಒಪ್ಪಿಗೆಯನ್ನು ಕಡ್ಡಾಯಗೊಳಿಸಲು ಮಾಹಿತಿ ತಂತ್ರಜ್ಞಾನ ನಿಯಮಗಳು, 2021ಕ್ಕೆ ತಿದ್ದುಪಡಿ ತರುವ ಮೂಲಕ ಮಾತ್ರ ಇಂತಹ ಚೌಕಟ್ಟನ್ನು ರೂಪಿಸಲು ಸಾಧ್ಯ ಎಂದು ಇದು ತಿಳಿಸುತ್ತದೆ. ಕೇವಲ ಸ್ವಯಂ-ಘೋಷಿತ ವಯಸ್ಸಿನ ಮೇಲೆ ಮಾತ್ರ ಮಕ್ಕಳ ಸುರಕ್ಷತೆಯನ್ನು ಅವಲಂಬಿಸಲು ಸಾಧ್ಯವಿಲ್ಲ ಎಂದೂ ಇದು ಹೇಳಿದೆ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor