ಕಲ್ಕತ್ತಾ ಹೈಕೋರ್ಟ್ | Photo Credit : PTI 

ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ಜಾತಿ ನಿಂದನೆಗಳು ಸಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989ರ ಅಡಿಯಲ್ಲಿ ಅಪರಾಧವೆನಿಸಿಕೊಳ್ಳಬಹುದು ಎಂದು ಕಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿದೆ. ಈ ಕಾಯ್ದೆಯ ಅಡಿಯಲ್ಲಿ ಬರುವ 'ಸಾರ್ವಜನಿಕ ನೋಟ' (public view) ಎನ್ನುವುದು ಭೌತಿಕ ಜಾಗಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿ ಉದಯ್ ಕುಮಾರ್ ಅವರ ಏಕಸದಸ್ಯ ಪೀಠವು, ಈ ಕಾಯ್ದೆಯ ಸೆಕ್ಷನ್ 3(1)(r) ಮತ್ತು 3(1)(s) ಅಡಿಯಲ್ಲಿ ಅಗತ್ಯವಿರುವ 'ಸಾರ್ವಜನಿಕ ನೋಟ'ದ ವ್ಯಾಪ್ತಿಯು ಭೌತಿಕ ಜಾಗವನ್ನು ಮೀರಿ ಡಿಜಿಟಲ್ ಜಗತ್ತಿಗೂ ಅನ್ವಯಿಸುತ್ತದೆ ಎಂದು ಹೇಳಿದೆ.

ಜಾತಿ ಸೂಚಕ ಪ್ರತಿಯೊಂದು ಮಾತೂ ಈ ಕಾಯ್ದೆಯಡಿ ಅಪರಾಧವಾಗುವುದಿಲ್ಲ ಮತ್ತು ಕಾಯ್ದೆಯ ನಿಬಂಧನೆಗಳು ಈಡೇರಿವೆಯೇ ಎಂಬುದನ್ನು ನ್ಯಾಯಾಲಯಗಳು ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದ ಕೆಲವೇ ವಾರಗಳ ನಂತರ ಈ ಮಹತ್ವದ ತೀರ್ಪು ಹೊರಬಂದಿದೆ.

ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯೊಬ್ಬರನ್ನು ಉದ್ದೇಶಪೂರ್ವಕವಾಗಿ ಜಾತಿ ಹೆಸರಿನಿಂದ ಅವಮಾನಿಸುವುದು, ಬೆದರಿಸುವುದು ಅಥವಾ ನಿಂದಿಸುವುದನ್ನು ಎಸ್‌ಸಿ/ಎಸ್‌ಟಿ ಕಾಯ್ದೆಯ ಸೆಕ್ಷನ್ 3(1)(r) ಮತ್ತು 3(1)(s) ಅಡಿಯಲ್ಲಿ "ಸಾರ್ವಜನಿಕರ ಕಣ್ಣಿಗೆ ಕಾಣುವ ಯಾವುದೇ ಸ್ಥಳದಲ್ಲಿ" ಅಪರಾಧವೆಂದು ಪರಿಗಣಿಸಲಾಗುತ್ತದೆ.

ಈ ಅಪರಾಧಗಳನ್ನು ಸಾಬೀತುಪಡಿಸಲು ಮೂರು ಅಂಶಗಳು ಅಗತ್ಯವಾಗಿವೆ. ಆರೋಪಿಯು ಎಸ್‌ಸಿ ಅಥವಾ ಎಸ್‌ಟಿ ಸಮುದಾಯಕ್ಕೆ ಸೇರಿದವರಾಗಿರಬಾರದು, ಕೃತ್ಯವು ಸಂತ್ರಸ್ತರನ್ನು ಅವರ ಜಾತಿಯ ಹೆಸರಿನಲ್ಲಿ ಅವಮಾನಿಸುವ ಉದ್ದೇಶವನ್ನು ಹೊಂದಿರಬೇಕು ಮತ್ತು ಘಟನೆಯು "ಸಾರ್ವಜನಿಕರ ಕಣ್ಣಿಗೆ ಕಾಣುವ" ಸ್ಥಳದಲ್ಲಿ ನಡೆದಿರಬೇಕು. ಡಿಜಿಟಲ್ ಪ್ರಕರಣಗಳಲ್ಲಿ ಮೂರನೇ ಅಂಶವು ಪ್ರಮುಖ ಪಾತ್ರ ವಹಿಸುತ್ತದೆ.

ಸಾರ್ವಜನಿಕರು ವೀಕ್ಷಿಸಬಹುದಾದ ಅಥವಾ ಕೇಳಿಸಬಹುದಾದ ಸ್ಥಳವೇ "ಸಾರ್ವಜನಿಕ ನೋಟ" (public view) ಎಂದು 2020ರ ಹಿತೇಶ್ ವರ್ಮಾ ವರ್ಸಸ್ ಉತ್ತರಾಖಂಡ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು. "ಸಾರ್ವಜನಿಕರು ಇಲ್ಲದ ನಾಲ್ಕು ಗೋಡೆಗಳ ಒಳಗೆ ಈ ಕೃತ್ಯ ನಡೆದರೆ, ಅದನ್ನು ಸಾರ್ವಜನಿಕರ ಕಣ್ಣಿಗೆ ಕಾಣುವ ಸ್ಥಳದಲ್ಲಿ ನಡೆದಿದೆ ಎಂದು ಹೇಳಲಾಗುವುದಿಲ್ಲ" ಎಂದು ಅದು ತಿಳಿಸಿತ್ತು.

ಕಳೆದ ತಿಂಗಳು ರಾಮಕೃಷ್ಣ ಚೌಹಾಣ್ ವರ್ಸಸ್ ಉತ್ತರ ಪ್ರದೇಶ ಸರ್ಕಾರ ಪ್ರಕರಣದಲ್ಲಿ, ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಶಾಲಾ ವ್ಯವಸ್ಥಾಪಕರೊಬ್ಬರ ವಿರುದ್ಧದ ಈ ಕಾಯ್ದೆಯಡಿ ದಾಖಲಾಗಿದ್ದ ಮೊಕದ್ದಮೆಯನ್ನು ರದ್ದುಗೊಳಿಸಿತ್ತು. "ಸಂಬಂಧಿತ ನಿಂದನೆಯು ಸಾರ್ವಜನಿಕರು ನೋಡುವ ಅಥವಾ ಕೇಳುವಂತಹ ಪರಿಸರದಲ್ಲಿ ನಡೆದಿದೆಯೇ ಎಂಬುದರ ಮೇಲೆ ಈ ಮಾನದಂಡವು ಅವಲಂಬಿತವಾಗಿರುತ್ತದೆ" ಎಂದು ಪೀಠವು ಹೇಳಿತ್ತು. "ಘಟನೆಯು ಶಾಲೆಯ ಆವರಣದಲ್ಲೇ ನಡೆದಿದೆ ಎಂಬ ಮಾತ್ರಕ್ಕೆ ಈ ಷರತ್ತು ಪೂರ್ಣಗೊಂಡಂತೆ ಆಗುವುದಿಲ್ಲ" ಎಂದು ಅದು ತಿಳಿಸಿತ್ತು.

ಕಲ್ಕತ್ತಾ ಹೈಕೋರ್ಟ್ ಹೇಳಿದ್ದೇನು?

ಪರಿಶಿಷ್ಟ ಜಾತಿಗೆ ಸೇರಿದ ಅರ್ಜಿದಾರರೊಬ್ಬರು, ಸಾಮಾನ್ಯ ವರ್ಗಕ್ಕೆ ಸೇರಿದ ಇಬ್ಬರು ವ್ಯಕ್ತಿಗಳು ಫೇಸ್‌ಬುಕ್‌ನಲ್ಲಿ "ತಮ್ಮ ಜಾತಿ ಗುರುತು, ಧರ್ಮ, ದೇವರು ಮತ್ತು ಕುಟುಂಬವನ್ನು ಗುರಿಯಾಗಿಸಿ ಅತ್ಯಂತ ಕೀಳು ಮಟ್ಟದ, ಅಸಂಸದೀಯ ಹಾಗೂ ಜಾತಿ ಸೂಚಕ ನಿಂದನೆಗಳನ್ನು ಮಾಡಿದ್ದಾರೆ" ಎಂದು ದೂರು ನೀಡಿದ್ದರು. ಕೋಲ್ಕತ್ತಾದ ಸೈಬರ್ ಪೊಲೀಸ್ ಠಾಣೆಯ ಮೂಲಕ ಫೇಸ್‌ಬುಕ್ ಅನ್ನು ಸಂಪರ್ಕಿಸಿದರೂ ಬಳಕೆದಾರರ ವಿವರಗಳು ಸಿಕ್ಕಿಲ್ಲ ಎಂಬ ಕಾರಣ ನೀಡಿ ಪೊಲೀಸರು "Final Report True, No Clue" ಎಂದು ವರದಿ ಸಲ್ಲಿಸಿದ್ದರು. ಈ ಮುಕ್ತಾಯ ವರದಿಯ ವಿರುದ್ಧ ದೂರುದಾರರು ಅರ್ಜಿ ಸಲ್ಲಿಸಿದ್ದರು. ಅದೇ ದೂರುದಾರರು ದಾಖಲಿಸಿದ್ದ ಇತ್ತೀಚಿನ ಮೂರು ಪ್ರಕರಣಗಳಲ್ಲಿ ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ ಎಂಬ ಕಾರಣ ನೀಡಿ ಅಲಿಪೋರ್ ವಿಶೇಷ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿತ್ತು.

ಈ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್, "ಅಪರಾಧ ನ್ಯಾಯಶಾಸ್ತ್ರವು ಪ್ರತಿಯೊಂದು ಪ್ರತ್ಯೇಕ ಅಪರಾಧದ ಘಟನೆಯನ್ನು ಅದರದೇ ಆದ ಆಧಾರಗಳು ಮತ್ತು ಸಾಕ್ಷ್ಯಾಧಾರಗಳ ಮೇಲೆ ಪ್ರತ್ಯೇಕವಾಗಿ ಪರಿಶೀಲಿಸುತ್ತದೆ" ಎಂದು ಹೇಳಿದ್ದು, ವಿಶೇಷ ನ್ಯಾಯಾಲಯದ ಕಾರಣಗಳು "ನ್ಯಾಯಸಮ್ಮತವಲ್ಲ ಮತ್ತು ಅಪರಾಧ ನಿರ್ಣಯದ ಮೂಲ ತತ್ವಗಳಿಗೆ ವಿರುದ್ಧವಾಗಿವೆ" ಎಂದಿತ್ತು.

ಸಾರ್ವಜನಿಕ ನೋಟದ ಪ್ರಶ್ನೆಯ ಕುರಿತು ಮಾತನಾಡಿದ ನ್ಯಾಯಾಲಯ, ಇದರ ವ್ಯಾಪ್ತಿಯು "ಭೌತಿಕ ಜಾಗವನ್ನು ಮೀರಿ ಡಿಜಿಟಲ್ ಜಗತ್ತಿಗೂ ಅನ್ವಯಿಸುತ್ತದೆ" ಎಂದು ತೀರ್ಪು ನೀಡಿತು. ತನಿಖೆಯ ವೇಳೆ ಪೊಲೀಸರು ಸ್ಕ್ರೀನ್‌ಶಾಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ ಎಂಬುದನ್ನು ಗಮನಿಸಿದ ನ್ಯಾಯಾಲಯ, ಸ್ಥಳೀಯ ಸೈಬರ್ ವಿಚಾರಣೆಯಲ್ಲಿ ವಿಫಲವಾದ ತನಿಖಾ ಸಂಸ್ಥೆಯು, "ರಾಜ್ಯ ಅಪರಾಧ ತನಿಖಾ ದಳದ (CID) ವಿಶೇಷ ಸೈಬರ್ ವಿಧಿವಿಜ್ಞಾನ ಅಥವಾ ಐಪಿ ಲಾಗ್ ಟ್ರ್ಯಾಕಿಂಗ್ ವಿಧಾನಗಳನ್ನು ಬಳಸಿಕೊಳ್ಳದೆ 'ಯಾವುದೇ ಸುಳಿವು ಸಿಕ್ಕಿಲ್ಲ' ಎಂದು ಕೈಚೆಲ್ಲಲು ಸಾಧ್ಯವಿಲ್ಲ" ಎಂದು ತಿಳಿಸಿತು.

ಇತರ ನ್ಯಾಯಾಲಯಗಳು ಏನು ಹೇಳಿವೆ?

ಸಮಾಜವು ಈ ಕಾಯ್ದೆ ಜಾರಿಗೆ ಬಂದಾಗಿನಿಂದಲೂ ಯಾವುದೇ ಬದಲಾವಣೆ ಹೊಂದಿಲ್ಲ ಎಂಬಂತೆ ನ್ಯಾಯಾಲಯಗಳು ಕಾನೂನನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ತನ್ನ ಸೂರಜ್ ವಿ. ಸುಕುಮಾರ್ ವರ್ಸಸ್ ಕೇರಳ ಸರ್ಕಾರ (2022) ಪ್ರಕರಣದ ತೀರ್ಪಿನಲ್ಲಿ ಹೇಳಿದೆ. ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು "ಮುಂದುವರಿಯುವ ಕಾಯ್ದೆ" (ongoing statute) ಎಂದ ನ್ಯಾಯಾಲಯ, ತಾಂತ್ರಿಕ ಬೆಳವಣಿಗೆಗಳಿಗೆ ಅನುಗುಣವಾಗಿ ಕಾನೂನುಗಳನ್ನು ಅರ್ಥೈಸಿಕೊಳ್ಳಬೇಕಾಗಬಹುದು ಎಂದು ಅಭಿಪ್ರಾಯಪಟ್ಟಿತು. ಈ ಕಾಯ್ದೆಯ ಮೂಲ ಉದ್ದೇಶವೇ ಜಾತಿ ಆಧಾರಿತ ಅವಮಾನ ಮತ್ತು ತಾರತಮ್ಯವನ್ನು ತಡೆಯುವುದಾಗಿದೆ. ಕಾನೂನಿಗೆ ಕೇವಲ ಸಾಂಪ್ರದಾಯಿಕ ಹಾಗೂ ಇಕ್ಕಟ್ಟಾದ ಅರ್ಥ ಕಲ್ಪಿಸಿದರೆ, ಈ ಕಾಯ್ದೆಯ ಮೂಲ ಉದ್ದೇಶವೇ ಸೋತುಹೋಗುತ್ತದೆ ಎಂದು ನ್ಯಾಯಾಲಯ ತಿಳಿಸಿತು.

ಅಪ್‌ಲೋಡ್ ಮಾಡಿದ ವಿಷಯವನ್ನು ಯಾರಾದರೂ ಯಾವುದೇ ಸಮಯದಲ್ಲಿ ವೀಕ್ಷಿಸಬಹುದಾದ್ದರಿಂದ ಇಂಟರ್ನೆಟ್ ನಲ್ಲಿನ ಕಂಟೆಂಟ್ ವೀಕ್ಷಣೆಯ ಪರಿಕಲ್ಪನೆಯನ್ನೇ ಬದಲಾಯಿಸಿದೆ ಎಂದು ನ್ಯಾಯಾಲಯ ಗಮನಿಸಿತು. "ತಾಂತ್ರಿಕವಾಗಿ ಮುಂದುವರಿದಿರುವ ಈ ಕಾಲಘಟ್ಟದಲ್ಲಿ ಕಿರಿದಾದ ವ್ಯಾಖ್ಯಾನವು ಈ ಕಾಯ್ದೆಯನ್ನು ನಿರರ್ಥಕ ಮತ್ತು ಹಳೇ ಕಾಲದಂತೆ ಮಾಡುತ್ತದೆ" ಎಂದು ಅದು ಅಭಿಪ್ರಾಯಪಟ್ಟಿತು. ನಿಂದನಾತ್ಮಕ ಅಂಶಗಳನ್ನು ಪ್ರವೇಶಿಸಿದಾಗಲೆಲ್ಲಾ ಸಂತ್ರಸ್ತರು "ನೇರ ಮತ್ತು ಪರೋಕ್ಷವಾಗಿ ಅಲ್ಲಿರುತ್ತಾರೆ" ಎನಿಸುವುದರಿಂದ ಡಿಜಿಟಲ್ ಜಗತ್ತಿನಲ್ಲಿ "ಸಾರ್ವಜನಿಕ ನೋಟ"ದ ಷರತ್ತು ಪೂರೈಸಲ್ಪಡುತ್ತದೆ ಎಂದು ನ್ಯಾಯಾಲಯ ತೀರ್ಪು ನೀಡಿತು.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor