ಸಾಂದರ್ಭಿಕ ಚಿತ್ರ | Photo Credit : magnific.com

ಹದಿಹರೆಯದವರ ಮಾನಸಿಕ ಆರೋಗ್ಯದ ಕುರಿತಾಗಿ ಹೆಚ್ಚುತ್ತಿರುವ ಕಳವಳಗಳ ನಡುವೆ ಸಾಮಾಜಿಕ ಜಾಲತಾಣವನ್ನು ನಿಷೇಧಿಸುವ ಅಥವಾ ನಿರ್ಬಂಧಿಸುವ ವಿಷಯವು ಮುನ್ನೆಲೆಗೆ ಬಂದಿದೆ.

ಈ ವಾರದ ಆರಂಭದಲ್ಲಿ ನಡೆದ ನ್ಯಾಯಾಲಯದ ವಿಚಾರಣೆಯೊಂದರಲ್ಲಿ ಮಾಹಿತಿ ತಂತ್ರಜ್ಞಾನ ಮಧ್ಯಸ್ಥ ನಿಯಮಗಳಿಗೆ ತಿದ್ದುಪಡಿ ತರುವ ಯೋಜನೆಯನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. ಈ ಬದಲಾವಣೆಗಳು 18 ವರ್ಷದೊಳಗಿನವರು ಸಾಮಾಜಿಕ ಜಾಲತಾಣ ಖಾತೆಗಳನ್ನು ತೆರೆಯುವುದನ್ನು ತಡೆಯಲಿವೆ. ಈ ನಿಯಮ ಜಾರಿಯಾದರೆ, ಇತ್ತೀಚೆಗೆ ಇಂತಹ ನಿರ್ಬಂಧಗಳನ್ನು ಯೋಜಿಸಿರುವ ಅಥವಾ ಜಾರಿಗೆ ತಂದಿರುವ ದೇಶಗಳ ಪಟ್ಟಿಗೆ ಭಾರತವೂ ಸೇರ್ಪಡೆಯಾಗಲಿದೆ.

ಕಳೆದ ವರ್ಷದ ಡಿಸೆಂಬರ್ ನಲ್ಲಿ ಆಸ್ಟ್ರೇಲಿಯಾ ಮೊದಲು ಇಂತಹ ನಿರ್ಬಂಧಗಳನ್ನು ಜಾರಿಗೆ ತಂದಿತ್ತು. ಅಲ್ಲಿನ ನಿಯಮಗಳ ಪ್ರಕಾರ, 16 ವರ್ಷದೊಳಗಿನವರು ಖಾತೆ ಹೊಂದುವುದನ್ನು ತಡೆಯುವ ಜವಾಬ್ದಾರಿ ನಿಯಮಗಳ ವ್ಯಾಪ್ತಿಗೆ ಬರುವ ಸಾಮಾಜಿಕ ಜಾಲತಾಣ ವೇದಿಕೆಗಳ ಮೇಲಿರುತ್ತದೆ. ಇನ್ಸ್ಟಾಗ್ರಾಮ್, ಫೇಸ್ಬುಕ್, ಎಕ್ಸ್, ಯೂಟ್ಯೂಬ್ ಸೇರಿದಂತೆ ಹಲವು ಪ್ರಮುಖ ವೇದಿಕೆಗಳು ಈ ನಿಯಮಗಳ ವ್ಯಾಪ್ತಿಯಲ್ಲಿವೆ.

ಅಂದಿನಿಂದ ಇಂಡೋನೇಷ್ಯಾ ಮತ್ತು ಮಲೇಷ್ಯಾದಂತಹ ದೇಶಗಳು ಸಹ ಇದೇ ರೀತಿಯ ನಿರ್ಬಂಧಗಳನ್ನು ಅಂಗೀಕರಿಸಿದ್ದು, ಶೀಘ್ರವೇ ಜಾರಿಗೆ ಬರಲಿವೆ.

ಹದಿಹರೆಯದವರ ಮಾನಸಿಕ ಆರೋಗ್ಯದ ಕುರಿತಾಗಿ ಹೆಚ್ಚುತ್ತಿರುವ ಕಳವಳಗಳ ನಡುವೆ ಸಾಮಾಜಿಕ ಜಾಲತಾಣವನ್ನು ನಿಷೇಧಿಸುವ ಅಥವಾ ನಿರ್ಬಂಧಿಸುವ ವಿಷಯವು ಮುನ್ನೆಲೆಗೆ ಬಂದಿದೆ. 2025–26ರ ಆರ್ಥಿಕ ಸಮೀಕ್ಷೆಯು 15–24 ವಯಸ್ಸಿನವರಲ್ಲಿ ಸಾಮಾಜಿಕ ಜಾಲತಾಣದ ವ್ಯಸನದ ಬಗ್ಗೆ ಎಚ್ಚರಿಸಿದೆ. ಸಾಮಾಜಿಕ ಜಾಲತಾಣದ ವ್ಯಸನವು “ಆತಂಕ, ಖಿನ್ನತೆ, ಕಡಿಮೆ ಆತ್ಮವಿಶ್ವಾಸ ಮತ್ತು ಸೈಬರ್ ಬೆದರಿಕೆಯಿಂದ ಉಂಟಾಗುವ ಒತ್ತಡ”ದೊಂದಿಗೆ ಪ್ರಬಲವಾಗಿ ಸಂಬಂಧ ಹೊಂದಿದೆ ಎಂದು ಸಮೀಕ್ಷೆ ತಿಳಿಸಿದೆ.

ನಿಷೇಧವನ್ನು ವಾಸ್ತವದಲ್ಲಿ ಹೇಗೆ ಜಾರಿಗೆ ತರಬಹುದು ಎಂಬುದನ್ನು ಪರಿಗಣಿಸುವ ಮೊದಲು ಪ್ರಸ್ತುತ ಕಾನೂನುಗಳು ಏನು ಹೇಳುತ್ತವೆ ಎಂಬುದನ್ನೂ ಗಮನಿಸಬೇಕಾಗುತ್ತದೆ. ಅಪ್ರಾಪ್ತರು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿರ್ದಿಷ್ಟವಾಗಿ ನಿಷೇಧಿಸುವ ಯಾವುದೇ ಕಾನೂನು ಇಲ್ಲದಿದ್ದರೂ, ‘ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ (DPDP), 2023’ರ ಅಡಿಯಲ್ಲಿ 18 ವರ್ಷದೊಳಗಿನವರ ವೈಯಕ್ತಿಕ ದತ್ತಾಂಶವನ್ನು ಸಂಸ್ಕರಿಸುವ ಮೊದಲು ಪ್ಲಾಟ್ಫಾರ್ಮ್ ಗಳು ಪರಿಶೀಲಿಸಬಹುದಾದ ಪೋಷಕರ ಒಪ್ಪಿಗೆ ಪಡೆಯಬೇಕಾಗುತ್ತದೆ. ಈ ನಿಯಮಗಳು 2027ರ ಮೇ 13ರಿಂದ ಅನ್ವಯವಾಗಲಿವೆ.

ಸರ್ಕಾರವು ಐಟಿ ಮಧ್ಯಸ್ಥ ನಿಯಮಗಳಿಗೆ ತಿದ್ದುಪಡಿ ಅಂಗೀಕರಿಸಿದರೆ, ಸಾಮಾಜಿಕ ಜಾಲತಾಣ ಪ್ಲಾಟ್ಫಾರ್ಮ್ ಗಳು ಬಳಕೆದಾರರ ವಯಸ್ಸನ್ನು ಪರಿಶೀಲಿಸಬೇಕಾದ ವ್ಯವಸ್ಥೆಯೊಂದನ್ನು ರೂಪಿಸಲು ಅವಕಾಶವಾಗಬಹುದು. ಆದರೆ ಅದೇ ಅತ್ಯಂತ ಕಷ್ಟದ ವಿಷಯವಾಗಿದೆ.

DPDP ಕಾಯ್ದೆಯು 18 ವರ್ಷದೊಳಗಿನವರನ್ನು ‘ಮಗು’ ಎಂದು ವ್ಯಾಖ್ಯಾನಿಸುತ್ತದೆ ಮತ್ತು ಪ್ಲಾಟ್ಫಾರ್ಮ್ ಅವರ ಡೇಟಾವನ್ನು ಸಂಸ್ಕರಿಸುವ ಮೊದಲು ಪರಿಶೀಲಿಸಬಹುದಾದ ಪೋಷಕರ ಒಪ್ಪಿಗೆ ಪಡೆಯಬೇಕೆಂದು ಕಡ್ಡಾಯಗೊಳಿಸುತ್ತದೆ. ಆದರೆ ಅದನ್ನು ಜಾರಿಗೆ ತರುವ ವ್ಯವಸ್ಥೆ ರೂಪಿಸಿರಲಿಲ್ಲ.

“ಐಟಿ ನಿಯಮಗಳಲ್ಲಿನ ಬದಲಾವಣೆಗಳು ಹೊಸ ಕಲ್ಪನೆಯಲ್ಲ. 2023ರಿಂದ ಕಾಗದದ ಮೇಲಿದ್ದ ನಿಯಮವೊಂದನ್ನು ಕಾರ್ಯಗತಗೊಳಿಸಲು ಭಾರತವು ಅಂತಿಮವಾಗಿ ಅಗತ್ಯ ಮೂಲಸೌಕರ್ಯ ರೂಪಿಸುತ್ತಿದೆ” ಎನ್ನುತ್ತಾರೆ ಸೈಬರ್ ಭದ್ರತಾ ತಜ್ಞರು.

ನಿಷೇಧ ಹೇರುವ ಮೊದಲು ಭಾರತವು ಇತರ ದೇಶಗಳಿಂದ ಪಾಠ ಕಲಿಯಬಹುದು. ಉದಾಹರಣೆಗೆ, ಆಸ್ಟ್ರೇಲಿಯಾದಲ್ಲಿ ಬಳಕೆದಾರರ ವಯಸ್ಸನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಪ್ಲಾಟ್ ಫಾರ್ಮ್ ಗಳ ಮೇಲೆಯೇ ಹೊರಿಸಲಾಗಿದೆ. ಮತ್ತೊಂದೆಡೆ, ಮಲೇಷ್ಯಾ ಸರ್ಕಾರಿ ಗುರುತಿನ ಚೀಟಿ ಪೋರ್ಟಲ್ ಬಳಸುತ್ತದೆ.

ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧದ ಫಲಿತಾಂಶಗಳು ಈವರೆಗೆ ಮಿಶ್ರ ಪ್ರತಿಕ್ರಿಯೆ ಪಡೆದಿವೆ. ಆಸ್ಟ್ರೇಲಿಯಾ ಅಪ್ರಾಪ್ತರ ಲಕ್ಷಾಂತರ ಖಾತೆಗಳನ್ನು ತೆಗೆದುಹಾಕಿದೆ ಎಂದು ಹೇಳಿದರೂ, ಅಲ್ಲಿನ ಇಂಟರ್ನೆಟ್ ನಿಯಂತ್ರಕ ಸಂಸ್ಥೆಯಾದ ‘eSafety ಕಮಿಷನರ್’ ನಡೆಸಿದ ಅಧ್ಯಯನದ ಪ್ರಕಾರ, ನಿರ್ಬಂಧ ಜಾರಿಗೆ ಬಂದ ಮೂರು ತಿಂಗಳ ಬಳಿಕ ವಯಸ್ಸಿನ ನಿರ್ಬಂಧಕ್ಕೆ ಒಳಪಟ್ಟ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಕನಿಷ್ಠ ಒಂದು ಖಾತೆ ಹೊಂದಿದ್ದ 16 ವರ್ಷದೊಳಗಿನವರ ಪ್ರಮಾಣವು 52.4%ರಿಂದ 42.1%ಕ್ಕೆ ಇಳಿದಿತ್ತು. ಅಂದರೆ, ನಿರ್ಬಂಧದ ಬಳಿಕವೂ ಗಣನೀಯ ಪ್ರಮಾಣದ ಮಕ್ಕಳು ಸಾಮಾಜಿಕ ಜಾಲತಾಣ ಬಳಸುವುದನ್ನು ಮುಂದುವರಿಸಿದ್ದರು.

ಭಾರತದಲ್ಲಿ 18 ವರ್ಷದೊಳಗಿನವರ ಸಾಮಾಜಿಕ ಮಾಧ್ಯಮ ಬಳಕೆದಾರರ ಸಂಖ್ಯೆ ದೊಡ್ಡದಾಗಿದೆ. ಇಷ್ಟು ದೊಡ್ಡ ಪ್ರಮಾಣದ ಬಳಕೆದಾರರನ್ನು ಒಳಗೊಂಡ 18 ವರ್ಷದ ವಯೋಮಿತಿ ನಿರ್ಬಂಧವನ್ನು ಯಾವುದೇ ದೇಶ ಜಾರಿಗೆ ತಂದಿಲ್ಲ ಎಂಬುದು ಭಾರತದ ಮುಂದಿರುವ ಪ್ರಮುಖ ಸವಾಲಾಗಿದೆ. ಒಟ್ಟು 26 ಮಿಲಿಯನ್ ಜನರ ಮಾರುಕಟ್ಟೆಯಾದ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡಿರುವ ವ್ಯವಸ್ಥೆಯು ಭಾರತದಲ್ಲಿ ಸ್ವಯಂಚಾಲಿತವಾಗಿ ಕೆಲಸ ಮಾಡುವುದು ಅಸಾಧ್ಯ.

ಮುಖ ಗುರುತಿಸುವಿಕೆ ಅಥವಾ ಗುರುತಿನ ಚೀಟಿ ಪರಿಶೀಲನೆ ವಿಧಾನಗಳ ಮೂಲಕ ಪರಿಶೀಲನೆ ನಡೆಸಬಹುದು. ವಯಸ್ಸಿನ ಪರಿಶೀಲನೆಗೆ ‘ಡಿಜಿಲಾಕರ್’ ಒಂದು ಆಯ್ಕೆಯಾಗಬಹುದು. ಆದರೆ ಸರ್ಕಾರವು ಪ್ರಕ್ರಿಯೆಯನ್ನು ನೇರವಾಗಿ ವೇದಿಕೆಗಳಿಗೆ ವಹಿಸುವಂತಹ ವಿಭಿನ್ನ ವಿಧಾನ ಆರಿಸಿಕೊಂಡರೆ ಅಪಾಯಕ್ಕೆ ಕಾರಣವಾಗಬಹುದು. ವಿಶೇಷವಾಗಿ ದುರುದ್ದೇಶಪೂರಿತ ಉದ್ದೇಶ ಹೊಂದಿರುವವರಿಗೆ ಅಪ್ರಾಪ್ತರ ದಾಖಲೆಗಳು ಸುಲಭವಾದ ಗುರಿಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor