×
Ad

ಕುಸಿದ ಆರ್ಥಿಕತೆ, ಬೀದಿಗಿಳಿದ ಜನತೆ | Iran ನಲ್ಲಿ ಏನಾಗುತ್ತಿದೆ?

Update: 2026-01-01 23:57 IST

credit: ndtv

ಇರಾನ್‌ನಲ್ಲಿ ಆರ್ಥಿಕತೆ ಕುಸಿತದಿಂದಾಗಿ ಸಾರ್ವಜನಿಕ ಆಕ್ರೋಶ ಭುಗಿಲೆದ್ದಿದ್ದು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಡಿ.28ರಂದು ಆರಂಭವಾಗಿದ್ದ ಜನರ ಪ್ರತಿಭಟನೆ ಈಗ ಮತ್ತಷ್ಟು ತೀವ್ರಗೊಂಡಿದೆ. ಪ್ರತಿಭಟನಾಕಾರರು ಮತ್ತು ಭದ್ರತಾ ಸೇವೆಗಳ ನಡುವೆ ಸಂಘರ್ಘವೇರ್ಪಟ್ಟಿದ್ದು ಇರಾನ್ ಸೇನೆಯ ಸದಸ್ಯರೊಬ್ಬರು ಸಾವಿಗೀಡಾಗಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಸರ್ಕಾರವು ಕರೆನ್ಸಿ ಕುಸಿತವನ್ನು ನಿರ್ವಹಿಸಿದ ರೀತಿ ಮತ್ತು ವೇಗವಾಗಿ ಏರುತ್ತಿರುವ ಬೆಲೆಗಳ ವಿರುದ್ಧ ಅಂಗಡಿ ಮಾಲೀಕರು ಭಾನುವಾರ ಪ್ರತಿಭಟನೆ ಆರಂಭಿಸಿದ್ದು, ಹಲವು ನಗರಗಳಲ್ಲಿ ಹಿಂಸಾಚಾರ ವರದಿಯಾಗಿದೆ. 2025 ರಲ್ಲಿ ಇರಾನ್‌ನ ಕರೆನ್ಸಿಯು ಯುಎಸ್ ಡಾಲರ್ ವಿರುದ್ಧ ತನ್ನ ಅರ್ಧದಷ್ಟು ಮೌಲ್ಯವನ್ನು ಕಳೆದುಕೊಂಡಿದ್ದು ಇದು ಆರ್ಥಿಕ ಸಂಕಷ್ಟವನ್ನು ಇನ್ನಷ್ಟು ಹದಗೆಡಿಸಿದೆ ಎಂದು Alhazeera ವರದಿ ಮಾಡಿದೆ.

ಅಧಿಕಾರಿಗಳು ಹಠಾತ್ ಸಾರ್ವಜನಿಕ ರಜೆ ಘೋಷಿಸಿದ ನಂತರ, ಟೆಹ್ರಾನ್ ಸೇರಿದಂತೆ ಇರಾನ್‌ ನ 31 ಪ್ರಾಂತ್ಯಗಳಲ್ಲಿ 21 ರಲ್ಲಿ ವ್ಯವಹಾರಗಳು, ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗಿದೆ. ಟೆಹ್ರಾನ್, ಶಿರಾಜ್, ಇಸ್ಫಹಾನ್, ಕೆರ್ಮಾನ್‌ಶಾ ಮತ್ತು ಫಾಸಾ ಸೇರಿದಂತೆ ಅನೇಕ ನಗರಗಳಲ್ಲಿ ಪ್ರತಿಭಟನೆ ನಡೆದಿದೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸುವಾಗ ಖಮೇನಿ ವಿರುದ್ಧ ಘೋಷಣೆ ಕೂಗುತ್ತಿರುವುದು ವಿಡಿಯೋಗಳಲ್ಲಿದೆ.


► ಪ್ರತಿಭಟನೆಗೆ ಕಾರಣವೇನು?

ರವಿವಾರ ಟೆಹ್ರಾನ್‌ ನ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತಿಭಟನೆ ಆರಂಭವಾಗಿತ್ತು. ಇರಾನಿನ ಕರೆನ್ಸಿ ಇರಾನ್ ರಿಯಾಲ್‌ ನ ತೀವ್ರ ಕುಸಿತ, ಬೆಲೆ ಏರಿಕೆ ಮತ್ತು ಹದಗೆಡುತ್ತಿರುವ ಜೀವನಮಟ್ಟವನ್ನು ಪ್ರತಿಭಟಿಸಿ ಅಂಗಡಿಯವರು ತಮ್ಮ ವ್ಯವಹಾರಗಳನ್ನು ಮುಚ್ಚಿ ಬೀದಿಗಿಳಿದಿದ್ದರು. ಕಳೆದ ವರ್ಷ ಇರಾನ್‌ನ ಕರೆನ್ಸಿ ಗಣನೀಯ ಮೌಲ್ಯವನ್ನು ಕಳೆದುಕೊಂಡಿದೆ. ಇದು ಆಮದು ವೆಚ್ಚಗಳನ್ನು ಮತ್ತು ಹಣದುಬ್ಬರವನ್ನು ಹೆಚ್ಚಿಸಿದೆ.

ಮಂಗಳವಾರದ ವೇಳೆಗೆ ದೇಶಾದ್ಯಂತದ ನಗರಗಳಲ್ಲಿನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಇತರ ಗುಂಪುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಪ್ರತಿಭಟನಾಕಾರರು ನಿರುದ್ಯೋಗ, ನೀರಿನ ಕೊರತೆ ಮತ್ತು ದೇಶದ ಆಡಳಿತ ಸಮಸ್ಯೆಗಳ ಬಗ್ಗೆಯೂ ದನಿಯೆತ್ತಿದ್ದಾರೆ.

► ಹಲವಾರು ನಗರಗಳಲ್ಲಿ ಸಂಘರ್ಷ

ಶಿರಾಜ್, ಇಸ್ಫಹಾನ್ ಮತ್ತು ಕೆರ್ಮನ್‌ಶಾದಂತಹ ನಗರಗಳಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವಿನ ತೀವ್ರ ಘರ್ಷಣೆಗಳ ದೃಶ್ಯಗಳು ಆನ್‌ಲೈನ್‌ ನಲ್ಲಿ ಪ್ರಸಾರವಾಗುತ್ತಿವೆ. ಕೆಲವು ವಿಡಿಯೊಗಳಲ್ಲಿ, ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆ ಅಶ್ರುವಾಯು ಪ್ರಯೋಗಿಸಿರುವುದು ದೃಶ್ಯಗಳಲ್ಲಿದೆ.

ದಕ್ಷಿಣ ಪ್ರಾಂತ್ಯದ ಫಾರ್ಸ್‌ ನ ಫಾಸಾ ನಗರದಲ್ಲಿ ಜನರ ಗುಂಪೊಂದು ಗವರ್ನರ್ ಕಚೇರಿ ಸೇರಿದಂತೆ ಸರ್ಕಾರಿ ಕಚೇರಿಗಳ ಗೇಟ್‌ಗಳನ್ನು ಭೇದಿಸುವುದನ್ನು ವೀಡಿಯೊಗಳು ತೋರಿಸಿವೆ ಎಂದು ರಾಜ್ಯ ಮಾಧ್ಯಮ IRNA ವರದಿ ಮಾಡಿದೆ. ಈ ವೇಳೆ ಗವರ್ನರ್ ಕಚೇರಿಯ ಕೆಲವು ಭಾಗಗಳಿಗೆ ಹಾನಿಯಾಗಿದೆ ಎಂದು ಇರಾನಿನ ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ವರನ್ನು ಬಂಧಿಸಲಾಗಿದೆ ಮತ್ತು ಮೂವರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ನ್ಯಾಯಾಂಗ ಅಧಿಕಾರಿಗಳು ಹೇಳಿದ್ದಾರೆ. ಅದೇ ವೇಳೆ ಸಂಘರ್ಷದಲ್ಲಿ ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ ಎಂಬ ವರದಿಗಳನ್ನು ಅವರು ನಿರಾಕರಿಸಿದ್ದಾರೆ.

ನಗರದ ಕೆಲವು ಭಾಗಗಳ ಮೇಲೆ ಮಿಲಿಟರಿ ಹೆಲಿಕಾಪ್ಟರ್‌ ಗಳು ಹಾರುತ್ತಿರುವುದು ಕಂಡುಬಂದಿದೆ. ಇದು ನಿವಾಸಿಗಳನ್ನು ಬೆದರಿಸುವ ಮತ್ತು ಪ್ರತಿಭಟನೆಗಳು ಹರಡದಂತೆ ತಡೆಯುವ ಗುರಿಯನ್ನು ಹೊಂದಿದೆ ಎಂದು ವಿರೋಧ ಗುಂಪುಗಳು ತಿಳಿಸಿವೆ.

► ಮಾರುಕಟ್ಟೆ ಬಂದ್

ಬುಧವಾರ ಟೆಹ್ರಾನ್, ಇಸ್ಫಹಾನ್ ಮತ್ತು ಕೆರ್ಮನ್‌ಶಾ ಸೇರಿದಂತೆ ಹಲವಾರು ಪ್ರಮುಖ ನಗರಗಳಲ್ಲಿ ಮಾರುಕಟ್ಟೆಗಳನ್ನು ಮುಚ್ಚಿ ವ್ಯಾಪಾರಿಗಳು ಸಂಘಟಿತ ಮುಷ್ಕರ ನಡೆಸಿದ್ದಾರೆ. ಟೆಹ್ರಾನ್‌ನಲ್ಲಿ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ತಬ್ರಿಜ್, ಶಿರಾಜ್, ಹಮದಾನ್ ಮತ್ತು ಯಾಜ್ದ್‌ನಂತಹ ನಗರಗಳಲ್ಲಿ ಇದೇ ರೀತಿಯಲ್ಲಿ ಮಾರುಕಟ್ಟೆ ಬಂದ್ ಆಗಿತ್ತು.

► ಗಗನಕ್ಕೇರಿದ ಆಹಾರ ವಸ್ತುಗಳ ಬೆಲೆ

ಪೆಜೆಶ್ಕಿಯನ್ ಭಾನುವಾರ ರಾಜ್ಯ ಕಾರ್ಮಿಕರಿಗೆ 20% ವೇತನ ಹೆಚ್ಚಳವನ್ನು ಪ್ರಸ್ತಾಪಿಸುವ ಬಜೆಟ್ ಶಾಸನವನ್ನು ಮಂಡಿಸಲು ಯೋಜಿಸಿದ್ದರು. ಹಿಂದಿನ 12 ತಿಂಗಳುಗಳಲ್ಲಿ ಗ್ರಾಹಕ ವೆಚ್ಚಗಳು 52% ರಷ್ಟು ಏರಿಕೆಯಾಗಿವೆ ಎಂದು ಅಧಿಕೃತ ದತ್ತಾಂಶಗಳು ತೋರಿಸಿವೆ. ಸರ್ಕಾರಿ ಅಂಕಿಅಂಶಗಳ ಪ್ರಕಾರ ಡಿಸೆಂಬರ್‌ನಲ್ಲಿ ಆಹಾರದ ಬೆಲೆಗಳು ಹಿಂದಿನ ವರ್ಷಕ್ಕಿಂತ 72% ಹೆಚ್ಚಾಗಿದೆ. ವೈದ್ಯಕೀಯ ಸರಬರಾಜು ಮತ್ತು ಸೇವೆಗಳು 50% ಹೆಚ್ಚಾಗಿದೆ. ಒಟ್ಟಾರೆ ಹಣದುಬ್ಬರವು 42.2% ನಷ್ಟಿತ್ತು.

ವಿನಿಮಯ ದರಗಳು ಸ್ಥಿರವಾಗುವವರೆಗೆ ವ್ಯಾಪಾರಿಗಳು ಮತ್ತು ಗ್ರಾಹಕರು ವಹಿವಾಟುಗಳನ್ನು ವಿಳಂಬಗೊಳಿಸಿದ್ದರಿಂದ ಅಸ್ಥಿರ ವಿನಿಮಯ ದರಗಳು ವಾಣಿಜ್ಯ ಚಟುವಟಿಕೆಯನ್ನು ಸ್ಥಗಿತಗೊಳಿಸಿದವು.

► ಸರ್ಕಾರದ ಪ್ರತಿಕ್ರಿಯೆ ಮತ್ತು ನಾಯಕತ್ವ ಬದಲಾವಣೆಗಳು

ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಸಾರ್ವಜನಿಕ ಆಕ್ರೋಶವನ್ನು ಒಪ್ಪಿಕೊಂಡಿದ್ದು, ಸರ್ಕಾರ ಪ್ರತಿಭಟನಾಕಾರರ "ಕಾನೂನುಬದ್ಧ ಬೇಡಿಕೆಗಳನ್ನು" ಆಲಿಸುತ್ತದೆ ಎಂದು ಹೇಳಿದ್ದಾರೆ. ಪ್ರಾಸಿಕ್ಯೂಟರ್ ಜನರಲ್ ಮೊಹಮ್ಮದ್ ಮೊವಾಹೆದಿ-ಆಜಾದ್ ಅವರು ಆರ್ಥಿಕ ಪ್ರತಿಭಟನೆಗಳು ನ್ಯಾಯಸಮ್ಮತವೆಂದು ಹೇಳಿದ್ದು,ಸಾರ್ವಜನಿಕ ಆಸ್ತಿಗೆ ಹಾನಿ ಅಥವಾ ಭದ್ರತಾ ಬೆದರಿಕೆಗಳು "ನಿರ್ಣಾಯಕ ಪ್ರತಿಕ್ರಿಯೆಯನ್ನು" ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಮೊಹಮ್ಮದ್ ರೆಜಾ ಫರ್ಜಿನ್ ಕೇಂದ್ರ ಬ್ಯಾಂಕಿನ ಗವರ್ನರ್ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ ನಂತರ ಪೆಜೆಶ್ಕಿಯನ್ ಮಾಜಿ ಆರ್ಥಿಕ ಸಚಿವ ಅಬ್ದುಲ್ನಾಸರ್ ಹೆಮ್ಮತಿಯನ್ನು ಇರಾನ್‌ ನ ಕೇಂದ್ರ ಬ್ಯಾಂಕಿನ ಹೊಸ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

*ಇರಾನ್ ನಾಯಕತ್ವಕ್ಕೆ ಈ ನಿರ್ಣಾಯಕ ಕ್ಷಣ ಏಕೆ?

ಇರಾನ್‌ನ ಪಾದ್ರಿ ಆಡಳಿತಗಾರರಿಗೆ ವಿಶೇಷವಾಗಿ ಅಸ್ಥಿರ ಸಮಯದಲ್ಲಿ ಈ ಅಶಾಂತಿ ಬಂದಿದೆ. ಪಾಶ್ಚಿಮಾತ್ಯ ನಿರ್ಬಂಧಗಳು ಆರ್ಥಿಕತೆಯ ಮೇಲೆ ಭಾರಿ ಹೊರೆ ಬೀರುತ್ತಿವೆ. ಆದರೆ ಹಣದುಬ್ಬರವು ತೀವ್ರ ಹೆಚ್ಚಾಗಿದೆ. ಜೂನ್‌ನಲ್ಲಿ ಇಸ್ರೇಲ್ ಮತ್ತು ಯುಎಸ್ ವೈಮಾನಿಕ ದಾಳಿಗಳು ಇರಾನ್‌ನ ಪರಮಾಣು ಮೂಲಸೌಕರ್ಯ ಮತ್ತು ಮಿಲಿಟರಿ ನಾಯಕತ್ವವನ್ನು ಗುರಿಯಾಗಿಸಿಕೊಂಡ ನಂತರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಜೂನ್‌ನಲ್ಲಿ ಇರಾನ್ ಇಸ್ರೇಲ್‌ನೊಂದಿಗೆ 12 ದಿನಗಳ ವೈಮಾನಿಕ ಯುದ್ಧದಲ್ಲಿ ಭಾಗಿಯಾಗಿತ್ತು, ಇದು ಸರ್ಕಾರದ ಖಜಾನೆಗೆ ಹೊರೆಯಾಗಿದ್ದು, ಸಾರ್ವಜನಿಕ ಕೋಪವನ್ನು ಹೆಚ್ಚಿಸಿತು.

► ಇರಾನ್ ಸರ್ಕಾರದ ಪ್ರತಿಕ್ರಿಯೆ ಏನು?

ಹೆಚ್ಚಿನ ವಿವರಗಳನ್ನು ಒದಗಿಸಲಾಗಿಲ್ಲವಾದರೂ, ಅಧಿಕಾರಿಗಳು ಟ್ರೇಡ್ ಯೂನಿಯನ್‌ಗಳ ಪ್ರತಿನಿಧಿಗಳು ಮತ್ತು ವ್ಯಾಪಾರಿಗಳೊಂದಿಗೆ ನೇರ ಸಂವಾದ ನಡೆಸುತ್ತಾರೆ ಎಂದು ಸರ್ಕಾರಿ ವಕ್ತಾರೆ ಫಾತಿಮೆಹ್ ಮೊಹಜೆರಾನಿ ಗುರುವಾರ ಹೇಳಿದ್ದಾರೆ. ಅದೇ ಸಮಯದಲ್ಲಿ, ಭದ್ರತಾ ಪಡೆಗಳು ಬೀದಿಗಳಲ್ಲಿ ನಿಯೋಜಿಸಲ್ಪಟ್ಟಿವೆ. ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರಿಗೆ ನಿಷ್ಠರಾಗಿರುವ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನೊಂದಿಗೆ ಸಂಯೋಜಿತವಾಗಿರುವ ಸ್ವಯಂಸೇವಕ ಅರೆಸೈನಿಕ ಪಡೆಯಾದ ಬಸಿಜ್ ಪ್ರತಿಭಟನಾಕಾರರನ್ನು ಎದುರಿಸುವಲ್ಲಿ ತೊಡಗಿಸಿಕೊಂಡಿದೆ. ಸರ್ಕಾರವು ಬುಧವಾರ ಶೀತ ಹವಾಮಾನದ ಕಾರಣದಿಂದಾಗಿ ಸಾರ್ವಜನಿಕ ರಜೆಯನ್ನು ಘೋಷಿಸಿದ್ದರೂ ಜನರು ಬೀದಿಗಳಿದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

► ಇರಾನ್ ನಲ್ಲಿ ಪ್ರತಿಭಟನೆ ಹೊಸತಲ್ಲ

ಇತ್ತೀಚಿನ ವರ್ಷಗಳಲ್ಲಿ ಇರಾನಿನ ಅಧಿಕಾರಿಗಳು ಪದೇ ಪದೇ ಪ್ರತಿಭಟನೆಗಳನ್ನು ಎದುರಿಸಿದ್ದಾರೆ, ಬೆಲೆ ಏರಿಕೆ, ನೀರಿನ ಕೊರತೆ, ಮಹಿಳಾ ಹಕ್ಕುಗಳು ಮತ್ತು ರಾಜಕೀಯ ಸ್ವಾತಂತ್ರ್ಯ ವಿಷಯಗಳಿಗೂ ಇಲ್ಲಿ ಪ್ರತಿಭಟನೆ ನಡೆದಿವೆ. ಈ ಪ್ರತಿಭಟನೆಗಳನ್ನು ಸರ್ಕಾರ ಹತ್ತಿಕ್ಕಿತ್ತು. 2022 ರಲ್ಲಿ ಪೊಲೀಸ್ ಕಸ್ಟಡಿಯಲ್ಲಿ 22 ವರ್ಷದ ಮಹ್ಸಾ ಅಮಿನಿಯ ಸಾವು ದೇಶಾದ್ಯಂತ ಪ್ರತಿಭಟನೆಗಳಿಗೆ ಕಾರಣವಾದ ನಂತರ ಇರಾನ್‌ ನಲ್ಲಿ ಈಗ ನಡೆಯುತ್ತಿರುವ ಪ್ರತಿಭಟನೆ ಅತ್ಯಂತ ದೊಡ್ಡದಾಗಿದೆ. ಆದಾಗ್ಯೂ, ಪ್ರತಿಭಟನೆಗಳು ಇನ್ನೂ ದೇಶಾದ್ಯಂತ ಹರಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News