ಮಧುಮಲೈ ಹುಲಿ ಅಭಯಾರಣ್ಯಕ್ಕೆ ಆಗಮಿಸಿದ ಈ ಅಪರೂಪದ ಅತಿಥಿ ಯಾರು?
Photo Credit: the hindu / SPECIAL ARRANGEMENT
ಮಧುಮಲೈ ಹುಲಿ ಅಭಯಾರಣ್ಯದಲ್ಲಿ ರಣಹದ್ದುಗಳಿಗೆ ಸೂಕ್ತವಾಗಿರುವ ವಾತಾವರಣ, ಆಹಾರ ಲಭ್ಯತೆ ಮತ್ತು ಆವಾಸಸ್ಥಾನವಿದೆ.
ಈ ಬಾರಿಯ ಚಳಿಗಾಲದಲ್ಲಿ ಮಧುಮಲೈ ಹುಲಿ ಅಭಯಾರಣ್ಯಕ್ಕೆ ಹೊಸ ಅತಿಥಿ ಆಗಮಿಸಿದೆ. ವನ್ಯಜೀವಿ ಪ್ರೇಮಿಗಳು ಅಪರೂಪದ ಅತಿಥಿ ಕಂಡುಬಂದಿರುವುದನ್ನು ಖಚಿತಪಡಿಸಿದ್ದಾರೆ. ಹೌದು, ಇಲ್ಲಿ ಈಸ್ಟರ್ನ್ ಇಂಪೀರಿಯಲ್ ಈಗಲ್ (ಆಕ್ವಿಲಾ ಹೆಲಿಯಕಾ) ಜಾತಿಯ ರಣಹದ್ದು ಪತ್ತೆಯಾಗಿದೆ.
ಈಜಿಪ್ಟಿಯನ್ ರಣಹದ್ದು ಆಗಿರುವ ಈಸ್ಟರ್ನ್ ಇಂಪೀರಿಯಲ್ ಹದ್ದಿನ ಜೋಡಿಯೊಂದು ಭಾರತೀಯ ಕಾಡುಗಳಲ್ಲಿ ಪತ್ತೆಯಾಗಿದೆ. ಛಾಯಾಗ್ರಾಹಕ ಮುರಳಿ ಮೂರ್ತಿಯವರ ಕಣ್ಣಿಗೆ ಈ ರಣಹದ್ದು ಬಿದ್ದಿದೆ. ಮುರಳಿ ಹೇಳುವ ಪ್ರಕಾರ ಈ ರಣಹದ್ದು ಪಶ್ಚಿಮ ಮತ್ತು ಮಧ್ಯ ಏಷ್ಯಾ ಪ್ರದೇಶಗಳಲ್ಲಿ ಕಂಡುಬರುತ್ತದೆ. ಚಳಿಗಾಲದಲ್ಲಿ ಇವು ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ದಕ್ಷಿಣ ಮತ್ತು ಫೂರ್ವ ಏಷ್ಯಾಗಳಿಗೆ ವಲಸೆ ಬರುತ್ತವೆ.
2011ರಿಂದ 2022ರ ನಡುವೆ 58 ಪ್ರಬೇಧಗಳ ಹಿಂಸ್ರಪಕ್ಷಿಗಳ ವಿವರವನ್ನು ದಾಖಲೆ ಸಮೇತ ಪಟ್ಟಿ ಮಾಡಿರುವ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಅರೊಕೊಯಿನಾಥನ್ ಸಾಮ್ಸನ್ ಪ್ರಕಾರ, ಹುಲಿ ಅಭಯಾರಣ್ಯದಲ್ಲಿ ರಣಹದ್ದುಗಳಿಗೆ ಸೂಕ್ತವಾಗಿರುವ ವಾತಾವರಣ, ಆಹಾರ ಲಭ್ಯತೆ ಮತ್ತು ಆವಾಸಸ್ಥಾನವಿದೆ. “ಬಹುತೇಕ ಹಿಂಸ್ರ ಪಕ್ಷಿಗಳು ಉತ್ತಮ ಆಹಾರ ಲಭ್ಯತೆಯ ಜೊತೆಗೆ ಕಡಿಮೆ ಮಾನವಜನ್ಯ ಒತ್ತಡವಿರುವ (ಮಾನವ ಚಟುವಟಿಕೆಗಳು ಪರಿಸರ, ಪರಿಸರ ವ್ಯವಸ್ಥೆಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲೆ ಬೀರುವ ನಕಾರಾತ್ಮಕ ಪರಿಣಾಮ) ಪ್ರದೇಶಗಳನ್ನು ಬಯಸುತ್ತವೆ” ಎನ್ನುತ್ತಾರೆ ಸಾಮ್ಸನ್.
ಸಂತಾನೋತ್ಪತ್ತಿ ಸಮಯದಲ್ಲಿ ಇಂಪೀರಿಯಲ್ ಹದ್ದುಗಳು ಮುಕ್ತ ಪ್ರದೇಶ ಮತ್ತು ಅರಣ್ಯ-ಹುಲ್ಲುಗಾವಲು ಆವಾಸಸ್ಥಾನಗಳನ್ನು ಬಯಸುತ್ತವೆ. ಈ ಪ್ರದೇಶಗಳು ಮೊಟ್ಟೆ ಇಡಲು ಎತ್ತರದ ಮರಗಳನ್ನು ಹೊಂದಿರುತ್ತವೆ. ಬೇಟೆಯಾಡಲು ಮುಕ್ತ ಪ್ರದೇಶವೂ ಇರುತ್ತದೆ. ಸಂತಾನೋತ್ಪತ್ತಿ ಪ್ರದೇಶ ವಿಶಾಲವಾಗಿದ್ದು, ಪಶ್ಚಿಮ ಯುರೋಪ್ನಿಂದ ಪೂರ್ವ ಯುರೋಪ್ ಮತ್ತು ಮಧ್ಯ ಏಷ್ಯಾವರೆಗೆ ಮತ್ತು ಸೈಬೀರಿಯದಿಂದ ವಾಯುವ್ಯ ಚೀನಾವರೆಗೆ ಹರಡಿದೆ.
ಇಲಿಗಳು ಮತ್ತು ಸಣ್ಣ ಇಲಿಗಳನ್ನು ತಿನ್ನುವ ಮೂಲಕ ಬೇಟೆಯಲ್ಲಿ ಕುಖ್ಯಾತಿ ಪಡೆದಿರುವ ಇಂಪೀರಿಯಲ್ ಹದ್ದು ಪರಿಸರ ಸಮತೋಲನದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಭಾರತದಲ್ಲಿ ಈ ಹದ್ದು ಕಂಡುಬಂದಿರುವುದು ಆರೋಗ್ಯಕರ ಪರಿಸರ ವ್ಯವಸ್ಥೆಯನ್ನು ಸೂಚಿಸುತ್ತದೆ.
ಆದರೆ ಆವಾಸಸ್ಥಾನ ನಷ್ಟ, ಗದ್ದಲ ಮತ್ತು ಆಹಾರ ಲಭ್ಯತೆ ಕಡಿಮೆಯಾಗಿರುವುದರಿಂದ ಈ ಹದ್ದು ವಿನಾಶದಂಚಿಗೆ ತಲುಪಿದೆ. ಅದರ ಸಂತಾನೋತ್ಪತ್ತಿ ನೆಲೆಗಳನ್ನು ರಕ್ಷಿಸುವುದು ಚಳಿಗಾಲದಲ್ಲಿ ಅವುಗಳ ಆಗಮನವನ್ನು ಖಾತರಿಗೊಳಿಸುತ್ತದೆ.
ಈ ವರ್ಷ ದೊಡ್ಡ ಪ್ರಮಾಣದಲ್ಲಿ ಚಳಿಗಾಲದ ವಲಸೆ ಪಕ್ಷಿಗಳು ಭಾರತಕ್ಕೆ ಆಗಮಿಸಿವೆ. ಮುಖ್ಯವಾಗಿ ಬೇಟೆ ಪಕ್ಷಿಗಳು ಪ್ರಮುಖವಾಗಿ ಕಂಡುಬಂದಿವೆ. 2024ಕ್ಕೆ ಹೋಲಿಸಿದಲ್ಲಿ ಈ ವರ್ಷ ಆಗಮಿಸಿದ ಬೇಟೆ ಪಕ್ಷಿಗಳ ಸಂಖ್ಯೆ ಹೆಚ್ಚಿತ್ತು. ಹಾಗಿದ್ದರೂ ಪರಿಸರ ಸಂರಕ್ಷಕರು ಅರಣ್ಯ ಇಲಾಖೆ ಮತ್ತು ನೀಲಗಿರಿ ಜಿಲ್ಲೆಯ ಆಡಳಿತವನ್ನು ಕಾಡಿಗೆ ಪ್ರವಾಸಕ್ಕಾಗಿ ಆಗಮಿಸುವ ಜನರ ಪ್ರಮಾಣವನ್ನು ಕಡಿಮೆಗೊಳಿಸುವಂತೆ ವಿನಂತಿಸಿಕೊಂಡಿದ್ದಾರೆ. ಮುಖ್ಯವಾಗಿ ಬೇಸಗೆ ಮತ್ತು ಚಳಿಗಾಲದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ನಿಯಂತ್ರಣ ಹೇರುವಂತೆ ವಿನಂತಿಸಲಾಗಿದೆ.
“ಹುಲಿ ಅಭಯಾರಣ್ಯ ಜೀವವೈವಿಧ್ಯದ ತಾಣವಾಗಿರುವ ಕಾರಣದಿಂದ ಪ್ರವಾಸೋದ್ಯಮದ ಒತ್ತಡ ಎದುರಿಸುತ್ತಿದೆ. ಊಟಿ ಮತ್ತು ನೀಲಗಿರೀಸ್ ಗೆ ಅತಿಯಾಗಿ ಪ್ರವವಾಸಿಗರು ಆಗಮಿಸುತ್ತಾರೆ. ಹೀಗಾಗಿ ಸರ್ಕಾರ ಪ್ರವಾಸಿ ನೀತಿಯನ್ನು ಮರುಪರಿಶೀಲಿಸಬೇಕು” ಎಂದು ಪರಿಸರವಾದಿಗಳು ವಿನಂತಿಸಿಕೊಂಡಿದ್ದಾರೆ.
ಜಾಗತಿಕ ಪಕ್ಷಿವೀಕ್ಷಣೆ ಇಬರ್ಡ್ ನಲ್ಲಿ 2020ರಿಂದ 2025ರ ನಡುವೆ ಇಂಪೀರಿಯಲ್ ರಣಹದ್ದು ಕಂಡಿರುವ ಬಗ್ಗೆ ನಿರಂತರವಾಗಿ ದಾಖಲಾತಿ ಆಗಿದೆ. ಹೀಗಾಗಿ ಮಧುಮಲೈನಲ್ಲಿ ಅದರ ಉಪಸ್ಥಿತಿ ಪರಿಸರದ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ. ಈ ಬಹುತೇಕ ದಾಖಲಾತಿಗಳು ನವೆಂಬರ್ನಿಂದ ಫೆಬ್ರವರಿ ನಡುವೆ ಆಗಿದೆ. ಹೀಗಾಗಿ ಅವುಗಳ ಸಂತಾನೋತ್ಪತ್ತಿ ಸಮಯದಲ್ಲಿ ಇಂಪೀರಿಯಲ್ ರಣಹದ್ದುಗಳು ಹೆಚ್ಚು ಕಾಣಿಸಿಕೊಂಡಿವೆ ಎನ್ನುವುದು ತಿಳಿದುಬಂದಿದೆ.