×
Ad

H-1B ವೀಸಾ ವಿಳಂಬ: ಭಾರತೀಯ ಉದ್ಯೋಗಿಗಳಿಗೆ Work From Homeಗೆ ಅವಕಾಶ

Update: 2026-01-01 17:23 IST

ಸಾಂದರ್ಭಿಕ ಚಿತ್ರ

H-1B ವೀಸಾ ನೀಡುವ ಪ್ರಕ್ರಿಯೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಅಮೆರಿಕದ ತಂತ್ರಜ್ಞಾನ ಕಂಪೆನಿಗಳಲ್ಲಿ ಕೆಲಸ ಮಾಡುವ ಸಾವಿರಾರು ಭಾರತೀಯರು ಹಾಗೂ ಇತರ ವಿದೇಶಿಯರಿಗೆ ಮರಳಿ ಅಮೆರಿಕಕ್ಕೆ ಹೋಗುವಲ್ಲಿ ತೊಂದರೆ ಎದುರಾಗಿದೆ.

ಕಚೇರಿಗೆ ಕಡ್ಡಾಯವಾಗಿ ಹಾಜರಾಗಿ ಕೆಲಸ ಮಾಡಬೇಕು ಎನ್ನುವ Amazon ಕಂಪೆನಿಯ ನಿಯಮವನ್ನು ಭಾರತೀಯ ಹಾಗೂ ವಿದೇಶಿ ಕಾರ್ಮಿಕರಿಗಾಗಿ ಸಡಿಲಿಸಲಾಗಿದೆ. H-1B ವೀಸಾ ವಿಳಂಬದಿಂದಾಗಿ ರಜಾದಲ್ಲಿ ಭಾರತಕ್ಕೆ ಆಗಮಿಸಿ ಅಮೆರಿಕಕ್ಕೆ ಮರಳಲಾಗದ ಉದ್ಯೋಗಿಗಳಿಗೆ 2026 ಮಾರ್ಚ್ 2ರವರೆಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಲಾಗಿದೆ.

H-1B ವೀಸಾ ವಿಳಂಬದಿಂದಾಗಿ ಅಮೆರಿಕಕ್ಕೆ ಮರಳಲಾಗದ Amazon ನ ಭಾರತೀಯ ಉದ್ಯೋಗಿಗಳಿಗೆ ಇದೀಗ ಕಂಪೆನಿಯಿಂದ ನಿಯಮ ಸಡಿಲಿಕೆ ಸಿಕ್ಕಿದೆ. ವಾರದಲ್ಲಿ ಐದು ದಿನ ಕಚೇರಿಯಲ್ಲಿ ಕೆಲಸ ಮಾಡುವುದು ಕಡ್ಡಾಯ ಎನ್ನುವ ನೀತಿಯನ್ನು Amazon ತಾತ್ಕಾಲಿಕವಾಗಿ ಸಡಿಲಿಸಿದೆ. 2025 ಡಿಸೆಂಬರ್ 13ರಂದು ಭಾರತದಲ್ಲಿದ್ದ ಉದ್ಯೋಗಿಗಳಿಗೆ 2026 ಮಾರ್ಚ್ 2ರವರೆಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಒದಗಿಸಲಾಗಿದೆ.

ಈ ಕುರಿತಾಗಿ Amazon HR ಪೋರ್ಟಲ್ ಮೂಲಕ ಆಂತರಿಕ ಮೆಮೊ ಕಳುಹಿಸಲಾಗಿದೆ. H-1B ವೀಸಾ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಅಮೆರಿಕದ ತಂತ್ರಜ್ಞಾನ ಕಂಪೆನಿಗಳಲ್ಲಿ ಕೆಲಸ ಮಾಡುವ ಸಾವಿರಾರು ಭಾರತೀಯರು ಹಾಗೂ ವಿದೇಶಿಯರಿಗೆ ಪ್ರಯಾಣದ ಅನಿಶ್ಚಿತತೆ ಎದುರಾಗಿದೆ.

Amazonನ ಅನೇಕ ಉದ್ಯೋಗಿಗಳು ಖಾಸಗಿ ಕಾರಣಗಳಿಂದ ಡಿಸೆಂಬರ್‌ ನಲ್ಲಿ ಭಾರತಕ್ಕೆ ಪ್ರಯಾಣಿಸಿದ್ದರು. ಆದರೆ ಮರಳುವ ವೇಳೆಗೆ ವೀಸಾ ಅಪಾಯಿಂಟ್‌ಮೆಂಟ್ ಸ್ಲಾಟ್‌ಗಳು ಲಭ್ಯವಿಲ್ಲ ಅಥವಾ ವಿಳಂಬವಾಗಿದೆ ಎಂಬ ಮಾಹಿತಿಯಷ್ಟೇ ದೊರೆತಿದೆ. ಮರಳಲು ಸ್ಪಷ್ಟವಾದ ಸಮಯಾವಧಿ ಇಲ್ಲದ ಕಾರಣ ರಜೆಯನ್ನು ವಿಸ್ತರಿಸುವ ಬದಲಾಗಿ ಕಂಪೆನಿ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಿದೆ. ಸಾಮಾನ್ಯ ನಿಯಮಗಳ ಪ್ರಕಾರ Amazon ವಿದೇಶಿ ಉದ್ಯೋಗಿಗಳಿಗೆ 20 ಕಾರ್ಯದಿನಗಳನ್ನು ಮೀರಿಸಿ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವುದಿಲ್ಲ.

ಆದರೆ ಈ ಸಡಿಲಿಕೆಯಲ್ಲೂ ಹಲವು ಮಿತಿಗಳನ್ನು ವಿಧಿಸಲಾಗಿದೆ. ಉದ್ಯೋಗಿಗಳು ಮಾಡುವ ಕೆಲಸದ ಸ್ವರೂಪವನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸಲಾಗಿದೆ. ಕೋಡಿಂಗ್‌ಗೆ ನಿಷೇಧ ಹೇರಲಾಗಿದೆ. ಸಾಫ್ಟ್‌ವೇರ್ ಟೆಸ್ಟಿಂಗ್ ಅಥವಾ ಅಭಿವೃದ್ಧಿ ಸಂಬಂಧಿತ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವಿಲ್ಲ. ಕೋಡ್ ಡಿಪ್ಲಾಯ್ ಮಾಡುವುದು, ಗುಣಮಟ್ಟದ ಭರವಸೆ (ಕ್ವಾಲಿಟಿ ಅಶೂರನ್ಸ್) ಕಾರ್ಯಗಳು ಅಥವಾ ಇತರೆ ತಾಂತ್ರಿಕ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಲಾಗಿಲ್ಲ.

ಮತ್ತೊಂದು ಪ್ರಮುಖ ಮಿತಿಯೆಂದರೆ ಉದ್ಯೋಗಿಗಳು ಭಾರತದಲ್ಲಿರುವ Amazon ಕಚೇರಿಗಳಿಗೆ ಪ್ರವೇಶಿಸುವಂತಿಲ್ಲ. Amazon ಇಂಡಿಯಾ ಕಚೇರಿಗಳಲ್ಲಿ ಒಪ್ಪಂದಗಳಿಗೆ ಸಹಿ ಹಾಕುವುದು, ತಂಡದ ಮೇಲ್ವಿಚಾರಣೆ ಅಥವಾ ಕಾರ್ಯಯೋಜನಾ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೂ ನಿರ್ಬಂಧವಿದೆ. ಎಲ್ಲಾ ವಿಶ್ಲೇಷಣೆ, ಅಂತಿಮ ನಿರ್ಧಾರಗಳು ಹಾಗೂ ಸಹಿ ಸಂಬಂಧಿತ ಪ್ರಕ್ರಿಯೆಗಳು ಭಾರತದಿಂದ ಹೊರಗೆ ನಡೆಯಬೇಕಿದೆ. ಇದು ಅಮೆರಿಕ ಮತ್ತು ಭಾರತದ ಕಾನೂನು ಅಗತ್ಯಗಳ ಪಾಲನೆಗಾಗಿ ಎಂದು ತಿಳಿಸಲಾಗಿದೆ.

ಈ ನಿಯಮಗಳಿಗೆ ಯಾವುದೇ ವಿನಾಯಿತಿ ನೀಡಲಾಗಿಲ್ಲ. ಉದ್ಯೋಗಿಗಳು ತಮ್ಮ ದೈನಂದಿನ ಚಟುವಟಿಕೆಗಳು ಅನುಮತಿಸಲಾದ ಮಿತಿಗಳೊಳಗೇ ಇವೆ ಎಂಬುದನ್ನು ತಮ್ಮ ಮ್ಯಾನೇಜರ್‌ಗಳು ಹಾಗೂ ಎಚ್‌ಆರ್ ತಂಡಗಳೊಂದಿಗೆ ಖಚಿತಪಡಿಸಿಕೊಳ್ಳಬೇಕು. ಮಿತಿಗಳನ್ನು ಮೀರಿ ಕೆಲಸ ಮಾಡಿದರೆ ಕಾನೂನು ಅಥವಾ ನೀತಿ ಉಲ್ಲಂಘನೆಯಾಗುತ್ತದೆ ಎಂದು ಅಮೆಜಾನ್ ಎಚ್ಚರಿಕೆ ನೀಡಿದೆ.

H-1B ವೀಸಾ ವಿಳಂಬದಿಂದ Amazonಗೆ ಮಾತ್ರ ಸಮಸ್ಯೆಯಾಗಿಲ್ಲ. Google, ಆ್ಯಪಲ್ ಮತ್ತು ಮೈಕ್ರೋಸಾಫ್ಟ್ ಕಂಪೆನಿಗಳೂ ವೀಸಾ ಹೊಂದಿರುವ ಉದ್ಯೋಗಿಗಳಿಗೆ ಅಂತಾರಾಷ್ಟ್ರೀಯ ಪ್ರಯಾಣ ಮಾಡದಂತೆ ಎಚ್ಚರಿಕೆ ನೀಡಿವೆ. ವೀಸಾ ನೀಡಿಕೆಯಲ್ಲಿ ವಿಳಂಬದಿಂದಾಗಿ ವಿದೇಶದಲ್ಲಿ ತಿಂಗಳುಗಳ ಕಾಲ ಅಥವಾ ವರ್ಷಗಳವರೆಗೆ ಸಿಲುಕುವ ಪರಿಸ್ಥಿತಿ ಎದುರಾಗಬಹುದು ಎಂದು ಕಂಪೆನಿಗಳು ಸೂಚಿಸಿವೆ.

Amazonಗೆ ಭಾರತೀಯ ಹಾಗೂ ವಿದೇಶಿ ಉದ್ಯೋಗಿಗಳನ್ನು ಮನೆಯಿಂದ ಕೆಲಸ ಮಾಡಿಸುವ ಒತ್ತಡ ಹೆಚ್ಚಾಗಿದೆ. 2024ರ ಅಮೆರಿಕದ ಹಣಕಾಸು ವರ್ಷದಲ್ಲೇ ಕಂಪೆನಿ 14,783 H-1B ಅರ್ಜಿಗಳಿಗೆ ಪ್ರಾಯೋಜಕತ್ವ ವಹಿಸಿತ್ತು. ಇದರಿಂದ ಕಂಪೆನಿ ವಿದೇಶಿ ಕಾರ್ಮಿಕರ ಮೇಲೆ ಎಷ್ಟು ಅವಲಂಬಿತವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News