×
Ad

ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಿಸುವ ರಾಷ್ಟ್ರವಾಗಿ ಚೀನಾವನ್ನು ಹಿಂದಿಕ್ಕಿದ ಭಾರತ

Update: 2025-12-31 16:19 IST

ಸಾಂದರ್ಭಿಕ ಚಿತ್ರ | Photo Credit : freepik

ಈ ವರ್ಷ ಭಾರತದ ಅಕ್ಕಿ ಉತ್ಪಾದನೆಯು 152 ದಶಲಕ್ಷ ಮೆಟ್ರಿಕ್ ಟನ್‌ ಗಳಿಗೆ ಏರಿದೆ. ಚೀನಾದ ಉತ್ಪಾದನೆಯು 146 ದಶಲಕ್ಷ ಮೆಟ್ರಿಕ್ ಟನ್‌ ಗಳಾಗಿದ್ದವು.

ಭಾರತ ಅಕ್ಕಿ ಉತ್ಪಾದನೆಯಲ್ಲಿ ಚೀನಾದ ಪ್ರಾಬಲ್ಯವನ್ನು ಮುರಿದು ಪ್ರಪ್ರಥಮ ಸ್ಥಾನಕ್ಕೇರಿದೆ. ಜಾಗತಿಕವಾಗಿ ಅಕ್ಕಿ ಉತ್ಪಾದನೆಯಲ್ಲಿ ದೇಶದ ಪಾಲು ಶೇ 28ರಷ್ಟು ಏರಿಕೆಯಾಗಿದೆ. ಅಮೆರಿಕದ ಕೃಷಿ ಇಲಾಖೆ (ಯುಎಸ್ಡಿಎ) ಭಾರತದ ಈ ಸಾಧನೆಯನ್ನು ಪ್ರಶಂಸಿಸಿದೆ. ಡಿಸೆಂಬರ್ 2025ರ ವರದಿಯಲ್ಲಿ ಯುಎಸ್ಡಿಎ ಹೇಳಿರುವ ಪ್ರಕಾರ, ಭಾರತದ ಅಕ್ಕಿ ಉತ್ಪಾದನೆಯು 152 ದಶಲಕ್ಷ ಮೆಟ್ರಿಕ್ ಟನ್‌ ಗಳಿಗೆ ಏರಿದೆ. ಚೀನಾದ ಉತ್ಪಾದನೆಯು 146 ದಶಲಕ್ಷ ಮೆಟ್ರಿಕ್ ಟನ್‌ ಗಳಾಗಿದ್ದವು. ಹೀಗಾಗಿ ಇದೀಗ ಭಾರತ ವಿಶ್ವದ ಅಕ್ಕಿ ರಾಜನಾಗಿದೆ!

►ಅತಿ ಹೆಚ್ಚು ಅಕ್ಕಿ ಬೆಳೆಯುವ ರಾಷ್ಟ್ರ

ಜಾಗತಿಕವಾಗಿ ಅತಿ ಹೆಚ್ಚು ಅಕ್ಕಿ ಬೆಳೆಯುವ ರಾಷ್ಟ್ರವೆಂಬ ಚೀನಾದ ಹೆಗ್ಗಳಿಕೆಯನ್ನು ಭಾರತ ಇದೀಗ ಮುರಿದಿದೆ. ಚೀನಾ ಮತ್ತು ತೈವಾನ್ ನಡುವೆ ದ್ವೇಷ ಏನೇ ಇದ್ದರೂ, ತೈವಾನ್ ನಿಂದಲೂ ಭಾರತದ ಅಕ್ಕಿಯ ಪ್ರಾಬಲ್ಯಕ್ಕೆ ದೊಡ್ಡ ಕೊಡುಗೆಯಿದೆ.

ಭಾರತದಲ್ಲಿ ಪುರಾತನ ಕಾಲದಿಂದಲೂ ಅಕ್ಕಿ ಬೆಳೆಯಲಾಗುತ್ತಿದೆ. ಅಕ್ಕಿಯ ಮೂಲದ ಬಗ್ಗೆ ಪ್ರಶ್ನೆ ಬಂದಾಗಲೆಲ್ಲ ಭಾರತದ ಹೆಸರು ಬರುತ್ತದೆ. ಜಾಗತಿಕವಾಗಿ 1,23,00 ವಿಧದ ಅಕ್ಕಿಯಿದೆ. ಅವುಗಳಲ್ಲಿ 60,000 ವಿಧಗಳು ಭಾರತದಲ್ಲಿವೆ. ಭಾರತದ ಅಕ್ಕಿಯ ಸಮೃದ್ಧತೆ ಅದರ ವೈವಿಧ್ಯತೆಯಲ್ಲಿದೆ. ಆದರೆ ಉತ್ಪಾದನೆ ವಿಚಾರದಲ್ಲಿ ಭಾರತ ಚೀನಾಗಿಂತ ಹಿಂದೆಯೇ ಇತ್ತು. ಇದೀಗ ಮೊತ್ತ ಮೊದಲ ಬಾರಿಗೆ ಭಾರತ ಅಕ್ಕಿ ಉತ್ಪಾದನೆಯಲ್ಲಿ ಚೀನಾವನ್ನು ಹಿಂದಕ್ಕೆ ಹಾಕಿದೆ.

ಅಂತಾರಾಷ್ಟ್ರೀಯ ಅಕ್ಕಿ ಸಂಸ್ಥೆಯ ದಕ್ಷಿಣ ಏಷ್ಯಾದ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಡಾ ಸುಧಾಂಶು ಸಿಂಗ್ ಪ್ರಕಾರ, ಭಾರತ ವಿಶ್ವದ ಅಕ್ಕಿ ಉತ್ಪಾದನೆಯಲ್ಲಿ ರಾಜನಾಗಿ ಮೆರೆಯುತ್ತಿರುವುದು ಬಹುದೊಡ್ಡ ಸಾಧನೆಯಾಗಿದೆ. ಭಾರತದ ಅಕ್ಕಿಯನ್ನು 172 ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಭಾರತದ ವಿದೇಶಾಂಗ ನೀತಿಯಲ್ಲೂ ಅಕ್ಕಿ ಪ್ರಧಾನ ಪಾತ್ರವಹಿಸಿದೆ.

►ಅಕ್ಕಿಯಿಂದ ಅತ್ಯುತ್ತಮ ಆದಾಯ

2024-25ರಲ್ಲಿ ಭಾರತ 4,50,840 ಕೋಟಿ ರೂ. ಮೌಲ್ಯದ ಕೃಷಿ ಉತ್ಪನ್ನವನ್ನು ರಫ್ತು ಮಾಡಿದೆ. ಅದರಲ್ಲಿ ಅಕ್ಕಿಯ ಪಾಲು ಶೇ 24ರಷ್ಟಿದೆ. ಬಾಸ್ಮತಿ ಮತ್ತು ಬಾಸ್ಮತಿಯೇತರ ಅಕ್ಕಿಯನ್ನು ರಫ್ತು ಮಾಡುವ ಮೂಲಕ ಭಾರತ ಒಂದು ವರ್ಷದಲ್ಲಿ 105,720 ಕೋಟಿ ರೂ. ಆದಾಯಗಳಿಸಿದೆ. ಈ ಆದಾಯ ಭಾರತದ ಅರ್ಥವ್ಯವಸ್ಥೆಯಲ್ಲಿ ಅಕ್ಕಿಯ ಪ್ರಾಮುಖ್ಯತೆಯನ್ನು ತೋರಿಸುತ್ತದೆ.

►ಭಾರತೀಯ ಅಕ್ಕಿಗೆ ತೈವಾನ್ ಕೊಡುಗೆ

ಭಾರತದ ಸ್ವಾತಂತ್ರ್ಯ ಸಂದರ್ಭದಲ್ಲಿ ವಾರ್ಷಿಕವಾಗಿ ದೇಶದಲ್ಲಿ 20.28 ದಶಲಕ್ಷ ಮೆಟ್ರಿಕ್ ಟನ್‌ ಗಳಷ್ಟು ಅಕ್ಕಿ ಉತ್ಪಾದಿಸಲಾಗುತ್ತಿತ್ತು. 2025ರಷ್ಟಾಗುವಾಗ ಈ ಪ್ರಮಾಣ 152 ದಶಲಕ್ಷ ಮೆಟ್ರಿಕ್ ಟನ್‌ ಗಳಿಗೆ ಏರಿದೆ. ಈ ದಾಖಲೆಗೆ ರೈತರು ಮತ್ತು ವಿಜ್ಞಾನಿಗಳ ಕಠಿಣ ಶ್ರಮವಿದೆ. ಆದರೆ ತೈವಾನ್ ಕೂಡ ಭಾರತದ ಭತ್ತದ ಕೃಷಿಯಲ್ಲಿ ಪ್ರಮುಖ ಪಾತ್ರವಹಿಸಿದೆ. 1960ರಲ್ಲಿ ಭಾರತ ಆಹಾರ ಧಾನ್ಯಗಳ ಕೊರತೆ ಎದುರಿಸುತ್ತಿದ್ದ ಸಂದರ್ಭದಲ್ಲಿ ಸಾಂಪ್ರದಾಯಿಕ ಅಕ್ಕಿ ತಳಿಗಳಿಗೆ ಮಾತ್ರ ಸೀಮಿತವಾಗಿತ್ತು. ಹೆಕ್ಟೇರ್ ಗೆ 800 ಕೆಜಿಯಷ್ಟೇ ಇಳುವರಿ ಸಿಗುತ್ತಿತ್ತು. ಆ ಸಂದರ್ಭದಲ್ಲಿ ಯೂರಿಯವನ್ನು ರಾಸಾಯನಿಕ ಗೊಬ್ಬರವಾಗಿ ಪರಿಚಯಿಸಲಾಯಿತು. ಹೆಚ್ಚು ನೀರು ಮತ್ತು ಯೂರಿಯ ಬಳಕೆಯಿಂದ ಉತ್ತಮ ಇಳುವರಿ ಬಂದರೂ ಕುಬ್ಜ ಮತ್ತು ಬಲಿಷ್ಠವಾದ ಕಾಂಡದ ತಳಿಗಳ ಅಗತ್ಯವಿತ್ತು. ಭಾರತದಲ್ಲಿ ಅದು ಇರಲಿಲ್ಲ. ಉದ್ದನೆಯ ಕಾಂಡದಿಂದಾಗಿ ಬೆಳೆ ಉರುಳಿ ಬೀಳುತ್ತಿತ್ತು. ಆ ಸಂದರ್ಭದಲ್ಲಿ ತೈವಾನ್ ನೆರವಿಗೆ ಬಂದಿತ್ತು. ತನ್ನ ತಾಯಿಚುಂಗ್ ನೇಟಿವ್- 1 ವಿಧವನ್ನು ಭಾರತಕ್ಕೆ ಪರಿಚಯಿಸಿತು. ಇದು ಭಾರತದ ಕೃಷಿಯಲ್ಲಿ ದೊಡ್ಡ ಪರಿವರ್ತನೆಗೆ ಕಾರಣವಾಯಿತು. ಭಾರತದ ಹಸಿರು ಕ್ರಾಂತಿಯಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ.

►ಜಗತ್ತನ್ನು ಬದಲಿಸಿದ IR-8

ಕುಬ್ಜ ಅಕ್ಕಿ ತಳಿಯಲ್ಲಿ ಐಆರ್-8 ಅನ್ನು ಭಾರತದಲ್ಲಿ 1968ರಲ್ಲಿ ಮೊತ್ತ ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ ಈ ತಳಿಯನ್ನು ಪರಿಚಯಿಸಿದೆ. ಇದರಿಂದ ಉತ್ಪಾದನೆಯಲ್ಲಿ ತೀವ್ರ ಏರಿಕೆಯಾಯಿತು. ಅದರ ಕ್ರಾಂತಿಕಾರಿ ಇಳುವರಿಯಿಂದಾಗಿ ಅದನ್ನು “ಜಾದೂ ಅಕ್ಕಿ” ಎಂದೂ ಕರೆಯಲಾಗಿತ್ತು. 1969ರಲ್ಲಿ ಭಾರತೀಯ ವಿಜ್ಞಾನಿಗಳು ಈ ವಿಧಗಳ ಮಿಶ್ರ ತಳಿಯುನ್ನು ಆರಂಭಿಸಿದವು.

ತಾಯಿಚುಂಗ್ ನೇಟಿವ್- 1 ಜೊತೆಗೆ ಒಡಿಶಾದಲ್ಲಿ ಸ್ಥಳೀಯ ಅಕ್ಕಿ ಟಿ-141 ಅನ್ನು ಮಿಶ್ರ ತಳಿ ಮಾಡಿ ಅಭಿವೃದ್ಧಿಪಡಿಸಿದ ‘ಜಯಾ’ ಭಾರತದ ಪ್ರಥಮ ದೇಸೀ ಅಭಿವೃದ್ಧಿಪಡಿಸಿದ ಕುಬ್ಜ ಅಕ್ಕಿ ತಳಿಯಾಗಿದೆ. ಅದರ ಕಾಂಡದ ಉದ್ದ 150ರಿಂದ 90 ಸೆಂ.ಮೀ.ಗಳಷ್ಟಿದ್ದವು. ಈ ಅಭಿವೃದ್ಧಿಯಿಂದಾಗಿ ಭಾರತ ಭತ್ತದ ಕೃಷಿಯಲ್ಲಿ ಮಹತ್ವದ ಬದಲಾವಣೆ ತಂದಿತ್ತು.

►ಬಾಸ್ಮತಿ ಅಕ್ಕಿಯ ಯಶಸ್ಸು

ಭಾರತ ವಿಶ್ವದಲ್ಲೇ ಅತಿಹೆಚ್ಚು ಬಾಸ್ಮತಿ ಅಕ್ಕಿ ಬೆಳೆಯುವ ರಾಷ್ಟ್ರವಾಗಿದೆ. ಬಾಸ್ಮತಿ ಅಕ್ಕಿಯ ರಫ್ತು 50,000 ಕೋಟಿ ರೂ. ಮೀರಿದ ಆದಾಯ ತರುತ್ತಿದೆ. ಭಾರತೀಯ ಬಾಸ್ಮತಿ ವಿಧಗಳಿಗೇ ಮೀಸಲಾದ ಜಾಗತಿಕ ಮಾರುಕಟ್ಟೆಯಿದೆ. ಜಗತ್ತಿನ ಅತಿ ಉದ್ದದ ಅಕ್ಕಿಯನ್ನು ಬೆಳೆಯುತ್ತಿರುವ ದೇಶವೆನ್ನುವ ದಾಖಲೆಯೂ ಭಾರತದ ಹೆಸರಿನಲ್ಲಿದೆ. ಆ ದಾಖಲೆಯು ಪುಸಾ ಬಾಸ್ಮತಿ 1121 (PB 1121) ಅಕ್ಕಿಯ ಹೆಸರಲ್ಲಿದೆ. ಬೇಯಿಸದ ಅಕ್ಕಿ 9 ಮಿಮೀ ಉದ್ದ ಇದ್ದರೆ, ಬೇಯಿಸಿದ ನಂತರ ಇದು 15ರಿಂದ 22 ಮಿಮೀ ಬರುತ್ತದೆ. ಬಾಸ್ಮತಿ ಹೊರತಾಗಿ ಕನಿಷ್ಠ 15 ಇತರ ಭಾರತೀಯ ತಳಿಗಳು ಭೌಗೋಳಿಕ ಸೂಚ್ಯಂಕ ಟ್ಯಾಗ್ ಅನ್ನು ಪಡೆದಿವೆ.

►ಭಾರತದ ಮುಂದಿರುವ ಸವಾಲು

ಅಕ್ಕಿ ಬೆಳೆಯುವಲ್ಲಿ ಮತ್ತು ರಫ್ತಿನಲ್ಲಿ ನಂಬರ್ ಒನ್ ಆಗಿದ್ದರೂ, ಒಂದು ವಿಚಾರದಲ್ಲಿ ಭಾರತ ಇನ್ನೂ ಹಿಂದೆ ಇದೆ. ಭಾರತ ಚೀನಾಗಿಂತ ಹೆಚ್ಚು ಅಕ್ಕಿ ಬೆಳೆಯುತ್ತಿದ್ದರೂ, ಪ್ರತಿ ಹೆಕ್ಟೇರ್ಗೆ ಇಳುವರಿ ಕಡಿಮೆಯೇ ಇದೆ. ಕೇಂದ್ರ ಕೃಷಿ ಸಚಿವಾಲಯದ ಪ್ರಕಾರ 1950-51ರಲ್ಲಿ ಭಾರತ ಪ್ರತಿ ಹೆಕ್ಟೇರ್ಗೆ 668 ಕೆಜಿ ಅಕ್ಕಿ ಬೆಳೆಯುತ್ತಿತ್ತು. 1975-76ರಲ್ಲಿ ಆ ಪ್ರಮಾಣ 1,235 ಕೆಜಿಗೆ ಏರಿದೆ. 2000-01ರಲ್ಲಿ ಪ್ರತಿ ಹೆಕ್ಟೇರ್ಗೆ 1,901 ಕೆಜಿ ಬೆಳೆಯಲಾಗುತ್ತಿತ್ತು. 2021-22ರಲ್ಲಿ ಈ ಪ್ರಮಾಣ 2,809ಕ್ಕೇರಿದೆ. ಯುಎಸ್ಡಿಎ ಅಂದಾಜಿನ ಪ್ರಕಾರ 2025-26ರಲ್ಲಿ ಪ್ರತಿ ಹೆಕ್ಟೇರ್ಗೆ 4,390 ಕೆಜಿಗೆ ಏರುವ ಸಾಧ್ಯತೆಯಿದೆ. ಆದರೆ ಚೀನಾದಲ್ಲಿ ಪ್ರತಿ ಹೆಕ್ಟೇರ್ಗೆ 7,100 ಕೆಜಿ ಅಕ್ಕಿ ಬೆಳೆಯಲಾಗುತ್ತಿದೆ. ಅಕ್ಕಿ ಬೆಳೆಗೆ ಅತಿ ಹೆಚ್ಚು ನೀರಿನ ಅಗತ್ಯವಿರುವ ಕಾರಣದಿಂದ ಚೀನಾದ ಮೈಲಿಗಲ್ಲನ್ನು ತಲುಪುವುದು ಅತಿದೊಡ್ಡ ಸವಾಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News