Wildlife | ಕಾಡಿನಲ್ಲಿ ಹುಲಿಗಳ ಟೆರಿಟರಿ ಫೈಟ್!
ಕಾದಾಡಿ ಸಾಯುತ್ತಿರುವ Tigers; 2025ರಲ್ಲಿ 166 ಹುಲಿಗಳ ಸಾವು
ಸಾಂದರ್ಭಿಕ ಚಿತ್ರ | Photo Credit : PTI
ರಾಷ್ಟ್ರದಲ್ಲಿ ಬಹುತೇಕ ಹುಲಿಗಳು ತಮ್ಮ ಆವಾಸಸ್ಥಾನಕ್ಕಾಗಿ ಪರಸ್ಪರ ಕಾದಾಡಿ ಸಾವನ್ನಪ್ಪುತ್ತಿವೆ. ಹುಲಿಗಳ ಸಂಖ್ಯೆ ಈಗ ಒಂದು ಘಟ್ಟಕ್ಕೆ ತಲುಪಿದ್ದು, ತಮ್ಮ ಆವಾಸಸ್ಥಾನದ ಉಳಿವಿಗಾಗಿ ಪರಸ್ಪರ ಹೋರಾಡುವ ಸ್ಥಿತಿಯನ್ನು ಎದುರಿಸುತ್ತಿವೆ.
ಜಗತ್ತಿನಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ದೇಶ ಭಾರತ. ಆದರೆ ಈ ಬಾರಿ ಅತಿ ಹೆಚ್ಚು ಹುಲಿಗಳನ್ನು ಕಳೆದುಕೊಂಡ ದೇಶ ಎಂಬ ಕುಖ್ಯಾತಿಯನ್ನೂ ಭಾರತ ಪಡೆದಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ವರದಿಗಳ ಪ್ರಕಾರ, 2025ರಲ್ಲಿ ವಿವಿಧ ಕಾರಣಗಳಿಂದಾಗಿ ಭಾರತದಲ್ಲಿ 166 ಹುಲಿಗಳು ಸಾವನ್ನಪ್ಪಿವೆ. 2024ಕ್ಕೆ ಹೋಲಿಸಿದರೆ 2025ರಲ್ಲಿ 40 ಹೆಚ್ಚು ಹುಲಿಗಳ ಸಾವು ಸಂಭವಿಸಿದೆ. 2024ರಲ್ಲಿ ಭಾರತದಲ್ಲಿ 126 ಹುಲಿಗಳು ಮೃತಪಟ್ಟಿದ್ದವು.
ಮಧ್ಯಪ್ರದೇಶದಲ್ಲಿ ಅತ್ಯಧಿಕ ಹುಲಿ ಸಾವು
ದತ್ತಾಂಶಗಳ ಪ್ರಕಾರ, ‘ಹುಲಿ ರಾಜ್ಯ’ವೆಂದು ಮನ್ನಣೆ ಪಡೆದಿರುವ ಮಧ್ಯಪ್ರದೇಶದಲ್ಲಿ ಅತ್ಯಧಿಕ 55 ಹುಲಿಗಳು ಸಾವನ್ನಪ್ಪಿವೆ. ಮಹಾರಾಷ್ಟ್ರ, ಕೇರಳ ಮತ್ತು ಅಸ್ಸಾಂಗಳಲ್ಲಿ ಕ್ರಮವಾಗಿ 38, 13 ಮತ್ತು 12 ಹುಲಿಗಳ ಸಾವು ವರದಿಯಾಗಿದೆ. ಮೃತಪಟ್ಟ 166 ಹುಲಿಗಳಲ್ಲಿ 31 ಮರಿಗಳೂ ಸೇರಿವೆ.
2014ರ ನಂತರ ವರದಿಯಾದ ಹುಲಿ ಮರಣಗಳಲ್ಲಿ ಶೇ 60ರಷ್ಟು ಮಧ್ಯಪ್ರದೇಶದಲ್ಲೇ ದಾಖಲಾಗಿದೆ. 2025ರ ಮೊದಲ ಹುಲಿ ಸಾವು ಜನವರಿ 2ರಂದು ಮಹಾರಾಷ್ಟ್ರದ ಬ್ರಹ್ಮಪುರಿ ಅರಣ್ಯ ವಿಭಾಗದಲ್ಲಿ ದಾಖಲಾಗಿತ್ತು. ಅದಾದ ಮೂರು ದಿನಗಳ ಬಳಿಕ ಮಧ್ಯಪ್ರದೇಶದ ಪೆಂಚ್ ಹುಲಿ ಅಭಯಾರಣ್ಯದಲ್ಲಿ ಹೆಣ್ಣು ಹುಲಿ ಸಾವನ್ನಪ್ಪಿರುವುದು ವರದಿಯಾಗಿತ್ತು. ಇತ್ತೀಚೆಗೆ, ಡಿಸೆಂಬರ್ 28ರಂದು ಮಧ್ಯಪ್ರದೇಶದ ಉತ್ತರ ಸಾಗರ್ ಪ್ರದೇಶದಲ್ಲಿ ವಯಸ್ಕ ಹುಲಿ ಸತ್ತಿರುವುದು ವರದಿಯಾಗಿದೆ.
ಟೆರಿಟರಿಗಾಗಿ ಕಾದಾಡುವ ಹುಲಿಗಳು
ಅರಣ್ಯ ಪ್ರದೇಶದ ಕೊರತೆಯಿಂದಾಗಿ ತಮ್ಮ ಆವಾಸಸ್ಥಾನವನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಪರಸ್ಪರ ಹೋರಾಟದಲ್ಲಿ ಬಹುತೇಕ ಹುಲಿಗಳು ಪ್ರಾಣ ಕಳೆದುಕೊಳ್ಳುತ್ತಿವೆ ಎಂದು ತಜ್ಞರು ಹೇಳುತ್ತಾರೆ. ಆಹಾರ ಸರಪಣಿಯಲ್ಲಿ ಉತ್ತುಂಗ ಸ್ಥಾನದಲ್ಲಿರುವ ಹುಲಿಗಳು ತಮ್ಮ ಆವಾಸಸ್ಥಾನದ ಘರ್ಷಣೆಯಲ್ಲೇ ಜೀವ ತ್ಯಜಿಸುತ್ತಿವೆ.
ವನ್ಯಜೀವಿ ತಜ್ಞ ಜೈರಾಮ್ ಶುಕ್ಲ ಅವರ ಪ್ರಕಾರ, ರಾಷ್ಟ್ರದಲ್ಲಿ ಬಹುತೇಕ ಹುಲಿಗಳು ತಮ್ಮ ಆವಾಸಸ್ಥಾನಕ್ಕಾಗಿ ಪರಸ್ಪರ ಕಾದಾಡಿ ಸಾವನ್ನಪ್ಪುತ್ತಿವೆ. ಹುಲಿ ಸಂಖ್ಯೆ ಈಗ ಒಂದು ಹಂತಕ್ಕೆ ತಲುಪಿದ್ದು, ತಮ್ಮ ಆವಾಸಸ್ಥಾನದ ಉಳಿವಿಗಾಗಿ ಹೋರಾಟ ಅನಿವಾರ್ಯವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹುಲಿಗಳ ಆವಾಸಸ್ಥಾನದ ಕೊರತೆ
ಹುಲಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇದರಿಂದ ಅವುಗಳಿಗೆ ಸಾಕಷ್ಟು ಅಭಯಾರಣ್ಯ ಒದಗಿಸುವುದು ದೊಡ್ಡ ಸವಾಲಾಗಿದೆ. ಹುಲಿ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡಿರುವ ಮಧ್ಯಪ್ರದೇಶದಲ್ಲಿ, ಹುಲಿಗಳು ತಮ್ಮ ಆವಾಸಸ್ಥಾನವನ್ನು ಉಳಿಸಿಕೊಳ್ಳಲು ಕಷ್ಟಪಡುತ್ತಿರುವುದು ಸ್ಪಷ್ಟವಾಗಿದೆ.
ವಾರ್ಷಿಕವಾಗಿ ಹುಲಿಗಳ ಸಂಖ್ಯೆಯಲ್ಲಿ ಶೇ 6ರಷ್ಟು ಏರಿಕೆ ಕಂಡುಬರುತ್ತಿದೆ. 2018ರಲ್ಲಿ 2,967 ಹುಲಿಗಳಿದ್ದರೆ, 2022ರಲ್ಲಿ ಅವುಗಳ ಸಂಖ್ಯೆ 3,682ಕ್ಕೆ ಏರಿದೆ. ಜಾಗತಿಕ ಹುಲಿಗಳ ಒಟ್ಟು ಸಂಖ್ಯೆಯಲ್ಲಿ ಶೇ 75ರಷ್ಟು ಭಾರತದಲ್ಲೇ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವನ್ಯಜೀವಿ ಸಂರಕ್ಷಕರ ಪ್ರಕಾರ, ಮಧ್ಯಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಅಧಿಕವಾಗಿರುವುದರಿಂದ ಅಲ್ಲೇ ಹೆಚ್ಚು ಸಾವುಗಳು ದಾಖಲಾಗಿರುವ ಸಾಧ್ಯತೆ ಇದೆ.
ಪ್ರತಿ ಹುಲಿ ಸಾವಿನ ಹಿಂದೆಯೂ ತೀವ್ರ ತನಿಖೆ ನಡೆಯುತ್ತದೆ. ಸಹಜ ಸಾವು ಅಲ್ಲವೆಂದು ಕಂಡುಬಂದಲ್ಲಿ ಸಂಬಂಧಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಧ್ಯಪ್ರದೇಶದ ವನ್ಯಜೀವಿ ಸಂರಕ್ಷಕರು ಹೇಳಿದ್ದಾರೆ. ರಾಜ್ಯದಲ್ಲಿ ಪರಿಣಾಮಕಾರಿ ‘ಸ್ಟೇಟ್ ಟೈಗರ್ ಸ್ಟ್ರೈಕ್ ಫೋರ್ಸ್’ ಕಾರ್ಯನಿರ್ವಹಿಸುತ್ತಿದ್ದು, ಹುಲಿ ಬೇಟೆ ಹಾಗೂ ವನ್ಯಜೀವಿಗಳ ಸಾವುಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಮಧ್ಯಪ್ರದೇಶದಲ್ಲೇ ಹೆಚ್ಚು ಹುಲಿಗಳು
2014ರಲ್ಲಿ ಮಧ್ಯಪ್ರದೇಶದಲ್ಲಿ 308 ಹುಲಿಗಳಿದ್ದವು. 2018ರಲ್ಲಿ ಈ ಸಂಖ್ಯೆ 526ಕ್ಕೆ, 2022ರಲ್ಲಿ 785ಕ್ಕೆ ಏರಿಕೆಯಾಯಿತು. ಅಧಿಕೃತ ವಿವರಗಳ ಪ್ರಕಾರ, 2023ರಲ್ಲಿ 44, 2024ರಲ್ಲಿ 47 ಮತ್ತು 2025ರಲ್ಲಿ 55 ಹುಲಿಗಳು ಮಧ್ಯಪ್ರದೇಶದಲ್ಲಿ ಸಾವನ್ನಪ್ಪಿವೆ. ಇವುಗಳಲ್ಲಿ 38ಕ್ಕೂ ಹೆಚ್ಚು ಹುಲಿಗಳು ಸಹಜವಾಗಿ ಸಾವನ್ನಪ್ಪಿವೆ. ಹತ್ತು ಪ್ರಕರಣಗಳಲ್ಲಿ ಹುಲಿ ಬೇಟೆಯಾದಿರುವುದು ಪತ್ತೆಯಾಗಿದೆ. ಬಹುತೇಕ ಪ್ರಕರಣಗಳಲ್ಲಿ ಕಾಡುಹಂದಿಯನ್ನು ಕೊಲ್ಲುವ ಭರದಲ್ಲಿ ಹುಲಿಗಳನ್ನು ಬೇಟೆಯಾಡಲಾಗಿದೆ. ಆದರೆ ಈ ಎಲ್ಲ ಪ್ರಕರಣಗಳಲ್ಲಿ ಸಂಬಂಧಿತರ ವಿರುದ್ಧ ಕಠಿಣ ಶಿಕ್ಷೆ ವಿಧಿಸಲಾಗಿದೆ.
ಸಣ್ಣ ಪ್ರಾಯದಲ್ಲಿ ರಕ್ಷಣೆಯಿಲ್ಲದೆ ಸಾವು
ಸಣ್ಣ ಪ್ರಾಯದಲ್ಲೇ ಹುಲಿಗಳ ಸಾವು ಹೆಚ್ಚಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಹುಟ್ಟಿದ ನಂತರ ಸುಮಾರು 20 ತಿಂಗಳು ಮಾತ್ರ ತಾಯಿಯೊಂದಿಗೆ ಇರುವ ಹುಲಿಗಳು, ನಂತರ ತಮ್ಮ ಆಹಾರವನ್ನು ಹುಡುಕುತ್ತಾ ಹೊರಡುತ್ತವೆ. ಮುಖ್ಯವಾಗಿ ಗಂಡು ಹುಲಿಗಳು ಏಕಾಂಗಿಯಾಗಿ ಆಹಾರ ಹುಡುಕುವ ಕಾರಣ ಇತರ ಹುಲಿಗಳ ದಾಳಿಗೆ ಒಳಗಾಗಿ ಸಾವನ್ನಪ್ಪುತ್ತಿವೆ. ಕಳೆದ ವರ್ಷ ಸಹಜ ಸಾವು ಕಂಡ 38 ಹುಲಿಗಳಲ್ಲಿ 19 ಹುಲಿಗಳು ಒಂದರಿಂದ ಎರಡು ವರ್ಷ ಪ್ರಾಯದಲ್ಲೇ ಸಾವನ್ನಪ್ಪಿವೆ.