×
Ad

ಕ್ರಿಸ್ಟಿಯಾನೊ ರೊನಾಲ್ಡೊ ಅವರ ವಿಶ್ವಕಪ್ ವೃತ್ತಿಜೀವನದ ಬಗ್ಗೆ ಇಲ್ಲಿದೆ ಮಾಹಿತಿ...

►ವಿಶ್ವಕಪ್ ಅಭಿಯಾನ ಕಣ್ಣೀರಿನ ವಿದಾಯವಾಗಿದ್ದು ಹೇಗೆ?

Update: 2026-07-07 19:30 IST

ಕ್ರಿಸ್ಟಿಯಾನೋ ರೊನಾಲ್ಡೊ  | Photo Credit : PTI

ರೊನಾಲ್ಡೊ ವಿಶ್ವಕಪ್ನಲ್ಲಿ ದಾಖಲೆಯ 27 ಪಂದ್ಯಗಳನ್ನು ಆಡಿದ್ದು 11 ಗೋಲುಗಳನ್ನು ಹೊಡೆದಿದ್ದಾರೆ. ಕಳೆದ ವಾರ ಅವರ ಏಕೈಕ ನಾಕೌಟ್ ಹಂತದ ಗೋಲಿನ ಪರಿಣಾಮವಾಗಿ ಪೋರ್ಚುಗಲ್ ಕ್ರೊವೇಷಿಯವನ್ನು ಸೋಲಿಸಿದೆ.

ಸೋಮವಾರ ಜುಲೈ 6ರಂದು ಡಲ್ಲಾಸ್ನಲ್ಲಿ ನಡೆದ 16ನೇ ಘಟ್ಟದ ಪಂದ್ಯದಲ್ಲಿ ಸ್ಪೇನ್ ವಿರುದ್ಧ 0-1 ಅಂತರದಿಂದ ಸೋತ ನಂತರ ಪೋರ್ಚುಗಲ್ನ ಫಿಫಾ ವಿಶ್ವಕಪ್ 2026ರ ಅಭಿಯಾನವೂ ಸಂಪೂರ್ಣ ಕೊನೆಗೊಂಡಿದೆ. ಈ ಸೋಲು ಕ್ರಿಸ್ಟಿಯಾನೊ ರೊನಾಲ್ಡೊ ಅವರ ವಿಶ್ವಕಪ್ ಕನಸುಗಳಿಗೂ ತೆರೆ ಎಳೆದಿದೆ.

41 ವರ್ಷ ವಯಸ್ಸಿನ ರೊನಾಲ್ಡೊ ಪಂದ್ಯಗಳನ್ನು ನಿರ್ಧರಿಸುವಲ್ಲಿ, ತಂಡಗಳನ್ನು ಕಠಿಣ ಕ್ಷಣಗಳಿಂದ ಪಾರು ಮಾಡುವಲ್ಲಿ ಮತ್ತು ಸಮಯವನ್ನೂ ದಿಕ್ಕರಿಸಿ ತಮ್ಮ ಅಗ್ರಸ್ಥಾನದ ದಿನಗಳಲ್ಲಿ ರಿಯಲ್ ಮ್ಯಾಡ್ರಿಡ್, ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಜುವೆಂಟಸ್ಗಳಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಮೈದಾನದಲ್ಲಿ ಆಡಿದ್ದಾರೆ.

ಹಾಗಿದ್ದರೂ ಒಂದು ಪ್ರಶಸ್ತಿ ಅವರ ಕೈಜಾರಿ ಹೋಗಿದೆ. ತಮ್ಮ ಆರನೇ ವಿಶ್ವಕಪ್ನಿಂದ ಹೊರ ಹೋದ ಮೇಲೆ ಕಣ್ಣೀರಿನಿಂದ ಕೈಗೆಟುಕದ ಪ್ರಶಸ್ತಿಗಾಗಿ ಅವರ ಮನ ಮಿಡಿದಿದೆ. 91ನೇ ನಿಮಿಷದಲ್ಲಿ ಮೈಕೆಲ್ ಮೆರಿನೊ ಹೊಡೆದ ಗೋಲು ಸ್ಪೇನ್ಗೆ ಆರ್ಲಿಂಗ್ಟನ್ನಲ್ಲಿ 1-0 ಗೆಲುವು ತಂದುಕೊಟ್ಟಿದೆ. ಬಹಳ ಸಮಾಧಾನದಿಂದ ಎದುರಿಸಿದ ಪತ್ರಿಕಾ ಗೋಷ್ಠಿಯಲ್ಲಿ ಈ ಆರನೇ ವಿಶ್ವಕಪ್ ತಮ್ಮ ಕೊನೆಯ ಪ್ರಯತ್ನ ಎಂದು ಅವರು ಘೋಷಿಸಿದ ಒಂದು ದಿನದ ನಂತರ ಪೋರ್ಚುಗಲ್ನ ಭರವಸೆಗಳು ನೋವಿನಿಂದ ಕೊನೆಗೊಂಡಿದೆ.

ರೊನಾಲ್ಡೊ ವಿಶ್ವಕಪ್ನಲ್ಲಿ ದಾಖಲೆಯ 27 ಪಂದ್ಯಗಳನ್ನು ಆಡಿದ್ದು 11 ಗೋಲುಗಳನ್ನು ಹೊಡೆದಿದ್ದಾರೆ. ಕಳೆದ ವಾರ ಅವರ ಏಕೈಕ ನಾಕೌಟ್ ಹಂತದ ಗೋಲಿನ ಪರಿಣಾಮವಾಗಿ ಪೋರ್ಚುಗಲ್ ಕ್ರೊವೇಷಿಯವನ್ನು ಸೋಲಿಸಿದೆ. ಹೀಗಾಗಿ 2006ರಲ್ಲಿ ಅವರು ತಮ್ಮ ಚೊಚ್ಚಲ ಪಂದ್ಯದಿಂದಲೂ ಕಂಡಿದ್ದ ಕನಸಿಗೆ ಇನ್ನಷ್ಟು ದಿನಗಳು ಸೇರಿಕೊಂಡಿದ್ದವು.

ಮೊದಲ ವಿಶ್ವಕಪ್ನಲ್ಲೇ ಅವರು ಪ್ರಶಸ್ತಿಯ ಸಮೀಪಕ್ಕೆ ತಂಡವನ್ನು ಕೊಂಡೊಯ್ದಿದ್ದರು. 21ನೇ ವಯಸ್ಸಿನಲ್ಲಿ ರೊನಾಲ್ಡೊ ಪೋರ್ಚುಗಲ್ ತಂಡದ ಪರವಾಗಿ ಆಡಿ ಸೆಮಿಫೈನಲ್ನಲ್ಲಿ ಪ್ರಾನ್ಸ್ ಎದುರು ಸೋತಿದ್ದರು. ಕ್ವಾರ್ಟರ್ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧದ ಶೂಟೌಟ್ ಗೆಲುವಿನಲ್ಲಿ ಅವರು ನಿರ್ಣಾಯಕ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದ್ದರು. ಆ ಕ್ಷಣ ಇನ್ನೂ ಪೋರ್ಚುಗೀಸರ ನೆನಪುಗಳಲ್ಲಿ ಜೀವಂತವಾಗಿದೆ. ಅಲ್ಲದೆ, ಇನ್ನಷ್ಟು ದೊಡ್ಡ ಪ್ರಶಸ್ತಿಯ ಕನಸುಗಳಿಗೆ ಕಾರಣವಾಯಿತು. ಆದರೆ ಅವರು ಅದನ್ನು ಸಾಧಿಸಲು ವಿಫಲರಾದರು.

ತಮ್ಮ ಅಂತಾರಾಷ್ಟ್ರೀಯ ಜೀವನದ ಬಹುಪಾಲು ರೊನಾಲ್ಡೊ ಪೋರ್ಚುಗಲ್ನ ಮಹಾತ್ವಾಕಾಂಕ್ಷೆಗಳ ಭಾರವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಂತೆ ಕಂಡುಬಂದರು. ಆದರೆ ಹೊಸ ಪೀಳಿಗೆಯ ಪ್ರತಿಭೆ ಹೊರಹೊಮ್ಮುತ್ತಿದ್ದಂತೆ ಎಲ್ಲವೂ ಬದಲಾಯಿತು. ಈ ಪಂದ್ಯಾವಳಿಯ ಹೊತ್ತಿಗೆ ಅವರು ಆರಂಭಿಕ ಆಟಗಾರನಾಗಿ ಉಳಿಯಬೇಕೇ ಎನ್ನುವ ಪ್ರಶ್ನೆಯೂ ಇತ್ತು.

ಸ್ಪೇನ್ ವಿರುದ್ಧ ರೊನಾಲ್ಡೊ 90 ನಿಮಿಷಗಳ ಕಾಲ ಆಡಿ ಮೂರು ಬಾರಿ ಗೋಲಿಗೆ ಪ್ರಯತ್ನಿಸಿರು. ಆದರೆ, ಪೋರ್ಚುಗಲ್ ಬಯಸಿದ್ದ ಆರಂಭವನ್ನು ನೀಡಲು ವಿಫಲರಾದರು. ಕ್ರೀಡೆಯು ಮುಂದಿಟ್ಟ ಎಲ್ಲಾ ಸವಾಲುಗಳನ್ನು ಎದುರಿಸಿ ಜಯ ಸಾಧಿಸಿದ ನಾಯಕನಿಗೆ ವಿಶ್ವಕಪ್ ದೊರೆಯದೆ ವಿದಾಯ ಹೇಳಿರುವುದು ಎಂತಹ ಅಪೂರ್ಣತೆಯ ಭಾವನೆಯನ್ನು ಮೂಡಿಸುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು. ಈ ಒಂದು ಕೊರತೆ ಅವರ ಯಶೋಗಾಥೆಯ ವೃತ್ತಿಜೀವನಕ್ಕೆ ಕರಿನೆರಳನ್ನು ವ್ಯಾಪಿಸಿದೆ.

ಸ್ಪೇನ್ ವಿರುದ್ಧದ ನಿರಾಶಾದಾಯಕ ಪಂದ್ಯದಲ್ಲಿ ಅವರ ಪ್ರದರ್ಶನವು ಇತ್ತೀಚೆಗಿನ ವರ್ಷಗಳಲ್ಲಿ ಅನುಭವಿ ಆಟಗಾರನ ಫಾರ್ಮ್ ಹೇಗಿದೆ ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸುತ್ತದೆ. ಒಂದು ಕಾಲದಲ್ಲಿ ಆಟಗಾರರಲ್ಲಿ ಭಯ ಹುಟ್ಟಿಸಿದ ಆಟಗಾರನ ನೆರಳು ಮಾತ್ರ ಕಂಡುಬಂದಿದೆ. ಅವರು ಗೋಲು ಗಳಿಸಲು ಮೂರು ಪ್ರಯತ್ನ ಮಾಡಿದರು. ನಿಷ್ಪರಿಣಾಮಕಾರಿ ಪೋರ್ಚುಗಲ್ ದಾಳಿಯ ಕೇಂದ್ರದಲ್ಲಿ ಆಡುವ ಬಾಹ್ಯ ವ್ಯಕ್ತಿಯಾಗಿ ಕಂಡುಬಂದರು.

ಉತ್ತರ ಅಮೆರಿಕದಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ರೊನಾಲ್ಡೊ ಮೂರು ಬಾರಿ ಗೋಲು ಗಳಿಸಿದ್ದಾರೆ. ಉಜ್ಬೆಕಿಸ್ತಾನ ವಿರುದ್ಧ ಎರಡು ಗೋಲುಗಳನ್ನು ಗಳಿಸಿದರೆ, 32ನೇ ಘಟ್ಟದಲ್ಲಿ ಕ್ರೊವೋಷಿಯ ವಿರುದ್ಧ ಒಂದು ಗೋಲನ್ನು ಗಳಿಸಿದರು. ಉಳಿದಂತೆ ಆಡಿದ ಎರಡು ಪಂದ್ಯಗಳಲ್ಲಿ ಅವರು ಗೋಲಿಲ್ಲದೆ ಕಳೆದರು ಮತ್ತು ಪಂದ್ಯಗಳೂ ಡ್ರಾದಲ್ಲಿ ಮುಕ್ತಾಯ ಕಂಡಿವೆ.

ಪಂದ್ಯಾವಳಿಯಲ್ಲಿ ಒಂದು ಬಾರಿಯೂ ಅವರು ಅಸಿಸ್ಟ್ (ಗೋಲು ಗಳಿಸಲು ಇತರರಿಗೆ ನೆರವಾಗುವುದು) ಅನ್ನು ದಾಖಲಿಸಲಿಲ್ಲ. ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಒಂದು ಹಂತದಲ್ಲಿ ತಂಡದ ಸಹ ಆಟಗಾರನ ಪಾಸ್ ದಾರಿ ತಪ್ಪಿದಾಗ ಗಾಳಿಯಲ್ಲಿ ತನ್ನ ಕೈಗಳನ್ನು ಮೇಲಕ್ಕೆತ್ತಿದ್ದರು. ಡಲ್ಲಾಸ್ನಲ್ಲಿ ಅವರು ತಮ್ಮ ಆರನೇ ವಿಶ್ವಕಪ್ ಅಭಿಯಾನವನ್ನು ಕಣ್ಣೀರು ಸುರಿಸುವ ಮೂಲಕ ಮುಕ್ತಾಯಗೊಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News