ಮೈಲೇಜ್ ಬಗ್ಗೆ ಕಾಳಜಿ ವಹಿಸುವ ಭಾರತೀಯ ವಾಹನ ಸವಾರರು ಎಥನಾಲ್ ಕಡ್ಡಾಯವನ್ನು ವಿರೋಧಿಸುತ್ತಿರುವುದೇಕೆ?
ಮಾರುತಿ ಸುಜುಕಿಯ "ಕಿತ್ನಾ ದೇತಿ ಹೈ" (ಎಷ್ಟು ಮೈಲೇಜ್ ಕೊಡುತ್ತೆ) ಮತ್ತು "ಪೆಟ್ರೋಲ್ ಖತಮ್ ಹೀ ನಹೀ ಹೋತಾ" (ಪೆಟ್ರೋಲ್ ಖಾಲಿಯಾಗುವುದೇ ಇಲ್ಲ) ಎಂಬ ಜಾಹೀರಾತಿನ ಸಾಲುಗಳು ಅತ್ಯಂತ ಜನಪ್ರಿಯವಾಗಿದ್ದವು. ಇವು ಮೈಲೇಜ್ ಕುರಿತು ಭಾರತೀಯ ವಾಹನ ಸವಾರರಿಗಿರುವ ಅಪಾರ ಕಾಳಜಿಯನ್ನು ಅಚ್ಚುಕಟ್ಟಾಗಿ ಬಿಂಬಿಸಿದ್ದವು. ದೇಶದ ಅತಿ ದೊಡ್ಡ ಕಾರು ತಯಾರಕ ಕಂಪೆನಿಯಾದ ಮಾರುತಿ ಸುಜುಕಿ ಇದೇನೂ ಹೊಸ ಹಾದಿ ಹಿಡಿದಿರಲಿಲ್ಲ. ದಶಕಗಳ ಹಿಂದೆ ಹೀರೊ ಹೊಂಡಾ ಕಂಪನಿಯು ತನ್ನ ಫೋರ್-ಸ್ಟ್ರೋಕ್ ಇಂಜಿನ್ ಗಳ ದಕ್ಷತೆಯನ್ನು ಎತ್ತಿಹಿಡಿಯಲು ಮತ್ತು ಪೆಟ್ರೋಲ್ ಬಂಕ್ ನಲ್ಲಿ ಹಣ ಉಳಿಸುವುದೇ ವಾಹನದ ಅಸಲಿ ಮೌಲ್ಯ ಎಂಬ ಕಲ್ಪನೆಯನ್ನು ಗಟ್ಟಿಗೊಳಿಸಲು, "Fill it, Shut it, Forget it" (ಪೆಟ್ರೋಲ್ ತುಂಬಿಸಿ, ಮುಚ್ಚಿ, ಮರೆತುಬಿಡಿ) ಎಂಬ ಅಭಿಯಾನದ ಮೂಲಕ ಇದೇ ರೀತಿಯ ಯಶಸ್ಸನ್ನು ಸಾಧಿಸಿತ್ತು.
ಭಾರತೀಯ ಕಾರು ಮಾರುಕಟ್ಟೆಯು ಪ್ರೀಮಿಯಂ ಕಾರುಗಳತ್ತ ಮುಖ ಮಾಡಿದ್ದರೂ ಮತ್ತು ಗ್ರಾಹಕರು ಕೇವಲ ಪ್ರಯಾಣಕ್ಕಾಗಿ ಮಾತ್ರವಲ್ಲದೆ ತಮ್ಮ ಪ್ರತಿಷ್ಠೆಯ ಸಂಕೇತವಾಗಿ ವಾಹನಗಳನ್ನು ಖರೀದಿಸುತ್ತಿದ್ದರೂ ಸಹ, ಮೈಲೇಜ್ ಕುರಿತಾದ ಆ ಹಳೆಯ ಮನಸ್ಥಿತಿ ಮಾತ್ರ ಇಂದಿಗೂ ಬದಲಾಗದೆ ಹಾಗೆಯೇ ಉಳಿದಿದೆ. ಆದರೂ, ಮೈಲೇಜ್ ಲೆಕ್ಕಾಚಾರವು ಇಂದಿಗೂ ವಾಹನ ಮಾರಾಟದ ಪ್ರಮುಖ ತಂತ್ರವಾಗಿದೆ. ವಾಹನ ಬಳಕೆಯು ವಿಸ್ತರಿಸುತ್ತಿರುವ, ಆದರೆ ಜನರ ಕೈಯಲ್ಲಿನ ಆದಾಯದ ಬೆಳವಣಿಗೆಯು ಅಸ್ಥಿರವಾಗಿರುವ ಈ ದೇಶದಲ್ಲಿ, ಕಡಿಮೆ ಇಂಧನ ಬಳಕೆಯ ಭರವಸೆಯು ಇಂದಿಗೂ ಆಕರ್ಷಕವಾಗಿ ಮುಂದುವರಿದಿದೆ.
ಬಂತು ನೋಡಿ ಎಥನಾಲ್ ಮಿಶ್ರಣ
ಇದೇ ವಿಚಾರದಲ್ಲಿ ಸರ್ಕಾರದ ಹೊಸ ಎಥನಾಲ್ ಮಿಶ್ರಣ ಕಾರ್ಯಕ್ರಮವು ವಾಹನ ಸವಾರರ ಆಸೆಗೆ ತಣ್ಣೀರೆರಚುತ್ತಿದೆ. ಕಳೆದ ವರ್ಷ, ಭಾರತವು ಪೆಟ್ರೋಲ್ ನಲ್ಲಿ 20% ಎಥನಾಲ್ ಮಿಶ್ರಣ ಮಾಡುವ ಗುರಿಯನ್ನು ಸಂಪೂರ್ಣವಾಗಿ ತಲುಪಿತು. ಇದು 2030ರ ಮೂಲ ಗುರಿಗಿಂತ ಐದು ವರ್ಷ ಮುಂಚಿತವಾಗಿಯೇ ಸಾಧಿಸಲ್ಪಟ್ಟಿದೆ. ಈಗ 80% ಪೆಟ್ರೋಲ್ ಮತ್ತು 20% ಎಥನಾಲ್ ಹೊಂದಿರುವ 'E20' ಇಂಧನವೇ ದೇಶಾದ್ಯಂತ ಲಭ್ಯವಿರುವ ಪ್ರಮಾಣಿತ ಪೆಟ್ರೋಲ್ ರೂಪಾಂತರವಾಗಿದೆ.
ಹಾಗಾಗಿ, ಕೇವಲ ಮೂರು ವರ್ಷಗಳಲ್ಲಿ, ಪೆಟ್ರೋಲ್‌ನಲ್ಲಿನ ಸರಾಸರಿ ಎಥನಾಲ್ ಮಿಶ್ರಣದ ಪ್ರಮಾಣವು ಹಿಂದಿನ 10% ರಿಂದ 20% ಕ್ಕೆ ದ್ವಿಗುಣಗೊಂಡಿದೆ (ಇದನ್ನು ಮೂಲತಃ ಎಂಟು ವರ್ಷಗಳ ಅವಧಿಯಲ್ಲಿ ಮಾಡಲು ಯೋಜಿಸಲಾಗಿತ್ತು). ಹಳೆಯ ವಾಹನಗಳಿಗೆ ಮತ್ತು E10 ಪೆಟ್ರೋಲ್ (90 ಭಾಗ ಪೆಟ್ರೋಲ್ ಮತ್ತು 10 ಭಾಗ ಎಥನಾಲ್) ಬಳಕೆಗೆ ಪ್ರಮಾಣೀಕರಿಸಲ್ಪಟ್ಟ ವಾಹನಗಳಿಗೆ, ಈ ಬದಲಾವಣೆಯು ಗ್ರಾಹಕರಿಗಾಗುವ ತೊಂದರೆಗಳ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ನೀಡದೆಯೇ ಅತ್ಯಂತ ವೇಗವಾಗಿ ಬಂದುಬಿಟ್ಟಿತು. ಈ ಅನುಭವವು ವಾಹನ ಸವಾರರಲ್ಲಿ, ವಿಶೇಷವಾಗಿ ಹಳೆಯ ಕಾರುಗಳು ಮತ್ತು ದ್ವಿಚಕ್ರ ವಾಹನಗಳನ್ನು ಹೊಂದಿರುವವರಲ್ಲಿ, ತಮಗೆ ಅನ್ಯಾಯವಾಗಿದೆ ಎಂಬ ಭಾವನೆಯನ್ನು ಮೂಡಿಸಿದೆ.
ಹೆಚ್ಚಿನ ಪ್ರಮಾಣದ ಎಥನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ಸದ್ಯ ಮೂರು ಪ್ರಮುಖ ಸಮಸ್ಯೆಗಳು ಎದುರಾಗುತ್ತವೆ:
ಮೊದಲನೆಯದಾಗಿ, ವಾಹನ ತಯಾರಾದ ವರ್ಷದ ಆಧಾರದ ಮೇಲೆ ಅದರ ಮೈಲೇಜ್ ಗಣನೀಯವಾಗಿ ಕುಸಿಯುತ್ತದೆ.
ಎರಡನೆಯದಾಗಿ, ಹಳೆಯ ವಾಹನಗಳಿಗೆ 'E20' ಇಂಧನ ತುಂಬಿಸುವುದರಿಂದ ಇಂಜಿನ್ ಭಾಗಗಳು ತುಕ್ಕು ಹಿಡಿಯುವ ಅಪಾಯವಿರುತ್ತದೆ. ಎಥನಾಲ್ ಗಾಳಿಯಲ್ಲಿನ ತೇವಾಂಶವನ್ನು ತನ್ನತ್ತ ಸೆಳೆದುಕೊಳ್ಳುವ ಗುಣ ಹೊಂದಿರುವುದರಿಂದ, ಇಂಧನ ಟ್ಯಾಂಕ್‌ನಲ್ಲಿ ನೀರು ಸೇರಿಕೊಂಡು ಈ ಸಮಸ್ಯೆ ಎದುರಾಗುತ್ತದೆ.
ಮೂರನೆಯದಾಗಿ, ಬ್ರೆಝಿಲ್ ದೇಶದಂತೆ ಭಾರತೀಯ ವಾಹನ ಸವಾರರಿಗೆ ಪೆಟ್ರೋಲ್ ಬಂಕ್ ಗಳಲ್ಲಿ ಇಂಧನ ಆಯ್ಕೆ ಮಾಡುವ ಮುಕ್ತ ಅವಕಾಶವಿಲ್ಲ. ಬ್ರೆಝಿಲ್ ನಲ್ಲಿ ವಿವಿಧ ಪ್ರಮಾಣದ ಎಥನಾಲ್ ಇಂಧನಗಳಿಗೆ ಬೇರೆ ಬೇರೆ ಬೆಲೆ ನಿಗದಿಪಡಿಸಲಾಗಿದೆ ಮತ್ತು ಅಲ್ಲಿನ ಕಾನೂನಿನ ಪ್ರಕಾರ ಹೆಚ್ಚು ಎಥನಾಲ್ ಇರುವ ಇಂಧನಕ್ಕೆ ರಿಯಾಯಿತಿ ದರ ನೀಡಬೇಕಾಗುತ್ತದೆ.
ಆದರೆ ಭಾರತದಲ್ಲಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಇಂಧನ ಸಿಗುತ್ತಿಲ್ಲ. ಬದಲಿಗೆ, ಮೈಲೇಜ್ ನಷ್ಟ ಮತ್ತು ಇಂಜಿನ್ ಹಾಳಾಗುವ ಆತಂಕವನ್ನು ವಾಹನ ಸವಾರರ ಮೇಲೆ ಬಲವಂತವಾಗಿ ಹೇರಲಾಗಿದೆ. ಇದರೊಂದಿಗೆ, ಎಥನಾಲ್ ಪೆಟ್ರೋಲ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ಉರಿಯುವುದರಿಂದ, ಚಳಿಗಾಲದ ಮುಂಜಾನೆ ಇಂತಹ ವಾಹನಗಳನ್ನು ಸ್ಟಾರ್ಟ್ ಮಾಡುವುದು ಕೂಡ ಕಷ್ಟವಾಗುತ್ತದೆ.
ಪೆಟ್ರೋಲ್‌ನಲ್ಲಿ 10% ಎಥನಾಲ್ (E10) ಇದ್ದಾಗ ವಾಹನದ ಕಾರ್ಯಕ್ಷಮತೆಯಲ್ಲಿ ಯಾವುದೇ ದೊಡ್ಡ ಬದಲಾವಣೆ ಇರಲಿಲ್ಲ. ಆದರೆ ಅದಕ್ಕಿಂತ ಹೆಚ್ಚಿನ ಮಿಶ್ರಣವು ವಾಹನದ ಓಟದ ಮೇಲೆ ಪರಿಣಾಮ ಬೀರುತ್ತಿದೆ. ಎಥನಾಲ್ ಪ್ರಮಾಣ ಹೆಚ್ಚಾದಂತೆಲ್ಲಾ ವಾಹನದ ಮೈಲೇಜ್ ಇಳಿಕೆಯಾಗುತ್ತಾ ಹೋಗುತ್ತದೆ. ಈಗ ಸರ್ಕಾರವು E20 ಗಿಂತಲೂ ಹೆಚ್ಚಿನ ಮಿಶ್ರಣ ಮಾಡಲು ಯೋಜಿಸುತ್ತಿರುವುದು ಗ್ರಾಹಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ರಾಸಾಯನಿಕ ಪ್ರಕ್ರಿಯೆಯ ಸವಾಲು
ಹಾಗಾದರೆ, ಅಸಲಿ ಸಮಸ್ಯೆ ಎಲ್ಲಿದೆ? ರಾಸಾಯನಿಕವಾಗಿ ನೋಡಿದರೆ ಎಥನಾಲ್ ಮಿಶ್ರಣದ ಪ್ರಸ್ತಾಪ ಅಷ್ಟೇನೂ ಕೆಟ್ಟದಾಗಿ ಕಾಣಿಸುವುದಿಲ್ಲ. ಎಥನಾಲ್ ಎರಡು ಕಾರ್ಬನ್ ಸರಪಳಿಯನ್ನು ಹೊಂದಿರುವ ಘಟಕವಾಗಿದೆ (C₂H₅OH), ಆದರೆ ಪೆಟ್ರೋಲ್ ಬಂಕ್ ಗಳಲ್ಲಿ ಬಳಸಲಾಗುವ ಪೆಟ್ರೋಲ್ ನಲ್ಲಿ ಕಾರ್ಬನ್ ಪ್ರಮಾಣ ಇದಕ್ಕಿಂತ ಸಾಕಷ್ಟು ಹೆಚ್ಚಿರುತ್ತದೆ. ಅಂದರೆ C8 ರಿಂದ C12 ನಡುವೆ ಇರುತ್ತದೆ. ಆದ್ದರಿಂದ, ಪ್ರತಿ ಅಣು ಪೆಟ್ರೋಲ್ ಉರಿಯುವುದಕ್ಕೆ ಹೋಲಿಸಿದರೆ ಪ್ರತಿ ಅಣು ಎಥನಾಲ್ ಉರಿದಾಗ ಬಿಡುಗಡೆಯಾಗುವ ಇಂಗಾಲದ ಡೈಆಕ್ಸೈಡ್ (CO₂) ಪ್ರಮಾಣವು ಸಹಜವಾಗಿಯೇ ಕಡಿಮೆಯಿರುತ್ತದೆ. ಹೀಗಾಗಿ, ಎಥನಾಲ್ ಮಿಶ್ರಣ ಹೆಚ್ಚಾದಂತೆಲ್ಲಾ ಕಾರ್ಬನ್ ಡೈಆಕ್ಸೈಡ್ ಮಟ್ಟ ಖಂಡಿತವಾಗಿಯೂ ಕಡಿಮೆಯಾಗುತ್ತದೆ.
ಎರಡನೆಯದಾಗಿ, ಎಥನಾಲ್ ಅತ್ಯಂತ ಹೆಚ್ಚಿನ ಆಕ್ಟೇನ್ ಸಂಖ್ಯೆಯನ್ನು ಹೊಂದಿದೆ. ಹಾಗಾಗಿ, ಇದು ಶುದ್ಧ ಪೆಟ್ರೋಲ್ ಗಿಂತಲೂ ಇಂಟರ್ನಲ್ ಕಂಬಸ್ಟನ್ ಇಂಜಿನ್ (ICE) ಒಳಗೆ ಅತ್ಯಂತ ಸ್ವಚ್ಛವಾಗಿ ಇಂಧನ ಉರಿಯಲು ಸಹಾಯ ಮಾಡುತ್ತದೆ. ಎಥನಾಲ್ ಹೊಂದಿರುವ ಅತ್ಯಧಿಕ ಆಕ್ಟೇನ್ ಸಂಖ್ಯೆಯು (ಸುಮಾರು 108 RON - ರಿಸರ್ಚ್ ಆಕ್ಟೇನ್ ನಂಬರ್) ಹೆಚ್ಚಿನ ಕಾರ್ಯಕ್ಷಮತೆ ನೀಡುವ ಇಂಜಿನ್‌ಗಳಿಗೆ ಇದನ್ನು ನೆಚ್ಚಿನ ಇಂಧನ ಘಟಕವನ್ನಾಗಿ ಮಾಡಿದೆ ಎಂಬುದು ನಿಜವಾದ ಸಂಗತಿಯಾಗಿದೆ.
ಎಥನಾಲ್ ನ ಅತ್ಯುತ್ತಮ ಆಂಟಿ-ನಾಕ್ ಗುಣಲಕ್ಷಣಗಳು (ಇಂಜಿನ್ ನಲ್ಲಿ ಅಕಾಲಿಕವಾಗಿ ಇಂಧನ ಸ್ಫೋಟಗೊಳ್ಳುವುದನ್ನು ತಡೆಯುವ ಸಾಮರ್ಥ್ಯ), ಉತ್ತಮ ಪವರ್ ಸಾಮರ್ಥ್ಯ ಹಾಗೂ ಹೆಚ್ಚಿನ ವೇಪರೈಸೇಶನ್ ಲೇಟೆಂಟ್ ಹೀಟ್ ಪ್ರಕ್ರಿಯೆಯಿಂದ ಸಿಗುವ ಕೂಲಿಂಗ್ ಪರಿಣಾಮದಿಂದಾಗಿ, ಸ್ಪೋರ್ಟ್ಸ್ ಕಾರುಗಳಲ್ಲಿ ಎಥನಾಲ್ ಮತ್ತು ಎಥನಾಲ್ ಆಧಾರಿತ ಇಂಧನಗಳನ್ನು ಬಳಸಲಾಗುತ್ತಿದೆ. ಜಗತ್ತಿನಾದ್ಯಂತ ಬಹುತೇಕ ಟರ್ಬೋಚಾರ್ಜ್ಡ್ ಮತ್ತು ಹೈ-ಕಂಪ್ರೆಷನ್ ಇಂಜಿನ್‌ಗಳು ಹೆಚ್ಚಿನ ಕಾರ್ಯಕ್ಷಮತೆಯನ್ನು ಪಡೆಯಲು ಹಾಗೂ ಅದೇ ಸಮಯದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ಎಥನಾಲ್ ಮಿಶ್ರಣವನ್ನೇ ಅವಲಂಬಿಸಿವೆ.
ಹೆಚ್ಚಿನ ಆಕ್ಟೇನ್ ಸಂಖ್ಯೆ (RON) ಲಭ್ಯವಿರುವುದರಿಂದ, ಹೆಚ್ಚಿನ ಪ್ರಮಾಣದ ಎಥನಾಲ್ ಮಿಶ್ರಿತ ಇಂಧನದಿಂದ ಗರಿಷ್ಠ ಮೈಲೇಜ್ ಪಡೆಯಲು ಹೆಚ್ಚಿನ ಕಂಪ್ರೆಷನ್ ರೇಶಿಯೋ ಹೊಂದಿರುವ ಇಂಜಿನ್ ಗಳ ತಯಾರಿಕೆಯತ್ತ ತಾವು ಗಮನ ಹರಿಸಬಹುದು ಎಂದು ಭಾರತದ ಹಲವು ಕಾರು ತಯಾರಕ ಕಂಪೆನಿಗಳು 'the Indian Express' ಪತ್ರಿಕೆಗೆ ತಿಳಿಸಿವೆ. ಆದರೆ ಇದೆಲ್ಲವೂ ಭವಿಷ್ಯದ ಮಾತು. ತನ್ನ ನಿಲುವಿಗೆ ಬದ್ಧವಾಗಿರುವ ಸರ್ಕಾರ, ಸೂಕ್ತ ಪರೀಕ್ಷೆಗಳು ಮತ್ತು ಸಮಾಲೋಚನೆಗಳ ನಂತರವಷ್ಟೇ ಹೆಚ್ಚಿನ ಪ್ರಮಾಣದ ಎಥನಾಲ್-ಪೆಟ್ರೋಲ್ ಮಿಶ್ರಣವನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದೆ.
ಅಲ್ಲದೆ, 2017ರ ವೇಳೆಗೆ ಪೆಟ್ರೋಲ್ ನಲ್ಲಿ 20% ಎಥನಾಲ್ ಮಿಶ್ರಣ ಮಾಡುವ ಸೂಚಕ ಗುರಿಯನ್ನು 2009ರ ತನ್ನ ಮೊದಲ ರಾಷ್ಟ್ರೀಯ ಜೈವಿಕ ಇಂಧನ ನೀತಿಯಲ್ಲಿ ಮೂಲತಃ ಅಧಿಸೂಚಿಸಿದ್ದು ಯುಪಿಎ ಸರ್ಕಾರವೇ (2004-14) ಆಗಿತ್ತು. ಆದರೆ ಹಲವು ಕಾರಣಗಳಿಂದಾಗಿ ಈ ಗುರಿ ಮುಂದೆ ಹೋಗುತ್ತಾ ಇತ್ತು. ಇದರೊಂದಿಗೆ, "ಹಾಲಿ ಇರುವ ವಾಹನಗಳ ಮೇಲೆ E10 ಇಂಧನದ ಪರಿಣಾಮವನ್ನು ನಿರ್ಣಯಿಸುವುದು" ಎಂಬ ವೈಜ್ಞಾನಿಕ ಅಧ್ಯಯನವನ್ನು 2009-10ರ ಅವಧಿಯಲ್ಲಿ ಇಂಡಿಯನ್ ಆಯಿಲ್, ಪುಣೆ ಮೂಲದ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಮತ್ತು ವಾಹನ ಉದ್ಯಮದ ಪ್ರಮುಖ ಒಕ್ಕೂಟವಾದ ಸಿಯಾಮ್ (SIAM) ಜಂಟಿಯಾಗಿ ಕೈಗೊಂಡಿದ್ದವು. ಈ ಇಂಧನ ಬದಲಾವಣೆಯು ಪ್ರಾಯೋಗಿಕವಾಗಿ ಕಾರ್ಯಸಾಧ್ಯವಾಗಿದೆ ಎಂದು ಆ ಅಧ್ಯಯನವು ಸೂಚಿಸಿತ್ತು.
ಆದರೆ ಪೆಟ್ರೋಲ್ ಗೆ ಹೋಲಿಸಿದರೆ ಎಥನಾಲ್ ಕಡಿಮೆ ಕ್ಯಾಲೋರಿಫಿಕ್ ಮೌಲ್ಯವನ್ನು (ಉಷ್ಣದ ಸಾಮರ್ಥ್ಯ) ಹೊಂದಿದೆ. ಇದರರ್ಥ ಎಥನಾಲ್ ಸುಮಾರು 30% ರಷ್ಟು ಕಡಿಮೆ ಮೈಲೇಜ್ ನೀಡುತ್ತದೆ. ಮುಖ್ಯವಾಗಿ ಸರ್ಕಾರವು E20 ಗಿಂತಲೂ ಹೆಚ್ಚಿನ ಮಿಶ್ರಣದ ಕಡೆಗೆ ಹೆಜ್ಜೆ ಇಡುತ್ತಿರುವಾಗ, ಈ ಮೈಲೇಜ್ ಸಮಸ್ಯೆ ವಾಹನ ಸವಾರರಿಗೆ ನಿರಂತರ ತಲೆನೋವಾಗಿ ಪರಿಣಮಿಸಿದೆ.
ಇನ್ನು ಎಥನಾಲ್ ಗಾಳಿಯಲ್ಲಿನ ತೇವಾಂಶವನ್ನು ತನ್ನತ್ತ ಸೆಳೆದುಕೊಳ್ಳುವ ಗುಣ ಹೊಂದಿರುವುದರಿಂದ, ಹಳೆಯ ಕಾರುಗಳ ಇಂಜಿನ್ ಭಾಗಗಳು ತುಕ್ಕು ಹಿಡಿದು ಹಾಳಾಗಬಹುದು ಎಂಬ ಆತಂಕವಿದೆ. ಆದರೆ ಈ ಆತಂಕವನ್ನು ಅತಿರಂಜಿತವಾಗಿ ಬಿಂಬಿಸಿದಂತೆ ತೋರುತ್ತಿದೆ. ಮುನ್ನೆಚ್ಚರಿಕೆಯಾಗಿ ಹಳೆಯ ಕಾರುಗಳ ಸೂಕ್ಷ್ಮ ರಬ್ಬರ್ ಮತ್ತು ಪ್ಲಾಸ್ಟಿಕ್ ಭಾಗಗಳನ್ನು ಸರಿಪಡಿಸಲು ಹಾಗೂ ಅವುಗಳಿಗೆ ಹಾನಿಯಾಗದಂತೆ ತಡೆಯಲು ಮಾರುಕಟ್ಟೆಗೆ ವಿಶೇಷ ಕಿಟ್ ಒಂದನ್ನು ಬಿಡುಗಡೆ ಮಾಡಲು ಪ್ರಮುಖ ಕಾರು ತಯಾರಕ ಕಂಪೆನಿಯೊಂದು ಆರಂಭದಲ್ಲಿ ಯೋಜಿಸಿತ್ತು. ಆದರೆ ದಾಖಲೆಗಳ ಪ್ರಕಾರ, ಸದ್ಯಕ್ಕೆ ಆ ಯೋಜನೆಯನ್ನು ಕೈಬಿಡಲಾಗಿದ್ದು, "ಕೇವಲ ಆಂತರಿಕ ಪರೀಕ್ಷೆಗಳು ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿ (R&D) ಉದ್ದೇಶಗಳಿಗಾಗಿ ಮಾತ್ರ ಇದನ್ನು ಮಾಡಲಾಗುತ್ತಿದೆ" ಎಂದು ತಿಳಿದುಬಂದಿದೆ.
ಇತ್ತೀಚೆಗೆ ಹಲವು ವಾಹನ ಸವಾರರು ತಮ್ಮ ಇಂಧನ ಪಂಪ್ ಗಳು ಹಾಳಾಗುತ್ತಿರುವ ಬಗ್ಗೆ ಮತ್ತು ಇತರೆ ಸಮಸ್ಯೆಗಳ ಕುರಿತು ದೂರು ನೀಡುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇಂಥ ಬಹುತೇಕ ವಿಡಿಯೊಗಳು ಕೇವಲ ವೀಕ್ಷಕರನ್ನು ಸೆಳೆಯಲು ಸೃಷ್ಟಿಸಿದ ಕ್ಲಿಕ್-ಬೈಟ್ ಹೆಡ್‌ಲೈನ್ ಗಳಾಗಿದ್ದು, ಇವು ಅಪೂರ್ಣ ಮಾಹಿತಿ ಹಾಗೂ ದೃಢೀಕರಿಸದ ವಾದಗಳನ್ನು ಹೊಂದಿವೆ ಎಂದು ಸರ್ಕಾರ ಹೇಳಿದೆ.
ಭಾಗಗಳಿಗೆ ಹಾನಿಯಾಗುವ ಆತಂಕ
ಪ್ರಸ್ತುತ ಸರ್ಕಾರವು ಗಡುವನ್ನು ನಿಗದಿಗಿಂತ ಮುಂಚಿತವಾಗಿಯೇ ಘೋಷಿಸಿದ್ದರಿಂದ E20 ಇಂಧನ ಪರಿಚಯಿಸುವ ಪ್ರಕ್ರಿಯೆ ತರಾತುರಿಯಲ್ಲಿ ನಡೆದಿದ್ದು ನಿಜ. ಆದರೆ ಇಂಧನ ಪೂರೈಕೆ ವ್ಯವಸ್ಥೆಯ ಭಾಗಗಳಲ್ಲಿ ಬಳಸಲಾಗುವ ಸಾಮಗ್ರಿಗಳ ಮೇಲೆ E20 ಇಂಧನ ಬೀರಬಹುದಾದ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಸರ್ಕಾರವು ARAI ಸಂಸ್ಥೆಯನ್ನು ನಿಯೋಜಿಸಿತ್ತು. ಇಂಧನ ವ್ಯವಸ್ಥೆಯ ವಿವಿಧ ಭಾಗಗಳಲ್ಲಿ ಬಳಸಲಾಗುವ 8 ಲೋಹಗಳು, 6 ಎಲಾಸ್ಟೋಮರ್‌ಗಳು (ರಬ್ಬರ್ ತರಹದ ಸ್ಥಿತಿಸ್ಥಾಪಕ ಸಾಮಗ್ರಿ) ಮತ್ತು 4 ಪ್ಲಾಸ್ಟಿಕ್‌ಗಳನ್ನು "ಪ್ರಯೋಗಾಲಯದಲ್ಲಿ ಇಂಧನದಲ್ಲಿ ಮುಳುಗಿಸುವ ವ್ಯವಸ್ಥಿತ ಪ್ರಕ್ರಿಯೆ"ಯ ಮೂಲಕ ಮೌಲ್ಯಮಾಪನ ಮಾಡಲಾಯಿತು.
ಲೋಹಗಳನ್ನು ಇಂಧನದಲ್ಲಿ ಮುಳುಗಿಸಿಟ್ಟ ನಂತರ ಅವುಗಳ ದ್ರವ್ಯರಾಶಿಯಲ್ಲಿ ಉಂಟಾದ ಬದಲಾವಣೆಯ ದತ್ತಾಂಶದ ಆಧಾರದ ಮೇಲೆ, ವರ್ಷಕ್ಕೆ ಎಷ್ಟು ಮಿಲಿಮೀಟರ್‌ನಷ್ಟು ಲೋಹಗಳು ತುಕ್ಕು ಹಿಡಿಯಬಹುದು (mm/year) ಎಂಬುದನ್ನು ಲೆಕ್ಕಹಾಕಿ ಲೋಹಗಳ ಮೇಲಿನ ಪರಿಣಾಮವನ್ನು ಮೌಲ್ಯಮಾಪನ ಮಾಡಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಗೆಯೇ, ಎಲಾಸ್ಟೋಮರ್‌ಗಳು ಮತ್ತು ಪ್ಲಾಸ್ಟಿಕ್‌ಗಳ ದ್ರವ್ಯರಾಶಿ, ಪರಿಮಾಣ, ಟೆನ್ಸೈಲ್ ಶಕ್ತಿ, ಹಿಗ್ಗುವಿಕೆ, ಆಘಾತ ನಿರೋಧಕ ಶಕ್ತಿ ಹಾಗೂ ಗಡಸುತನದಲ್ಲಿ ಉಂಟಾದ ಬದಲಾವಣೆಗಳನ್ನು ಗಮನಿಸಿ ಅವುಗಳ ಮೇಲಿನ ಪರಿಣಾಮವನ್ನು ಮೌಲ್ಯಮಾಪನ ಮಾಡಲಾಯಿತು.
ಪರೀಕ್ಷೆಗೆ ಒಳಪಡಿಸಲಾದ ಲೋಹಗಳ ಮೇಲೆ E20 ಇಂಧನ ಬೀರಿದ ಪರಿಣಾಮವು "ತುಕ್ಕು ಹಿಡಿಯುವ ದರಗಳ ಆಧಾರದ ಮೇಲೆ ಅತ್ಯಂತ ನಗಣ್ಯವಾಗಿದೆ" ಎಂದು ARAI ಅಧ್ಯಯನವು ತೀರ್ಮಾನಿಸಿದೆ. ಅಲ್ಲದೆ, ಪಾಲಿಕ್ಲೋರೋಪ್ರಿನ್ ಮತ್ತು ಫ್ಲೋರೋಎಲಾಸ್ಟೋಮರ್ ಸಾಮಗ್ರಿಗಳು E20 ಇಂಧನದೊಂದಿಗೆ ಬಹುತೇಕ ಗುಣಲಕ್ಷಣಗಳಲ್ಲಿ "ಸಮಾನ ಅಥವಾ ಉತ್ತಮ" ಕಾರ್ಯಕ್ಷಮತೆ ನೀಡಿರುವುದು ಕಂಡುಬಂದಿದೆ. ಆದರೆ ವಾಣಿಜ್ಯ ಬಳಕೆಯ ಪೆಟ್ರೋಲ್‌ಗೆ ಹೋಲಿಸಿದರೆ, ಎಲಾಸ್ಟೋಮರ್ ಮತ್ತು ಪ್ಲಾಸ್ಟಿಕ್ ಗಳ "ಟೆನ್ಸೈಲ್ ಶಕ್ತಿ ಮತ್ತು ಪರಿಮಾಣ ಬದಲಾವಣೆಯ ಗುಣಲಕ್ಷಣಗಳ" ಮೇಲೆ E20 ಇಂಧನದ ಪರಿಣಾಮ ಸ್ವಲ್ಪ ಹೆಚ್ಚಿರುವುದು ಕಂಡುಬಂದಿದೆ.
ARAI ಒಂದು ಸರ್ಕಾರಿ ಸಂಸ್ಥೆಯಾಗಿದೆ. ಇದು "ಪ್ರಮಾಣಿತ ಪರೀಕ್ಷಾ ಪರಿಸ್ಥಿತಿಗಳಲ್ಲಿ" ನೀಡುವ ಇಂಧನ ದಕ್ಷತೆಯ (ಮೈಲೇಜ್) ರೇಟಿಂಗ್‌ಗಳು ಸೇರಿದಂತೆ ಅದರ ಕೆಲವು ಮುನ್ಸೂಚನೆಗಳು, ನಿಜ ಜೀವನದ ರಸ್ತೆ ಚಾಲನಾ ಪರಿಸ್ಥಿತಿಗಳಲ್ಲಿ ಸಂಪೂರ್ಣವಾಗಿ ಭಿನ್ನವಾಗಿರುತ್ತವೆ ಎಂಬುದು ಗಮನಿಸಬೇಕಾದ ಸಂಗತಿ.
ಈಗ E20 ಇಂಧನದಿಂದ E25 ಇಂಧನಕ್ಕೆ ಬದಲಾಗುವ ಯೋಜನೆ ಸರ್ಕಾರದ ಮುಂದಿದೆ. ಇದರೊಂದಿಗೆ, ಫ್ಲೆಕ್ಸ್-ಫ್ಯುಯೆಲ್ ವಾಹನಗಳಿಗಾಗಿ 'E85' ಇಂಧನವನ್ನು ಪರಿಚಯಿಸುವ ಯೋಜನೆಯೂ ಇದೆ. ಹೆಚ್ಚಿನ ಪ್ರಮಾಣದ ಎಥನಾಲ್ ಇಂಧನಕ್ಕೆ ತಕ್ಕಂತೆ ಸಿದ್ಧಪಡಿಸಲಾದ ಫ್ಲೆಕ್ಸ್-ಫ್ಯುಯೆಲ್ ವಾಹನಗಳಲ್ಲಾದರೂ, ಪ್ರಸ್ತಾಪಿತ E85 ಇಂಧನಕ್ಕಿಂತ ಸಾಮಾನ್ಯ E20 ಇಂಧನ ಬಳಸಿ ವಾಹನ ಚಲಾಯಿಸುವುದೇ ಸದ್ಯಕ್ಕೆ ಅಗ್ಗವಾಗುತ್ತದೆ. ಏಕೆಂದರೆ, ಹೆಚ್ಚಿನ ಎಥನಾಲ್ ಮಿಶ್ರಣದಿಂದ ಉಂಟಾಗುವ 25% ಕ್ಕೂ ಹೆಚ್ಚಿನ ಮೈಲೇಜ್ ನಷ್ಟವನ್ನು ಸರಿದೂಗಿಸಬೇಕಾದರೆ, ಸಾಮಾನ್ಯ ಇಂಧನ ಮತ್ತು ಹೆಚ್ಚಿನ ಮಿಶ್ರಣದ ಇಂಧನದ ಬೆಲೆಗಳ ನಡುವಿನ ವ್ಯತ್ಯಾಸವು ಅದಕ್ಕಿಂತ ಬಹಳ ಹೆಚ್ಚಿರಬೇಕಾಗುತ್ತದೆ.
ಆರಂಭಿಕ ಹಂತದಲ್ಲಿ, E85 ಇಂಧನದ ಬೆಲೆಯು E20 ಪೆಟ್ರೋಲ್ ಗಿಂತ ಲೀಟರ್ ಗೆ ಸುಮಾರು 20 ರೂಪಾಯಿ ಕಡಿಮೆ ಇರುವ ಸಾಧ್ಯತೆಯಿದೆ. ಆದರೆ ಬ್ರೆಜಿಲ್‌ನಲ್ಲಿ, E85 ಇಂಧನವು ಕನಿಷ್ಠ 30% ರಷ್ಟು ಅಗ್ಗವಾದಾಗ ಮಾತ್ರ ಈ ಬದಲಾವಣೆ ಲಾಭದಾಯಕ ಎನಿಸಿಕೊಳ್ಳುತ್ತದೆ. ಭಾರತದಲ್ಲಿಯೂ E85 ಇಂಧನ ಯಶಸ್ವಿಯಾಗಬೇಕಾದರೆ, ಗ್ರಾಹಕರಿಗೆ ಇಂತಹದ್ದೇ ಸ್ಪಷ್ಟ ಬೆಲೆ ವ್ಯತ್ಯಾಸದೊಂದಿಗೆ ಇಂಧನ ಆಯ್ಕೆ ಮಾಡುವ ಮುಕ್ತ ಅವಕಾಶ ಸಿಗಬೇಕು.
E10 ಇಂಧನದಿಂದ E20 ಇಂಧನಕ್ಕೆ ಬದಲಾದಾಗ ಉಂಟಾದ ಪರಿಣಾಮಕ್ಕಿಂತ, E20 ಯಿಂದ E25 ಇಂಧನಕ್ಕೆ ಬದಲಾಗುವಾಗ ಉಂಟಾಗುವ ಪರಿಣಾಮಗಳು ಇಂಜಿನ್ ಮೇಲೆ ಇನ್ನೂ ಹೆಚ್ಚಾಗಿರಬಹುದು ಎಂದು ವಾಹನ ತಯಾರಕ ಕಂಪನಿಗಳು ಖಾಸಗಿಯಾಗಿ ಒಪ್ಪಿಕೊಳ್ಳುತ್ತವೆ. ಹೈ-ಗ್ರೇಡ್ ಅಲ್ಯೂಮಿನಿಯಂ ಅಥವಾ ಸ್ಟೀಲ್ ಕಾಸ್ಟಿಂಗ್ ಬಳಸದ ಹಳೆಯ ಇಂಜಿನ್ ಗಳು ಮತ್ತು ದ್ವಿಚಕ್ರ ವಾಹನಗಳ ಇಂಜಿನ್‌ಗಳ ವಿಷಯದಲ್ಲಿ ಇದು ಪ್ರಮುಖವಾಗಿ ನಿಜವಾಗಿದೆ.
ಹೊಸ ನಿಯಮಾವಳಿಗಳಿಗೆ ಹೊಂದಿಕೊಳ್ಳದ ವಾಹನಗಳ ಮೇಲೆ ಇಂತಹ ಮಿಶ್ರಿತ ಇಂಧನಗಳು ಬೀರುವ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಯಾವುದೇ ನಿರ್ಣಾಯಕ ಅಧ್ಯಯನಗಳು ನಡೆದಿಲ್ಲ ಎಂದು ಪ್ರಮುಖ ವಾಹನ ತಯಾರಕ ಕಂಪೆನಿಯೊಂದರ ಹಿರಿಯ ತಾಂತ್ರಿಕ ತಜ್ಞರು ಹೇಳಿರುವುದಾಗಿ 'The Indian Express' ವರದಿ ಉಲ್ಲೇಖಿಸಿದೆ. ಆದರೆ, ಇದು ಇಂಜಿನ್ ನ ಆಯುಷ್ಯ, ಅದರ ವಿವಿಧ ರಬ್ಬರ್ ಭಾಗಗಳು, ವಾಲ್ವ್‌ಗಳು ಮತ್ತು ಪಿಸ್ಟನ್ ಹೆಡ್‌ಗಳ ಮೇಲೆ ಖಂಡಿತವಾಗಿಯೂ ಕೆಟ್ಟ ಪರಿಣಾಮ ಬೀರಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಗ್ರಾಹಕರ ಮೇಲೆ ಹೊರೆ
ಸರ್ಕಾರವು E20 ಇಂಧನ ಬದಲಾವಣೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಕೆಲವೇ ತಿಂಗಳುಗಳಲ್ಲಿ ಈ ಹೊಸ ನಿರ್ಧಾರ ಹೊರಬಿದ್ದಿದೆ. ಎಲ್ಲಾ ಸಾಧ್ಯತೆಗಳ ಪ್ರಕಾರ, ಇದರಿಂದಾಗಿ ವಾಹನಗಳ ಬೆಲೆಯೂ ಹೆಚ್ಚಾಗಲಿದ್ದು, ಅದರ ಹೊರೆಯನ್ನು ಗ್ರಾಹಕರೇ ಹೊರಬೇಕಾಗುತ್ತದೆ. ಇದರೊಂದಿಗೆ ಮೈಲೇಜ್ ಕೊರತೆಯ ಸಮಸ್ಯೆಯೂ ಸೇರಿಕೊಳ್ಳಲಿದೆ. E10 ಇಂಧನದಿಂದ E20 ಇಂಧನಕ್ಕೆ ಬದಲಾದ ನಂತರ ತಮಗೆ ಮೈಲೇಜ್ ಕಡಿಮೆಯಾಗುತ್ತಿದೆ ಎಂದು ಈಗಾಗಲೇ ಗ್ರಾಹಕರು ದೂರುತ್ತಿದ್ದಾರೆ.
ಸರ್ಕಾರದ ಮೂಲಗಳ ಪ್ರಕಾರ, E20 ಗಿಂತ ಹೆಚ್ಚಿನ ಮಿಶ್ರಣದ ಕಡೆಗೆ ಹೆಜ್ಜೆ ಇಡುವುದನ್ನು "ತುರಾತುರಿಯಲ್ಲಿ ಮಾಡುತ್ತಿಲ್ಲ ಮತ್ತು ಈ ಬದಲಾವಣೆಗೆ ಸಿದ್ಧರಾಗಲು ವಾಹನ ಹಾಗೂ ತೈಲ ಕಂಪೆನಿಗಳಿಗೆ ಸಾಕಷ್ಟು ಸಮಯ ನೀಡಲಾಗುತ್ತದೆ".
ಹಾಗಾದರೆ, ಸರ್ಕಾರವು E20 ಗಿಂತಲೂ ಹೆಚ್ಚಿನ ಮಿಶ್ರಣಕ್ಕಾಗಿ ಏಕೆ ಒತ್ತಾಯಿಸುತ್ತಿದೆ? ಇದಕ್ಕೆ ಕಾರಣ ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯಿಂದಾಗಿ ಇಂಧನ ಬೆಲೆಗಳು ಏರುತ್ತಿರುವ ಈ ಸಂದರ್ಭದಲ್ಲಿ, ಇಂಧನ ಆಮದಿನ ಮೇಲಿನ ಭಾರತದ ಅವಲಂಬನೆಯನ್ನು ಮತ್ತಷ್ಟು ಕಡಿಮೆ ಮಾಡುವುದು ಮತ್ತು ದೇಶೀಯ ಎಥನಾಲ್ ಉತ್ಪಾದನೆಗೆ ಉತ್ತೇಜನ ನೀಡುವುದು ಆಗಿದೆ.
ಇದರ ಹಿಂದೆ ಒಂದು ರಾಜಕೀಯ ಆಯಾಮವೂ ಇದೆ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಕೃಷಿ ವಲಯದ ಪ್ರಭಾವಿ ಮುಖಂಡರು ಎಥನಾಲ್ ಮಿಶ್ರಣವನ್ನು ಹೆಚ್ಚಿಸಲು ತೀವ್ರ ಒತ್ತಡ ಹೇರುತ್ತಿದ್ದಾರೆ. ಏಕೆಂದರೆ ಅಲ್ಲಿನ ಕಬ್ಬು ಬೆಳೆಯುವ ರೈತರು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದ್ದಾರೆ.
"ಈ ಹೊಸ ಬದಲಾವಣೆಯ ಸಂದರ್ಭದಲ್ಲಿಯೂ, ಮೈಲೇಜ್ ನಲ್ಲಿ ಉಂಟಾಗುವ ಯಾವುದೇ ರೀತಿಯ ನಷ್ಟದ ನೇರ ಪರಿಣಾಮವನ್ನು ಗ್ರಾಹಕರೇ ಎದುರಿಸಬೇಕಾಗುತ್ತದೆ. ಹಳೆಯ ವಾಹನಗಳ ವಿಷಯದಲ್ಲಂತೂ, ಹೆಚ್ಚಿನ ಎಥನಾಲ್ ಮಿಶ್ರಣದಿಂದಾಗಿ ವಾಹನದ ಭಾಗಗಳು ಹಾಳಾಗುವ ಹೆಚ್ಚುವರಿ ಆತಂಕವೂ ಇದೆ. ಆ ನಷ್ಟವನ್ನೂ ಗ್ರಾಹಕರೇ ಭರಿಸಬೇಕಾಗುತ್ತದೆ" ಎಂದು ವಾಹನ ತಯಾರಕರ ಒಕ್ಕೂಟದ ಪ್ರತಿನಿಧಿಯೊಬ್ಬರು ಹೇಳಿದ್ದಾರೆ.
ಬ್ರೆಝಿಲ್ ಮಾದರಿ
ಎಥನಾಲ್ ಮಿಶ್ರಿತ ಇಂಧನ ಬಳಕೆಯಲ್ಲಿ ದಶಕಗಳ ಇತಿಹಾಸ ಹೊಂದಿರುವ ಬ್ರೆಝಿಲ್ ದೇಶದ ಯಶಸ್ಸು, ಭಾರತವು ಈ ನಿಟ್ಟಿನಲ್ಲಿ ಹೇಗೆ ಮುನ್ನಡೆಯಬಹುದು ಎಂಬುದಕ್ಕೊಂದು ಉತ್ತಮ ಮಾದರಿಯಾಗಿದೆ. ಬ್ರೆಝಿಲ್ ನಲ್ಲಿ ಫ್ಲೆಕ್ಸ್-ಫ್ಯುಯೆಲ್ ವಾಹನಗಳ ವ್ಯಾಪಕ ಬಳಕೆ ಸಾಧ್ಯವಾಗಿರುವುದರ ಹಿಂದೆ ಸರ್ಕಾರದ ಕಟ್ಟುನಿಟ್ಟಿನ ನಿಯಮಗಳು, ಗ್ರಾಹಕರಿಗೆ ಸಿಕ್ಕ ಸ್ಪಷ್ಟ ಬೆಲೆ ರಿಯಾಯಿತಿಗಳು, ವಾಹನ ತಯಾರಕ ಕಂಪನಿಗಳಿಗೆ ನೀಡಿದ ನಿಖರ ಮಾರ್ಗದರ್ಶನ ಹಾಗೂ ಗ್ರಾಹಕರಲ್ಲಿ ಮೂಡಿಸಿದ ಜಾಗೃತಿ ಪ್ರಮುಖ ಕಾರಣಗಳಾಗಿವೆ.
ಕಳೆದ ಐದು ದಶಕಗಳಲ್ಲಿ, ಬ್ರೆಝಿಲ್ ದೇಶವು ಕಬ್ಬು ಆಧಾರಿತ ಇಂಧನವನ್ನು ಹೆಚ್ಚಾಗಿ ಬಳಸುವ ಮೂಲಕ ಪೆಟ್ರೋಲ್‌ಗೆ ಪರ್ಯಾಯವಾದ ವ್ಯವಸ್ಥೆಯೊಂದನ್ನು ರೂಪಿಸಲು ಶ್ರಮಿಸಿದೆ. 1970ರ ದಶಕದಲ್ಲಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿದ್ದ ಅಸ್ಥಿರತೆಗೆ ಪ್ರತಿಕ್ರಿಯೆಯಾಗಿ ಬ್ರೆಝಿಲ್ ತನ್ನ ಎಥನಾಲ್ ಯೋಜನೆ ಆರಂಭಿಸಿತ್ತು.
ಪ್ರಸ್ತುತ ಬ್ರೆಝಿಲ್ ನ ಬಹುತೇಕ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ಎರಡು ಆಯ್ಕೆಗಳು ಸಿಗುತ್ತವೆ. ಒಂದು, ಸಾಮಾನ್ಯವಾಗಿ 27 ರಿಂದ 35 ಪ್ರತಿಶತದಷ್ಟು ಎಥನಾಲ್ ಹೊಂದಿರುವ ಮಿಶ್ರಿತ ಪೆಟ್ರೋಲ್. ಮತ್ತೊಂದು, ಸಂಪೂರ್ಣ ಶುದ್ಧ ಎಥನಾಲ್ ಹೊಂದಿರುವ 'E100' ಇಂಧನ.
ಇದರ ಜೊತೆಗೆ, ಬ್ರೆಜಿಲ್ ಸರ್ಕಾರವು ವಾಹನ ತಯಾರಕ ಕಂಪೆನಿಗಳ ಮೂಲಕ ಫ್ಲೆಕ್ಸ್-ಫ್ಯುಯೆಲ್ ಕಾರುಗಳನ್ನು ಮಾರುಕಟ್ಟೆಗೆ ತಂದಿತು. ಇದರಿಂದಾಗಿ ಗ್ರಾಹಕರು ಪೆಟ್ರೋಲ್ ಬಂಕ್‌ಗೆ ಹೋದಾಗ ಆಯಾ ದಿನ ಯಾವ ಇಂಧನ ಅಗ್ಗವಾಗಿರುತ್ತದೆಯೋ ಅದನ್ನು ತಮ್ಮ ವಾಹನಕ್ಕೆ ತುಂಬಿಸಿಕೊಳ್ಳುವ ಮುಕ್ತ ಅವಕಾಶ ಸಿಕ್ಕಿತು. ಸಾಮಾನ್ಯವಾಗಿ ಅಲ್ಲಿ ಕಡಿಮೆ ಎಥನಾಲ್ ಮಿಶ್ರಿತ ಪೆಟ್ರೋಲ್ ಗೆ ಹೋಲಿಸಿದರೆ E100 ಇಂಧನವು 25 ರಿಂದ 35 ಪ್ರತಿಶತದಷ್ಟು ಅಗ್ಗವಾಗಿರುತ್ತದೆ.
ಈ ಫ್ಲೆಕ್ಸ್-ಫ್ಯುಯೆಲ್ ಕಾರುಗಳು ಬ್ರೆಝಿಲ್ ಗ್ರಾಹಕರಲ್ಲಿ ಭಾರೀ ಜನಪ್ರಿಯತೆ ಗಳಿಸಿದವು. ಇದಕ್ಕೆ ಮುಖ್ಯ ಕಾರಣ, ಸರ್ಕಾರದ ಬೆಲೆ ಬೆಂಬಲ ನೀತಿಯಿಂದಾಗಿ ಪೆಟ್ರೋಲ್ ಬಂಕ್ ಗಳಲ್ಲಿ ಎಥನಾಲ್ ಮಿಶ್ರಿತ ಇಂಧನವು ಸಾಮಾನ್ಯ ಪೆಟ್ರೋಲ್‌ಗಿಂತ ಕಡಿಮೆ ಬೆಲೆಗೆ ಸಿಗುತ್ತಿತ್ತು. ಇದರೊಂದಿಗೆ, ಎಥನಾಲ್ ಬಳಕೆಯಿಂದ ವಾಹನದ ಪಿಕ್-ಅಪ್ ಕೂಡ ಹೆಚ್ಚಾಗುತ್ತದೆ. ಫಾರ್ಮುಲಾ ಒನ್ ರೇಸಿಂಗ್ ಅನ್ನು ಅತ್ಯಂತ ಪ್ರೀತಿಸುವ ಬ್ರೆಝಿಲ್ ನಂತಹ ದೇಶದಲ್ಲಿ ವಾಹನದ ಈ ಸಾಮರ್ಥ್ಯ ಗ್ರಾಹಕರಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಯಿತು. 1980ರ ದಶಕದ ಕೊನೆಯ ವೇಳೆಗೆ, ಬ್ರೆಜಿಲ್‌ನಲ್ಲಿ ಮಾರಾಟವಾಗುತ್ತಿದ್ದ ಪ್ರತಿ 10 ಹೊಸ ಕಾರುಗಳಲ್ಲಿ 9 ಕಾರುಗಳು ಕೇವಲ ಎಥನಾಲ್ ಇಂಧನದಲ್ಲೇ ಚಲಿಸುವ ಸಾಮರ್ಥ್ಯ ಹೊಂದಿದ್ದವು.
ಬ್ರೆಝಿಲ್ ನಲ್ಲಿ ವಾಹನ ಸವಾರರು ಪೆಟ್ರೋಲ್ ಬಂಕ್ ಗೆ ಹೋದಾಗ ಅವರಿಗೆ ಬೇರೆ ಬೇರೆ ಬೆಲೆಯಲ್ಲಿ ವಿವಿಧ ಪ್ರಮಾಣದ ಇಂಧನ ಮಿಶ್ರಣಗಳ ಆಯ್ಕೆ ಸಿಗುತ್ತದೆ. ಆದರೆ ಭಾರತದಲ್ಲಿ ಸದ್ಯಕ್ಕೆ ಅಂತಹ ಯಾವುದೇ ಪರಿಸ್ಥಿತಿ ಇಲ್ಲ.