×
Ad

ಅಮೆರಿಕದಿಂದ ಭಾರತೀಯರ ಮರುವಲಸೆ; ಭಾರತದಲ್ಲಿ ಉದ್ಯೋಗದ ಕೊರತೆ ಕಂಡುಕೊಂಡ ಸಮೀಕ್ಷೆ

Update: 2026-07-05 20:00 IST

Photo Credit: AI

ಜೂನ್‌ 16ರಿಂದ ಜೂನ್‌ 25ರ ನಡುವೆ ನಡೆದ ಸಮೀಕ್ಷೆಯಲ್ಲಿ ಅಧಿಕೃತವಾಗಿ ಗುರುತಿಸಿಕೊಂಡ 1,276 ಮಂದಿ ಭಾರತೀಯ ವೃತ್ತಿಪರರು ಭಾಗವಹಿಸಿದ್ದಾರೆ.

ಅಮೆರಿಕದಲ್ಲಿ ಹೆಚ್ಚಾಗುತ್ತಿರುವ ವೀಸಾ ಅನಿಶ್ಚಿತತೆಯ ಪರಿಣಾಮ ಜಾಗತಿಕ ಮಟ್ಟದಲ್ಲಿಯೂ ಗೋಚರಿಸುತ್ತಿದೆ. ‘ಬ್ಲೈಂಡ್’ ಎನ್ನುವ ಅನಾಮಧೇಯ ಸಮುದಾಯ ಅಪ್ಲಿಕೇಶನ್ ನಡೆಸಿರುವ ಹೊಸ ಸಮೀಕ್ಷೆಯ ಪ್ರಕಾರ, ಭಾರತೀಯ ವೃತ್ತಿಪರರು ಹೆಚ್ಚಿನ ಸಂಖ್ಯೆಯಲ್ಲಿ ಅಮೆರಿಕದಿಂದ ಹಿಂತಿರುಗುತ್ತಿದ್ದಾರೆ. ಆದರೆ ಭಾರತದಲ್ಲಿ ಈ ತಾಂತ್ರಿಕ ಕಾರ್ಯಪಡೆಗೆ ಹೆಚ್ಚಿನ ಉದ್ಯೋಗಾವಕಾಶಗಳಿಲ್ಲ ಎಂದು ವರದಿ ತಿಳಿಸಿದೆ.

ಆದರೆ ಈ ಹಿಮ್ಮುಖ ವಲಸೆಯ ಲಾಭವೂ ಅಮೆರಿಕದ ತಂತ್ರಜ್ಞಾನ ದೈತ್ಯ ಕಂಪೆನಿಗಳಿಗೇ ಆಗುತ್ತಿದೆ. ಅಮೆರಿಕದ ಕಂಪೆನಿಗಳು ಭಾರತದಲ್ಲಿ ವೇಗವಾಗಿ ವಿಸ್ತರಿಸುತ್ತಿರುವುದರಿಂದ ಗಮನಾರ್ಹವಾಗಿ ಕಡಿಮೆ ವೇತನದಲ್ಲಿ ಅನುಭವಿ ಪ್ರತಿಭೆಗಳನ್ನು ನೇಮಿಸಿಕೊಳ್ಳುತ್ತಿವೆ.

ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ 1,276 ಅಧಿಕೃತ ವೃತ್ತಿಪರರಲ್ಲಿ ಶೇ 53ರಷ್ಟು ಮಂದಿ ಅಮೆರಿಕದಲ್ಲಿ ವೀಸಾ ಸಂಬಂಧಿತ ಅನಿಶ್ಚಿತತೆಗಳಿಂದ ಮರುವಲಸೆಯನ್ನು ಕಂಡಿದ್ದಾರೆ. ಅವರಲ್ಲಿ ಶೇ 36ರಷ್ಟು ಮಂದಿ ಸಹೋದ್ಯೋಗಿಗಳು ಅಥವಾ ಉದ್ಯೋಗದ ಅಭ್ಯರ್ಥಿಗಳು ಈಗಾಗಲೇ ಭಾರತಕ್ಕೆ ಮರಳಿದ್ದಾರೆ ಎಂದು ಹೇಳಿದರೆ, ಶೇ 17ರಷ್ಟು ಮಂದಿ ಮರುವಲಸೆಗೆ ಸಿದ್ಧವಾಗುತ್ತಿರುವವರ ಬಗ್ಗೆ ತಿಳಿದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪೆನಿಗಳಲ್ಲಿ ಉದ್ಯೋಗಿಗಳ ಮರುವಲಸೆ ಹೆಚ್ಚು ಗೋಚರಿಸುತ್ತಿದೆ. Amazonನಲ್ಲಿ ಕೆಲಸ ಮಾಡುತ್ತಿರುವ ಶೇ 57ರಷ್ಟು, ವಾಲ್‌ಮಾರ್ಟ್‌ ನಲ್ಲಿ ಶೇ 58ರಷ್ಟು ಮತ್ತು ಉಬರ್‌ ನಲ್ಲಿ ಶೇ 55ರಷ್ಟು ಮಂದಿ ತಮ್ಮ ಸಹೋದ್ಯೋಗಿಗಳು ಅಮೆರಿಕದಿಂದ ಹಿಂತಿರುಗಿರುವುದನ್ನು ಕಂಡಿರುವುದಾಗಿ ಬ್ಲೈಂಡ್ ನಡೆಸಿದ ಸಮೀಕ್ಷೆಯಲ್ಲಿ ತಿಳಿಸಿದ್ದಾರೆ. ಈ ಕಂಪೆನಿಗಳು ಭಾರತದಲ್ಲಿ ತಮ್ಮ ಇಂಜಿನಿಯರಿಂಗ್ ಮತ್ತು ಉತ್ಪನ್ನ ಕಾರ್ಯಾಚರಣೆಗಳನ್ನು ವಿಸ್ತರಿಸುತ್ತಿರುವ ಸಂಸ್ಥೆಗಳಲ್ಲಿ ಸೇರಿವೆ.

ಆದರೆ, ಈ ವಿವರಗಳನ್ನು ನೀಡಿ ಸಮೀಕ್ಷೆಯಲ್ಲಿ ಭಾಗವಹಿಸಿದವರ ಪ್ರಕಾರ, ಅನುಭವಿ ವೃತ್ತಿಪರರ ಮರುವಲಸೆ ಮತ್ತು ಕಂಪೆನಿಗಳ ವಿಸ್ತರಣೆಯ ಹೊರತಾಗಿಯೂ ಭಾರತದ ಉದ್ಯೋಗ ಮಾರುಕಟ್ಟೆ ಹೆಚ್ಚು ಸ್ಪರ್ಧಾತ್ಮಕವಾಗಿದೆ. ಶೇ 51ರಷ್ಟು ಮಂದಿಯ ಪ್ರಕಾರ ಕಳೆದ ಒಂದು ವರ್ಷದಲ್ಲಿ ಅವರ ಉದ್ಯೋಗ ಪ್ರೊಫೈಲ್‌ ಗೆ ಸಂಬಂಧಿಸಿದ ಅವಕಾಶಗಳು ಕಡಿಮೆಯಾಗಿವೆ. ಕೇವಲ ಶೇ 26ರಷ್ಟು ಮಂದಿ ಮಾತ್ರ ಉದ್ಯೋಗಾವಕಾಶಗಳಲ್ಲಿ ಹೆಚ್ಚಳ ಕಂಡಿರುವುದಾಗಿ ಹೇಳಿದ್ದರೆ, ಶೇ 23ರಷ್ಟು ಮಂದಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬದಲಾವಣೆಗಳಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹೀಗೆ ಕಂಪೆನಿಗಳ ವಿಸ್ತರಣೆ ಮತ್ತು ವಿಶಾಲ ಭಾರತೀಯ ಕಾರ್ಯಪಡೆಗೆ ಲಭ್ಯವಿರುವ ನೇಮಕಾತಿ ಅವಕಾಶಗಳ ನಡುವೆ ನೇರ ಸಂಬಂಧವಿಲ್ಲ. ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಬದಲು, ಹಲವು ಹುದ್ದೆಗಳನ್ನು ಅದೇ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಅನುಭವ ಹೊಂದಿರುವ ವಿದೇಶಿಗರಿಂದ ಮತ್ತು ಹಿಂದಿರುಗುವ ವೃತ್ತಿಪರರಿಂದ ತುಂಬಲಾಗುತ್ತಿದೆ. ಹೀಗಾಗಿ ಕಂಪೆನಿಗಳಿಗೆ ಅನುಭವಿ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಮತ್ತು ಕಾರ್ಮಿಕ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಅನುವಾಗುತ್ತಿದೆ.

ಸಮೀಕ್ಷೆಯಲ್ಲಿ ಉಲ್ಲೇಖಿಸಲಾದ ಗೂಗಲ್ ವೃತ್ತಿಪರರ ಪ್ರಕಾರ, ಕಳೆದ ಆರು ತಿಂಗಳಲ್ಲಿ ಸರಾಸರಿ ವೇತನ ಕಡಿಮೆಯಾಗಿದೆ. ಅಮೆರಿಕದಲ್ಲಿ ಪಾವತಿಸುವ ವೇತನದ ಐದನೇ ಒಂದು ಭಾಗ ಮಾತ್ರ ಭಾರತದಲ್ಲಿ ವೃತ್ತಿಪರರಿಗೆ ಸಿಗುತ್ತಿದೆ. ಇದರಿಂದ ಕಂಪೆನಿಗಳಿಗೆ ಬಹಳ ಲಾಭವಾಗುತ್ತಿದೆ. ಉದ್ಯೋಗಿಗಳ ವೀಸಾ ಸಂಬಂಧಿತ ಅನಿಶ್ಚಿತತೆ ಕಡಿಮೆಯಾಗುತ್ತಿದೆ. ಸಂಸ್ಥೆಯೊಳಗೇ ಅವರನ್ನು ಉಳಿಸಿಕೊಳ್ಳಲು, ಉದ್ಯೋಗಿಗಳ ಸಾಂಸ್ಥಿಕ ಜ್ಞಾನದ ಲಾಭ ಪಡೆಯಲು ಮತ್ತು ಕಡಿಮೆ ವೇತನದಲ್ಲಿ ನೇಮಿಸಿಕೊಳ್ಳಲು ಸಾಧ್ಯವಾಗುತ್ತಿದೆ.

ಆದರೆ, ತಂತ್ರಜ್ಞಾನ ಕ್ಷೇತ್ರದುದ್ದಕ್ಕೂ ಸಮಾನ ಪರಿಣಾಮ ಕಂಡುಬರುತ್ತಿಲ್ಲ ಎಂದು ಸಮೀಕ್ಷೆ ಸೂಚಿಸುತ್ತದೆ. ಕೃತಕ ಬುದ್ಧಿಮತ್ತೆ (AI) ಮತ್ತು ಮೆಷಿನ್ ಲರ್ನಿಂಗ್ (ML) ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವೃತ್ತಿಪರರ ಮೇಲೆ ಇದರ ಪರಿಣಾಮ ಕಡಿಮೆಯಾಗಿದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಶೇ 42ರಷ್ಟು ಮಂದಿ ಮಾತ್ರ ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಕಡಿಮೆ ಅವಕಾಶಗಳಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಅದೇ ಅವಧಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ ಗಳಲ್ಲಿ ಶೇ 52ರಷ್ಟು, ಪ್ರೊಡಕ್ಟ್ ಮ್ಯಾನೇಜರ್‌ ಗಳಲ್ಲಿ ಶೇ 54ರಷ್ಟು ಮತ್ತು ಡೇಟಾ ಹಾಗೂ ಅನಾಲಿಟಿಕ್ಸ್ ಕ್ಷೇತ್ರದಲ್ಲಿರುವವರಲ್ಲಿ ಶೇ 56ರಷ್ಟು ಮಂದಿ ಉದ್ಯೋಗಾವಕಾಶಗಳು ಕಡಿಮೆಯಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಕೃತಕ ಬುದ್ಧಿಮತ್ತೆ ವಿಭಾಗದಲ್ಲಿ ಅನುಭವಿಗಳಿಗೆ ಹೆಚ್ಚಿನ ಅವಕಾಶಗಳಿರುವುದು ತಿಳಿದುಬರುತ್ತಿದೆ.

ಹೀಗೆ ಮರುವಲಸೆ ಉದ್ಯೋಗ ಕ್ಷೇತ್ರದಲ್ಲಿ ಯಾವ ರೀತಿಯ ಬದಲಾವಣೆ ತರುತ್ತಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದವರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ 40ರಷ್ಟು ಮಂದಿ ಕಡಿಮೆ ಅಥವಾ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಶೇ 24ರಷ್ಟು ಮಂದಿ ಮರುವಲಸೆಯಿಂದ ಅನುಭವಿ ವೃತ್ತಿಪರರು ಬರುವ ಕಾರಣ ನೇರವಾಗಿ ತಮ್ಮ ಉದ್ಯೋಗಗಳ ಮೇಲೆ ಪರಿಣಾಮ ಬೀರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಶೇ 15ರಷ್ಟು ಮಂದಿಯ ಪ್ರಕಾರ, ಮರುವಲಸಿಗರಿಂದಾಗಿ ಹೆಚ್ಚಿನ ನಿರೀಕ್ಷೆಗಳು ಬೆಳೆಯಬಹುದು ಮತ್ತು ನೇಮಕಾತಿ ಹೆಚ್ಚು ಸ್ಪರ್ಧಾತ್ಮಕವಾಗಬಹುದು. ಶೇ 21ರಷ್ಟು ಮಂದಿ ಒಟ್ಟಾರೆ ತಂತ್ರಜ್ಞಾನ ಪರಿಸರ ಬಲಗೊಳ್ಳಬಹುದು ಮತ್ತು ಕಾಲಾನಂತರ ವೇತನಗಳು ಹೆಚ್ಚಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಜೂನ್‌ 16ರಿಂದ ಜೂನ್‌ 25ರ ನಡುವೆ ನಡೆದ ಸಮೀಕ್ಷೆಯಲ್ಲಿ ಅಧಿಕೃತವಾಗಿ ಗುರುತಿಸಿಕೊಂಡ 1,276 ಮಂದಿ ಭಾರತೀಯ ವೃತ್ತಿಪರರು ಭಾಗವಹಿಸಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರಿಂಗ್, ಪ್ರೊಡಕ್ಟ್ ಮ್ಯಾನೇಜ್‌ಮೆಂಟ್, ಕೃತಕ ಬುದ್ಧಿಮತ್ತೆ, ಮೆಷಿನ್ ಲರ್ನಿಂಗ್, ಡೇಟಾ ಮತ್ತು ಅನಾಲಿಟಿಕ್ಸ್, ಬ್ಯುಸಿನೆಸ್ ಆಪರೇಷನ್ಸ್, ವಿನ್ಯಾಸ, ಸಂಶೋಧನೆ, ಹಣಕಾಸು ಮತ್ತು ಕನ್ಸಲ್ಟಿಂಗ್ ಕ್ಷೇತ್ರಗಳ ಉದ್ಯೋಗಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News