×
Ad

FIFA World Cup 2026 | ಯುರೋಪ್‌ ನ ದೈತ್ಯರ ಪತನ; ಜರ್ಮನಿ ಮತ್ತು ಇಟಲಿ ಎಡವಿದ್ದೆಲ್ಲಿ?

Update: 2026-07-05 19:51 IST

Photo Credit: indiatoday

2014ರ ಜುಲೈ 8ರಂದು ಬ್ರೆಝಿಲ್‌ನ ಬೆಲೊ ಹೊರಿಜಾಂಟೆಯಲ್ಲಿ ಜರ್ಮನಿ, ಅತಿಥೇಯ ಬ್ರೆಜಿಲ್ ತಂಡವನ್ನು ಸೆಮಿಫೈನಲ್‌ನಲ್ಲಿ 7–1ರಿಂದ ಮಣಿಸಿತ್ತು. ನಾಲ್ಕು ದಿನಗಳ ಬಳಿಕ ವಿಶ್ವಕಪ್ ಟ್ರೋಫಿಯನ್ನೂ ತನ್ನದಾಗಿಸಿಕೊಂಡಿತ್ತು. ಅದು ಕೇವಲ ಸೋಲಾಗಿರಲಿಲ್ಲ; ಬ್ರೆಝಿಲ್‌ಗೆ ಅವಮಾನಕರ ಸೋಲಾಗಿತ್ತು. ಆ ಬಳಿಕ ಕೆಲಕಾಲ ಜರ್ಮನಿ ತಂಡ ಬಹುತೇಕ ಎಲ್ಲ ಪಂದ್ಯಗಳಲ್ಲೂ ಪ್ರಾಬಲ್ಯ ಸಾಧಿಸಿತು. ಆದರೆ 12 ವರ್ಷಗಳ ನಂತರ ಚಿತ್ರಣ ಸಂಪೂರ್ಣ ಬದಲಾಗಿದೆ.

ಈ ಬಾರಿ ಜರ್ಮನಿ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ ಸೋತು ವಿಶ್ವಕಪ್‌ನಿಂದ ಹೊರಬಿದ್ದಿದೆ. ಪರಾಗ್ವೆ ಪರ ಆಡುತ್ತಿರುವ 29 ವರ್ಷದ ಸೆಂಟರ್ ಬ್ಯ್ ಜೋಸ್ ಕೆನಾಲೆ ಅವರಿಗೆ ಪೆನಾಲ್ಟಿ ಹೊಡೆಯುವ ಅವಕಾಶ ಸಿಗುತ್ತದೆ ಎಂದು ನಿರೀಕ್ಷೆಯೇ ಇರಲಿಲ್ಲ. ಅವರ ತಂಡದ ಇಬ್ಬರು ಆಟಗಾರರು ಪೆನಾಲ್ಟಿ ತಪ್ಪಿಸಿದ ಬಳಿಕ ಅವಕಾಶ ಜೋಸ್‌ ಗೆ ಸಿಕ್ಕಿತು. ಆದರೆ ಅವರು ನಿರ್ಣಾಯಕ ಗೋಲು ಬಾರಿಸಿ ಪಂದ್ಯವನ್ನು ಮುಗಿಸಿದರು. ಪರಾಗ್ವೆ ಮುಂದಿನ ಹಂತಕ್ಕೆ ಮುನ್ನಡೆದರೆ, ಜರ್ಮನಿ ಟೂರ್ನಿಯಿಂದ ಹೊರನಡೆಯಬೇಕಾಯಿತು.

ವಿಶ್ವಕಪ್‌ ನ ನಾಕೌಟ್ ಹಂತಕ್ಕೆ ಪ್ರವೇಶಿಸಿದ ಬಳಿಕ ಹಿಂದೆಂದೂ ಸೋಲದ ತಂಡಕ್ಕೆ ಜರ್ಮನಿ ಸೋತು ಹೊರಬೀಳುವುದು ದೊಡ್ಡ ಆಘಾತವಾಗಿದೆ. ಇದೇ ವೇಳೆ, ಮತ್ತೊಂದು ಫುಟ್‌ಬಾಲ್ ದೈತ್ಯ ರಾಷ್ಟ್ರವಾದ ಇಟಲಿಯ ಸ್ಥಿತಿಯೂ ದುಃಖಕರವಾಗಿದೆ. ಅವರು ಕೇವಲ ಒಂದು ಕೆಟ್ಟ ಟೂರ್ನಿಯನ್ನು ಎದುರಿಸುತ್ತಿಲ್ಲ; ಸತತ ಮೂರನೇ ವಿಶ್ವಕಪ್‌ ಗೂ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ. ಬೋಸ್ನಿಯಾ ಮತ್ತು ಹರ್ಜೆಗೋವಿನ ವಿರುದ್ಧದ ಪ್ಲೇಆಫ್‌ನಲ್ಲಿ ಪೆನಾಲ್ಟಿ ಶೂಟೌಟ್‌ ನಲ್ಲಿ ಸೋತಿದ್ದಾರೆ.

ಒಟ್ಟು ಎಂಟು ವಿಶ್ವಕಪ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಈ ಎರಡು ರಾಷ್ಟ್ರಗಳು ಈಗ ನಾಕೌಟ್ ಹಂತಕ್ಕೂ ಮುನ್ನವೇ ಹೊರಬೀಳುವ ಪರಿಸ್ಥಿತಿಗೆ ಹೇಗೆ ತಲುಪಿದವು?

ಇಟಲಿಯ ಕಥೆ ಹೊಸದೇನಲ್ಲ. ವಿಶ್ವಕಪ್‌ ಗೆ ಅರ್ಹತೆ ಪಡೆಯದಿರುವುದು ಈಗ ಇಟಲಿಯ ವಿಷಯದಲ್ಲಿ ದೊಡ್ಡ ಸುದ್ದಿಯಾಗಿಲ್ಲ. ಏಕೆಂದರೆ ಅವರಿಂದ ಹೆಚ್ಚಿನ ನಿರೀಕ್ಷೆಗಳೇ ಉಳಿದಿಲ್ಲ. ಆದರೆ ಜರ್ಮನಿಯ ಪರಿಸ್ಥಿತಿ ವಿಭಿನ್ನ. ಎರಡು ವರ್ಷಕ್ಕೊಮ್ಮೆ ಪ್ರಮುಖ ಸ್ಪರ್ಧಿಗಳಲ್ಲಿ ಒಂದಾಗಿ ಪರಿಗಣಿಸಲ್ಪಡುವ ತಂಡವಿದು. ಗುಂಪು ಹಂತದಲ್ಲಿ ಐವರಿ ಕೋಸ್ಟ್ ವಿರುದ್ಧ ಡೆನಿಜ್ ಉಂಡಾವ್ ಗೋಲು ಗಳಿಸದೆ ಇದ್ದಿದ್ದರೆ, ಜರ್ಮನಿ 32ರ ಘಟ್ಟಕ್ಕೂ ಪ್ರವೇಶಿಸದೇ ಇರುತ್ತಿತ್ತು. ಆದರೆ ಬಳಿಕ ಅವರನ್ನು ಒಂದು ಗಂಟೆಗೂ ಹೆಚ್ಚು ಕಾಲ ಮೈದಾನದಲ್ಲಿ ಉಳಿಸಲಾಯಿತು. ತಂಡದ ಆಟದ ಯೋಜನೆಯೇ ಬದಲಾಗಿತು. ಪಂದ್ಯ ಹೆಚ್ಚುವರಿ ಸಮಯದ ಬಳಿಕ ಪೆನಾಲ್ಟಿ ಶೂಟೌಟ್‌ಗೆ ತಲುಪಿತು. ಇದು ವಿಶ್ವಕಪ್ ಇತಿಹಾಸದಲ್ಲಿ ಜರ್ಮನಿಯ ಮೊದಲ ಪೆನಾಲ್ಟಿ ಶೂಟೌಟ್ ಸೋಲು. 2014ರಲ್ಲಿ ವಿಶ್ವಕಪ್ ಗೆದ್ದ ಬಳಿಕ ಜರ್ಮನಿ ಒಂದೇ ಒಂದು ನಾಕೌಟ್ ಪಂದ್ಯವನ್ನೂ ಗೆದ್ದಿಲ್ಲ.

ಜರ್ಮನಿ ವಿರುದ್ಧದ ಪ್ರಮುಖ ಟೀಕೆಗಳು ಮುಖ್ಯ ತರಬೇತುದಾರ ಜುಲಿಯನ್ ನಾಗೆಲ್ಸ್‌ಮನ್ ಅವರತ್ತವೇ ಕೇಂದ್ರೀಕೃತವಾಗಿವೆ. ಅವರು ಪಂದ್ಯದಿಂದ ಪಂದ್ಯಕ್ಕೆ ವ್ಯವಸ್ಥೆ ಬದಲಾಯಿಸುತ್ತಾರೆ ಎನ್ನುವುದು ಆರೋಪ. 2014ರ ವಿಶ್ವಕಪ್ ವಿಜೇತ ತಂಡದ ನಾಯಕ ಫಿಲಿಪ್ ಲಾಮ್ ಅವರ ಪ್ರಕಾರ, ತಂಡಕ್ಕೆ ನಿರಂತರತೆ ದೊರೆಯಲಿಲ್ಲ. "ನಿರಂತರ ಬದಲಾವಣೆಗಳ ಬದಲು ತಂಡ ತನ್ನ ಶಕ್ತಿಯ ಅಂಶಗಳತ್ತ ಗಮನಹರಿಸಬೇಕಾಗಿತ್ತು. ಪ್ರಮುಖ ಆಟಗಾರರನ್ನು ಸೂಕ್ತ ಸ್ಥಾನದಲ್ಲಿ ಆಡಿಸಿ ಅವರಿಂದ ಅತ್ಯುತ್ತಮ ಪ್ರದರ್ಶನ ಪಡೆಯಬೇಕಾಗಿತ್ತು. ಆದರೆ ನಾಗೆಲ್ಸ್‌ಮನ್ ಅವರ ಯೋಜನೆ ಜರ್ಮನಿಗೆ ಫಲ ನೀಡಲಿಲ್ಲ" ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಜರ್ಮನಿಯಲ್ಲಿ ಪ್ರತಿಭಾವಂತ ಆಟಗಾರರ ಕೊರತೆಯಿಲ್ಲ. ಆದರೆ ಫ್ರಾನ್ಸ್‌ ನಂತೆ ನಿರಂತರವಾಗಿ ಪಂದ್ಯ ಗೆಲ್ಲುವ ವಿಶ್ವದರ್ಜೆಯ ಎಂಟು ಅಥವಾ ಒಂಭತ್ತು ಆಟಗಾರರ ಬಳಗ ಇಲ್ಲ ಎನ್ನುವುದು ವಿಶ್ಲೇಷಕರ ಅಭಿಪ್ರಾಯ.

ಜರ್ಮನಿಯ ಸಮಸ್ಯೆ ತಾತ್ಕಾಲಿಕ ಎಡವಟ್ಟಾಗಿದ್ದರೆ, ಇಟಲಿ ದೀರ್ಘಕಾಲೀನ ಕುಸಿತವನ್ನು ಎದುರಿಸುತ್ತಿದೆ. ಕಳೆದ ಎರಡು ದಶಕಗಳಿಂದ ಇಟಲಿಯ ಫುಟ್‌ಬಾಲ್ ವ್ಯವಸ್ಥೆ ನಿಧಾನವಾಗಿ ಹದಗೆಡುತ್ತ ಬಂದಿದೆ. ಇಟಲಿಯ ಕುಸಿತವನ್ನು ಅರ್ಥಮಾಡಿಕೊಳ್ಳಬೇಕಾದರೆ, ಅದು ಒಮ್ಮೆ ಎಷ್ಟು ಎತ್ತರದಲ್ಲಿತ್ತು ಎಂಬುದನ್ನು ಅರಿಯಬೇಕು.

1980 ಮತ್ತು 1990ರ ದಶಕಗಳಲ್ಲಿ ಇಟಲಿಯ 'ಸೀರಿ ಎ' ವಿಶ್ವದ ಅತ್ಯುತ್ತಮ ಲೀಗ್ ಆಗಿತ್ತು. ಜುವೆಂಟಸ್, ಎಸಿ ಮಿಲನ್, ಇಂಟರ್ ಮತ್ತು ನಾಪೋಲಿ ಸೇರಿದಂತೆ ಹಲವು ಕ್ಲಬ್‌ಗಳು ವಿಶ್ವದ ಶ್ರೇಷ್ಠ ಆಟಗಾರರಿಂದ ಕೂಡಿದ್ದವು. ನೇಪಲ್ಸ್‌ ನಲ್ಲಿ ಇಂದಿಗೂ ಡಿಯಾಗೊ ಮರಡೋನಾರನ್ನು ಆರಾಧಿಸಲಾಗುತ್ತದೆ. ರಾಷ್ಟ್ರೀಯ ತಂಡವು ಈ ಯಶಸ್ಸಿನ ಬೆನ್ನಲ್ಲೇ 1982 ಮತ್ತು 2006ರಲ್ಲಿ ವಿಶ್ವಕಪ್ ಗೆದ್ದಿತ್ತು.

ಆದರೆ ಇಟಲಿಯ ಫುಟ್‌ಬಾಲ್ ಇತಿಹಾಸದ ಅತ್ಯಂತ ದೊಡ್ಡ ಭ್ರಷ್ಟಾಚಾರ ಹಗರಣವಾದ ಕ್ಯಾಲ್ಸಿಯೊಪೊಲಿ ಸಂಪೂರ್ಣ ವ್ಯವಸ್ಥೆಯನ್ನೇ ಅಲುಗಾಡಿಸಿತು. ರೆಫರಿಗಳ ನೇಮಕಾತಿ ಹಗರಣದಲ್ಲಿ 13 ಕ್ಲಬ್‌ಗಳು ತನಿಖೆಗೆ ಒಳಪಟ್ಟಿದ್ದವು. ಜುವೆಂಟಸ್‌ ನ ಪ್ರಶಸ್ತಿಗಳನ್ನು ಹಿಂಪಡೆಯಲಾಯಿತು ಮತ್ತು ಕ್ಲಬ್ ಅನ್ನು ಕೆಳದರ್ಜೆಗೆ ಇಳಿಸಲಾಯಿತು. 'ಸೀರಿ ಎ' ಸುಮಾರು 236 ದಶಲಕ್ಷ ಡಾಲರ್ ಆದಾಯ ಕಳೆದುಕೊಂಡಿತು.

ಅದೇ ಸಮಯದಲ್ಲಿ ಯುರೋಪಿನ ಫುಟ್‌ಬಾಲ್ ಆರ್ಥಿಕತೆ ವೇಗವಾಗಿ ಬೆಳೆಯುತ್ತಿತ್ತು. ಇಂಗ್ಲೆಂಡ್ ಈಗಾಗಲೇ ಇಟಲಿಯನ್ನು ಹಿಂದಿಕ್ಕಿತ್ತು. ಪ್ರಸಾರ ಹಕ್ಕುಗಳು ಮತ್ತು ಜಾಗತಿಕ ವಿಸ್ತರಣೆಯಲ್ಲಿ ಇಟಲಿಯ ಲೀಗ್ ಹಿಂದೆ ಬಿದ್ದಿತು. 2010ರಲ್ಲಿ ಕೊನೆಯ ಬಾರಿ ಇಟಾಲಿಯನ್ ಕ್ಲಬ್ ಚಾಂಪಿಯನ್ಸ್ ಲೀಗ್ ಗೆದ್ದಿತ್ತು. ಆಗ ಇಂಟರ್, ಬಯರ್ನ್ ಮ್ಯೂನಿಕ್ ತಂಡವನ್ನು ಮಣಿಸಿತ್ತು.

ಹದಿನೈದು ವರ್ಷಗಳ ಬಳಿಕವೂ ಪರಿಸ್ಥಿತಿ ಹೆಚ್ಚಿನ ಬದಲಾವಣೆಯನ್ನು ಕಂಡಿಲ್ಲ. ಕಳೆದ ಋತುವಿನಲ್ಲಿ ಯುರೋಪಿಯನ್ ಸ್ಪರ್ಧೆಗಳ ನಾಕೌಟ್ ಹಂತ ತಲುಪಿದ್ದು ಕೇವಲ ಎರಡು ಇಟಾಲಿಯನ್ ಕ್ಲಬ್‌ ಗಳು ಮಾತ್ರ. ಹೆಚ್ಚಿನ ಕ್ಲಬ್‌ಗಳಿಗೆ ತಮ್ಮದೇ ಕ್ರೀಡಾಂಗಣಗಳಿಲ್ಲ. ಸ್ಥಳೀಯ ಸರ್ಕಾರಗಳು ಅವುಗಳನ್ನು ನಿಯಂತ್ರಿಸುತ್ತವೆ. ಹಣದ ಕೊರತೆ ಇದ್ದರೂ ಮಾರಾಟಕ್ಕೆ ಮುಂದಾಗುವುದಿಲ್ಲ.

ತಮ್ಮದೇ ಕ್ರೀಡಾಂಗಣ ಹೊಂದಿರುವ ಪ್ರಮುಖ ಕ್ಲಬ್‌ಗಳಲ್ಲಿ ಜುವೆಂಟಸ್ ಪ್ರಮುಖವಾಗಿದೆ. ಕಳೆದ ಎರಡು ದಶಕಗಳಲ್ಲಿ ಅದು ದೇಶದ ಅತ್ಯಂತ ಸ್ಥಿರ ಮತ್ತು ಸ್ಪರ್ಧಾತ್ಮಕ ಕ್ಲಬ್ ಆಗಿ ಉಳಿದಿದೆ. ಬಹುಮಾನ ಮೊತ್ತ ಮತ್ತು ತಕ್ಷಣದ ಯಶಸ್ಸಿನ ಒತ್ತಡದಿಂದಾಗಿ ಕ್ಲಬ್‌ಗಳು ಯುವ ಆಟಗಾರರನ್ನು ಬೆಳೆಸಲು ಹಿಂಜರಿಯುತ್ತಿವೆ. ಇಟಲಿಯ ಲೀಗ್ ವ್ಯವಸ್ಥೆಯೂ ದುರ್ಬಲವಾಗಿದೆ.

ಫೆಡರೇಶನ್‌ನ ತಾಂತ್ರಿಕ ನಿರ್ದೇಶಕರಾಗಿದ್ದ ರಾಬರ್ಟೊ ಬಾಜಿಯೋ ಸಮಸ್ಯೆಗಳನ್ನು ವಿವರಿಸುವ 900 ಪುಟಗಳ ನೀಲನಕ್ಷೆಯನ್ನು ಸಿದ್ಧಪಡಿಸಿದ್ದರು. ಆದರೆ ಆಡಳಿತ ಮಂಡಳಿಯನ್ನು ಮನವೊಲಿಸಲು ವಿಫಲರಾದ ಅವರು 2013ರಲ್ಲಿ ರಾಜೀನಾಮೆ ನೀಡಿದರು.

ಇದೀಗ ಜರ್ಮನಿಯಲ್ಲಿ ಜುಲಿಯನ್ ನಾಗೆಲ್ಸ್‌ಮನ್ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರೀಯ ತಂಡದ ಜವಾಬ್ದಾರಿ ವಹಿಸಿಕೊಳ್ಳುವ ಕುರಿತು ಮಾಜಿ ಲಿವರ್‌ಪೂಲ್ ಮ್ಯಾನೇಜರ್ ಜುರ್ಗೆನ್ ಕ್ಲೋಪ್ ಅವರೊಂದಿಗೆ ಮಾತುಕತೆ ನಡೆಯುತ್ತಿದೆ. ಆದರೆ ಕೇವಲ ತರಬೇತುದಾರರ ಬದಲಾವಣೆಯಿಂದಲೇ ಯಶಸ್ಸು ಸಾಧ್ಯವಾಗುವುದೇ ಎಂಬ ಪ್ರಶ್ನೆ ಉಳಿದಿದೆ. ಜರ್ಮನಿಯ ಮೂಲ ಸಮಸ್ಯೆ ಆಟಗಾರರ ಆಯ್ಕೆ ಮತ್ತು ಅಭಿವೃದ್ಧಿ ವ್ಯವಸ್ಥೆಯಲ್ಲಿದೆ.

ಇಟಲಿಯಲ್ಲಿ ಇನ್ನಷ್ಟು ದೊಡ್ಡ ಬದಲಾವಣೆ ಸಂಭವಿಸಿದೆ. ಬೋಸ್ನಿಯಾ ವಿರುದ್ಧದ ಪ್ಲೇಆಫ್ ಸೋಲು ಕೇವಲ ವಿಶ್ವಕಪ್ ಕನಸನ್ನಷ್ಟೇ ಕೊನೆಗೊಳಿಸಲಿಲ್ಲ. ಫೆಡರೇಶನ್ ಅಧ್ಯಕ್ಷ ಗ್ಯಾಬ್ರಿಯೆಲೆ ಗ್ರಾವಿನಾ ರಾಜೀನಾಮೆ ನೀಡಿದರು. ರಾಷ್ಟ್ರೀಯ ತಂಡದ ಮುಖ್ಯಸ್ಥ ಜಿಯಾನ್ಲುಯಿಜಿ ಬಫನ್ ಮತ್ತು ಮುಖ್ಯ ತರಬೇತುದಾರ ಗೆನ್ನಾರೊ ಗಟ್ಟೂಸೊ ಕೂಡ ಹುದ್ದೆ ತ್ಯಜಿಸಿದರು.

ಇಟಲಿ ಫುಟ್‌ಬಾಲ್ ಫೆಡರೇಶನ್ ಈಗಾಗಲೇ ಹೊಸ ಯುವ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಿದೆ. ಆದರೆ ಕ್ಲಬ್‌ಗಳಿಗೆ ತಮ್ಮದೇ ಕ್ರೀಡಾಂಗಣಗಳನ್ನು ಹೊಂದಲು ಸರ್ಕಾರ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬೇಕಾಗಿದೆ. ಇಟಲಿಯ ಫುಟ್‌ಬಾಲ್ ಅನ್ನು ಹಳೆಯ ವಿಧಾನದಲ್ಲೇ ನಡೆಸುವುದು ಸಾಧ್ಯವಿಲ್ಲ. ದೀರ್ಘಕಾಲದ ತಾಳ್ಮೆ ಮತ್ತು ಶಿಸ್ತಿನ ಪುನರ್‌ನಿರ್ಮಾಣ ಅಗತ್ಯವಿದೆ.

ಜರ್ಮನಿ ಇದಕ್ಕೂ ಮೊದಲು ತನ್ನ ವ್ಯವಸ್ಥೆಯನ್ನು ಪುನರ್‌ನಿರ್ಮಿಸಿಕೊಂಡ ಅನುಭವ ಹೊಂದಿದೆ. ಆದರೆ ಇಟಲಿ ಮೂರು ವಿಶ್ವಕಪ್ ಚಕ್ರಗಳನ್ನು ವ್ಯರ್ಥಗೊಳಿಸಿದ ಬಳಿಕ ಈಗಷ್ಟೇ ಆ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಎರಡೂ ರಾಷ್ಟ್ರಗಳು ಅಗತ್ಯ ಬದಲಾವಣೆಗಳನ್ನು ತರುವಷ್ಟು ತಾಳ್ಮೆ ಮತ್ತು ದೃಢತೆ ಹೊಂದಿದ್ದಾರೆಯೇ ಎಂಬುದೇ ಅವರ ಮುಂದಿನ ದಶಕವನ್ನು ನಿರ್ಧರಿಸಲಿದೆ.

ಮಾಹಿತಿ ಕೃಪೆ: india today

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News