×
Ad

ಟ್ರಂಪ್ ಫೋನ್ ಕರೆಗೆ ಮಣಿದ FIFA; ಯುಎಸ್ ಆಟಗಾರ ಬಾಲೋಗನ್ ಮೇಲಿದ್ದ ನಿಷೇಧ ರದ್ದು: ಏನಿದು ಹೊಸ ವಿವಾದ?

►ಅಮೆರಿಕಕ್ಕೆ ವಿಶೇಷ ವಿನಾಯಿತಿ ಯಾಕೆ? ►ಫಿಫಾ ನಿರ್ಧಾರಕ್ಕೆ ಬೆಲ್ಜಿಯಂ ತೀವ್ರ ಆಕ್ರೋಶ

Update: 2026-07-06 16:24 IST

 ಡೊನಾಲ್ಡ್ ಟ್ರಂಪ್ , ಗಿಯಾನಿ ಇನ್ಫಾಂಟಿನೊ , ಫೋಲರಿನ್ ಬಾಲೋಗನ್ | Photo Credit : AP , PTI 

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಕೇವಲ ಮೂರು ಫೋನ್ ಕರೆಗಳಿಂದಾಗಿ ಯುಎಸ್ ಆಟಗಾರ ಫೋಲರಿನ್ ಬಾಲೋಗನ್ ಮೇಲಿದ್ದ ಒಂದು ಪಂದ್ಯದ ನಿಷೇಧವನ್ನು ಫಿಫಾ ರದ್ದುಗೊಳಿಸಿದೆ ಎಂದು ಹಲವು ವರದಿಗಳು ತಿಳಿಸಿವೆ. ಈ ಮೂಲಕ ಸೋಮವಾರ ನಡೆಯಲಿರುವ ಫಿಫಾ ವಿಶ್ವಕಪ್‌ನ 'ರೌಂಡ್ ಆಫ್ 16' ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಆಡಲು ಅಮೆರಿಕದ ಈ ಸ್ಟ್ರೈಕರ್‌ಗೆ ಹಾದಿ ಸುಗಮವಾಗಿದ್ದು, ಇದು ಈ ಟೂರ್ನಿಯಲ್ಲೇ ಅತಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಬಾಲೋಗನ್ ಮೇಲಿನ ರೆಡ್ ಕಾರ್ಡ್ ನಿಷೇಧವನ್ನು ಮರುಪರಿಶೀಲಿಸುವಂತೆ ಟ್ರಂಪ್ ಖುದ್ದಾಗಿ ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಅವರಿಗೆ ಕರೆ ಮಾಡಿದ್ದರು. ಕಳೆದ ಬುಧವಾರದಿಂದ ಯುಎಸ್ ಅಧ್ಯಕ್ಷರು ಒಟ್ಟು ಮೂರು ಬಾರಿ ಫೋನ್ ಕರೆ ಮಾಡಿದ್ದಾರೆ ಎಂದು 'ದಿ ಗಾರ್ಡಿಯನ್' ವರದಿ ಮಾಡಿದೆ. ಇನ್ನು 'ದಿ ಅಸೋಸಿಯೇಟೆಡ್ ಪ್ರೆಸ್' ಮತ್ತು 'ಸಿಬಿಎಸ್ ನ್ಯೂಸ್' ಸಂಸ್ಥೆಗಳು ಸಹ, ಫಿಫಾ ಈ ಕಡ್ಡಾಯ ನಿಷೇಧವನ್ನು ಹಿಂಪಡೆಯುವ ಮುನ್ನ ಟ್ರಂಪ್ ಮಧ್ಯಪ್ರವೇಶಿಸಿದ್ದರು ಎಂದು ವರದಿ ಮಾಡಿವೆ.

ಪ್ರಸಕ್ತ ಟೂರ್ನಿಯಲ್ಲಿ ಮೂರು ಗೋಲುಗಳನ್ನು ಗಳಿಸುವ ಮೂಲಕ ಅಮೆರಿಕ ಪರ ಅತಿ ಹೆಚ್ಚು ಗೋಲು ಹೊಡೆದ ಆಟಗಾರನಾಗಿರುವ ಬಾಲೋಗನ್, ಬೋಸ್ನಿಯಾ ಮತ್ತು ಹೆರ್ಜೆಗೋವಿನಾ ವಿರುದ್ಧದ ಪಂದ್ಯದಲ್ಲಿ ರೆಡ್ ಕಾರ್ಡ್ ಪಡೆದಿದ್ದರು. ಎದುರಾಳಿ ತಂಡದ ಡಿಫೆಂಡರ್ ತಾರಿಕ್ ಮುಹಾರೆಮೊವಿಕ್ ಅವರ ಕಾಲಿನ ಮೇಲೆ ಬಾಲೋಗನ್ ಅವರ ಶೂ ಸ್ಟಡ್‌ಗಳು ತಗುಲಿದ್ದರಿಂದ ರೆಫರಿ ಅವರನ್ನು ಮೈದಾನದಿಂದ ಹೊರಗಟ್ಟಿದ್ದರು. ಈ ಪಂದ್ಯದಲ್ಲಿ ಅಮೆರಿಕ 2-0 ಅಂತರದಿಂದ ಗೆದ್ದಿತ್ತು. ವಿಎಆರ್ (VAR) ಪರಿಶೀಲನೆಯ ನಂತರವೂ ಈ ನಿರ್ಧಾರವನ್ನು ಎತ್ತಿಹಿಡಿಯಲಾಗಿತ್ತು. ಹೀಗಾಗಿ, ಅವರು ಬೆಲ್ಜಿಯಂ ವಿರುದ್ಧದ ಮುಂದಿನ ಪ್ರಮುಖ ಪಂದ್ಯದಿಂದ ಹೊರಗುಳಿಯಬೇಕಿತ್ತು.

ಫಿಫಾ ರವಿವಾರ ಮಹತ್ವದ ಪ್ರಕಟಣೆ ಹೊರಡಿಸಿದ್ದು, ಈ ತಕ್ಷಣದ ನಿಷೇಧ ಜಾರಿಗೆ ಬರುವುದಿಲ್ಲ ಎಂದು ತಿಳಿಸಿದೆ. ಫಿಫಾದ ಈ ನಿರ್ಧಾರದಿಂದಾಗಿ ಬಾಲೋಗನ್, ಅಮೆರಿಕ ತಂಡಕ್ಕೆ ಅತ್ಯಂತ ನಿರ್ಣಾಯಕವಾಗಿರುವ ಈ ಪಂದ್ಯದಲ್ಲಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ.

ಫಿಫಾದ ಈ ನಿರ್ಧಾರವನ್ನು ಟ್ರಂಪ್ ತಮ್ಮ 'ಟ್ರೂತ್ ಸೋಶಿಯಲ್' ಖಾತೆಯಲ್ಲಿ ಸ್ವಾಗತಿಸಿದ್ದಾರೆ. "ಸರಿಯಾದ ನಿರ್ಧಾರ ತೆಗೆದುಕೊಂಡು, ಭಾರೀ ಅನ್ಯಾಯವನ್ನು ಸರಿಪಡಿಸಿದ್ದಕ್ಕಾಗಿ ಫಿಫಾ ಸಂಸ್ಥೆಗೆ ಧನ್ಯವಾದಗಳು" ಎಂದು ಅವರು ಬರೆದುಕೊಂಡಿದ್ದಾರೆ.

ಸಿಯಾಟಲ್‌ನಲ್ಲಿ ತರಬೇತಿಗಾಗಿ ಪ್ರಯಾಣಿಸುತ್ತಿದ್ದಾಗ ಬಾಲೋಗನ್ ಮೇಲಿನ ನಿಷೇಧ ರದ್ದಾಗಿರುವ ಸುದ್ದಿ ಅಮೆರಿಕ ತಂಡಕ್ಕೆ ಗೊತ್ತಾಗಿದ್ದು. "ನಾವು ಇಲ್ಲಿಗೆ ಬರುವಾಗಲೇ ಈ ವಿಷಯ ನಮಗೆ ತಿಳಿಯಿತು" ಎಂದು ಕ್ರಿಶ್ಚಿಯನ್ ಪುಲಿಸಿಕ್ ಸುದ್ದಿಗಾರರಿಗೆ ತಿಳಿಸಿದರು. "ಮೊದಲಿಗೆ ನಮಗೆ 'ಇದು ನಿಜವೇ?' ಅನಿಸಿತು, ಆಮೇಲೆ ಇದು ನಿಜಕ್ಕೂ ಒಳ್ಳೆಯ ಸುದ್ದಿ ಎಂದು ಖುಷಿಯಾಯಿತು" ಎಂದಿದ್ದಾರೆ.

"ಫುಟ್‌ಬಾಲ್ ವಲಯದಲ್ಲಿರುವ ಶೇ. 99.9 ರಷ್ಟು ಜನರು ಇದೊಂದು ಅನ್ಯಾಯದ ಶಿಕ್ಷೆ ಎಂದೇ ಹೇಳಿದ್ದಾರೆ" ಎಂದು ಅಮೆರಿಕ ತಂಡದ ಕೋಚ್ ಪೊಚೆಟ್ಟಿನೊ ತಿಳಿಸಿದ್ದಾರೆ. "ಹಳೆಯ ಉದಾಹರಣೆಗಳನ್ನು ನೋಡಿದರೆ ಶಿಕ್ಷೆಯನ್ನು ಸದ್ಯಕ್ಕೆ ತಡೆಹಿಡಿದು, ನಂತರ ಜಾರಿಗೊಳಿಸಲು ಅವಕಾಶವಿದೆ. ಫಿಫಾದ ಈ ನಿರ್ಧಾರದಿಂದ ನನಗೆ ಸಂತೋಷವಾಗಿದೆ, ಇಲ್ಲದಿದ್ದರೆ ಅದು ಅನ್ಯಾಯವಾಗುತ್ತಿತ್ತು" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

►ಫಿಫಾ ನಿರ್ಧಾರಕ್ಕೆ ಬೆಲ್ಜಿಯಂ ತೀವ್ರ ಆಕ್ರೋಶ

ಸೋಮವಾರ ನಡೆಯಲಿರುವ ನಾಕೌಟ್ ಪಂದ್ಯಕ್ಕೂ ಮುನ್ನ ಫಿಫಾ ಕೈಗೊಂಡ ಈ ನಿರ್ಧಾರಕ್ಕೆ ಬೆಲ್ಜಿಯಂ ಕಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಯಲ್ ಬೆಲ್ಜಿಯನ್ ಫುಟ್‌ಬಾಲ್ ಅಸೋಸಿಯೇಷನ್ (RBFA) ಫಿಫಾದ ಈ ಆದೇಶಕ್ಕೆ ತೀವ್ರ 'ಆಶ್ಚರ್ಯ' ವ್ಯಕ್ತಪಡಿಸಿದ್ದು, ಇದರ ವಿರುದ್ಧ ಕಾನೂನು ಹೋರಾಟ ನಡೆಸುವ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ.

ಬೆಲ್ಜಿಯಂ ತಂಡದ ಕೋಚ್ ರೂಡಿ ಗಾರ್ಸಿಯಾ ಕೂಡ ಫಿಫಾದ ಈ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.

"ಫಿಫಾ ಕಚೇರಿಗಳಲ್ಲಿ ಜುಲೈ 5 ಎಂದರೆ ಯೂರೋಪಿನ ಎಪ್ರಿಲ್ ಫೂಲ್ (ಏಪ್ರಿಲ್ 1) ಇದ್ದಂತೆ ಎಂದು ನನಗೆ ತಿಳಿದಿರಲಿಲ್ಲ" ಎಂದು ಗಾರ್ಸಿಯಾ ವ್ಯಂಗ್ಯವಾಡಿದ್ದಾರೆ.

"ಬೆಲ್ಜಿಯಂ ಫೆಡರೇಶನ್ ಕೇವಲ ತನ್ನ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುತ್ತಿಲ್ಲ. ಅದು ಒಟ್ಟಾರೆ ಫುಟ್‌ಬಾಲ್ ಆಟದ ಪ್ರಾಮಾಣಿಕತೆ ಮತ್ತು ನೈತಿಕತೆಯನ್ನು ರಕ್ಷಿಸಲು ಹೋರಾಡುತ್ತಿದೆ. ವಿಶ್ವಕಪ್ ಇತಿಹಾಸದಲ್ಲೇ ಇಂತಹ ನಿರ್ಧಾರ ಬಂದಿರುವುದು ಬಹುಶಃ ಇದೇ ಮೊದಲು" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫಿಫಾ ಶಿಸ್ತು ಸಂಹಿತೆಯ ಆರ್ಟಿಕಲ್ 66.4 ರ ಪ್ರಕಾರ, ರೆಡ್ ಕಾರ್ಡ್ ಪಡೆದು ಹೊರಹೋಗುವ ಆಟಗಾರ ಕಡ್ಡಾಯವಾಗಿ ಮುಂದಿನ ಪಂದ್ಯದಿಂದ ದೂರವಿರಬೇಕು. ಫಿಫಾದ ಈಗಿನ ನಿರ್ಧಾರವು ಅದರದ್ದೇ ನಿಯಮಗಳಿಗೆ ವಿರುದ್ಧವಾಗಿದೆ ಎಂದು RBFA ವಾದಿಸಿದೆ.

ಅಲ್ಲದೆ, ಫಿಫಾ ವಿಶ್ವಕಪ್ 2026ರ ಸ್ಪರ್ಧಾತ್ಮಕ ನಿಯಮಾವಳಿಗಳನ್ನು ಉಲ್ಲೇಖಿಸಿರುವ ಫೆಡರೇಶನ್, "ಯಾವುದೇ ಆಟಗಾರ ಅಥವಾ ತಂಡದ ಅಧಿಕಾರಿಗೆ ನೇರ ಅಥವಾ ಪರೋಕ್ಷ ರೆಡ್ ಕಾರ್ಡ್ ನೀಡಿದರೆ, ಅವರು ಮುಂದಿನ ಪಂದ್ಯದಿಂದ ಕಡ್ಡಾಯವಾಗಿ ಅಮಾನತುಗೊಳ್ಳುತ್ತಾರೆ. ಇದರ ಜೊತೆಗೆ ಹೆಚ್ಚಿನ ಶಿಸ್ತು ಕ್ರಮಗಳನ್ನು ಕೂಡ ಕೈಗೊಳ್ಳಬಹುದು" ಎಂದು ನಿಯಮದಲ್ಲಿದೆ ಎಂಬುದನ್ನು ನೆನಪಿಸಿದೆ.

ಈ ನಿಯಮವನ್ನು ಟೂರ್ನಿಯುದ್ದಕ್ಕೂ ಎಲ್ಲರಿಗೂ ಒಂದೇ ರೀತಿಯಾಗಿ ಅನ್ವಯಿಸಲಾಗಿತ್ತು ಎಂದು ಬೆಲ್ಜಿಯನ್ ಫೆಡರೇಶನ್ ಹೇಳಿದ್ದು, ಕ್ರೀಡೆಯ ನೈತಿಕತೆಯನ್ನು ಎತ್ತಿಹಿಡಿಯಲು ತನ್ನ ಮುಂದಿರುವ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸುತ್ತಿರುವುದಾಗಿ ತಿಳಿಸಿದೆ.

►ಫಿಫಾ ತನ್ನ ನಿರ್ಧಾರವನ್ನು ಹೇಗೆ ಸಮರ್ಥಿಸಿಕೊಂಡಿದೆ?

ತನ್ನ ಶಿಸ್ತು ಸಂಹಿತೆಯ ಆರ್ಟಿಕಲ್ 27ರ ಅಡಿಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಫಿಫಾ ತಿಳಿಸಿದೆ. ಈ ನಿಯಮವು ಕೆಲವು ನಿರ್ದಿಷ್ಟ ಶಿಕ್ಷೆಗಳ ಜಾರಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲು ಫಿಫಾದ ನ್ಯಾಯಾಂಗ ಮಂಡಳಿಗಳಿಗೆ ಅಧಿಕಾರ ನೀಡುತ್ತದೆ.

"ಫಿಫಾ ಶಿಸ್ತು ಸಂಹಿತೆಯ ಆರ್ಟಿಕಲ್ 27ಕ್ಕೆ ಅನುಗುಣವಾಗಿ, ಈ ಒಂದು ಪಂದ್ಯದ ನಿಷೇಧದ ಜಾರಿಯನ್ನು ಒಂದು ವರ್ಷದ ಪರೀಕ್ಷಾರ್ಥ ಅವಧಿಗೆ ತಡೆಹಿಡಿಯಲಾಗಿದೆ," ಎಂದು ಫಿಫಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

"ಈ ಪರೀಕ್ಷಾರ್ಥ ಅವಧಿಯಲ್ಲಿ ಫೋಲರಿನ್ ಬಾಲೋಗನ್ ಅವರು ಇದೇ ರೀತಿಯ ಅಥವಾ ಇಷ್ಟೇ ಗಂಭೀರ ಸ್ವರೂಪದ ಮತ್ತೊಂದು ನಿಯಮ ಉಲ್ಲಂಘನೆ ಮಾಡಿದರೆ, ಈ ತಡೆಯಾಜ್ಞೆಯನ್ನು ರದ್ದುಗೊಳಿಸಲಾಗುವುದು. ಆಮೇಲೆ ಹಳೆಯ ಶಿಕ್ಷೆಯನ್ನು ತಕ್ಷಣವೇ ಜಾರಿಗೆ ತರಲಾಗುವುದು. ಜೊತೆಗೆ ಹೊಸ ತಪ್ಪುಗಾಗಿ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಲು ಕೂಡ ಅವಕಾಶವಿರುತ್ತದೆ" ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಫಿಫಾ ಬಾಲೋಗನ್ ಅವರ ರೆಡ್ ಕಾರ್ಡ್ ಅನ್ನು ರದ್ದುಗೊಳಿಸಿಲ್ಲ. ಬದಲಿಗೆ, ಒಂದು ಪಂದ್ಯದ ನಿಷೇಧದ ಶಿಕ್ಷೆಯನ್ನು ಮುಂದೂಡಿದೆ ಅಷ್ಟೆ. ಅಂದರೆ, ಈ ಒಂದು ವರ್ಷದ ಅವಧಿಯಲ್ಲಿ ಅವರು ಮತ್ತೆ ಇಂತಹದ್ದೇ ತಪ್ಪು ಮಾಡಿದರೆ ಮಾತ್ರ ಈ ನಿಷೇಧ ಜಾರಿಗೆ ಬರಲಿದೆ.

ಆದರೆ, 2026ರ ವಿಶ್ವಕಪ್‌ನಲ್ಲಿ ರೆಡ್ ಕಾರ್ಡ್ ಪಡೆದು ಹೊರಹೋದ ಉಳಿದೆಲ್ಲಾ ಆಟಗಾರರು ತಮ್ಮ ನಿಷೇಧದ ಶಿಕ್ಷೆಯನ್ನು ಅನುಭವಿಸಿರುವಾಗ, ಬಾಲೋಗನ್ ಅವರ ಪ್ರಕರಣಕ್ಕೆ ಮಾತ್ರ ಏಕೆ ಈ ರೀತಿಯ ವಿನಾಯಿತಿ ನೀಡಲಾಯಿತು ಎಂಬುದಕ್ಕೆ ಫಿಫಾ ಯಾವುದೇ ಸ್ಪಷ್ಟನೆ ನೀಡಿಲ್ಲ.

►ಫಿಫಾ ನಿರ್ಧಾರ ವಿವಾದವಾಗಿದ್ದು ಏಕೆ?

ಫಿಫಾದ ಈ ಆದೇಶವು ಅದರ ಶಿಸ್ತು ಕ್ರಮಗಳ ಜಾರಿ ಪ್ರಕ್ರಿಯೆಯ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.

ವರದಿಗಳ ಪ್ರಕಾರ, ವಿಶ್ವಕಪ್ ಇತಿಹಾಸದಲ್ಲಿ ಇದುವರೆಗೆ ಒಟ್ಟು 189 ರೆಡ್ ಕಾರ್ಡ್‌ಗಳನ್ನು ನೀಡಲಾಗಿದೆ. ಆದರೆ, ರೆಡ್ ಕಾರ್ಡ್ ಪಡೆದ ನಂತರವೂ ನಿಷೇಧದ ಶಿಕ್ಷೆಯಿಂದ ಪಾರಾದ ಇತಿಹಾಸದ ಕೇವಲ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಬಾಲೋಗನ್ ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ ಇಂತಹ ಏಕೈಕ ಘಟನೆ ನಡೆದಿದ್ದು 1962ರಲ್ಲಿ. ಅಂದು ಬ್ರೆಝಿಲ್‌ನ ಗ್ಯಾರಿಂಚಾ ಅವರು ಚಿಲಿ ವಿರುದ್ಧದ ಸೆಮಿಫೈನಲ್‌ನಲ್ಲಿ ಮೈದಾನದಿಂದ ಹೊರಹಾಕಲ್ಪಟ್ಟಿದ್ದರು. ಆದರೂ ಜೆಕೊಸ್ಲೊವಾಕಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಆಡಲು ಅವರಿಗೆ ಅನುಮತಿ ನೀಡಲಾಗಿತ್ತು. ಆದರೆ, ಆ ಸಮಯದಲ್ಲಿ 'ಸ್ವಯಂಚಾಲಿತ ನಿಷೇಧ'ದ ಯಾವುದೇ ನಿಯಮವಿರಲಿಲ್ಲ. ಅಂದಿನ ನಿರ್ಧಾರವನ್ನು ಶಿಸ್ತು ಸಮಿತಿಯೊಂದು ತೆಗೆದುಕೊಂಡಿತ್ತಾದರೂ, ನಂತರದ ದಿನಗಳಲ್ಲಿ ಅದರ ಹಿಂದೆ ರಾಜಕೀಯ ಹಸ್ತಕ್ಷೇಪವಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು.

ಆದರೆ ಬಾಲೋಗನ್ ಅವರ ಪ್ರಕರಣ ಸಂಪೂರ್ಣ ವಿಭಿನ್ನವಾಗಿದೆ. ಏಕೆಂದರೆ ಫಿಫಾದ ಇಂದಿನ ನಿಯಮಗಳ ಪ್ರಕಾರ, ನೇರ ರೆಡ್ ಕಾರ್ಡ್ ಪಡೆದ ತಕ್ಷಣ ಒಂದು ಪಂದ್ಯದ ಕಡ್ಡಾಯ ನಿಷೇಧ ಜಾರಿಗೆ ಬರುತ್ತದೆ. ಈ ಬಾರಿಯ 2026ರ ವಿಶ್ವಕಪ್‌ನಲ್ಲಿ ರೆಡ್ ಕಾರ್ಡ್ ಪಡೆದ ಉಳಿದೆಲ್ಲಾ ಆಟಗಾರರು ಈ ಶಿಕ್ಷೆಯನ್ನು ಅನುಭವಿಸಿದ್ದಾರೆ.

ಹೀಗಾಗಿ ಈ ನಿರ್ಧಾರವು ಹಲವು ವ್ಯಾಪಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಟೂರ್ನಿಯಲ್ಲಿ ರೆಡ್ ಕಾರ್ಡ್ ಪಡೆದ ಇತರ 11 ಆಟಗಾರರಿಗೆ ಸಿಗದ ವಿನಾಯಿತಿ ಬಾಲೋಗನ್ ಅವರಿಗೆ ಮಾತ್ರ ಏಕೆ ಸಿಕ್ಕಿತು? ಮುಂದಿನ ದಿನಗಳಲ್ಲಿ ಇತರ ತಂಡಗಳು ಕೂಡ ತಮ್ಮ ಆಟಗಾರರಿಗಾಗಿ ಇಂತಹದ್ದೇ ವಿನಾಯಿತಿಗೆ ಪಟ್ಟು ಹಿಡಿಯುತ್ತವೆಯೇ? ಈ ನಿರ್ಧಾರವು ಮುಂದಿನ ವಿಶ್ವಕಪ್‌ಗಳಿಗೆ ತಪ್ಪು ಮಾದರಿಯಾಗಲಿದೆಯೇ? ಎಂಬ ಪ್ರಶ್ನೆಗಳು ಎದ್ದಿವೆ.

ಅಮೆರಿಕಕ್ಕೆ ವಿಶೇಷ ವಿನಾಯಿತಿ ಯಾಕೆ?

ವಿಶ್ವಕಪ್ ಟೂರ್ನಿಯ ಮಧ್ಯೆ ರೆಡ್ ಕಾರ್ಡ್ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲದಿರುವುದು ಫಿಫಾದ ಶಿಸ್ತು ಪ್ರಕ್ರಿಯೆಯ ಪ್ರಮುಖ ನಿಯಮಗಳಲ್ಲೊಂದಾಗಿದೆ. ಇದೇ ಕಾರಣಕ್ಕೆ ಬಾಲೋಗನ್ ಪ್ರಕರಣ ಇಷ್ಟೊಂದು ಗಮನ ಸೆಳೆದಿದೆ.

ಬೋಸ್ನಿಯಾ ಮತ್ತು ಹೆರ್ಜೆಗೋವಿನಾ ವಿರುದ್ಧದ ಪಂದ್ಯದಲ್ಲಿ ಅವರನ್ನು ಮೈದಾನದಿಂದ ಹೊರಹಾಕಲ್ಪಟ್ಟಿದ್ದು ಅಮೆರಿಕದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಪಂದ್ಯದ ಕೊನೆಯ 27 ನಿಮಿಷಗಳಿಂದ ಹೊರಗುಳಿದಿದ್ದ ಬಾಲೋಗನ್, ಮುಂದಿನ ಬೆಲ್ಜಿಯಂ ವಿರುದ್ಧದ ಪಂದ್ಯದಿಂದಲೂ ವಂಚಿತರಾಗುತ್ತಿರುವುದು ಒಂದೇ ತಪ್ಪಿಗೆ ಎರಡು ಬಾರಿ ಶಿಕ್ಷೆ ನೀಡಿದಂತೆ ಎಂದು ಅಲ್ಲಿನ ಹಲವು ಮಾಧ್ಯಮಗಳು ವಾದಿಸಿದ್ದವು.

ಈ ವಿಷಯ ತಕ್ಷಣವೇ ಅಮೆರಿಕ ಸರ್ಕಾರದ ಉನ್ನತ ಮಟ್ಟವನ್ನು ತಲುಪಿತು. ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು, "ಆ ರೆಡ್ ಕಾರ್ಡ್‌ನಿಂದಾಗಿ ಅಮೆರಿಕಕ್ಕೆ ಮೋಸವಾಗಿದೆ" ಎಂದು ಹೇಳಿದ್ದಲ್ಲದೆ ಇದರ ವಿರುದ್ಧ ಮೇಲ್ಮನವಿ ಪ್ರಕ್ರಿಯೆಗೆ ಅವಕಾಶ ಇರಬೇಕು ಎಂದು ವಾದಿಸಿದ್ದರು.

'ಸಿಬಿಎಸ್ ನ್ಯೂಸ್' ವರದಿ ಪ್ರಕಾರ, ಇದರ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅವರು ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಅವರೊಂದಿಗೆ ನೇರವಾಗಿ ಮಾತನಾಡಿದ್ದಾರೆ. ಶ್ವೇತಭವನದ ವಿಶ್ವಕಪ್ ಕಾರ್ಯಪಡೆಯ ಕಾರ್ಯನಿರ್ವಾಹಕ ನಿರ್ದೇಶಕ ಆಂಡ್ರ್ಯೂ ಜೂಲಿಯಾನಿ ಮತ್ತು ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಕೂಡ ಈ ಘಟನೆ ಕುರಿತು ಫಿಫಾ ಜೊತೆ ಸಂಪರ್ಕದಲ್ಲಿದ್ದರು.

ನಿಷೇಧ ರದ್ದಾದ ನಂತರ ಫಿಫಾಗೆ ಧನ್ಯವಾದ ತಿಳಿಸಿದ್ದ ಟ್ರಂಪ್, ಇದು "ಭಾರೀ ಅನ್ಯಾಯದ" ರದ್ದತಿ ಎಂದು ಕರೆದಿದ್ದರು.

ಆದರೆ, ಈ ವಿಶ್ವಕಪ್‌ನಲ್ಲಿ ರೆಡ್ ಕಾರ್ಡ್ ಪಡೆದ ಉಳಿದೆಲ್ಲಾ ಆಟಗಾರರು ಸಾಮಾನ್ಯ ಶಿಕ್ಷೆಯನ್ನು ಅನುಭವಿಸಿರುವಾಗ, ಫಿಫಾ ಬಾಲೋಗನ್ ಪ್ರಕರಣದಲ್ಲಿ ಮಾತ್ರ ತನ್ನ ವಿಶೇಷ ಅಧಿಕಾರವನ್ನು ಬಳಸಲು ಏಕೆ ನಿರ್ಧರಿಸಿತು ಎನ್ನುವುದೇ ಸದ್ಯದ ದೊಡ್ಡ ಪ್ರಶ್ನೆಯಾಗಿದೆ.

ಟೂರ್ನಿಯಲ್ಲಿ ಹೊರಹಾಕಲ್ಪಟ್ಟ ಇತರ 11 ಆಟಗಾರರು ಕಡ್ಡಾಯವಾಗಿ ಒಂದು ಪಂದ್ಯದ ನಿಷೇಧ ಎದುರಿಸಿರುವಾಗ, ಬಾಲೋಗನ್‌ಗೆ ಮಾತ್ರ ಈ ವಿನಾಯಿತಿ ನೀಡಿದ್ದು ಏಕೆ? ಈ ನಿರ್ಧಾರವು ಮುಂದಿನ ಟೂರ್ನಿಗಳಲ್ಲಿ ಇಂತಹ ಕಡ್ಡಾಯ ನಿಷೇಧಗಳನ್ನು ಪ್ರಶ್ನಿಸಲು ಇತರರಿಗೆ ದಾರಿ ಮಾಡಿಕೊಡುತ್ತದೆಯೇ? ಎಂಬ ಪ್ರಶ್ನೆ ಎದುರಾಗಿದೆ.

ಫಿಫಾ ಈ ಬಗ್ಗೆ ಯಾವುದೇ ವಿವರವಾದ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಈ ಮೌನವು ಹಲವು ಅನುಮಾನ ಹಾಗೂ ಊಹಾಪೋಹಗಳಿಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಅಂಥ ವಿಶೇಷ ಏನಿದೆ? ಯಾವ ಅಂಶಗಳನ್ನು ಪರಿಗಣಿಸಲಾಯಿತು? ಅಂತಿಮ ನಿರ್ಧಾರ ತೆಗೆದುಕೊಂಡವರು ಯಾರು? ಎಂಬ ಪ್ರಶ್ನೆಗಳು ಕಾಡುತ್ತಿವೆ.

ಬಬಿಸಿ ಸ್ಪೋರ್ಟ್ಸ್‌ನ ವಿಶ್ಲೇಷಕ ಮಿಕಾ ರಿಚರ್ಡ್ಸ್ ಈ ನಿರ್ಧಾರವನ್ನು ಒಂದು ಪ್ರಹಸನ ಎಂದು ಕರೆದಿದ್ದಾರೆ. "ಶಿಕ್ಷೆಯನ್ನು ಒಂದು ವರ್ಷದವರೆಗೆ ತಡೆಹಿಡಿಯುವುದು ಇಡೀ ಟೂರ್ನಿಯನ್ನು ಅಣಕಿಸಿದಂತೆ" ಎಂದು ಅವರು ಹೇಳಿದ್ದಾರೆ. "ದೊಡ್ಡ ತಾರೆಯರನ್ನು ಟೂರ್ನಿಯಲ್ಲಿ ಉಳಿಸಿಕೊಳ್ಳಲು ಹೀಗೆ ಮಾಡಲಾಗಿದೆ. ಇದು ಹೇಗೆ ಸಾಧ್ಯ? ಫಿಫಾ ಇನ್ನೂ ಉತ್ತಮವಾಗಿ ನಡೆದುಕೊಳ್ಳಬೇಕಿತ್ತು. ಈ ನಿರ್ಧಾರ ಹಲವರ ಮನಸ್ಸಿನಲ್ಲಿ ಕಹಿ ಉಂಟುಮಾಡಿದೆ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ನಿರ್ಧಾರವು ಟೂರ್ನಿಯ ಜಂಟಿ ಆತಿಥೇಯ ರಾಷ್ಟ್ರವಾಗಿರುವ ಅಮೆರಿಕದೊಂದಿಗೆ ಫಿಫಾ ಹೊಂದಿರುವ ಸಂಬಂಧದ ಮೇಲೂ ಮತ್ತೊಮ್ಮೆ ಕಣ್ಣಿಡುವಂತೆ ಮಾಡಿದೆ. ಫಿಫಾ ನಿಯಮಗಳ ಪ್ರಕಾರ ಫುಟ್‌ಬಾಲ್‌ನಲ್ಲಿ ರಾಜಕೀಯ ಹಸ್ತಕ್ಷೇಪವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಹೀಗಿರುವಾಗ ಅಮೆರಿಕ ಸರ್ಕಾರದ ಹಿರಿಯ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿರುವುದು ಫಿಫಾದ ನಿರ್ಧಾರಗಳ ಮೇಲಿನ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ. ಟ್ರಂಪ್ ಅವರಿಗೆ ಫಿಫಾದ ಶಾಂತಿ ಪ್ರಶಸ್ತಿ ನೀಡುವ ವಿಚಾರದಲ್ಲಿ ಸಂಘಟನೆಯ ರಾಜಕೀಯ ತಟಸ್ಥತೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ಇನ್ಫಾಂಟಿನೊ ವಿರುದ್ಧ ತನಿಖೆ ನಡೆಸುವಂತೆ ಫಿಫಾದ ಎಥಿಕ್ಸ್ ಕಮಿಟಿಗೆ ಈಗಾಗಲೇ ಮನವಿ ಮಾಡಲಾಗಿದೆ.

ಈಗ ಬಾಲೋಗನ್ ಬೆಲ್ಜಿಯಂ ವಿರುದ್ಧ ಆಡಲು ಲಭ್ಯರಿದ್ದಾರೆ ನಿಜ. ಆದರೆ ಸೋಮವಾರ ನಡೆಯಲಿರುವ ಈ 'ರೌಂಡ್ ಆಫ್ 16' ಪಂದ್ಯವು ಟೂರ್ನಿಯ ಅತಿ ದೊಡ್ಡ ವಿವಾದದ ನೆರಳಿನಲ್ಲೇ ನಡೆಯಲಿದೆ. ಫಲಿತಾಂಶ ಏನೇ ಇರಲಿ, ಫಿಫಾದ ಈ ನಿರ್ಧಾರ ಮತ್ತು ಅದರ ಹಿಂದೆ ಶ್ವೇತಭವನ ವಹಿಸಿದ ಪಾತ್ರವು 2026ರ ವಿಶ್ವಕಪ್‌ನ ಇತಿಹಾಸದಲ್ಲಿ ಸದಾ ನೆನಪಿನಲ್ಲಿ ಉಳಿಯುವ ಚರ್ಚೆಯಾಗಿ ಮುಂದುವರಿಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News