ಸೈನೈಡ್ ಮಲ್ಲಿಕಾ: ಅಮಾಯಕ ಮುಖದ ಹಿಂದೆ ಅಡಗಿದ್ದ ಸರಣಿ ಹಂತಕಿ ಕೆಂಪಮ್ಮ
ಕೆಂಪಮ್ಮ | Photo Credit : timesofindia.indiatimes.com
ಮಲ್ಲಿಕಾ… ಈಕೆ ಸಾಮಾನ್ಯಳಲ್ಲ. ಮೌನವಾಗಿಯೇ ಎಲ್ಲವನ್ನೂ ನಿರೀಕ್ಷಿಸಿ, ಬೇಟೆಯಾಡುವ ಹಂತಕಿ. ‘ಸೈನೈಡ್ ಮಲ್ಲಿಕಾ’ ಎಂದೇ ಕುಖ್ಯಾತಿ ಪಡೆದಿರುವ ಕರ್ನಾಟಕದ ಈಕೆ, ಭಾರತದ ಮೊದಲ ಸರಣಿ ಹಂತಕಿ ಎಂದು ಹೇಳಲಾಗುತ್ತಿದೆ. ತನ್ನನ್ನು ನಂಬಿದವರನ್ನೇ ಸಂಚಿನಿಂದ ಕೊಲ್ಲುತ್ತಿದ್ದ ಈಕೆಯ ನಿಜವಾದ ಹೆಸರು ಕೆ.ಡಿ. ಕೆಂಪಮ್ಮ. ಧರ್ಮನಿಷ್ಠೆಯ, ಪಾಪಭೀತಿಯ, ಅಮಾಯಕ ಮಹಿಳೆಯಂತೆ ಕಾಣುತ್ತಿದ್ದ ಈಕೆ, ಕುತಂತ್ರದಿಂದ ಬಲೆಗೆ ಬೀಳಿಸಿ, ನಿಧಾನವಾಗಿ ಸಂಚು ರೂಪಿಸಿ, ಬಹಳ ಚುರುಕಾಗಿ ಸೈನೈಡ್ ನೀಡಿ ಹತ್ಯೆ ಮಾಡುತ್ತಿದ್ದಳು.
20 ವರ್ಷಗಳ ಹಿಂದೆ ಬೆಂಗಳೂರು ಪೊಲೀಸರು ಕೆ.ಡಿ. ಕೆಂಪಮ್ಮ ಅಲಿಯಾಸ್ ಮಲ್ಲಿಕಾಳನ್ನು ಬಂಧಿಸಿದ್ದರು. ಹಲವು ಮಹಿಳೆಯರಿಗೆ ಸೈನೈಡ್ ನೀಡಿ ಹತ್ಯೆ ಮಾಡಿ ಅವರ ಆಭರಣಗಳನ್ನು ದೋಚಿರುವುದಾಗಿ ಈಕೆ ಒಪ್ಪಿಕೊಂಡಿದ್ದಳು ಎಂದು ತನಿಖಾ ಅಧಿಕಾರಿಗಳು ಹೇಳಿದ್ದರು. ಆಕೆಯ ಈ ಬಹಿರಂಗಪಡಿಸುವಿಕೆ ನಗರದಾದ್ಯಂತ ಸಂಚಲನ ಮೂಡಿಸಿತ್ತು.
ಆಗ 43 ವರ್ಷದ ಕೆಂಪಮ್ಮ, ಸಂಕಷ್ಟದಲ್ಲಿದ್ದ ಮಹಿಳೆಯರನ್ನು ಗುರಿಯಾಗಿಸಿಕೊಂಡು, ದೇವರಲ್ಲಿ ನಂಬಿಕೆ ಇರುವ ಮಹಾಭಕ್ತೆಯಂತೆ ವರ್ತಿಸುವ ಮೂಲಕ ಮಹಿಳೆಯರ ವಿಶ್ವಾಸವನ್ನು ಗಳಿಸುತ್ತಿದ್ದಳು. ಹೀಗೆ ವಿಶ್ವಾಸ ಗೆದ್ದ ನಂತರ ಆಕೆ ಕೊಲೆಗಳನ್ನು ಮಾಡುತ್ತಿದ್ದಳು. 2007ರ ಡಿಸೆಂಬರ್ 31ರಂದು ಆಕೆಯನ್ನು ಬಂಧಿಸುವ ಹೊತ್ತಿಗೆ, ಕೆಂಪಮ್ಮ 1999ರಿಂದ ಕನಿಷ್ಠ ಆರು ಮಹಿಳೆಯರನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಳು. ಮೂರು ತಿಂಗಳೊಳಗೆ ಐವರು ಮಹಿಳೆಯರನ್ನು ಕೊಲೆ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಕೆಂಪಮ್ಮನೆಂಬ ಹಂತಕಿ
ತನಿಖಾಧಿಕಾರಿಗಳ ಪ್ರಕಾರ, ಕೆಂಪಮ್ಮ ಕೊಲೆಗೆ ಪಕ್ಕಾ ಲೆಕ್ಕಾಚಾರದ ಮಾದರಿಯನ್ನು ಅನುಸರಿಸುತ್ತಿದ್ದಳು. ಬೆಂಗಳೂರಿನ ಸುತ್ತಮುತ್ತಲಿನ ದೇವಾಲಯಗಳಿಗೆ ಆಕೆ ಆಗಾಗ್ಗೆ ಭೇಟಿ ನೀಡುತ್ತಿದ್ದಳು. ಧಾರ್ಮಿಕ ಆಚರಣೆಗಳಲ್ಲಿ ಪಾರಂಗತಳಾದ ಕಟ್ಟಾ ಭಕ್ತೆಯಂತೆ ನಟಿಸುತ್ತಿದ್ದಳು. ತೊಂದರೆಗೊಳಗಾದ ಮಹಿಳೆಯರನ್ನು ಸೂಕ್ಷ್ಮವಾಗಿ ಗಮನಿಸಿ ಮಾತು ಆರಂಭಿಸುತ್ತಿದ್ದಳು. ಅವರ ವೈಯಕ್ತಿಕ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸುತ್ತಿದ್ದಳು. ಸಹಾನುಭೂತಿ ತೋರಿ ಆಪ್ತಮಿತ್ರಳಂತೆ ವರ್ತಿಸುತ್ತಿದ್ದಳು.
ಹೀಗೆ ಮಹಿಳೆಯರ ವಿಶ್ವಾಸವನ್ನು ಗಳಿಸಿದ ಬಳಿಕ, ಕೆಂಪಮ್ಮ ಅವರಿಗೆ ವಿಶೇಷ ಆಚರಣೆಗಳನ್ನು ಮಾಡುವಂತೆ ಸೂಚಿಸುತ್ತಿದ್ದಳು. ಮಕ್ಕಳಿಲ್ಲದಿರುವುದು, ಆರ್ಥಿಕ ತೊಂದರೆಗಳು ಅಥವಾ ಕೌಟುಂಬಿಕ ಕಲಹದಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಮಂಡಲ ಪೂಜೆ ಅಥವಾ ಇತರ ಪೂಜೆಗಳನ್ನು ಮಾಡುವಂತೆ ಸಲಹೆ ನೀಡುತ್ತಿದ್ದಳು. ನಗರದ ಹೊರವಲಯದಲ್ಲಿರುವ ದೇವಾಲಯಗಳಲ್ಲಿ—ಅಂದರೆ ಸಂತ್ರಸ್ತರ ಮನೆಯಿಂದ ದೂರದ ಸ್ಥಳಗಳಲ್ಲಿ—ಆಚರಣೆಗಳನ್ನು ನಡೆಸಬೇಕೆಂದು ಆಕೆ ಒತ್ತಾಯಿಸುತ್ತಿದ್ದಳು.
ಈ ರೀತಿ ದೂರ ಕರೆದುಕೊಂಡು ಬಂದು ಏಕಾಂತ ಸ್ಥಳಗಳಲ್ಲಿ ಕೆಂಪಮ್ಮ ಸೈನೈಡ್ ನೀಡುತ್ತಿದ್ದಳು. ಕೆಲವೊಮ್ಮೆ ನೀರಿನಲ್ಲಿ ಬೆರೆಸಿ ‘ಪವಿತ್ರ ನೀರು’ ಎಂದು ಕುಡಿಸುತ್ತಿದ್ದಳು. ಕೆಲವೊಮ್ಮೆ ಆಹಾರದಲ್ಲಿ ವಿಷ ಬೆರೆಸುತ್ತಿದ್ದಳು. ಕೆಲವು ಸಂದರ್ಭಗಳಲ್ಲಿ ಮೂಗನ್ನು ಬಲವಂತವಾಗಿ ಹಿಡಿದು ವಿಷಪೂರಿತ ದ್ರವವನ್ನು ಕುಡಿಯುವಂತೆ ಮಾಡುತ್ತಿದ್ದಳು. ಕೆಲವೊಮ್ಮೆ ಸಂತ್ರಸ್ತರು ನಿದ್ರಿಸುವವರೆಗೆ ಅಥವಾ ಪ್ರಾರ್ಥಿಸುವವರೆಗೆ ಕಾಯುತ್ತಿದ್ದಳು. ಅಲ್ಲೊಂದು ಕೊಲೆ ಸಂಭವಿಸುತ್ತಿತ್ತು. ಬಲಿಪಶು ಕುಸಿದು ಬಿದ್ದ ನಂತರ, ಕೆಂಪಮ್ಮ ಶಾಂತವಾಗಿ ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿ ಕಣ್ಮರೆಯಾಗುತ್ತಿದ್ದಳು.
ಬಂಧಿಸಿದ್ದು ಹೇಗೆ?
ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಆಭರಣಗಳು ಮತ್ತು ಮೊಬೈಲ್ ಫೋನ್‌ಗಳನ್ನು ಅನುಮಾನಾಸ್ಪದ ರೀತಿಯಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುಳಿವು ದೊರೆತ ನಂತರ ಕಲಾಸಿಪಾಳ್ಯಂ ಪೊಲೀಸರು ಕೆಂಪಮ್ಮನನ್ನು ಬಂಧಿಸಿದರು. ವಿಚಾರಣೆಗೆ ಒಳಪಡಿಸಿದಾಗ ಸರಣಿ ಹತ್ಯೆಗಳು ಬೆಳಕಿಗೆ ಬಂದವು. ಮಲ್ಲಿಕಾ ಎಂದು ತನ್ನ ಹೆಸರು ಹೇಳಿದ್ದ ಕೆಂಪಮ್ಮ, ತನಿಖಾಧಿಕಾರಿಗಳ ಮುಂದೆ ತಾನು ಮಾಡಿದ ಅಪರಾಧಗಳ ಮಾಹಿತಿಯನ್ನು ಒಂದೊಂದಾಗಿ ಬಿಚ್ಚಿಟ್ಟಳು.
ಆಕೆ ಒಬ್ಬಂಟಿಯಾಗಿ ಆರು ಮಹಿಳೆಯರನ್ನು ಸೈನೈಡ್ ಬಳಸಿ ಕೊಲೆ ಮಾಡಿ, ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿದ್ದಳು ಎಂದು ಆಗಿನ ನಗರ ಪೊಲೀಸ್ ಆಯುಕ್ತ ಎನ್. ಅಚ್ಯುತ ರಾವ್ ಹೇಳಿದ್ದಾರೆ. ಆಕೆ ಅತ್ಯಂತ ಜಾಣತನದಿಂದ ಈ ಕೃತ್ಯಗಳನ್ನು ಮಾಡುತ್ತಿದ್ದಳು. ಹೆಚ್ಚಾಗಿ ದೇವಸ್ಥಾನಗಳಿಗೆ ಭೇಟಿ ನೀಡುವ, ನೊಂದುಕೊಂಡಿರುವ, ದುಃಖದಲ್ಲಿರುವ ಶ್ರೀಮಂತ ಮಹಿಳೆಯರೇ ಆಕೆಯ ಟಾರ್ಗೆಟ್ ಆಗಿದ್ದರು.
ವಿಚಾರಣೆಯ ಸಮಯದಲ್ಲಿ ಕೆಂಪಮ್ಮ ಅಪರಾಧಗಳನ್ನು ಒಪ್ಪಿಕೊಂಡ ಪರಿಣಾಮ, ಈ ಹಿಂದೆ ನಿಗೂಢ ಸಾವುಗಳೆಂದು ದಾಖಲಾಗಿದ್ದ ಹಲವಾರು ಪ್ರಕರಣಗಳನ್ನು ಪೊಲೀಸರು ಮತ್ತೆ ತೆರೆಯಬೇಕಾಯಿತು.
ಕೊಲೆ ಪ್ರಕರಣಗಳಲ್ಲೊಂದು ತಮಿಳುನಾಡಿನಲ್ಲಿ ನಡೆದಿದ್ದರೆ, ಇನ್ನು ಕೆಲವು ಬೆಂಗಳೂರು ಮತ್ತು ಸುತ್ತಮುತ್ತ ನಡೆದಿವೆ. ಕೆಂಪಮ್ಮ ತಪ್ಪೊಪ್ಪಿಕೊಂಡ ಕೊಲೆಗಳಲ್ಲಿ ಮೂರನ್ನು ನಿಗೂಢ ಸಾವುಗಳು, ಎರಡನ್ನು ಅಸ್ವಾಭಾವಿಕ ಸಾವುಗಳು ಎಂದು ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಹಲವಾರು ಪ್ರಕರಣಗಳಲ್ಲಿ ಮಹಿಳೆಯರು ದೇವಾಲಯದ ಆವರಣದೊಳಗೆ ಸಾವನ್ನಪ್ಪಿದ್ದರು. ಆದರೆ ಅಲ್ಲಿ ಕೊಲೆ ಕೃತ್ಯದ ಯಾವುದೇ ಲಕ್ಷಣಗಳು ಕಾಣಿಸಿರಲಿಲ್ಲ. ಇದರಿಂದಾಗಿ ಆ ಸಮಯದಲ್ಲಿ ತನಿಖಾಧಿಕಾರಿಗಳು ಅಪರಾಧ ನಡೆದಿದೆ ಎಂದು ಶಂಕಿಸುವುದು ಕಷ್ಟವಾಗಿತ್ತು.
ಆ ವರ್ಷದ ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಬೆಂಗಳೂರಿನಲ್ಲಿ ಐದು ಮಹಿಳೆಯರನ್ನು ಮಲ್ಲಿಕಾ ಕೊಲೆ ಮಾಡಿದ್ದಾಳೆ. ಆಕೆಯ ಕೊನೆಯ ಬಲಿಪಶು 30 ವರ್ಷದ ಮಹಿಳೆ. ಗಂಡು ಮಗು ಇಲ್ಲದ ಕಾರಣ ಆಕೆ ಬೇಸರಗೊಂಡಿದ್ದಳು. ಆಕೆ ನಿದ್ದೆ ಮಾಡುತ್ತಿದ್ದಾಗ ಕೆಂಪಮ್ಮ ಆಕೆಯನ್ನು ಹತ್ಯೆ ಮಾಡಿದ್ದಳು. ಪ್ರತಿ ಕೊಲೆಯೂ ಪರಿಚಿತ ಮಾದರಿಯಲ್ಲೇ ನಡೆದಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಯಾರು ಈಕೆ?
ಕೆಂಪಮ್ಮ ಕಗ್ಗಲಿಪುರ ನಿವಾಸಿಯಾಗಿದ್ದು, ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದಳು. ಈಕೆ ನಿಮ್ಹಾನ್ಸ್‌ನಲ್ಲಿ ದರ್ಜಿಯಾಗಿ ಕೆಲಸ ಮಾಡುತ್ತಿದ್ದ ದೇವರಾಜ್ ಎಂಬಾತನನ್ನು ಮದುವೆಯಾಗಿದ್ದಳು. ಆದರೆ 1998ರಲ್ಲಿ ವ್ಯವಹಾರದಲ್ಲಿ ಭಾರಿ ನಷ್ಟ ಸಂಭವಿಸಿತು. ಪತಿ ಕೈಬಿಟ್ಟ. ಕೆಂಪಮ್ಮನ ಬದುಕು ತೀವ್ರ ತಿರುವು ಪಡೆದುಕೊಂಡಿತು. ಆಕೆಯನ್ನು ಮನೆಯಿಂದ ಹೊರಹಾಕಲಾಯಿತು. ನಂತರ ಕೆಂಪಮ್ಮ ಈ ಕೃತ್ಯಗಳಲ್ಲಿ ತೊಡಗಿಸಿಕೊಂಡಳು ಎಂದು ಪೊಲೀಸರು ಹೇಳಿದ್ದಾರೆ.
1999ರ ಅಕ್ಟೋಬರ್ 19ರಂದು ಹೊಸಕೋಟೆಯಲ್ಲಿ 30ರ ಹರೆಯದ ಮಮತಾ ರಾಜನ್ ಅವರನ್ನು ಕೊಲ್ಲುವ ಮೂಲಕ ಕೆಂಪಮ್ಮ ‘ಕಿಲ್ಲರ್ ಕೆಂಪಮ್ಮ’ ಆಗಿಬಿಟ್ಟಳು. ಮಮತಾ ಪ್ರಾರ್ಥನೆ ಮಾಡುತ್ತಿದ್ದಾಗ ಕೆಂಪಮ್ಮ ಆಕೆಯನ್ನು ಕೊಂದಿದ್ದಳು. 2007ರಲ್ಲಿ ಕೆಂಪಮ್ಮ ಹೆಚ್ಚಿನ ಕೊಲೆಗಳನ್ನು ಮಾಡಿದ್ದಾಳೆ.
ಜೀವಾವಧಿ ಶಿಕ್ಷೆ
2007ರಲ್ಲಿ ಬಂಧನದ ನಂತರ, ಕೆಂಪಮ್ಮ ವಿವಿಧ ನ್ಯಾಯಾಲಯಗಳಲ್ಲಿ ಅನೇಕ ವಿಚಾರಣೆಗಳನ್ನು ಎದುರಿಸಿದರು. ಲಾಭಕ್ಕಾಗಿ ಐವರು ಮಹಿಳೆಯರನ್ನು ಕೊಲೆ ಮಾಡಿದ್ದಕ್ಕಾಗಿ ತ್ವರಿತ ನ್ಯಾಯಾಲಯವು ಆಕೆಗೆ ಮರಣದಂಡನೆ ವಿಧಿಸಿತು. 2010ರಲ್ಲಿ ಕುಣಿಗಲ್ ತಾಲ್ಲೂಕಿನ ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ಮುನಿಯಮ್ಮ ಅವರ ಕೊಲೆಗೆ ತುಮಕೂರು ನ್ಯಾಯಾಲಯವು ಮರಣದಂಡನೆ ವಿಧಿಸಿತು.
2012ರಲ್ಲಿ ಬೆಂಗಳೂರು ಗ್ರಾಮಾಂತರ 1ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಘಾಟಿ ಸುಬ್ರಹ್ಮಣ್ಯದಲ್ಲಿ ಕೆ. ನಾಗಲಕ್ಷ್ಮಿ ಅವರ ಕೊಲೆ ಪ್ರಕರಣದಲ್ಲಿ ಕೆಂಪಮ್ಮಗೆ ಮರಣದಂಡನೆ ವಿಧಿಸಿತು. ಈ ಪ್ರಕರಣದಲ್ಲಿ ಕೆಂಪಮ್ಮ ಆಭರಣ ದೋಚುವ ಮುನ್ನ ಸೈನೈಡ್ ಮತ್ತು ವಿದ್ಯುತ್ ತಂತಿಯನ್ನು ಬಳಸಿದ್ದಳು.
ದೊಡ್ಡಬಳ್ಳಾಪುರದ ದೇವಸ್ಥಾನದಲ್ಲಿ ಶವವಾಗಿ ಪತ್ತೆಯಾದ ಗೃಹಿಣಿ ನಾಗವೇಣಿ ಅವರ ಕೊಲೆ ಪ್ರಕರಣದಲ್ಲೂ ಸೆಷನ್ಸ್ ನ್ಯಾಯಾಲಯವು ಕೆಂಪಮ್ಮಗೆ ಮರಣದಂಡನೆ ವಿಧಿಸಿತು. ನಾಗವೇಣಿಗೆ ಮಕ್ಕಳಿರಲಿಲ್ಲ. ಇದಕ್ಕಾಗಿ ಎಲ್ಲಾ ಆಭರಣಗಳನ್ನು ಧರಿಸಿ ವಿಶೇಷ ಪೂಜೆಗಳನ್ನು ಮಾಡುವಂತೆ ಕೆಂಪಮ್ಮ ಹೇಳಿದ್ದಳು.
ಹೈಕೋರ್ಟ್ ಹಸ್ತಕ್ಷೇಪ ಮತ್ತು ಮರುವಿಚಾರಣೆಗಳು
ಕೆಲವು ಪ್ರಕರಣಗಳಲ್ಲಿ ಕರ್ನಾಟಕ ಹೈಕೋರ್ಟ್ ಮಧ್ಯಪ್ರವೇಶಿಸಿತು. ಒಂದು ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ಕ್ರಾಸ್ ಎಕ್ಸಾಮಿನೇಷನ್ ದಾಖಲಿಸಲು ಹಾಗೂ ನಿಗದಿತ ಅವಧಿಯೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಲು ನಿರ್ದೇಶಿಸಿ, ಪ್ರಕರಣವನ್ನು ಮತ್ತೆ ಸೆಷನ್ಸ್ ನ್ಯಾಯಾಲಯಕ್ಕೆ ಹಿಂತಿರುಗಿಸಿತು. ಇತರ ಕೆಲವು ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯಗಳು ಕೆಂಪಮ್ಮಗೆ ಜೀವಾವಧಿ ಶಿಕ್ಷೆ ವಿಧಿಸಿವೆ.
ಮದ್ದೂರು ತಾಲ್ಲೂಕಿನಲ್ಲಿ 50 ವರ್ಷದ ಪಿಳ್ಳಮ್ಮ ಅವರ ಹತ್ಯೆ ಪ್ರಕರಣದಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಿತು. ಕೆಂಪಮ್ಮಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಯಿತು. ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಅವರ ಪಕ್ಕದ ಸೆಲ್ ನಲ್ಲಿ ಕೆಂಪಮ್ಮಳನ್ನು ಇರಿಸಲಾಗಿದೆ ಎಂಬ ವರದಿಗಳು ಹೊರಬಂದಾಗ ಈಕೆ ಮತ್ತೆ ಸುದ್ದಿಯಾದಳು. ಭದ್ರತಾ ಕಾರಣಗಳಿಂದ ಜೈಲು ಅಧಿಕಾರಿಗಳು ಕೆಂಪಮ್ಮಳನ್ನು ದೇಶದ ಅತ್ಯಂತ ಹಳೆಯ ಜೈಲುಗಳಲ್ಲಿ ಒಂದಾದ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಿದರು. ಕೈದಿಗೆ ಪೂರ್ವ ಸೂಚನೆ ನೀಡದೆ ಈ ಕ್ರಮವನ್ನು ಸದ್ದಿಲ್ಲದೆ ಕೈಗೊಳ್ಳಲಾಗಿದೆ ಎಂದು ಜೈಲು ಮೂಲಗಳು ತಿಳಿಸಿವೆ.
ಕೊಲೆ ಮಾಡಲು ಕೆಂಪಮ್ಮ ಸೈನೈಡ್ ಜತೆಗೆ ನಂಬಿಕೆಯನ್ನು ಆಯುಧವಾಗಿಸಿಕೊಂಡಳು. ದೇವಾಲಯವನ್ನು ಸಂಚು ರೂಪಿಸುವ ಮತ್ತು ಕೊಲೆ ಮಾಡುವ ಸ್ಥಳವಾಗಿ ಬಳಸಿಕೊಂಡಳು. ಪವಿತ್ರ ನೀರು ಎಂದು ವಿಷ ಕುಡಿಸಿದಳು. ಪರಮ ಭಕ್ತೆಯಂತೆ ನಟಿಸಿ, ಇನ್ನೊಬ್ಬರ ನೋವಿಗೆ ಪರಿಹಾರ ಸೂಚಿಸುತ್ತಾ ಅಮಾಯಕ ಮಹಿಳೆಯರನ್ನು ಕೊಂದು, ಆಭರಣ ದೋಚುವ ದುಷ್ಕೃತ್ಯಗಳಲ್ಲಿ ತೊಡಗಿಸಿಕೊಂಡಳು.
ಕೆಂಪಮ್ಮ ‘ಸೈನೈಡ್ ಮಲ್ಲಿಕಾ’ ಆಗಿ ಸರಣಿ ಹತ್ಯೆಗಳನ್ನು ನಡೆಸಿದ ಭಯಾನಕ ಕಥೆ ಇದು.