ಲಕ್ಕುಂಡಿ ನಿಧಿ ಪ್ರಕರಣ; ನಿಧಿ ಸಿಕ್ಕರೆ ಏನು ಮಾಡಬೇಕು? ಕಾನೂನು ಏನು ಹೇಳುತ್ತದೆ?
Photo Credit : indianexpress.com
ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಗಂಗವ್ವ ಬಸವರಾಜ ರಿತ್ತಿ ಎಂಬವರು ಮನೆ ಕಟ್ಟಿಸಲು ಅಡಿಪಾಯ ತೆಗೆಯುವ ವೇಳೆ ಚಿನ್ನದ ಆಭರಣಗಳು ಪತ್ತೆಯಾಗಿವೆ. ನಿಧಿ ಪತ್ತೆಯಾದ ವಿಷಯವನ್ನು ಕುಟುಂಬಸ್ಥರು ತಕ್ಷಣ ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕೆ ಬಂದ ಅಧಿಕಾರಿಗಳು ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಮಣ್ಣಿನಡಿಯಲ್ಲಿ ಹೂತಿದ್ದ ತಾಮ್ರದ ಪುಟ್ಟ ಬಿಂದಿಗೆಯಲ್ಲಿ ಉಂಗುರ, ಕಿವಿಯೋಲೆ, ನಾಗಮುದ್ರೆಗಳು, ನಾಗಮಣಿ ಉಂಗುರ, ಕೈಕಡಗ, ಕಂಠಹಾರ, ಸರ, ದೊಡ್ಡ ಹಾರ, ಬಂಗಾರದ ಗುಂಡುಗಳು, ಬಳೆ, ಕಾಲ್ಗೆಜ್ಜೆ, ಬಿಲ್ಲೆಗಳು, ವಜ್ರ ಖಚಿತ ಉಂಗುರ ಸೇರಿದಂತೆ ಅನೇಕ ಆಭರಣಗಳು ಸಿಕ್ಕಿವೆ. ನಿಧಿ ಸಿಕ್ಕ ವಿಷಯವನ್ನು ಕೂಡಲೇ ಪೊಲೀಸರಿಗೆ ತಿಳಿಸಿ ಪ್ರಾಮಾಣಿಕತೆ ಮೆರೆದಿರುವ ರಿತ್ತಿ ಕುಟುಂಬದ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಚಿನ್ನಾಭರಣಗಳನ್ನು ಪುರಾತತ್ವ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ್ದು, ಇವು ವಿಜಯನಗರ ಸಾಮ್ರಾಜ್ಯ ಕಾಲಘಟ್ಟಕ್ಕೆ ಸೇರಿರಬಹುದೆಂದು ಊಹಿಸಲಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದ್ದಾರೆ.
ಪತ್ತೆಯಾದ ಚಿನ್ನದ ಬಗ್ಗೆ ಎಎಸ್ಐ ಹೇಳಿದ್ದೇನು?
ಲಕ್ಕುಂಡಿ ಗ್ರಾಮದಲ್ಲಿ ಆಭರಣಗಳು ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿದ ಧಾರವಾಡ ವೃತ್ತದ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ರಮೇಶ್ ಮೂಲಿಮನಿ, “ಇದು ಖಜಾನೆ ಅಲ್ಲ. ಪತ್ತೆಯಾದ ಅನೇಕ ಆಭರಣಗಳು ಮುರಿದ ಸ್ಥಿತಿಯಲ್ಲಿವೆ. ಅವು ಮನೆಯ ಅಡುಗೆ ಪ್ರದೇಶದಲ್ಲಿ ಕಂಡುಬಂದಿವೆ. ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಖಜಾನೆಯನ್ನು ಸಂಗ್ರಹಿಸಿರಲಿಲ್ಲ. ಬದಲಾಗಿ ಅಡುಗೆಮನೆಯ ಒಲೆಯ ಬಳಿ ಆಭರಣಗಳನ್ನು ಹೂತು ಮರೆಮಾಡುವ ಪದ್ಧತಿ ಇತ್ತು. ಈಗ ಕಂಡುಬಂದಿರುವುದೂ ಅದೇ ರೀತಿಯದಾಗಿರಬಹುದು. ಆಭರಣಗಳು ಎಷ್ಟು ಹಳೆಯವು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಾಣ್ಯಗಳು ಪತ್ತೆಯಾಗಿದ್ದರೆ ಅವು ಯಾವ ಕಾಲಘಟ್ಟಕ್ಕೆ ಸೇರಿದವು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತಿತ್ತು” ಎಂದು ತಿಳಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಹಾರ, ಬಳೆ, ಕಿವಿಯೋಲೆಗಳು ಸೇರಿದಂತೆ ವಿವಿಧ ರೀತಿಯ ಆಭರಣಗಳನ್ನು ಒಳಗೊಂಡ ಸುಮಾರು 470 ಗ್ರಾಂ ಚಿನ್ನವನ್ನು ಸರ್ಕಾರ ವಶಕ್ಕೆ ಪಡೆದಿದೆ.
ಕಾನೂನು ಸಚಿವರು ಹೇಳಿದ್ದೇನು?
ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ್, “ಭೂಮಿಯ ಒಳಗೆ ಯಾವುದೇ ಮೌಲ್ಯಯುತ ವಸ್ತುಗಳು ಸಿಕ್ಕರೆ ಅವು ಸರ್ಕಾರದ ಆಸ್ತಿಯಾಗುತ್ತವೆ. ಲಕ್ಕುಂಡಿಯಲ್ಲಿ ಪತ್ತೆಯಾದ ಆಭರಣಗಳನ್ನು ಜಿಲ್ಲಾಡಳಿತ ಖಜಾನೆಯಲ್ಲಿ ಇರಿಸಲಾಗಿದೆ. ಇವು ಜಾಗದ ಮಾಲೀಕರಿಗೆ ಸೇರಿದ್ದಾವೆಯೇ ಅಥವಾ ರಾಷ್ಟ್ರಕೂಟ, ಚಾಲುಕ್ಯರ ಕಾಲಘಟ್ಟಕ್ಕೆ ಸೇರಿದವೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ” ಎಂದು ಹೇಳಿದ್ದಾರೆ.
ನಿಧಿ ಸಿಕ್ಕರೆ ಏನು ಮಾಡಬೇಕು? ಕಾನೂನು ಏನು ಹೇಳುತ್ತದೆ?
ಕಾನೂನು ಸಚಿವರು ಹೇಳಿದಂತೆ, ಭೂಮಿಯೊಳಗೆ ಯಾವುದೇ ನಿಧಿ ಸಿಕ್ಕರೂ ಅದು ಸರ್ಕಾರದ ಸ್ವತ್ತಾಗುತ್ತದೆ. ಇಂಥ ವಸ್ತುಗಳ ಮಾಲೀಕತ್ವದ ಬಗ್ಗೆ ಭಾರತದಲ್ಲಿ ಸ್ಪಷ್ಟವಾದ ಕಾನೂನು ವ್ಯವಸ್ಥೆಯಿದೆ. ವಸಾಹತುಶಾಹಿ ಯುಗದ 1878ರ ‘ಇಂಡಿಯನ್ ಟ್ರೆಷರ್ ಟ್ರೋವ್ ಆಕ್ಟ್’ನಲ್ಲಿ ರೂಪಿಸಲಾದ ನಿಯಮಗಳನ್ನು ಇಂದಿಗೂ ಪಾಲಿಸಲಾಗುತ್ತಿದೆ.
ಈ ಕಾಯ್ದೆಯ ಪ್ರಕಾರ, ಹತ್ತು ರೂಪಾಯಿಗಿಂತ ಹೆಚ್ಚು ಮೌಲ್ಯದ ವಸ್ತುಗಳು ಭೂಮಿಯೊಳಗೆ ಪತ್ತೆಯಾದರೆ ಅವು ಯಾರ ವೈಯಕ್ತಿಕ ಸ್ವತ್ತಾಗಿರುವುದಿಲ್ಲ. ಪತ್ತೆಯಾದ ವಿಷಯವನ್ನು ತಕ್ಷಣವೇ ಜಿಲ್ಲಾಧಿಕಾರಿಗೆ ತಿಳಿಸಬೇಕು. ನಿಧಿ ಸಿಕ್ಕ ಸ್ಥಳ ಹಾಗೂ ಅದರ ವಿವರಗಳನ್ನು ಲಿಖಿತ ರೂಪದಲ್ಲಿ ನೀಡಿಸಿ ಜಿಲ್ಲಾಧಿಕಾರಿಯ ಸುಪರ್ದಿಗೆ ಒಪ್ಪಿಸಬೇಕು. ಜಿಲ್ಲಾಧಿಕಾರಿ ನಿಧಿಯ ಮಾಲೀಕರ ಬಗ್ಗೆ ವಿಚಾರಣೆ ನಡೆಸಲು ಆದೇಶ ನೀಡುತ್ತಾರೆ.
ನಿಧಿಯ ಕುರಿತು ಜಿಲ್ಲಾಧಿಕಾರಿ ಅಧಿಸೂಚನೆ ಪ್ರಕಟಿಸುತ್ತಾರೆ. ಅಧಿಸೂಚನೆ ಪ್ರಕಟವಾದ ದಿನಾಂಕದಿಂದ ನಾಲ್ಕು ತಿಂಗಳಿಗಿಂತ ಮೊದಲು ಅಥವಾ ಆರು ತಿಂಗಳಿಗಿಂತ ನಂತರವಲ್ಲದ ದಿನದೊಳಗೆ ಹಕ್ಕುದಾರರು ವೈಯಕ್ತಿಕವಾಗಿ ಅಥವಾ ಏಜೆಂಟ್ ಮೂಲಕ ಜಿಲ್ಲಾಧಿಕಾರಿ ಮುಂದೆ ಹಾಜರಾಗಬೇಕು. ಸೆಕ್ಷನ್ 5ರ ಅಡಿಯಲ್ಲಿ ಹೊರಡಿಸಲಾದ ಅಧಿಸೂಚನೆಯ ಪ್ರಕಾರ ಹಾಜರಾಗದಿದ್ದರೆ, ಆ ವ್ಯಕ್ತಿ ಹಕ್ಕು ಕಳೆದುಕೊಳ್ಳುತ್ತಾನೆ.
ನಿಧಿಗೆ ಸಂಬಂಧಿಸಿದಂತೆ ಇಬ್ಬರು ಅಥವಾ ಹೆಚ್ಚಿನವರು ಮಾಲೀಕತ್ವದ ಹಕ್ಕು ಮಂಡಿಸಿದರೆ, ಸಿವಿಲ್ ನ್ಯಾಯಾಲಯದ ತೀರ್ಪು ಬರುವವರೆಗೆ ನಿಧಿಯನ್ನು ಸಂರಕ್ಷಿಸುವ ಜವಾಬ್ದಾರಿ ಜಿಲ್ಲಾಧಿಕಾರಿಯದ್ದಾಗಿರುತ್ತದೆ. ಮಾಲೀಕರನ್ನು ಗುರುತಿಸಲು ಸಾಧ್ಯವಾಗದಿದ್ದರೆ ಅಥವಾ ನಿಧಿಗೆ ಹೆಚ್ಚಿನ ಐತಿಹಾಸಿಕ ಮೌಲ್ಯವಿದ್ದರೆ, ಸರ್ಕಾರ ಅದನ್ನು ಸ್ವಾಧೀನಪಡಿಸಿಕೊಳ್ಳಬಹುದು.
ನಿಧಿ ಸಿಕ್ಕ ವಿಷಯವನ್ನು ವರದಿ ಮಾಡದೇ ಮರೆಮಾಡುವುದು ಅಥವಾ ಮಾರಾಟ ಮಾಡುವುದು ಅಪರಾಧವಾಗಿದ್ದು, ಜೈಲು ಶಿಕ್ಷೆ ಅಥವಾ ದಂಡ ವಿಧಿಸಲಾಗುತ್ತದೆ. 100 ವರ್ಷಕ್ಕಿಂತ ಹಳೆಯ ವಸ್ತುಗಳನ್ನು ‘ಪ್ರಾಚೀನ ವಸ್ತುಗಳು ಮತ್ತು ಕಲಾನಿಧಿಗಳ ಕಾಯ್ದೆ–1972’ ಅಡಿಯಲ್ಲಿ ನಿಯಂತ್ರಿಸಲಾಗುತ್ತದೆ. ಈ ಕಾಯ್ದೆಯ ಉದ್ದೇಶ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪುರಾತತ್ವ ಮಹತ್ವದ ವಸ್ತುಗಳನ್ನು ಸಂರಕ್ಷಿಸುವುದಾಗಿದೆ.
ಲಕ್ಕುಂಡಿಯಲ್ಲಿ ಉತ್ಖನನಕ್ಕೆ ಚಾಲನೆ
ಜನವರಿ 10ರಂದು ಲಕ್ಕುಂಡಿಯಲ್ಲಿ ಪ್ರಾಚೀನ ಆಭರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ಜನವರಿ 16ರಿಂದ ಈ ಸ್ಥಳದಲ್ಲಿ ಉತ್ಖನನ ಆರಂಭಿಸಲು ನಿರ್ಧರಿಸಿದೆ. ಜೊತೆಗೆ ಮುಕ್ತ ವಸ್ತುಸಂಗ್ರಹಾಲಯ ಸ್ಥಾಪಿಸಲು ಖಾಸಗಿ ಮಾಲೀಕರಿಂದ ಮೂರು ಎಕರೆ ಭೂಮಿಯನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ.
ಗದಗದ ಲಕ್ಕುಂಡಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಹಾಗೂ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಮಂಗಳವಾರ ರಾತ್ರಿ ಪುರಾತತ್ವ ಅಧಿಕಾರಿಗಳಾದ ಆರ್. ಶೇಜೇಶ್ವರ್ ಮತ್ತು ರಮೇಶ್ ಮೂಲಿಮನಿ ಅವರಿಗೆ ಆಭರಣಗಳ ಫೋಟೋಗಳು ಮತ್ತು ವೀಡಿಯೊಗಳನ್ನು ಹಸ್ತಾಂತರಿಸಿದ್ದಾರೆ.
“ಈ ಮೊದಲು ಆಭರಣಗಳ ತೂಕವನ್ನು ಮಾತ್ರ ದಾಖಲಿಸಲಾಗಿತ್ತು. ನಂತರ ಎಲ್ಲಾ ವಸ್ತುಗಳ ಉದ್ದ ಮತ್ತು ಅಗಲವನ್ನು ಫೋಟೋಗಳು ಹಾಗೂ ವೀಡಿಯೊಗಳೊಂದಿಗೆ ದಾಖಲಿಸಲಾಗಿದೆ. ಪುರಾತತ್ವ ಇಲಾಖೆಯ ವರದಿ ಬಂದ ಬಳಿಕ ಜಿಲ್ಲಾಡಳಿತ ಅಧಿಸೂಚನೆ ಹೊರಡಿಸುತ್ತದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದರ ನಡುವೆ, ಪ್ರವಾಸೋದ್ಯಮ ಇಲಾಖೆಯ ಜಂಟಿ ಕಾರ್ಯದರ್ಶಿ ಎನ್. ಪುಷ್ಪಾ ಅವರು, ಉತ್ಖನನ ಸ್ಥಳದ ಪಕ್ಕದಲ್ಲಿರುವ ಮೂರು ಎಕರೆ ಭೂಮಿಯನ್ನು 1.6 ಕೋಟಿ ರೂ. ವೆಚ್ಚದಲ್ಲಿ ಖರೀದಿಸುವ ಪ್ರಸ್ತಾವನೆಯನ್ನು ಸರ್ಕಾರ ಅನುಮೋದಿಸಿದೆ ಎಂದು ಹೇಳಿದ್ದಾರೆ.
ನವೆಂಬರ್ 2024ರಲ್ಲಿ ಪತ್ತೆಯಾದ 1,300ಕ್ಕೂ ಹೆಚ್ಚು ಪ್ರಾಚೀನ ವಸ್ತುಗಳನ್ನು ಸಂರಕ್ಷಿಸಲು ಈ ಮುಕ್ತ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗುತ್ತಿದೆ. ವೀರಭದ್ರೇಶ್ವರ ದೇವಾಲಯದ ಆವರಣದಲ್ಲಿ ಉತ್ಖನನ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಅನುಮತಿ ನೀಡಿದ್ದು, ಹಿರಿಯ ಪುರಾತತ್ವಶಾಸ್ತ್ರಜ್ಞ ಟಿ.ಎಂ. ಕೇಶವ್ ಅವರನ್ನು ನಿರ್ದೇಶಕರಾಗಿ ಮತ್ತು ಆರ್. ಶೇಜೇಶ್ವರ್ ಅವರನ್ನು ಸಹ-ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.