×
Ad

Maharashtra ಸ್ಥಳೀಯ ಸಂಸ್ಥೆ ಚುನಾವಣೆ | ಪ್ರತಿ ಮುಂಬೈಕರ್‌ ಗೆ ಒಂದು ಮತವಾದರೆ, ಪುಣೆ ನಿವಾಸಿಗಳಿಗೆ ಮಾತ್ರ ನಾಲ್ಕು ಮತಗಳು!

ಕಾರಣವೇನು ಗೊತ್ತೆ?

Update: 2026-01-15 20:15 IST

Photo Credit : NDTV 

ಮುಂಬೈ: ಗುರುವಾರ ಪ್ರಾರಂಭಗೊಂಡಿರುವ ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣೆಯ ಮತದಾನದಲ್ಲಿ ಪ್ರತಿಯೊಬ್ಬ ಮುಂಬೈ ನಿವಾಸಿ ಒಂದೊಂದು ಮತವನ್ನು ಮಾತ್ರ ಚಲಾಯಿಸುತ್ತಿದ್ದರೆ, ಮತ್ತೊಂದೆಡೆ ಪುಣೆ, ನವಿ ಮುಂಬೈ, ಥಾಣೆ ಸೇರಿದಂತೆ ಇನ್ನಿತರ 25 ನಗರಗಳಲ್ಲಿ ಬಹುಸದಸ್ಯ ವಾರ್ಡ್ ವ್ಯವಸ್ಥೆಯನ್ನು ಜಾರಿಗೊಳಿಸಿರುವುದರಿಂದ, ಅಲ್ಲಿನ ಮತದಾರರು ಮೂರು ಅಥವಾ ನಾಲ್ಕು ಮತಗಳನ್ನು ಚಲಾಯಿಸಲಿದ್ದಾರೆ.

ಈ ವ್ಯವಸ್ಥೆಯಡಿ ಪ್ರತಿ ನಗರ ಪಾಲಿಕೆ ವಾರ್ಡ್‌ ಒಂದೇ ಸದಸ್ಯನ ಬದಲು ಮೂರರಿಂದ ನಾಲ್ಕು ಕಾರ್ಪೊರೇಟರ್‌ಗಳನ್ನು ಚುನಾಯಿಸಲಿದೆ. ಉದಾಹರಣೆಗೆ, ಪುಣೆ ನಗರ ಪಾಲಿಕೆಯಲ್ಲಿ 41 ವಾರ್ಡ್‌ಗಳಿವೆ. ಪ್ರತಿ ವಾರ್ಡ್‌ ನಾಲ್ಕು ಕಾರ್ಪೊರೇಟರ್‌ಗಳನ್ನು ಆಯ್ಕೆ ಮಾಡಲಿದ್ದು, ಸಾಮಾನ್ಯ ಸಭೆ ಒಟ್ಟು 162 ಸದಸ್ಯರನ್ನು ಹೊಂದಿರಲಿದೆ. ಹೀಗಾಗಿ ಇಲ್ಲಿ ಪ್ರತಿ ಮತದಾರನೂ ಒಂದಕ್ಕಿಂತ ಹೆಚ್ಚು ಮತಗಳನ್ನು ಚಲಾಯಿಸಲಿದ್ದಾನೆ.

ಚುನಾವಣಾಧಿಕಾರಿಗಳ ಪ್ರಕಾರ, ತೀವ್ರ ಜನಸಾಂದ್ರತೆ ಹೊಂದಿರುವ ಪಟ್ಟಣ ಪ್ರದೇಶಗಳಲ್ಲಿ ಸೂಕ್ತ ಪ್ರಾತಿನಿಧ್ಯ ಒದಗಿಸುವ ಉದ್ದೇಶದಿಂದ ಈ ಬಹುಸದಸ್ಯ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದರನ್ವಯ ವಾರ್ಡ್‌ಗಳ ಸಂಖ್ಯೆಯನ್ನು ತಗ್ಗಿಸಿ, ಅದೇ ವಾರ್ಡ್‌ನಿಂದ ಒಂದಕ್ಕಿಂತ ಹೆಚ್ಚು ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅವಕಾಶ ನೀಡಲಾಗಿದೆ. ಆದರೆ, ಇದರಿಂದ ದೊಡ್ಡ ಪಕ್ಷಗಳಿಗೆ ಅನುಕೂಲವಾಗಲಿದ್ದು, ಮತದಾರರನ್ನು ಗೊಂದಲಗೊಳಿಸಲಿದೆ ಎಂದು ಈ ವ್ಯವಸ್ಥೆಯ ಟೀಕಾಕಾರರು ಅಭಿಪ್ರಾಯಪಟ್ಟಿದ್ದಾರೆ.

ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಮತ ಚಲಾಯಿಸುವಂತೆಯೇ ಈ ಚುನಾವಣೆಯಲ್ಲೂ ಅಭ್ಯರ್ಥಿಯ ಹೆಸರಿನ ಮುಂದಿರುವ ಗುಂಡಿಯನ್ನು ಮತದಾರರು ಒತ್ತಲಿದ್ದಾರೆ. ಆದರೆ, ಈ ಮತಯಂತ್ರವು ಅಗತ್ಯವಿದ್ದರೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಪ್ರಾತಿನಿಧ್ಯದ ಮತಗಳನ್ನು ಚಲಾಯಿಸಲು ಮತದಾರರಿಗೆ ಅವಕಾಶ ಒದಗಿಸಲಿದೆ. ಅಗತ್ಯವಿರುವ ಎಲ್ಲ ಮತಗಳನ್ನು ಚಲಾಯಿಸುವವರೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಂಬೈನಲ್ಲಿ ಮಾತ್ರ ಮತದಾರರು ತಲಾ ಕೇವಲ ಒಂದು ಮತವನ್ನೇ ಚಲಾಯಿಸಲಿದ್ದಾರೆ. ಇಲ್ಲಿ ಪ್ರತಿ ವಾರ್ಡ್‌ ಒಬ್ಬ ಕಾರ್ಪೊರೇಟರ್‌ನ್ನು ಮಾತ್ರ ಆಯ್ಕೆ ಮಾಡಲಿದೆ. ಬೃಹನ್ ಮುಂಬೈ ನಗರ ಪಾಲಿಕೆಯಡಿ 227 ವಾರ್ಡ್‌ಗಳಿದ್ದು, ಇದರರ್ಥ ಬೃಹನ್ ಮುಂಬೈ ನಗರ ಪಾಲಿಕೆಗೆ 227 ಸದಸ್ಯರು ಮಾತ್ರ ಆಯ್ಕೆಯಾಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News