ಪ್ರಶಸ್ತಿ ಗೆದ್ದ ಸಿಂಧು–ಲಕ್ಷ್ಯ; ಬ್ಯಾಡ್ಮಿಂಟನ್ ಆಟಗಾರರಿಗೆ ಕೊನೇ ಕ್ಷಣದಲ್ಲಿ ಅನುದಾನ ಕಡಿತ
ಪಿ ವಿ ಸಿಂಧು | Photo Credit : PTI
ಫಿನ್ ಲ್ಯಾಂಡ್, ಡೆನ್ಮಾರ್ಕ್, ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ನಡೆದ ನಾಲ್ಕು ಟೂರ್ನಿಗಳ ಯುರೋಪ್ ಪ್ರವಾಸಕ್ಕೆ ಅನುದಾನ ನೀಡಲು ಭಾರತೀಯ ಕ್ರೀಡಾ ಪ್ರಾಧಿಕಾರ (SAI) ನಿರಾಕರಿಸಿತ್ತು!
ಕಳೆದ ರವಿವಾರ ಜರ್ಮನಿಯ ಸಾರ್ಬ್ರುಕನ್ ನಲ್ಲಿ ನಡೆದ ಹೈಲೋ ಓಪನ್ ಟೂರ್ನಿಯಲ್ಲಿ ಪಿ.ವಿ. ಸಿಂಧು ಮತ್ತು ಲಕ್ಷ್ಯ ಸೇನ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ಮೂಲಕ ಭಾರತೀಯ ಬ್ಯಾಡ್ಮಿಂಟನ್ಗೆ ಸಂಭ್ರಮದ ಕ್ಷಣಗಳನ್ನು ತಂದಿದ್ದಾರೆ. ಆದರೆ, ಇದಕ್ಕೂ ಕೆಲವು ವಾರಗಳ ಮೊದಲು ಆಡಳಿತಾತ್ಮಕ ವಿವಾದದ ಕಾರಣ ಕೊನೆಯ ಕ್ಷಣದಲ್ಲಿ ಆರ್ಥಿಕ ನೆರವು ಹಿಂಪಡೆಯಲಾಗಿತ್ತು. ಇದರಿಂದ ಭಾರತೀಯ ಆಟಗಾರರು ಯುರೋಪ್ ಪ್ರವಾಸದ ವೆಚ್ಚವನ್ನು ಸ್ವತಃ ಭರಿಸಬೇಕಾದ ಪರಿಸ್ಥಿತಿ ಎದುರಾಗಿತ್ತು.
ಫಿನ್ ಲ್ಯಾಂಡ್, ಡೆನ್ಮಾರ್ಕ್, ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ಸತತವಾಗಿ ನಡೆದ ನಾಲ್ಕು ಟೂರ್ನಿಗಳನ್ನು ಒಳಗೊಂಡಿದ್ದ ಭಾರತೀಯ ತಂಡದ ಯುರೋಪ್ ಪ್ರವಾಸಕ್ಕೆ ಹಣಕಾಸಿನ ನೆರವು ನೀಡಲು ಭಾರತೀಯ ಕ್ರೀಡಾ ಪ್ರಾಧಿಕಾರ (SAI) ನಿರಾಕರಿಸಿತ್ತು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಅಕ್ಟೋಬರ್ 6ರಂದು ಫಿನ್ ಲ್ಯಾಂಡ್ನ ವಾಂಟಾದಲ್ಲಿ ಆರ್ಕ್ಟಿಕ್ ಓಪನ್ ಟೂರ್ನಿ ಆರಂಭವಾಗುವ ಕೆಲವೇ ದಿನಗಳ ಮೊದಲು ಆಟಗಾರರಿಗೆ ಈ ನಿರ್ಧಾರ ತಿಳಿಸಲಾಗಿತ್ತು.
"ಈ ವಿಷಯ ತಿಳಿದಾಗ ಆಘಾತವಾಗಿತ್ತು. ಹಣಕಾಸಿನ ನೆರವು ಏಕೆ ಸಿಗಲಿಲ್ಲ ಎಂದು ಆಶ್ಚರ್ಯಪಟ್ಟೆ. ಇಂತಹ ಪರಿಸ್ಥಿತಿಯನ್ನು ಹಿಂದೆಂದೂ ಎದುರಿಸಿರಲಿಲ್ಲ. ಸ್ವಂತವಾಗಿ ಸ್ವಲ್ಪ ಹಣಕಾಸಿನ ವ್ಯವಸ್ಥೆ ಮಾಡಿಕೊಂಡೆ. ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ಕೂಡ ನನಗೆ ನೆರವು ನೀಡಿತು" ಎಂದು ಸಿಂಧು ಹೇಳಿರುವುದಾಗಿ ವರದಿಯಾಗಿದೆ.
ಈ ಕ್ರೀಡೆಯ ನಿರ್ವಹಣೆಯಲ್ಲಿ ತೊಡಗಿರುವ ಮೂವರು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿರುವ ಪ್ರಕಾರ, ಏಷ್ಯನ್ ಗೇಮ್ಸ್ನಲ್ಲಿ ಭಾರತದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಅನುದಾನ ಹಿಂಪಡೆಯಲಾಗಿರಬಹುದು. ಐಚಿ–ನಗೋಯದಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಭಾರತೀಯ ಆಟಗಾರರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. 2014ರ ನಂತರ ಇದೇ ಮೊದಲ ಬಾರಿಗೆ ಭಾರತೀಯ ಆಟಗಾರರು ಯಾವುದೇ ವೈಯಕ್ತಿಕ ಬ್ಯಾಡ್ಮಿಂಟನ್ ಪದಕವಿಲ್ಲದೆ ವಾಪಸಾಗಿದ್ದರು.
ಆದರೆ, ಅನುದಾನ ಕಡಿತಕ್ಕೂ ಕ್ರೀಡಾಪಟುಗಳ ಪ್ರದರ್ಶನಕ್ಕೂ ಯಾವುದೇ ಸಂಬಂಧವಿಲ್ಲ ಎಂದು SAIಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ (BAI) ನಿಗದಿತ ಸಮಯದೊಳಗೆ ಪ್ರಸ್ತಾವನೆ ಸಲ್ಲಿಸದ ಕಾರಣ ಅನುದಾನ ಬಿಡುಗಡೆಯಾಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಹಿಂದಿನ ನಿಯಮಗಳ ಪ್ರಕಾರ, ಕ್ರೀಡಾ ಒಕ್ಕೂಟಗಳು ಕ್ರೀಡಾಪಟುಗಳ ಹೆಸರುಗಳಿಲ್ಲದೆ 90 ದಿನಗಳ ಮುಂಚಿತವಾಗಿ ಹಾಗೂ ಹೆಸರುಗಳ ಸಹಿತ 60 ದಿನಗಳ ಮುಂಚಿತವಾಗಿ ಪ್ರಸ್ತಾವನೆ ಸಲ್ಲಿಸಬೇಕಿತ್ತು. ಇದರಿಂದ ಪ್ರವಾಸದ ಯೋಜನೆಯನ್ನು ಸಾಕಷ್ಟು ಮುಂಚಿತವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತಿತ್ತು.
ಆದರೆ, ಅಷ್ಟು ಮುಂಚಿತವಾಗಿ ಕ್ರೀಡಾಪಟುಗಳ ಹೆಸರುಗಳನ್ನು ನೀಡಲು ಸಾಧ್ಯವಿಲ್ಲ ಎಂದು ಒಕ್ಕೂಟ ತಿಳಿಸಿದ್ದರಿಂದ ಗಡುವನ್ನು 30 ದಿನಗಳಿಗೆ ಇಳಿಸಲಾಗಿತ್ತು. ಈ ಬದಲಾವಣೆಯ ನಂತರವೂ BAI ಪ್ರಸ್ತಾವನೆ ಸಲ್ಲಿಸಿರಲಿಲ್ಲ. ಹೊಸ ಮಾರ್ಗಸೂಚಿಗಳು ಎಲ್ಲ ಕ್ರೀಡಾ ಒಕ್ಕೂಟಗಳಿಗೂ ಅನ್ವಯಿಸುತ್ತವೆ. ಪಂದ್ಯಾವಳಿ ಆರಂಭಕ್ಕೆ ಕನಿಷ್ಠ 30 ದಿನಗಳ ಮೊದಲು ಕ್ರೀಡಾಪಟುಗಳ ಹೆಸರುಗಳನ್ನೊಳಗೊಂಡ ಪ್ರಸ್ತಾವನೆ ಸಲ್ಲಿಕೆಯಾಗದಿದ್ದರೆ ಅದನ್ನು ಪರಿಗಣಿಸುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬರುವ ಪಂದ್ಯಾವಳಿಗಳಿಗೆ ಅನುದಾನವನ್ನು ಮತ್ತೆ ಒದಗಿಸಲಾಗುವುದು. ಆದರೆ, ಕಳೆದ ನಾಲ್ಕು ವಾರಗಳಲ್ಲಿ ಆಟಗಾರರು ಸ್ವಂತವಾಗಿ ಭರಿಸಿದ ವೆಚ್ಚವನ್ನು ಮರುಪಾವತಿಸಲಾಗುವುದಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.
BAI ವಾಟ್ಸ್ಆ್ಯಪ್ ಸಂದೇಶದ ಮೂಲಕ ಆಟಗಾರರಿಗೆ ಅನುದಾನ ಕಡಿತದ ವಿಷಯ ತಿಳಿಸಿತ್ತು. ಫಿನ್ ಲ್ಯಾಂಡ್ನಲ್ಲಿ ನಡೆಯಲಿದ್ದ ಮೊದಲ ಪಂದ್ಯಾವಳಿಗೆ ವಸತಿ ವ್ಯವಸ್ಥೆಯನ್ನು ಒಕ್ಕೂಟವೇ ಮಾಡಿಕೊಡಲಿದೆ. ಆದರೆ, ಉಳಿದ ಪಂದ್ಯಾವಳಿಗಳಿಗೆ ಪ್ರಯಾಣ, ಊಟ, ವಸತಿ ಸೇರಿದಂತೆ ಇತರ ವೆಚ್ಚಗಳನ್ನು ಆಟಗಾರರೇ ಭರಿಸಬೇಕೆಂದು ತಿಳಿಸಿತ್ತು.
ಆರ್ಥಿಕ ಸಂಕಷ್ಟದಿಂದಾಗಿ ಕೆಲವು ಆಟಗಾರರು ತಮ್ಮ ತರಬೇತುದಾರರಿಲ್ಲದೆಯೇ ಪಂದ್ಯಾವಳಿಗಳಲ್ಲಿ ಭಾಗವಹಿಸಬೇಕಾಯಿತು. ಫ್ರೆಂಚ್ ಓಪನ್ ನಲ್ಲಿ ಅಕಾನೆ ಯಮಗುಚಿ ಅವರನ್ನು ಸೋಲಿಸುವಾಗ ಅಶ್ಮಿತಾ ಚಲಿಹಾ ಅವರೊಂದಿಗೆ ಸಹ ಆಟಗಾರ್ತಿ ಇಶರಾನಿ ಬರುವಾ ಇದ್ದರು. ಅವರು ಅಶ್ಮಿತಾಗೆ ತರಬೇತುದಾರರ ಪಾತ್ರವನ್ನೂ ನಿರ್ವಹಿಸಿದರು. ಡೆನ್ಮಾರ್ಕ್ನಲ್ಲಿ ಕ್ವಾರ್ಟರ್ಫೈನಲ್ ತಲುಪಿದ್ದ ತನ್ವಿ ಶರ್ಮಾ ಅವರಿಗೆ ಪಂದ್ಯದ ವೇಳೆ ಮಾರ್ಗದರ್ಶನ ನೀಡಲು ತರಬೇತುದಾರರೂ ಇರಲಿಲ್ಲ.
ಫಿನ್ ಲ್ಯಾಂಡ್ನಲ್ಲಿ ನಡೆದ ಆರ್ಕ್ಟಿಕ್ ಓಪನ್ ನಲ್ಲಿ 26 ಸದಸ್ಯರ ಭಾರತೀಯ ತಂಡ ಭಾಗವಹಿಸಿತ್ತು. ಆದರೆ, ಓಡೆನ್ಸ್ನಲ್ಲಿ ನಡೆದ ಡೆನ್ಮಾರ್ಕ್ ಓಪನ್ ನಿಂದ ಆರು ಆಟಗಾರರು, ಪ್ಯಾರಿಸ್ನಲ್ಲಿ ನಡೆದ ಫ್ರೆಂಚ್ ಓಪನ್ ನಿಂದ ಏಳು ಆಟಗಾರರು ಹಾಗೂ ಕಳೆದ ವಾರ ನಡೆದ ಹೈಲೋ ಓಪನ್ ನಿಂದ ಒಂಬತ್ತು ಆಟಗಾರರು ಹಿಂದೆ ಸರಿದಿದ್ದರು.
ಆರ್ಥಿಕ ಅನಿಶ್ಚಿತತೆಯ ನಡುವೆಯೂ ಭಾರತೀಯ ಆಟಗಾರರು ಯುರೋಪ್ ಪ್ರವಾಸದಲ್ಲಿ ಗಮನಾರ್ಹ ಪ್ರದರ್ಶನ ನೀಡಿದರು. ಸಿಂಧು 'ಸೂಪರ್ 750 ಫ್ರೆಂಚ್ ಓಪನ್'ನ ಫೈನಲ್ ತಲುಪಿದ್ದರು. ಆದರೆ, ಫೈನಲ್ನಲ್ಲಿ ಆನ್ ಸೆ-ಯಂಗ್ ವಿರುದ್ಧ ಸೋಲು ಕಂಡಿದ್ದರು. ಅಶ್ಮಿತಾ ಚಲಿಹಾ ಫ್ರೆಂಚ್ ಓಪನ್ ನಲ್ಲಿ ವಿಶ್ವದ ಮೂರನೇ ಶ್ರೇಯಾಂಕದ ಆಟಗಾರ್ತಿ ಅಕಾನೆ ಯಮಗುಚಿ ಅವರನ್ನು ಸೋಲಿಸಿ ಗಮನ ಸೆಳೆದಿದ್ದರು. ಅನ್ಮೋಲ್ ಖರ್ಬ್ ಹೈಲೋ ಓಪನ್ ನ ಸೆಮಿಫೈನಲ್ ತಲುಪಿದ್ದರು.
ಇನ್ನು, ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆಲ್ಲುವ ಮೂಲಕ ದೀರ್ಘಕಾಲದ ಪ್ರಶಸ್ತಿ ಬರ ನೀಗಿಸಿಕೊಂಡರು. ಸಿಂಧು ಈ ವರ್ಷ ಎರಡನೇ ಪ್ರಶಸ್ತಿ ಗೆದ್ದುಕೊಂಡರು. ಹೈಲೋ ಓಪನ್ ನಲ್ಲಿನ ಗೆಲುವಿನಿಂದಾಗಿ ಸಿಂಧು ಈ ವರ್ಷದ ಅಂತಿಮ ಟೂರ್ನಿಯಾದ 'ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್'ಗೆ ಅರ್ಹತೆ ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ, ವಿಶ್ವ ಶ್ರೇಯಾಂಕದಲ್ಲಿ ಆರನೇ ಸ್ಥಾನಕ್ಕೇರಿದ್ದಾರೆ.