AI ಕಾಲದಲ್ಲೂ ಐಐಟಿ ವಿದ್ಯಾರ್ಥಿಗಳಿಗೆ ಶಾಸ್ತ್ರ ಅಧ್ಯಯನ! ವೈರಲ್ ಆದ IISC ಪ್ರಾಧ್ಯಾಪಕರ ಭಾಷಣ
Photo Credit : X \ @xshroti
JEE ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಸೇರಿದಂತೆ ಐಐಟಿ ಸಂಸ್ಥೆಗಳ ಕೆಲವು ವಿದ್ಯಾರ್ಥಿಗಳು ಸಂಸ್ಕೃತ ಮತ್ತು ಶಾಸ್ತ್ರಗಳು ತಮ್ಮ ಬೌದ್ಧಿಕ ಅನ್ವೇಷಣೆಯ ಭಾಗವಾಗಬೇಕಾದ ಅಗತ್ಯವೇನು ಎಂಬುದನ್ನು ತಿಳಿಯಲು ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಪ್ರಾಧ್ಯಾಪಕ ಪ್ರತೋಷ್ ಎಪಿ ಹೇಳಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಕಂಪ್ಯೂಟರ್ ವಿಜ್ಞಾನದ ಪ್ರಾಮುಖ್ಯತೆ ಹೆಚ್ಚುತ್ತಿರುವ ಕಾಲದಲ್ಲಿ ಭಾರತೀಯ ಸಾಂಪ್ರದಾಯಿಕ ಜ್ಞಾನ ಪರಂಪರೆಯ ಪ್ರಸ್ತುತತೆಯನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISc) ಪ್ರಾಧ್ಯಾಪಕ ಪ್ರತೋಷ್ ಎಪಿ ಅವರು ಬೋಧಿಸುತ್ತಿದ್ದಾರೆ. ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೊವೊಂದರಲ್ಲಿ, ತಮ್ಮ ಮಾರ್ಗದರ್ಶನದಲ್ಲಿ ‘ಶಾಸ್ತ್ರ’ಗಳನ್ನು ಅಧ್ಯಯನ ಮಾಡುತ್ತಿರುವ ಐಐಟಿ ವಿದ್ಯಾರ್ಥಿಗಳ ಉದಾಹರಣೆ ನೀಡಿರುವ ಅವರು, ಇಂತಹ ಅಧ್ಯಯನವು ಕೇವಲ ಭೌತಿಕ ಯಶಸ್ಸಿನ ಬೆನ್ನಟ್ಟುವಿಕೆಯನ್ನು ಮೀರಿ ಆಳವಾದ ಬೌದ್ಧಿಕ ತಿಳುವಳಿಕೆ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ. ಅವರ ಹೇಳಿಕೆ ಇದೀಗ ವೈರಲ್ ಆಗಿದ್ದು, ಪರ-ವಿರೋಧದ ಟೀಕೆಗಳು ವ್ಯಕ್ತವಾಗುತ್ತಿವೆ.
ವೈದಿಕ ಶಿಕ್ಷಣದ ಪ್ರಸ್ತುತತೆಯ ಬಗ್ಗೆ ಅವರು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಪೋಸ್ಟ್ಗಳನ್ನು ಮಾಡುತ್ತಾ ಬಂದಿದ್ದಾರೆ. JEE ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಸೇರಿದಂತೆ ಐಐಟಿ ಸಂಸ್ಥೆಗಳ ಕೆಲವು ವಿದ್ಯಾರ್ಥಿಗಳು ಸಂಸ್ಕೃತ ಮತ್ತು ಶಾಸ್ತ್ರಗಳು ತಮ್ಮ ಬೌದ್ಧಿಕ ಅನ್ವೇಷಣೆಯ ಭಾಗವಾಗಬೇಕಾದ ಅಗತ್ಯವೇನು ಎಂಬುದನ್ನು ತಿಳಿಯಲು ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಪ್ರಾಧ್ಯಾಪಕ ಪ್ರತೋಷ್ ಎಪಿ ಹೇಳಿದ್ದಾರೆ. “ನನ್ನ ಕೆಲವು ಐಐಟಿ ವಿದ್ಯಾರ್ಥಿಗಳು ಇಂದು ನನ್ನೊಂದಿಗೆ ಶಾಸ್ತ್ರಗಳನ್ನು ಅಧ್ಯಯನ ಮಾಡುತ್ತಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ತಮ್ಮ ಬಳಿ ಐದು ವರ್ಷಗಳ ಕಾಲ ನ್ಯಾಯಶಾಸ್ತ್ರವನ್ನು ಅಧ್ಯಯನ ಮಾಡಿದ ವಿದ್ಯಾರ್ಥಿಯೊಬ್ಬರ ಉದಾಹರಣೆಯನ್ನೂ ಅವರು ವಿವರಿಸಿದ್ದಾರೆ. “ನೀವು ಹೇಳುತ್ತಿರುವುದು ತಪ್ಪು ಎಂದು ಸಾಬೀತುಪಡಿಸಲು ನಾನು ನಿಮ್ಮ ಬಳಿ ಕಲಿಯಲು ಬರುತ್ತೇನೆ ಮತ್ತು 10 ವರ್ಷಗಳ ಕಾಲ ನಿಮ್ಮೊಂದಿಗೆ ಇರುತ್ತೇನೆ” ಎಂದು ಆ ವಿದ್ಯಾರ್ಥಿ ಹೇಳಿದ್ದರು. ಇಂತಹ ದೃಷ್ಟಿಕೋನವನ್ನು ತಾವು ಸ್ವಾಗತಿಸುವುದಾಗಿ ಪ್ರತೋಷ್ ಹೇಳಿದ್ದಾರೆ. ವಿದ್ಯಾರ್ಥಿಗಳು ಬೌದ್ಧಿಕ ವಿಚಾರಣೆ ಮತ್ತು ತಾರ್ಕಿಕ ಚಿಂತನೆಯ ಮೂಲಕ ಅಂತಿಮವಾಗಿ ಭೌತಿಕವಾದಿ ತೀರ್ಮಾನಗಳಿಗೆ ಬಂದರೂ ತಮಗೆ ಯಾವುದೇ ಅಭ್ಯಂತರವಿಲ್ಲ ಎಂದು ಅವರು ತಿಳಿಸಿದ್ದಾರೆ.
“ಅವರು ಅಂತಿಮವಾಗಿ ಚಾರ್ವಕರಾಗಿ (ಭೌತಿಕವಾದಿ) ಬದಲಾದರೂ ನನಗೆ ಚಿಂತೆಯಿಲ್ಲ. ಕನಿಷ್ಠ ಅವರು ಅತ್ಯುತ್ತಮ ಬೌದ್ಧಿಕ ಮತ್ತು ತಾರ್ಕಿಕ ತೀರ್ಮಾನಗಳನ್ನು ಹೊಂದಿರುವ ಶ್ರೇಷ್ಠ ಚಾರ್ವಕರಾಗುತ್ತಾರೆ” ಎಂದು ಅವರು ಹೇಳಿದ್ದಾರೆ.
ಪ್ರೊಫೆಸರ್ ಪ್ರತೋಷ್ ಅವರು ಐಐಟಿ ವಿದ್ಯಾರ್ಥಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ‘ಯಶಸ್ಸಿನ’ ಕಲ್ಪನೆಯನ್ನು ಪ್ರಶ್ನಿಸಿದ್ದಾರೆ. ಉನ್ನತ ಶಿಕ್ಷಣ ಸಂಸ್ಥೆಗೆ ಪ್ರವೇಶ ಪಡೆಯುವುದು, ಉತ್ತಮ ಉದ್ಯೋಗ ಗಳಿಸುವುದು ಮತ್ತು ಭೌತಿಕ ಸಂಪತ್ತನ್ನು ಸಂಪಾದಿಸುವುದರ ಸುತ್ತಲೇ ಅವರ ಯಶಸ್ಸಿನ ಪರಿಕಲ್ಪನೆ ಇರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಶಾಸ್ತ್ರಗಳ ಅಧ್ಯಯನವು ವಿದ್ಯಾರ್ಥಿಗಳಿಗೆ ಇಂತಹ ಸೀಮಿತ ಗುರಿಗಳನ್ನು ಮೀರಿ ಜೀವನದ ಬಗ್ಗೆ ಆಳವಾದ ಬೌದ್ಧಿಕ ತಿಳುವಳಿಕೆ ಮತ್ತು ವಿಶಾಲ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಶಾಸ್ತ್ರಗಳು ಒದಗಿಸುವ ಜ್ಞಾನ ಮತ್ತು ತಾರ್ಕಿಕ ಚಿಂತನೆಯು ಆಧುನಿಕ ವಿಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ (AI) ಬಳಕೆಯನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಮಾರ್ಗದರ್ಶನ ನೀಡಬಲ್ಲದು ಎಂದು ಸಲಹೆ ನೀಡಿದ್ದಾರೆ.
ಅವರ ಭಾಷಣದ ಬಹುಭಾಗವು ಕೃತಕ ಬುದ್ಧಿಮತ್ತೆ ಮತ್ತು ಅದರ ಅಭಿವೃದ್ಧಿಯಿಂದ ಸಮಾಜದ ಮುಂದೆ ಎದುರಾಗುವ ಪ್ರಶ್ನೆಗಳ ಕುರಿತಾಗಿತ್ತು. AI ಅನ್ನು ಮಾನವರು ಇನ್ನೂ ನಿಭಾಯಿಸಲು ಕಲಿಯುತ್ತಿರುವ ಪ್ರಬಲ ಶಕ್ತಿ ಎಂದು ಬಣ್ಣಿಸಿದ ಪ್ರತೋಷ್, ಇಂತಹ ತಂತ್ರಜ್ಞಾನಗಳನ್ನು ಹೇಗೆ ಬಳಸಬೇಕು ಎಂಬುದನ್ನು ಪರಿಗಣಿಸಲು ಶಾಸ್ತ್ರಗಳ ಅಧ್ಯಯನವು ಚೌಕಟ್ಟೊಂದನ್ನು ಒದಗಿಸಬಲ್ಲದು ಎಂದು ಹೇಳಿದ್ದಾರೆ.
ಮಹಾಭಾರತದ ಉದಾಹರಣೆ ನೀಡಿದ ಅವರು, ಮಾನವ ಜೀವನದ ಒಳಿತಿಗೆ ಪೂರಕವಾಗುವ ರೀತಿಯಲ್ಲಿ ಆಲ್ಗಾರಿದಂಗಳನ್ನು ರೂಪಿಸಬೇಕು ಎಂದು ಹೇಳಿದರು. ಭಾಷೆ ಮತ್ತು ಗಣಿತೀಯ 'ಎಂಬೆಡಿಂಗ್'ಗಳ (mathematical embeddings) ಮೂಲಕ ಪದಗಳನ್ನು ಪ್ರತಿನಿಧಿಸುವ ವಿಧಾನದ ನಡುವಿನ ಸಂಬಂಧವನ್ನು ವಿವರಿಸುವ ಸಂದರ್ಭದಲ್ಲಿ, ಇಂದಿನ AI ವ್ಯವಸ್ಥೆಗಳ ಆಧಾರವಾಗಿರುವ 'ಟ್ರಾನ್ಸ್ಫಾರ್ಮರ್ ಆರ್ಕಿಟೆಕ್ಚರ್' (transformer architecture) ಬಗ್ಗೆಯೂ ಪ್ರಸ್ತಾಪಿಸಿದರು.