×
Ad

ಕುಸಿಯುತ್ತಿದ್ದ ರೂಪಾಯಿ, ಏರುತ್ತಿದ್ದ ತೈಲ ದರಕ್ಕೆ ಬ್ರೇಕ್; ಭಾರತಕ್ಕೆ ವರವಾಗಲಿದೆಯೇ ಅಮೆರಿಕ-ಇರಾನ್ ಒಪ್ಪಂದ?

Update: 2026-06-16 21:43 IST

ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ಭಾಗಿಯಾಗಿರುವ ವಿವಿಧ ದೇಶಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಹಾಗೂ 'ಹಾರ್ಮುಝ್ ಜಲಸಂಧಿ'ಯ ಮೂಲಕ ನಡೆಯುವ ಇಂಧನ ಪೂರೈಕೆಯಲ್ಲಿನ ವ್ಯತ್ಯಯಗಳಿಂದಾಗಿ ದೇಶದ ಆರ್ಥಿಕತೆಯ ಮೇಲೆ ಆಗುತ್ತಿದ್ದ ಹೊಡೆತವನ್ನು ತಿಂಗಳುಗಳಿಂದ ಭಾರತ ಅನುಭವಿಸುತ್ತಿತ್ತು. ಇದೀಗ ಇರಾನ್ ಮತ್ತು ಅಮೆರಿಕ ನಡುವೆ ಏರ್ಪಟ್ಟಿರುವ ಶಾಂತಿ ಒಪ್ಪಂದವು ಭಾರತಕ್ಕೆ ನಿರಾಳತೆ ತಂದಿದೆಯಾದರೂ, ಈ ವ್ಯವಸ್ಥೆಯ ದೀರ್ಘಕಾಲೀನ ಸುಸ್ಥಿರತೆಯ ಬಗ್ಗೆ ಕಳವಳಗಳು ಇನ್ನೂ ಉಳಿದಿವೆ.

ಕಳೆದ ಮೂರು ತಿಂಗಳಿಗೂ ಹೆಚ್ಚು ಕಾಲ ನಡೆದ ಸಂಘರ್ಷದ ನಂತರ, ಇರಾನ್ ಮತ್ತು ಅಮೆರಿಕ ರವಿವಾರ ಪಾಕಿಸ್ತಾನ ಮತ್ತು ಖತರ್ ಮಧ್ಯಸ್ಥಿಕೆಯಲ್ಲಿ ನಡೆಸಿದ ಮಾತುಕತೆಯ ವೇಳೆ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಕೊಂಡಿವೆ. ಶುಕ್ರವಾರ ಜಿನಿವಾದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಿದ್ದು, ಇರಾನ್ ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನವನ್ನು ಕೊನೆಗೊಳಿಸಲಿದೆ. ಅಲ್ಲದೆ, ಫೆಬ್ರವರಿಯಲ್ಲಿ ಸಂಘರ್ಷ ಪ್ರಾರಂಭವಾಗುವ ಮೊದಲು ಭಾರತದ ಒಟ್ಟು ತೈಲ ಆಮದಿನ ಅರ್ಧದಷ್ಟು ಭಾಗವನ್ನು ಸಾಗಿಸಲು ಬಳಸಲಾಗುತ್ತಿದ್ದ ಹಾರ್ಮುಝ್ ಜಲಸಂಧಿಯನ್ನು ಮುಕ್ತಗೊಳಿಸಲಿದೆ.

ಇತರ ಜಾಗತಿಕ ನಾಯಕರಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಈ ಶಾಂತಿ ಒಪ್ಪಂದವನ್ನು ಸ್ವಾಗತಿಸಿದ್ದಾರೆ. ಆದರೆ, ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸುವ ಹಾಗೂ ಯಾವುದೇ ಅಡೆತಡೆಯಿಲ್ಲದ ಮುಕ್ತ ವ್ಯಾಪಾರವನ್ನು ಖಚಿತಪಡಿಸುವ ಅಗತ್ಯವನ್ನು ಅವರು ಒತ್ತಿಹೇಳಿದ್ದಾರೆ. ಒಪ್ಪಂದ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ನೇತೃತ್ವದ ಒಕ್ಕೂಟವು ನಿರ್ವಹಿಸುವ 'ದಿಶಾ' ಎಂಬ ಟ್ಯಾಂಕರ್ ಹಾರ್ಮುಝ್ ಜಲಸಂಧಿಯನ್ನು ದಾಟಿ, ಖತರ್‌ ನಿಂದ 62,370 ಮೆಟ್ರಿಕ್ ಟನ್ LNG ಹೇರಿಕೊಂಡು ಗುಜರಾತ್‌ ನತ್ತ ಮುಖ ಮಾಡಿದೆ.

ಈ ಮಹತ್ವದ ಬೆಳವಣಿಗೆಯ ಹೊರತಾಗಿಯೂ, ಹಡಗು ಸಾರಿಗೆ ಸಂಸ್ಥೆಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಮತ್ತು ಎಚ್ಚರಿಕೆಯಿಂದ ಗಮನಿಸುತ್ತಿವೆ. ಇರಾನ್ ಮತ್ತು ಅಮೆರಿಕ ನಡುವಿನ ತೀವ್ರ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಈ ಶಾಂತಿ ಒಪ್ಪಂದವು ಎಷ್ಟು ದಿನ ಬಾಳಿಕೆ ಬರಬಹುದು ಎಂಬ ಆತಂಕಗಳು ಇನ್ನೂ ಇವೆ. ಹೀಗಾಗಿ, ಈ ಪ್ರಮುಖ ಜಲಮಾರ್ಗದಲ್ಲಿ ಸಾಮಾನ್ಯ ಸಂಚಾರ ವ್ಯವಸ್ಥೆ ಮರುಸ್ಥಾಪನೆಯಾಗಲು ವಾರಗಳು ಅಥವಾ ತಿಂಗಳುಗಳೇ ತೆಗೆದುಕೊಳ್ಳಬಹುದು ಎಂದು ತಜ್ಞರು ಹೇಳಿದ್ದಾರೆ.

ಇಂಧನ ಪೂರೈಕೆಗಾಗಿ ಪಶ್ಚಿಮ ಏಷ್ಯಾವನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ಭಾರತಕ್ಕೆ, ಈ ಒಪ್ಪಂದವು ತೈಲ ಮತ್ತು ಅನಿಲದ ಹೆಚ್ಚಿನ ಬೆಲೆಗಳಿಂದ ಮುಕ್ತಿ ನೀಡುವ ಭರವಸೆ ಮೂಡಿಸಿದೆ. ಅಲ್ಲದೆ, ಸಂಘರ್ಷದ ಸಮಯದಲ್ಲಿ ತೀವ್ರಗೊಂಡಿದ್ದ ರೂಪಾಯಿ ಮೇಲಿನ ಒತ್ತಡ ಮತ್ತು ಹಣದುಬ್ಬರದ ಅಪಾಯಗಳನ್ನು ಇದು ಕಡಿಮೆ ಮಾಡಲಿದೆ ಎಂದು ಆರ್ಥಿಕ ಚಿಂತಕರ ಚಾವಡಿಯಾದ 'ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್' (GTRI) ಸಂಸ್ಥಾಪಕ ಅಜಯ್ ಶ್ರೀವಾಸ್ತವ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಈ ಸಂಘರ್ಷವು ಪಶ್ಚಿಮ ಏಷ್ಯಾದ ಮೇಲಿನ ಭಾರತದ ಅತಿಯಾದ ಅವಲಂಬನೆಯನ್ನು ಬಹಿರಂಗಪಡಿಸಿದೆ. ಭಾರತವು ತನ್ನ ಒಟ್ಟು ಕಚ್ಚಾ ತೈಲದ ಸುಮಾರು ಶೇ. 50ರಷ್ಟು, ಎಲ್‌ಪಿಜಿ ಪೂರೈಕೆಯ ಶೇ. 70ರಷ್ಟು ಮತ್ತು ಎಲ್‌ಎನ್‌ಜಿ ಆಮದಿನ ಭರಪೂರ ಶೇ. 90ರಷ್ಟು ಭಾಗವನ್ನು ಇದೇ ವಲಯದಿಂದ ಪಡೆಯುತ್ತದೆ. ಈ ಬಿಕ್ಕಟ್ಟಿನ ಕಾರಣದಿಂದಾಗಿ ಭಾರತದ ತೈಲ ಶುದ್ಧೀಕರಣ ಸಂಸ್ಥೆಗಳು ವೆನೆಜುವೆಲಾದಂತಹ ದೂರದ ಮಾರುಕಟ್ಟೆಗಳಿಂದ ಪರ್ಯಾಯ ಪೂರೈಕೆಯನ್ನು ಹುಡುಕುವಂತಾಯಿತು ಎಂದು ಶ್ರೀವಾಸ್ತವ ವಿವರಿಸಿದ್ದಾರೆ.

ಅಸೋಚಾಮ್ ಅಧ್ಯಕ್ಷ ನಿರ್ಮಲ್ ಕೆ. ಮಿಂಡಾ ಅವರು ಯುಎಸ್-ಇರಾನ್ ಒಪ್ಪಂದವನ್ನು ಇಡೀ ಜಗತ್ತಿನ ಹಿತದೃಷ್ಟಿಯಿಂದ ಒಂದು "ದೊಡ್ಡ ಯಶಸ್ಸು" ಎಂದು ಶ್ಲಾಘಿಸಿದ್ದಾರೆ. ಇದೇ ವೇಳೆ, ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು ಭವಿಷ್ಯದ ಆತಂಕಗಳನ್ನು ಪ್ರಸ್ತಾಪಿಸುತ್ತಾ, "ಈ ಶಾಂತಿ ಒಪ್ಪಂದವು ದೀರ್ಘಕಾಲದವರೆಗೆ ಸ್ಥಿರವಾಗಿ ಉಳಿದರೆ ಮಾತ್ರ ವ್ಯಾಪಾರಕ್ಕೆ ಸಂಬಂಧಿಸಿದ ಅನೇಕ ಸವಾಲುಗಳು ಗಣನೀಯವಾಗಿ ಸುಲಭವಾಗಲಿವೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಫೆಬ್ರವರಿ 28ರಂದು ಸಂಘರ್ಷ ಪ್ರಾರಂಭವಾದಾಗಿನಿಂದ ಭಾರತವು ಅತ್ಯಂತ ಸೂಕ್ಷ್ಮವಾದ ರಾಜತಾಂತ್ರಿಕ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗಿ ಬಂದಿದೆ. ಏಕೆಂದರೆ, ಒಂದೆಡೆ ಅಮೆರಿಕ ಮತ್ತು ಇಸ್ರೇಲ್ ದೇಶಗಳೊಂದಿಗೆ ಭಾರತಕ್ಕೆ ನಿಕಟ ಸಂಬಂಧವಿದೆ. ಸಂಘರ್ಷ ಪ್ರಾರಂಭವಾಗುವ ಕೆಲವು ದಿನಗಳ ಮುನ್ನವಷ್ಟೇ ಮೋದಿ ಇಸ್ರೇಲ್‌ ಗೆ ಭೇಟಿ ನೀಡಿದ್ದರು. ಮತ್ತೊಂದೆಡೆ, ಇರಾನ್ ಮತ್ತು ಅರಬ್ ರಾಷ್ಟ್ರಗಳೊಂದಿಗೆ ಐತಿಹಾಸಿಕ ಹಾಗೂ ದೀರ್ಘಕಾಲದ ಬಾಂಧವ್ಯವಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ಹೇರಿದ್ದ ನಿರ್ಬಂಧಗಳ ಕಾರಣದಿಂದಾಗಿ 2019ರಲ್ಲಿ ಭಾರತವು ಇರಾನ್‌ ನಿಂದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸಬೇಕಾಗಿ ಬರುವವರೆಗೂ, ಇರಾನ್ ಭಾರತದ ಪ್ರಮುಖ ಮೂರು ಇಂಧನ ಪೂರೈಕೆದಾರ ದೇಶಗಳಲ್ಲಿ ಒಂದಾಗಿತ್ತು.

ಸಂಘರ್ಷವನ್ನು ಕೊನೆಗೊಳಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಮರಳುವಂತೆ ಭಾರತ ಒತ್ತಿಹೇಳಿದೆ. ಇದೇ ವೇಳೆ, ಲಕ್ಷಾಂತರ ಭಾರತೀಯರು ವಾಸಿಸುತ್ತಿರುವ ಕುವೈತ್, ಖತರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಂತಹ ಪಶ್ಚಿಮ ಏಷ್ಯಾದ ದೇಶಗಳ ಮೇಲೆ ಇರಾನ್ ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಭಾರತ ಖಂಡಿಸಿದೆ. ನಿರಂತರ ತೈಲ ಮತ್ತು ಅನಿಲ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಪ್ರಮುಖ ಇಂಧನ ಪೂರೈಕೆದಾರ ದೇಶಗಳೊಂದಿಗೆ ತೀವ್ರ ಮಾತುಕತೆ ನಡೆಸಿದೆ. ಕಳೆದ ತಿಂಗಳು ಪ್ರಧಾನಿ ಮೋದಿ ಅವರೇ ಸ್ವತಃ ಯುಎಇಗೆ ಭೇಟಿ ನೀಡಿದ್ದರು. ಆದರೆ, ಇರಾನ್ ದಾಳಿಗೆ ತುತ್ತಾಗಿದ್ದ ಕೆಲವು ಇಂಧನ ಘಟಕಗಳು ಮತ್ತೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲು ತಿಂಗಳುಗಳೇ ಬೇಕಾಗಬಹುದು ಎಂದು ಅಲ್ಲಿನ ವರದಿಗಳು ಸೂಚಿಸುತ್ತವೆ.

ಇರಾನ್ ಕಡಲಿನ ತೈಲ ಮಾರಾಟದ ಮೇಲಿನ ಅಮೆರಿಕದ ನಿರ್ಬಂಧಗಳನ್ನು ಕೊನೆಗೊಳಿಸುವುದು ಸೇರಿದಂತೆ, ಇರಾನ್ ಮತ್ತು ಅಮೆರಿಕ ನಡುವಿನ ದೀರ್ಘಕಾಲೀನ ಒಪ್ಪಂದವು ಭಾರತಕ್ಕೆ ಅತ್ಯಂತ ಮುಖ್ಯವಾಗಿದೆ. ಇದು ಭಾರತವು ಟೆಹ್ರಾನ್‌ನಿಂದ ಮತ್ತೆ ಇಂಧನ ಖರೀದಿಯನ್ನು ಪುನರಾರಂಭಿಸಲು ಮತ್ತು ಇರಾನ್‌ನ ಚಾಬಹಾರ್ ಬಂದರು ಅಭಿವೃದ್ಧಿಯನ್ನು ಮುಂದುವರಿಸಲು ಸಹಾಯ ಮಾಡುತ್ತದೆ. ಈ ಬಂದರು ಭಾರತದ 'ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್' ಯೋಜನೆಗೆ ಕೇಂದ್ರ ಬಿಂದುವಾಗಿದೆ. ಚಾಬಹಾರ್ ಬಂದರಿನಲ್ಲಿನ ಭಾರತೀಯ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಅಮೆರಿಕ ನೀಡಿದ್ದ ನಿರ್ಬಂಧ ವಿನಾಯಿತಿಯು ಏಪ್ರಿಲ್‌ನಲ್ಲಿ ಕೊನೆಗೊಂಡಿದ್ದು, ಇದು ಈ ಆಯಕಟ್ಟಿನ ಬಂದರಿನ ಮೇಲಿನ ಭಾರತದ ದೀರ್ಘಕಾಲೀನ ಯೋಜನೆಗಳ ಬಗ್ಗೆ ಅನಿಶ್ಚಿತತೆಯನ್ನು ಮೂಡಿಸಿತ್ತು.

ಈ ಇಡೀ ಬೆಳವಣಿಗೆಯಿಂದ ಭಾರತ ಕಲಿಯಬೇಕಾದ ದೊಡ್ಡ ಪಾಠ ರಾಜತಾಂತ್ರಿಕತೆ ಮತ್ತು ಕಾರ್ಯತಂತ್ರಕ್ಕೆ ಸಂಬಂಧಿಸಿದ್ದಾಗಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ. "ಅಮೆರಿಕ ಕೇವಲ ಒಳ್ಳೆಯತನದಿಂದ ಶಾಂತಿಗೆ ಒಪ್ಪಿಕೊಂಡಿಲ್ಲ. ಬದಲಿಗೆ, ಯುದ್ಧದ ವೆಚ್ಚಗಳು ಮಿತಿ ಮೀರಿದ್ದರಿಂದ ಅದು ಈ ನಿರ್ಧಾರಕ್ಕೆ ಬಂದಿದೆ. ಇಂಧನ ಪೂರೈಕೆಯನ್ನು ವ್ಯತ್ಯಯಗೊಳಿಸುವ, ಜಾಗತಿಕ ತೈಲ ಬೆಲೆಗಳನ್ನು ಏರಿಸುವ ಮತ್ತು ಆರ್ಥಿಕ ಹಾಗೂ ಮಿಲಿಟರಿ ನಷ್ಟವನ್ನು ಉಂಟುಮಾಡುವ ಟೆಹ್ರಾನ್‌ನ ಸಾಮರ್ಥ್ಯವೇ ಅಮೆರಿಕವನ್ನು ಮಾತುಕತೆಗೆ ಬರುವಂತೆ ಮಾಡಿತು" ಎಂದಿದ್ದಾರೆ.

"ಭಾರತವು ಈ ಫಲಿತಾಂಶದಿಂದ ಒಂದು ಸ್ಪಷ್ಟ ಪಾಠವನ್ನು ಕಲಿಯಬೇಕು. ಅಮೆರಿಕದೊಂದಿಗೆ ಸಮಾನ ಪಾಲುದಾರನಾಗಿ ವ್ಯವಹರಿಸಬೇಕೇ ಹೊರತು ಅಧೀನ ರಾಷ್ಟ್ರವಾಗಿ ಅಲ್ಲ. ವ್ಯಾಪಾರ, ತಂತ್ರಜ್ಞಾನ, ಇಂಧನ ಅಥವಾ ವಿದೇಶಾಂಗ ನೀತಿ ಯಾವುದೇ ಇರಲಿ, ತನ್ನ ಹಿತಾಸಕ್ತಿಗಳಿಗೆ ಧಕ್ಕೆ ತರುವ ಯಾವುದೇ ವ್ಯವಸ್ಥೆಗಳನ್ನು ಭಾರತ ಸ್ಪಷ್ಟವಾಗಿ ತಿರಸ್ಕರಿಸಬೇಕು" ಎಂದು ಶ್ರೀವಾಸ್ತವ ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News