ಬಿಸಿ ಗಾಳಿ–ಓಝೋನ್ ಮಾಲಿನ್ಯದಿಂದ ಹೃದಯಾಘಾತದ ಸಾವು ಹೆಚ್ಚಳ!
2024ರಲ್ಲಿ 830 ಮೃತ್ಯುಗಳಿಗೆ ಓಝೋನ್ ಕಾರಣವಾಗಿರಬಹುದು: ಅಧ್ಯಯನ
Photo Credit: The Hindu
ಹೊಸದಿಲ್ಲಿ: ಬಿಸಿ ಗಾಳಿಯ ಸಂದರ್ಭಗಳಲ್ಲಿ ಹೆಚ್ಚಾಗುವ ಮೇಲ್ಮೈ ಓಝೋನ್ ಮಾಲಿನ್ಯವು ಭಾರತದಲ್ಲಿ ಹೃದಯ ಹಾಗೂ ಶ್ವಾಸಕೋಶ ಸಂಬಂಧಿತ ಸಾವುಗಳನ್ನು ಹೆಚ್ಚಿಸುತ್ತಿದೆ. 2024ರ ಶಾಖದ ಅಲೆಗಳ ಅವಧಿಯಲ್ಲಿ ಸಂಭವಿಸಿದ 830 ಹೆಚ್ಚುವರಿ ಸಾವುಗಳಿಗೆ ಮೇಲ್ಮೈ ಓಝೋನ್ ಕಾರಣವಾಗಿರಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಜೂನ್ 12ರಂದು ನೇಚರ್ ಪೋರ್ಟ್ಫೋಲಿಯೋದ NPJ Clean Air ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬಿಸಿ ಗಾಳಿಯ ಸಮಯದಲ್ಲಿ ಉತ್ತರ ಭಾರತದಲ್ಲಿ ಮೇಲ್ಮೈ ಓಝೋನ್ ಸಾಂದ್ರತೆಯು ಪ್ರತಿ ಘನ ಮೀಟರ್ಗೆ 85ರಿಂದ 110 ಮೈಕ್ರೋಗ್ರಾಂಗಳವರೆಗೆ ತಲುಪುತ್ತಿದೆ. ಇದು ವಿಶ್ವ ಆರೋಗ್ಯ ಸಂಸ್ಥೆ (WHO) ನಿಗದಿಪಡಿಸಿರುವ 70 ಮೈಕ್ರೋಗ್ರಾಂ ಪ್ರತಿ ಘನ ಮೀಟರ್ ಸುರಕ್ಷಿತ ಮಿತಿಗಿಂತ ಹೆಚ್ಚಾಗಿದೆ. ಶಾಖದ ಅಲೆ ಅಂತ್ಯಗೊಂಡ ಮೂರರಿಂದ ನಾಲ್ಕು ದಿನಗಳ ನಂತರ ಓಝೋನ್ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತದೆ ಎಂದು ಅಧ್ಯಯನ ಹೇಳಿದೆ.
ಭಾರತದ ಬಹುತೇಕ ಭಾಗಗಳಲ್ಲಿ ಮುಂಗಾರು ಪೂರ್ವ ಅವಧಿಯಲ್ಲಿಯೇ ಓಝೋನ್ ಮಟ್ಟಗಳು ಸುರಕ್ಷಿತ ಮಿತಿಯನ್ನು ಮೀರುತ್ತಿವೆ. ಶಾಖದ ಅಲೆಗಳ ಸಂದರ್ಭದಲ್ಲಿ ಈ ಪ್ರಮಾಣ ಮತ್ತಷ್ಟು ಏರಿಕೆಯಾಗುವುದರಿಂದ ಆರೋಗ್ಯದ ಮೇಲಿನ ಅಪಾಯ ಹೆಚ್ಚುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ.
2024ರ ಶಾಖದ ಅಲೆಗಳ ದಿನಗಳಲ್ಲಿ ಇಸ್ಕೆಮಿಕ್ ಹೃದಯ ಕಾಯಿಲೆ ಮತ್ತು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶ ಕಾಯಿಲೆ (ಸಿಒಪಿಡಿ)ಗಳಿಂದ ದೇಶದಲ್ಲಿ 26,500 ಮಂದಿ ಮೃತಪಟ್ಟಿದ್ದಾರೆ. ಈ ಸಾವುಗಳಲ್ಲಿ 490 ಹೆಚ್ಚುವರಿ ಹೃದಯಾಘಾತದ ಪ್ರಕರಣಗಳು ಮತ್ತು 342 ಸಿಒಪಿಡಿ ಸಾವುಗಳು ಸೇರಿ ಒಟ್ಟು 830 ಸಾವುಗಳು ಮೇಲ್ಮೈ ಓಝೋನ್‌ಗೆ ಸಂಬಂಧಿಸಿರಬಹುದು ಎಂದು ಅಧ್ಯಯನ ಅಂದಾಜಿಸಿದೆ.
ಆದರೆ ಈ ಅಂಕಿಅಂಶಗಳನ್ನು ಅಂದಾಜಿಸುವಲ್ಲಿ ಕೆಲವು ಮಿತಿಗಳಿವೆ ಎಂದು ಸಂಶೋಧಕರು ಒಪ್ಪಿಕೊಂಡಿದ್ದಾರೆ. ಅನೇಕ ಪೀಡಿತ ನಗರಗಳಲ್ಲಿ ನಿರ್ದಿಷ್ಟ ಶಾಖದ ಅಲೆಗಳ ಮಾಹಿತಿ ಹಾಗೂ ನೆಲಮಟ್ಟದ ಓಝೋನ್ ಅಳತೆಗಳು ಲಭ್ಯವಿಲ್ಲದ ಕಾರಣ ನಿಖರ ವಿಶ್ಲೇಷಣೆ ಸಾಧ್ಯವಾಗಿಲ್ಲ. ಹೀಗಾಗಿ ಅಂದಾಜುಗಳು ನೇರ ವೀಕ್ಷಣೆಗಳಿಗಿಂತ ಓಝೋನ್ ಒಡ್ಡಿಕೊಳ್ಳುವಿಕೆ ಮತ್ತು ರೋಗಗಳ ನಡುವಿನ ವೈಜ್ಞಾನಿಕ ಸಂಬಂಧವನ್ನು ಆಧರಿಸಿವೆ ಎಂದು ಅವರು ತಿಳಿಸಿದ್ದಾರೆ.
ಓಝೋನ್ ಹೇಗೆ ರೂಪುಗೊಳ್ಳುತ್ತದೆ?
ಮೇಲ್ಮೈ ಓಝೋನ್ ನೇರವಾಗಿ ವಾತಾವರಣಕ್ಕೆ ಬಿಡುಗಡೆಯಾಗುವುದಿಲ್ಲ. ವಾಹನಗಳು, ಕೈಗಾರಿಕೆಗಳು ಹಾಗೂ ಇತರ ಮೂಲಗಳಿಂದ ಹೊರಬರುವ ಮಾಲಿನ್ಯಕಾರಕಗಳ ಮೇಲೆ ಸೂರ್ಯನ ಬೆಳಕು ರಾಸಾಯನಿಕ ಕ್ರಿಯೆ ನಡೆಸಿದಾಗ ಇದು ರೂಪುಗೊಳ್ಳುತ್ತದೆ. ಹೆಚ್ಚಿನ ಉಷ್ಣತೆಯ ಸಂದರ್ಭದಲ್ಲಿ ಈ ಪ್ರಕ್ರಿಯೆ ವೇಗ ಪಡೆದುಕೊಳ್ಳುತ್ತದೆ.
‘ಓಝೋನ್ ಅತ್ಯಂತ ಹಾನಿಕಾರಕ ಮಾಲಿನ್ಯಕಾರಕ. ಅದೇ ವೇಳೆ ನೈಟ್ರೋಜನ್ ಡೈಆಕ್ಸೈಡ್ ಮತ್ತು ಫಾರ್ಮಾಲ್ಡಿಹೈಡ್‌ನಂತಹ ಮಾಲಿನ್ಯಕಾರಕಗಳೂ ನೇರವಾಗಿ ಉಸಿರಾಟ ವ್ಯವಸ್ಥೆಗೆ ಹಾನಿ ಉಂಟುಮಾಡುತ್ತವೆ’ ಎಂದು ಅಧ್ಯಯನಕಾರರು ಹೇಳಿದ್ದಾರೆ.
ಎರಡು ದಶಕಗಳ ಮಾಹಿತಿ ಪರಿಶೀಲನೆ
ಕೇರಳದ ಮೀನುಗಾರಿಕಾ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯದ ಪರಂಬತ್ ಸಂಗೀತ ಹಾಗೂ ಐಐಟಿ ಖರಗ್‌ಪುರದ ಜಯನಾರಾಯಣನ್ ಕುಟ್ಟಿಪುರತ್ ಈ ಅಧ್ಯಯನ ನಡೆಸಿದ್ದಾರೆ. ಭಾರತೀಯ ಹವಾಮಾನ ಇಲಾಖೆಯ ಎರಡು ದಶಕಗಳ ದತ್ತಾಂಶ, ಉಪಗ್ರಹ ಮಾಹಿತಿ ಮತ್ತು ಜಾಗತಿಕ ಹವಾಮಾನ ದತ್ತಾಂಶಗಳನ್ನು ವಿಶ್ಲೇಷಿಸಿ 2004ರಿಂದ 2024ರ ನಡುವಿನ ಶಾಖದ ಅಲೆಗಳ ಮಾದರಿಗಳನ್ನು ಪರಿಶೀಲಿಸಲಾಗಿದೆ.