ಆಲ್ದೂರಿನಿಂದ ಬಾಹ್ಯಾಕಾಶದ ಪಯಣ: ನಾಸಾ ಒಪ್ಪಂದ ಪಡೆದ ಮೊದಲ ಭಾರತೀಯ ಖಾಸಗಿ ಸಂಸ್ಥೆಯ ಸಿಇಒ ಆದ ಚಿಕ್ಕಮಗಳೂರಿನ ಅವೈಸ್ ಅಹ್ಮದ್
28ನೇ ವಯಸ್ಸಿನಲ್ಲೇ ಜಾಗತಿಕ ಬಾಹ್ಯಾಕಾಶ ವಲಯದಲ್ಲಿ ಗುರುತಿಸಿಕೊಂಡ ಯುವ ಉದ್ಯಮಿ; 900 ಕೋಟಿ ರೂ.ಗೂ ಅಧಿಕ ಹೂಡಿಕೆ ಪಡೆದ 'ಪಿಕ್ಸೆಲ್' ಸಂಸ್ಥೆ
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಹೋಬಳಿ ಪ್ರಧಾನ ಕಚೇರಿಯಾದ ಆಲ್ದೂರಿನಲ್ಲಿ ಇಂಟರ್ನೆಟ್ ಸೌಲಭ್ಯವಿಲ್ಲದ ಪರಿಸರದಲ್ಲಿ ಬೆಳೆದ ಬಾಲಕನೊಬ್ಬ ಇಂದು ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ಪ್ರಮುಖ ಮುಖಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. 28 ವರ್ಷದ ಅವೈಸ್ ಅಹ್ಮದ್ ಅವರು ಬೆಂಗಳೂರು ಮೂಲದ 'ಪಿಕ್ಸೆಲ್ ಸ್ಪೇಸ್ ಟೆಕ್ನಾಲಜೀಸ್' ಸಂಸ್ಥೆಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿದ್ದು, ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದಿಂದ ಹೈಪರ್‌ಸ್ಪೆಕ್ಟ್ರಲ್ ಭೂ ವೀಕ್ಷಣಾ ದತ್ತಾಂಶ ಒದಗಿಸುವ ಒಪ್ಪಂದ ಪಡೆದ ಮೊದಲ ಭಾರತೀಯ ಖಾಸಗಿ ಬಾಹ್ಯಾಕಾಶ ಸಂಸ್ಥೆಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕರ್ನಾಟಕದ ಕಾಫಿನಾಡಿನ ಯುವ ಪ್ರತಿಭೆಯಾಗಿರುವ ಅವೈಸ್ ಅಹ್ಮದ್, ಸಹ-ಸಂಸ್ಥಾಪಕ ಕ್ಷಿತಿಜ್ ಖಂಡೇಲ್ವಾಲ್ ಅವರೊಂದಿಗೆ ಸೇರಿ ಸ್ಥಾಪಿಸಿರುವ 'ಪಿಕ್ಸೆಲ್' ಸಂಸ್ಥೆಯು ಜಾಗತಿಕ ಹೂಡಿಕೆದಾರರಿಂದ 900 ಕೋಟಿ ರೂ.ಗೂ ಅಧಿಕ ಹೂಡಿಕೆಯನ್ನು ಆಕರ್ಷಿಸಿದೆ. ಹೂಡಿಕೆದಾರರ ಪಟ್ಟಿಯಲ್ಲಿ ಜಾಗತಿಕ ತಂತ್ರಜ್ಞಾನ ದೈತ್ಯ ಗೂಗಲ್ ಸಂಸ್ಥೆಯೂ ಸೇರಿದೆ.
ಬಾಲ್ಯದ ಕುತೂಹಲವೇ ಯಶಸ್ಸಿನ ಅಡಿಪಾಯ
ಆಲ್ದೂರಿನಲ್ಲಿ ಬಾಲ್ಯ ಕಳೆದ ಅವೈಸ್ ಅಹ್ಮದ್ ಅವರಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಹುಟ್ಟಿದ್ದು ಪುಸ್ತಕಗಳ ಮೂಲಕ. ಸ್ಥಳೀಯ ಔಷಧ ಅಂಗಡಿ ನಡೆಸುತ್ತಿದ್ದ ತಂದೆ ನದೀಮ್ ಅಹ್ಮದ್ ಅವರು ವಿಜ್ಞಾನ ವಿಶ್ವಕೋಶಗಳನ್ನು ಖರೀದಿಸಿ ತರುತ್ತಿದ್ದರು. ಗ್ರಹಗಳು, ನೀಹಾರಿಕೆಗಳು, ಕಪ್ಪು ಕುಳಿಗಳು ಮತ್ತು ಸೌರವ್ಯೂಹದ ಕುರಿತ ಪುಸ್ತಕಗಳು ಅವರಲ್ಲಿ ಬಾಹ್ಯಾಕಾಶದ ಬಗ್ಗೆ ಕುತೂಹಲ ಮೂಡಿಸಿವೆ.
"ಇಂಟರ್ನೆಟ್ ನಮ್ಮ ಹಳ್ಳಿಗೆ ಬರುವುದಕ್ಕೂ ಮುನ್ನ ವಿಜ್ಞಾನ ಪುಸ್ತಕಗಳೇ ನನ್ನ ಜಗತ್ತಾಗಿದ್ದವು. ಸೌರವ್ಯೂಹ ಮತ್ತು ಬಾಹ್ಯಾಕಾಶದ ಕುರಿತ ವಿಷಯಗಳು ನನ್ನನ್ನು ಆಕರ್ಷಿಸುತ್ತಿದ್ದವು" ಎಂದು ಅವೈಸ್ ಅಹ್ಮದ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ತಾಯಿ ಗಝಾಲಾ ತಶ್ಫೀನ್ ಮತ್ತು ತಂದೆ ನದೀಮ್ ಅಹ್ಮದ್ ಅವರು ಮಗನ ಆಸಕ್ತಿಯನ್ನು ಗುರುತಿಸಿ ನಿರಂತರ ಪ್ರೋತ್ಸಾಹ ನೀಡಿದರು. ಮಗನ ಶಿಕ್ಷಣಕ್ಕಾಗಿ ಒಂದು ಹಂತದಲ್ಲಿ ಚಿನ್ನವನ್ನು ಅಡವಿಟ್ಟು ನೆರವು ನೀಡಿದ್ದೂ ಕುಟುಂಬದ ತ್ಯಾಗಕ್ಕೆ ಸಾಕ್ಷಿಯಾಗಿದೆ.
ಆಲ್ದೂರಿನಿಂದ ಬಿಟ್ಸ್ ಪಿಲಾನಿವರೆಗೆ
ಅವೈಸ್ ಅಹ್ಮದ್ ಅವರು ಆಲ್ದೂರಿನ ರೋಸ್ ಬಡ್ ಮತ್ತು ಅಕ್ಷರ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಮಂಗಳೂರಿನ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ವ್ಯಾಸಂಗ ಪೂರ್ಣಗೊಳಿಸಿದರು. ಸಿಇಟಿಯಲ್ಲಿ 477ನೇ ರ‍್ಯಾಂಕ್ ಹಾಗೂ ಜೆಇಇ ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಿದ ಅವರು, ದೇಶದ ಪ್ರತಿಷ್ಠಿತ ಬಿಟ್ಸ್ ಪಿಲಾನಿ ಸಂಸ್ಥೆಯಲ್ಲಿ ಪ್ರವೇಶ ಪಡೆದು ಗಣಿತಶಾಸ್ತ್ರ ಮತ್ತು ಮ್ಯಾನುಫ್ಯಾಕ್ಚರಿಂಗ್ ಎಂಜಿನಿಯರಿಂಗ್ ಅಧ್ಯಯನ ಮಾಡಿದರು.
ಶೈಕ್ಷಣಿಕ ಅವಧಿಯಲ್ಲೇ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳೊಂದಿಗೆ ವಿದ್ಯಾರ್ಥಿ ಉಪಗ್ರಹ ಯೋಜನೆಗಳಲ್ಲಿ ಭಾಗವಹಿಸಿ ಉಪಗ್ರಹ ವಿನ್ಯಾಸ ಮತ್ತು ನಿರ್ಮಾಣ ಕಾರ್ಯದಲ್ಲಿ ಅನುಭವ ಪಡೆದರು. ಈ ಅನುಭವವೇ ಅವರ ಬಾಹ್ಯಾಕಾಶ ಕ್ಷೇತ್ರದ ಆಸಕ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸಿತು.
ಎಲಾನ್ ಮಸ್ಕ್ ಭೇಟಿಯಿಂದ ಹೊಸ ಕನಸು
2017ರಲ್ಲಿ ಹೈಪರ್‌ಲೂಪ್ ಇಂಡಿಯಾದ ಎಂಜಿನಿಯರಿಂಗ್ ತಂಡದ ನಾಯಕರಾಗಿದ್ದ ಅವೈಸ್ ಅಹ್ಮದ್, ಸ್ಪೇಸ್‌ಎಕ್ಸ್ ಆಯೋಜಿಸಿದ್ದ ಹೈಪರ್‌ಲೂಪ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅವರ ತಂಡವು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ಅಂತಿಮ ಸುತ್ತಿಗೆ ಆಯ್ಕೆಯಾಗಿತ್ತು.
ಈ ವೇಳೆ ಅವರು ಸ್ಪೇಸ್‌ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್ ಅವರನ್ನು ಭೇಟಿಯಾದರು. ಜೊತೆಗೆ ಸ್ಪೇಸ್‌ಎಕ್ಸ್‌ನ ರಾಕೆಟ್ ಉತ್ಪಾದನೆ ಮತ್ತು ಪರೀಕ್ಷಾ ಸೌಲಭ್ಯಗಳನ್ನು ವೀಕ್ಷಿಸುವ ಅವಕಾಶವೂ ದೊರೆಯಿತು. ಈ ಅನುಭವವು ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಉದ್ಯಮ ಆರಂಭಿಸುವ ಕನಸಿಗೆ ರೂಪ ನೀಡಿತು.
2019ರಲ್ಲಿ 'ಪಿಕ್ಸೆಲ್' ಸಂಸ್ಥೆ ಸ್ಥಾಪನೆ
ಬಿಟ್ಸ್ ಪಿಲಾನಿಯಲ್ಲಿ ಪದವಿ ಪೂರ್ಣಗೊಳಿಸುವ ಕೆಲವೇ ತಿಂಗಳುಗಳ ಮೊದಲು, 2019ರಲ್ಲಿ ಅವೈಸ್ ಅಹ್ಮದ್ ಮತ್ತು ಕ್ಷಿತಿಜ್ ಖಂಡೇಲ್ವಾಲ್ ಅವರು 'ಪಿಕ್ಸೆಲ್ ಸ್ಪೇಸ್ ಟೆಕ್ನಾಲಜೀಸ್' ಸಂಸ್ಥೆಯನ್ನು ಆರಂಭಿಸಿದರು. ವಿಶ್ವದಾದ್ಯಂತ ಕೃಷಿ, ಪರಿಸರ ಮತ್ತು ಸಂಪನ್ಮೂಲ ನಿರ್ವಹಣೆಗೆ ಸಂಬಂಧಿಸಿದ ನಿಖರ ಉಪಗ್ರಹ ದತ್ತಾಂಶದ ಕೊರತೆಯನ್ನು ಗುರುತಿಸಿ ಸಂಸ್ಥೆ ಸ್ಥಾಪಿಸಲಾಯಿತು.
"ಹೈಪರ್‌ಸ್ಪೆಕ್ಟ್ರಲ್ ಇಮೇಜಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳು ವಿಶ್ವದಲ್ಲೇ ಬಹಳ ಕಡಿಮೆ. ಈ ಕೊರತೆಯನ್ನು ನೀಗಿಸಲು ಸಂಸ್ಥೆ ಆರಂಭಿಸಿದ್ದೇವೆ" ಎಂದು ಅವೈಸ್ ಅಹ್ಮದ್ ಹೇಳಿದ್ದಾರೆ.
ಒಂಭತ್ತು ಹೈಪರ್‌ಸ್ಪೆಕ್ಟ್ರಲ್ ಉಪಗ್ರಹಗಳ ಉಡಾವಣೆ
ಪಿಕ್ಸೆಲ್ ಸಂಸ್ಥೆಯು ಇದುವರೆಗೆ ಒಂಬತ್ತು ಹೈಪರ್‌ಸ್ಪೆಕ್ಟ್ರಲ್ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಇವುಗಳಲ್ಲಿ 2025ರಲ್ಲಿ ಉಡಾವಣೆಯಾದ ಆರು 'ಫೈರ್‌ಫ್ಲೈ' ಉಪಗ್ರಹಗಳೂ ಸೇರಿವೆ. ಫೈರ್‌ಫ್ಲೈ-1, 2 ಮತ್ತು 3 ಉಪಗ್ರಹಗಳನ್ನು 2025ರ ಜನವರಿ 14ರಂದು ಹಾಗೂ ಫೈರ್‌ಫ್ಲೈ-4, 5 ಮತ್ತು 6 ಉಪಗ್ರಹಗಳನ್ನು ಅದೇ ವರ್ಷದ ಆಗಸ್ಟ್ 26ರಂದು ಕಕ್ಷೆಗೆ ಸೇರಿಸಲಾಯಿತು.
ಸಂಸ್ಥೆ ಅಭಿವೃದ್ಧಿಪಡಿಸಿದ 'ಶಕುಂತಲಾ' ಉಪಗ್ರಹವನ್ನು 2022ರ ಏಪ್ರಿಲ್ 1ರಂದು ಅಮೆರಿಕದ ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಸಂಸ್ಥೆಯ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇದಕ್ಕೂ ಮೊದಲು ಅಭಿವೃದ್ಧಿಪಡಿಸಿದ್ದ 'ಆನಂದ್' ಉಪಗ್ರಹವನ್ನು ಇಸ್ರೋ ಮೂಲಕ ಉಡಾವಣೆ ಮಾಡುವ ಯೋಜನೆ ಇದ್ದರೂ, ಬಳಿಕ ಅದನ್ನು ನವೆಂಬರ್ 26ರಂದು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಯಿತು.
ಕೃಷಿ, ಪರಿಸರ ಕ್ಷೇತ್ರಕ್ಕೆ ನೆರವಾಗುವ ತಂತ್ರಜ್ಞಾನ
ಪಿಕ್ಸೆಲ್ ಸಂಸ್ಥೆಯ ಉಪಗ್ರಹಗಳು ಅತ್ಯಾಧುನಿಕ ಹೈಪರ್‌ಸ್ಪೆಕ್ಟ್ರಲ್ ಇಮೇಜಿಂಗ್ ತಂತ್ರಜ್ಞಾನವನ್ನು ಬಳಸುತ್ತವೆ. ಈ ತಂತ್ರಜ್ಞಾನವು ಸಾಮಾನ್ಯ ಉಪಗ್ರಹಗಳಿಗೆ ಗೋಚರಿಸದ ಮಾಹಿತಿಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ.
ಮಣ್ಣಿನ ಗುಣಮಟ್ಟ, ಬೆಳೆಗಳ ಆರೋಗ್ಯ, ನೀರಿನ ಗುಣಮಟ್ಟ, ಪರಿಸರ ಮಾಲಿನ್ಯ, ಭೂಗರ್ಭ ಸಂಪನ್ಮೂಲಗಳು, ಮಿಥೇನ್ ಅನಿಲ ಸೋರಿಕೆ ಹಾಗೂ ಕಾನೂನುಬಾಹಿರ ಗಣಿಗಾರಿಕೆ ಚಟುವಟಿಕೆಗಳ ಕುರಿತು ನಿಖರ ದತ್ತಾಂಶವನ್ನು ಸಂಗ್ರಹಿಸಲು ಈ ತಂತ್ರಜ್ಞಾನ ನೆರವಾಗುತ್ತದೆ. ಕೃಷಿ, ಇಂಧನ ಮತ್ತು ಪರಿಸರ ವಲಯಗಳಿಗೆ ಇದು ಮಹತ್ವದ ಕೊಡುಗೆ ನೀಡುತ್ತಿದೆ.
900 ಕೋಟಿ ರೂ.ಗೂ ಅಧಿಕ ಹೂಡಿಕೆ
ಪಿಕ್ಸೆಲ್ ಸಂಸ್ಥೆಯು ಇದುವರೆಗೆ ಜಾಗತಿಕ ಹೂಡಿಕೆದಾರರಿಂದ ಸುಮಾರು 900 ಕೋಟಿ ರೂ.ಗೂ ಅಧಿಕ ಹೂಡಿಕೆ ಸಂಗ್ರಹಿಸಿದೆ. ಭಾರತ ಸರ್ಕಾರ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಿ ಹೊಸ ನೀತಿಗಳನ್ನು ಜಾರಿಗೆ ತಂದಿರುವುದು ಸಂಸ್ಥೆಯ ಬೆಳವಣಿಗೆಗೆ ಮಹತ್ವದ ಪ್ರೋತ್ಸಾಹ ನೀಡಿದೆ ಎಂದು ಅವೈಸ್ ಅಹ್ಮದ್ ತಿಳಿಸಿದ್ದಾರೆ.
ಪ್ರಸ್ತುತ ಪಿಕ್ಸೆಲ್ ಸಂಸ್ಥೆಯಲ್ಲಿ 275 ಮಂದಿ ಕಾರ್ಯನಿರ್ವಹಿಸುತ್ತಿದ್ದು, ಅವರಲ್ಲಿ 240 ಮಂದಿ ಭಾರತದಲ್ಲಿದ್ದರೆ, ಉಳಿದವರು ಅಮೆರಿಕ ಮತ್ತು ಯುರೋಪಿನ ವಿವಿಧ ರಾಷ್ಟ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ನಾಸಾ ಮತ್ತು ಎನ್‌ಆರ್‌ಒ ಜೊತೆ ಒಪ್ಪಂದ
ಪಿಕ್ಸೆಲ್ ಸಂಸ್ಥೆಯು ಅಮೆರಿಕದ ನಾಸಾ ಹಾಗೂ ರಾಷ್ಟ್ರೀಯ ವಿಚಕ್ಷಣಾ ಕಚೇರಿ (ಎನ್‌ಆರ್‌ಒ) ಜೊತೆಗೆ ದೀರ್ಘಾವಧಿಯ ಒಪ್ಪಂದಗಳಿಗೆ ಸಹಿ ಹಾಕಿದೆ. ಈ ಮೂಲಕ ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.
ಪ್ರತಿಷ್ಠಿತ 'ಟೈಮ್' ಪತ್ರಿಕೆಯು 2023ರ ಅತ್ಯುತ್ತಮ ಜಾಗತಿಕ ಆವಿಷ್ಕಾರಗಳಲ್ಲಿ ಒಂದಾಗಿ ಪಿಕ್ಸೆಲ್ ಸಂಸ್ಥೆಯನ್ನು ಗುರುತಿಸಿ ಗೌರವಿಸಿದೆ.
ರಾಷ್ಟ್ರಪತಿಯಿಂದ ಆಹ್ವಾನ
ಅವೈಸ್ ಅಹ್ಮದ್ ಅವರಿಗೆ ಈ ವರ್ಷದ ಜನವರಿ 26ರಂದು ಹೊಸದಿಲ್ಲಿಯಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಸಮಾರಂಭಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅಧಿಕೃತ ಆಹ್ವಾನ ಲಭಿಸಿತ್ತು.
ಮಗನ ಸಾಧನೆ ಕುರಿತು ಪ್ರತಿಕ್ರಿಯಿಸಿರುವ ತಂದೆ ನದೀಮ್ ಅಹ್ಮದ್, "ನಮ್ಮ ದೇಶದ ಪ್ರತಿಭೆಗಳಿಗೆ ದೇಶದಲ್ಲಿಯೇ ಸೂಕ್ತ ಪ್ರೋತ್ಸಾಹ ದೊರೆತರೆ, ಅವರು ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಹೆಚ್ಚಿಸಬಲ್ಲರು" ಎಂದು ಹೇಳಿದ್ದಾರೆ.
ಹಳ್ಳಿಯಲ್ಲಿ ಇಂಟರ್ನೆಟ್ ಸೌಲಭ್ಯವಿಲ್ಲದೆ ಬೆಳೆದ ಬಾಲಕನೊಬ್ಬ ಇಂದು ಜಾಗತಿಕ ಮಟ್ಟದಲ್ಲಿ ಭಾರತದ ಬಾಹ್ಯಾಕಾಶ ತಂತ್ರಜ್ಞಾನ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿರುವುದು ದೇಶದ ಯುವ ಪೀಳಿಗೆಗೆ ಸ್ಫೂರ್ತಿದಾಯಕ ಕಥೆಯಾಗಿದೆ.
Photo Credit: Special Arrangement