×
Ad

ವಿಶ್ವದ ಟಾಪ್ 100 ರ‍್ಯಾಂಕಿಂಗ್‌ ಪಟ್ಟಿಯಲ್ಲಿ IIT ಗೆ ಇಲ್ಲ ಸ್ಥಾನ!

ಭಾರತದ ವಿಶ್ವವಿದ್ಯಾಲಯಗಳು ಹಿಂದುಳಿಯುತ್ತಿರುವುದೇಕೆ?

Update: 2026-01-13 19:16 IST

Photo Credit : indiatoday.in

QS World University Rankings, Times Higher Education World University Rankings ಮತ್ತು ವಿಶ್ವ ವಿಶ್ವವಿದ್ಯಾಲಯಗಳ ಶಾಂಘೈ ಅಕಾಡೆಮಿಕ್ ಶ್ರೇಯಾಂಕಗಳು ಪ್ರತಿ ವರ್ಷ ವಿಶ್ವದ ಪ್ರಮುಖ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಪ್ರಕಟಿಸುತ್ತವೆ. ಅಮೆರಿಕ, ಬ್ರಿಟನ್, ಯುರೋಪ್ ಮತ್ತು ಪೂರ್ವ ಏಷ್ಯಾದ ಸಂಸ್ಥೆಗಳು ಈ ಮೂರೂ ಪಟ್ಟಿಗಳಲ್ಲೂ ಟಾಪ್ 100 ರಲ್ಲಿ ಪ್ರಾಬಲ್ಯ ಸಾಧಿಸುತ್ತಿವೆ. ಆದರೆ ಈ ಪಟ್ಟಿಯಲ್ಲಿ ಭಾರತಕ್ಕೆ ಸ್ಥಾನ ಸಿಗುತ್ತಿಲ್ಲ.

ಶಿಕ್ಷಣ ಸಚಿವಾಲಯದ AISHE ಡೇಟಾ ಪ್ರಕಾರ, ಭಾರತ ಇಂದು ವಿಶ್ವದ ಅತಿದೊಡ್ಡ ಉನ್ನತ ಶಿಕ್ಷಣ ವ್ಯವಸ್ಥೆಗಳಲ್ಲಿ ಒಂದನ್ನು ನಡೆಸುತ್ತಿದೆ. ದೇಶದಲ್ಲಿ 53,133 ಕ್ಕೂ ಹೆಚ್ಚು ಕಾಲೇಜುಗಳು ಮತ್ತು 1,391 ವಿಶ್ವವಿದ್ಯಾಲಯಗಳಿದ್ದು, ನಗರಗಳು, ಪಟ್ಟಣಗಳು ಮತ್ತು ಸಣ್ಣ ಜಿಲ್ಲೆಗಳವರೆಗೆ ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುತ್ತಿವೆ.

ಸುಮಾರು 2,000 ವರ್ಷಗಳ ಹಿಂದೆ ಚೀನಾ, ಪರ್ಷಿಯಾ ಮತ್ತು ಆಗ್ನೇಯ ಏಷ್ಯಾದಿಂದ ನಳಂದ, ತಕ್ಷಶಿಲಾ ಮತ್ತು ವಲ್ಲಭಿಗೆ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದರು. ಜಾಗತಿಕ ಶಿಕ್ಷಣ ವ್ಯವಸ್ಥೆಯೇ ಅಸ್ತಿತ್ವದಲ್ಲಿರದ ಕಾಲದಲ್ಲೇ ಇವು ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳಾಗಿದ್ದವು. ಗಣಿತ, ವೈದ್ಯಕೀಯ, ತತ್ವಶಾಸ್ತ್ರ ಮತ್ತು ಕಾನೂನು ಅಧ್ಯಯನದ ಪ್ರಮುಖ ಕೇಂದ್ರಗಳಾಗಿದ್ದ ಇವು, ಜಗತ್ತಿಗೆ ಜ್ಞಾನ ನೀಡಿದವು. ಹಾಗಾದರೆ ಈಗ ಏನು ಬದಲಾಗಿದೆ? 2047ರ ವೇಳೆಗೆ ನಾವು ಟಾಪ್ ರ‍್ಯಾಂಕಿಂಗ್‌ ಗಳಲ್ಲಿ ಕಾಣಿಸಿಕೊಳ್ಳಬಹುದೇ? ಅದಕ್ಕಾಗಿ ಏನು ಮಾಡಬೇಕು? ಎಂಬುದನ್ನು ವಿವರವಾಗಿ ನೋಡೋಣ.

ರ‍್ಯಾಂಕಿಂಗ್‌ ಲಿಸ್ಟ್‌ ನಲ್ಲಿ ಇರಬೇಕಾದರೆ ಏನು ಬೇಕು?

ಜಾಗತಿಕ ರ‍್ಯಾಂಕಿಂಗ್‌ ಗಳ ಮಹತ್ವವನ್ನು ಅರ್ಥಮಾಡಿಕೊಳ್ಳಲು, ವಿಶ್ವವಿದ್ಯಾಲಯಗಳನ್ನು ಶ್ರೇಣೀಕರಿಸುವಾಗ ಅನುಸರಿಸುವ ಮೆಟ್ರಿಕ್‌ ಗಳನ್ನು ತಿಳಿದುಕೊಳ್ಳುವುದು ಮುಖ್ಯ. ಉದಾಹರಣೆಗೆ, ಶಾಂಘೈ ರ‍್ಯಾಂಕಿಂಗ್‌ ಗಳು ಸಂಶೋಧನೆ, ನೊಬೆಲ್ ಪ್ರಶಸ್ತಿಗಳು, ಹೆಚ್ಚು ಉಲ್ಲೇಖಿಸಲ್ಪಟ್ಟ ಸಂಶೋಧಕರು ಮತ್ತು ಪ್ರಮುಖ ನಿಯತಕಾಲಿಕಗಳಲ್ಲಿ ಪ್ರಕಟವಾದ ಪ್ರಬಂಧಗಳನ್ನು ಗಣನೆಗೆ ತೆಗೆದುಕೊಳ್ಳುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಡಾಕ್ಟರೇಟ್ ಪದವಿಗಾಗಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಈ ಪಟ್ಟಿ ಅತ್ಯಂತ ಪ್ರಮುಖವಾಗಿದೆ.

Times Higher Education World University Rankings (THE) ಬೋಧನೆ, ಸಂಶೋಧನೆ, ಉಲ್ಲೇಖಗಳು ಮತ್ತು ಅಂತರರಾಷ್ಟ್ರೀಯ ದೃಷ್ಟಿಕೋನಗಳನ್ನು ಸಂಯೋಜಿಸಿ ವಿಶ್ವವಿದ್ಯಾಲಯಗಳನ್ನು ಶ್ರೇಣೀಕರಿಸುತ್ತದೆ. ಕ್ಯೂಎಸ್ ವಿಶ್ವ ಶ್ರೇಯಾಂಕವು ಶೈಕ್ಷಣಿಕ ಖ್ಯಾತಿ, ಉದ್ಯೋಗದಾತರ ಗ್ರಹಿಕೆ ಮತ್ತು ಸಂಶೋಧನಾ ಪ್ರಭಾವವನ್ನು ಪರಿಗಣಿಸುತ್ತದೆ.

ಕಳೆದ ದಶಕದ ರ‍್ಯಾಂಕಿಂಗ್‌ಗಳನ್ನು ಗಮನಿಸಿದರೆ, ಭಾರತೀಯ ವಿಶ್ವವಿದ್ಯಾಲಯಗಳು ಪದವಿ ನೀಡುವ ಮತ್ತು ಬೋಧನಾ ಕಾರ್ಯದಲ್ಲಿ ಹೆಚ್ಚು ಸಕ್ರಿಯವಾಗಿವೆ. ಆದರೆ ಸಂಶೋಧನಾ ತೊಡಗಿಕೆ, ಸಂಶೋಧನೆಯ ಜಾಗತಿಕ ಪ್ರಭಾವ, ಡಾಕ್ಟರೇಟ್ ಔಟ್‌ಪುಟ್ ಮತ್ತು ಅಂತರರಾಷ್ಟ್ರೀಯ ಸಹಯೋಗಗಳಲ್ಲಿ ದುರ್ಬಲ ಪ್ರದರ್ಶನ ನೀಡುತ್ತಿವೆ.

ಭಾರತದ ಸಮಸ್ಯೆ ಏನು?

Scopus ಮತ್ತು Web of Science ಡೇಟಾ ಪ್ರಕಾರ, ಭಾರತವು ಹೆಚ್ಚಿನ ಪ್ರಮಾಣದ ಶೈಕ್ಷಣಿಕ ಪ್ರಬಂಧಗಳನ್ನು ಪ್ರಕಟಿಸುತ್ತದೆ. ಆದರೆ ಪ್ರತಿ ಪ್ರಬಂಧಕ್ಕೆ ಸಿಗುವ ಉಲ್ಲೇಖದ ಪ್ರಮಾಣ ಯುಎಸ್, ಚೀನಾ, ಜರ್ಮನಿ ಮತ್ತು ಯುಕೆ ವಿಶ್ವವಿದ್ಯಾಲಯಗಳಿಗಿಂತ ಕಡಿಮೆಯಾಗಿದೆ. ಉನ್ನತ ಶ್ರೇಣಿಯ ವಿಶ್ವವಿದ್ಯಾಲಯಗಳು ಕಡಿಮೆ ಪ್ರಬಂಧಗಳನ್ನು ಪ್ರಕಟಿಸಿದರೂ ಹೆಚ್ಚಿನ ಜಾಗತಿಕ ಪ್ರಭಾವವನ್ನು ಹೊಂದಿವೆ.

ಇದಕ್ಕೆ ಪ್ರಮುಖ ಕಾರಣ ಸಂಶೋಧನೆಗೆ ದೊರಕುವ ಹಣಕಾಸು ಸಹಾಯ. ಸಂಶೋಧನೆ ಮತ್ತು ಅಭಿವೃದ್ಧಿ (R&D) ಮೇಲಿನ ಭಾರತದ ಒಟ್ಟು ದೇಶೀಯ ವೆಚ್ಚ ಜಿಡಿಪಿಯ 0.8% ಕ್ಕಿಂತ ಕಡಿಮೆಯಾಗಿದೆ. ಆದರೆ ಚೀನಾದಲ್ಲಿ ಇದು 2.5% ಕ್ಕಿಂತ ಹೆಚ್ಚು; ಅಮೆರಿಕದಲ್ಲಿ ಸುಮಾರು 3% ಮತ್ತು ದಕ್ಷಿಣ ಕೊರಿಯಾದಲ್ಲಿ 4% ಕ್ಕಿಂತ ಹೆಚ್ಚು ವೆಚ್ಚ ಮಾಡಲಾಗುತ್ತಿದೆ.

ಈ ಅಂತರವು ಲ್ಯಾಬ್ ಮೂಲಸೌಕರ್ಯ, ಸಂಶೋಧನಾ ಅನುದಾನ, ಪಿಎಚ್‌ಡಿ ನೇಮಕಾತಿ ಮತ್ತು ದೀರ್ಘಕಾಲೀನ ಯೋಜನೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಜಾಗತಿಕ ಉನ್ನತ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ತಂಡಗಳು ದೊಡ್ಡ ಡಾಕ್ಟರಲ್ ಮತ್ತು ಪೋಸ್ಟ್-ಡಾಕ್ಟರಲ್ ಸಮುದಾಯಗಳ ಸುತ್ತ ನಿರ್ಮಾಣವಾಗಿವೆ. ಆದರೆ ಭಾರತದಲ್ಲಿ ಅಧ್ಯಾಪಕರು ಹೆಚ್ಚಾಗಿ ಬೋಧನೆಗೆ ಮಾತ್ರ ಸೀಮಿತರಾಗಿದ್ದು, ನಿರಂತರ ಸಂಶೋಧನೆಗೆ ಬೇಕಾದ ಸಮಯ ಮತ್ತು ಬೆಂಬಲ ಸಿಗುವುದಿಲ್ಲ.

ಡಾಕ್ಟರಲ್ ಮತ್ತು ಪೋಸ್ಟ್-ಡಾಕ್ಟರಲ್ ವ್ಯವಸ್ಥೆ

ಪ್ರಮುಖ ಜಾಗತಿಕ ವಿಶ್ವವಿದ್ಯಾಲಯಗಳು ಪಿಎಚ್‌ಡಿ ಹೊಂದಿದ ಸಂಶೋಧಕರ ಸಂಖ್ಯೆಯ ಮೇಲೆ ನಿಂತಿವೆ. ಹಾರ್ವರ್ಡ್, ಎಂಐಟಿ, ಸ್ಟ್ಯಾನ್‌ಫೋರ್ಡ್ ಅಥವಾ ಆಕ್ಸ್‌ಫರ್ಡ್‌ನಲ್ಲಿ ಡಾಕ್ಟರಲ್ ಮತ್ತು ಪೋಸ್ಟ್-ಡಾಕ್ಟರಲ್ ಸಂಶೋಧಕರು ಸಂಶೋಧನಾ ಉತ್ಪಾದನೆಯ ಬೆನ್ನೆಲುಬಾಗಿದ್ದಾರೆ. ಆದರೆ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಪಿಎಚ್‌ಡಿ ದಾಖಲಾತಿ ಕಡಿಮೆಯಿದ್ದು, ಪೋಸ್ಟ್-ಡಾಕ್ಟರಲ್ ಹುದ್ದೆಗಳು ಅಪರೂಪವಾಗಿವೆ.

ಇದು ಸಂಶೋಧನೆಯ ಪ್ರಮಾಣ ಮತ್ತು ನಿರಂತರತೆಯನ್ನು ಮಿತಿಗೊಳಿಸುತ್ತದೆ. ಜಾಗತಿಕ ಸಂಸ್ಥೆಗಳಲ್ಲಿ ಶೈಕ್ಷಣಿಕ ಬಡ್ತಿ ಸಂಶೋಧನಾ ಕಾರ್ಯಕ್ಷಮತೆ, ಉಲ್ಲೇಖಗಳು, ಅನುದಾನಗಳು ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ಆಧಾರದ ಮೇಲೆ ನಡೆಯುತ್ತದೆ. ಆದರೆ ಭಾರತೀಯ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಹಿರಿತನ, ಸೇವಾ ನಿಯಮಗಳು ಮತ್ತು ಆಡಳಿತಾತ್ಮಕ ಅಂಶಗಳು ಪ್ರಮುಖವಾಗಿವೆ. ಇದು ಭಾರತವನ್ನು ಜಾಗತಿಕ ಸ್ಪರ್ಧೆಯಿಂದ ಹಿಂದೆ ತಳ್ಳುತ್ತದೆ.

ಅಂತರರಾಷ್ಟ್ರೀಯ ಉಪಸ್ಥಿತಿ ಮತ್ತು ಸಾಂಸ್ಥಿಕ ವಿನ್ಯಾಸ

ರ‍್ಯಾಂಕಿಂಗ್‌ ಗಳಲ್ಲಿ ಅಂತರರಾಷ್ಟ್ರೀಯ ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಗಡಿಯಾಚೆಗಿನ ಸಂಶೋಧನಾ ಸಹಯೋಗಕ್ಕೂ ಮಹತ್ವ ನೀಡಲಾಗುತ್ತದೆ. ಉನ್ನತ ವಿಶ್ವವಿದ್ಯಾಲಯಗಳು ಹೆಚ್ಚಿನ ಸಂಬಳ, ಮುಕ್ತ ನೇಮಕಾತಿ ಮತ್ತು ಹೊಂದಿಕೊಳ್ಳುವ ಒಪ್ಪಂದಗಳ ಮೂಲಕ ಜಾಗತಿಕ ಪ್ರತಿಭೆಗಳನ್ನು ಆಕರ್ಷಿಸುತ್ತವೆ.

ಭಾರತೀಯ ವಿಶ್ವವಿದ್ಯಾಲಯಗಳು ನಿಯಂತ್ರಣ ಅಡೆತಡೆಗಳು, ವೇತನ ಮಿತಿಗಳು ಮತ್ತು ವೀಸಾ ನಿಯಮಗಳ ಕಾರಣ ಜಾಗತಿಕ ನೇಮಕಾತಿಯಲ್ಲಿ ಹಿಂದುಳಿದಿವೆ. ಇದರ ಪರಿಣಾಮವಾಗಿ ಹೆಚ್ಚಿನ ಕ್ಯಾಂಪಸ್‌ಗಳು ದೇಶೀಯ ವಿದ್ಯಾರ್ಥಿ ಮತ್ತು ಅಧ್ಯಾಪಕರಿಗೇ ಸೀಮಿತವಾಗಿವೆ. ಅತಿಥಿ ಉಪನ್ಯಾಸಗಳಿಗಾಗಿ ವಿದೇಶಿ ಉಪನ್ಯಾಸಕರನ್ನು ಆಹ್ವಾನಿಸಿದರೂ, ಅವು ಸೀಮಿತ ಅವಧಿಗೆ ಮತ್ತು ಆಯ್ದ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿರುತ್ತವೆ.

ಭಾರತದಲ್ಲಿ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ ಕ್ಯಾಂಪಸ್‌ ಗಳಿಗೆ ಅವಕಾಶ ನೀಡುವುದು ದೇಶೀಯ ಸಂಸ್ಥೆಗಳಲ್ಲಿ ಸ್ಪರ್ಧೆಯನ್ನು ಹೆಚ್ಚಿಸಬಹುದು. ಆದರೆ ಇದು ಈಗಾಗಲೇ ದುರ್ಬಲವಾಗಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಹಿಂಜರಿಯಿಸಬಹುದು ಎಂಬ ಆತಂಕವೂ ಇದೆ. ಡೀಕಿನ್ ವಿಶ್ವವಿದ್ಯಾಲಯ, ವೊಲೊಂಗೊಂಗ್ ವಿಶ್ವವಿದ್ಯಾಲಯ, ಸೌತಾಂಪ್ಟನ್ ವಿಶ್ವವಿದ್ಯಾಲಯ ಮತ್ತು ಇಲಿನಾಯ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಈಗಾಗಲೇ ಭಾರತದಲ್ಲಿ ತಮ್ಮ ಕ್ಯಾಂಪಸ್‌ಗಳನ್ನು ಸ್ಥಾಪಿಸಿವೆ.

ಐಐಟಿಗಳು ಮತ್ತು ಹೆಚ್ಚಿನ ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಪೂರ್ಣ-ಸ್ಪೆಕ್ಟ್ರಮ್ ಸಂಶೋಧನಾ ವಿಶ್ವವಿದ್ಯಾಲಯಗಳಾಗಿ ವಿನ್ಯಾಸಗೊಳಿಸಲಾಗಿಲ್ಲ. ಇವು ನಿರ್ದಿಷ್ಟ ರಾಷ್ಟ್ರೀಯ ಅಗತ್ಯಗಳಿಗೆ ತಕ್ಕಂತೆ ಎಂಜಿನಿಯರ್‌ಗಳು, ವಿಜ್ಞಾನಿಗಳು ಮತ್ತು ಆಡಳಿತಗಾರರನ್ನು ತರಬೇತುಗೊಳಿಸಲು ಸ್ಥಾಪಿಸಲ್ಪಟ್ಟವು.

ವೈದ್ಯಕೀಯ, ಕಾನೂನು, ಸಮಾಜ ವಿಜ್ಞಾನ, ಸಾರ್ವಜನಿಕ ನೀತಿ, ಮಾನವಿಕ ಮತ್ತು ಜೀವ ವಿಜ್ಞಾನಗಳೊಂದಿಗೆ ಎಂಜಿನಿಯರಿಂಗ್ ಅನ್ನು ಒಂದೇ ಶೈಕ್ಷಣಿಕ ಛಾವಣಿಯಡಿ ಸಂಯೋಜಿಸುವ ಜಾಗತಿಕ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿ, ಹೆಚ್ಚಿನ ಭಾರತೀಯ ಸಂಸ್ಥೆಗಳು ಸಂಕುಚಿತ ರಚನೆ ಹೊಂದಿವೆ. ಒಂದು ಐಐಟಿ ವಿಶ್ವದರ್ಜೆಯ ಎಂಜಿನಿಯರ್‌ಗಳನ್ನು ಉತ್ಪಾದಿಸಬಹುದು, ಆದರೆ ವೈದ್ಯಕೀಯ ಶಾಲೆ ಅಥವಾ ಉನ್ನತ ಪ್ರಭಾವದ ಸಾಮಾಜಿಕ ವಿಜ್ಞಾನ ಸಂಶೋಧನಾ ವ್ಯವಸ್ಥೆ ಇಲ್ಲ.

ಜಾಗತಿಕ ವಿದ್ಯಾರ್ಥಿಗಳನ್ನು ಆಕರ್ಷಿಸುವಲ್ಲಿ ಭಾರತ ವಿಫಲ

ನೀತಿ ಆಯೋಗ್ ವರದಿ ಪ್ರಕಾರ, ಜಾಗತಿಕ ಶ್ರೇಯಾಂಕಿತ ವಿಶ್ವವಿದ್ಯಾಲಯಗಳ ಸೀಮಿತ ಉಪಸ್ಥಿತಿ, ವೀಸಾ ಪ್ರಕ್ರಿಯೆಗಳು, ನಿಯಂತ್ರಣ ಸಂಕೀರ್ಣತೆ, ದುರ್ಬಲ ಜಾಗತಿಕ ಬ್ರ್ಯಾಂಡಿಂಗ್ ಮತ್ತು ಅಸಮರ್ಪಕ ವಿದ್ಯಾರ್ಥಿ ಬೆಂಬಲ ವ್ಯವಸ್ಥೆಗಳು ಭಾರತಕ್ಕೆ ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಕರ್ಷಿಸಲು ಅಡ್ಡಿಯಾಗಿವೆ.

ಆಡಳಿತ ಮತ್ತು ಸ್ವಾಯತ್ತತೆ

ಭಾರತೀಯ ವಿಶ್ವವಿದ್ಯಾಲಯಗಳು ಯುಜಿಸಿ, ರಾಜ್ಯ ಸರ್ಕಾರಗಳು, ವೃತ್ತಿಪರ ಮಂಡಳಿಗಳು ಮತ್ತು ಸಚಿವಾಲಯಗಳಂತಹ ಹಲವು ನಿಯಂತ್ರಕರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಇದರಿಂದ ನೇಮಕಾತಿ, ಶುಲ್ಕ, ಸಹಯೋಗ ಮತ್ತು ಪಠ್ಯಕ್ರಮಗಳ ಮೇಲೆ ಪರಿಣಾಮ ಬೀರುತ್ತದೆ. ಜಾಗತಿಕ ವಿಶ್ವವಿದ್ಯಾಲಯಗಳು ಹೆಚ್ಚಿನ ಹಣಕಾಸು ಮತ್ತು ಶೈಕ್ಷಣಿಕ ಸ್ವಾಯತ್ತತೆಯೊಂದಿಗೆ ಕಾರ್ಯನಿರ್ವಹಿಸುತ್ತವೆ, ಇದು ಅವುಗಳಿಗೆ ವೇಗವಾಗಿ ತೀರ್ಮಾನ ಕೈಗೊಳ್ಳಲು ನೆರವಾಗುತ್ತದೆ.

ARWU ರ‍್ಯಾಂಕಿಂಗ್‌ ಮತ್ತು ಭಾರತದ ಸ್ಥಾನ

2025ರ ARWU ರ‍್ಯಾಂಕಿಂಗ್‌ ಪ್ರಕಾರ, ಅಮೆರಿಕ 111 ವಿಶ್ವವಿದ್ಯಾಲಯಗಳೊಂದಿಗೆ ಟಾಪ್ 500ರಲ್ಲಿ ಪ್ರಾಬಲ್ಯ ಸಾಧಿಸಿದೆ. ಚೀನಾ (ಹಾಂಗ್ ಕಾಂಗ್ ಮತ್ತು ಮಕಾವು ಸೇರಿ) 108 ಸಂಸ್ಥೆಗಳೊಂದಿಗೆ ಮುಂದುವರಿದಿದೆ. ಯುನೈಟೆಡ್ ಕಿಂಗ್‌ಡಮ್ ತನ್ನ ಪ್ರತಿನಿಧ್ಯವನ್ನು 37ಕ್ಕೆ ಹೆಚ್ಚಿಸಿದೆ.

ಹಾರ್ವರ್ಡ್ ವಿಶ್ವವಿದ್ಯಾಲಯ ಮೊದಲ ಸ್ಥಾನದಲ್ಲಿದ್ದರೆ, ನಂತರ ಸ್ಟ್ಯಾನ್‌ಫೋರ್ಡ್ ಮತ್ತು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಬರುತ್ತವೆ. ಕೇಂಬ್ರಿಡ್ಜ್ ನಾಲ್ಕನೇ ಸ್ಥಾನದಲ್ಲಿದ್ದು, ಆಕ್ಸ್‌ಫರ್ಡ್ ಆರನೇ ಸ್ಥಾನದಲ್ಲಿದೆ. ತ್ಸಿಂಗುವಾ ವಿಶ್ವವಿದ್ಯಾಲಯ 18ನೇ ಸ್ಥಾನಕ್ಕೆ ಏರಿ ಏಷ್ಯಾದ ಅಗ್ರ ವಿಶ್ವವಿದ್ಯಾಲಯವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಅಶೋಕ ವಿಶ್ವವಿದ್ಯಾಲಯ, ಒಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯ ಮತ್ತು ಅಮೃತ ವಿಶ್ವ ವಿದ್ಯಾಪೀಠ QS ಮತ್ತು THE ಪಟ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಇವು 500–1000 ಶ್ರೇಣಿಯಲ್ಲಿದ್ದರೂ, ಅವುಗಳ ಪ್ರಗತಿ ಗಮನಾರ್ಹವಾಗಿದೆ.

ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳು (Institutions of Eminence), ರಾಷ್ಟ್ರೀಯ ಶಿಕ್ಷಣ ನೀತಿ–2020 ಮತ್ತು ಹೆಚ್ಚಿದ ಸಂಶೋಧನಾ ನಿಧಿಗಳು ಈ ಅಂತರವನ್ನು ಕಡಿಮೆ ಮಾಡುವ ಗುರಿ ಹೊಂದಿವೆ. ಆದರೆ ಜಾಗತಿಕ ರ‍್ಯಾಂಕಿಂಗ್‌ಗಳು ತಕ್ಷಣದ ಸುಧಾರಣೆಯನ್ನು ಅಲ್ಲ, ದಶಕಗಳಿಂದ ಬೆಳೆದ ಸಂಶೋಧನಾ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News