×
Ad

ಭದ್ರತಾ ಪರಿಷ್ಕರಣೆ | ಸ್ಮಾರ್ಟ್‌ಫೋನ್ ತಯಾರಕರಿಂದ ಸೋರ್ಸ್ ಕೋಡ್ ಪಡೆಯಲು ಕೇಂದ್ರದ ಪ್ರಸ್ತಾವ

ಆಪಲ್, ಸ್ಯಾಮ್‌ಸಂಗ್ ಸೇರಿ ಜಾಗತಿಕ ಕಂಪೆನಿಗಳಿಂದ ತೀವ್ರ ಆಕ್ಷೇಪ

Update: 2026-01-13 18:37 IST

ಸಾಂದರ್ಭಿಕ ಚಿತ್ರ | Photo Credit : freepik

ಹೊಸದಿಲ್ಲಿ, ಜ. 13: ಭಾರತದಲ್ಲಿ ಆನ್‌ಲೈನ್ ವಂಚನೆ ಹಾಗೂ ಡೇಟಾ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬಳಕೆದಾರರ ಮಾಹಿತಿಯ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸ್ಮಾರ್ಟ್‌ಫೋನ್ ತಯಾರಕರಿಗೆ ಸಂಬಂಧಿಸಿದಂತೆ ವ್ಯಾಪಕ ಭದ್ರತಾ ಪರಿಷ್ಕರಣೆಗಳನ್ನು ಪ್ರಸ್ತಾಪಿಸಿದೆ.

ಈ ಪ್ರಸ್ತಾವನೆಯಡಿ ಸ್ಮಾರ್ಟ್‌ಫೋನ್ ತಯಾರಕರು ತಮ್ಮ ಸೋರ್ಸ್ ಕೋಡ್ ಅನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಬೇಕು ಹಾಗೂ ಭದ್ರತಾ ಕ್ರಮಗಳ ಭಾಗವಾಗಿ ಹಲವು ಸಾಫ್ಟ್‌ವೇರ್ ಬದಲಾವಣೆಗಳನ್ನು ಜಾರಿಗೆ ತರಬೇಕಾಗುತ್ತದೆ. ಆದರೆ ಈ ಕ್ರಮಗಳು ಆಪಲ್, ಸ್ಯಾಮ್‌ಸಂಗ್ ಸೇರಿದಂತೆ ಜಾಗತಿಕ ತಂತ್ರಜ್ಞಾನ ದೈತ್ಯ ಕಂಪನಿಗಳಿಂದ ತೀವ್ರ ವಿರೋಧಕ್ಕೆ ಗುರಿಯಾಗಿವೆ.

ಸುಮಾರು 750 ಮಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಹೊಂದಿರುವ ಭಾರತವು ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾಗಿದ್ದು, ಬಳಕೆದಾರರ ಡೇಟಾ ಸುರಕ್ಷತೆಯನ್ನು ಹೆಚ್ಚಿಸುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ.

ಕೇಂದ್ರವು ಪ್ರಸ್ತಾಪಿಸಿರುವ 83 ಭದ್ರತಾ ಮಾನದಂಡಗಳ ಪ್ಯಾಕೇಜ್‌ ನಲ್ಲಿ ಪ್ರಮುಖ ಸಾಫ್ಟ್‌ವೇರ್ ನವೀಕರಣಗಳು ಮತ್ತು ಭದ್ರತಾ ಪ್ಯಾಚ್‌ ಗಳ ಬಗ್ಗೆ ಮುಂಚಿತವಾಗಿ ಸರ್ಕಾರಕ್ಕೆ ಮಾಹಿತಿ ನೀಡುವ ನಿಯಮವೂ ಸೇರಿದೆ. ಆದರೆ ಈ ಮಾನದಂಡಗಳಿಗೆ ಜಾಗತಿಕ ಮಟ್ಟದಲ್ಲಿ ಯಾವುದೇ ಪೂರ್ವನಿದರ್ಶನ ಇಲ್ಲದೆ ಇರುವುದರಿಂದ ಹಾಗೂ ಇವು ಕಂಪೆನಿಗಳ ಸ್ವಾಮ್ಯದ ತಂತ್ರಜ್ಞಾನ ವಿವರಗಳನ್ನು ಬಹಿರಂಗಪಡಿಸುವ ಅಪಾಯವನ್ನು ಹೊಂದಿರುವುದರಿಂದ ತಂತ್ರಜ್ಞಾನ ಕಂಪೆನಿಗಳು ಗಂಭೀರ ಆಕ್ಷೇಪ ವ್ಯಕ್ತಪಡಿಸಿವೆ. ಈ ಕುರಿತು ನಡೆದ ಚರ್ಚೆಗಳು ಹಾಗೂ ಗೌಪ್ಯ ಸರ್ಕಾರ–ಉದ್ಯಮ ದಾಖಲೆಗಳನ್ನು ರಾಯಿಟರ್ಸ್ ಪರಿಶೀಲಿಸಿದೆ ಎಂದು ವಿಷಯಕ್ಕೆ ನೇರವಾಗಿ ಪರಿಚಿತರಾದ ನಾಲ್ವರು ವ್ಯಕ್ತಿಗಳು ತಿಳಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿದ ಐಟಿ ಕಾರ್ಯದರ್ಶಿ ಎಸ್. ಕೃಷ್ಣನ್, “ಉದ್ಯಮದ ಯಾವುದೇ ನ್ಯಾಯಸಮ್ಮತ ಕಾಳಜಿಗಳನ್ನು ಮುಕ್ತ ಮನಸ್ಸಿನಿಂದ ಪರಿಹರಿಸಲಾಗುವುದು. ಆದರೆ ಈ ಹಂತದಲ್ಲಿ ಹೆಚ್ಚಿನ ವಿವರ ನೀಡುವುದು ಅಕಾಲಿಕ” ಎಂದು ಹೇಳಿದ್ದಾರೆ. ತಂತ್ರಜ್ಞಾನ ಕಂಪೆನಿಗಳೊಂದಿಗೆ ಸಮಾಲೋಚನೆ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಹಿಂದೆಯೂ ಉದ್ವಿಗ್ನತೆ

ಸರ್ಕಾರದ ಭದ್ರತಾ ಅವಶ್ಯಕತೆಗಳು ತಂತ್ರಜ್ಞಾನ ಸಂಸ್ಥೆಗಳನ್ನು ಮೊದಲ ಬಾರಿಗೆ ಅಸಮಾಧಾನಗೊಳಿಸಿರುವುದಲ್ಲ. ಕಳೆದ ತಿಂಗಳು ಕಣ್ಗಾವಲು ಕುರಿತ ಕಳವಳಗಳ ನಡುವೆಯೇ ಫೋನ್‌ಗಳಲ್ಲಿ ಸರ್ಕಾರಿ-ಚಾಲಿತ ಸೈಬರ್ ಸುರಕ್ಷತಾ ಅಪ್ಲಿಕೇಶನ್ ಅನ್ನು ಕಡ್ಡಾಯಗೊಳಿಸುವ ಆದೇಶವನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿತ್ತು. ಆದರೆ ಕಳೆದ ವರ್ಷ ಚೀನೀ ಬೇಹುಗಾರಿಕೆಯ ಆತಂಕದ ಹಿನ್ನೆಲೆಯಲ್ಲಿ ಭದ್ರತಾ ಕ್ಯಾಮೆರಾಗಳಿಗೆ ಕಠಿಣ ಪರೀಕ್ಷೆಯನ್ನು ಸರ್ಕಾರ ಕಡ್ಡಾಯಗೊಳಿಸಿತ್ತು.

ಈ ವಿಷಯದ ಕುರಿತು ಪ್ರತಿಕ್ರಿಯೆ ಕೋರಿ ಸಂಪರ್ಕಿಸಿದಾಗ ಆಪಲ್, ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್, ಗೂಗಲ್, ಚೀನಾದ ಶಿಯೋಮಿ ಹಾಗೂ ಈ ಕಂಪೆನಿಗಳನ್ನು ಪ್ರತಿನಿಧಿಸುವ ಉದ್ಯಮ ಸಂಘಟನೆ ಮಾಹಿತಿ ತಂತ್ರಜ್ಞಾನ ತಯಾರಕರ ಸಂಘ (MAIT) ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕೌಂಟರ್‌ಪಾಯಿಂಟ್ ರಿಸರ್ಚ್ ಅಂದಾಜು ಪ್ರಕಾರ, ಭಾರತದಲ್ಲಿ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಬಳಸುವ ಫೋನ್‌ಗಳ ಪೈಕಿ ಶಿಯೋಮಿ 19% ಹಾಗೂ ಸ್ಯಾಮ್‌ಸಂಗ್ 15% ಮಾರುಕಟ್ಟೆ ಪಾಲು ಹೊಂದಿದ್ದರೆ, ಆಪಲ್ 5% ಪಾಲು ಹೊಂದಿದೆ.

ಸೋರ್ಸ್ ಕೋಡ್ ಪ್ರವೇಶಕ್ಕೆ ಒತ್ತಾಯ

ಹೊಸ ಭಾರತೀಯ ಟೆಲಿಕಾಂ ಭದ್ರತಾ ಖಾತರಿ ಅವಶ್ಯಕತೆಗಳಲ್ಲಿನ ಅತ್ಯಂತ ಸೂಕ್ಷ್ಮ ಅಂಶವೆಂದರೆ, ಫೋನ್‌ಗಳು ಕಾರ್ಯನಿರ್ವಹಿಸಲು ಆಧಾರವಾಗಿರುವ ಪ್ರೋಗ್ರಾಮಿಂಗ್ ಸೂಚನೆಗಳಾದ ಸೋರ್ಸ್ ಕೋಡ್‌ಗೆ ಸರ್ಕಾರ ಪ್ರವೇಶ ಪಡೆಯಬೇಕೆಂಬುದು. ಈ ಕೋಡ್‌ಗಳನ್ನು ಸರ್ಕಾರದಿಂದ ನಿಗದಿಪಡಿಸಲಾದ ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆ ಮತ್ತು ಅಗತ್ಯವಿದ್ದರೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ದಾಖಲೆಗಳು ತಿಳಿಸುತ್ತವೆ.

ಇದಲ್ಲದೆ, ಕಂಪೆನಿಗಳು ಪೂರ್ವಸ್ಥಾಪಿತ ಅಪ್ಲಿಕೇಶನ್‌ ಗಳನ್ನು ಅಸ್ಥಾಪಿಸಲು ಅವಕಾಶ ಕಲ್ಪಿಸಬೇಕು. “ದುರುದ್ದೇಶಪೂರಿತ ಬಳಕೆಯನ್ನು ತಡೆಯುವ” ಉದ್ದೇಶದಿಂದ ಕ್ಯಾಮೆರಾ ಮತ್ತು ಮೈಕ್ರೊಫೋನ್ ಬಳಸುವ ಅಪ್ಲಿಕೇಶನ್‌ ಗಳನ್ನು ನಿರ್ಬಂಧಿಸುವಂತೆ ಅಗತ್ಯ ಸಾಫ್ಟ್‌ವೇರ್ ಬದಲಾವಣೆಗಳನ್ನು ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ.

“ಜಾಗತಿಕವಾಗಿ ಇಂತಹ ಭದ್ರತಾ ಅವಶ್ಯಕತೆಗಳನ್ನು ಯಾವುದೇ ದೇಶವೂ ಕಡ್ಡಾಯಗೊಳಿಸಿಲ್ಲ” ಎಂದು ಆಪಲ್, ಸ್ಯಾಮ್‌ಸಂಗ್, ಗೂಗಲ್ ಮತ್ತು ಶಿಯೋಮಿ ಜೊತೆ ನಡೆದ ಸಭೆಗಳ ವಿವರಗಳನ್ನು ಒಳಗೊಂಡಿರುವ ಡಿಸೆಂಬರ್ ತಿಂಗಳ ಐಟಿ ಸಚಿವಾಲಯದ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.

2023ರಲ್ಲಿ ರೂಪಿಸಲಾದ ಈ ಭದ್ರತಾ ಮಾನದಂಡಗಳನ್ನು ಕಾನೂನುಬದ್ಧವಾಗಿ ಜಾರಿಗೊಳಿಸುವ ಬಗ್ಗೆ ಸರ್ಕಾರ ಪರಿಗಣಿಸುತ್ತಿರುವ ಹಿನ್ನೆಲೆಯಲ್ಲಿ ಅವು ಇದೀಗ ಮತ್ತಷ್ಟು ಗಮನ ಸೆಳೆದಿವೆ. ಈ ಕುರಿತು ಹೆಚ್ಚಿನ ಚರ್ಚೆ ನಡೆಸಲು ಐಟಿ ಸಚಿವಾಲಯದ ಅಧಿಕಾರಿಗಳು ಹಾಗೂ ತಂತ್ರಜ್ಞಾನ ಕಂಪನಿಗಳ ಹಿರಿಯ ಕಾರ್ಯನಿರ್ವಾಹಕರು ಮಂಗಳವಾರ (ಜನವರಿ 13, 2026) ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಅಪ್ರಾಯೋಗಿಕ’ ಎಂದ ಉದ್ಯಮ

ಸ್ಮಾರ್ಟ್‌ಫೋನ್ ತಯಾರಕರು ತಮ್ಮ ಸೋರ್ಸ್ ಕೋಡ್ ಅನ್ನು ಅತ್ಯಂತ ರಹಸ್ಯವಾಗಿ ಕಾಪಾಡುತ್ತಾರೆ. 2014ರಿಂದ 2016ರ ಅವಧಿಯಲ್ಲಿ ಚೀನಾದಿಂದ ಬಂದ ಸೋರ್ಸ್ ಕೋಡ್ ಬೇಡಿಕೆಯನ್ನು ಆಪಲ್ ನಿರಾಕರಿಸಿತ್ತು. ಅಮೆರಿಕದ ಕಾನೂನು ಜಾರಿ ಸಂಸ್ಥೆಗಳು ಸಹ ಅದನ್ನು ಪಡೆಯಲು ಪ್ರಯತ್ನಿಸಿ ವಿಫಲವಾಗಿವೆ.

“ದುರ್ಬಲತೆ ವಿಶ್ಲೇಷಣೆ” ಮತ್ತು “ಸೋರ್ಸ್ ಕೋಡ್ ವಿಮರ್ಶೆ”ಗೆ ಸಂಬಂಧಿಸಿದಂತೆ ಕೇಂದ್ರದ ಪ್ರಸ್ತಾವನೆಗಳು ತಯಾರಕರಿಂದ “ಸಂಪೂರ್ಣ ಭದ್ರತಾ ಮೌಲ್ಯಮಾಪನ”ವನ್ನು ನಿರೀಕ್ಷಿಸುತ್ತವೆ. ನಂತರ ದೇಶದ ಪರೀಕ್ಷಾ ಪ್ರಯೋಗಾಲಯಗಳು ಕೋಡ್ ಪರಿಶೀಲನೆ ಮತ್ತು ವಿಶ್ಲೇಷಣೆಯ ಮೂಲಕ ಸರ್ಕಾರದ ಹಕ್ಕುಗಳನ್ನು ಜಾರಿಗೊಳಿಸಬಹುದು ಎಂದು ಪ್ರಸ್ತಾವನೆ ವಿವರಿಸುತ್ತದೆ.

ಆದರೆ “ಗೌಪ್ಯತೆ ಮತ್ತು ಸ್ವಾಮ್ಯದ ಕಾರಣದಿಂದ ಇದು ಸಾಧ್ಯವಿಲ್ಲ” ಎಂದು MAIT ಸರ್ಕಾರಕ್ಕೆ ಸಲ್ಲಿಸಿರುವ ಗೌಪ್ಯ ಪ್ರತಿಕ್ರಿಯಾ ದಾಖಲೆಯಲ್ಲಿ ಸ್ಪಷ್ಟಪಡಿಸಿದೆ. ಯುರೋಪಿಯನ್ ಯೂನಿಯನ್, ಉತ್ತರ ಅಮೆರಿಕಾ, ಆಸ್ಟ್ರೇಲಿಯಾ ಮತ್ತು ಆಫ್ರಿಕಾದ ಪ್ರಮುಖ ದೇಶಗಳಲ್ಲಿಯೂ ಇಂತಹ ಅವಶ್ಯಕತೆಗಳನ್ನು ಕಡ್ಡಾಯಗೊಳಿಸಲಾಗಿಲ್ಲ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.

MAIT ಕಳೆದ ವಾರ ಈ ಪ್ರಸ್ತಾವನೆಯನ್ನು ಕೈಬಿಡುವಂತೆ ಸಚಿವಾಲಯವನ್ನು ಮನವಿ ಮಾಡಿಕೊಂಡಿದೆ ಎಂದು ನೇರ ಮಾಹಿತಿ ಹೊಂದಿರುವ ಮೂಲವೊಂದು ತಿಳಿಸಿದೆ.

ಕೇಂದ್ರದ ಪ್ರಸ್ತಾವನೆಗಳ ಪ್ರಕಾರ, ಫೋನ್‌ ಗಳಲ್ಲಿ ಸ್ವಯಂಚಾಲಿತ ಮತ್ತು ನಿಯಮಿತ ಮಾಲ್‌ವೇರ್ ಸ್ಕ್ಯಾನಿಂಗ್ ಕಡ್ಡಾಯವಾಗಲಿದೆ. ಜೊತೆಗೆ ಪ್ರಮುಖ ಸಾಫ್ಟ್‌ವೇರ್ ನವೀಕರಣಗಳು ಮತ್ತು ಭದ್ರತಾ ಪ್ಯಾಚ್‌ಗಳನ್ನು ಬಿಡುಗಡೆ ಮಾಡುವ ಮೊದಲು ರಾಷ್ಟ್ರೀಯ ಸಂವಹನ ಭದ್ರತಾ ಕೇಂದ್ರಕ್ಕೆ ಮಾಹಿತಿ ನೀಡಬೇಕಾಗುತ್ತದೆ. ಅವುಗಳನ್ನು ಪರೀಕ್ಷಿಸುವ ಹಕ್ಕನ್ನು ಕೇಂದ್ರ ಸರ್ಕಾರ ಹೊಂದಿರುತ್ತದೆ.

ನಿಯಮಿತ ಮಾಲ್‌ವೇರ್ ಸ್ಕ್ಯಾನಿಂಗ್‌ ನಿಂದ ಫೋನ್‌ ನ ಬ್ಯಾಟರಿ ಗಣನೀಯವಾಗಿ ಖಾಲಿಯಾಗುತ್ತದೆ ಎಂದು MAIT ದಾಖಲೆಯಲ್ಲಿ ಹೇಳಲಾಗಿದೆ. ತ್ವರಿತವಾಗಿ ಬಿಡುಗಡೆ ಮಾಡಬೇಕಾದ ಸಾಫ್ಟ್‌ವೇರ್ ನವೀಕರಣಗಳಿಗೆ ಸರ್ಕಾರದ ಅನುಮೋದನೆ ಪಡೆಯುವುದು “ಅಪ್ರಾಯೋಗಿಕ” ಎಂದೂ ಅದರಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ಫೋನ್‌ ನ ಸಿಸ್ಟಮ್ ಚಟುವಟಿಕೆಗಳ ಡಿಜಿಟಲ್ ದಾಖಲೆಗಳಾದ ಲಾಗ್‌ ಗಳನ್ನು ಕನಿಷ್ಠ 12 ತಿಂಗಳು ಸಾಧನದಲ್ಲೇ ಸಂಗ್ರಹಿಸಬೇಕೆಂದು ಕೇಂದ್ರ ಸರ್ಕಾರ ಬಯಸಿದೆ. ಆದರೆ “ಒಂದು ವರ್ಷದ ಲಾಗ್ ಈವೆಂಟ್‌ ಗಳನ್ನು ಸಂಗ್ರಹಿಸಲು ಸಾಧನದಲ್ಲಿ ಅಗತ್ಯವಿರುವಷ್ಟು ಸಂಗ್ರಹಣಾ ಸ್ಥಳವಿಲ್ಲ” ಎಂದು MAIT ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News