ಇರಾನ್‌ನಲ್ಲಿ ಪ್ರತಿಭಟನೆ ತೀವ್ರ; ಮಿಲಿಟರಿ ದಾಳಿಗೆ ಸಜ್ಜಾದ ಟ್ರಂಪ್, ‘ನಾವು ಯುದ್ಧದಾಹಿಗಳಲ್ಲ’ ಎಂದ ಇರಾನ್; ಇಲ್ಲಿವರೆಗಿನ ಬೆಳವಣಿಗೆಗಳು
Photo Credit : AP \ PTI
ಇರಾನ್ ಆಡಳಿತವನ್ನು ಪ್ರಶ್ನಿಸಿ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ಎರಡನೇ ವಾರವೂ ಮುಂದುವರಿದಿದ್ದು, ಸಾವಿನ ಸಂಖ್ಯೆ 544ಕ್ಕೆ ತಲುಪಿದೆ. ಈ ಪೈಕಿ 162 ಮಂದಿ ಪ್ರತಿಭಟನಕಾರರು, 41 ಮಂದಿ ಭದ್ರತಾ ಸಿಬ್ಬಂದಿ ಎಂದು ಮಾಧ್ಯಮಗಳು ವರದಿ ಮಾಡಿವೆ. ದೇಶಾದ್ಯಂತ ಇಂಟರ್ನೆಟ್ ಸ್ಥಗಿತ ಹಾಗೂ ಫೋನ್ ಲೈನ್‌ಗಳನ್ನು ಕಡಿತಗೊಳಿಸಿದ್ದರೂ ಪ್ರತಿಭಟನೆಗಳು ಹೆಚ್ಚುತ್ತಲೇ ಇವೆ ಎಂದು ಅಮೆರಿಕ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ದಿ ಸಂಸ್ಥೆ ತಿಳಿಸಿದೆ. 10,681ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಈ ನಡುವೆ, ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಮಾತುಕತೆ ನಡೆಸಲು ಬಯಸುತ್ತಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ಇರಾನ್‌ನಲ್ಲಿ ವ್ಯಾಪಕವಾದ ಪ್ರತಿಭಟನೆಗಳ ಪರಿಣಾಮಗಳು ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನಲ್ಲಿ ಮಧ್ಯಪ್ರವೇಶಿಸುವುದಾಗಿ ಬೆದರಿಕೆ ಹಾಕುತ್ತಿರುವುದನ್ನು ಇಸ್ರೇಲ್ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಇರಾನ್‌ನಲ್ಲಿ ಅಶಾಂತಿ ಮುಂದುವರಿದಿರುವ ಸಂದರ್ಭದಲ್ಲಿ ವಾಷಿಂಗ್ಟನ್ ಮಿಲಿಟರಿ ಹಸ್ತಕ್ಷೇಪ ಮಾಡಿದರೆ, ಅಮೆರಿಕದ ಮಿಲಿಟರಿ ಹಾಗೂ ವಾಣಿಜ್ಯ ನೆಲೆಗಳನ್ನು ಪ್ರತೀಕಾರಕ್ಕಾಗಿ ಕಾನೂನುಬದ್ಧ ಗುರಿಗಳಾಗಿ ಟೆಹ್ರಾನ್ ಪರಿಗಣಿಸುತ್ತದೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಕರ್ ಖಲೀಬಾಫ್ ಎಚ್ಚರಿಸಿದ್ದಾರೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಇರಾನ್ ಅಧಿಕಾರಿಗಳು ಗರಿಷ್ಠ ಸಂಯಮ ವಹಿಸಬೇಕು ಮತ್ತು ದೇಶದಲ್ಲಿ ಮಾಹಿತಿಗೆ ಪ್ರವೇಶವನ್ನು ಪುನಃ ಸಕ್ರಿಯಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇರಾನ್ ನಲ್ಲಿ ಏನಾಗುತ್ತಿದೆ?
ಡಿಸೆಂಬರ್ 28ರಂದು ಇರಾನಿನ ಕರೆನ್ಸಿ ರಿಯಾಲ್ ಕುಸಿತ ಮತ್ತು ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆಗಳು ಆರಂಭವಾಗಿವೆ. ಇರಾನ್‌ನ ವಿವಾದಿತ ಪರಮಾಣು ಕಾರ್ಯಕ್ರಮದ ಮೇಲೆ ಹೇರಲಾದ ಅಂತರರಾಷ್ಟ್ರೀಯ ನಿರ್ಬಂಧಗಳಿಂದ ಆರ್ಥಿಕತೆ ಒತ್ತಡಕ್ಕೆ ಒಳಗಾಗಿದ್ದು, ಟೆಹ್ರಾನ್‌ನ ಕರೆನ್ಸಿ ಯುಎಸ್ ಡಾಲರ್‌ಗೆ 1.4 ಮಿಲಿಯನ್ ರಿಯಾಲ್‌ಗಳಿಗಿಂತ ಹೆಚ್ಚಿನ ಮಟ್ಟಕ್ಕೆ ಕುಸಿದಿದೆ.
ಟೆಹ್ರಾನ್, ಮಶಾದ್ ಸೇರಿದಂತೆ ಹಲವು ನಗರಗಳಲ್ಲಿ ರಾತ್ರಿಯಿಡೀ ಪ್ರತಿಭಟನಾಕಾರರು ಬೀದಿಗಿಳಿದು ಘೋಷಣೆ ಕೂಗುತ್ತಾ, ಚಪ್ಪಾಳೆ ತಟ್ಟುತ್ತಾ ಮತ್ತು ಮೊಬೈಲ್ ಫೋನ್ ಟಾರ್ಚ್ ಬೆಳಗಿಸಿ ಪ್ರತಿಭಟನೆ ನಡೆಸಿದ್ದಾರೆ. ಬಹುತೇಕ ಶಿಯಾ ಸಮುದಾಯವೇ ಇರುವ ಇರಾನ್‌ನಲ್ಲಿ ಧಾರ್ಮಿಕ ಪ್ರಭುತ್ವ ಆಡಳಿತವಿದೆ. ಇಲ್ಲಿನ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ.
ಮೊದಲ ಬಾರಿಗೆ ಅಲ್ಲಿನ ಜನರು ದೇವಪ್ರಭುತ್ವದ ವಿರುದ್ಧ ದೊಡ್ಡ ಮಟ್ಟದಲ್ಲಿ ಬೀದಿಗಿಳಿದಿದ್ದಾರೆ. ರಾಜಕೀಯ ಸ್ವಾತಂತ್ರ್ಯದ ಕೊರತೆ, ಆರ್ಥಿಕ ಕುಸಿತ ಮತ್ತು ಭ್ರಷ್ಟಾಚಾರವೇ ಜನಾಕ್ರೋಶಕ್ಕೆ ಕಾರಣಗಳೆಂದು ಹೇಳಲಾಗುತ್ತಿದ್ದು, ಸರ್ಕಾರವನ್ನು ಕಿತ್ತೊಗೆಯುವುದೇ ತಮ್ಮ ಗುರಿ ಎಂದು ಪ್ರತಿಭಟನಾಕಾರರು ಘೋಷಿಸಿದ್ದಾರೆ. ಇತ್ತ ಖಮೇನಿ ಪ್ರತಿಭಟನಾಕಾರರನ್ನು ದೊಂಬಿಕೋರರು ಎಂದು ಹೇಳಿದ್ದು, ಅಮೆರಿಕವನ್ನು ಮೆಚ್ಚಿಸಲು ಇವರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಎಎಫ್‌ಪಿ ಸುದ್ದಿ ಸಂಸ್ಥೆ ದೃಢೀಕರಿಸಿದ ವೀಡಿಯೊವೊಂದರಲ್ಲಿ, ಟೆಹ್ರಾನ್‌ನ ದಕ್ಷಿಣದಲ್ಲಿರುವ ಕಹ್ರಿಜಾಕ್‌ನ ಶವಾಗಾರದ ಹೊರಗೆ ಡಜನ್ಗಟ್ಟಲೆ ಶವಗಳಿರುವುದು ಕಾಣಿಸಿದೆ. ಈ ಹಿಂದೆ ಇರಾನ್‌ನ ಮಾನವ ಹಕ್ಕುಗಳ ಕೇಂದ್ರ (CHRI) ಅನ್ನು ಉಲ್ಲೇಖಿಸಿ ಎಎಫ್‌ಪಿ ವರದಿಯೊಂದು, ಪ್ರಸ್ತುತ ಇಂಟರ್ನೆಟ್ ಸ್ಥಗಿತದ ಸಮಯದಲ್ಲಿ ಇರಾನ್‌ನಾದ್ಯಂತ ನೂರಾರು ಪ್ರತಿಭಟನಾಕಾರರು ಸಾವನ್ನಪ್ಪಿರುವ ವಿಶ್ವಾಸಾರ್ಹ ವರದಿಗಳು ಲಭ್ಯವಾಗಿವೆ ಎಂದು ಹೇಳಿದೆ. ಇರಾನ್‌ನಲ್ಲಿ ಹತ್ಯಾಕಾಂಡ ನಡೆಯುತ್ತಿದೆ. ಮತ್ತಷ್ಟು ಜೀವಹಾನಿಯನ್ನು ತಡೆಯಲು ಜಗತ್ತು ಈಗಲೇ ಕಾರ್ಯನಿರ್ವಹಿಸಬೇಕು ಎಂದು CHRI ಹೇಳಿದೆ.
ಮಿಲಿಟರಿ ದಾಳಿ ಬೆದರಿಕೆ ಹಾಕಿದ ಟ್ರಂಪ್
ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ, ಪ್ರತಿಭಟನಾಕಾರರ ಮೇಲೆ ದಮನಕ್ಕಾಗಿ ಇಸ್ಲಾಮಿಕ್ ಗಣರಾಜ್ಯದ ಮೇಲೆ ಮಿಲಿಟರಿ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ ಬಳಿಕ ಇರಾನ್ ಮಾತುಕತೆಗಳನ್ನು ಪ್ರಸ್ತಾಪಿಸಿದೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಮಿಲಿಟರಿ ಆಯ್ಕೆಗಳನ್ನು ಪರಿಶೀಲಿಸಲಾಗುತ್ತಿದೆ. “ನಾವು ಕೆಲವು ಬಲವಾದ ಆಯ್ಕೆಗಳನ್ನು ನೋಡುತ್ತಿದ್ದೇವೆ” ಎಂದು ಭಾನುವಾರ ರಾತ್ರಿ ಏರ್ ಫೋರ್ಸ್ ಒನ್‌ನಲ್ಲಿ ವರದಿಗಾರರಿಗೆ ಟ್ರಂಪ್ ತಿಳಿಸಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಇರಾನ್‌ನ ಪ್ರತೀಕಾರದ ಬೆದರಿಕೆಗಳ ಬಗ್ಗೆ ಕೇಳಿದಾಗ, “ಅವರು ಹಾಗೆ ಮಾಡಿದರೆ, ನಾವು ಅವರ ಮೇಲೆ ಹಿಂದೆಂದೂ ದಾಳಿ ಮಾಡದ ಮಟ್ಟದಲ್ಲಿ ದಾಳಿ ಮಾಡುತ್ತೇವೆ” ಎಂದು ಟ್ರಂಪ್ ಹೇಳಿದ್ದಾರೆ.
ಟೆಹ್ರಾನ್ ಜೊತೆ ಸಭೆ ನಡೆಸಲು ತಮ್ಮ ಆಡಳಿತ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ. “ಅವರು ಅಮೆರಿಕದಿಂದ ಹೊಡೆತ ತಿನ್ನುವುದರಿಂದ ಬೇಸತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಇರಾನ್ ಮಾತುಕತೆ ನಡೆಸಲು ಬಯಸುತ್ತದೆ” ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಮಂಗಳವಾರ ಹಿರಿಯ ಸಲಹೆಗಾರರನ್ನು ಭೇಟಿಯಾಗಿ ಮಿಲಿಟರಿ ದಾಳಿ, ಸೈಬರ್ ಕಾರ್ಯಾಚರಣೆ, ಕಠಿಣ ನಿರ್ಬಂಧಗಳು ಹಾಗೂ ಸರ್ಕಾರ ವಿರೋಧಿ ಗುಂಪುಗಳಿಗೆ ಆನ್‌ಲೈನ್ ಬೆಂಬಲ ಸೇರಿದಂತೆ ಹಲವು ಆಯ್ಕೆಗಳನ್ನು ಚರ್ಚಿಸುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಸ್ಟಾರ್‌ಲಿಂಕ್ ಮೂಲಕ ಇರಾನ್‌ನಲ್ಲಿ ಇಂಟರ್ನೆಟ್ ಪ್ರವೇಶವನ್ನು ಮರುಸ್ಥಾಪಿಸುವ ಕುರಿತು ಎಲೋನ್ ಮಸ್ಕ್ ಜೊತೆ ಮಾತನಾಡುವುದಾಗಿ ಟ್ರಂಪ್ ಹೇಳಿದ್ದಾರೆ.
ನಾವು ಯುದ್ಧದಾಹಿಗಳಲ್ಲ: ಇರಾನ್
ಅಮೆರಿಕದೊಂದಿಗೆ ಸಂವಹನಕ್ಕೆ ಸಿದ್ಧವಾಗಿದ್ದೇವೆ. ನಾವು ಮುಖಾಮುಖಿ ಅಥವಾ ಸಂವಾದಕ್ಕೆ ಸಿದ್ಧ ಎಂದು ಇರಾನ್ ವಿದೇಶಾಂಗ ಸಚಿವರು ಸೋಮವಾರ ಹೇಳಿದ್ದಾರೆ. “ನಾವು ಯುದ್ಧದಾಹಿಗಳಲ್ಲ, ಆದರೆ ಯುದ್ಧಕ್ಕೆ ಸಿದ್ಧ. ಸಮಾನ ಹಕ್ಕುಗಳು ಮತ್ತು ಪರಸ್ಪರ ಗೌರವದೊಂದಿಗೆ ನ್ಯಾಯಯುತ ಮಾತುಕತೆಗಳಿಗೆ ಸಿದ್ಧ” ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ಇರಾನ್‌ನಲ್ಲಿನ ರಾಯಭಾರಿಗಳ ಸಭೆಯಲ್ಲಿ ಹೇಳಿದ್ದಾರೆ.
ಟೆಹ್ರಾನ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ, “ಸಂವಹನಕ್ಕೆ ನಾವು ಮುಕ್ತವಾಗಿದ್ದೇವೆ. ಅಗತ್ಯವಿದ್ದಾಗ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಆದರೆ ಆ ಮಾತುಕತೆಗಳು ಪರಸ್ಪರ ಹಿತಾಸಕ್ತಿಗಳು ಮತ್ತು ಕಾಳಜಿಗಳ ಸ್ವೀಕಾರವನ್ನು ಆಧರಿಸಿರಬೇಕು; ಏಕಪಕ್ಷೀಯ ಅಥವಾ ಆಜ್ಞಾಧಾರಿತ ಮಾತುಕತೆಗಳಾಗಿರಬಾರದು” ಎಂದು ಹೇಳಿದ್ದಾರೆ.
ಇರಾನ್ ಶಾಸಕರ ಎಚ್ಚರಿಕೆ
ಇರಾನ್ ಮೇಲೆ ದಾಳಿ ನಡೆದರೆ, ಆಕ್ರಮಿತ ಪ್ರದೇಶಗಳು ಮತ್ತು ಈ ಪ್ರದೇಶದಲ್ಲಿನ ಎಲ್ಲಾ ಅಮೆರಿಕನ್ ಮಿಲಿಟರಿ ಕೇಂದ್ರಗಳು, ನೆಲೆಗಳು ಹಾಗೂ ಹಡಗುಗಳು ನಮ್ಮ ಕಾನೂನುಬದ್ಧ ಗುರಿಗಳಾಗಿರುತ್ತವೆ ಎಂದು ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಕರ್ ಖಲೀಬಾಫ್ ಹೇಳಿದ್ದಾರೆ ಎಂದು ಇರಾನ್ ಇಂಟರ್ನ್ಯಾಷನಲ್ ವರದಿ ಮಾಡಿದೆ. “ನಾವು ಕ್ರಮದ ನಂತರ ಪ್ರತಿಕ್ರಿಯಿಸುವುದಕ್ಕೆ ಮಾತ್ರ ಸೀಮಿತವಿಲ್ಲ; ಬೆದರಿಕೆಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಇರಾನ್ ಮೇಲೆ ಹೆಚ್ಚಿನ ನಿರ್ಬಂಧಗಳಿಗೆ ಯುರೋಪಿಯನ್ ಒಕ್ಕೂಟ ಸಿದ್ಧ
ಅಗತ್ಯವಿದ್ದರೆ ಇರಾನ್ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲು ಸಿದ್ಧ ಎಂದು ಯುರೋಪಿಯನ್ ಒಕ್ಕೂಟ ಹೇಳಿದೆ. ಪ್ರತಿಭಟನಾಕಾರರ ಮೇಲಿನ ಹಿಂಸಾತ್ಮಕ ದಮನದ ಹಿನ್ನೆಲೆಯಲ್ಲಿ ಹೊಸ ಮತ್ತು ಹೆಚ್ಚು ಕಠಿಣ ನಿರ್ಬಂಧಗಳನ್ನು ಪ್ರಸ್ತಾಪಿಸಲು ನಾವು ಸಿದ್ಧ ಎಂದು ವಕ್ತಾರ ಅನೌರ್ ಎಲ್ ಅನೌನಿ ಹೇಳಿದ್ದಾರೆ. ಮಾನವ ಹಕ್ಕುಗಳಿಂದ ಹಿಡಿದು ಪರಮಾಣು ಚಟುವಟಿಕೆಗಳವರೆಗೆ ಹಲವು ವಿಷಯಗಳ ಕುರಿತು ಇರಾನ್ ಮೇಲೆ ಈಗಾಗಲೇ ನಿರ್ಬಂಧಗಳು ಜಾರಿಯಲ್ಲಿವೆ.
ರಾಜಧಾನಿಯಲ್ಲಿ ಪ್ರಮುಖ ರ‍್ಯಾಲಿಯಲ್ಲಿ ಭಾಗವಹಿಸಿದ ಇರಾನ್ ಅಧ್ಯಕ್ಷರು
ಟೆಹ್ರಾನ್‌ನಲ್ಲಿ ನಡೆದ ದೊಡ್ಡ ರ‍್ಯಾಲಿ ಸೇರಿದಂತೆ ವಿವಿಧ ನಗರಗಳಲ್ಲಿ ಸರ್ಕಾರಿ ಪರ ರ‍್ಯಾಲಿಗಳ ದೃಶ್ಯಗಳನ್ನು ಇರಾನಿನ ಮಾಧ್ಯಮಗಳು ಪ್ರಸಾರ ಮಾಡಿವೆ. ಸಾವಿರಾರು ಜನರು ಈ ರ‍್ಯಾಲಿಗಳಲ್ಲಿ ಭಾಗವಹಿಸಿದ್ದರು. ರಾಜಧಾನಿಯಲ್ಲಿ ನಡೆದ ರ‍್ಯಾಲಿಯಲ್ಲಿ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಭಾಗವಹಿಸಿದ್ದ ವೀಡಿಯೊವನ್ನು ರಾಜ್ಯ ಸ್ವಾಮ್ಯದ ಮಾಧ್ಯಮಗಳು ಪ್ರಸಾರ ಮಾಡಿವೆ.
ಎರಡು ವಾರಗಳ ಹಿಂದೆ ಆರಂಭವಾದ ಮಾರಕ ಹಿಂಸಾಚಾರವನ್ನು ಖಂಡಿಸಲು ಸೋಮವಾರ ನಡೆದ “ರಾಷ್ಟ್ರೀಯ ಪ್ರತಿರೋಧ ಮೆರವಣಿಗೆ”ಯಲ್ಲಿ ಭಾಗವಹಿಸಲು ಪೆಜೆಶ್ಕಿಯಾನ್ ಇರಾನಿಯನ್ನರನ್ನು ಒತ್ತಾಯಿಸಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಕುಂದುಕೊರತೆಗಳನ್ನು ಪರಿಹರಿಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದು, ತಮ್ಮ ಸರ್ಕಾರ ಪ್ರತಿಭಟನಾಕಾರರ ಮಾತುಗಳನ್ನು ಕೇಳಲು ಸಿದ್ಧವಿದೆ ಎಂದು ಹೇಳಿದ್ದಾರೆ. ಗಲಭೆಕೋರರು ಹಾಗೂ ಭಯೋತ್ಪಾದಕ ಶಕ್ತಿಗಳು ನಾಶನಷ್ಟ ಉಂಟುಮಾಡುವುದನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಹೊರಗಿನ ಹಸ್ತಕ್ಷೇಪ ವಿರೋಧಿಸಿದ ಚೀನಾ
ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಬಲಪ್ರಯೋಗವನ್ನು ವಿರೋಧಿಸುತ್ತೇವೆ. ಅಲ್ಲಿನ ಸರ್ಕಾರ ಮತ್ತು ಜನರು ಪ್ರಸ್ತುತ ತೊಂದರೆಗಳನ್ನು ನಿವಾರಿಸಲು ಹಾಗೂ ರಾಷ್ಟ್ರೀಯ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಮರ್ಥರಾಗಿದ್ದಾರೆ ಎಂದು ಚೀನಾ ಹೇಳಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಸೋಮವಾರ ಬೀಜಿಂಗ್‌ನಲ್ಲಿ ಮಾತನಾಡಿ, “ಇತರ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪವನ್ನು ಚೀನಾ ಯಾವಾಗಲೂ ವಿರೋಧಿಸುತ್ತದೆ. ಎಲ್ಲಾ ದೇಶಗಳ ಸಾರ್ವಭೌಮತ್ವ ಮತ್ತು ಭದ್ರತೆಯನ್ನು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಸಂಪೂರ್ಣವಾಗಿ ರಕ್ಷಿಸಬೇಕು. ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಬಲಪ್ರಯೋಗ ಅಥವಾ ಅದರ ಬೆದರಿಕೆಯನ್ನು ಚೀನಾ ವಿರೋಧಿಸುತ್ತದೆ” ಎಂದು ಹೇಳಿದ್ದಾರೆ.