ಜ. 12ರಿಂದ ರೈಲ್ವೆ ಟಿಕೆಟ್ ಖರೀದಿಯಲ್ಲಿ ಆಗಿರುವ ಬದಲಾವಣೆ ಏನು?
Photo Credit : PTI
ಭಾರತೀಯ ರೈಲ್ವೆ ಆನ್ಲೈನ್ ರಿಸರ್ವೇಶನ್ ನಿಯಮಗಳನ್ನು ಬದಲಿಸಿದೆ. ಇದೀಗ ಐಆರ್ಸಿಟಿಸಿಯಲ್ಲಿ ಆಧಾರ್ ದೃಢೀಕರಣ ಮಾಡಿದವರಿಗೆ ಟಿಕೆಟು ಖರೀದಿಯಲ್ಲಿ ಆದ್ಯತೆ ನೀಡಲಾಗುತ್ತಿದೆ.
ಹಿಂದಿನಿಂದಲೂ ರೈಲ್ವೇ ಟಿಕೆಟ್ ಖರೀದಿಸುವ ಬುಕಿಂಗ್ ಓಪನ್ ದಿನ ಬಹಳ ಗೋಜಲಾಗಿರುತ್ತದೆ. ಮುಖ್ಯವಾಗಿ ಹಬ್ಬದ ದಿನಗಳಲ್ಲಿ ಟಿಕೆಟ್ ಖರೀದಿಗೆ ಅವಕಾಶವೇ ಸಿಗುವುದಿಲ್ಲ. ಇದೀಗ ಅದು ಬದಲಾಗಿದೆ. ಆಧಾರ್ ನೋಂದಾಯಿತರಿಗೆ ಬುಕಿಂಗ್ ಓಪನಿಂಗ್ ದಿನ ಪ್ರತ್ಯೇಕವಾದ ಅವಕಾಶವನ್ನು ಕೊಡಲಾಗಿದೆ.
ಸೋಮವಾರ 2026 ಜನವರಿ 12ರಿಂದ ಭಾರತದಲ್ಲಿ ರೈಲು ಟಿಕೆಟ್ ಬುಕ್ ಮಾಡುವ ರೀತಿ ಬದಲಾಗಿದೆ. ಭಾರತೀಯ ರೈಲ್ವೆ ಆನ್ಲೈನ್ ರಿಸರ್ವೇಶನ್ ನಿಯಮಗಳನ್ನು ಬದಲಿಸಿದೆ. ಐಆರ್ಸಿಟಿಸಿಯಲ್ಲಿ ಆಧಾರ್ ದೃಢೀಕರಣ ಮಾಡಿದವರಿಗೆ ಟಿಕೆಟು ಖರೀದಿಯಲ್ಲಿ ಆದ್ಯತೆ ನೀಡಲಾಗುತ್ತಿದೆ.
ಬದಲಾದ ಟಿಕೆಟ್ ಕಾಯ್ದಿರಿಸುವಿಕೆ:
ಭಾರತೀಯ ರೈಲ್ವೆ ಅಡ್ವಾನ್ಸ್ ರಿಸರ್ವೇಶನ್ ಪೀರೆಡ್ (ಎಆರ್ಪಿ) ವ್ಯವಸ್ಥೆಯಲ್ಲಿ ಪ್ರಯಾಣಿಕರು ಸಮಯಕ್ಕೆ ಮೊದಲೇ ಟಿಕೆಟ್ ಬುಕ್ ಮಾಡಿಡಲು ಅವಕಾಶ ಕೊಡುತ್ತದೆ. ಆದರೆ, ಬುಕಿಂಗ್ ವಿಂಡೋ ತೆರೆದ ತಕ್ಷಣ ಬೇಡಿಕೆ ಏರುತ್ತದೆ ಮತ್ತು ಹೈ ಟ್ರಾಫಿಕ್ ರಸ್ತೆಗಳಲ್ಲಿ ನಿಮಿಷಗಳ ಒಳಗೆ ಟಿಕೆಟು ಮಾರಾಟವಾಗಿಬಿಡುತ್ತದೆ. ಆನ್ಲೈನ್ ಬುಕಿಂಗ್ ಅನ್ನು ಐಆರ್ಸಿಟಿಸಿ ಮೂಲಕ ಮತ್ತು ಆಫ್ಲೈನ್ ಬುಕಿಂಗ್ ಅನ್ನು ಸ್ಟೇಷನ್ ರಿಸರ್ವೇಶನ್ ಕೌಂಟರ್ ಗಳ ಮೂಲಕ ನಡೆಸಲಾಗುತ್ತದೆ. ಇದೀಗ ಆಧಾರ್ ದೃಢೀಕರಣವನ್ನು ನಿಧಾನವಾಗಿ ತರಲಾಗಿದೆ. ಇದರಿಂದ ನಿಜವಾದ ಪ್ರಯಾಣಿಕರು ತಮ್ಮ ಆಧಾರ್ ದೃಢೀಕರಣದ ಮೂಲಕ ಟಿಕೆಟ್ ಖರೀದಿಸಬಹುದು. ದೊಡ್ಡ ಪ್ರಮಾಣದಲ್ಲಿ ಏಜೆಂಟರು ಟಿಕೆಟ್ ಖರೀದಿಸುವುದು ಕಡಿಮೆಯಾಗಲಿದೆ.
ಆನ್ಲೈನ್ ಬುಕಿಂಗ್ ಗೆ ಮಾತ್ರ ಅನ್ವಯ
2026 ಜನವರಿ 12ರಿಂದ ಬದಲಾಗುವ ನಿಯಮ ಆನ್ಲೈನ್ ಬುಕಿಂಗ್ ಗಳಿಗೆ ಮಾತ್ರ ಅನ್ವಯಿಸುತ್ತದೆ. ಮುಖ್ಯವಾಗಿ ಅಡ್ವಾನ್ಸ್ ರಿಸರ್ವೇಶನ್ ಅವಧಿಯ ಮೊದಲ ದಿನಕ್ಕೆ ಅನ್ವಯಿಸುತ್ತದೆ. ಮೊದಲ ದಿನದಂದು ಆಧಾರ್ ನೋಂದಣಿ ಮಾಡಿದ ಐಆರ್ಸಿಟಿಸಿ ಬಳಕೆದಾರರಿಗೆ ಮಾತ್ರವೇ ಬುಕ್ ಮಾಡಲು ಅವಕಾಶವಿದೆ. ಬೆಳಗ್ಗೆ 8 ಗಂಟೆಯಿಂದ ಮಧ್ಯರಾತ್ರಿಯವರೆಗೆ ಬುಕ್ ಮಾಡಬಹುದಾಗಿದೆ. ಆಧಾರ್ ನೋಂದಾಯಿಸದವರು ಮೊದಲ ದಿನ ಬುಕ್ ಮಾಡುವಂತಿಲ್ಲ. ಸ್ಥಾನ ಲಭ್ಯತೆ ಆಧರಿಸಿ ನಂತರ ಬುಕ್ ಮಾಡಿಕೊಳ್ಳಬಹುದು. ಮೊದಲಿಗೆ ಆಧಾರ್ ದೃಢೀಕರಣಗೊಂಡವರಿಗೆ ಸೀಮಿತ ಸ್ಲಾಟ್ ಗಳನ್ನು ಇಡಲಾಗಿತ್ತು. ಅದನ್ನು ಸ್ವಲ್ಪ ಸ್ವಲ್ಪವೇ ಏರಿಸಲಾಗಿತ್ತು. ಹೊಸ ನಿಯಮದಿಂದ ಅವರ ಅವಕಾಶ ವಿಸ್ತರಣೆಗೊಂಡಿದೆ.
ಬದಲಾಗದೆ ಇರುವುದೇನು?
ತತ್ಕಾಲ್ ಬುಕಿಂಗ್ ಗೆ ಈಗಾಗಲೇ ಆಧಾರ್ ಕಡ್ಡಾಯ ಮಾಡಲಾಗಿದೆ. ಅದು ಹಿಂದಿನಂತೆಯೇ ಇದೆ. ಪಿಆರ್ ಎಸ್ ಕೌಂಟರ್ ಬುಕಿಂಗ್ ನಲ್ಲಿ ಈಗಿರುವ ಗುರುತಿನಚೀಟಿ ನೀಡಿ ಬುಕ್ ಮಾಡಿಕೊಳ್ಳಬಹುದಾಗಿದೆ. ಅಡ್ವಾನ್ಸ್ ಬುಕಿಂಗ್ ನ ಅವಧಿಯಲ್ಲಿ ಬದಲಾವಣೆ ತರಲಾಗಿಲ್ಲ.
ಆಧಾರ್ ದೃಢೀಕರಣ ಹೇಗೆ?
ಮೊದಲ ದಿನದ ಅಡ್ವಾನ್ಸ್ ಬುಕಿಂಗ್ ನಲ್ಲಿ ತಡೆರಹಿತ ಬುಕಿಂಗ್ ಮಾಡ ಬಯಸುವವರು ಆಧಾರ್ ದೃಢೀಕರಣವನ್ನು ಮೊದಲೇ ಮಾಡಿರಬೇಕು. ಅದಕ್ಕಾಗಿ ಐಆರ್ಸಿಟಿಸಿ ಖಾತೆಯನ್ನು ವೆಬ್ ಸೈಟ್ ಮೂಲಕ ಅಥವಾ ಮೊಬೈಲ್ ಆ್ಯಪ್ ಮೂಲಕ ಪ್ರವೇಶಿಸಬಹುದು. ಅಲ್ಲಿ ಮೊದಲೇ ಆಧಾರ್ ದೃಢೀಕರಣ ಮಾಡಿಸಿಕೊಳ್ಳಿ. ಐಆರ್ಸಿಟಿಸಿ ಖಾತೆಗೆ ಲಾಗಿನ್ ಆಗಿ. ಮೈ ಅಕೌಂಟ್ಗೆ ಹೋಗಿ. ಆಧಾರ್ ನೋಂದಣಿ ಅಥವಾ ಪ್ರೊಫೈಲ್ ದೃಢೀಕರಣಕ್ಕೆ ಹೋಗಿ. ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ. ಆಧಾರ್ ಲಿಂಕ್ಡ್ ಮೊಬೈಲ್ ಸಂಖ್ಯೆಗೆ ಒಟಿಪಿ ಸಿಗುತ್ತದೆ. ಒಟಿಪಿ ಹಾಕಿ ದೃಢೀಕರಿಸಿ ಮತ್ತು ಬೇಡಿಕೆ ಸಲ್ಲಿಸಿ. ಒಮ್ಮೆ ದೃಢೀಕರಣಗೊಂಡ ನಂತರ ನಿಮ್ಮ ಪ್ರೊಫೈಲ್ ಮೇಲೆ ಆಧಾರ್ ದೃಢೀಕರಣವಾಗಿರುವ ವಿವರ ಇರುತ್ತದೆ.
ಪ್ರಯಾಣಿಕರಿಗೆ ಏನು ಬದಲಾಗಿದೆ?
ಆಗಾಗ್ಗೆ ರೈಲು ಬಳಸುವ ಪ್ರಯಾಣಿಕರಾಗಿದ್ದರೆ, ಮೊದಲೇ ಬುಕ್ ಮಾಡಬೇಕೆಂದರೆ ಆಧಾರ್ ನೋಂದಣಿ ಆಯ್ಕೆಯ ವಿಷಯವಲ್ಲ. ದೃಢೀಕೃತ ಪ್ರಯಾಣಿಕರಿಗೆ ಹೆಚ್ಚು ಅವಕಾಶಗಳಿವೆ. ಕಡಿಮೆ ಒತ್ತಡ ಇರುತ್ತದೆ.