ನಾಸಾದಿಂದ ಗಗನಯಾನಿ ಸುನಿತಾ ವಿಲಿಯಮ್ಸ್ ನಿವೃತ್ತಿ
ಭಾರತ ಮೂಲದ ಸುನಿತಾ ಬಾಹ್ಯಾಕಾಶದಲ್ಲಿ ಮಾಡಿದ ಸಾಧನೆ ಅಪಾರ
ಸುನೀತಾ ವಿಲಿಯಮ್ಸ್ | Photo Credit : @Space_Station
ಭಾರತೀಯ ಮೂಲದ ಗಗನಯಾನಿ ಸುನಿತಾ ವಿಲಿಯಮ್ಸ್ ನಾಸಾದಿಂದ ನಿವೃತ್ತಿಯಾಗಿದ್ದಾರೆ. ಸುನಿತಾ ವಿಲಿಯಮ್ಸ್ ಅವರು 2025 ಡಿಸೆಂಬರ್ 27ರಂದು ನಿವೃತ್ತಿಯಾಗಿದ್ದಾರೆ ಎಂದು ನಾಸಾ ಮಂಗಳವಾರ ಘೋಷಣೆ ಮಾಡಿದೆ. 1998ರಲ್ಲಿ ಗಗನಯಾನಿ ಆಗಿ ನಾಸಾ ಸೇರಿದ ಸುನಿತಾ 27 ವರ್ಷಗಳ ಕಾಲ ಇಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು 2006, 2022 ಮತ್ತು 2024ರಲ್ಲಿ ಮೂರು ಬಾಹ್ಯಾಕಾಶ ಮಿಷನ್‌ಗಳನ್ನು ಪೂರೈಸಿದ್ದು 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. ಒಟ್ಟು ಒಂಬತ್ತು ಬಾಹ್ಯಾಕಾಶ ನಡಿಗೆಗಳನ್ನು ಪೂರ್ಣಗೊಳಿಸಿದ್ದು, 62 ಗಂಟೆ 6 ನಿಮಿಷಗಳ ಕಾಲ ಬಾಹ್ಯಾಕಾಶ ನಡಿಗೆ ಕೈಗೊಂಡು ನಾಸಾದ ಅಧ್ಯಯನಕ್ಕೆ ನೆರವಾಗಿದ್ದಾರೆ. ಆ ಮೂಲಕ ಅತಿ ಹೆಚ್ಚು ಅವಧಿಗೆ ಬಾಹ್ಯಾಕಾಶ ನಡಿಗೆ ಕೈಗೊಂಡ ಮಹಿಳೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಬಾಹ್ಯಾಕಾಶದಲ್ಲೇ ಮ್ಯಾರಥಾನ್ ಓಡಿದ ಮೊದಲಿಗರು ಇವರು.
ಸುನಿತಾ ವಿಲಿಯಮ್ಸ್ ಮಾನವ ಬಾಹ್ಯಾಕಾಶ ಹಾರಾಟದಲ್ಲಿ ಮಾರ್ಗದರ್ಶಕಿಯಾಗಿದ್ದು, ಬಾಹ್ಯಾಕಾಶ ನಿಲ್ದಾಣದಲ್ಲಿ ತನ್ನ ನಾಯಕತ್ವದ ಮೂಲಕ ಅನ್ವೇಷಣೆಯ ಭವಿಷ್ಯವನ್ನು ರೂಪಿಸಿದ್ದಾರೆ. ಈ ಮೂಲಕ ಭೂಮಿಯ ಕೆಳ ಕಕ್ಷೆಗೆ ವಾಣಿಜ್ಯ ಕಾರ್ಯಾಚರಣೆಗಳಿಗೆ ದಾರಿ ಮಾಡಿಕೊಟ್ಟಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅವರ ಸೇವೆ ಅಸಾಧಾರಣವಾದುದು. ಅವರ ಯೋಜನೆಗಳು ಚಂದ್ರ ಮತ್ತು ಮಂಗಳ ಗ್ರಹದತ್ತ ತೆರಳುವ ನಮ್ಮ ಪ್ರಯತ್ನಗಳಿಗೆ ಭದ್ರ ಅಡಿಪಾಯವನ್ನು ಹಾಕಿದೆ. ಅವರ ಸಾಧನೆ ಮುಂದಿನ ಪೀಳಿಗೆಗೆ ಪ್ರೇರಣೆ. ನಿಮ್ಮ ಅರ್ಹ ನಿವೃತ್ತಿಗೆ ಅಭಿನಂದನೆಗಳು. ನಾಸಾ ಮತ್ತು ನಮ್ಮ ರಾಷ್ಟ್ರಕ್ಕೆ ನೀವು ಮಾಡಿದ ಸೇವೆಗೆ ಧನ್ಯವಾದಗಳು ಎಂದು ನಾಸಾ ಆಡಳಿತಾಧಿಕಾರಿ ಜೇರೆಡ್ ಐಸಾಕ್ಮನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
.@NASA astronaut Suni Williams retires after 27 years, effective Dec. 27, 2025. Williams completed three missions aboard the International Space Station, setting numerous human spaceflight records. More... https://t.co/xrxErQKntr pic.twitter.com/CnRS693KSV
— International Space Station (@Space_Station) January 21, 2026
*ಸುನಿತಾ ವಿಲಿಯಮ್ಸ್ ಕುಟುಂಬ *
ಸುನಿತಾ ವಿಲಿಯಮ್ಸ್ ಅವರ ಅಪ್ಪ ದೀಪಕ್ ಪಾಂಡ್ಯ ಗುಜರಾತ್‌ನ ಝುಲಾಸನ್ ಗ್ರಾಮದವರು. ಅವರು ನ್ಯೂರೋಅನಾಟಮಿಸ್ಟ್ ಆಗಿದ್ದರು. 1953 ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಲ್ಲಿ ಇಂಟರ್ಮೀಡಿಯೇಟ್ ಸೈನ್ಸ್ ನೊಂದಿಗೆ ತಮ್ಮ ಉನ್ನತ ಶೈಕ್ಷಣಿಕ ಪ್ರಯಾಣವನ್ನು ಪ್ರಾರಂಭಿಸಿದ ಅವರು 1957 ರಲ್ಲಿ ತಮ್ಮ Doctor of Medicine ಪಡೆದರು. ಅದೇ ವರ್ಷ ಸ್ಲೊವೇನಿಯನ್-ಅಮೇರಿಕನ್ ಉರ್ಸುಲಿನ್ ಬೋನಿ ಜಲೋಕರ್ ಅವರನ್ನು ವಿವಾಹವಾದರು. 1964 ರಲ್ಲಿ ಪಾಂಡ್ಯ ಕೇಸ್ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯದಲ್ಲಿ ಅನಾಟಮಿ ವಿಭಾಗಕ್ಕೆ ಪೋಸ್ಟ್‌ಡಾಕ್ಟರಲ್ ಫೆಲೋ ಆಗಿ ಸೇರಿದರು. 2020ರಲ್ಲಿ ತಮ್ಮ 88 ನೇ ವಯಸ್ಸಿನಲ್ಲಿ ಪಾಂಡ್ಯ ಅಮೆರಿಕದಲ್ಲಿ ನಿಧನರಾದರು. ಉರ್ಸುಲಿನ್ ಬೋನಿ ಜಲೋಕರ್ ಮ್ಯಾಸಚೂಸೆಟ್ಸ್‌ನಲ್ಲಿಯೇ ಇದ್ದಾರೆ.
ಸುನಿತಾ ವಿಲಿಯಮ್ಸ್ ಅವರ ಪತಿ ಫೆಡರಲ್ ಮಾರ್ಷಲ್ ಆಗಿರುವ ಮೈಕೆಲ್ ಜೆ. ವಿಲಿಯಮ್ಸ್ . ಸುನಿತಾ ನಾಸಾಗೆ ಸೇರುವ ಮೊದಲು ಮಿಲಿಟರಿಯಲ್ಲಿ ಹೆಲಿಕಾಪ್ಟರ್‌ಗಳ ಹಾರಾಟ ಮಾಡುತ್ತಿದ್ದಾಗ ಮೈಕೆಲ್ ಅವರ ಪರಿಚಯವಾಗಿತ್ತು. ಈ ಜೋಡಿ ಮೇರಿಲ್ಯಾಂಡ್‌ನ ಅನ್ನಾಪೊಲಿಸ್‌ನಲ್ಲಿರುವ ನೇವಲ್ ಅಕಾಡೆಮಿಯಲ್ಲಿ ಭೇಟಿಯಾಗಿ ಸ್ನೇಹಿತರಾದರು. ಆಮೇಲೆ ಇವರು ಮದುವೆಯಾದರು.
ಸುನೀತಾ ವಿಲಿಯಮ್ಸ್ ಅವರ ಶಿಕ್ಷಣ
1965 ಸೆಪ್ಟೆಂಬರ್ 19 ರಂದು ಜನಿಸಿದ ವಿಲಿಯಮ್ಸ್ 1983 ರಲ್ಲಿ ಮ್ಯಾಸಚೂಸೆಟ್ಸ್‌ನ ನೀಡ್‌ಹ್ಯಾಮ್‌ನಲ್ಲಿರುವ ನೀಡ್‌ಹ್ಯಾಮ್ ಹೈಸ್ಕೂಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಫಿಸಿಕಲ್ ಸಯನ್ಸ್ ನಲ್ಲಿ ಆಸಕ್ತಿ ಹೊಂದಿದ್ದ ಅವರು, 1987 ರಲ್ಲಿ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಯುಎಸ್ ನೇವಲ್ ಅಕಾಡೆಮಿಗೆ ಪ್ರವೇಶ ಪಡೆದರು. 1995 ರಲ್ಲಿ ಫ್ಲೋರಿಡಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್ ಮ್ಯಾನೇಜ್ಮೆಂಟ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಪಡೆದರು.
► ಸಾಧನೆಗಳು
60 ವರ್ಷದ ಸುನಿತಾ ವಿಲಿಯಮ್ಸ್ ನಾಸಾದಲ್ಲಿ 27 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಮೂರು ಬಾಹ್ಯಾಕಾಶ ಮಿಷನ್ ಗಳನ್ನು ಪೂರೈಸಿದ್ದು, 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ.
ಒಂಬತ್ತು ಬಾಹ್ಯಾಕಾಶ ನಡಿಗೆಗಳಲ್ಲಿ 62 ಗಂಟೆಗಳ ಕಾಲ ನಡಿಗೆ ಕೈಗೊಂಡು ಅತಿ ಹೆಚ್ಚು ಬಾಹ್ಯಾಕಾಶ ನಡಿಗೆ ಮಾಡಿದ ಮಹಿಳೆ ಎಂಬ ದಾಖಲೆ ಇವರದ್ದು.
ಮೇ 1987 ರಲ್ಲಿ ಯುನೈಟೆಡ್ ಸ್ಟೇಟ್ಸ್ ನೇವಲ್ ಅಕಾಡೆಮಿಯಿಂದ ಪದವಿ ಪಡೆದ ನಂತರ ಸುನಿತಾ ಅವರನ್ನು ಯುನೈಟೆಡ್ ಸ್ಟೇಟ್ಸ್ ನೇವಿಯಲ್ಲಿ ವೃತ್ತಿ ಆರಂಭಿಸಿದರು. ನೇವಲ್ ಕೋಸ್ಟಲ್ ಸಿಸ್ಟಮ್ ಕಮಾಂಡ್‌ನಲ್ಲಿ 6 ತಿಂಗಳ ನಿಯೋಜನೆಯ ನಂತರ, ಡೈವಿಂಗ್ ಅಧಿಕಾರಿಯಾಗಿ, ಆಮೇಲೆ ಪೈಲಟ್ ಆದರು.
ಜುಲೈ 1989 ರಲ್ಲಿ, ಅವರನ್ನು ನೌಕಾ ವಿಮಾನ ಹಾರಾಟಕ್ಕೆ ನೇಮಕ ಮಾಡಲಾಯಿತು.ಆಮೇಲೆ H-46 ಸೀ ನೈಟ್‌ನಲ್ಲಿ ಆರಂಭಿಕ ತರಬೇತಿಗಾಗಿ ಹೆಲಿಕಾಪ್ಟರ್ ಯುದ್ಧ ಬೆಂಬಲ ಸ್ಕ್ವಾಡ್ರನ್ 3 ಗೆ ತೆರಳಿದರು.
ತರಬೇತಿಯ ನಂತರ, ವಿಲಿಯಮ್ಸ್ ವರ್ಜೀನಿಯಾದ ನಾರ್ಫೋಕ್‌ನಲ್ಲಿರುವ ಹೆಲಿಕಾಪ್ಟರ್ ಯುದ್ಧ ಬೆಂಬಲ ಸ್ಕ್ವಾಡ್ರನ್ 8 ಅನ್ನು ಸೇರಿದರು.
ಸೆಪ್ಟೆಂಬರ್ 1992 ರಲ್ಲಿ, ಅವರು USS ಸಿಲ್ವೇನಿಯಾ ಹಡಗಿನಲ್ಲಿ ಚಂಡಮಾರುತ ಆಂಡ್ರ್ಯೂ ಪರಿಹಾರ ಕಾರ್ಯಾಚರಣೆಗಳಿಗಾಗಿ ಫ್ಲೋರಿಡಾದ ಮಿಯಾಮಿಗೆ H-46 ತುಕಡಿಗಳ ನೇತೃತ್ವ ವಹಿಸಿದರು
1993 ಜನವರಿಯಲ್ಲಿ ವಿಲಿಯಮ್ಸ್ ಯುನೈಟೆಡ್ ಸ್ಟೇಟ್ಸ್ ನೇವಲ್ ಟೆಸ್ಟ್ ಪೈಲಟ್ ಶಾಲೆಗೆ ಆಯ್ಕೆಯಾಗಿ, ಡಿಸೆಂಬರ್‌ನಲ್ಲಿ ಪದವಿ ಪಡೆದರು. ನಂತರ ಅವರನ್ನು ರೋಟರಿ ವಿಂಗ್ ಏರ್‌ಕ್ರಾಫ್ಟ್ ಟೆಸ್ಟ್ ಡೈರೆಕ್ಟರೇಟ್‌ನಲ್ಲಿ T-2 ನಲ್ಲಿ H-46 ಪ್ರಾಜೆಕ್ಟ್ ಆಫೀಸರ್ ಮತ್ತು V-22 ಚೇಸ್ ಪೈಲಟ್ ಆಗಿ ನಿಯೋಜಿಸಲಾಯಿತು. ಈ ಸಮಯದಲ್ಲಿ, ಅವರು ಸ್ಕ್ವಾಡ್ರನ್ ಸೇಫ್ಟಿ ಆಫೀಸರ್ ಆಗಿಯೂ ಸೇವೆ ಸಲ್ಲಿಸಿದರು .
1995 ಡಿಸೆಂಬರ್ ನಲ್ಲಿ ಅವರು ರೋಟರಿ ವಿಂಗ್ ವಿಭಾಗದಲ್ಲಿ ಬೋಧಕರಾಗಿ ಮತ್ತು ಸುರಕ್ಷತಾ ಅಧಿಕಾರಿಯಾಗಿ Naval Test Pilot Schoolಗೆ ಮರಳಿದರು.
ವರ್ಜೀನಿಯಾದ ನಾರ್ಫೋಕ್‌ನಲ್ಲಿರುವ USS ಸೈಪಾನ್ (LHA-2) ನಲ್ಲಿ ವಿಮಾನ ನಿರ್ವಾಹಕ ಮತ್ತು ಸಹಾಯಕ ಏರ್ ಬಾಸ್ ಆಗಿ ಸೇವೆ ಸಲ್ಲಿಸಿದರು. ಸೈಪಾನ್‌ನಲ್ಲಿ ನಿಯೋಜಿಸಲ್ಪಟ್ಟಾಗ, ವಿಲಿಯಮ್ಸ್ ಗಗನಯಾತ್ರಿ ಕಾರ್ಯಕ್ರಮಕ್ಕೆ ಆಯ್ಕೆಯಾದರು.
ತಮ್ಮ ವೃತ್ತಿಜೀವನದುದ್ದಕ್ಕೂ, ಅವರು 30 ಕ್ಕೂ ಹೆಚ್ಚು ವಿಭಿನ್ನ ವಿಮಾನಗಳಲ್ಲಿ 3,000 ಕ್ಕೂ ಹೆಚ್ಚು ಗಂಟೆ ಹಾರಾಟ ನಡೆಸಿದ್ದಾರೆ .
►ಬಾಹ್ಯಾಕಾಶ ನೌಕೆಯ ಕಾರ್ಯಾಚರಣೆಗಳಿಂದ ಸ್ಟಾರ್‌ಲೈನರ್ ಪರೀಕ್ಷಾ ಹಾರಾಟದವರೆಗೆ
ಸುನಿತಾ ವಿಲಿಯಮ್ಸ್ ಮೊದಲು 2006 ರಲ್ಲಿ ಬಾಹ್ಯಾಕಾಶ ನೌಕೆ ಡಿಸ್ಕವರಿಯಲ್ಲಿ ಬಾಹ್ಯಾಕಾಶಕ್ಕೆ ಹಾರಿ ಅಟ್ಲಾಂಟಿಸ್ ನೌಕೆಯಲ್ಲಿ ಮರಳಿದರು. ಅವರು ಎಕ್ಸ್‌ಪೆಡಿಶನ್ಸ್ 14 ಮತ್ತು 15 ರಲ್ಲಿ ಫ್ಲೈಟ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದು ಆಗಿನ ದಾಖಲೆಯ ನಾಲ್ಕು ಬಾಹ್ಯಾಕಾಶ ನಡಿಗೆಗಳನ್ನು ಪೂರ್ಣಗೊಳಿಸಿದರು. 2012 ರಲ್ಲಿ, ಅವರು ಎಕ್ಸ್‌ಪೆಡಿಶನ್ಸ್ 32 ಮತ್ತು 33 ರ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಮರಳಿದರು. ಈ ಸಮಯದಲ್ಲಿ ಅವರು ಬಾಹ್ಯಾಕಾಶ ನಿಲ್ದಾಣದ ಕಮಾಂಡರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ . 2024ರ ಜೂನ್‌ನಲ್ಲಿ ಬೋಯಿಂಗ್ ಸ್ಟಾರ್‌ಲೈನ್ ಕ್ಯಾಪ್ಸೂಲ್‌ನಲ್ಲಿ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್‌ಮೋರ್ ಬಾಹ್ಯಾಕಾಶಕ್ಕೆ ತೆರಳಿದ್ದು, ತಾಂತ್ರಿಕ ಸಮಸ್ಯೆಯಿಂದಾಗಿ ಅವರು 286 ದಿನ ಅಲ್ಲಿಯೇ ಉಳಿಯುವಂತಾಯಿತು. ಗಗನಯಾನಿಗಳನ್ನು ಮರಳಿ ಭೂಮಿಗೆ ಕರೆತರಲು ಸ್ಪೇಸ್‌ಎಕ್ಸ್ ಡ್ರ್ಯಾಗನ್ ನೆರವು ಪಡೆಯಲು ನಾಸಾ ನಿರ್ಧರಿಸಿತು. ಹೀಗೆ ಬಾಹ್ಯಾಕಾಶ ನಿಲ್ದಾಣದಿಂದ ಹೊರಟ ಈ ನೌಕೆ, ಬರೋಬ್ಬರಿ 17 ಗಂಟೆಗಳ ಪ್ರಯಾಣದ ನಂತರ 2025 ಮಾರ್ಚ್ 18ರಂದು ಭೂಮಿಗೆ ಬಂದಿಳಿಯಿತು.
►ಭಾರತ ಪ್ರವಾಸ
ವಿಲಿಯಮ್ಸ್ ಪ್ರಸ್ತುತ ಭಾರತ ಪ್ರವಾಸದಲ್ಲಿದ್ದು ಇದನ್ನು ಅವರು "ಮನೆಗೆ ಮರಳಿದ್ದು" ಎಂದು ಬಣ್ಣಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಸಂವಾದದಲ್ಲಿ ತಮ್ಮ ಬಹುಸಂಸ್ಕೃತಿ ಪರಂಪರೆ ಮತ್ತು ಏಕತೆಯ ಮಹತ್ವವನ್ನು ಪ್ರತಿಬಿಂಬಿಸುತ್ತಾ, "ನನಗೆ ತಿಳಿದಿರುವ ಪ್ರತಿಯೊಬ್ಬ ವ್ಯಕ್ತಿಯೂ ಅಲ್ಲಿದ್ದಾರೆ, ಪ್ರತಿಯೊಂದು ಪ್ರಾಣಿ, ಪ್ರತಿಯೊಂದು ಸಸ್ಯ, ನಮಗೆ ತಿಳಿದಿರುವ ಎಲ್ಲವೂ ಅಲ್ಲಿದೆ. ನಾವೆಲ್ಲರೂ ನಮ್ಮ ಸೌರವ್ಯೂಹದಲ್ಲಿ ಈ ಒಂದು ಸಣ್ಣ ಜಾಗದಲ್ಲಿದ್ದೇವೆ . ಇದು ನಮ್ಮಲ್ಲಿ ವ್ಯತ್ಯಾಸಗಳಿವೆ ಎಂಬ ಗ್ರಹಿಕೆಯನ್ನು ಬದಲಾಯಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಸುನಿತಾ ವಿಲಿಯಮ್ಸ್ ದಿವಂಗತ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಸುನಿತಾ ಐಐಟಿ ದಿಲ್ಲಿಯಲ್ಲಿ ಉಪನ್ಯಾಸ ನೀಡಿದ್ದು ಜನವರಿ 22ರಂದು ಕೋಯಿಕ್ಕೋಡ್ ನಲ್ಲಿ ಆರಂಭವಾಗಲಿರುವ ಕೇರಳ ಸಾಹಿತ್ಯ ಉತ್ಸವದಲ್ಲಿ (KLF) ಕೂಡಾ ಭಾಗವಹಿಸಲಿದ್ದಾರೆ.