×
Ad

Matrimonial site ನಲ್ಲಿಯೂ ವಂಚನೆ!

ಭಾವನಾತ್ಮಕ ಕಥೆಗಳಿಗೆ ಮರುಳಾಗಬೇಡಿ.. ಇದು Cyber crime ಲೋಕ

Update: 2026-01-20 23:00 IST

ಸಾಂದರ್ಭಿಕ ಚಿತ್ರ | Photo Credit : freepik

ಮದುವೆಯ ಭರವಸೆ ನೀಡಿದ ವ್ಯಕ್ತಿಯೊಬ್ಬರು 1.53 ಕೋಟಿ ರೂ. ಗೂ ಹೆಚ್ಚು ಮೊತ್ತ ವಂಚಿಸಿದ್ದಾರೆ ಎಂದು ಬೆಂಗಳೂರಿನ 29 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆಯ ದೂರಿನ ಪ್ರಕಾರ, ಆಕೆಗೆ 2024ರ ಮಾರ್ಚ್‌ನಲ್ಲಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ವಿಜಯ್ ರಾಜ್ ಗೌಡ ಎಂಬಾತನ ಪರಿಚಯವಾಗಿತ್ತು. ತಾನು ವಿಆರ್‌ಜಿ ಎಂಟರ್‌ಪ್ರೈಸಸ್ ನಡೆಸುತ್ತಿರುವ ಯಶಸ್ವಿ ಉದ್ಯಮಿ ಎಂದು ಪರಿಚಯಿಸಿಕೊಂಡಿದ್ದ ಆತ, ಕೋರಮಂಗಲ, ರಾಜಾಜಿನಗರ ಮತ್ತು ಸದಾಶಿವನಗರ ಸೇರಿದಂತೆ ಬೆಂಗಳೂರಿನ ದುಬಾರಿ ಪ್ರದೇಶಗಳಲ್ಲಿ ಆಸ್ತಿಯಿದೆ ಎಂದು ಹೇಳಿದ್ದ.

ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು, ತನ್ನ ವಿರುದ್ಧ 2019ರಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದ್ದು, ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಆತ ಹೇಳಿಕೊಂಡಿದ್ದಾನೆ. ತಾನು 715 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದೇನೆ ಎಂದೂ ಹೇಳಿದ್ದಾನೆ. ಬಳಿಕ ಇಬ್ಬರೂ ಮದುವೆಯ ಬಗ್ಗೆ ಚರ್ಚಿಸಿದ್ದಾರೆ.

2024ರ ಏಪ್ರಿಲ್‌ ನಲ್ಲಿ ಒಂದು ದಿನ, ತನ್ನ ಬ್ಯಾಂಕ್ ಖಾತೆಯಲ್ಲಿ ಸಮಸ್ಯೆಗಳಿವೆ ಎಂದು ಹೇಳಿಕೊಂಡು ತುರ್ತು ವಿಷಯಕ್ಕಾಗಿ 15,000 ರೂ. ಕೇಳಿದ್ದಾನೆ. ನಂತರ ಹೆಚ್ಚಿನ ಆದಾಯದ ಭರವಸೆ ನೀಡಿ, ಹಲವು ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಹಣ ನೀಡುವಂತೆ ಯುವತಿಯನ್ನು ಮನವೊಲಿಸಿದ್ದಾನೆ. ಅವನನ್ನು ನಂಬಿದ ಯುವತಿ, ಹಲವು ವಹಿವಾಟುಗಳ ಮೂಲಕ ಒಟ್ಟು 1.53 ಕೋಟಿ ರೂ. ವರ್ಗಾಯಿಸಿದ್ದಾಳೆ.

ಎಫ್‌ಐಆರ್ ಪ್ರಕಾರ, ಆರೋಪಿಯು ತನ್ನ ತಂದೆ ಬೋರೇಗೌಡ ಯು.ಜೆ. ಹಾಗೂ ಸೌಮ್ಯ ಎಂಬ ಮಹಿಳೆಯನ್ನು ಪರಿಚಯಿಸಿದ್ದಾನೆ. ಸೌಮ್ಯ ತನ್ನ ಸಹೋದರಿ ಎಂದು ಆತ ಹೇಳಿಕೊಂಡಿದ್ದ. ಕೆಂಗೇರಿ ಮೆಟ್ರೋ ನಿಲ್ದಾಣದ ಬಳಿ ಯುವತಿ ಮತ್ತು ವಿಜಯ್ ರಾಜ್ ಭೇಟಿಯಾಗಿ ಮದುವೆ ಮತ್ತು ವ್ಯಾಪಾರದ ಬಗ್ಗೆ ಮಾತುಕತೆ ನಡೆಸಿದ್ದರು.

ಹಣವನ್ನು ಹಿಂದಿರುಗಿಸಲು ವಿಳಂಬವಾದಾಗ ಯುವತಿ ಪ್ರಶ್ನಿಸಿದ್ದಾಳೆ. ಆಗ ತನ್ನ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ನ್ಯಾಯಾಲಯದ ಆದೇಶಗಳನ್ನು ಆತ ಹಂಚಿಕೊಂಡಿದ್ದಾನೆ.

ನಂತರ ದೂರುದಾರರ ಕುಟುಂಬ ವಿಚಾರಿಸಿದಾಗ, ಸೌಮ್ಯಾ ಎಂಬಾಕೆ ವಿಜಯ್ ರಾಜ್ ಗೌಡನ ಪತ್ನಿ ಎಂಬುದು ತಿಳಿದುಬಂದಿದೆ. ಈ ದಂಪತಿಗಳು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು, ಅವರಿಗೆ ಒಂದು ಮಗು ಇದೆ ಎಂಬುದೂ ಬಹಿರಂಗವಾಗಿದೆ.

ವಿಜಯ್ ರಾಜ್ ಗೌಡ ತನ್ನಿಂದ 1.75 ಕೋಟಿ ರೂ. ಪಡೆದಿದ್ದು, ಅದರಲ್ಲಿ ಕೇವಲ 22 ಲಕ್ಷ ರೂ. ಮಾತ್ರ ಹಿಂದಿರುಗಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆಯ ಹಲವು ಸೆಕ್ಷನ್‌ ಗಳ ಅಡಿಯಲ್ಲಿ, ಕೆಂಗೇರಿ ಪೊಲೀಸರು ಜನವರಿ 6ರಂದು ವಿಜಯ್ ರಾಜ್ ಗೌಡ, ಅವರ ತಂದೆ ಬೋರೇಗೌಡ ಯು.ಜೆ. ಮತ್ತು ಪತ್ನಿ ಸೌಮ್ಯ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ. ಆರೋಪಿಗಳು ಮತ್ತು ಅವರ ಕುಟುಂಬದವರು ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ.

ಬಿಎನ್‌ಎಸ್‌ ನ ಸೆಕ್ಷನ್ 61(2) (ಕ್ರಿಮಿನಲ್ ಪಿತೂರಿ), 318(4) (ವಂಚನೆ), 316(2) (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಮತ್ತು 351(3) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲವಾರು ರೀತಿಯ ಆನ್‌ಲೈನ್ ವಂಚನೆಗಳು ನಡೆಯುತ್ತಿರುವ ನಡುವೆ, ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಇಷ್ಟೊಂದು ದೊಡ್ಡ ಮೊತ್ತದ ವಂಚನೆಗಳಲ್ಲಿ ಇದು ಇತ್ತೀಚಿನ ಪ್ರಕರಣವಾಗಿದೆ.

ಕಳೆದ ವರ್ಷ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಪರಿಚಯವಾದ ಮಹಿಳೆಯೊಬ್ಬರು ಬೆಂಗಳೂರಿನ 32 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಯುವಕನಿಗೆ ಇದೇ ರೀತಿಯಲ್ಲಿ ಮೋಸ ಮಾಡಿದ್ದರು. ಈ ಪ್ರಕರಣದಲ್ಲಿ ಯುವಕ 79.3 ಲಕ್ಷ ರೂ. ಕಳೆದುಕೊಂಡಿದ್ದಾನೆ.

ವರದಿಯ ಪ್ರಕಾರ, 2025ರ ಫೆಬ್ರವರಿ ಆರಂಭದಲ್ಲಿ ಯುನೈಟೆಡ್ ಕಿಂಗ್‌ಡಮ್‌ ನ ಟ್ರೇಡಿಂಗ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ವಿಶಾಖಪಟ್ಟಣಂನ ವೃತ್ತಿಪರ ಎಂದು ಪರಿಚಯಿಸಿಕೊಂಡ ಮಹಿಳೆಯೊಬ್ಬರು ಯುವಕನನ್ನು ಸಂಪರ್ಕಿಸಿದ್ದರು. ಕರೆ ಮತ್ತು ಸಂದೇಶಗಳ ಮೂಲಕ ಸಂವಹನ ನಡೆಸಿ ಪರಸ್ಪರ ನಂಬಿಕೆ ಬೆಳೆಸಿಕೊಂಡಿದ್ದರು.

ನಂತರ ಆ ಮಹಿಳೆ ಅವನಿಗೆ “ಲಾಭದಾಯಕ ಹೂಡಿಕೆ ವೇದಿಕೆ”ಯನ್ನು ಪರಿಚಯಿಸಿ, ಹೆಚ್ಚಿನ ಆದಾಯ ದೊರೆಯುತ್ತದೆ ಎಂದು ಹೇಳಿ ಹಲವು ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಮನವೊಲಿಸಿದ್ದಳು.

ಹಲವರು ವ್ಯಾಪಾರ ಕಂಪೆನಿಯ ಪ್ರತಿನಿಧಿಗಳಂತೆ ನಟಿಸಿ, ಭಾರತ ಮತ್ತು ಯುಕೆ ಸಂಖ್ಯೆಗಳ ಮೂಲಕ ಕರೆ ಮಾಡಿ, ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ನಕಲಿ ಲಾಭದ ದಾಖಲೆಗಳನ್ನು ತೋರಿಸಿದ್ದರು. ಸಂತ್ರಸ್ತ ಯುವಕ ಲಾಭವನ್ನು ಹಿಂಪಡೆಯಲು ಪ್ರಯತ್ನಿಸಿದಾಗ, ತೆರಿಗೆ ಮತ್ತು ಪ್ರಕ್ರಿಯೆಗೆ ಹೆಚ್ಚುವರಿ ಪಾವತಿ ಅಗತ್ಯವಿದೆ ಎಂದು ತಿಳಿಸಲಾಯಿತು. ಒತ್ತಡ ಮತ್ತು ಆರಂಭಿಕ ಹೂಡಿಕೆಯ ನಷ್ಟದ ಭಯದಿಂದ ಆತ ಮತ್ತಷ್ಟು ಹಣವನ್ನು ವರ್ಗಾಯಿಸಿದ್ದ.

ಮಾರ್ಚ್ ಮತ್ತು ಜೂನ್ ನಡುವಿನ ಅವಧಿಯಲ್ಲಿ 12 ವಿಭಿನ್ನ ಖಾತೆಗಳಿಗೆ ಒಟ್ಟು 72.3 ಲಕ್ಷ ರೂ. ಮೊತ್ತದ 18 ಪ್ರತ್ಯೇಕ ವರ್ಗಾವಣೆಗಳನ್ನು ಮಾಡಿದ್ದಾನೆ. ನಂತರ ಯಾವುದೇ ಪ್ರತಿಕ್ರಿಯೆ ಸಿಗದೇ ಇದ್ದಾಗ ತಾನು ವಂಚನೆಗೊಳಗಾಗಿರುವುದನ್ನು ಆತ ಅರಿತುಕೊಂಡಿದ್ದಾನೆ.

ಸೈಬರ್ ಅಪರಾಧಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಅಗ್ರಸ್ಥಾನ

ರಾಜ್ಯದಲ್ಲಿ ಸೈಬರ್ ಅಪರಾಧಗಳ ಸಂಖ್ಯೆಯು ಹೆಚ್ಚಾಗುತ್ತಿದ್ದು, 2025ರಲ್ಲಿ ಬೆಂಗಳೂರು ನಗರವು 9,326 ಪ್ರಕರಣಗಳೊಂದಿಗೆ ಸೈಬರ್ ಅಪರಾಧಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ 57,000ಕ್ಕೂ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದು, 5,473 ಕೋಟಿ ರೂ. ಮೊತ್ತದ ಆರ್ಥಿಕ ವಂಚನೆ ನಡೆದಿದೆ ಎಂದು ವಿಧಾನಸಭೆಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.

ಕಳೆದ ವರ್ಷ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಸಿಮೆಂಟ್ ಮಂಜು ಅವರಿಗೆ ಉತ್ತರಿಸಿದ ಅವರು, 2023ರಲ್ಲಿ ಕರ್ನಾಟಕದಲ್ಲಿ 873.29 ಕೋಟಿ ರೂ. ಮೊತ್ತದ ಆರ್ಥಿಕ ವಂಚನೆಯ 22,255 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು. 2024ರಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 22,478 ಆಗಿದ್ದು, 2,562 ಕೋಟಿ ರೂ. ಮೊತ್ತದ ಆರ್ಥಿಕ ವಂಚನೆ ನಡೆದಿದೆ. ಈ ಪ್ರಕರಣಗಳಲ್ಲಿ 627 ಕೋಟಿ ರೂ. ಮಾತ್ರ ವಸೂಲಿ ಮಾಡಲು ಸಾಧ್ಯವಾಗಿದೆ. 10,700ಕ್ಕೂ ಹೆಚ್ಚು ಪ್ರಕರಣಗಳನ್ನು ಪರಿಹರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಂಕಿಅಂಶಗಳ ಪ್ರಕಾರ, 2025ರಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 9,326 ಪ್ರಕರಣಗಳು ದಾಖಲಾಗಿವೆ. ಜ ಬೆಂಗಳೂರು ನಗರ ಜಿಲ್ಲೆಯಲ್ಲಿ 384 ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನಗಳಲ್ಲಿ ವಿಜಯಪುರ (340), ತುಮಕೂರು (243), ರಾಮನಗರ (192), ಉಡುಪಿ (171), ಮೈಸೂರು ನಗರ (166) ಮತ್ತು ಮೈಸೂರು ಜಿಲ್ಲೆ (56) ಇವೆ.

Matrimonial Scams ಬಗ್ಗೆ ಎಚ್ಚರ ಅಗತ್ಯ

ಸಾಮಾನ್ಯವಾಗಿ ವಂಚಕರು ಆನ್‌ಲೈನ್ ವೈವಾಹಿಕ ಸೈಟ್‌ ಗಳಲ್ಲಿ ನಕಲಿ ಪ್ರೊಫೈಲ್‌ ಗಳನ್ನು ರಚಿಸಿ ಮುಗ್ಧ ಜನರನ್ನು ವಂಚಿಸುವ ಉದ್ದೇಶ ಹೊಂದಿರುತ್ತಾರೆ. ಕೆಲವರು ಆರ್ಥಿಕ ವಂಚನೆ ಅಥವಾ ಗುರುತಿನ ಕಳ್ಳತನ ನಡೆಸಲು ಇದನ್ನು ಬಳಸುತ್ತಾರೆ. ಇನ್ನು ಕೆಲವರು ಗಂಭೀರ ಅಪರಾಧಗಳಿಗೂ ಕೈ ಹಾಕುತ್ತಾರೆ.

ವಂಚಕರು ಬೇರೆಯವರನ್ನು ಅನುಕರಿಸುವ ನಕಲಿ ಪ್ರೊಫೈಲ್‌ಗಳನ್ನು ರಚಿಸಿ, ಆಕರ್ಷಕ ಫೋಟೋಗಳು ಮತ್ತು ವೈಯಕ್ತಿಕ ವಿವರಗಳನ್ನು ನೀಡುತ್ತಾರೆ. ವಿಶ್ವಾಸ ಗಳಿಸಲು ಅನಿವಾಸಿ ಭಾರತೀಯರು (NRI) ಅಥವಾ ಪ್ರತಿಷ್ಠಿತ ವೃತ್ತಿಗಳನ್ನು ಹೊಂದಿರುವವರಂತೆ ನಟಿಸುತ್ತಾರೆ. ಕೆಲವರು ನಿಜವಾದ ವೈವಾಹಿಕ ಪ್ರೊಫೈಲ್‌ ಗಳಿಂದ ವೈಯಕ್ತಿಕ ಮಾಹಿತಿಯನ್ನು ಕದ್ದು ನಕಲಿ ಗುರುತುಗಳನ್ನು ರಚಿಸುತ್ತಾರೆ.

ಇಂತಹ ವಂಚಕರು ಆರಂಭದಲ್ಲಿ ಭಾವನಾತ್ಮಕ ಸಂಬಂಧ ಬೆಳೆಸಿ, ನಂತರ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಹಣ ಪಡೆಯಲು ಆರ್ಥಿಕ ಸಂಕಷ್ಟ, ವೈದ್ಯಕೀಯ ತುರ್ತುಸ್ಥಿತಿ ಅಥವಾ ಇತರ ಸಮಸ್ಯೆಗಳ ಕಥೆಗಳನ್ನು ಹೇಳುತ್ತಾರೆ.

ವೈವಾಹಿಕ ಸೈಟ್‌ಗಳಲ್ಲಿ ನಕಲಿ ಪ್ರೊಫೈಲ್‌ಗಳನ್ನು ಗುರುತಿಸುವುದು ಹೇಗೆ?

ವಿಶ್ವಾಸಾರ್ಹ ಗುರುತಿನ ಪರಿಶೀಲನೆ ವ್ಯವಸ್ಥೆ ಹೊಂದಿರುವ ವೈವಾಹಿಕ ಸೈಟ್‌ಗಳನ್ನು ಮಾತ್ರ ಬಳಸಿ.

ತುಂಬಾ ಪರ್ಫೆಕ್ಟ್ ಎಂದು ಕಾಣುವ ಪ್ರೊಫೈಲ್‌ಗಳ ಬಗ್ಗೆ ಎಚ್ಚರಿಕೆ ವಹಿಸಿ; ಮಾಹಿತಿಯನ್ನು ಇತರ ಮೂಲಗಳೊಂದಿಗೆ ಪರಿಶೀಲಿಸಿ.

ಭಾವನಾತ್ಮಕ ಕಥೆಗಳ ಸತ್ಯಾಸತ್ಯತೆ ಬಗ್ಗೆ ಬೇರೆಯವರಿಂದ ಮಾಹಿತಿ ಪಡೆಯಲು ಪ್ರಯತ್ನಿಸಿ.

ಅನುಮಾನವಿದ್ದರೆ ಗುರುತಿನ ಚೀಟಿ ಅಥವಾ ಉದ್ಯೋಗದ ಪುರಾವೆಗಳನ್ನು ಕೇಳಿ.

ವೈಯಕ್ತಿಕ ಮಾಹಿತಿಯನ್ನು ಬೇಗನೆ ಹಂಚಿಕೊಳ್ಳಬೇಡಿ.

ಆನ್‌ಲೈನ್‌ನಲ್ಲಿ ಭೇಟಿಯಾದ ಯಾರಿಗೂ ಹಣ ಕಳುಹಿಸಬೇಡಿ.

ಸಾರ್ವಜನಿಕ ಸ್ಥಳದಲ್ಲಿ ಮುಖತಃ ಭೇಟಿಯಾಗಲು ಒತ್ತಾಯಿಸಿ; ನಿರಂತರ ನಿರಾಕರಣೆ ಮಾಡಿದರೆ ದೂರವಿರಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News