MGNREGA ಬದಲಿಗೆ VB-G RAM G; ಮೊದಲ ತಿಂಗಳಲ್ಲೇ ಶೇ 50ರಷ್ಟು ಉದ್ಯೋಗ ಸೃಷ್ಟಿ ಇಳಿಕೆ!
ಸಾಂದರ್ಭಿಕ ಚಿತ್ರ| PTI
VB-G RAM G ಅಡಿಯಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಯೋಜನ ಪಡೆದ ಕುಟುಂಬಗಳ ಸಂಖ್ಯೆಯೂ ಕಳೆದ ವರ್ಷದ ಜುಲೈಗೆ ಹೋಲಿಸಿದರೆ ಈ ಜುಲೈನಲ್ಲಿ ಶೇ 51.45ರಷ್ಟು ಕಡಿಮೆಯಾಗಿ 68.94 ಲಕ್ಷಕ್ಕೆ ತಲುಪಿದೆ.
ಸರ್ಕಾರದ ಪರಿಷ್ಕೃತ ಗ್ರಾಮೀಣ ಉದ್ಯೋಗ ಖಾತರಿ ಕಾರ್ಯಕ್ರಮದಡಿ ಉದ್ಯೋಗ ಸೃಷ್ಟಿ ತೀವ್ರವಾಗಿ ಕಡಿಮೆಯಾಗಿದ್ದು, ಜುಲೈನಲ್ಲಿ ವರ್ಷದಿಂದ ವರ್ಷಕ್ಕೆ ಶೇ 49.94ರಷ್ಟು ಕುಸಿತ ದಾಖಲಿಸಿದೆ. ಎರಡು ದಶಕಗಳಷ್ಟು ಹಳೆಯದಾದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ಈ ವರ್ಷದ ಜುಲೈ 1ರಿಂದ ಹೊಸದಾಗಿ ಪ್ರಾರಂಭಿಸಲಾದ ವಿಕಸಿತ್ ಭಾರತ್–ರೋಝ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಅಥವಾ VB-G RAM Gಗೆ ಸರಕಾರದ ಪರಿವರ್ತನೆಯ ನಂತರ ಈ ಕುಸಿತ ಕಂಡುಬಂದಿದೆ.
ಆಗಸ್ಟ್ 9ರ ಅಧಿಕೃತ ಅಂಕಿ-ಅಂಶಗಳ ಪ್ರಕಾರ, 2026ರ ಜುಲೈನಲ್ಲಿ VB-G RAM G ಯೋಜನೆಯಡಿ ಕೇವಲ 7.67 ಕೋಟಿ ವ್ಯಕ್ತಿ-ದಿನಗಳ ಉದ್ಯೋಗ ಸೃಷ್ಟಿಯಾಗಿದೆ. 2025ರ ಜುಲೈನಲ್ಲಿ ಸೃಷ್ಟಿಸಲಾಗಿದ್ದ 15.33 ಕೋಟಿ ವ್ಯಕ್ತಿ-ದಿನಗಳ ಉದ್ಯೋಗಕ್ಕೆ ಹೋಲಿಸಿದರೆ ಇದು ಶೇ 49.94ರಷ್ಟು ಕಡಿಮೆಯಾಗಿದೆ. ವ್ಯಕ್ತಿ-ದಿನವು ಒಬ್ಬ ವ್ಯಕ್ತಿಯು ಒಂದು ಕೆಲಸದ ದಿನದಲ್ಲಿ ಮಾಡಿದ ಕೆಲಸದ ಆಧಾರದಲ್ಲಿ ಅಳೆಯುವ ಘಟಕವಾಗಿದೆ.
VB-G RAM G ಡ್ಯಾಷ್‌ಬೋರ್ಡ್ ಪ್ರಕಾರ, ಜುಲೈನಲ್ಲಿ 7.67 ಕೋಟಿ ವ್ಯಕ್ತಿ-ದಿನಗಳನ್ನು ದಾಖಲಿಸಿದ್ದರೆ, ಗ್ರಾಮೀಣ ಅಭಿವೃದ್ಧಿ ಸಚಿವಾಲಯವು ಮೊದಲ ತಿಂಗಳಲ್ಲಿ 9 ಕೋಟಿ ವ್ಯಕ್ತಿ-ದಿನಗಳ ಉದ್ಯೋಗ ಸೃಷ್ಟಿಯಾಗಿದೆ ಎಂಬ ವಿವರವನ್ನು ಪ್ರದರ್ಶಿಸುತ್ತಿದೆ.
VB-G RAM G ಅಡಿಯಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಯೋಜನ ಪಡೆದ ಕುಟುಂಬಗಳ ಸಂಖ್ಯೆಯೂ ಕಳೆದ ಜುಲೈಗೆ ಹೋಲಿಸಿದರೆ ಈ ಜುಲೈನಲ್ಲಿ ಶೇ 51.45ರಷ್ಟು ಕಡಿಮೆಯಾಗಿ 68.94 ಲಕ್ಷಕ್ಕೆ ತಲುಪಿದೆ. ಕಳೆದ ಜುಲೈನಲ್ಲಿ MGNREGS ಅಡಿಯಲ್ಲಿ 1.42 ಕೋಟಿ ಕುಟುಂಬಗಳು ಯೋಜನೆಯ ಲಾಭ ಪಡೆದಿದ್ದರು.
►ಯೋಜನೆಯಡಿ ಜುಲೈನಲ್ಲಿ ಸೃಷ್ಟಿಸಲಾದ ಗ್ರಾಮೀಣ ಉದ್ಯೋಗ
ವಿತ್ತೀಯ ವರ್ಷ ಕುಟುಂಬಗಳು ವ್ಯಕ್ತಿ-ದಿನಗಳು
2022-23 1.75 ಕೋಟಿ 23.47 ಕೋಟಿ
2023-24 2.09 ಕೋಟಿ 27.14 ಕೋಟಿ
2024-25 1.62 ಕೋಟಿ 20.30 ಕೋಟಿ
2025-26 1.42 ಕೋಟಿ 15.33 ಕೋಟಿ
2026-27 68 ಲಕ್ಷ 7.67 ಕೋಟಿ
ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮನೆಗಳು ಮತ್ತು ವ್ಯಕ್ತಿ-ದಿನಗಳ ಸಂಖ್ಯೆಯು ಕಳೆದ ಐದು ವರ್ಷಗಳಲ್ಲಿ ಕಡಿಮೆಯಾಗುತ್ತಲೇ ಬಂದಿದೆ. VB-G RAM G ಯೋಜನೆಯಡಿ ಉದ್ಯೋಗ ಪಡೆದ ಕುಟುಂಬಗಳ ಸರಾಸರಿ ಸಂಖ್ಯೆ 68 ಲಕ್ಷ ಇರುವುದನ್ನು ಗಮನಿಸಿದರೆ, ಹಿಂದಿನ ನಾಲ್ಕು ವರ್ಷಗಳ ಸರಾಸರಿ 1.72 ಕೋಟಿ ಕುಟುಂಬಗಳಿಗೆ ಹೋಲಿಸಿದರೆ ಶೇ 40ಕ್ಕಿಂತ ಕಡಿಮೆಯಾಗಿದೆ. ಅದೇ ರೀತಿ, ಈ ಜುಲೈನ ವ್ಯಕ್ತಿ-ದಿನಗಳು ಹಿಂದಿನ ನಾಲ್ಕು ವರ್ಷಗಳ ಸರಾಸರಿ 21.56 ಕೋಟಿಗೆ ಹೋಲಿಸಿದರೆ ಶೇ 35ರಷ್ಟು ಮಾತ್ರ ಉದ್ಯೋಗ ಲಭಿಸಿದೆ.
2025ರ ಮಾರ್ಚ್ ನಲ್ಲಿ NREGS ಅಡಿಯಲ್ಲಿ 17.56 ಕೋಟಿ ವ್ಯಕ್ತಿ-ದಿನಗಳಿಗೆ ಹೋಲಿಸಿದರೆ, 2024ರ ಮಾರ್ಚ್‌ನಲ್ಲಿ 17.69 ಕೋಟಿ ವ್ಯಕ್ತಿ-ದಿನಗಳ ಉದ್ಯೋಗ ಸೃಷ್ಟಿಸಲಾಗಿತ್ತು. ಅಂದರೆ, ವಾರ್ಷಿಕ ಕುಸಿತ ಶೇ 0.70ರಷ್ಟು ಮಾತ್ರವಿತ್ತು. NREGS ಅಡಿಯಲ್ಲಿ ಸೃಷ್ಟಿಯಾಗುವ ಉದ್ಯೋಗದ ಮಾಸಿಕ ಅಂಕಿ-ಅಂಶಗಳಲ್ಲಿನ ವಾರ್ಷಿಕ ಕುಸಿತವು UPA ಆಡಳಿತದ ಯೋಜನೆಯ ಕೊನೆಯ ತಿಂಗಳಾದ 2026ರ ಜೂನ್‌ವರೆಗೆ ಮುಂದುವರಿದಿದೆ.
ಅನಿಯಮಿತ ಮುಂಗಾರು ಕಾರಣದಿಂದಾಗಿ VB-G RAM G ಅಡಿಯಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಜುಲೈನಲ್ಲಿ ಕುಸಿತವು ಗಮನಾರ್ಹವಾಗಿದೆ. ಭಾರತದ ಹವಾಮಾನ ಇಲಾಖೆಯ ಪ್ರಕಾರ, ದೇಶದ 741 ಜಿಲ್ಲೆಗಳಲ್ಲಿ ಶೇ 50ರಷ್ಟು ಜಿಲ್ಲೆಗಳು ಜೂನ್ 1ರಿಂದ ಆಗಸ್ಟ್ 3ರ ನಡುವೆ ಗಂಭೀರದಿಂದ ಸಾಮಾನ್ಯವರೆಗಿನ ಮಳೆ ಕೊರತೆಯನ್ನು ವರದಿ ಮಾಡಿವೆ. ಇಂತಹ ಸ್ಥಿತಿಯಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಕೌಶಲ್ಯರಹಿತ ಕೃಷಿ ಕಾರ್ಮಿಕರಿಗೆ ಪರ್ಯಾಯ ಆಯ್ಕೆಯಾಗಿರುತ್ತದೆ.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಪ್ರಕಾರ, 2026ರ ಜುಲೈ 31ರ ವೇಳೆಗೆ 894.22 ಲಕ್ಷ ಹೆಕ್ಟೇರ್‌ನಲ್ಲಿ ಖಾರಿಫ್ ಬೆಳೆಯ ವ್ಯಾಪ್ತಿ ವರದಿಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 920.72 ಲಕ್ಷ ಹೆಕ್ಟೇರ್‌ಗೆ ಹೋಲಿಸಿದರೆ 26.50 ಲಕ್ಷ ಹೆಕ್ಟೇರ್ ಕಡಿಮೆಯಾಗಿತ್ತು. ಮೂಲಗಳ ಪ್ರಕಾರ, ಖಾರಿಫ್ ಬಿತ್ತನೆ ಋತುವಿನಲ್ಲಿ ಯೋಜನೆಗೆ ವಿರಾಮ ನೀಡಿರುವುದರಿಂದ ಉದ್ಯೋಗ ಸೃಷ್ಟಿಯಲ್ಲಿ ಕುಸಿತ ಉಂಟಾಗಿರಬಹುದು. ಆದರೆ ಬಿತ್ತನೆ ಋತುವಿನಲ್ಲಿ ಯೋಜನೆಗೆ ವಿರಾಮ ತಂದಿರುವ ಮಾಹಿತಿಯಿಲ್ಲ.
ಮಾಧ್ಯಮಗಳಲ್ಲಿ ಲಭ್ಯವಿರುವ ವಿವರಗಳ ಪ್ರಕಾರ, VB-G RAM G ಕಾಯ್ದೆ 2025 ಅನ್ನು ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ 2026ರ ಜುಲೈ 1ರಿಂದ ಜಾರಿಗೆ ಬರುವಂತೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಗ್ರಾಮೀಣ ಅಭಿವೃದ್ಧಿ ಸಚಿವಾಲಯ ಪ್ರತಿಕ್ರಿಯಿಸಿದೆ.
“MGNREGAದಿಂದ VB–G RAMಗೆ ಸುಗಮ, ತಡೆರಹಿತ ಮತ್ತು ತಂತ್ರಜ್ಞಾನ ಸಕ್ರಿಯಗೊಳಿಸಿದ ಪರಿವರ್ತನೆಯಾಗಿದೆ. ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ತಮ್ಮ ಯೋಜನೆಗಳನ್ನು ಪ್ರಕಟಿಸಿವೆ ಮತ್ತು ಕಾರ್ಯಕ್ರಮದ ಮೊದಲ ದಿನದಿಂದಲೇ ಸಂಪೂರ್ಣ ಆಡಳಿತಾತ್ಮಕ ಮತ್ತು ಡಿಜಿಟಲ್ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲಾಗಿದೆ. ತಡೆರಹಿತ ಅನುಷ್ಠಾನವನ್ನು ಸುಗಮಗೊಳಿಸಲು ಕೇಂದ್ರ ಸರಕಾರವು 2026-27ನೇ ಹಣಕಾಸು ವರ್ಷಕ್ಕೆ 95,692 ರೂ.ಗಳ ದಾಖಲೆಯ ಬಜೆಟ್ ಅಂದಾಜನ್ನು ಒದಗಿಸಿದೆ. ಇದು ಯಾವುದೇ ಗ್ರಾಮೀಣ ಉದ್ಯೋಗ ಕಾರ್ಯಕ್ರಮಕ್ಕೆ ಈವರೆಗಿನ ಅತ್ಯಧಿಕವಾಗಿದೆ” ಎಂದು ಸಚಿವಾಲಯ ಹೇಳಿಕೆ ನೀಡಿದೆ.
ಸರಕಾರ ನೀಡಿರುವ ವಿವರಗಳ ಪ್ರಕಾರ, “ಯೋಜನೆಯನ್ನು ದೇಶಾದ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತಿದೆ. ಉದ್ಯೋಗ ಕೋರುವ ಗ್ರಾಮೀಣ ಕುಟುಂಬಗಳಲ್ಲಿ ಶೇ 98ಕ್ಕೂ ಹೆಚ್ಚು ಮಂದಿಗೆ ಕೆಲಸ ನೀಡಲಾಗಿದೆ. ಅನುಷ್ಠಾನದ ಮೊದಲ ತಿಂಗಳಲ್ಲಿ ಸುಮಾರು ಒಂಭತ್ತು ಕೋಟಿ ವ್ಯಕ್ತಿ-ದಿನಗಳನ್ನು ಸೃಷ್ಟಿಸಲಾಗಿದೆ. ಮುಖ ದೃಢೀಕರಣವನ್ನು ಬಳಸಿ NMMS ಮೂಲಕ ಹಾಜರಾತಿ ಸಂಗ್ರಹಿಸಲಾಗಿದೆ. 1.33 ಕೋಟಿಗೂ ಹೆಚ್ಚು ಗ್ರಾಮೀಣ ಕಾರ್ಮಿಕರಿಗೆ ಅವರ ಉದ್ಯೋಗ ಬೇಡಿಕೆಗಳಿಗೆ ಅನುಗುಣವಾಗಿ ಉದ್ಯೋಗ ನೀಡಲಾಗಿದೆ. ಒಂಭತ್ತು ಲಕ್ಷಕ್ಕೂ ಹೆಚ್ಚು ಸಕ್ರಿಯ ಕೆಲಸದ ಸ್ಥಳಗಳ ಮೂಲಕ ಕೆಲಸ ನಿರ್ವಹಿಸಲಾಗುತ್ತಿದೆ. ಇದು ಉದ್ಯೋಗಾವಕಾಶಗಳ ಸಾಕಷ್ಟು ಲಭ್ಯತೆಯನ್ನು ಖಚಿತಪಡಿಸುತ್ತದೆ” ಎಂದು ಸಚಿವಾಲಯ ಹೇಳಿದೆ.
VB-G RAM G ಯೋಜನೆಯು ಗ್ರಾಮೀಣ ಕುಟುಂಬಗಳಿಗೆ ಒಂದು ಹಣಕಾಸು ವರ್ಷದಲ್ಲಿ 125 ದಿನಗಳ ವೇತನ ಉದ್ಯೋಗವನ್ನು ಖಾತರಿಪಡಿಸುತ್ತದೆ. ಇದು NREGS ಅಡಿಯ 100 ದಿನಗಳಿಂದ ಏರಿಕೆಯಾಗಿದೆ. ಒಂದು ಹಣಕಾಸು ವರ್ಷದಲ್ಲಿ ಒಟ್ಟು 60 ದಿನಗಳವರೆಗೆ ಉದ್ಯೋಗ ಖಾತರಿಯಲ್ಲಿ ವಿರಾಮವನ್ನು ಹೊಂದಿದೆ. ಬಿತ್ತನೆ ಮತ್ತು ಕೊಯ್ಲಿನ ಗರಿಷ್ಠ ಕೃಷಿ ಋತುಗಳಲ್ಲಿ ವಿರಾಮವನ್ನು ನೀಡಬಹುದಾಗಿದೆ.