ಚಂದ್ರನ ಮೇಲೆ ಕಾರ್ಖಾನೆ ನಿರ್ಮಿಸಲು SpaceX ಯೋಜನೆ; ಮಹತ್ವಾಕಾಂಕ್ಷೆ ಪ್ರಕಟಿಸಿದ ಎಲಾನ್ ಮಸ್ಕ್
Photo Credit : NASA & PTI
ಕಂಪೆನಿಯು ಸ್ಟಾರ್ ಮೈಂಡ್ ಉಪಗ್ರಹಗಳಿಗೆ ಅಗತ್ಯವಾಗಿರುವ ಸೌರ ಫಲಕಗಳು ಮತ್ತು ರೇಡಿಯೇಟರ್‌ಗಳನ್ನು ಚಂದ್ರನ ಮೇಲೆ ನಿರ್ಮಿಸುವ ಉದ್ದೇಶ ಹೊಂದಿದೆ.
SpaceX ಚಂದ್ರನ ಮೇಲೆ ಕಾರ್ಖಾನೆಗಳನ್ನು ಸ್ಥಾಪಿಸಲು ಮತ್ತು ಬಹುತೇಕ ನಿರ್ಮಾಣ ಕಾರ್ಯಗಳನ್ನು ರೋಬೋಟ್‌ಗಳಿಂದ ನಿರ್ವಹಿಸಲು ಯೋಜಿಸಿದೆ ಎಂದು ಅದರ CEO ಎಲಾನ್ ಮಸ್ಕ್ ಹೇಳಿದ್ದಾರೆ. ಅವರು ಆಗಸ್ಟ್ 4ರಂದು ನಡೆದ ಕಂಪೆನಿಯ ಮೊದಲ ತ್ರೈಮಾಸಿಕ ಗಳಿಕೆಯ ಸಭೆಯ ಸಂದರ್ಭದಲ್ಲಿ ಈ ವಿವರ ನೀಡಿದ್ದಾರೆ.
“ಭೂಮಿಯ ಆಚೆಗೂ ಮೂಲಸೌಕರ್ಯಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯತ್ತ ಕೆಲಸ ಮಾಡುತ್ತಿದ್ದು, SpaceX ಚಂದ್ರನ ಮೇಲ್ಮೈಗೆ ದೊಡ್ಡ ಪ್ರಮಾಣದ ಉಪಕರಣಗಳು ಮತ್ತು ವಸ್ತುಗಳನ್ನು ಕಳುಹಿಸಲು ಉದ್ದೇಶಿಸಿದೆ. ನಾವು ಚಂದ್ರನ ಮೇಲೆ ಕಾರ್ಖಾನೆಗಳನ್ನು ನಿರ್ಮಿಸಲಿದ್ದೇವೆ. ರೋಬೋಟ್‌ಗಳು ಅದಕ್ಕೆ ಸಹಾಯ ಮಾಡುತ್ತವೆ” ಎಂದು ಅವರು ತಿಳಿಸಿದ್ದಾರೆ.
ಕಾರ್ಖಾನೆಗಳಿಂದ AI ಉಪಗ್ರಹಗಳು
ಚಂದ್ರನ ಮೇಲಿನ ಪ್ರಸ್ತಾಪಿತ ಕಾರ್ಖಾನೆಗಳು ಆರಂಭದಲ್ಲಿ SpaceXನ ಸ್ಟಾರ್ ಮೈಂಡ್ ಕೃತಕ ಬುದ್ಧಿಮತ್ತೆ ಉಪಗ್ರಹ ನಕ್ಷತ್ರಪುಂಜಕ್ಕಾಗಿ (constellation) ಘಟಕಗಳನ್ನು ನಿರ್ಮಿಸಲು ಕೆಲಸ ಮಾಡಲಿವೆ. ಕಂಪೆನಿಯು ಭೂಮಿಯ ಕಕ್ಷೆಯನ್ನು ಮೀರಿ ಪರಿಗಣಿಸುತ್ತಿರುವ ಹಂತದಲ್ಲಿ SpaceX ಒಂದು ಮಿಲಿಯನ್ AI ಉಪಗ್ರಹಗಳ ಸಮೂಹಕ್ಕಾಗಿ ಯೋಜನೆಗಳನ್ನು ರೂಪಿಸಿದೆ.
ಚಂದ್ರನ ಮೇಲೆ ಕಾರ್ಯನಿರ್ವಹಿಸುವ ರೋಬೋಟ್‌ಗಳು SpaceXನ ಉತ್ಪಾದನೆಯನ್ನು ಹೆಚ್ಚಿಸಲು ನೆರವಾಗಲಿವೆ. ಆ ಮೂಲಕ ಸಾಂಪ್ರದಾಯಿಕ ರಾಕೆಟ್‌ಗಳಿಲ್ಲದೆ ಚಂದ್ರನ ಮೇಲ್ಮೈಯಿಂದ ಉಪಗ್ರಹಗಳನ್ನು ಉಡಾಯಿಸುವ ಸಾಮರ್ಥ್ಯವಿರುವ ವ್ಯವಸ್ಥೆಯಾದ ವಿದ್ಯುತ್ಕಾಂತೀಯ ಮಾಸ್ ಡ್ರೈವರ್ (electromagnetic mass driver) ಅನ್ನು ನಿರ್ಮಿಸಲು ಸಹಾಯ ಮಾಡುತ್ತವೆ.
“ರೋಬೋಟ್ ಗಳನ್ನು ಚಂದ್ರನ ಮೇಲೆ ಬಳಸಿ ಅಲ್ಲಿನ ಮೂಲಸೌಕರ್ಯವನ್ನು ವೇಗಗೊಳಿಸುವುದು ಇದೀಗ ವೈಜ್ಞಾನಿಕ ಕಾದಂಬರಿಯಂತೆ ಕಾಣಬಹುದು. ಆದರೆ ಚಂದ್ರನ ಮೇಲೆ ಮಾಸ್ ಅಕ್ಸಲರೇಟರ್ ನಿರ್ಮಿಸಲು ಇದು ಸಾಧ್ಯವಾಗಿಸಲಿದೆ” ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ಕಂಪೆನಿಯು ಸ್ಟಾರ್ ಮೈಂಡ್ ಉಪಗ್ರಹಗಳಿಗೆ ಅಗತ್ಯವಾಗಿರುವ ಸೌರ ಫಲಕಗಳು ಮತ್ತು ರೇಡಿಯೇಟರ್‌ಗಳನ್ನು ಚಂದ್ರನ ಮೇಲೆ ನಿರ್ಮಿಸುವ ಉದ್ದೇಶ ಹೊಂದಿದೆ. ಸೌರ ಫಲಕಗಳು ಮತ್ತು ರೇಡಿಯೇಟರ್‌ಗಳು ಬಾಹ್ಯಾಕಾಶ ನೌಕೆಯಿಂದ ಉತ್ಪತ್ತಿಯಾಗುವ ದೊಡ್ಡ ಪ್ರಮಾಣದ ಶಾಖವನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ. ಚಂದ್ರನ ಮೇಲಿನ ಉತ್ಪಾದನೆ ಮತ್ತು ಉಡಾವಣಾ ವ್ಯವಸ್ಥೆಯು ಅಂತಿಮವಾಗಿ ಬಾಹ್ಯಾಕಾಶದಲ್ಲಿ ಇರಿಸಬಹುದಾದ ಕಂಪ್ಯೂಟಿಂಗ್ ಮೂಲಸೌಕರ್ಯದ ಪ್ರಮಾಣವನ್ನು ಹೆಚ್ಚಿಸಬಹುದು.
ಚಂದ್ರನ ಮೇಲಿನ ಪ್ರಸ್ತಾಪಿತ ಕಾರ್ಖಾನೆಗಳನ್ನು ನಿರ್ವಹಿಸುವ ರೋಬೋಟಿಕ್ ಕಾರ್ಯಪಡೆಯ ವಿವರವಾದ ಯೋಜನೆಗಳನ್ನು SpaceX ಒದಗಿಸಿಲ್ಲ. ಭವಿಷ್ಯದ ಬಾಹ್ಯಾಕಾಶ ಕಾರ್ಯಾಚರಣೆಗಳಿಗಾಗಿ ಟೆಸ್ಲಾ ಅಭಿವೃದ್ಧಿಪಡಿಸಿದ ಆಪ್ಟಿಮಸ್ ಹ್ಯುಮನಾಯ್ಡ್ ರೋಬೋಟ್‌ಗಳನ್ನು ಬಳಸುವ ಬಗ್ಗೆ ಮಸ್ಕ್ ಈ ಹಿಂದೆ ಚರ್ಚಿಸಿದ್ದರು.
SpaceXನ ಚಂದ್ರನ ಯೋಜನೆಗಳು
SpaceXನ ಚಂದ್ರನ ಯೋಜನೆಗಳಲ್ಲಿ ಅದರ ಸ್ಟಾರ್‌ಶಿಪ್ ಮೆಗಾ ರಾಕೆಟ್ ಮುಖ್ಯ ಪಾತ್ರ ವಹಿಸಲಿದೆ. ಉಪಕರಣಗಳು, ರೋಬೋಟ್‌ಗಳು ಮತ್ತು ಇತರ ಪೇಲೋಡ್‌ಗಳನ್ನು ಚಂದ್ರನೆಡೆಗೆ ಹೊತ್ತೊಯ್ಯುವಲ್ಲಿ ಇದು ಪ್ರಮುಖ ಪಾತ್ರ ವಹಿಸಬಹುದು. ಪ್ರಸ್ತುತ ಈ ಸ್ಟಾರ್‌ಶಿಪ್ 14ನೇ ಪರೀಕ್ಷಾ ಹಾರಾಟಕ್ಕೆ ಸಿದ್ಧತೆ ನಡೆಸುತ್ತಿದೆ. ಕಂಪೆನಿಯ ಫಾಲ್ಕನ್ 9 ರಾಕೆಟ್‌ಗೆ ಹೋಲಿಸಿದರೆ ಸ್ಟಾರ್‌ಶಿಪ್ ಉಡಾವಣಾ ವೆಚ್ಚವನ್ನು ಹತ್ತುಪಟ್ಟು ಕಡಿಮೆ ಮಾಡಲಿದೆ ಎಂದು ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿ ಬ್ರೆಟ್ ಜಾನ್ಸೆನ್ ಹೇಳಿದ್ದಾರೆ.
ಕಂಪೆನಿಯು ಸ್ಟಾರ್‌ಶಿಪ್ ನ ಉಡಾವಣಾ ದರ ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ರಾಪ್ಟರ್ ಎಂಜಿನ್ ಮತ್ತು ವಾಹನ ಉತ್ಪಾದನೆಯನ್ನು ಹೆಚ್ಚಿಸುವುದು, ಸಂಗ್ರಹಣೆ ಮತ್ತು ಸಂಸ್ಕರಣಾ ಸೌಲಭ್ಯಗಳನ್ನು ವಿಸ್ತರಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಲ್ಲದೆ, ಫ್ಲೋರಿಡಾದ ಕೇಪ್ ಕಾನವೆರಲ್ ಮತ್ತು ಟೆಕ್ಸಾಸ್‌ನ ಸ್ಟಾರ್‌ಬೇಸ್‌ನಲ್ಲಿ ಹೆಚ್ಚುವರಿ ಲಾಂಚ್ ಪ್ಯಾಡ್‌ಗಳನ್ನು ಸಿದ್ಧಗೊಳಿಸಲಾಗುತ್ತಿದೆ.
ಚಂದ್ರನ ಮೇಲಿನ ಕಾರ್ಖಾನೆ ಪ್ರಸ್ತಾವನೆಯು SpaceXನ ಮಹತ್ವಾಕಾಂಕ್ಷೆಗಳ ವಿಶಾಲ ವಿಸ್ತರಣೆಯ ಭಾಗವಾಗಿದೆ. ಭೂಮಿಯ ಕಕ್ಷೆಯಲ್ಲಿ, ಚಂದ್ರನ ಸುತ್ತ ಮತ್ತು ಅಂತಿಮವಾಗಿ ಬಾಹ್ಯಾಕಾಶದಲ್ಲಿ ಅನೇಕ ಚಟುವಟಿಕೆಗಳಿಗೆ ಸಾರಿಗೆ ವ್ಯವಸ್ಥೆಯಾಗಿ ಸ್ಟಾರ್‌ಶಿಪ್ ಅನ್ನು ಕಂಪೆನಿಯು ಇರಿಸುತ್ತಿದೆ.