AI ಉದ್ಯೋಗಗಳು ಸುರಕ್ಷಿತವೆ?

ಸಂಭಾವ್ಯ ವಜಾ ಬಗ್ಗೆ ಕಳವಳ ವ್ಯಕ್ತಪಡಿಸಿದ ಶೇ 66ರಷ್ಟು ಭಾರತೀಯ AI ಕಾರ್ಮಿಕರು

Update: 2026-08-09 18:17 IST

Photo Credit : indianexpress - Magnific

ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ಕಾರ್ಮಿಕರು ಮುಂದಿನ ಕೆಲ ತಿಂಗಳುಗಳಲ್ಲಿ ಸಂಭಾವ್ಯ ವಜಾಗೊಳಿಸುವಿಕೆಯ ಬಗ್ಗೆ ಹೆಚ್ಚು ಕಳವಳ ಹೊಂದಿದ್ದಾರೆ.

ಕೃತಕ ಬುದ್ಧಿಮತ್ತೆ (AI) ಕೆಲಸದ ಸ್ಥಳಗಳನ್ನು ಪುನರ್ರೂಪಿಸುವುದು ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಲೇ ಇದ್ದರೂ, AIನಲ್ಲೇ ಕೆಲಸ ಮಾಡುವ ವೃತ್ತಿಪರರು ಉದ್ಯೋಗ ಭದ್ರತೆಯ ಬಗ್ಗೆ ಹೆಚ್ಚು ಚಿಂತೆಗೀಡಾಗಿದ್ದಾರೆ. ಬ್ಲೈಂಡ್ ಎನ್ನುವ ಅನಾಮಧೇಯ ವೃತ್ತಿಪರ ನೆಟ್‌ವರ್ಕಿಂಗ್ ಮತ್ತು ಚರ್ಚಾ ವೇದಿಕೆಯು ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ತಿಳಿದುಬಂದಿದೆ. ಸಮೀಕ್ಷೆಯ ಪ್ರಕಾರ ಭಾರತದಲ್ಲಿ AI ಮತ್ತು ಮೆಷಿನ್ ಲರ್ನಿಂಗ್ (AI/ML) ಕಾರ್ಮಿಕರು ಮುಂದಿನ ಕೆಲ ತಿಂಗಳುಗಳಲ್ಲಿ ಸಂಭಾವ್ಯ ವಜಾಗೊಳಿಸುವಿಕೆಯ ಬಗ್ಗೆ ಹೆಚ್ಚು ಕಳವಳ ಹೊಂದಿದ್ದಾರೆ.

ಬ್ಲೈಂಡ್ ಒಂದು ಅನಾಮಧೇಯ ವೃತ್ತಿಪರ ನೆಟ್‌ವರ್ಕಿಂಗ್ ಮತ್ತು ಚರ್ಚಾ ವೇದಿಕೆಯಾಗಿದೆ. ಅಲ್ಲಿ ವೆರಿಫೈಡ್ ಉದ್ಯೋಗಿಗಳು ತಮ್ಮ ವೈಯಕ್ತಿಕ ಗುರುತುಗಳನ್ನು ಬಹಿರಂಗಪಡಿಸದೆ ಪ್ರಾಮಾಣಿಕ ಒಳನೋಟಗಳು, ವೇತನದ ಡೇಟಾ, ಸಂದರ್ಶನದ ಸಲಹೆಗಳು ಮತ್ತು ಕಂಪನಿಯ ವಿವರಗಳನ್ನು ಹಂಚಿಕೊಳ್ಳುತ್ತಾರೆ. ಬಳಕೆದಾರರು ನಿರ್ದಿಷ್ಟ ಕಂಪನಿಯ ಉದ್ಯೋಗ ಸಾಬೀತುಪಡಿಸಲು ಕಾರ್ಪೊರೇಟ್ ಇಮೇಲ್ ವಿಳಾಸ ಬಳಸಿ ಸೈನ್ ಅಪ್ ಮಾಡುತ್ತಾರೆ. ಆದರೆ ನೋಂದಣಿ ಕ್ರಿಪ್ಟೊಗ್ರಾಫಿಕಲ್ ಆಗಿ ಇಮೇಲ್ ಅನ್ನು ಬೇರ್ಪಡಿಸುತ್ತದೆ ಮತ್ತು ಎನ್‌ಕ್ರಿಪ್ಟ್ ಮಾಡುತ್ತದೆ. ಹೀಗಾಗಿ ಪೋಸ್ಟ್‌ಗಳ ಹಿನ್ನೆಲೆ ಪತ್ತೆ ಮಾಡಲಾಗುವುದಿಲ್ಲ.

ಜುಲೈ 2026ರಲ್ಲಿ ಭಾರತೀಯ ಮೂಲದ 1,552 ವೃತ್ತಿಪರರನ್ನು ಸಮೀಕ್ಷೆ ನಡೆಸಲಾಗಿದೆ. AI/ML ವೃತ್ತಿಪರರಲ್ಲಿ ಶೇ 66ರಷ್ಟು ಮಂದಿ ಮುಂದಿನ ಮೂರರಿಂದ ಆರು ತಿಂಗಳೊಳಗೆ ತಮ್ಮ ತಂಡಗಳಲ್ಲಿ ವಜಾ ಅಥವಾ ಗಮನಾರ್ಹ ಸಂಖ್ಯೆಯ ಸಿಬ್ಬಂದಿ ಕಡಿತವನ್ನು ನಿರೀಕ್ಷಿಸುತ್ತಾರೆ ಎಂದು ಡೇಟಾ ಕಂಡುಹಿಡಿದಿದೆ. ಈ ಸಮೀಕ್ಷೆಯು AI ವೃತ್ತಿಪರರನ್ನು ಉದ್ಯೋಗ ಕಳೆದುಕೊಳ್ಳುವ ಬಗ್ಗೆ ಹೆಚ್ಚು ಆತಂಕಿತರಾಗಿರುವ ಸಿಬ್ಬಂದಿ ವರ್ಗದಲ್ಲಿ ಇರಿಸಿದೆ. ಮಾರಾಟ ಮತ್ತು ಮಾರ್ಕೆಟಿಂಗ್ ವೃತ್ತಿಪರರು ಈ ಸಮೀಕ್ಷೆಯಲ್ಲಿ ಕಂಡುಬಂದಿರುವ ಆತಂಕಿತರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. AI/ML ಕಾರ್ಮಿಕರು ಎರಡನೇ ಸ್ಥಾನದಲ್ಲಿದ್ದಾರೆ. ಶೇ 68ರಷ್ಟು ಉದ್ಯೋಗಿಗಳು ತಮ್ಮ ಉದ್ಯೋಗ ಕಡಿತದ ಆತಂಕದಲ್ಲಿರುವುದಾಗಿ ಹೇಳಿದ್ದಾರೆ.

ಕಂಪೆನಿಗಳಿಂದ AI ಕಡೆಗೆ ಅತಿಯಾದ ಅಳವಡಿಕೆ ಮತ್ತು AI ಸಾಧನಗಳನ್ನು ವ್ಯಾಪಕವಾಗಿ ಬಳಸುತ್ತಿರುವ ಕಾರಣದಿಂದ ಅನೇಕ ವೃತ್ತಿಪರರು AI ಸಂಬಂಧಿತ ಪಾತ್ರಗಳಿಗೆ ತೆರಳಲು ಹೊಸ ಕೌಶಲ್ಯಗಳನ್ನು ಸುಧಾರಿಸಿಕೊಳ್ಳಲು ಸ್ಫೂರ್ತಿ ಪಡೆದಿದ್ದರು. ಆದರೆ ಕಂಪನಿಗಳು AI ಮೇಲೆ ಹೆಚ್ಚು ಹೂಡಿಕೆ ಮಾಡುವುದರಿಂದ AI ಉದ್ಯೋಗಗಳಿಗೆ ಸ್ಥಳಾಂತರಗೊಳ್ಳುವುದರಿಂದ ಉದ್ಯೋಗ ಭದ್ರತೆ ಸಿಗುತ್ತದೆ ಎನ್ನುವ ಸಾಮಾನ್ಯ ನಂಬಿಕೆಯನ್ನು ಸಮೀಕ್ಷೆ ಪ್ರಶ್ನಿಸಿದೆ. ಬದಲಾಗಿ AI ಸಾಧನಗಳನ್ನು ನಿರ್ಮಿಸುವ ಕಾರ್ಮಿಕರು AI/MLನಿಂದ ಸಮಸ್ಯೆಯಾಗುವ ಕ್ಷೇತ್ರಗಳಷ್ಟೇ ಅಭದ್ರತೆ ಎದುರಿಸುತ್ತಿದ್ದಾರೆ ಎನ್ನುವುದು ಸಾಬೀತಾಗಿದೆ.

ಉತ್ಪನ್ನ ಮತ್ತು ವಿನ್ಯಾಸ ತಂಡಗಳೂ ಹೆಚ್ಚಿನ ಕಳವಳ ವರದಿ ಮಾಡಿವೆ. ಪ್ರತಿಕ್ರಿಯಿಸಿದವರಲ್ಲಿ ಶೇ 65ರಷ್ಟು ಮಂದಿ ಮುಂಬರುವ ತಿಂಗಳುಗಳಲ್ಲಿ ವಜಾಗೊಳಿಸುವಿಕೆ ಅಥವಾ ಗಮನಾರ್ಹ ತಂಡದ ಕಡಿತವನ್ನು ನಿರೀಕ್ಷಿಸುತ್ತಿರುವುದಾಗಿ ಹೇಳಿದ್ದಾರೆ. ಹೋಲಿಸಿ ನೀಡಿದರೆ, ಜನರೇಟಿವ್ AI ಕಾರಣದಿಂದ ಕೆಲಸ ಕಳೆದುಕೊಳ್ಳುವವರಲ್ಲಿ ಮೊದಲಿಗರು ಎಂದು ಊಹಿಸಲಾದ ಇಂಜಿನಿಯರ್‌ ಗಳು ವೃತ್ತಿಪರವಾಗಿ ಗಣನೀಯವಾಗಿ ಕಡಿಮೆ ಕಾಳಜಿ ಹೊಂದಿದ್ದಾರೆ. ಅಂದರೆ, ಶೇ 24ರಷ್ಟು ಎಂಜಿನಿಯರ್‌ಗಳು ಮಾತ್ರ ತಂಡದ ವಜಾ ಸಾಧ್ಯತೆ ಬಗ್ಗೆ ಹೇಳಿದ್ದಾರೆ. ಸಮೀಕ್ಷೆ ಮಾಡಲಾದ ಎಲ್ಲಾ ಉದ್ಯೋಗ ಕ್ಷೇತ್ರಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಆತಂಕವಾಗಿದೆ. ಒಟ್ಟಿನಲ್ಲಿ ಶೇ 58ರಷ್ಟು ಇಂಜಿನಿಯರ್‌ಗಳು ಸಮೀಕ್ಷೆಯ ‘ಅಪಾಯದಲ್ಲಿರುವ’ ವರ್ಗಕ್ಕೆ ಸೇರಿದ್ದಾರೆ. ಅಂದರೆ, ಒಟ್ಟು ಸರಾಸರಿಗಿಂತ ಕಡಿಮೆಯಾಗಿದೆ.

ಡೇಟಾ ಮತ್ತು ಅನಾಲಿಟಿಕ್ಸ್ ತಂಡಗಳು ಸ್ವಲ್ಪ ಆಶಾವಾದಿಗಳಾಗಿ ಕಂಡುಬಂದಿವೆ. ಶೇ 51ರಷ್ಟು ಮಂದಿ ತಮ್ಮ ತಂಡಗಳು ವಜಾಗೊಳ್ಳುವ ಅಪಾಯದಲ್ಲಿವೆ ಎಂದು ಪರಿಗಣಿಸಿದ್ದಾರೆ. ಶೇ 40ರಷ್ಟು ಮಂದಿ ವಜಾ ಅಸಂಭವ ಎಂದು ಹೇಳಿದ್ದಾರೆ. ಇದು ಸಮೀಕ್ಷೆ ಮಾಡಲಾದ ಎಲ್ಲಾ ಕ್ಷೇತ್ರಗಳಲ್ಲೂ ದಾಖಲಾದ ಅತ್ಯಧಿಕ ವಿಶ್ವಾಸವಾಗಿತ್ತು. AI ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಡೇಟಾ ವಿಶ್ಲೇಷಣೆಯ ಭಾಗಗಳನ್ನು ಸ್ವಯಂಚಾಲಿತಗೊಳಿಸಲಾಗುತ್ತಿದ್ದರೂ, ಆ ಪಾತ್ರಗಳಲ್ಲಿರುವ ವೃತ್ತಿಪರರು ಪ್ರಸ್ತುತ AI ಉತ್ಪನ್ನಗಳು ಮತ್ತು ಮಾದರಿಗಳಲ್ಲಿ ನೇರವಾಗಿ ಕೆಲಸ ಮಾಡುವವರಿಗಿಂತ ಬಲವಾದ ಸ್ಥಾನದಲ್ಲಿರುವುದಾಗಿ ಗ್ರಹಿಸುತ್ತಾರೆ ಎಂದು ಸಮೀಕ್ಷೆ ಸೂಚಿಸಿದೆ.

ಕಂಪೆನಿಗಳಾದ್ಯಂತ ಉದ್ಯೋಗ ಭದ್ರತೆಯ ಗ್ರಹಿಕೆಯಲ್ಲಿ ತೀವ್ರ ವ್ಯತ್ಯಾಸವನ್ನು ಸಮೀಕ್ಷೆ ಎತ್ತಿ ತೋರಿಸಿದೆ. ಪ್ರಮುಖ ತಂತ್ರಜ್ಞಾನ ಸಂಸ್ಥೆಗಳಲ್ಲಿ ಸೇಲ್ಸ್‌ಫೋರ್ಸ್‌ನ ಉದ್ಯೋಗಿಗಳು ಅತ್ಯಧಿಕ ಪ್ರಮಾಣದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಶೇ 81ರಷ್ಟು ಮಂದಿ ವಜಾಗೊಳಿಸುವಿಕೆ ಅಥವಾ ಗಮನಾರ್ಹ ಸಿಬ್ಬಂದಿ ಕಡಿತ ನಿರೀಕ್ಷಿಸುತ್ತಿದ್ದಾರೆ. ನಂತರದ ಸ್ಥಾನದಲ್ಲಿ ಒರಾಕಲ್ ಶೇ 80, ಉಬರ್ ಶೇ 77 ಮತ್ತು ಪೇಪಾಲ್ ಉದ್ಯೋಗಿಗಳಲ್ಲಿ ಶೇ 75ರಷ್ಟು ಮಂದಿ ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತದ ಸಾಫ್ಟ್‌ವೇರ್ ಕಂಪೆನಿಗಳು ಹೆಚ್ಚು ಆಶಾವಾದಿಯಾಗಿ ಕಂಡುಬಂದವು. ಜೋಹೋದಲ್ಲಿ ಸಮೀಕ್ಷೆ ನಡೆಸಿದ ಉದ್ಯೋಗಿಗಳಲ್ಲಿ ಶೇ 9ರಷ್ಟು ಮಂದಿ ಮಾತ್ರ ವಜಾಗೊಳಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಫ್ರೆಶ್‌ವರ್ಕ್ಸ್‌ನಲ್ಲಿ ಶೇ 44ರಷ್ಟು ಅಪಾಯದ ಭಾವನೆ ದಾಖಲಾಗಿದೆ. ಎಂಟರ್‌ಪ್ರೈಸ್ ಸಾಫ್ಟ್‌ವೇರ್ ಮತ್ತು ಪಾವತಿ ಕಂಪನೆಗಳು ಹೆಚ್ಚು ಅಪಾಯವನ್ನು ತೋರಿಸಿದ್ದರೆ, ಭಾರತೀಯ SaaS (Software as a Service) ಕಂಪನಿಗಳು ಉದ್ಯೋಗ ಭದ್ರತೆಯ ವಿಶ್ವಾಸ ವ್ಯಕ್ತಪಡಿಸಿವೆ.

ಸಾಮಾನ್ಯವಾಗಿ ಕಾರ್ಮಿಕರು ಔಪಚಾರಿಕ ವಜಾಗೊಳಿಸುವ ಘೋಷಣೆಗಳಿಗಿಂತ ಹೆಚ್ಚಾಗಿ ಉದ್ಯೋಗಿಗಳ ವಜಾಗೆ ಮೊದಲಿನ ಸಾಂಸ್ಥಿಕ ಬದಲಾವಣೆಗಳಿಂದ ಆತಂಕ ವ್ಯಕ್ತಪಡಿಸುತ್ತಾರೆ.

ಹೀಗೆ ವಜಾಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದವರಲ್ಲಿ ಶೇ 27ರಷ್ಟು ಮಂದಿ ಅಪಾಯದ ಸಂಕೇತವಾಗಿ ನೇಮಕಾತಿ ಸ್ಥಗಿತಗೊಳಿಸುವುದನ್ನು ಹೇಳಿದ್ದಾರೆ. ಶೇ 24ರಷ್ಟು ಮಂದಿಗೆ ಬಜೆಟ್ ಕಡಿತ ಅಥವಾ ತಂಡದಲ್ಲಿ ಅಧಿಕ ಸದಸ್ಯರಿದ್ದಾರೆ ಎನ್ನುವ ಮಾತುಗಳು ಕೇಳಿಬರಲಾರಂಭಿಸುವುದು ಅಪಾಯದ ಸಂಕೇತವಾಗಿದೆ. ಪ್ರಾಜೆಕ್ಟ್ ರದ್ದತಿ, ಕಾರ್ಯದಕ್ಷತೆ ಸುಧಾರಣೆ ಯೋಜನೆಗಳು ಮೊದಲಾದವು ಸಂಭಾವ್ಯ ವಜಾದ ಸೂಚನೆಗಳಾಗಿವೆ. ಶೇ 9ರಷ್ಟು ಮಂದಿ ಮಾತ್ರ ಅಧಿಕೃತ ವಜಾ ಘೋಷಣೆಯನ್ನು ಉದ್ಯೋಗ ಕಡಿತದ ಸಂಭಾವ್ಯ ಸೂಚನೆ ಎಂದು ಹೇಳಿರುವುದನ್ನು ಗಮನಿಸಿದರೆ, ಉದ್ಯೋಗಿಗಳು ಸಂಭಾವ್ಯ ವಜಾದ ಪರೋಕ್ಷ ಚಿಹ್ನೆಗಳತ್ತ ಹೆಚ್ಚು ಅವಲಂಬಿಸಿರುವುದು ಖಚಿತವಾಗಿದೆ.

ಮಾಹಿತಿ ಕೃಪೆ: Indian Express

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News