ರಿತಿಕಾ ಪೋಸ್ಟ್ ನಂಬಿದ ನೆತನ್ಯಾಹು, ಫಾಕ್ಸ್ ನ್ಯೂಸ್; ಭಾರತದಿಂದ ಹರಡಿದ ಸುಳ್ಳು ಸುದ್ದಿ ಮತ್ತೆ ಭಾರತಕ್ಕೇ ವಾಪಸ್!

ಶೌನಕ್ ಸನ್ಯಾಲ್ – Indiatoday. in ವರದಿ

Update: 2026-08-11 22:45 IST

Image: AP/India Today

ಹೊಸದಿಲ್ಲಿ: ಇರಾನ್ ನ ಪರಮಾಣು ಯೋಜನೆಯ ಬಗ್ಗೆ IRGC ಮುಖ್ಯಸ್ಥ ಅಹ್ಮದ್ ವಾಹಿದಿ ಅವರು ಹೇಳಿರುವುದಾಗಿ ಭಾರತ ಮೂಲದ X ಖಾತೆಯೊಂದು ಪ್ರಕಟಿಸಿದ ಸುಳ್ಳು ಹೇಳಿಕೆ ಇಸ್ರೇಲ್ ನಿಂದ ಅಮೆರಿಕದವರೆಗೆ ಹರಡಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಈ ಹೇಳಿಕೆಯನ್ನು ನಿಜವೆಂದು ನಂಬಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಅಮೆರಿಕದ ಫಾಕ್ಸ್ ನ್ಯೂಸ್ ಕೂಡ ಇದೇ ಹೇಳಿಕೆಯನ್ನು ವರದಿ ಮಾಡಿದೆ. ಆದರೆ, ವಾಹಿದಿ ಅವರು ಅಂತಹ ಹೇಳಿಕೆ ನೀಡಿಯೇ ಇರಲಿಲ್ಲ ಎಂದು India Today ವರದಿ ಮಾಡಿದೆ.

ಇಸ್ರೇಲ್ ನ Ynet News ನಡೆಸಿದ ತನಿಖೆಯಿಂದ ಈ ಸುಳ್ಳು ಹೇಳಿಕೆಯ ಮೂಲ ಭಾರತದಲ್ಲಿರುವ ‘ರಿತಿಕಾ’ ಎಂಬ ಹೆಸರಿನ X ಖಾತೆ ಎಂಬುದು ಪತ್ತೆಯಾಗಿದೆ.

 Ritikaa's fabricated quote traveled the world in a span of 15 and a half hours. (Image: ITGD)

►ಸುಳ್ಳು ಹೇಳಿಕೆ ಪ್ರಕಟಿಸಿದ ರಿತಿಕಾ

ಆಗಸ್ಟ್ 5ರಂದು ಬೆಳಿಗ್ಗೆ 9.14ಕ್ಕೆ @Im_Ritikaa ಎಂಬ X ಖಾತೆಯಲ್ಲಿ ‘ರಿತಿಕಾ’ ಎಂಬ ಹೆಸರಿನಲ್ಲಿ ಒಂದು ಪೋಸ್ಟ್ ಪ್ರಕಟವಾಯಿತು.

ವಾಹಿದಿ ಅವರ ಚಿತ್ರವಿರುವ GIF ಜತೆಗೆ ಪೋಸ್ಟ್ ಮಾಡಿದ್ದ ಸಂದೇಶದಲ್ಲಿ, ‘ಪುಷ್ಟೀಕರಿಸಿದ ಯುರೇನಿಯಂ ಅಥವಾ ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಯಾವುದೇ ಚರ್ಚೆ ಇರುವುದಿಲ್ಲ. ಅಮೆರಿಕ ಮತ್ತು ಇಸ್ರೇಲ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವವರೆಗೆ ನಾವು ನಮ್ಮ ರಾಷ್ಟ್ರೀಯ ಭದ್ರತೆಗಾಗಿ ಅವುಗಳ ಮೇಲೆ ಕೆಲಸ ಮುಂದುವರಿಸುತ್ತೇವೆ. ಅವರು ನಿಶ್ಶಸ್ತ್ರಗೊಳಿಸಿದರೆ, ನಾವು ನಿಶ್ಶಸ್ತ್ರಗೊಳಿಸುತ್ತೇವೆ’ ಎಂದು ವಾಹಿದಿ ಹೇಳಿದ್ದಾರೆ ಎಂದು ಪೋಸ್ಟ್‌ ಮಾಡಲಾಗಿತ್ತು.

ಆದರೆ, ವಾಹಿದಿ ಈ ಹೇಳಿಕೆ ನೀಡಿರುವುದಕ್ಕೆ ಯಾವುದೇ ಪುರಾವೆ ಇಲ್ಲ.

ಅಹ್ಮದ್ ವಾಹಿದಿ IRGC ಮುಖ್ಯಸ್ಥರಾದ ಬಳಿಕ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಜುಲೈ 3ರಂದು ಇರಾನ್ ನ ಮಾಜಿ ಸರ್ವೋಚ್ಚ ನಾಯಕ ಅಲಿ ಖಾಮಿನೈ ಅವರ ಅಂತ್ಯಕ್ರಿಯೆಯಲ್ಲಿ ಕಾಣಿಸಿಕೊಂಡಿದ್ದು ಅವರ ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾಗಿತ್ತು.

ವಾಹಿದಿ ಅವರಂತಹ ಉನ್ನತ ಅಧಿಕಾರಿಯೊಬ್ಬರು ಇರಾನ್ ನ ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಇಂತಹ ಮಹತ್ವದ ಹೇಳಿಕೆ ನೀಡಿದ್ದರೆ, ಅದು ಇರಾನ್ ನ ಮಾಧ್ಯಮಗಳು ಮತ್ತು ವಿಶ್ವದ ಪ್ರಮುಖ ಮಾಧ್ಯಮಗಳಲ್ಲಿ ಸುದ್ದಿಯಾಗಬೇಕಿತ್ತು. ಆದರೆ, ಇಂತಹ ಹೇಳಿಕೆ ಮೊದಲು ಕಾಣಿಸಿಕೊಂಡಿದ್ದು ರಿತಿಕಾ ಅವರ X ಖಾತೆಯಲ್ಲಿ.

 

Ritikaa's original post which started a disinformation circle. (Image:Â @Im_Ritikaa)

Ynet ಪ್ರಕಾರ, ರಿತಿಕಾ ಅವರ ಖಾತೆಯನ್ನು ಇಸ್ರೇಲ್ ಪರ ಮತ್ತು ಹಿಂದೂ ರಾಷ್ಟ್ರೀಯತಾವಾದಿ ಖಾತೆ ಎಂದು ವಿವರಿಸಲಾಗಿದೆ. ಖಾತೆಯನ್ನು ನವೆಂಬರ್ 2021ರಲ್ಲಿ ರಚಿಸಲಾಗಿದ್ದು, ಡಿಸೆಂಬರ್ 2025ರಿಂದ ಅದು ವೆರಿಫೈಡ್ ಖಾತೆಯಾಗಿದೆ. ಖಾತೆಯ ಹೆಸರನ್ನು ನಾಲ್ಕು ಬಾರಿ ಬದಲಾಯಿಸಲಾಗಿದೆ.

►ನಕಲಿ ಪೋಸ್ಟ್ ಗೆ ಮತ್ತೊಂದು ಖಾತೆಯ ಬಲ

ರಿತಿಕಾ ಅವರ ಪೋಸ್ಟ್ ಪ್ರಕಟವಾದ ಸುಮಾರು ನಾಲ್ಕೂವರೆ ಗಂಟೆಗಳ ಬಳಿಕ, ಆಗಸ್ಟ್ 5ರಂದು ಮಧ್ಯಾಹ್ನ 1.49ಕ್ಕೆ ‘ಮೊಸಾದ್ ಕಾಮೆಂಟರಿ’ ಎಂಬ X ಖಾತೆ ಅದೇ ಹೇಳಿಕೆಯನ್ನು ತನ್ನ ಖಾತೆಯಲ್ಲಿ ಪ್ರಕಟಿಸಿತು.

ಈ ಖಾತೆ ವೆರಿಫೈ ಆಗಿದ್ದರೂ, ಅದು ಇಸ್ರೇಲ್ ನ ಗುಪ್ತಚರ ಸಂಸ್ಥೆ ಮೊಸಾದ್ನ ಅಧಿಕೃತ ಖಾತೆಯಲ್ಲ.

ಅಸೋಸಿಯೇಟೆಡ್ ಪ್ರೆಸ್ (AP) ಈ ಖಾತೆಯ ಕುರಿತು ಈ ಹಿಂದೆ ತನಿಖೆ ನಡೆಸಿತ್ತು. ಇಸ್ರೇಲ್ ನ ಗುಪ್ತಚರ ಸಂಸ್ಥೆಯಂತೆ ಈ ಖಾತೆ ತೋರ್ಪಡಿಸಿಕೊಳ್ಳುತ್ತಿದೆ ಎಂದು AP ವರದಿ ಮಾಡಿತ್ತು. ಇಸ್ರೇಲಿ ಸೇನೆಯೂ ಈ ಖಾತೆ ಅಧಿಕೃತವಲ್ಲ ಎಂದು ತಿಳಿಸಿತ್ತು.

ಆದರೂ, ಈ ಖಾತೆಯಿಂದ ಸುಳ್ಳು ಹೇಳಿಕೆ ಮತ್ತಷ್ಟು ಜನರಿಗೆ ತಲುಪಿತು.

 Mossad Commentary used Ritikaa's fabricated quote in a seperate post. (Image: X/MOSSADil)

►ಚಾನೆಲ್ 14 ಸುಳ್ಳು ಹೇಳಿಕೆಯನ್ನು ಸುದ್ದಿ ಮಾಡಿತು

ಮಧ್ಯಾಹ್ನ 2.22ಕ್ಕೆ ಇಸ್ರೇಲ್ ನ ಚಾನೆಲ್ 14 ಇದೇ ಹೇಳಿಕೆಯನ್ನು ಸುದ್ದಿ ರೂಪದಲ್ಲಿ ಪ್ರಸಾರ ಮಾಡಿತು.

ಇರಾನ್ ಪರಮಾಣು ಬಾಂಬ್ ಅಭಿವೃದ್ಧಿಪಡಿಸುತ್ತಿರುವುದನ್ನು ಇರಾನಿನ ಅಧಿಕಾರಿಯೊಬ್ಬರು ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ ಎಂದು ಚಾನೆಲ್ 14 ವರದಿ ಮಾಡಿತು. ಆದರೆ, ವಾಹಿದಿ ಅವರ ಹೇಳಿಕೆಗೆ ಯಾವುದೇ ಮೂಲವನ್ನು ಅದು ನೀಡಲಿಲ್ಲ.

ಚಾನೆಲ್ 14 ಅನ್ನು ಇಸ್ರೇಲ್ ಪ್ರಧಾನಿ ನೆತನ್ಯಾಹು ಮತ್ತು ಅವರ ಬಲಪಂಥೀಯ ಸರಕಾರದ ಪರವಾದ ಮಾಧ್ಯಮ ಎಂದು ವ್ಯಾಪಕವಾಗಿ ಪರಿಗಣಿಸಲಾಗುತ್ತದೆ.

 Israel's Channel 14 reports Ritikaa's fabricated quote as breaking news. (Image: @c14english)

►ನೆತನ್ಯಾಹು ಪುತ್ರನೂ ಹಂಚಿಕೊಂಡರು

ಚಾನೆಲ್ 14ರ ವರದಿ ಬಂದ ಕೆಲವೇ ನಿಮಿಷಗಳಲ್ಲಿ, ಮಧ್ಯಾಹ್ನ 2.49ಕ್ಕೆ ನೆತನ್ಯಾಹು ಅವರ ಹಿರಿಯ ಪುತ್ರ ಯಾಯರ್ ನೆತನ್ಯಾಹು ಆ ವರದಿಯನ್ನು ತಮ್ಮ ಸುಮಾರು 3 ಲಕ್ಷ X ಫಾಲೋವರ್ ಗಳಿಗೆ ಮರುಹಂಚಿಕೊಂಡರು.

ಯಾಯರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಬಲಪಂಥೀಯ ರಾಜಕೀಯ ಮತ್ತು ತಪ್ಪು ಮಾಹಿತಿಯನ್ನು ಪ್ರಚಾರ ಮಾಡುವುದಕ್ಕೆ ಹೆಸರಾಗಿದ್ದಾರೆ ಎಂದು Middle East Eye ವರದಿ ಮಾಡಿದೆ.

 

►ಕೊನೆಗೆ ನೆತನ್ಯಾಹು ಅವರ ಭಾಷಣಕ್ಕೆ ತಲುಪಿತು

ಸಂಜೆ 5.02ಕ್ಕೆ ಜೆರುಸಲೆಮ್ ನ ಮೌಂಟ್ ಹರ್ಜ್ಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಾತನಾಡಿದರು.

ಈ ಸಂದರ್ಭದಲ್ಲಿ ಅವರು, IRGC ಮುಖ್ಯಸ್ಥ ಅಹ್ಮದ್ ವಾಹಿದಿ ಅವರು ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ ಎಂದು ಹೇಳಿದರು.

‘ಇಂದು ನಾವು IRGCಯ ಕಮಾಂಡರ್ ವಾಹಿದಿ ಅವರು ಇಸ್ಲಾಮಿಕ್ ಗಣರಾಜ್ಯವು ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸುವ ಉದ್ದೇಶವನ್ನು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಕೇಳಿದ್ದೇವೆ’ ಎಂದು ನೆತನ್ಯಾಹು ಹೇಳಿದರು.

‘ಇಸ್ರೇಲ್ ಪ್ರಧಾನಿಯಾಗಿ, ನಾನು ಕೂಡ ಮುಂದುವರಿಯಲು ನಿರ್ಧರಿಸಿದ್ದೇನೆ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆದುಕೊಳ್ಳುವುದನ್ನು ತಡೆಯಲು ನಿರ್ಧರಿಸಿದ್ದೇನೆ’ ಎಂದರು.

ಅಂದರೆ, ಭಾರತದಲ್ಲಿನ ಒಂದು X ಖಾತೆಯಲ್ಲಿ ಪ್ರಕಟವಾದ ಸುಳ್ಳು ಹೇಳಿಕೆ ಕೆಲವೇ ಗಂಟೆಗಳಲ್ಲಿ ಇಸ್ರೇಲ್ ಪ್ರಧಾನಿಯ ಭಾಷಣದ ವಿಷಯವಾಯಿತು.

 Ritika's fabricated quote ended up in a speech by PM Benjamin Netanyahu, that was later posted by one of the social media handles of the Israeli Foreign Ministry. (Image: X/@IsraelPersian)

►ಅಮೆರಿಕಕ್ಕೂ ತಲುಪಿತು

ನೆತನ್ಯಾಹು ಅವರ ಭಾಷಣದ ನಂತರ ಸುಳ್ಳು ಹೇಳಿಕೆ ಅಮೆರಿಕಕ್ಕೂ ತಲುಪಿತು.

ಸಂಜೆ 5.35ಕ್ಕೆ ವಿಶ್ವಸಂಸ್ಥೆಯ ಅಮೆರಿಕದ ರಾಯಭಾರಿ ಮೈಕ್ ವಾಲ್ಟ್ಜ್ ಚಾನೆಲ್ 14ರ ವರದಿಯನ್ನು Xನಲ್ಲಿ ಹಂಚಿಕೊಂಡರು. ಬಳಿಕ ಅದನ್ನು ಅಳಿಸಿದರು. ಅಮೆರಿಕದ ಬಲಪಂಥೀಯ ನಿರೂಪಕ ಮಾರ್ಕ್ ಲೆವಿನ್ ಕೂಡ ವರದಿಯನ್ನು ಹಂಚಿಕೊಂಡರು.

ರಾತ್ರಿ 10.01ಕ್ಕೆ ಫಾಕ್ಸ್ ನ್ಯೂಸ್ ಕೂಡ ವಾಹಿದಿ ಅವರು ಅಮೆರಿಕ ಮತ್ತು ಇಸ್ರೇಲ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವವರೆಗೆ ಇರಾನ್ ಪರಮಾಣು ಶಸ್ತ್ರಾಸ್ತ್ರಗಳ ಮೇಲೆ ಕೆಲಸ ಮುಂದುವರಿಸುವುದಾಗಿ ಹೇಳಿದ್ದಾರೆ ಎಂದು ವರದಿ ಮಾಡಿತು.

ಬಳಿಕ ಫಾಕ್ಸ್ ನ್ಯೂಸ್ ತನ್ನ ವರದಿಗೆ ಸ್ಪಷ್ಟನೆ ನೀಡಿತು. ವಾಹಿದಿ ಅವರ ಹಿಂದಿನ ಹೇಳಿಕೆಗಳನ್ನು ಈ ವಾರ ಅವರು ನೀಡಿದ ಹೇಳಿಕೆಗಳಂತೆ ತಪ್ಪಾಗಿ ವರದಿ ಮಾಡಲಾಗಿದೆ ಎಂದು ಅದು ತಿಳಿಸಿತು.

ನೆತನ್ಯಾಹುಗೆ ಆಪ್ತರಾಗಿರುವ ಪತ್ರಕರ್ತರಾದ ಯಾಕೋವ್ ಬರ್ಡುಗೊ ಮತ್ತು ಅವಿಶಯ್ ಬೆನ್ ಹೈಮ್ ಕೂಡ ಇಸ್ರೇಲಿನ ಟಿವಿಯಲ್ಲಿ ಇದೇ ಹೇಳಿಕೆಯನ್ನು ಪುನರಾವರ್ತಿಸಿದರು.

ಇಸ್ರೇಲ್ ವಿದೇಶಾಂಗ ಸಚಿವಾಲಯದ ಪರ್ಷಿಯನ್ ಭಾಷೆಯ ಅಧಿಕೃತ X ಖಾತೆಯೂ ನೆತನ್ಯಾಹು ಅವರು ವಾಹಿದಿ ಅವರ ಹೇಳಿಕೆ ಎಂದು ಉಲ್ಲೇಖಿಸಿದ್ದ ವಿಷಯವನ್ನು ಹಂಚಿಕೊಂಡಿತು.

►ಮೂಲ ಯಾವುದು ಎಂಬುದೇ ಬದಲಾಯಿತು

ಈ ನಡುವೆ, ಸುಳ್ಳು ಹೇಳಿಕೆಯನ್ನು ಮೊದಲು ರಿತಿಕಾ ಅವರ ಖಾತೆಯಿಂದ ಪಡೆದುಕೊಂಡಿದ್ದ ‘ಮೊಸಾದ್ ಕಾಮೆಂಟರಿ’ ಖಾತೆ ತನ್ನ ನಿಲುವನ್ನೇ ಬದಲಿಸಿತು.

ರಾತ್ರಿ 8.56ಕ್ಕೆ ಅದು, ಈ ಹೇಳಿಕೆಗೆ ಚಾನೆಲ್ 14 ಮೂಲ ಎಂದು ಹೇಳಿತು.

ಆದರೆ ವಾಸ್ತವದಲ್ಲಿ ಚಾನೆಲ್ 14ಗೆ ಹೇಳಿಕೆ ಸಿಕ್ಕಿದ್ದು ‘ಮೊಸಾದ್ ಕಾಮೆಂಟರಿ’ ಖಾತೆಯಿಂದ. ಆ ಖಾತೆಗೆ ಹೇಳಿಕೆ ಸಿಕ್ಕಿದ್ದು ರಿತಿಕಾ ಅವರ ಪೋಸ್ಟ್ನಿಂದ.

ಹೀಗಾಗಿ, ರಿತಿಕಾ - ಮೊಸಾದ್ ಕಾಮೆಂಟರಿ - ಚಾನೆಲ್ 14 -ಯಾಯರ್ ನೆತನ್ಯಾಹು -ಬೆಂಜಮಿನ್ ನೆತನ್ಯಾಹು - ಅಮೆರಿಕದ ಮಾಧ್ಯಮಗಳು ಎಂಬ ಸರಪಳಿಯಲ್ಲಿ ಸುಳ್ಳು ಹೇಳಿಕೆ ಹರಡಿತು.

►ಮತ್ತೆ ಭಾರತಕ್ಕೆ ಬಂದಿತು

ರಿತಿಕಾ ಅವರು ಆಗಸ್ಟ್ 5ರಂದು ಬೆಳಿಗ್ಗೆ 9.14ಕ್ಕೆ ಸುಳ್ಳು ಹೇಳಿಕೆಯನ್ನು ಪ್ರಕಟಿಸಿದ್ದರು.

ಸುಮಾರು 15 ಗಂಟೆ 30 ನಿಮಿಷಗಳ ಬಳಿಕ, ಆಗಸ್ಟ್ 6ರಂದು ಬೆಳಿಗ್ಗೆ 12.45ಕ್ಕೆ ಸುದ್ದಿ ಸಂಸ್ಥೆ ಏಷ್ಯನ್ ನ್ಯೂಸ್ ಇಂಟರ್ನ್ಯಾಷನಲ್ (ANI) ಕೂಡ ಇದೇ ವಿಷಯವನ್ನು ವರದಿ ಮಾಡಿತು ಎಂದು Ynet ತಿಳಿಸಿದೆ.

‘IRGC ಮುಖ್ಯಸ್ಥ ಅಹ್ಮದ್ ವಾಹಿದಿ ಅವರು ಅಮೆರಿಕ ಮತ್ತು ಇಸ್ರೇಲ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವವರೆಗೆ ಇರಾನ್ ಪರಮಾಣು ಶಸ್ತ್ರಾಸ್ತ್ರಗಳ ಮೇಲೆ ಕೆಲಸ ಮುಂದುವರಿಸುವುದಾಗಿ ಹೇಳಿದ್ದಾರೆ’ ಎಂದು ANI ವರದಿ ಮಾಡಿತು.

 News agency ANI reported Vahidi's quote, citing Israeli media. (Image: ANI)

ಆದರೆ, ANI ನಿರ್ದಿಷ್ಟ ಇಸ್ರೇಲಿ ಮಾಧ್ಯಮದ ಹೆಸರನ್ನು ನೀಡದೆ, ‘ಇಸ್ರೇಲಿ ಮಾಧ್ಯಮ’ವನ್ನು ಮಾತ್ರ ಮೂಲವೆಂದು ಉಲ್ಲೇಖಿಸಿತು.

ಹೀಗೆ, ಭಾರತದಲ್ಲಿ ಪ್ರಕಟವಾದ ಸುಳ್ಳು ಸುದ್ದಿ ಇಸ್ರೇಲ್ -ಅಮೆರಿಕ -ಮತ್ತೆ ಭಾರತಕ್ಕೆ ತಲುಪಿತು.

ಈ ಘಟನೆಯಿಂದ ಎರಡು ಪಾಠಗಳು ಸಿಗುತ್ತವೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಿಗುವ ಮಾಹಿತಿಯನ್ನು ಪರಿಶೀಲಿಸದೆ ನಂಬಬಾರದು. ಮತ್ತೊಂದೆಡೆ, ಭಾರತ ಮೂಲದ ‘ರಿತಿಕಾ’ ಖಾತೆಯ ನಕಲಿ ಹೇಳಿಕೆಯೊಂದು ಹಲವು ಸುದ್ದಿ ಮಾಧ್ಯಮಗಳ ಮೂಲಕ ಹರಡಿ, ಕೊನೆಗೆ ಪ್ರಬಲ ದೇಶವೊಂದರ ಹಾಲಿ ಪ್ರಧಾನಿಯನ್ನೂ ತಲುಪಿತು.

ಸೌಜನ್ಯ: indiatoday.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News