ಸೋನಮ್ ವಾಂಗ್‌ ಚುಕ್ | Photo Credit : PTI 

ನ. 20ರಂದು ಸತತ 11ನೇ ದಿನವೂ ಅಘೋಷಿತ ಗೃಹಬಂಧನದಲ್ಲಿರುವ ಪರಿಸರ ಹೋರಾಟಗಾರ ಸೋನಮ್ ವಾಂಗ್‌ ಚುಕ್, ತಮ್ಮನ್ನು ಬಂಧನದಲ್ಲಿಡಲು ಸಾರ್ವಜನಿಕರ ಸುಮಾರು 2 ಕೋಟಿ ರೂ. ಹಣವನ್ನು ವ್ಯಯಿಸಲಾಗುತ್ತಿದೆ ಎಂದು ಅಂದಾಜಿಸಿದ್ದು, ಸರ್ಕಾರದ ಆದ್ಯತೆಗಳನ್ನು ಪ್ರಶ್ನಿಸಿದ್ದಾರೆ. ಜೋಧ್ಪುರ ಕೇಂದ್ರ ಕಾರಾಗೃಹದಲ್ಲಿ ತಮ್ಮನ್ನು ಇರಿಸಿದ್ದ ವೆಚ್ಚ ಹಾಗೂ ಲೇಹ್ ನಲ್ಲಿರುವ ತಮ್ಮ ನಿವಾಸದ ಹೊರಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿರುವ ಖರ್ಚು ಇದರಲ್ಲಿ ಸೇರಿದೆ ಎಂದು ಅವರು ಹೇಳಿದ್ದಾರೆ.

ತಮ್ಮ 'ಗೃಹಬಂಧನ'ದ 10ನೇ ದಿನವಾದ ನ. 18ರಂದು ಆಡಳಿತದ ವಿರುದ್ಧ 'ಎಕ್ಸ್'ನಲ್ಲಿ ತೀವ್ರ ವಾಗ್ದಾಳಿ ನಡೆಸಿದ ವಾಂಗ್‌ ಚುಕ್, ಶಾಲೆಗಳು, ಆಸ್ಪತ್ರೆಗಳು ಮತ್ತು ಕೊರೆಯುವ ಚಳಿಯಲ್ಲಿ ದೇಶದ ಗಡಿ ಕಾಯುವ ಸೈನಿಕರ ಸೌಲಭ್ಯಗಳನ್ನು ಸುಧಾರಿಸಲು ಈ ಹಣವನ್ನು ಸದ್ಬಳಕೆ ಮಾಡಿಕೊಳ್ಳಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ತಾವು ನಿಯಮಿತವಾಗಿ ತೆರಿಗೆ ಪಾವತಿಸುತ್ತಿರುವುದಾಗಿ ವಿಡಿಯೊ ಸಂದೇಶದಲ್ಲಿ ತಿಳಿಸಿರುವ ವಾಂಗ್‌ ಚುಕ್, ಸಾರ್ವಜನಿಕರ ಹಣವನ್ನು ಈ ರೀತಿ ದುರುಪಯೋಗಪಡಿಸಿಕೊಳ್ಳುತ್ತಿರುವಾಗ ತೆರಿಗೆ ಪಾವತಿಸುವುದನ್ನು ಮುಂದುವರಿಸಬೇಕೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಾಂಗ್‌ ಚುಕ್ ಅವರ ಅಂದಾಜಿನ ಪ್ರಕಾರ, ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ಜೋಧ್ಪುರ ಕೇಂದ್ರ ಕಾರಾಗೃಹದಲ್ಲಿ ಅವರನ್ನು ಸುಮಾರು ಆರು ತಿಂಗಳ ಕಾಲ ಬಂಧಿಸಿಟ್ಟಿದ್ದಕ್ಕೆ ಮತ್ತು ಅವರನ್ನು ವಿಮಾನದಲ್ಲಿ ಕರೆದೊಯ್ದ ವೆಚ್ಚ ಸೇರಿ ಬೊಕ್ಕಸಕ್ಕೆ ಅಂದಾಜು 1 ಕೋಟಿ ರೂ. ಖರ್ಚಾಗಿದೆ. ಕೇಂದ್ರ ಗೃಹ ಸಚಿವಾಲಯವು ಆದೇಶವನ್ನು ಹಿಂಪಡೆದ ಬಳಿಕ 2026ರ ಮಾರ್ಚ್ 14ರವರೆಗೆ ಅವರ ಬಂಧನ ಮುಂದುವರಿದಿತ್ತು. ಒಬ್ಬ ರಾಷ್ಟ್ರವಾದಿಯನ್ನು ದೇಶದ್ರೋಹಿ ಎಂದು ಸಾಬೀತುಪಡಿಸುವ ಉದ್ದೇಶಕ್ಕಾಗಿ ಈ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

"ಲಡಾಖ್ ನಿವಾಸಿಯಾಗಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 26(10)ರ ಅಡಿಯಲ್ಲಿ ನನಗೆ ತೆರಿಗೆ ವಿನಾಯಿತಿ ಇದೆ. ಆದರೂ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವ ಉದ್ದೇಶದಿಂದ ನಾನು ನಿಯಮಿತವಾಗಿ ಎಲ್ಲ ತೆರಿಗೆಗಳನ್ನು ಪಾವತಿಸುತ್ತಿದ್ದೇನೆ" ಎಂದು ಅವರು 'ಎಕ್ಸ್'ನಲ್ಲಿ ಬರೆದಿದ್ದಾರೆ.

ತಮ್ಮ ನಿವಾಸದ ಹೊರಗೆ ಸುಮಾರು ಎರಡು ಡಝನ್ ಭದ್ರತಾ ಸಿಬ್ಬಂದಿ ಮತ್ತು ಒಂದು ಡಝನ್ ವಾಹನಗಳನ್ನು ನಿಯೋಜಿಸಿರುವುದನ್ನು ಉಲ್ಲೇಖಿಸಿರುವ ಅವರು, ಆಡಳಿತವು ಇದೇ ರೀತಿ ಎರಡು ತಿಂಗಳ ಕಾಲ ತಮ್ಮನ್ನು ಗೃಹಬಂಧನದಲ್ಲಿಟ್ಟರೆ ಇನ್ನೂ 1 ಕೋಟಿ ರೂ. ಖರ್ಚಾಗಲಿದೆ ಎಂದು ಹೇಳಿದ್ದಾರೆ.

"ನನ್ನ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದು ಈಗ ನನಗೆ ಕಾಣುತ್ತಿದೆ. ಕೊರೆಯುವ ಚಳಿಯಲ್ಲಿ ಎರಡು ಡಝನ್ ಕಾವಲುಗಾರರು ಮತ್ತು ಒಂದು ಡಝನ್ ವಾಹನಗಳೊಂದಿಗೆ ನನ್ನನ್ನು ಎರಡು ತಿಂಗಳು ಗೃಹಬಂಧನದಲ್ಲಿಡಲು ಸರಿಸುಮಾರು ಅಷ್ಟೇ ಹಣ (ಜೈಲು ವಾಸಕ್ಕೆ ಖರ್ಚಾದ 1 ಕೋಟಿ ರೂ.) ವ್ಯಯಿಸಲಾಗುತ್ತಿದೆ" ಎಂದು ಅವರು ಬರೆದುಕೊಂಡಿದ್ದಾರೆ.

ತಮಗಾಗಿ ಇಷ್ಟೊಂದು ದೊಡ್ಡ ಮಟ್ಟದ ಭದ್ರತಾ ವ್ಯವಸ್ಥೆ ಮಾಡಿರುವ ಉದ್ದೇಶವನ್ನು ಪ್ರಶ್ನಿಸಿರುವ ವಾಂಗ್‌ ಚುಕ್, "ಭ್ರಷ್ಟ ರಾಜಕಾರಣಿಗಳ ಸುರಕ್ಷತೆಗಾಗಿ" ಈ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಆರೋಪಿಸಿದ್ದಾರೆ.

"ದಯವಿಟ್ಟು ಕಮೆಂಟ್ ಗಳಲ್ಲಿ ನನಗೆ ತಿಳಿಸಿ, ನಾನು ತೆರಿಗೆ ಪಾವತಿಸುವುದನ್ನು ನಿಲ್ಲಿಸಬೇಕೇ ಅಥವಾ ಸರ್ಕಾರವನ್ನೇ ಬದಲಾಯಿಸಲು ನಾವೆಲ್ಲರೂ ಒಂದಾಗಬೇಕೇ... ಖಂಡಿತವಾಗಿಯೂ ಮುಂದಿನ ಚುನಾವಣೆಯಲ್ಲಿ!" ಎಂದು ಅವರು ಬರೆದಿದ್ದಾರೆ.

►ಚೀನಾ ಪಾಲಾಗುತ್ತಿರುವ ಲಡಾಖ್ ಕುರಿಗಾಹಿಗಳ ಭೂಮಿಯತ್ತ ಗಮನ

ಲಡಾಖ್‌ ಗೆ ರಾಜ್ಯದ ಸ್ಥಾನಮಾನ ಮತ್ತು ಸಂವಿಧಾನದ ಆರನೇ ಪರಿಚ್ಛೇದದ ಅಡಿಯಲ್ಲಿ ರಕ್ಷಣೆ ನೀಡಬೇಕೆಂದು ಒತ್ತಾಯಿಸುತ್ತಿರುವ ಲಡಾಖ್ ಸಂಘಟನೆಗಳು ಹಾಗೂ ಆಡಳಿತದ ನಡುವೆ ನಿರಂತರ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲೇ ಅವರ ಈ ಟೀಕೆ ವ್ಯಕ್ತವಾಗಿದೆ. ಈ ಹಿಂದೆ ವಾಂಗ್‌ ಚುಕ್ ತಮ್ಮ ಭಾಷಣಗಳ ಮೂಲಕ ಹಿಮಾಲಯದ ಈ ಪ್ರದೇಶದಲ್ಲಿ ಅಶಾಂತಿಯನ್ನು ಪ್ರಚೋದಿಸುತ್ತಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿ ಅವರನ್ನು ಜೈಲಿಗೆ ಕಳುಹಿಸಿದ್ದರು.

ಜೈಲಿನಿಂದ ಬಿಡುಗಡೆಯಾದ ನಂತರವೂ ವಾಂಗ್‌ ಚುಕ್ ಅವರ ಸಾರ್ವಜನಿಕ ಚಟುವಟಿಕೆಗಳ ಮೇಲಿನ ನಿರ್ಬಂಧಗಳು ಕೊನೆಗೊಂಡಿಲ್ಲ. ನ. 11ರಂದು ಲೇಹ್ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163ರ ಅಡಿಯಲ್ಲಿ ಆದೇಶ ಹೊರಡಿಸಿದ್ದು, ಲೇಹ್ ಜಿಲ್ಲೆಯಾದ್ಯಂತ 60 ದಿನಗಳ ಕಾಲ ಅನಧಿಕೃತ ರ್ಯಾ ಲಿಗಳು, ಮೆರವಣಿಗೆಗಳು ಮತ್ತು ಸಾರ್ವಜನಿಕ ಸಭೆಗಳನ್ನು ನಿರ್ಬಂಧಿಸಿದ್ದಾರೆ.

ಇದರ ಬೆನ್ನಲ್ಲೇ ಪೊಲೀಸರು ವಾಂಗ್‌ ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಿ ಅವರ ನಿವಾಸಕ್ಕೆ ಕರೆದೊಯ್ದರು. ಡಿ. 4ರಂದು ನಿಗದಿಯಾಗಿರುವ ಲಡಾಖ್ ಸ್ವಾಯತ್ತ ಬೆಟ್ಟ ಅಭಿವೃದ್ಧಿ ಮಂಡಳಿ ಚುನಾವಣೆಯ ಅಧಿಸೂಚನೆಗೆ ಲಡಾಖ್ ಸಂಘಟನೆಗಳು ವಿರೋಧ ವ್ಯಕ್ತಪಡಿಸಿರುವ ನಡುವೆಯೇ ಈ ನಿರ್ಬಂಧಗಳನ್ನು ಹೇರಲಾಗಿದೆ.

ಭಾರತ-ಚೀನಾ ಗಡಿಯಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟಿನ ಬಗ್ಗೆಯೂ ಬೆಳಕು ಚೆಲ್ಲಿರುವ ವಾಂಗ್‌ ಚುಕ್, ಲಡಾಖ್ ಕುರಿಗಾಹಿಗಳು ತಮ್ಮ ಸಾಂಪ್ರದಾಯಿಕ ಹುಲ್ಲುಗಾವಲು ಪ್ರದೇಶಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

"ಒಂದೆಡೆ ನಮ್ಮ ಗಡಿಗಳ ಪರಿಸ್ಥಿತಿ ಹೇಗಿದೆಯೆಂದರೆ, ಲಡಾಖ್ ಕುರಿಗಾಹಿಗಳು ತಮ್ಮ ಹೆಚ್ಚಿನ ಹುಲ್ಲುಗಾವಲುಗಳನ್ನು ಚೀನಾದ ಮುಂದೆ ಕಳೆದುಕೊಳ್ಳುತ್ತಿದ್ದಾರೆ. ಸೈನಿಕರಿಗೆ ಉತ್ತಮ ಸೌಲಭ್ಯಗಳ ಅಗತ್ಯವಿದೆ, ಮಕ್ಕಳಿಗೆ ಉತ್ತಮ ಶಾಲೆಗಳು ಬೇಕು, ರೋಗಿಗಳಿಗೆ ಉತ್ತಮ ಆಸ್ಪತ್ರೆಗಳು ಬೇಕಾಗಿವೆ" ಎಂದು ಅವರು 'ಎಕ್ಸ್'ನಲ್ಲಿ ಬರೆದಿದ್ದಾರೆ.

ತಮ್ಮ ಬಂಧನಕ್ಕಾಗಿ ಇಷ್ಟೊಂದು ಹಣವನ್ನು ಖರ್ಚು ಮಾಡುವ ಬದಲು, ಸಾರ್ವಜನಿಕ ಹಣವನ್ನು ಗಡಿ ಭಾಗದ ಸಮುದಾಯಗಳ ರಕ್ಷಣೆಗೆ, ಸೈನಿಕರ ಸೌಲಭ್ಯಗಳನ್ನು ಸುಧಾರಿಸಲು ಮತ್ತು ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯ ಸೇವೆ ಒದಗಿಸಲು ಬಳಸಿಕೊಳ್ಳಬೇಕು ಎಂದು ಅವರು ವಾದಿಸಿದ್ದಾರೆ.

"ಮಕ್ಕಳಿಗೆ ಉತ್ತಮ ಶಾಲೆಗಳು ಬೇಕು, ರೋಗಿಗಳಿಗೆ ಉತ್ತಮ ಆಸ್ಪತ್ರೆಗಳು ಬೇಕು, ಸೈನಿಕರಿಗೆ ಉತ್ತಮ ಸೌಲಭ್ಯಗಳು ಬೇಕು" ಎಂದು ಅವರು ಆಡಳಿತಕ್ಕೆ ತಿಳಿಸಿದ್ದಾರೆ.

►ವಾಂಗ್‌ ಚುಕ್ ಅವರ ಶಾಲೆ

ರಾಜ್ಯದ ಸ್ಥಾನಮಾನ ಮತ್ತು ಆರನೇ ಪರಿಚ್ಛೇದದ ಅಡಿಯಲ್ಲಿ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ನಡೆದ ಪ್ರತಿಭಟನೆಗಳ ವೇಳೆ, 2025ರ ಸೆ. 24ರಂದು ಲೇಹ್ ನಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ನಾಲ್ವರು ನಾಗರಿಕರು ಮೃತಪಟ್ಟಿದ್ದರು. ಈ ಘಟನೆಯ ಕುರಿತು ರಚಿಸಲಾದ ನ್ಯಾಯಾಂಗ ತನಿಖಾ ಆಯೋಗದ ವರದಿ ಸಲ್ಲಿಕೆಯಲ್ಲಿ ವಿಳಂಬವಾಗುತ್ತಿರುವುದನ್ನೂ ಹೋರಾಟಗಾರ ವಾಂಗ್‌ ಚುಕ್ ಪ್ರಶ್ನಿಸಿದ್ದಾರೆ.

ಇದೇ ವೇಳೆ, ವಾಂಗ್‌ ಚುಕ್ ಮತ್ತು ಅವರ ಪತ್ನಿ ಗೀತಾಂಜಲಿ ಆಂಗ್ಮೊ ನಡೆಸುತ್ತಿರುವ ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಲರ್ನಿಂಗ್ ಸಂಸ್ಥೆಗೆ ಲಡಾಖ್ ಆಡಳಿತವು ಸೂಚನೆಯೊಂದನ್ನು ನೀಡಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ನ ಮುಂದಿನ ಆದೇಶದವರೆಗೆ ಫ್ಯಾಂಗ್ ನಲ್ಲಿರುವ 'ಡೆಸರ್ಟ್ ಫ್ಲವರ್' ಶಾಲೆಯ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ನಿರ್ದೇಶಿಸಿದೆ.

ಪ್ರಕರಣವು ನ್ಯಾಯಾಲಯದಲ್ಲಿ ಬಾಕಿ ಇರುವುದನ್ನೇ ಕಾರಣವಾಗಿ ಉಲ್ಲೇಖಿಸಿ, ಡೆಸರ್ಟ್ ಫ್ಲವರ್ ಶಾಲೆಯಲ್ಲಿ ಮುಂದಿನ ಚಟುವಟಿಕೆಗಳನ್ನು ನಿರ್ಬಂಧಿಸಿ ನ. 1ರಂದು ನೋಟಿಸ್ ನೀಡಲಾಗಿದೆ.

"ಈ ಭೂಮಿಗೆ ಸಂಬಂಧಿಸಿದಂತೆ ನಾವು ಹೈಕೋರ್ಟ್‌ ನಿಂದ ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶವನ್ನು ಪಡೆದಿದ್ದೇವೆ. ಪ್ರತಿವಾದಿಯಾಗಿರುವ ಲಡಾಖ್ ಕೇಂದ್ರಾಡಳಿತ ಪ್ರದೇಶವು ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಮತ್ತು ಯಾವುದೇ ಮೂರನೇ ವ್ಯಕ್ತಿಯ ಹಕ್ಕುಗಳನ್ನು ಸೃಷ್ಟಿಸಬಾರದು ಎಂದು ಆದೇಶದಲ್ಲಿ ಹೇಳಲಾಗಿದೆ. ಅಂದರೆ, ಅವರು ಈ ಭೂಮಿಯನ್ನು ಯಾವುದೇ ರೀತಿಯಲ್ಲೂ ಮುಟ್ಟುವಂತಿಲ್ಲ" ಎಂದು ಆಂಗ್ಮೊ 'the wire'ಗೆ ತಿಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

ರಶ್ಮಿ ಕಾಸರಗೋಡು ಅವರು ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ 17 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರು. ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸುದ್ದಿ ವಿಶ್ಲೇಷಣೆಯಲ್ಲಿ ಪರಿಣತಿ ಹೊಂದಿದ್ದಾರೆ. ಇಮೇಲ್ id :kasaragod10rashmi@gmail.com