Photo Credit : indiatoday.in

ವಾಷಿಂಗ್ಟನ್: ಏಶ್ಯದಲ್ಲಿ ಭಾರತದ ಪ್ರಾಬಲ್ಯವನ್ನು ತಗ್ಗಿಸಲು 2025ರ ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನಕ್ಕೆ ಚೀನಾ ಬೆಂಬಲ ನೀಡಿತ್ತು ಎಂದು ಅಮೆರಿಕ ಕಾಂಗ್ರೆಸ್ ನ ಇತ್ತೀಚಿನ ವರದಿಯಲ್ಲಿ ಹೇಳಲಾಗಿದೆ.

ಭಾರತದ ಬೆಳವಣಿಗೆಯನ್ನು ತಡೆಯಲು ಚೀನಾ ಗಡಿಯವರೆಗೆ ಸೇನಾ ಒತ್ತಡ ಹೇರುತ್ತಿದೆ ಹಾಗೂ ಕೈಗಾರಿಕಾ ಸರಬರಾಜಿನ ಮೇಲೆ ನಿರ್ಬಂಧಗಳನ್ನು ವಿಧಿಸುತ್ತಿದೆ ಎಂದು ಅಮೆರಿಕ-ಚೀನಾ ಆರ್ಥಿಕ ಮತ್ತು ಭದ್ರತಾ ಪರಾಮರ್ಶೆ ಆಯೋಗ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.

ಚೀನಾದ ಇಂತಹ ತಂತ್ರಗಳನ್ನು ವಿಫಲಗೊಳಿಸಲು ಅಮೆರಿಕ ಮತ್ತು ಭಾರತದ ನಡುವೆ ಗುಪ್ತಚರ, ನೌಕಾಪಡೆ ಹಾಗೂ ಉತ್ಪಾದನಾ ವಲಯಗಳಲ್ಲಿ ಸಹಕಾರದ ಅಗತ್ಯವಿದೆ ಎಂದು ಆಯೋಗ ಸಲಹೆ ನೀಡಿದೆ. ಏಶ್ಯದಲ್ಲಿ ಚೀನಾವನ್ನು ಹದ್ದುಬಸ್ತಿನಲ್ಲಿಡಲು ಭಾರತದ ಪ್ರಾಮುಖ್ಯತೆಯನ್ನು ಆಯೋಗ ಸ್ಪಷ್ಟವಾಗಿ ಹೇಳಿದೆ.

►ಭಾರತವೇಕೆ ಮುಖ್ಯ?

ಏಶ್ಯದಲ್ಲಿ ಅಮೆರಿಕಕ್ಕೆ ಅನುಕೂಲಕರವಾದ ಶಕ್ತಿಯ ಸಮತೋಲನ ಸಾಧಿಸಲು ಅಮೆರಿಕದ ಮಿತ್ರಕೂಟ ವ್ಯವಸ್ಥೆಯಿಂದ ಹೊರಗಿರುವ ಕೆಲವೇ ಶಕ್ತಿಗಳ ಪೈಕಿ ಭಾರತ ಒಂದಾಗಿದೆ ಎಂದು ಬಣ್ಣಿಸಿರುವ ಆಯೋಗ, ಚೀನಾದ ಉತ್ಪಾದನೆ ಮತ್ತು ಸರಬರಾಜು ಸರಪಳಿಗೆ ಭಾರತ ಪ್ರಮುಖ ಪರ್ಯಾಯವಾಗಬಲ್ಲದು ಎಂದು ಹೇಳಿದೆ.

“ಚೀನಾದೊಂದಿಗಿನ ದೀರ್ಘಕಾಲೀನ ಸ್ಪರ್ಧೆಯಲ್ಲಿ ಗಮನಾರ್ಹ ಪರಿಣಾಮ ಬೀರಬಲ್ಲ ಅಮೆರಿಕದ ಮಿತ್ರಕೂಟದ ಹೊರಗಿನ ಕೆಲವೇ ಶಕ್ತಿಗಳ ಪೈಕಿ ಭಾರತ ಒಂದಾಗಿದೆ” ಎಂದು ಅಮೆರಿಕ ಕಾಂಗ್ರೆಸ್‌ ಗೆ ನೇರವಾಗಿ ವರದಿ ಸಲ್ಲಿಸುವ ಈ ಆಯೋಗದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

“ಚೀನಾ ಇದನ್ನು ಅರ್ಥ ಮಾಡಿಕೊಂಡಿದ್ದು, ವಿವಿಧ ವಲಯಗಳಲ್ಲಿ ಭಾರತದ ಬೆಳವಣಿಗೆಯನ್ನು ಕುಂಠಿತಗೊಳಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿದೆ” ಎಂದೂ ವರದಿಯಲ್ಲಿ ಹೇಳಲಾಗಿದೆ.

►ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನಕ್ಕೆ ಬೆಂಬಲ

2025ರ ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಸಂಘರ್ಷವನ್ನು ಈ ವರದಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ.

ಆಪರೇಷನ್ ಸಿಂಧೂರ್ ವೇಳೆ ಯುದ್ಧಕ್ಕೆ ನೇರವಾಗಿ ಪ್ರವೇಶಿಸದೆ ಚೀನಾ ಹೇಗೆ ತನ್ನ ಹಳೆಯ ಸ್ನೇಹಿತ ಪಾಕಿಸ್ತಾನಕ್ಕೆ ಬೆಂಬಲ ನೀಡಿತು ಎಂಬುದನ್ನೂ ಈ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

“ಪಾಕಿಸ್ತಾನದೊಂದಿಗೆ ಚೀನಾದ ಸೇನಾ ಪಾಲುದಾರಿಕೆ ಬೆಳೆಯುತ್ತಿರುವುದರಿಂದ, ಎರಡು ರಂಗಗಳಲ್ಲಿ ಸಂಘರ್ಷ ಎದುರಿಸುವ ಸಾಧ್ಯತೆಯು ಭಾರತದ ಪಾಲಿಗೆ ಪ್ರಮುಖ ಭದ್ರತಾ ಕಳವಳವಾಗಿದೆ” ಎಂದು ವರದಿಯಲ್ಲಿ ಹೇಳಲಾಗಿದೆ.

ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನಕ್ಕೆ ಸ್ಥಳದಲ್ಲೇ ತಾಂತ್ರಿಕ ನೆರವು ಒದಗಿಸಲಾಗಿತ್ತು ಎಂದು ಚೀನಾದ ಸರ್ಕಾರಿ ಪ್ರಸಾರ ಸಂಸ್ಥೆ CCTVಯಲ್ಲಿ ಪ್ರಸಾರವಾದ ಸಂದರ್ಶನದಲ್ಲಿ ಚೀನಾ ಇಂಜಿನಿಯರ್ ಝಾಂಗ್ ಹೆಂಗ್ ಬಹಿರಂಗಪಡಿಸಿದ್ದರು.

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ವೇಳೆ ಪಾಕಿಸ್ತಾನ ವಾಯುಪಡೆಗೆ ತಾಂತ್ರಿಕ ನೆರವು ಒದಗಿಸಿದ್ದ ತಂಡದಲ್ಲಿ ತಾನೂ ಸೇರಿದ್ದೆ ಎಂದು ಅವರು ಹೇಳಿದ್ದರು.

ಪಾಕಿಸ್ತಾನ ಬಳಸಿದ್ದ J-10CE ಯುದ್ಧ ವಿಮಾನವು ಪೂರ್ಣಪ್ರಮಾಣದ ಯುದ್ಧ ಸಾಮರ್ಥ್ಯದೊಂದಿಗೆ ಕಾರ್ಯಾಚರಿಸುವಂತೆ ಖಾತರಿಪಡಿಸುವುದು ತಮ್ಮ ಗುರಿಯಾಗಿತ್ತು ಎಂದೂ ಅವರು ಹೇಳಿದ್ದರು.

ಈ ಹಿನ್ನೆಲೆಯಲ್ಲಿ, ಭಾರತದೊಂದಿಗೆ ಅಮೆರಿಕ ನಿಕಟ ಬಾಂಧವ್ಯ ಬೆಳೆಸಿಕೊಳ್ಳಬೇಕು ಹಾಗೂ ನೂತನ ರಕ್ಷಣಾ ತಂತ್ರಜ್ಞಾನ, ಸರಬರಾಜು ಸರಪಳಿ ಮತ್ತು ನೌಕಾಪಡೆ ಉಪಕ್ರಮಗಳಲ್ಲಿ ಸಹಕಾರವನ್ನು ಇನ್ನಷ್ಟು ಬಲಿಷ್ಠವಾಗಿಸಬೇಕು ಎಂದು ಅಮೆರಿಕಕ್ಕೆ ಆಯೋಗ ಸಲಹೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

ರಶ್ಮಿ ಕಾಸರಗೋಡು ಅವರು ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ 17 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರು. ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸುದ್ದಿ ವಿಶ್ಲೇಷಣೆಯಲ್ಲಿ ಪರಿಣತಿ ಹೊಂದಿದ್ದಾರೆ. ಇಮೇಲ್ id :kasaragod10rashmi@gmail.com